ಕುಂತಿ
- Shripad Patil Mattighatta
- Jun 28
- 4 min read
ಕುಂತಿಯದು ಮಹಾಭಾರತ ಕಾಲಘಟ್ಟದ ಮಹತ್ವದ ಪಾತ್ರ. ಪಾಂಡವರ ಜೀವನದ ಎಲ್ಲಾ ಏಳುಬೀಳುಗಳ ಪ್ರತ್ಯಕ್ಷದರ್ಶಿಯಾಗಿ ಸಾಕ್ಷೀಭೂತವಾಗಿ ಉಳಿದವಳು ಕುಂತಿ. ಅವಶ್ಯಕತೆ ಇರುವಲ್ಲಿ ಪಾಂಡವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಧರ್ಮ ಮಾರ್ಗದಲ್ಲಿ ಮುನ್ನಡೆಸಿದವಳು.

ಶೂರಸೇನ ಮಹಾರಾಜನ ಅಷ್ಟಪುತ್ರಿಯರಲ್ಲಿ ಒಬ್ಬಳಾಗಿ ಜನಿಸಿದ ಪೃಥಾ ಎಂದು ನಾಮಕರಣಗೊಂಡ ಕುಂತಿಯನ್ನು ಕುಂತಿಭೋಜನು ದತ್ತುಪುತ್ರಿಯಾಗಿ ಸ್ವೀಕರಿಸಿದನು. ಒಮ್ಮೆ ದೂರ್ವಾಸ ಮಹರ್ಷಿಗಳು ಭೋಜರಾಜ್ಯಕ್ಕೆ ಆಗಮಿಸಿದಾಗ, ಕುಂತಿಭೋಜನು ಕುಂತಿಯನ್ನು ಅವರ ಸೇವೆಗೆ ನಿಯುಕ್ತಿಗೊಳಿಸಿದನು. ಅವಳ ಸೇವೆಯಿಂದ ಸಂತೃಪ್ತರಾದ ಮಹರ್ಷಿಗಳು ವರಮಂತ್ರವೊಂದನ್ನು ಉಪದೇಶಿಸಿದರು. ಆ ಬೀಜಮಂತ್ರ ಪಠಿಸಿ, ಯಾವುದೇ ದೇವತೆಗಳನ್ನು ಆಹ್ವಾನಿಸಿ, ಅವರ ಮುಖೇನ ಕುಂತಿಯು ಸಂತಾನವನ್ನು ಪಡೆಯಬಹುದಿತ್ತು. ಆಗ ತಾನೇ ಯೌವನಿಗಳಾದ ಕುಂತಿಯು, ವರವನ್ನು ಪರೀಕ್ಷಿಸಿ ನೋಡುವ ಆತುರದಿಂದ, ಬೀಜಮಂತ್ರ ಪಠಿಸಿ ಸೂರ್ಯದೇವನನ್ನು ಆಮಂತ್ರಿಸಿ, ಅವನ ಮೂಲಕ ಮಗುವೊಂದನ್ನು ಪಡೆದು, ಸಾಕಲು ಅಸಹಾಯಕಳಾಗಿ, ಅದನ್ನು ಪೆಟ್ಟಿಗೆಯಲ್ಲಿ ಹಾಕಿ ಗಂಗಾನದಿಯಲ್ಲಿ ತೇಲಿಬಿಟ್ಟಳು. ಆ ಪೆಟ್ಟಿಗೆಯು ಅದಿರಥ ಎಂಬ ಸೂತನಿಗೆ ದೊರಕಿ, ಅವನು ಆ ಮಗುವನ್ನು ಸಲಹಿ, ಆ ಮಗುವೇ ಮುಂದೆ ಕರ್ಣನೆಂಬ ನಾಮಧೇಯದಿಂದ ಪ್ರಸಿದ್ಧನಾದನು.
ಪ್ರಾಪ್ತ ವಯಸ್ಕಳಾದ ಕುಂತಿಯನ್ನು, ಹಾಗೆಯೇ ಮದ್ರದೇಶದ ರಾಜಕುಮಾರಿ ಮಾದ್ರಿಯನ್ನು ಚಂದ್ರ ವಂಶದ ಪಾಂಡು ಮಹಾರಾಜನು ವಿವಾಹವಾದನು. ಆ ಮಹಾರಾಜನು ಒಮ್ಮೆ ಬೇಟೆಗೆ ಹೋದಾಗ, ಹರಿಣ ರೂಪದಲ್ಲಿ ಮಿಥುನ ಕ್ರಿಯೆಯಲ್ಲಿ ತೊಡಗಿದ್ದ ಋಷಿ ಕಿಂದಮನನ್ನು ಬಾಣದಿಂದ ಘಾಸಿಗೊಳಿಸಿದನು. ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಆ ಋಷಿಯು, "ಪಾಂಡುವಿಗೆ ಸ್ತ್ರೀಸಂಗದಿಂದ ಮರಣವುಂಟಾಗಲಿ" ಎಂಬ ಶಾಪ ನೀಡಿ ಮರಣ ಹೊಂದಿದನು. ಶಾಪಭಯದಿಂದ ಪಾಂಡುವು ರಾಜ್ಯತ್ಯಾಗ ಮಾಡಿ, ಪತ್ನಿಯರೊಂದಿಗೆ ಅರಣ್ಯವನ್ನೈದನು. ತಾನು ಸಂತಾನವಿಹೀನನೆಂದು ಪಾಂಡುವು ಚಿಂತಾಕ್ರಾಂತನಾಗಿದ್ದಾಗ, ಕುಂತಿಯು ತನಗಿರುವ ವರಬಲದ ಕುರಿತು ಹೇಳಿದಳು. ಪಾಂಡುವಿನ ಒಪ್ಪಿಗೆಯ ಮೇರೆಗೆ ಬೀಜಮಂತ್ರವನ್ನು ಪಠಿಸಿ ಯಮಧರ್ಮನಿಂದ ಯುಧಿಷ್ಠಿರನನ್ನೂ, ವಾಯುವಿನಿಂದ ಭೀಮಸೇನನನ್ನೂ, ದೇವೇಂದ್ರನಿಂದ ಅರ್ಜುನನ್ನೂ ಮಕ್ಕಳಾಗಿ ಪಡೆದಳು. ಮಾದ್ರಿಗೂ ಬೀಜಮಂತ್ರದಿಂದ ಅಶ್ವಿನಿದೇವತೆಗಳಿಂದ ನಕುಲ, ಸಹದೇವರೆಂಬ ಮಕ್ಕಳಾದರು. ಚಂಚಲ ಮನಃಸ್ಥಿತಿಯಲ್ಲಿ ಮಾದ್ರಿಯನ್ನು ಕೂಡಲು ಪ್ರಯತ್ನಿಸಿದ ಪಾಂಡುವು ಮರಣ ಹೊಂದಿದಾಗ, ಮಾದ್ರಿಯು ತನ್ನೆರಡು ಮಕ್ಕಳನ್ನೂ ಕುಂತಿಯ ಒಡಲಲ್ಲಿ ಹಾಕಿ ಸಹಗಮನವನ್ನೈದಿದಳು. ಅಂದಿನಿಂದ ಕುಂತಿಯು ಐದೂ ಮಕ್ಕಳನ್ನೂ ತನ್ನದೇ ಒಡಲಕುಡಿಗಳಂತೆ ಜೀವನ ಪೂರ್ತಿ ಭೇದಭಾವವಿಲ್ಲದೆ ಸಲಹಿದಳು.
ತನ್ನ ಮಕ್ಕಳೊಂದಿಗೆ ಕುಂತಿಯು ಕಾನನದಿಂದ ಹಸ್ತಿನಾವತಿಗೆ ಹಿಂದಿರುಗಿದಾಗ, ಭೀಷ್ಮರೇ ಮುಂತಾದ ಹಿರಿಯರು ಪಾಂಡುಪುತ್ರರೈವರನ್ನೂ ಕುರುಕುಲದ ಕುಡಿಗಳೆಂದೇ ಪರಿಗಣಿಸಿ ಉಪಚರಿಸಿದರು. ಅರಸು ಮಕ್ಕಳಿಗೆ ಯೋಗ್ಯವಾದ ಶಸ್ತ್ರ- ಶಾಸ್ತ್ರಾಭ್ಯಾಸವನ್ನೂ ಗುರುಕೃಪ, ದ್ರೋಣಾಚಾರ್ಯರಿಂದ ಕೊಡಿಸಿದರು. ಪಂಚ ಪಾಂಡವರ ಜೊತೆಯಲ್ಲಿ ಪಾಂಡುವಿನ ಸಹೋದರ - ಹಸ್ತಿನಾವತಿಯ ಅರಸ ಧೃತರಾಷ್ಟ್ರನ ಮಕ್ಕಳಾದ ಧುರ್ಯೋದನಾದಿ ಶತಸಂಖ್ಯೆಯ ಕೌರವರೂ ವಿದ್ಯಾಭ್ಯಾಸವನ್ನು ಮಾಡಿದರು. ಇಲ್ಲಿಂದ ಮುಂದೆ ಕೌರವ ಪಾಂಡವರ ನಡುವಿನ ವೈರತ್ವವನ್ನು ಬದುಕಿನುದ್ದಕ್ಕೂ ಮೂಕ ಪ್ರೇಕ್ಷಕಳಾಗಿ ನೋಡುತ್ತಾ ಬಂದವಳು ಕುಂತಿ.
ದ್ರೋಣಾಚಾರ್ಯರಲ್ಲಿ ಧನುರ್ವಿದ್ಯಾಭ್ಯಾಸವನ್ನು ಪೂರೈಸಿದ ಕೊನೆಯಲ್ಲಿ ಎಲ್ಲ ರಾಜಕುಮಾರರಿಂದ ಬಿಲ್ವಿದ್ಯಾ ಪ್ರದರ್ಶನ ಏರ್ಪಡಿಸಲಾಯಿತು. ಇಲ್ಲಿ 'ಬದುಕಿಯೇ ಇಲ್ಲ' ಎಂದು ತಿಳಿದಿದ್ದ, ಕುಂತಿಯ ವಿವಾಹಪೂರ್ವ ಹುಟ್ಟಿದ್ದ ಪುತ್ರ ಕರ್ಣನು ಧನಸ್ಸನ್ನು ಹಿಡಿದು ಪ್ರಕಟಗೊಂಡನು. ಕರ್ಣಕುಂಡಲಧಾರಿಯಾಗೇ ಜನಿಸಿದ್ದ ಅವನನ್ನು ಗುರುತಿಸುವುದು ಕುಂತಿಗೇನೂ ಕಷ್ಟವಾಗಲಿಲ್ಲ. ಆದರೆ ಜಗದೆದುರು ಇದನ್ನು ಬಹಿರಂಗಗೊಳಿಸುವುದು ಮಾತ್ರ ಅವಳಿಂದ ಸಾಧ್ಯವೇ ಆಗಲಿಲ್ಲ. ಮತ್ತೊಬ್ಬ ಮಗ ಅರ್ಜುನನಿಗೆ ಸರಿಸಾಟಿಯಾಗಿ, ತನ್ನ ಬಿಲ್ವಿದ್ಯೆ ಪ್ರದರ್ಶಿಸಿದ ಕರ್ಣನು ಕಣ್ಣೆದುರಿನಲ್ಲಿಯೇ ದುರ್ಯೋಧನನ ಪಾಳಯ ಸೇರಿದ್ದು ಮಾತ್ರ ಕುಂತಿಗೆ ನುಂಗಲಾರದ ತುತ್ತಾಗಿತ್ತು. ಕುಂತಿಯ ಕಣ್ಣೆದುರಿನಲ್ಲಿಯೇ, ಪಾಂಡವರ ಬದ್ಧವೈರಿಯಾದ ಕೌರವನಿಂದ, ಅಂಗರಾಜ್ಯದ ಅಧಿಕಾರಿಯಾಗಿ ಪ್ರತಿಷ್ಠಾಪಿಸಲ್ಪಟ್ಟನು. ಅಲ್ಲಿಂದ ಮುಂದೆ ಕೌರವರ ಎಲ್ಲಾ ಕುಕೃತ್ಯಗಳಲ್ಲಿಯೂ ಸಮಾನವಾಗಿ ಭಾಗಿಯಾಗುತ್ತಿದ್ದರೂ, ಕುಂತಿಯು ಅವನನ್ನು ತಿದ್ದಲಾಗದೇ, ತನ್ನ ಮನದಲ್ಲೇ ದುಃಖವನ್ನು ನುಂಗಿಕೊಂಡು ಜೀವಿಸಿದಳು.
ಚಿಕ್ಕವನಿರುವಾಗಲೇ ಭೀಮಸೇನನ ಮೇಲೆ ವಿಷಪ್ರಯೋಗ, ಆಮೇಲೆ ಅರಗಿನ ಮನೆಯಲ್ಲಿ ಪಾಂಡವರೆಲ್ಲರನ್ನು ಸಜೀವದಹನದ ಪ್ರಯತ್ನ. ಹೀಗೆ ನಾನಾರೀತಿಯಲ್ಲಿ ದುರ್ಯೋಧನನು ತನ್ನ ದ್ವೇಷ ಸಾಧಿಸಲು ಯತ್ನಿಸುತ್ತಲೇ ಇದ್ದರೂ, ಪಾಂಡವರು ಬಲಶಾಲಿಗಳಾಗಿ ಬೆಳೆಯುತ್ತಲೇ ಇದ್ದರು. ಅರಗಿನ ಮನೆಯಿಂದ ತಪ್ಪಿಸಿಕೊಂಡು ಕುಂತೀಸಮೇತರಾಗಿ ಪಾಂಡವರು ಏಕಚಕ್ರ ನಗರದಲ್ಲಿ ನೆಲೆಸಿದ್ದಾಗ, ಅವರಿಗೆ ಆಶ್ರಯ ನೀಡಿದ ಬ್ರಾಹ್ಮಣರ ಮನೆಯವರಿಗೆ ಸಂಕಟ ಎದುರಾಯಿತು. ಬಕಾಸುರನೆಂಬ ರಕ್ಕಸನ ಅಂದಿನ ಆಹಾರವಾಗಿ, ಅದೇ ಮನೆಯ ಸದಸ್ಯರೊಬ್ಬರು ಪ್ರಾಣ ನೀಡಬೇಕಾದ ಪರಿಸ್ಥಿತಿಯಲ್ಲಿ, ಕುಂತಿಯೇ ಮುಂದೆ ನಿಂತು ಅವರಿಗೆ ಧೈರ್ಯ ಹೇಳಿದಳು. ಅಂತಹ ಘೋರ ರಕ್ಕಸನ ಬಳಿಗೆ ತನ್ನ ಮಗ ಭೀಮಸೇನನನ್ನು ಕಳುಹಿಸಲು ಯಾವುದೇ ಹಿಂಜರಿಕೆ ತೋರಲಿಲ್ಲ. ಮಗನ ಶಕ್ತಿ ಸಾಮರ್ಥ್ಯದ ಮೇಲೆ ವಿಶ್ವಾಸವು ಅಷ್ಟೇ ಇತ್ತೆನ್ನಿ!! ಅಂತೆಯೇ ಬಲಭೀಮನಿಂದ ಬಕಾಸುರನ ವಧೆಯೂ ಆಯಿತು. ದ್ರುಪದನ ವಿರಾಟನಗರಿಯಲ್ಲಿ ನಡೆದ ಸ್ವಯಂವರದಲ್ಲಿ, ಮತ್ಸ್ಯಯಂತ್ರ ಬೇಧಿಸಿ, ಅರ್ಜುನನು ದ್ರೌಪದಿಯನ್ನು ಕರೆತಂದು, "ಅಮ್ಮಾ, ಏನು ತಂದಿದ್ದೇವೆ ನೋಡು" ಎಂದಾಗ ಕುಂತಿದೇವಿ ಒಳಗಿನಿಂದಲೇ "ಐವರೂ ಸಮಾನವಾಗಿ ಹಂಚಿಕೊಳ್ಳಿ" ಎಂದಳು. ಅರ್ಜುನ ತಂದಿರುವುದೇನೆಂದು ಅರಿವಿಲ್ಲದೆ ಹಾಗೆ ನುಡಿದರೂ, ಅದು ಪಂಚ ಪಾಂಡವರ ಮಧ್ಯೆ ಏಕೋಭಾವವನ್ನು ನಿರಂತರವಾಗಿ ಉಳಿಸಿಕೊಳ್ಳಲಿಕ್ಕೆ ನೆರವಾಗಿದ್ದು ಕುಂತಿಯದೇ ತಂತ್ರಗಾರಿಕೆ ಎಂದೂ ವಿಶ್ಲೇಷಿಸುತ್ತಾರೆ.
ಯಾವುದೇ ಕಾರಣಕ್ಕೂ ಕೌರವ ಪಾಂಡವರ ಮಧ್ಯೆ ಸಾಮರಸ್ಯ ಒಡ ಮೂಡಲು ಸಾಧ್ಯವಿಲ್ಲವೆಂದು ತೀರ್ಮಾನಿಸಿದ ಭೀಷ್ಮರು, ಕುರು ಸಾಮ್ರಾಜ್ಯವನ್ನು ಇಬ್ಭಾಗ ಮಾಡಿ ಪಾಂಡವರನ್ನು ಶಕ್ರ ಪ್ರಸ್ಥದಲ್ಲಿ ನೆಲೆನಿಲ್ಲಿಸಿದರು. ಅಲ್ಲಿಂದ ಮುಂದೆ ಪಾಂಡವರ ರಾಜಸೂಯ ಯಾಗದಂತಹ ವಿಜೃಂಭಣೆಯನ್ನೂ, ದ್ಯೂತದ ಸೋಲಿನಿಂದ ಸಕಲವನ್ನೂ ಕಳೆದುಕೊಂಡು ಬರಿಗೈಲಿ ವನವಾಸ, ಅಜ್ಞಾತವಾಸದಂತಹ ನಿರ್ಗತಿಕ ಸ್ಥಿತಿಯನ್ನೂ ಸಮಾನ ಮನಸ್ಸಿನಿಂದ ಸ್ವೀಕರಿಸಿದವಳು ಕುಂತಿ. ಸೊಸೆ ದ್ರೌಪದಿಯು ಯುಧಿಷ್ಠಿರನ ಪಟ್ಟಮಹಿಷಿಯಾಗಿ ಇಂದ್ರಪ್ರಸ್ಥದಲ್ಲಿದ್ದಾಗ ಬಾಳಿದ ವೈಭವವನ್ನೂ, ಕೌರವನ ತುಂಬಿದ ಸಭೆಯಲ್ಲಿ ಮಾನಭಂಗವಾದಂತಹ ಹೀನಾಯ ಸ್ಥಿತಿಯನ್ನೂ ಕಣ್ಣಾರೆ ಕಂಡಂತಹ ಕುಂತಿಯ ಮಾನಸಿಕ ತುಮುಲಗಳನ್ನು ಅಳೆಯಲು ಸಾಧ್ಯವೇ?! ಕುಂತಿಗೆ ಪಾಂಡವರು ಹನ್ನೆರಡು ವರ್ಷ ವನವಾಸ, ಒಂದು ವರ್ಷದ ಅಜ್ಞಾತವಾಸಕ್ಕೆ ತೆರಳಿದಾಗ ಹಸ್ತಿನಾವತಿಯಲ್ಲೇ ನೆಲೆನಿಂತು, ನಿತ್ಯ ಭಗವದಾರಾಧನೆಯ ಮೂಲಕ ಅವರಿಗೆ ಒಳಿತು ಹಾರೈಸುತ್ತಾ ಕಾಲ ಕಳೆದಳು. ವನವಾಸ ಅಜ್ಞಾತವಾಸದ ಭಾಷೆ ತೀರಿಸಿ, ತಮ್ಮ ಭಾಗದ ಅರ್ಧರಾಜ್ಯವನ್ನು ಪಡೆದುಕೊಳ್ಳಲು, ಯುಧಿಷ್ಠಿರನು ಶ್ರೀಕೃಷ್ಣನನ್ನು ಹಸ್ತಿನಾವತಿಗೆ ಕಳುಹಿಸಿಕೊಟ್ಟನು. ತನ್ನ ಸಹೋದರನ ಪುತ್ರನೇ ಆದರೂ ಶ್ರೀಕೃಷ್ಣನಲ್ಲೇ ಭಗವಂತನನ್ನು ಕಂಡ ಕುಂತಿಯು, ತನ್ನ ಆಲಯಕ್ಕೆ ಆಗಮಿಸಿದ ಹರಿಯನ್ನು ಭಕ್ತಿಯಿಂದ ಅರ್ಚಿಸಿದವಳು. ಸಂಧಾನ ಕೈಗೂಡದೇ ಸಂಗ್ರಾಮವನ್ನೇ ನಿಶ್ಚಯಿಸಿಕೊಂಡು ಶ್ರೀಕೃಷ್ಣನು ಹಿಂದಿರುಗಿದಾಗ, ಮನದಲ್ಲೇ ಕಳವಳ ಹೊಂದಿದರೂ, ತನ್ನ ಮಕ್ಕಳ ಧರ್ಮಮಾರ್ಗ ಹಾಗೂ ಅಪಾರವಾದ ಸಾಮರ್ಥ್ಯವನ್ನು ನಂಬಿ ಸಮಾಧಾನವನ್ನೇ ತಾಳಿದಳು.
ದೈವ ಸಂಕಲ್ಪದಂತೆಯೇ ಕೊನೆಗೂ ಘೋರವಾದ ಮಹಾಭಾರತ ಸಂಗ್ರಾಮವೆಂಬ ರಣಮಾರಿಯು ತನ್ನ ಕೆನ್ನಾಲಿಗೆಯನ್ನು ಚಾಚಿಯೇ ಬಿಟ್ಟಿತು!! ಕುಲಬಾಂಧವರ ಮಧ್ಯೆಯೇ ಅಸ್ತಿತ್ವಕ್ಕಾಗಿ ಹೋರಾಟ!! ತಮ್ಮ ತಮ್ಮದೇ ರಕ್ತ ಸಂಬಂಧಿಕರ ತಲೆಯನ್ನು ತರಿಯಲು ಕಾದಾಟ!! ಅಜ್ಜನಿಂದ ಮೊಮ್ಮಕ್ಕಳ ಮೇಲೆ ಬಾಣ ಪ್ರಯೋಗ, ಅಜ್ಜನಿಗೆ ಶರಶಯ್ಯೆ, ಗುರುಗಳ ತಲೆಯನ್ನೇ ಕಡಿದ ಶಿಷ್ಯರು, ನೂರು ಮಂದಿ ದಾಯಾದಿಗಳನ್ನು ತರಿದಿಕ್ಕಿದ ಭೀಮ, ರಣದಲ್ಲಿ ಸೋಲನ್ನೇ ಕಾಣದ ಸವ್ಯಸಾಚಿ ಅರ್ಜುನ... ಎಲ್ಲವೂ ಕುಂತಿಯ ಮನದ ಅಭೀಷ್ಟೆಯಂತೆಯೇ ನಡೆದರೂ, ಆ ಯುದ್ಧದ ಕೊನೆಯ ದಿನ ನಡೆದ ಘಟನೆ ಅವಳ ಮಾತೃಹೃದಯವನ್ನು ಒಡೆದು ಹೋಳಾಗಿಸಿದ್ದು ನಿಜ.
ಕೌರವ ಸೇನೆಯ ಅತಿರಥ ಮಹಾರಥರಲ್ಲಿ ಬಹುತೇಕ ಯೋಧರು ಪಾಂಡವ ಸೇನೆಯ ಬಲದ ಎದುರು, ಹರಿಯ ತಂತ್ರದೆದುರು ಮರಣವನ್ನೈದಿದರು. ಭೀಷ್ಮ, ದ್ರೋಣರ ಸೇನಾಧಿಪತ್ಯ ಅಂತ್ಯ ಕಂಡಿತು. ಆಗ ಕೌರವ ಸೇನಾಧಿಪತ್ಯದ ಪಟ್ಟ ಕಟ್ಟಿದ್ದು ಆಪ್ತಮಿತ್ರ ಕರ್ಣನಿಗೆ. ಕುಂತಿಯ ಪಾಲಿಗೆ ತನ್ನದೇ ಕರುಳ ಕುಡಿಗಳು ಪರಸ್ಪರ ಹೋರಾಡುವ ಸಂದರ್ಭ. ಅರ್ಜುನನ ಅಂತ್ಯವನ್ನು ಕಾಣುವುದೇ ತನ್ನ ಜೀವನದ ಮಹದಾಸೆಯಾಗಿಸಿಕೊಂಡ ಕರ್ಣನು, ವೀರಾವೇಶದಿಂದ ಕೌರವ ಸೇನೆಯನ್ನು ಮುನ್ನಡೆಸುತ್ತಿದ್ದ. ಕರ್ಣನ ಅವಸಾನವಾಗದೇ ಪಾಂಡವರಿಗೆ ಗೆಲುವು ಅಸಾಧ್ಯ ಎಂಬುದನ್ನು ಮನಗಂಡ ಶ್ರೀಕೃಷ್ಣ, ಕುಂತಿಯನ್ನು ದಾಳವಾಗಿ ಉಪಯೋಗಿಸಲು ತೀರ್ಮಾನಿಸಿದ. ಕುಂತಿದೇವಿಯೇ ಕರ್ಣನ ತಾಯಿಯೆಂದು ಕರ್ಣನೆದುರು ಪ್ರಕಟಗೊಂಡು, ಅವನಿಂದ ಅರ್ಜುನನ ಹೊರತಾದ ನಾಲ್ವರು ಪಾಂಡವರ ಪ್ರಾಣ ಭಿಕ್ಷೆ ಬೇಡಬೇಕೆಂದು ಕುಂತಿಯನ್ನು ಕಳುಹಿಕೊಟ್ಟ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ಣನೆದುರು ಬಂದ ಕುಂತಿಯು, ತಾನೇ ನಿನ್ನ ಜನ್ಮದಾತೆಯೆಂದೂ, ಸೂರ್ಯದೇವನೇ ತಂದೆಯೆಂದೂ ತನ್ನ ಜೀವಮಾನವಿಡೀ ಬಚ್ಚಿಟ್ಟ ರಹಸ್ಯವನ್ನು ಪ್ರಕಟಪಡಿಸಿದಳು. ಹಾಗೆಯೇ ನಿನ್ನ ಅನುಜರಾದ ಪಾಂಡವರ ಪ್ರಾಣವನ್ನು ಕಾಪಾಡಬೇಕೆಂದೂ ಕೇಳಿಕೊಂಡಳು. ಇಲ್ಲಿಯವರೆಗೂ ಏಕಾಗ್ರಚಿತ್ತನಾಗಿ, ಕೌರವನಿಗೆ ಜಯ ಸಂಪಾದಿಸಬೇಕೆಂದು ಹೊರಾಡುತ್ತಿದ್ದ ಕರ್ಣನ ಚಿತ್ತವು ಚಂಚಲಗೊಂಡಿತು. ತನ್ನ ನಿರ್ಧಾರವನ್ನು ಬದಲಿಸದ ಕರ್ಣ ಅರ್ಜುನನನ್ನುಳಿದು ಯುಧಿಷ್ಠಿರಾದಿ ಪಾಂಡವರ ತಲೆ ಕಾಯ್ವೆನೆಂಬ ಭಾಷೆಯನ್ನು ನೀಡಿದನು. ಅಲ್ಲದೆ "ತೊಟ್ಟ ಬಾಣವನ್ನು ಮರಳಿ ತೊಡಬಾರದೆಂಬ" ಭಾಷೆಯನ್ನೂ ಕರ್ಣನಿಂದ ಪಡೆದುಕೊಂಡಳು. ಇದೆಲ್ಲ ವಚನಗಳಿಂದ ಆತನ ಪ್ರಾಣಕ್ಕೇ ಎರವಾಗಬಹುದೆಂಬ ಅರಿವಿದ್ದರೂ ಕುಂತಿಗೆ ಗತ್ಯಂತರವಿಲ್ಲ. ಧರ್ಮ ಮಾರ್ಗದಲ್ಲಿ ನಡೆಯುತ್ತಿರುವ ಐವರು ಮಕ್ಕಳೋ, ಅಥವಾ ದುಷ್ಟರ ಬಳಗ ಸೇರಿದ ಒಬ್ಬ ಮಗನೋ ಎಂಬ ದ್ವಂದ್ವವನ್ನು ಪರಿಹರಿಸಿಕೊಳ್ಳಬೇಕಾದ ಸಮಯ ಕುಂತಿಗೆ!
ಮರುದಿನ ನಡೆದ ಘೋರ ಸಮರದಲ್ಲಿ ಅರ್ಜುನನ ಶರಹತಿಗೆ ಕರ್ಣಾವಸಾನವಾಗಲು ಕುಂತಿ ಪಡೆದ ವಚನಗಳೇ ಕಾರಣವಾಗಿದ್ದು ಕೃಷ್ಣನ ತಂತ್ರಗಾರಿಕೆಯ ಭಾಗ. ಭೀಮನಿಂದ ದುರ್ಯೋಧನನ ಸಂಹಾರವಾದಲ್ಲಿಗೆ ಮಹಾಭಾರತ ಯುದ್ಧದಲ್ಲಿ ಪಾಂಡವರಿಗೆ ಜಯವೂ ದೊರಕಿತು. ಹಸ್ತಿನಾವತಿಯ ಸಾಮ್ರಾಜ್ಯಕ್ಕೆ ಕುಂತಿಸುತರು ಅಧಿಪತಿಗಳಾದರು. ಅಲ್ಲಿಗೆ ಕುಂತಿದೇವಿಗೆ ರಾಜಮಾತೆಯೆಂಬ ಪಟ್ಟ. ಜೀವಮಾನದಾರಭ್ಯ ತಂದೆಯಿಲ್ಲದ ಮಕ್ಕಳನ್ನು ಸಾಕಿ ಸಲಹಿ, ಅವರನ್ನು ಧರ್ಮ ಮಾರ್ಗದಲ್ಲಿ ನಡೆಸಿ, ಜೀವನದ ಸಂಧ್ಯಾಕಾಲದಲ್ಲಿ, ಮಗ ಯುಧಿಷ್ಠಿರ ಚಕ್ರವರ್ತಿ ಪೀಠವೇರುವುದನ್ನು ಕುಂತಿ ಕಣ್ತುಂಬಿಕೊಂಡಳು. ವೃದ್ಧಾವಸ್ಥೆಗೆ ತಲುಪಿದ್ದ ಕುಂತಿಯು, ಧೃತರಾಷ್ಟ್ರ, ಗಾಂಧಾರಿ ಮುಂತಾದ ಕುರುಕುಲದ ಹಿರಿಯರ ಜೊತೆ ವಾನಪ್ರಸ್ಥಕ್ಕೆ ತೆರಳಿ ಅಲ್ಲಿಯೇ ಅಸುನೀಗಿದಳು.
'ಯೌವನಾವಸ್ಥೆಯಲ್ಲಿ ಮುನಿಗಳ ವರವನ್ನು ಪರೀಕ್ಷಿಸಲು ಹೋಗಿದ್ದು ಒಂದು ತಪ್ಪು, ಮಗ ಕರ್ಣನು ವಿರೋಧಿ ಪಾಳೆಯವನ್ನು ಪ್ರವೇಶಿಸುವುದನ್ನು ಪ್ರತ್ಯಕ್ಷ ನೋಡುತ್ತಿದ್ದರೂ ತಡೆದು ಈತ ತನ್ನ ಮಗನೆಂದು ಲೋಕಕ್ಕೆ ಪ್ರಕಟ ಪಡಿಸದಿದ್ದದ್ದು ಮತ್ತೊಂದು ತಪ್ಪು, ಕುಂತಿಯು ಸರಿಯಾದ ಸಮಯಕ್ಕೆ ಸಂದರ್ಭೋಚಿತವಾದ ನಿರ್ಧಾರ ತೆಗೆದುಕೊಂಡಿದ್ದರೆ ಇಂತಹ ಮಹಾಸಂಗ್ರಾಮ ಘಟಿಸುತ್ತಲೇ ಇರಲಿಲ್ಲವೇನೋ' ಎಂದು ವಿಶ್ಲೇಷಿಸಿವವರೂ ಇದ್ದಾರೆ. ಅದೇನೇ ಇದ್ದರೂ ಒಬ್ಬ ಮಹಾಮಾತೆಯಾಗಿ ತನ್ನ ಮಕ್ಕಳೊಂದಿಗೆ ಸವತಿಯ ಮಕ್ಕಳನ್ನೂ ಸಮಾನವಾಗಿ ಕಂಡವಳು ಕುಂತಿ. ಮನಸ್ಸಿನಲ್ಲಿ ಎಷ್ಟೇ ದ್ವಂದ್ವಗಳಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ಧರ್ಮ ಮಾರ್ಗದಲ್ಲೆ ನಡೆದವಳು ಕುಂತಿ. ಹರಿಯಲ್ಲಿ ಅಚಲ ಭಕ್ತಿಯನ್ನಿರಿಸಿ ತನ್ನ ಕರ್ತವ್ಯದಿಂದ ವಿಮುಖವಾಗದೇ ಕೈವಲ್ಯವನ್ನು ಪಡೆದವಳು ಕುಂತಿ. ಇಡೀ ಮಹಾಭಾರತದಲ್ಲಿ ಎಲ್ಲಿಯೂ ಹೆಚ್ಚಾಗಿ ಪ್ರತ್ಯಕ್ಷ ಕಾಣಿಸಿಕೊಳ್ಳದಿದ್ದರೂ ತೆರೆಮರೆಯಲ್ಲೇ ಇದ್ದು ತನ್ನ ಪಾತ್ರವನ್ನು ನಿರ್ವಹಿಸಿದ ಈ ಕುಂತಿಯದು ಮಹತ್ವದ ಪಾತ್ರವೇ ಅಲ್ಲವೇ?








Comments