ಅಹಲ್ಯೆ (ಭಾಗ 2)
- Ramanand Hegde Hellekoppa

- Aug 16
- 2 min read
ಇಂದಿನ ಸ್ವಾತಂತ್ರ್ಯ, ಸ್ವೈರತೆ, ಮನಸಿನ ಭಾವನೆಗಳಿಗೆ ಗೌರವ ಅಥವಾ ಬೆಲೆ ಎಂಬ ಎಲ್ಲ ಮಾತುಗಳಿಗೂ, ಯೋಚನೆಗಳನ್ನು ಪ್ರಾಚೀನ ಕಾಲದ ಧರ್ಮಬದ್ಧತೆ ಅಥವಾ ಧಾರ್ಮಿಕ ಜೀವನ ವಿಧಾನ ಎಂಬ ನಿಯಮದ ದೃಷ್ಠಿಯಿಂದ ನೋಡಿದಾಗ ಮನುಷ್ಯನ ವೈಯಕ್ತಿಕ ಯೋಚನೆ ಭಾವನೆಗಳು ಮುಖ್ಯ ವಾದದಲ್ಲ ಎಂದು ತಿಳಿಯುತ್ತದೆ. ಉದಾಹರಣೆ ಎಂದರೆ ಅಹಲ್ಯೆಯೇ ಆಗುತ್ತಾಳೆ.
ಬುದ್ಧಿವಂತಿಕೆಯಿಂದ ಗೌತಮ, ಬ್ರಹ್ಮನಿಟ್ಟ ಪಣವನ್ನು ಗೆದ್ದ. ಇದು ನಿಯಮ ಮಾತಿನಂತೆ ಬ್ರಹ್ಮ ಅಹಲ್ಯೆಯನ್ನು ವಿವಾಹ ಮಾಡಿಕೊಡಬೇಕು, ಇದು ನೀತಿ. ಅದೇ ರೀತಿ ವಿವಾಹ ಮಾಡಿದ. ಇದು ಧರ್ಮ, ಹಾಗಾದರೆ ಅಹಲ್ಯೆ ಗೌತಮವನ್ನು ಒಪ್ಪಿಕೊಂಡಿದ್ದಾಳೋ ಅಥವಾ ಇಂದ್ರನನ್ನು ನೋಡಿದ್ದಾಳೋ ಇದು ನಗಣ್ಯ. ಬಹುಶಃ ಮುಂದೆ ಅಹಲ್ಯೆಯ ಜೀವನದಲ್ಲಿ ಈ ವಿಷಯಗಳೇ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಗೌತಮನನ್ನು ವಿವಾಹವಾಗಿ ಬಂದ ಮೇಲೆ ಅಹಲ್ಯೆಯೊಂದಿಗೆ ಗೌತಮ, ಮಿಥಿಲಾ ಪಟ್ಟಣದ ಸಮೀಪದ ಅರಣ್ಯದ ಭಾಗದಲ್ಲಿ ಆಶ್ರಮ ನಿರ್ಮಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಾರೆ. ಸಹಜ ಋಷಿ ಪದ್ಧತಿಯ ಜೀವನವಾದರಿಂದ, ಅದೇನು ವೈಭೋಗವಲ್ಲ, ಆದರೆ ಬೇಕಾದ್ದನ್ನು ಸೃಷ್ಟಿಸಿಕೊಡುವ ಬ್ರಹ್ಮನ ಮಗಳಾದ ಅಹಲ್ಯೆಗೆ ಋಷಿ ಜೀವನ ಹೊಸತು. ಅಸಹನೆ ಮತ್ತು ಜೀವನದ ಅಲಕ್ಷ್ಯ ಧೋರಣೆಗೆ ಕಾರಣವಾಗಿರಬಹುದು. ಗೌತಮನ ಋಷಿ ಪದ್ಧತಿಯ ಜಪ-ತಪ-ಅನುಷ್ಠಾನಗಳು, ಅರ್ಥವಾಗದ ಉದ್ದೇಶಗಳು, ಅಹಲ್ಯೆಯಲ್ಲಿ ಕಾಲಾನಂತರದಲ್ಲಿ ಜಿಗುಪ್ಸೆಯನ್ನೇ ತಂದಿರಬಹುದು. ಈ ಮಧ್ಯೆ ಒಂದು ಮಗು ಪಡೆದು, ತಂದೆ ತಾಯಿಗಳೆಂಬ ಸ್ಥಾನ ಪಡೆದರೂ ದಾಂಪತ್ಯದ ಅನ್ಯೋನ್ಯತೆ ಅತ್ಯಂತ ವಿರಳವಾದ್ದರಿಂದ, ಅಹಲ್ಯೆಯ ಮನಸ್ಸು ಭಾವಗಳ ಗೊಂದಲ ಮತ್ತು ವಿಹ್ವಲತೆಯಿಂದ ಇರುವ ಕಾರಣ, ಗೌತಮ ತಪಸ್ಸಿನ ಮೂಲಕ ವಿಶೇಷ ಸಿದ್ದಿ ಪಡೆಯುವುದಕ್ಕಾಗಿ ದೀರ್ಘಕಾಲದ ಗೌಪ್ಯ ಆಚರಣೆಗೆ ಮುಂದಾದ. ಎಷ್ಟು ಗೌಪ್ಯವೆಂದರೆ ಸ್ವತಃ ಧರ್ಮಪತ್ನಿ ಅಹಲ್ಯೆಗೂ ತಿಳಿಸಲಿಲ್ಲ.

ಗೌತಮನ ಈ ಗೌಪ್ಯವಾದ, ಉಗ್ರವಾದ ತಪ ಇಂದ್ರನಿಗೆ ಚಿಂತೆ ಹಚ್ಚಿತು. ದೇವತೆಗಳು ತಮ್ಮನ್ನು ಭಜಿಸಿ ಒಲಿಸಿದವರಿಗೆ ಅವರ ಇಷ್ಟವಾದ ವರ ಪ್ರಸಾದ ಮಾಡುವುದು ಬೇರೆ. ಆದರೆ ದೇವತ್ವದಲ್ಲಿಯೇ ಪಾಲು ಕೇಳಿದರೆ ಅದನ್ನು ನೀಡಬಹುದಾದರೂ ಅದರ ವಿಧಿ, ನಿಷೇಧ, ಕಾಲ, ಪಾತ್ರತ್ವ, ದೇಶ ಹಾಗೂ ಮುಖ್ಯ ಸರ್ವಸಮ್ಮತಿ, ಇವೆಲ್ಲ ವಿಷಯಗಳ ವಿವೇಚನೆ ಬೇಕಾಗುತ್ತದೆ. ಇಷ್ಟು ವಿಚಾರಕ್ಕೆ ಗೌತಮ ಅರ್ಹನಲ್ಲದ ಕಾರಣ, ದೇವೇಂದ್ರ ಅವನ ತಪಸ್ಸನ್ನು ಕೆಡಿಸಲು ಮುಂದಾದ. ಆ ದಿನ ಗೌತಮ ಬ್ರಾಹ್ಮಿ ಮುಹೂರ್ತದಲ್ಲಿಯೇ ತನ್ನ ಅನುಷ್ಠಾನಕ್ಕೆ ತಾನೇ ನಿರ್ಮಿಸಿಕೊಂಡ ಗೌಪ್ಯ ಸ್ಥಳಕ್ಕೆ ತೆರಳಿದ. ಸೂರ್ಯೋದಯವಾಯಿತು. ಪ್ರಕೃತಿ ನಿಧಾನವಾಗಿ ಅರಳುತ್ತಾ ಸೂರ್ಯನ ಬಿಸಿಯ ಬಿಸಿಲಿಗೆ ತೆರೆದುಕೊಳ್ಳತೊಡಗಿತು. ಅಹಲ್ಯೆ ಆಶ್ರಮದ ಒಳಗಿನಿಂದ ಹೊರಗಿನ ಅಂಗಳಕ್ಕೆ ಬರುವವಳು ನೋಡುತ್ತಾಳೆ, ಪತಿ ಗೌತಮ ಬಾಗಿಲ ಬಳಿ ನಿಂತಿದ್ದಾರೆ. ಏನೋ ಬೇಕೆಂಬ ಮುಖಭಾವ ಆಶ್ಚರ್ಯದಿಂದ ಹತ್ತಿರ ಬಂದು, 'ಇದೇನು ಇಂದು ಇಷ್ಟು ಬೇಗ ಅನುಷ್ಠಾನ ಬಿಟ್ಟು ಬಂದಿರಾ!?' ಎಂಬ ಮಾತು ಮುಗಿಯುವ ಮೊದಲೇ ಮೋಹ ಬರಿತ ಸ್ವರ, ಅಹಲ್ಯೆಗೆ ಮೈ ನಡುಕ. ಆಶ್ಚರ್ಯ, ಭಯ, ಅನುಮಾನ, ರೂಪ ಗೌತಮನಂತೆ, ಸ್ವರ ಬೇರೆ!, ಕಣ್ಣು ಕಣ್ಣಿನಲ್ಲಿರುವ ಭಾವ ಬೇರೆ! ಯಾರೀತ ಅಹಲ್ಯೆಯ ಭಯದ ಮಾನಸಿಕತನ ಪ್ರಶ್ನೆಯನ್ನು ತಿಳಿದು ಗೌತಮ ವೇಷದವ ಹೇಳಿದ ಉತ್ತರ, "ಅಹಲ್ಯೆ! ನಾನು ಇಂದ್ರ ನಿನ್ನನ್ನು ಬಯಸಿ ಬಂದಿದ್ದೇನೆ. ನನ್ನನ್ನು ರಮಿಸು ಬಾ" ಎಂದನು. ಅಹಲ್ಯೆಯ ಮನೋ ಭೂಮಿಕೆಯ ಮೇಲೆ ಒಮ್ಮೆಗೇ ಗುಡುಗು ಸಿಡಿಲಿನಂತೆ, ಮಿಂಚಿನಂತೆ ಮಾತಿನ ಸುರಿಮಳೆ. ಮೊದಲ ಮಳೆಯ ನೀರನ್ನು ಹೀರಿಕೊಳ್ಳುವ ಭೂಮಿಯಂತೆ ಅಹಲ್ಯೆ, "ತನ್ನೆದುರು ನಿಂತವ ಮೂರು ಲೋಕದ ಒಡೆಯ ಇಂದ್ರ. ಈ ಕಾಲದ ಅನೇಕ ಆರಾಧನೆಗಳ ಅಧಿಷ್ಠಾತೃ ದೇವತೆ. ತನ್ನನ್ನು ಬಯಸಿದ್ದಾನೆ, ತಾನಿರುವಲ್ಲಿಗೆ ಬಂದಿದ್ದಾನೆ". ಮರುಕ್ಷಣ ಭಯ, ಇವನ ಜತೆಗೂಡಿದರೆ ಬೇರೆಯವರಿಗೆ ತಿಳಿದರೆ! ಗೌತಮರಿಗೆ ತಿಳಿದರೆ!!
ಎದುರಿಗಿರುವ ಇಂದ್ರಿಯಾಧಿಕಾರ ಪಡೆದ ಇಂದ್ರ, ಅವನ ಮುಖದಲ್ಲಿ ಒಂದು ನಸುನಗು, ಪ್ರಶ್ನೆ ಕೇಳದೆಯೇ ಉತ್ತರಿಸುವವ, "ಭಯಬೇಡ ಅಹಲ್ಯೆ! ವಿವಾಹ ಕಾಲದಲ್ಲಿ ವಧುಗಳು ತನ್ನ ನಿಶ್ಚಿತ ವರನನ್ನು ಸೇರುವ ಮೊದಲು ದೇವತೆಗಳಿಗಾಗಿ ಮೂರು ದಿವಸ ಮೀಸಲಾಗಿರುತ್ತದೆ. ಧರ್ಮವಲ್ಲ ಎಂಬ ಭಯ ಬಿಡು. ಅಂದು ನಿನ್ನ ಲಾವಣ್ಯವನ್ನು ನೋಡಿಯೇ ವಿವಾಹಕ್ಕೆ ಬಂದವನು. ಪುರುಷನ ಪೌರುಷ, ಪರಾಕ್ರಮಗಳು ನೈಜ ಅನುಭವಕ್ಕೆ ಬರಬೇಕೇ ವಿನಃ ಬುದ್ಧಿವಂತಿಕೆಯ ಪ್ರದರ್ಶನದಿಂದ ಸಿದ್ಧವಾಗುವುದಲ್ಲ. ನೈಜವಾಗಿ ಭೂ ಪ್ರದಕ್ಷಣೆ ಮಾಡಿ ಬಂದವ ನಾನು, ಸತ್ಯವಾಗಿ ಪಣ ಗೆದ್ದವ ನಾನು. ಉಚ್ಚ ಲಾವಣ್ಯವತಿಯೇ, ನನ್ನ ಮಾತನ್ನು ಕೇಳು. ಇನ್ನು ಮುಂದೆ ಇಲ್ಲಿಯೇ ಇಂದ್ರವೈಭವದ ಲೋಕ ಸೃಷ್ಟಿಸಿಕೊಡ್ತೇನೆ."
ಮೋಹಕ ರೂಪ!, ಮನಸ್ಸಿನಲ್ಲಿ ಕುಣಿಯುತ್ತಿರುವ ಅತೃಪ್ತ ಆಸೆಗಳು!, ಎಲ್ಲವನ್ನೂ ಮರೆಸುವ ಮಾತು! ಅಹಲ್ಯೆ ತನ್ನನ್ನು ಮರೆತಳು. ಇಂದ್ರಿಯಾಭಿಷನ ವಶವಾದಳು. ಎಂದೋ ಕಳೆದುಕೊಂಡಿದನ್ನು ಪಡೆದೆ ಎಂಬ ತೃಪ್ತಿ ಇಂದ್ರನಿಗೆ! ಎಂದೂ ಕಾಣದಿದ್ದನ್ನು ಪಡೆದೆ ಎಂಬ ತೃಪ್ತಿ ಅಹಲ್ಯೆಗೆ!!
ಆದರೆ ಅಧರ್ಮದ, ಅನ್ಯಾಯದ ಕರ್ಮಗಳೆಲ್ಲವೂ ಶಿಕ್ಷಾರ್ಹವೇ ಎಂಬಂತೆ, ಆಕಸ್ಮಿಕವಾಗಿ ಗೌತಮ ಬಂದ. ಇಂದ್ರ ಅಹಲ್ಯೆ ಒಂದಾಗಿದ್ದನ್ನು ತಿಳಿದ. ಬ್ರಹ್ಮಾಂಡವನ್ನೇ ದಹಿಸುವಷ್ಟು ಕೋಪಕೊಂಡ. ದೇವೇಂದ್ರನನ್ನು ಶಪಿಸಿಯೇ ಬಿಟ್ಟ. "ಈ ಕ್ಷಣದಿಂದ ನಿರೀಂದ್ರಿಯನಾಗು!" ಎಂದ. ಕ್ರುದ್ಧನಾದ ಗೌತಮ ಅಹಲ್ಯೆಯನ್ನೂ ಶಾಪದಿಂದ ದಂಡಿಸಿದ "ಈ ಕ್ಷಣದಿಂದ ಎಲ್ಲವನ್ನೂ ತಿಳಿಯುವವಳಾದರೂ ಪ್ರತಿಸ್ಪಂದನವಿಲ್ಲದ ಕಲ್ಲಾಗು!!"
ಇಂದ್ರ ಭಯದಿಂದಲೂ, ವಿಷಣ್ಣವದನದಿಂದಲೂ ಸ್ವರ್ಗಕ್ಕೆ ತೆರಳಿದ. ಮೋಹ, ಮದ, ಮತ್ತಿಳಿದ ಅಹಲ್ಯೆ ಗೌತಮನ ಪಾದದ ಮೇಲೆ ಬಿದ್ದು ಹೊರಳಾಡಿದಳು. 'ತನ್ನ ತಪ್ಪಿಲ್ಲ, ಇಂದ್ರ ಮಾಯಗಾರ, ಮೋಸಗಾರ ನನಗೇಕೆ ದಂಡನೆ ಕ್ಷಮಿಸಿ ಉದ್ಧರಿಸಿ' ಎಂದಳು. ಗೌತಮ ಶಾಂತನಾದರೂ ಶಾಪ ಉಪಸಂಹರಿಸುವ ಶಕ್ತಿ ಇಲ್ಲ. ಅಹಲ್ಯೆ ಶಾಪದ ಪರಿಣಾಮ ಅನುಭವಿಸುವುದಷ್ಟೇ ಇರುವ ಮಾರ್ಗ. ಆದರೆ ಶಾಪ ವಿಮೋಚನೆಗೆ ಒಂದು ದಾರಿ ಹೇಳಿದ, "ಲೋಕದ ಶಿಕ್ಷಾ ರಕ್ಷಾ ಶಕ್ತಿ ಅವತರಿಸಿ ಬಂದಾಗ ನಿನ್ನನ್ನು ಸ್ಪರ್ಶಿಸಿದಾಗ ನೀನು ಮೊದಲಿನಂತೆ ಪರಿಶುದ್ಧ ಅಹಲ್ಯೆಯಾಗುವೆ" ಎಂದು ಹೇಳಿ ಗೌತಮನು ಖಿನ್ನ ಮನಸ್ಕನಾಗಿ ಹೊರಟು ಹೋದ.







Comments