ದೇವೇಂದ್ರ
- Shripad Patil Mattighatta
- Jul 26
- 5 min read
ಸುರಲೋಕದ ಗದ್ದುಗೆಯ ಅಧಿಕಾರಿ, ದೇವೇಂದ್ರನ ಪಾತ್ರವು ಒಂದು ವಿಶಿಷ್ಟವಾದ ಪಾತ್ರ. ಬೇರೆ ಬೇರೆ ಪುರಾಣಗಳು, ಕಥೆಗಳು, ಬೇರೆ ಬೇರೆ ರೀತಿಯಲ್ಲಿ ಇವನನ್ನು ವರ್ಣಿಸಿದೆ. ವೇದಗಳ ಪ್ರಕಾರ, ಪ್ರತಿ ಮನ್ವಂತರಕ್ಕೆ ಒಬ್ಬ ಶತಕೃತು ವಿರಚಿಸಿದ ಪುಣ್ಯವಂತನು ಸ್ವರ್ಗಲೋಕದ ಸಿಂಹಾಸನವನ್ನು ಏರಿ ದೇವೇಂದ್ರನಾಗುತ್ತಾನೆ. ಅಂತೆಯೇ ಸುರೇಂದ್ರ, ಪುರಂದರ, ಶಕ್ರ, ಸುರಪತಿ, ಅಮರೇಶ, ಶಚಿಪತಿ ಮುಂತಾದ ಹೆಸರುಗಳಿಂದ ಕರೆಯಬಹುದು. ಋಗ್ವೇದ, ಅಥರ್ವವೇದಗಳು ದೇವೇಂದ್ರನನ್ನು ಬೇರೆ ಬೇರೆ ರೀತಿಯಲ್ಲೇ ವರ್ಣಿಸಿದೆ.

ಹಾಗೆಯೇ ಪುರಾಣಗಳಲ್ಲಿಯೂ ಕೂಡ ದೇವೇಂದ್ರನ ಪಾತ್ರ ಅನೇಕ ರೂಪದಲ್ಲಿ ಬಂದು ಹೋಗುತ್ತದೆ. ಕೆಲವೊಮ್ಮೆ ಮಹಾ ಬಲಶಾಲಿಯಾಗಿ, ಮತ್ತೊಮ್ಮೆ ಅತಿ ಪುಕ್ಕಲು ಸ್ವಭಾವದವನಾಗಿ, ಇನ್ನೊಮ್ಮೆ ಹಾಸ್ಯಾಸ್ಪದವಾಗಿ ಸುರಪತಿಯು ನಮಗೆ ಗೋಚರಿಸುತ್ತಾರೆ. ಒಟ್ಟಿನಲ್ಲಿ ಅಮರೇಶನನ್ನು 'ಇದಮಿತ್ಥಂ' ಎಂದು ವರ್ಣಿಸುವುದು ಕಷ್ಟದ ಕೆಲಸವೇ ಸರಿ!!
🔱 ದೇವೇಂದ್ರನ ಹಿನ್ನೆಲೆ
ಕಶ್ಯಪ ಮಹರ್ಷಿಗೆ ದಕ್ಷಪ್ರಜಾಪತಿಯ ಮಗಳು ಅದಿತಿಯಲ್ಲಿ ಇಂದ್ರನು ಜನಿಸಿದನು. ಒಮ್ಮೆ ಕಶ್ಯಪ ಮಹರ್ಷಿಯು ತನ್ನ ಪತ್ನಿಯರಾದ ದಿತಿ ಹಾಗೂ ಅದಿತಿಯರೊಂದಿಗೆ, ಆಶ್ರಮದಲ್ಲಿ ವಾಸಿಸುತ್ತಿದ್ದಾಗ ಅದಿತಿಯು ಪತಿಸೇವೆಯನ್ನು ನಿಷ್ಠೆಯಿಂದ ಮಾಡುತ್ತಿದ್ದಳು. ಅವಳ ಸೇವೆಯಿಂದ ಸಂತೃಪ್ತರಾದ ಮಹರ್ಷಿಗಳು 'ಏನು ವರ ಬೇಕು ಕೇಳು' ಎಂದರು. ಅದಿತಿ ದೇವಿಯು ಲೋಕಕ್ಕೆ ಆದರ್ಶಪ್ರಾಯನಾದ ಪುತ್ರನನ್ನು ಬೇಡಿದಳು. ಅಂತೆಯೇ ಅವಳ ಗರ್ಭದಲ್ಲಿ ದ್ವಾದಶಾದಿತ್ಯರಲ್ಲಿ ಹಿರಿಯನಾದ ಇಂದ್ರನು ಜನಿಸಿದನು. ಅಲ್ಲದೇ ಏಕಾದಶ ರುದ್ರರು, ಅಷ್ಟ ವಸುಗಳೂ ಕೂಡ ಅದಿತಿಯಿಂದಲೇ ಹುಟ್ಟಿದ ಮಕ್ಕಳು. ಹಾಗೆಯೇ ಅದಿತಿ ದೇವಿಯ ತಪಸ್ಸಿನ ಫಲವಾಗಿ ಮಹಾವಿಷ್ಣುವು ಕೂಡ ವಾಮನನಾಗಿ ಅವತರಿಸಿದನು. ಹೀಗೆ ಜನಿಸಿದ ಇಂದ್ರನೇ ಮುಂದೆ ದೇವಲೋಕದ ಅರಸನಾಗಿ ಅಮರಾವತಿಯಲ್ಲಿ ನೆಲೆಸಿದನು.
ಚತುರ್ಮುಖ ಬ್ರಹ್ಮನ ಒಂದು ಹಗಲಿನಲ್ಲಿ ೧೪ ಮಂದಿ ಇಂದ್ರರು ರಾಜ್ಯಭಾರ ಮಾಡುವರು. ಯಜ್ಞ, ರೋಚನ, ಸತ್ಯಜಿತ್, ತ್ರಿಶಿಖ, ವಿಭು, ಮಂತ್ರದ್ರುಮ, ಪುರಂದರ, ಬಲಿ, ಅದ್ಭುತ, ಶಂಭು, ವೈವೃತಿ, ಋತಧಾಮ, ದಿವಸ್ಪತಿ, ಶುಭ್ಯ್ ಎಂಬ ಹೆಸರುಳ್ಳ ೧೪ ಇಂದ್ರರು. ಸದ್ಯ ಏಳನೆಯವನಾದ ಪುರಂದರ ನಾಮಧೇಯನಾದ ಇಂದ್ರದ ಕಾಲ.
ಸಮುದ್ರ ಮಥನ ಕಾಲದಲ್ಲಿ ಉತ್ಪತ್ತಿಯಾದ ಅಮೃತವು ದೇವತೆಗಳ ಪಾಲಿಗೆ ಸೇರಿತು. ಅದರ ಸೇವನೆಯಿಂದಾಗಿ ದೇವತೆಗಳಿಗೆ ಅಮರತ್ವ ಪ್ರಾಪ್ತವಾಯಿತು. ಅಲ್ಲದೇ ದೇವೇಂದ್ರನ ಅಮರಾವತಿಯು ವಜ್ರ, ವೈಢೂರ್ಯಗಳಿಂದ ಸಂಪದ್ಭರಿತವಾಗಿ ಕಂಗೊಳಿಸುತ್ತಿತ್ತು. ಇಂತಹ ಸ್ವರ್ಗಲೋಕದ ಮೇಲೆ ಯಾವಾಗಲೂ ದಾನವರಿಗೆ ಕಣ್ಣು. ಶತಾಯಗತಾಯ ಅಮರಾವತಿಯನ್ನು ತಮ್ಮ ವಶಕ್ಕೆ ಪಡೆಯಬೇಕೆಂಬುದು ದಿತಿಯ ಮಕ್ಕಳಾದ ದೈತ್ಯರ ಪ್ರಯತ್ನ. ಬ್ರಹ್ಮ, ಈಶ್ವರನ ಕುರಿತು ತಪಸ್ಸು ಮಾಡಿ ವರಗಳನ್ನು ಪಡೆದ ದಾನವರು ಸುರಲೋಕದ ಮೇಲೆ ಸತತವಾಗಿ ದಾಳಿ ನಡೆಸುತ್ತಿದ್ದರು. ಅವರನ್ನು ನಿಯಂತ್ರಿಸಲು ದೇವೇಂದ್ರ ತನ್ನ ವಜ್ರಾಯುಧದ ಮೂಲಕ ಹೋರಾಡಿ ಪ್ರತಿರೋಧಿಸುತ್ತಿದ್ದನು. ಕೆಲವು ಬಾರಿ ಅದೂ ಸಾಧ್ಯವಾಗದೆ ಮಹಾವಿಷ್ಣುವಿನ ಮೊರೆ ಹೋಗಿ ತನ್ನ ಗದ್ದುಗೆಯನ್ನು ಹಿಂಪಡೆದಿದ್ದೂ ಇದೆ. ನಹುಷ, ಬಲಿ ಮುಂತಾದ ಅನೇಕರು ಇಂದ್ರನನ್ನು ಪಕ್ಕಕ್ಕೆ ಸರಿಸಿ ದೇವೇಂದ್ರನ ಸಿಂಹಾಸನವನ್ನು ಕೆಲವುಕಾಲ ಆಕ್ರಮಿಸಿಕೊಂಡಿದ್ದು ಇದೆ.
🔱 ವೃತ್ರವೈರಿಯಾಗಿ ದೇವೇಂದ್ರ
ಒಮ್ಮೆ ವೃತ್ರಾಸುರ ಎಂಬ ದಾನವನು ದೇವಲೋಕದ ಮೇಲೆ ದಾಳಿ ಮಾಡಿದನು. ಇಂದ್ರಾದಿ ದೇವತೆಗಳು ತಮ್ಮಲ್ಲಿರುವ ದಿವ್ಯಾಸ್ತ್ರಗಳಿಂದ ಪ್ರತಿದಾಳಿ ಮಾಡಿದರೂ ಹಿಮ್ಮೆಟ್ಟದ ಅಸುರನು, ಅವರು ಪ್ರಯೋಗಿಸಿದ ಎಲ್ಲಾ ಶಸ್ತ್ರಾಸ್ತ್ರಗಳನ್ನೂ ನುಂಗಿ ಹಾಕಿದನು. ಇದರಿಂದ ನಿಸ್ಸಹಾಯಕರಾದ ದೇವತೆಗಳು, ಶ್ರೀಮನ್ನಾರಾಯಣನಿಗೆ ಶರಣಾಗಿ ಪ್ರಾರ್ಥಿಸಿದರು. ವಿಷ್ಣುವು, 'ವೃತ್ರಾಸುರನನ್ನು ಗೆಲ್ಲಲು ಬೇಕಾಗಿ ಯೋಗ್ಯವಾದ ಆಯುಧವು ನಿಮಗೆ ದಧೀಚಿ ಮಹರ್ಷಿಗಳಿಂದ ದೊರೆಯುವುದು. ತಪಸ್ಸು, ವ್ರತಗಳಿಂದ ತೇಜಃಪುಂಜರಾದ ದಧೀಚಿಯವರ ಬೆನ್ನು ಮೂಳೆಯಿಂದ ಶಕ್ತ್ಯಾಯುಧ ತಯಾರಿಸಿಕೊಂಡು ಅಸುರನನ್ನು ಜಯಿಸಿರಿ' ಎಂದು ಆಶೀರ್ವದಿಸಿದನು. ಅಂತೆಯೇ ಇಂದ್ರ ಸಹಿತ ದೇವತೆಗಳು, ದಧೀಚಿ ಮಹರ್ಷಿಗಳ ಆಶ್ರಮಕ್ಕೆ ಹೋಗಿ ಪರಿಪರಿಯಾಗಿ ಸ್ತುತಿಸಿದರು. ಪ್ರಸನ್ನರಾದ ಮಹರ್ಷಿಗಳು ತನ್ನ ದೇಹತ್ಯಾಗ ಮಾಡುವ ಮೂಲಕ ಬೆನ್ನೆಲುಬನ್ನು ನೀಡಲು ಸಮ್ಮತಿಸಿದರು. ನಾರಾಯಣ ಕವಚವನ್ನು ಹೊಂದಿದ್ದ ಮಹರ್ಷಿಗಳ ಬೆನ್ನೆಲುಬಿನಿಂದ ದೇವಶಿಲ್ಪಿ ವಿಶ್ವಕರ್ಮನು ವಜ್ರಾಯುಧವನ್ನು ಸಿದ್ಧಪಡಿಸಿ ದೇವೇಂದ್ರನಿಗೆ ನೀಡಿದನು. ವಜ್ರಾಯುಧಧಾರಿಯಾದ ಸುರಪತಿಯು, ತನ್ನ ಬಳಗ ಸಹಿತವಾಗಿ ವೃತ್ರಾಸುರನಿಗೆ ಮುತ್ತಿಗೆ ಹಾಕಿದನು. ನಡೆದ ಯುದ್ಧದಲ್ಲಿ ವಜ್ರಾಯುಧದ ಹೊಡೆತಕ್ಕೆ ತನ್ನೆರಡೂ ಕೈಗಳನ್ನು ಕತ್ತರಿಸಲ್ಪಟ್ಟ ಅಸುರನು, ಕೋಪೋದ್ರಿಕ್ತನಾಗಿ ಐರಾವತದ ಮೇಲೆ ವಿರಾಜಮಾನನಾಗಿದ್ದ ದೇವೇಂದ್ರನನ್ನು, ಐರಾವತ ಸಹಿತವಾಗಿ ನುಂಗಿ ಹಾಕಿದನು. ಅವನ ಉದರದೊಳಗಿಂದಲೇ ವಜ್ರಾಯುಧ ಪ್ರಯೋಗಿಸಿದ ದೇವೇಂದ್ರನು ವೃತ್ರಾಸುರನ ಹೊಟ್ಟೆಯನ್ನು ಸೀಳಿ ಹೊರಬಂದನು. ಆ ಮೂಲಕ ದೈತ್ಯನ ಸಂಹಾರ ಮಾಡಿ ದೇವತೆಗಳು ತಮ್ಮ ಸಕಲ ಶಸ್ತ್ರಾಸ್ತ್ರಗಳನ್ನು, ಸರ್ವ ಸಂಪತ್ತನ್ನೂ ಮರಳಿ ಪಡೆದರು. ಅಂದಿನಿಂದ ದೇವೇಂದ್ರನು ವಜ್ರಾಯುಧಧಾರಿಯಾಗಿಯೇ ಕಂಗೊಳಿಸಿದನು.
🔱 ಅಹಲ್ಯಾ ಪ್ರಕರಣದಲ್ಲಿ ದೇವೇಂದ್ರ

ರಾಮಾಯಣದಲ್ಲಿ ಬರುವ ಅಹಲ್ಯೆಯ ಶಾಪವಿಮೋಚನೆಯ ವೃತ್ತಾಂತ ದೇವೇಂದ್ರನ ಮತ್ತೊಂದು ಮುಖವನ್ನು ನಮಗೆ ತೋರಿಸುತ್ತದೆ. ಲೋಕೋತ್ತರ ಸುಂದರಿ ಊರ್ವಶಿಯ ಗರ್ವವನ್ನು ಮುರಿಯುವ ಸಲುವಾಗಿ ಬ್ರಹ್ಮನೇ ಅಹಲ್ಯೆಯನ್ನು ಸೃಷ್ಟಿಸಿದ ಎಂದು ಬ್ರಹ್ಮಪುರಾಣ ಹೇಳುತ್ತದೆ. ಅಂತಹ ಪರಮಸುಂದರಿ ಅಹಲ್ಯೆ, ಗೌತಮ ಮಹರ್ಷಿಗಳ ಪತ್ನಿಯಾಗಿ ಆಶ್ರಮದಲ್ಲಿ ವಾಸಿಸುತ್ತಿರುತ್ತಾಳೆ. ಹೀಗೇ ಭೂಲೋಕದ ಕಡೆಗೆ ದೃಷ್ಟಿ ಹಾಯಿಸಿದ ದೇವೇಂದ್ರನಿಗೆ ಅಹಲ್ಯೆಯ ಸೌಂದರ್ಯ ಕಣ್ಣು ಕುಕ್ಕಿಸುತ್ತದೆ. ಹೇಗಾದರೂ ಅವಳನ್ನು ಪಡೆಯಬೇಕೆಂಬ ಉತ್ಕಟ ಆಕಾಂಕ್ಷೆ ಹೊಂದುತ್ತಾನೆ. ಗೌತಮ ಮಹರ್ಷಿಗಳು ನದಿಗೆ ಸ್ನಾನಕ್ಕೆ ಹೋಗಿರುವ ಸಂದರ್ಭ ನೋಡಿ, ಗೌತಮರದೇ ವೇಷಧಾರಿ ದೇವೇಂದ್ರ ಆಶ್ರಮ ಪ್ರವೇಶಿಸುತ್ತಾನೆ. ಅಹಲ್ಯೆಯು ತನ್ನ ಪತಿಯೆಂದೇ ಪರಿಭಾವಿಸಿ ದೇವೇಂದ್ರನನ್ನು ಕೂಡುತ್ತಾಳೆ. ಮಹರ್ಷಿಗಳ ರೂಪದ ದೇವೇಂದ್ರನ ನಡವಳಿಕೆಗಳಿಂದಲೂ, ಅವನ ಶರೀರದಿಂದ ಹೊರಹೊಮ್ಮುವ ಸುರಲೋಕದ ಸುವಾಸನೆಯಿಂದಲೂ ಅವಳಿಗೆ ಸಂಶಯ ಬಂದಿತ್ತು. ಆದರೂ ಅವಳು ದೇವೇಂದ್ರನ ಜತೆ ಸಹಕರಿಸಿದಳು ಎಂದೂ ಕೆಲವು ಕಡೆ ವರ್ಣಿಸಲಾಗಿದೆ. ಆಶ್ರಮಕ್ಕೆ ಗೌತಮರು ಹಿಂದಿರುಗುವ ಸಮಯಕ್ಕೆ ತನ್ನದೇ ರೂಪದ ಮತ್ತೊಬ್ಬನನ್ನು ಮಹರ್ಷಿಗಳು ನೋಡಿ ಸಂದೇಹ ಪಡುತ್ತಾರೆ. ತಮ್ಮ ದಿವ್ಯದೃಷ್ಟಿಯಿಂದ ನೋಡಲಾಗಿ ಇದು ದೇವೇಂದ್ರನ ಕುತಂತ್ರವೆಂಬುದು ಗೌತಮರಿಗೆ ಅರಿವಾಗುತ್ತದೆ. ಕೋಪೋದ್ರಿಕ್ತರಾದ ಮಹರ್ಷಿಗಳು ತಮ್ಮ ತಪೋಬಲದಿಂದ ದೇವೇಂದ್ರನಿಗೆ ಶಾಪ ನೀಡುತ್ತಾರೆ. "ಕಾಮದಿಂದ ಮತ್ತನಾದ ನೀನು ಮೈಯೆಲ್ಲಾ ಯೋನಿಯುಳ್ಳವನಾಗು" ಎಂಬುದಾಗಿ. ಆಮೇಲೆ ತನ್ನ ತಪ್ಪಿನ ಅರಿವಾದ ದೇವೇಂದ್ರನು ಪರಿಪರಿಯಾಗಿ ಬೇಡಿಕೊಂಡಾಗ, ಮೈತುಂಬಾ ಕಣ್ಣುಗಳಾಗಿ ದೇವೇಂದ್ರನು ಸಹಸ್ರಾಕ್ಷನಾಗಿ ಬದಲಾಗುತ್ತಾನೆ. ಹಾಗೆಯೇ ಇಂದ್ರನ ಕಪಟದ ಅರಿವಿದ್ದರೂ ಅವನನ್ನು ಕೂಡಿದ ಅಹಲ್ಯೆಗೆ 'ಕಲ್ಲಾಗು' ಎಂಬ ಶಾಪ ನೀಡುತ್ತಾರೆ. ಮುಂದೆ ತ್ರೇತಾಯುಗದಲ್ಲಿ ಭಗವಂತನ ಅವತಾರವಾದ ಶ್ರೀರಾಮನ ಪಾದ ಸ್ಪರ್ಶದಿಂದ ಅವಳಿಗೆ ಶಾಪ ಮುಕ್ತಿ ದೊರೆಯುತ್ತದೆ. ಇದು ಇಂದ್ರಿಯಗಳ ನಿಗ್ರಹ ಮಾಡಿಕೊಳ್ಳಲಾಗದ ಇಂದ್ರ ಶಾಪಗ್ರಸ್ಥನಾದ ಕಥೆ!!
🔱 ಸುರಲೋಕಾಧಿಪತಿ ದೇವೇಂದ್ರ
ದೇವೇಂದ್ರನು ಆಳುತ್ತಿರುವ ಅಮರಾವತಿಯು ಸಕಲ ಸುಖೋಪಭೋಗಗಳಿಂದ ಕೂಡಿ ಸಂಪದ್ಭರಿತವಾದ ಲೋಕ. ಅಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳಲ್ಲದೇ ಅಷ್ಟೈಶ್ವರ್ಯಗಳೂ ತುಂಬಿ ತುಳುಕುತ್ತಿರುತ್ತದೆ. ದೇವೇಂದ್ರನ ಪಟ್ಟಣ ಅಮರಾವತಿ. ಸಭೆ ಸುಧರ್ಮಾ. ಉಪ್ಪರಿಗೆ ವೈಜಯಂತ. ಆಯುಧ ವಜ್ರಾಯುಧ. ಆನೆ ಐರಾವತ. ಕುದುರೆ ಉಚ್ಛ್ವೈಶ್ರವಸ್. ದೇವೇಂದ್ರನ ಸಭೆಯಂತೂ ವರ್ಣನಾತೀತ!! ಜ್ಞಾನಿಗಳು, ತಪೋಧನರು, ಮಹರ್ಷಿಗಳು, ಅಷ್ಟ ದಿಕ್ಪಾಲಕರೂ, ಸಪ್ತ ವಸುಗಳು, ಯಕ್ಷರೂ, ಕಿನ್ನರರೂ, ಕಿಂಪುರುಷರು, ಗಂಧರ್ವರು ಮುಂತಾದ ಸಕಲ ದೇವತಾ ವರ್ಗದಿಂದ ಕೂಡಿದ ಆ ಸಭೆಯು ಕಂಗೊಳಿಸುತ್ತಿರುತ್ತದೆ. ಗಂಧರ್ವರ ಮಾಧುರ್ಯಪೂರ್ಣವಾದ ಗಾಯನ, ಯಕ್ಷರ ಮನಮೋಹಕ ನರ್ತನ, ನಿರಂತರವಾಗಿ ನಡೆಯುತ್ತಾ ಇರುತ್ತದೆ. ದೇವಲೋಕದ ಅಪ್ಸರೆಯರಾದ ಊರ್ವಶಿ, ಮೇನಕಾ, ರಂಭಾ, ತಿಲೊತ್ತಮ, ಘೃತಾಚಿ, ಮನೋರಮಾ ಮುಂತಾದವರು ತಮ್ಮ ನಾಟ್ಯ, ಸಂಗೀತ, ಅಲಂಕಾರಗಳಿಂದ ದೇವತೆಗಳ ಮನರಂಜಿಸುತ್ತಿರುತ್ತಾರೆ. ಕಾಮಧೇನು, ಕಲ್ಪವೃಕ್ಷ ಮುಂತಾದ ಸುವಸ್ತುಗಳಿಂದ ಕೂಡಿದ ಸ್ವರ್ಗಲೋಕದಲ್ಲಿ ಸದಾ ಸುಭಿಕ್ಷ ನೆಲೆಸಿರುತ್ತದೆ. ಸ್ವರ್ಗದ ನಂದನವನ ಅಲ್ಲಿಯ ಪಾರಿಜಾತ ಪುಷ್ಪವಂತೂ ಸೌಂದರ್ಯದ ಮತ್ತೊಂದು ಹೆಸರು. ಇವೆಲ್ಲವುಗಳಿಗೂ ಅಧಿಕಾರಿಯಾಗಿ, ನಿಯಂತ್ರಕನಾಗಿ ದೇವೇಂದ್ರ ರಾಜ್ಯವಾಳುತ್ತಿರುತ್ತಾನೆ. ಇದನ್ನೆಲ್ಲಾ ಗಮನಿಸಿ ನೋಡಿದಾಗ ಸುರಪತಿಯು ಒಬ್ಬ ಭೋಗಜೀವಿಯಾಗಿ ಸಕಲ ಸುಖವನ್ನು ಅನುಭವಿಸುವುದನ್ನೇ ಗುರಿಯಾಗಿ ಬದುಕುತ್ತಿರುವಂತವನಾಗಿ ನಮಗೆ ಗೋಚರಿಸುತ್ತಾನೆ. ಈ ಸುರಲೋಕದ ದೇವೇಂದ್ರನ ವರ್ಣನೆಯು ಪುರಾಣಗಳಲ್ಲಿ ಬೇರೆಬೇರೆ ಸಂದರ್ಭದಲ್ಲಿ ನಮಗೆ ಕಾಣಿಸುತ್ತದೆ.
ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ದೇವೇಂದ್ರನು ಪೂರ್ವ ದಿಕ್ಕಿನ ಅಧಿಪತಿ. ಭೂಲೋಕದಲ್ಲಿ ಮಳೆ, ಬೆಳೆ ಮುಂತಾದ ವಾತಾವರಣದ ನಿಯಂತ್ರಕನಾದ ದೇವೇಂದ್ರನ ಅನುಗ್ರಹದಿಂದಲೇ ಪೃಥ್ವಿಯಲ್ಲಿ ಸುಭಿಕ್ಷೆ ಉಂಟಾಗುತ್ತದೆ. ಅಗ್ನಿ, ವರುಣ, ವಾಯು, ನಿಋತಿ, ಯಮ, ಕುಬೇರ ಮತ್ತು ಈಶಾನರು ಉಳಿದ ದಿಕ್ಕುಗಳಿಗೆ ಅಧಿಪತಿಗಳಾದರೂ ಅವರೆಲ್ಲರೂ ದೇವೇಂದ್ರನ ಆಣತಿಯಂತೆ ಕಾರ್ಯ ನಿರ್ವಹಿಸುತ್ತಾರೆ. ಭೂಮಿಯ ಮೇಲೆ ನಡೆಯುವ ಯಜ್ಞ, ಯಾಗಾದಿಗಳಿಂದ ದೇವತೆಗಳ ಬಲ ವೃದ್ಧಿಸುತ್ತದೆ. ಪುಣ್ಯಕಾರ್ಯಗಳು ಹೆಚ್ಚು ಹೆಚ್ಚು ನಡೆದಂತೆ ದೇವಲೋಕದ ಶಕ್ತಿಯೂ ಹೆಚ್ಚುತ್ತದೆ. ಇದು ಸುರಲೋಕಕ್ಕೂ, ಭೂಲೋಕಕ್ಕೂ ಇರುವ ಪೂರಕವಾದ ಸಂಬಂಧ.
🔱 ಗೋವರ್ಧನಗಿರಿ ಪ್ರಸಂಗ
ಇಷ್ಟಾದರೂ ದೇವೇಂದ್ರನಿಗೆ ಭೂಮಿಯ ಮೇಲೆ ನೇರವಾಗಿ ಪೂಜೆ ಸಲ್ಲುವುದಿಲ್ಲ. ಯಾವುದೇ ದೇವಾಲಯಗಳಿಲ್ಲ. ಇದೊಂದು ಸೋಜಿಗವೇ ಸರಿ! ಇದಕ್ಕೂ ಒಂದು ಕಾರಣ ಮಹಾಭಾರತದ ಒಂದು ಕಥೆಯಲ್ಲಿ ಬರುತ್ತದೆ. ಭಗವಂತನು ದ್ವಾಪರಯುಗದಲ್ಲಿ ಶ್ರೀಕೃಷ್ಣನಾಗಿ ಜನಿಸಿದ, ಬಾಲ್ಯದಲ್ಲಿ ಅವನು ಗೋಪರೊಂದಿಗೆ ನಂದಗೋಕುಲದಲ್ಲಿ ವಾಸಿಸುತ್ತಿದ್ದ. ತನ್ನ ಬಾಲಲೀಲೆಗಳಿಂದ ಗೋಕುಲದ ಜನರನ್ನು ಸಾಕಷ್ಟು ಆಕರ್ಷಿಸಿದ್ದ. ಅಲ್ಲಿನ ಜನರು ಪ್ರತಿವರ್ಷ ಇಂದ್ರ ಪೂಜೆಯನ್ನು ಬಿಟ್ಟು ವೃಂದಾವನದ ಸಮೀಪದ ಗೋವರ್ಧನ ಗಿರಿಗೆ ಪೂಜೆ ಸಲ್ಲಿಸಲು ಪ್ರೇರೇಪಿಸಿದನು. ಆ ಮೂಲಕ ದೇವೇಂದ್ರನಿಗೆ ಸಲ್ಲುವ ಪೂಜೆಯು ತಪ್ಪಿದಾಗ ಇಂದ್ರನು ಕೋಪಗೊಂಡನು. ತನ್ನ ಆಜ್ಞಾವರ್ತಿಗಳಾದ ವಾಯು, ವರುಣರ ಮೂಲಕ ನಂದಗೋಕುಲದಲ್ಲಿ ಭಾರಿ ಮಿಂಚು, ಗುಡುಗು, ಬಿರುಗಾಳಿ, ಮಳೆಯನ್ನು ಸೃಷ್ಟಿಸಿದನು. ಅದರಿಂದ ಅಲ್ಲಿಯ ಜನರು, ದನಕರುಗಳು ಪ್ರವಾಹದಿಂದ ಕೊಚ್ಚಿಹೋಗುವ ಸ್ಥಿತಿ ನಿರ್ಮಾಣವಾಯಿತು. ಇದು ಇಂದ್ರನು ತನ್ನ ಮೇಲಿನ ಕೋಪದಿಂದ ನಡೆಸಿರುವ ದಾಳಿ ಎಂದರಿತ ಕೃಷ್ಣನು, ಬೃಹತ್ ಗೋವರ್ಧನ ಗಿರಿಯನ್ನೇ ತನ್ನ ಕಿರುಬೆರಳಿನಿಂದ ಎತ್ತಿ ಹಿಡಿದನು. ಸಕಲ ಜನ ಜಾನುವಾರುಗಳಿಗೆ ಆ ಪರ್ವತದ ಅಡಿಯಲ್ಲಿ ಆಶ್ರಯ ನೀಡಿದನು. ಮತ್ತೊಂದು ಕೈಯಲ್ಲಿ ಕೊಳಲನೂದುತ್ತಾ ಅವರಿಗೆ ಧೈರ್ಯ ತುಂಬಿದನು. ಸತತ ಏಳು ಹಗಲು ಏಳು ರಾತ್ರಿಯವರೆಗೆ ಗಿರಿಧಾರಿಯಾಗಿ, ತನ್ನನ್ನು ನಂಬಿದವರನ್ನು ಕೃಷ್ಣನು ಕಾಯ್ದನು. ಇದು ಮಹಾವಿಷ್ಣುವಿನ ಲೀಲೆ ಎಂಬುದನ್ನು ಅರಿತು ತನ್ನ ತಪ್ಪಿನ ಅರಿವಾದ ದೇವೇಂದ್ರನು, ತನ್ನ ಐರಾವತದ ಮೇಲೆ ಬಂದು ಕೃಷ್ಣನಿಗೆ ಶರಣಾದನು. ಅಲ್ಲಿಂದ ಮುಂದೆ ಭೂಮಿಯಲ್ಲಿ ದೇವೇಂದ್ರನ ಪೂಜೆಯಾಗಲೀ ದೇವಾಲಯಗಳಾಗಲೀ ಕಾಣದಂತಾಯಿತು.
🔱 ದೇವೇಂದ್ರನ ಪರಿವಾರ
ಬೃಹಸ್ಪತಿ ಆಚಾರ್ಯರು ದೇವ ಗುರುಗಳು. ಇಂದ್ರನ ಕಷ್ಟ ಕಾಲಗಳಲ್ಲಿ ಯೋಗ್ಯವಾದ ಸಲಹೆ ಸೂಚನೆಗಳನ್ನು ಕೊಟ್ಟ ಮಾರ್ಗದರ್ಶಕರಾಗಿರುತ್ತಾರೆ. ದೇವೇಂದ್ರನ ಪತ್ನಿ ಶಚಿದೇವಿ. ದೇವೇಂದ್ರನಿಗೆ ಶಚಿದೇವಿಯಲ್ಲಿ ಜಯಂತ ಎಂಬ ಮಗ ಅಲ್ಲದೆ ತ್ರೇತಾಯುಗದಲ್ಲಿ ಇಂದ್ರನ ಅಂಶದಿಂದ ವಾಲಿ ಎಂಬ ಬಲಶಾಲಿಯಾದ ವಾನರ ರಾಜ ಜನಿಸುತ್ತಾನೆ. ತನ್ನ ಅಸಾಮಾನ್ಯವಾದ ಬಲದಿಂದ ಹೆಸರುವಾಸಿಯಾದ ಈತ, ಮುಂದೆ ಶ್ರೀರಾಮನಿಂದ ಹತನಾಗುತ್ತಾನೆ. ದ್ವಾಪರದಲ್ಲಿ ಪಾಂಡವರಲ್ಲಿ ಒಬ್ಬನಾದ ಅರ್ಜುನ ಇಂದ್ರನ ಮಗ. ಕುಂತಿಯು ಪಡೆದ ವರಬಲದಿಂದ ಅವಳ ಮೂಲಕ ಇಂದ್ರನ ಅಂಶದಿಂದ ಅರ್ಜುನನ ಜನನವಾಗುತ್ತದೆ. ಮುಂದೆ ಒಬ್ಬ ಅದ್ವಿತೀಯ ಬಿಲ್ಗಾರನಾಗಿ ಶ್ರೀ ಕೃಷ್ಣನ ಸತತ ಬೆಂಬಲದಿಂದ ಸೋಲೇ ಕಾಣದ ಪ್ರತಾಪಿಯಾಗಿ ಬಾಳುತ್ತಾನೆ.
🔱 ಸಂದರ್ಭೋಚಿತವಾಗಿ ಇಂದ್ರನ ಪ್ರವೇಶ
ಇನ್ನು ಯಕ್ಷಗಾನ ಪ್ರಸಂಗದಲ್ಲಿ ದೇವೇಂದ್ರನ ಪಾತ್ರವು ಬಹಳಷ್ಟು ಕಡೆ ಕಾಣಿಸುತ್ತದೆ. ಬ್ರಹ್ಮ ಕಪಾಲ, ದೇವಿ ಮಹಾತ್ಮೆ, ದಕ್ಷ ಯಜ್ಞ, ನರಕಾಸುರ ವಧೆ ಅಲ್ಲದೆ ರಾಮಾಯಣ ಮಹಾಭಾರತ ಅನೇಕ ಪ್ರಸಂಗಗಳಲ್ಲಿ ಸಂದರ್ಭೋಚಿತವಾಗಿ ಶಕ್ರನ ಪ್ರವೇಶವಿದೆ. ರಾಮನು ರಾವಣನ ಸಂಹಾರ ಮಾಡುವ ಸಮಯದಲ್ಲಿ ತನ್ನ ದಿವ್ಯವಾದ ರಥವನ್ನು ಸಾರಥಿ ಮಾತಲಿ ಸಹಿತವಾಗಿ ಶ್ರೀರಾಮನಿಗೆ ನೀಡುವ ಮೂಲಕ ಸುರಪತಿಯು ನೆರವಾಗುತ್ತಾನೆ. ಇನ್ನು ಖಾಂಡವವನ ದಹನದ ಸನ್ನಿವೇಶದಲ್ಲಿ ತನ್ನದೇ ಮಗನಾದ ಅರ್ಜುನನೊಂದಿಗೆ ದೇವೇಂದ್ರನ ಹೋರಾಟವು ನಡೆಯುತ್ತದೆ. ಅಗ್ನಿಯು ತನ್ನ ಅನಾರೋಗ್ಯದ ನಿವಾರಣೆಗಾಗಿ ಖಾಂಡವವನವನ್ನು ದಹಿಸತೊಡಗುತ್ತಾನೆ. ಆ ವನಕ್ಕೆ ದೇವೇಂದ್ರನು ರಕ್ಷಕನಾಗಿ ನಿಲ್ಲುತ್ತಾನೆ. ವರುಣನ ಸಹಾಯದಿಂದ ಬೆಂಕಿಯನ್ನು ಆರಿಸಿಬಿಡುತ್ತಾನೆ. ಆಗ ಅಗ್ನಿಯು ಕೃಷ್ಣಾರ್ಜುನರಲ್ಲಿ ಖಾಂಡವವನ ದಹನಕ್ಕೆ ಸಹಾಯವನ್ನು ಯಾಚಿಸುತ್ತಾನೆ. ಅರ್ಜುನನ ಸಹಾಯದೊಂದಿಗೆ ವನವನ್ನು, ಅದರಲ್ಲಿ ನೆಲೆ ನಿಂತ ಅನೇಕ ರಕ್ಕಸರು, ವಿಷ ಜಂತುಗಳನ್ನು ಅಗ್ನಿಯು ಆಪೋಶನ ತೆಗೆದುಕೊಳ್ಳತೊಡಗಿದನು. ಇದನ್ನು ವಿರೋಧಿಸಿದ ಇಂದ್ರನು ನೇರವಾಗಿ ಅರ್ಜುನನ ಜತೆ ಯುದ್ಧಕ್ಕೆ ನಿಂತು, ಸುತನಾದ ಅರ್ಜುನನಿಂದಲೇ ಸೋಲೊಪ್ಪಿಕೊಳ್ಳುವನು. ಮುಂದೆ ಅದೇ ಪ್ರದೇಶವನ್ನು ಪಾಂಡವರು ಇಂದ್ರಪ್ರಸ್ಥ ನಗರವನ್ನಾಗಿಸಿ ತಮ್ಮ ರಾಜಧಾನಿಯನ್ನಾಗಿಸಿಕೊಳ್ಳುವರು. ಅರ್ಜುನನು ಪಾಶುಪತಾಸ್ತ್ರವನ್ನು ಪಡೆಯಲು ತಪಸ್ಸನ್ನಾಚರಿಸುವನು. ಅಲ್ಲಿ ಶಿವನಿಗೂ ಅರ್ಜುನನಿಗೂ ಯುದ್ಧವಾಗಿ ಈಶ್ವರನು ಅರ್ಜುನನ ಮೇಲೆ ಪ್ರಸನ್ನನಾಗಿ ಪಾಶುಪತಾಸ್ತ್ರವನ್ನು ದಯಪಾಲಿಸುವನು. ಆಗ ದೇವೇಂದ್ರನು ಆಗಮಿಸಿ ಅರ್ಜುನನನ್ನು ಸುರಲೋಕಕ್ಕೆ ಕರೆದೊಯ್ಯುವನು. ಸ್ವರ್ಗದಲ್ಲಿ ಅರ್ಜುನನನ್ನು ಯೋಗ್ಯರೀತಿಯಲ್ಲಿ ಸತ್ಕರಿಸಿ ಅನೇಕ ದಿವ್ಯಾಸ್ತ್ರಗಳನ್ನೂ ಅನುಗ್ರಹಿಸುವನು. ಹೀಗೆ ಕಾಲಕಾಲಕ್ಕೆ ಅವಶ್ಯಕವಿರುವಲ್ಲೆಲ್ಲಾ ದೇವೇಂದ್ರನ ಪಾತ್ರವು ಯಕ್ಷಗಾನದಲ್ಲಿ ಒಂದು ಹೋಗುತ್ತದೆ.
🔱 ದೇವೇಂದ್ರ
ಹೀಗೆ ಇಂದ್ರ ಎಂಬುದು ಒಂದು ಪದವಿಯ ಹೆಸರು. ಮುಕ್ಕೋಟಿ ದೇವತೆಗಳಿಗೂ ಅರಸನಾದ ಅವನಿಗೆ ದೇವೇಂದ್ರನೆಂಬ ಪದವಿ. ದೇವೇಂದ್ರನ ಕುರಿತು ವೇದಗಳಲ್ಲಿ, ಪುರಾಣಗಳಲ್ಲಿ ಬಂದಿರುವ ವರ್ಣನೆಗಳೆಲ್ಲವನ್ನೂ ನಾವಿಲ್ಲಿ ವಿವರಿಸಲು ಸಾಧ್ಯವೇ? ನಮ್ಮ ಅವಗಾಹನೆಗೆ ಒಂದಷ್ಟನ್ನು ಹೇಳಬಹುದಷ್ಟೇ! ಇನ್ನೂ ಸಾಕಷ್ಟು ಮಹತ್ವದ ವಿಷಯಗಳು ಇಲ್ಲಿ ಬಂದಿರದೆ ಇರಬಹುದು........








Comments