ಅಹಲ್ಯೆ (ಭಾಗ 3)
- Ramanand Hegde Hellekoppa

- Aug 23
- 1 min read
ಗೌತಮನ ಪಾದಗಳ ಮೇಲೆ ಕುಸಿದು ಬಿದ್ದ ಅಹಲ್ಯೆ ಮೇಲೇಳಲಿಲ್ಲ, ಅಲುಗಾಡಲಿಲ್ಲ. ಕಲ್ಲಾದಳು, ಶಿಲೆಯಾದಳು. ಅವಳು ಎಲ್ಲವನ್ನೂ ನೋಡಬಹುದಿತ್ತು. ಆದರೆ ಅವಳು, ಬೇರೆಯವರಿಗೆ, ಯಾರೋ ಅರೆ-ಬರೆ ಕೆತ್ತಿಟ್ಟ ಬಂಡೆಯಂತೆ ಕಾಣುತ್ತಿದ್ದಳು. ಬಿಸಿಲು, ಮಳೆ, ಚಳಿಯ ಸ್ಪರ್ಶವಾದರೆ ಪರಿಣಾಮದ ವೇದನೆಯಿಲ್ಲ. ಯಾರನ್ನೂ ಕೂಗಿ ಕರೆಯುವಂತಿಲ್ಲ. ಶಿಲೆಯಾಗಿ, ಮೌನಿಯಾಗಿ ಕೇವಲ ನೋಟಕಳಾಗಿ, ಅನಂತ ಪ್ರತಿಕ್ಷೆ ಮಾಡುವಂತಾದಳು.
ಸಾವಿನ-ನೋವಿನ, ಸಂತೋಷದ-ಸಂಭ್ರಮದ, ಸಾಧನೆಯ, ಹಗಲಿನ, ಇರುಳಿನ ಯಾವ ಗಣನೆ ಇಲ್ಲದೆ ಕಾಲ ಉರುಳಿತು. ನಿಶ್ಚಲಳಾದ ಅಹಲ್ಯೆಯಂತೆ ಗಿಡ-ಮರಗಳು, ಲತೆ, ಬಳ್ಳಿ, ಹೂಗಳು ಎಲ್ಲವೂ ಆ ವನಪರಿಧಿಯಲ್ಲಿ ಮಂದಗತಿ ಕೊಟ್ಟು, ಕೊನೆಗೆ ಬೀಸುವ ಗಾಳಿಯೂ ಮಂದಗತಿಯನ್ನು ಹೊಂದಿತು. ನಮ್ಮೆಲ್ಲರ ಬದುಕಿನ ಅನುಭವದಂತೆ ಸುಖದ ಕಾಲವು ಅಲ್ಪ ಅವಧಿಯಂತೆ, ಕಷ್ಟಕಾಲವೂ ಸುಧೀರ್ಘ ಸಮಯದಂತೆ ಅನುಭವವಾಗುತ್ತದೆ. ಅಹಲ್ಯೆಯ ಅವಸ್ಥೆಯು ಅದೇ ಆಯಿತು.

ಉದ್ದರಿಸುವ ದೇವನನ್ನು ಆರ್ತಳಾಗಿ ಕರೆಯೋಣವೆಂದರೆ ಭಾವವಿಲ್ಲ, ಭಾಷೆ ಇಲ್ಲ. ಕೇವಲ ಕಾಲವೇ ಅನುಕೂಲ ಮಾಡಿಕೊಡುವವರೆಗೆ ಪ್ರತೀಕ್ಷೆ.... ಪ್ರತೀಕ್ಷೆ.....
ಬ್ರಹ್ಮರ್ಷಿ ವಿಶ್ವಾಮಿತ್ರರು ತ್ರೇತಾಯುಗಕ್ಕೆ ಮಾತ್ರವಲ್ಲ, ಎಲ್ಲ ಯುಗದಲ್ಲಿಯೂ ಅವರು ಸಾಧನೆಗೆ, ಛಲಕ್ಕೆ ಅತ್ಯುನ್ನತ ಜ್ಞಾನಪ್ರಾಪ್ತಿಗೆ ಆದರ್ಶ ವ್ಯಕ್ತಿಗಳು. ಲೋಕಕ್ಷೇಮಕ್ಕಾಗಿ ತಮ್ಮಾಶ್ರಮದಲ್ಲಿ ಯಜ್ಞವನ್ನು ಉಪಾಸಿಸಿದರು. ಮರುಳರು, ಕ್ರೂರರು, ಆದ ರಕ್ಕಸರಿಂದ ಆ ಕಾಲದಲ್ಲಿ ಯಜ್ಞಕ್ಕೆ ಕಂಟಕವಿತ್ತು. ಹಾಗಾಗಿ ರಕ್ಷಣೆಗಾಗಿ, ಅಯೋಧ್ಯೆಯ ಅರಸು ದಶರಥನ ಮಕ್ಕಳಾದ ಶ್ರೀರಾಮ-ಲಕ್ಷ್ಮಣರನ್ನು ಕರೆತಂದು, ಯಜ್ಞರಕ್ಷಣೆಗಾಗಿ ನಿಯೋಜಿಸಿ, ಯಜ್ಞ ಕಾರ್ಯವನ್ನು ಸಾಂಗವಾಗಿ ಸಂಪನ್ನಗೊಳಿಸಿದರು. ಯಜ್ಞಕ್ಕೆ ಬಂದಿದ್ದವರಿಂದ ತಿಳಿದ ಸಂಗತಿ, 'ಮಿಥಿಲೆಯ ಅರಸ ಜನಕ ಮಹಾರಾಜ, ತನ್ನ ಮಗಳಾದ ಸೀತೆಗೆ ವಿವಾಹ ಮಾಡುತ್ತಾನೆ. ಅದಕ್ಕೊಂದು ನಿಯಮವಿದೆ. ಜನಕನ ಬಳಿ ಇರುವ ಶಿವಧನಸ್ಸನ್ನು ಎತ್ತಿ ಹೆದೆ ಏರಿಸಿದವನೇ ಸೀತಾಪತಿ ಎಂಬ ನಿರ್ಣಯವಿದೆ', ಎಂಬುದಾಗಿ ತಿಳಿಸಿದರು. ಶಿವ ಧನಸ್ಸಿನಲ್ಲಿರುವ ಧಾರಣಶಕ್ತಿ [ಲೋಕಧಾರಣ] ಶ್ರೀರಾಮನಿಗೆ ಸೇರಲಿ ಎಂಬುದು ವಿಶ್ವಾಮಿತ್ರರ ಸಂಕಲ್ಪ - ಉದ್ದೇಶದಿಂದ, ಶ್ರೀರಾಮ ಲಕ್ಷ್ಮಣರೊಡಗೂಡಿ ಮಿಥಿಲೆಯೆಡೆಗೆ ಹೊರಟು ಬಂದರು. ಹಾಗೆ ಮುಂದುವರಿದು ಗೌತಮ-ಅಹಲ್ಯೆಯ ವನ ಪ್ರವೇಶ ಮಾಡಿದರು. ಅಷ್ಟೇ!!
ಶ್ರೀರಾಮ ಚಕಿತನಾದ!
ಲಕ್ಷ್ಮಣ ಆಶ್ಚರ್ಯಗೊಂಡ!
ವಿಶ್ವಾಮಿತ್ರರು ತಿಳಿದಿದ್ದರೂ ಗಂಭೀರವದನರಾದರು.
ಸುತ್ತಲೂ ನೋಡಿದ.
ಶ್ರೀರಾಮ, "ಗುರು ದೇವರೇ ಇದೇಕೆ ಹೀಗೆ, ಈ ವನಪ್ರದೇಶದಲ್ಲಿ ಏನಾಗಿದೆ, ಯಾರೋ, ಯಾರೋ ಕುಳಿತಿದ್ದಾರೆ. ಯಾರೋ ಕರೆಯುತ್ತಾರೆ, ಯಾರವರು?"
ವಿಶ್ವಾಮಿತ್ರರು ಗಂಭೀರವಾಣಿಯಲ್ಲಿ ಹೇಳಿದರು. "ನೋಡು, ಅದೇನೆಂದು ನೀನೇ ತಿಳಿ."
ಸುತ್ತಲೂ ನೋಡಿದ ಶ್ರೀರಾಮ. ಅನತಿ ದೂರದಲ್ಲಿ ಕಾಣುತ್ತಿರುವ ಕೌತುಕದ ಕಡೆಗೆ ನಡೆದ........
ಮುಂದೇನಾಯ್ತು - ಮುಂದಿನವಾರ......






Comments