ಶ್ರೀ ರಾಮ
- Shreenivasa Bhagwat Mattighatta
- May 27
- 3 min read
ಸೂರ್ಯವಂಶದ ಚರಿತ್ರೆಯಲ್ಲಿ ಶಿಖಾಮಣಿಯಂತೆ ಕಂಗೊಳಿಸುವ, ಬಹುಪಾಲು ತ್ರೇತಾಯುಗವನ್ನೆ ವ್ಯಾಪಿಸಿ ಮೆರೆಯುವ ರಾಮನನ್ನು ಅಕ್ಷರದಲ್ಲಿ ಕಟ್ಟಿಕೊಡುವುದೆಂದರೆ ಸಮುದ್ರದ ನೀರನ್ನು ಬೊಗಸೆಯಲ್ಲಿ ಹೊತ್ತು ಬರಿದಾಗಿಸುವ ಪ್ರಯತ್ನದ ಹಾಗೆ, ಎಲ್ಲರಿಗೂ ತಿಳಿದ ಹಾಗೆ ರಾಮ ಸೂರ್ಯವಂಶೀಯ, ದಶರಥನ ಪುತ್ರ, ಕೌಸಲ್ಯೆಯನ್ನು ತಾಯಿಯಾಗಿ ಪಡೆದವ ಸೀತಾವಲ್ಲಭ. ಈತನಿಗೆ ನಾಮಕರಣ ಸಂಸ್ಕಾರದಿಂದ ಬಂದ ಹೆಸರು ರಾಮನೆಂದು ಮಾತ್ರ, ಶ್ರೀಕಾರ ಹಿಂದೆ ಯಾವಾಗ ಬಂದು ಸೇರಿತು ಎಂಬುದಕ್ಕೆ ನಿರ್ದಿಷ್ಟವಿಲ್ಲ. ಇಂದು ಆತ ಎಲ್ಲರ ನಾಲಿಗೆಯ ಮೇಲೂ "ಶ್ರೀ"ರಾಮ.

ರಾಮಾಯಣದಲ್ಲಿ ಮೊದಲು ಶ್ರೀರಾಮ ದರ್ಶನವಾಗುವುದು ನಮಗೆ ದಶರಥನ ಪುತ್ರಕಾಮೇಷ್ಟಿ ಮುಗಿದು ಪುತ್ರೋತ್ಸವದ ಸಂಭ್ರಮದಲ್ಲಿ ಶಿಶುವಾಗಿ. ಹಾಗೆಯೇ ರಾಮ ನಮ್ಮ ಕಣ್ಣ ಮುಂದೆ ಒಬ್ಬ ವ್ಯಕ್ತಿಯಾಗಿ ತೆರೆದುಕೊಳ್ಳುವುದು, ವಿಶ್ವಾಮಿತ್ರರ ಜೊತೆ ಜನಸ್ಥಾನದಲ್ಲಿ. ಜನಸ್ಥಾನವೆಂದಿದ್ದ ಪ್ರದೇಶವನ್ನು ತಾಟಕಿ ಜನಾರಣ್ಯವಾಗಿಸಿದ್ದಳು. ಯಜ್ಞದ್ವಂಸಿಗಳಾಗಿದ್ದ ಮಾರೀಚ, ಸುಬಾಹು ಇವರನ್ನೆಲ್ಲ ದಂಡಿಸಿ ಆಕೆಯ ಬೆನ್ನಿಗಿದ್ದ ಸಾವಿರ ಸಂಖ್ಯೆಯ ರಕ್ಕಸರನ್ನು ಎತ್ತಿದ ಬಿಲ್ಲು ಇಳುಹುವುದರೊಳಗೆ ಕೊಂದು ದುಷ್ಟೆಯಾದರೂ ಸ್ತ್ರೀ ಎಂಬ ಕಾರಣಕ್ಕೆ ಕರುಣೆ ಮೂಡುತ್ತದೆ. ಅವಳನ್ನು ಬಾಣಗಳಿಂದ ನೋಯಿಸಿ ಬಿಡುವ ಯೋಚನೆಯಲ್ಲಿದ್ದಾಗ ವಿಶ್ವಾಮಿತ್ರರ ಆದೇಶದಂತೆ ಕೊಲ್ಲುತ್ತಾನೆ. ಮುಂದೆ ಮಿಥಿಲೆಗೆ ಹೋಗಿ ಅಲ್ಲಿ ಶಿವಧನುವನ್ನು ಎತ್ತಿ ಫಣದಂತೆ ಸೀತೆಯನ್ನು ವರಿಸುತ್ತಾನೆ. ಅನೇಕ ಉಪಕಥೆಗಳಲ್ಲಿ ರಾವಣನೂ ಆ ದಿನ ಅಲ್ಲೊಬ್ಬ ಸ್ಫರ್ಧಿ, ಆದರೆ ವಾಲ್ಮೀಕಿಗಳು ಅದನ್ನೇನು ತಮ್ಮ ಕೃತಿಯಲ್ಲಿ ಪ್ರಸ್ತಾಪಿಸಿಲ್ಲ. ಜನಕನ ತಮ್ಮನ ಹೆಣ್ಮಕ್ಕಳೂ ರಾಮನ ಸೋದರರಿಗೆ ಪತ್ನಿಯರಾಗುತ್ತಾರೆ. ಪತ್ನಿ ಸಹಿತನಾಗಿ ದಿಬ್ಬಣದೊಂದಿಗೆ ಹಿಂದಿರುಗುವಾಗ ಪರಶುರಾಮ ಇದಿರಾಗಿ ಯುದ್ಧವನ್ನು ಅಪೇಕ್ಷಿಸುತ್ತಾನೆ. ಬಹುಷಃ ಒಂದೇ ದೇವತೆಯ ಎರಡು ಅವತಾರ ಏಕಕಾಲಕ್ಕೆ ಇರಬಾರದೆಂಬ ಕಾರಣಕ್ಕೆ ಈ ಭೇಟಿ ಅದಂತೆ ತೋರುತ್ತದೆ. ನಡೆದ ಯುದ್ಧದಲ್ಲಿ ಭಾರ್ಗವರಾಮ ಸೋಲುತ್ತಾನೆ. ತನ್ನಲ್ಲಿರುವ ವೈಷ್ಣವ ಧನಸ್ಸನ್ನು ರಾಮನಿಗಿತ್ತು ಸತ್ಕರಿಸುತ್ತಾನೆ. ರಾಮನೂ ವಿನಯದಿಂದ ಗೌರವಿಸಿ ಬೀಳ್ಕೊಡುತ್ತಾನೆ. ಮಿಥಿಲೆಯನ್ನು ಸೇರುವ ಪೂರ್ವದಲ್ಲಿ ನಡೆಯವ ಅಹಲ್ಯೋಧ್ಧರಣವೂ ಒಂದು ಅಧ್ಬುತ ವ್ಯಾಪಾರವೇ. ಇದಿಷ್ಟೂ ಪ್ರಕರಣಗಳಲ್ಲಿ ರಾಮನ ಸ್ಥಾಯೀ ಭಾವ ಎಂದಿನಂತೆ ಶಾಂತರಸವೇ. ತಾಟಕಾವಧೆಯಲ್ಲಿ ಒಮ್ಮೆ ಕರುಣಾಮೂರ್ತಿಯಾಗಿ ಕಂಡರೂ ದುಷ್ಟರನ್ನು ಶಿಕ್ಷಿಸುವ ವಿಚಾರದಲ್ಲಿ ಗೊಂದಲವಿಲ್ಲದ ದೃಢಮನಸ್ಕನಾಗಿ ಕಾಣುತ್ತಾನೆ. ಸೀತಾಸ್ವಯಂವರದಲ್ಲಿ ಗುರುವಾಜ್ಞೆಯನ್ನು ಪಾಲಿಸುವ, ಮಹಾ ಪರಾಕ್ರಮವನ್ನು ಮೆರೆಯುವ ವಿನೀತ ಯೋಧನಾಗಿ ಕಾಣುತ್ತಾನೆ. ಹಾಗೇ ಅಹಲ್ಯೋದ್ದಾರ ಹಾಗೂ ಭಾರ್ಗವನ ಜೊತೆಯ ಸಂಘರ್ಷದಲ್ಲಿ ಒಬ್ಬ ಅಲೌಕಿಕ ಪುರುಷನಾಗಿ ಮಾನವನಿಗೆ ಅಸಾಧ್ಯವಾದ ಘಟನೆಯನ್ನು ಸಾಧಿಸಬಲ್ಲ ದೇವತಾ ಶಕ್ತಿಯಾಗಿ ಗೋಚರಿಸುತ್ತಾನೆ.
ಮುಂದೆ ಪಟ್ಟಾಭಿಷೇಕ ನಿಶ್ಚಯವಾಗಿ, ಭಂಗವಾಗಿ ಆಳಬೇಕಾದ ಅರಸ ಅಡವಿಯನ್ನು ಸೇರಬೇಕಾದಾಗಲೂ ರಾಮನ ನಿಸ್ವಾರ್ಥ ಮತ್ತು ತ್ಯಾಗ ಅದರ್ಶವೆನಿಸುತ್ತದೆ. ತಂದೆ ತಾಯಿಗೆ ಕೊಟ್ಟ ವರವನ್ನು ಧಿಕ್ಕರಿಸಿ ಅಯೋಧ್ಯೆಯಲ್ಲಿಯೇ ನಿಂತರೆ ಆಗ ರಾಮನನ್ನು ಪ್ರಶ್ನಿಸುವವರೂ ಇರಲಿಲ್ಲ. ಪ್ರಜಾವರ್ಗ ಬಯಸಿದ್ದೂ ಇದೇ ಆಗಿತ್ತು. ಆದರೆ ತಂದೆಯ ಮೇಲಿನ ಗೌರವ, ರಾಷ್ಟ್ರ ಸಂಪತ್ತಿನ ಮೇಲಿನ ನಿರ್ಮೋಹ, ಇವಿಲ್ಲದೇ ತಾನು ಇರಲಾರೆ ಎಂದು ಯೋಚಿಸದ ನಿಸ್ವಾರ್ಥತೆ, ಆ ಕ್ಷಣ ಪೀತಾಂಬರವನ್ನು ಕಳಚಿ ನಾರುಮಡಿಯನ್ನು ಉಡುವ ಮನಸ್ಸನ್ನು ರಾಮನಿಗೆ ನೀಡುತ್ತದೆ. ಜೀವಕ್ಕೆ ಜೀವವಾಗಿ ಬಂದ ಲಕ್ಷ್ಮಣ-ಸೀತೆಯರನ್ನು ರಾಮ ಏನೇ ಮಾಡಿದರೂ ಹಿಂದೆ ಕಳಿಸಲಾರದೇ ಕಾಡಿಗೆ ಹೊರಡುತ್ತಾನೆ. ಈ ಘಟನೆಗೆ ಕಾರಣರಾದ ಕೈಕೆ-ಮಂಥರೆ ಯಾರ ಮೇಲೂ ರಾಮನಿಗೆ ಸಿಟ್ಟಿಲ್ಲ, ಆರೋಪವಿಲ್ಲ. ಆದಷ್ಟು ಬೇಗ ಊರನ್ನು ದಾಟುವ ಉದ್ದೇಶಕ್ಕಾಗಿ ರಥವನ್ನು ಏರಿದಾಗ ದಶರಥನು ಸಾರಥಿಯಾದ ಸುಮಂತ್ರನಿಗೆ ಆಜ್ಞೆ ಮಾಡುತ್ತಾನೆ - "ರಾಮನನ್ನು ಕರೆದುಕೊಂಡು ಹೋದರೆ ನನ್ನಾಣೆ" ಎಂದು. ರಾಮ ಹೇಳುತ್ತಾನೆ - "ಆದಷ್ಟು ಬೇಗ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗೆಂದು". ಸುಮಂತ್ರನಿಗೆ ಸಂದಿಗ್ಧ. ಯಾರ ಮಾತು ಕೇಳುವುದು, ಆಗ ರಾಮನದೆ ಸಮಾಧಾನ. "ತಂದೆ ದಶರಥ ಈ ಮಾತನ್ನು ಕೇವಲ ಪುತ್ರ ವ್ಯಾಮೋಹದಿಂದ ಆಡುತಿದ್ದಾನೆ ಹೊರತು ರಾಜಾ ದಶರಥನಾಗಿ ಅಲ್ಲ. ಅದಕ್ಕಾಗಿ ಈಗ ನೀನು ನನ್ನ ಮಾತನ್ನೇ ಪಾಲಿಸು". ಇಲ್ಲಿ ರಾಮನ ಅಂತಸ್ಸತ್ವ, ದೃಢತೆ ಎಂತಹುದು ಎಂಬ ಅರಿವಾಗುತ್ತದೆ. ಚಿತ್ರಕೂಟದಲ್ಲಿರುವಾಗ ಭರತ ಇವರನ್ನು ಕಾಣಲು ಬರುವುದನ್ನು ಕಂಡ ಲಕ್ಷ್ಮಣನಿಗೆ ಅನುಮಾನ - 'ನಮಗೆ ಹಾನಿಯುಂಟುಮಾಡಲು ಬರುತ್ತಿದ್ದಾನೆಂದು'. ರಾಮನಿಗೆ ವಿಶ್ವಾಸ - 'ಆತ ತನ್ನನ್ನು ಎಷ್ಟು ಪ್ರೀತಿಸಿದವನೆಂದು'.
ಮುಂದೆ ಸೀತಾಪಹಾರ ಸಂದರ್ಭದಲ್ಲಿ ಒಮ್ಮೆ ರಾಮನಿಂದಲೇ ಪೆಟ್ಟು ತಿಂದ ಮಾರೀಚನೇ ಹೇಳುವ ಮಾತು -
"ರಾಮೋ ವಿಗ್ರಾಹವಾನ್ ಧರ್ಮಃ". ರಾಮನ ವಿರೋಧಿಯೂ, ದುಷ್ಟ ಮಾಯಾವಿಯೂ ರಾಮನ ಬಗ್ಗೆ ಹೀಗೊಂದು ಮಾತನ್ನು ಹೇಳುತ್ತಾನೆ ಎಂದ ಮೇಲೆ ರಾಮನ ಕುರಿತು ವಿವರಿಸುವುದಕ್ಕೇನಿದೆ. ಜಟಾಯುವಿನ ಮರಣದಲ್ಲಿ ರಾಮ, ತನ್ನ ಮಾನುಷಭಾವದಿಂದ ಆಚೆಗೆ ನಡೆದುಕೊಂಡಂತೆ ತೋರುತ್ತದೆ. 'ಮೇಲಿನ ಉನ್ನತವಾದ ಲೋಕವನ್ನು ನನ್ನ ಆಜ್ಞೆಯಂತೆ ಪಡೆ' ಎಂದು ಆತನಿಗೆ ಆಗ್ನಿಸಂಸ್ಕಾರ ಮಾಡುವಾಗ ಹೇಳುತ್ತಾನೆ. ಇದು ಆತ ಜಗತ್ತಿನ ಸರ್ವಶಕ್ತನೆಂದು ಸಾಬೀತುಪಡಿಸುತ್ತದೆ. ತನಗಾಗಿ ಉಪಕರಿಸಿದ ಪಕ್ಷಿಯ ಮೇಲೂ ರಾಮನಿಗೆ ಕರುಣೆ. ಸುಗ್ರೀವನಿಗೆ ಸಖನಾಗಿ ಮಾತು ಕೊಟ್ಟ ರಾಮ ಕೊನೆಯವರೆಗೂ ಅದೇ ಸಖ್ಯವನ್ನೇ ಕಾಣುತ್ತಾನೆ. ಕಾಡು ಕಪಿಯೆಂದೋ, ಜ್ಞಾನಹೀನನೆಂದೋ ಆತನನ್ನು ಉಪೇಕ್ಷಿಸುವುದಿಲ್ಲ. ಕಿಷ್ಕಿಂಧೆಯಲ್ಲಿ ರಾಮನಿಗೆ ದೊರೆತ ಅಮೂಲ್ಯ ರತ್ನ ಹನುಮ. ರಾಮನ ಕೊನೆಗಾಲದವರೆಗೂ ನೆರಳಿನಂತೆ ಬೆನ್ನಿಗೆ ನಿಂತು ಸೇವೆ ಮಾಡಿದ ಮಹಾನುಭಾವ. ವಾಲಿಯನ್ನು ವಧಾರ್ಹನೆಂದು ನಿರ್ಣಯಿಸಿದ್ದು ರಾಮನ ಧರ್ಮಜ್ಞತೆ. ವಾಲಿಯ ದುಡುಕು-ಅನ್ಯಾಯ, ಸುಗ್ರೀವನ ಅಸಹಾಯಕತೆ-ಭಯ, ಇವು ವಾಲಿಯ ವಧೆಗೆ ಮಾನದಂಡವಾದರೆ ರಾವಣ ದುಷ್ಟನೆಂದು ನಿರ್ಣಯಿಸುವುದಕ್ಕೂ ವಾಲಿಯ ಇತಿಹಾಸ ಕಾರಣವಾಗುತ್ತದೆ.
ಸಮುದ್ರಕ್ಕೆ ಸೇತುವನ್ನು ಬಲಿಯಲು ಅವಕಾಶವಾಗದೇ ಹೋದಾಗ ಸಾಗರವನ್ನೇ ಆಗ್ನೆಯಾಸ್ತ್ರದಿಂದ ಬತ್ತಿಸುವುದಕ್ಕೆ ಸಿದ್ಧನಾದ ರಾಮ ಪ್ರಳಯ ರುದ್ರನಾಗಿ ಕಾಣುತ್ತಾನೆ. ಸೇತು ಬಲಿದು ಲಂಕೆಯನ್ನು ಸೇರಿದ ಮೇಲೆ ತನ್ನ ಜೀವನವನ್ನೇ ನರಕವಾಗಿಸಿದ ದಶಗ್ರೀವನ ವಿಚಾರದಲ್ಲಿ ರಾಮ ಕರುಣಾಸಾಗರನೇ. ಬದುಕುವುದಕ್ಕೆ ಆತನಿಗೇ ಅವಕಾಶ ಕೊಡುವ ರಾಮ ನಮಗೆ ತುಂಬಾ ಹಿರಿದಾದ ವ್ಯಕ್ತಿಯಾಗಿ ಕಾಣುತ್ತಾನೆ. ರಾವಣನನ್ನು ಕೊಲ್ಲುವಾಗ ದೊರೆತ ದೇವತೆಗಳ ಸಹಾಯ ರಾಮನನ್ನು ದೇವತಾ ಮನುಷ್ಯನ ಎತ್ತರಕ್ಕೇರಿಸುತ್ತದೆ. ಸೀತೆಯ ಅಗ್ನಿಪರೀಕ್ಷೆಯೂ ಸಹ ಧರ್ಮಾಚರಣೆ ಎಂಬಲ್ಲಿ ರಾಮನ ಲೋಕಪ್ರಜ್ಞೆ ನಮಗೆ ಅಚ್ಚರಿ ಹುಟ್ಟಿಸುತ್ತದೆ. ಅಯೋಧ್ಯೆಯಲ್ಲಿ ರಾಜಾರಾಮನಾದ ಮೇಲೆ ಆತನ ಆಡಳಿತ ವೈಖರಿ, ಕೃಷಿಯ ಕುರಿತಾದ ನೀತಿ, ಸಂಪತ್ತಿನ ವೃದ್ಧಿಗಾಗಿ ಆತನ ಯೋಚನೆಗಳು ಇಂದಿನ ಕಾಲಕ್ಕೂ ಪ್ರಸ್ತುತವೆನಿಸುತ್ತದೆ. ಸೀತೆಯನ್ನು ತೊರೆಯುವಾಗಲೂ ಈಗಿನ ಕೆಲವರು ಹೇಳುವಂತೆ ಒಬ್ಬ ಅಗಸನ ಮಾತು ಕಾರಣವಲ್ಲ. ರಾಮಾಯಣ ಕವಿ ವಾಲ್ಮೀಕಿಯೇ ಹೇಳಿದಂತೆ, ಸೀತೆಯ ಕುರಿತಾದ ಅಪವಾದದ ಮಾತುಗಳು ಅನೇಕ ದಿನಗಳಿಂದ ಪ್ರಜಾವರ್ಗದಿಂದ ಬರುತ್ತಲೇ ಇದ್ದು ಇದು ಅತಿಯಾಗುತ್ತಿದೆ ಎನ್ನುವಾಗ ಸೀತೆಯನ್ನು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿ ಬಿಡುವ ತೀರ್ಮಾನ ಮಾಡುತ್ತಾನೆ. ಕಾಡಿಗೆ ಬಿಡುವುದಿಲ್ಲ. ಹನ್ನೊಂದು ಸಾವಿರ ವರ್ಷ ಆಳಿದ ರಾಮನಿಗೆ ಅವತಾರ ಸಮಾಪ್ತವಾಗಲು ದೇವತೆಗಳಿಂದ ಸೂಚನೆ ಬರುತ್ತದೆ. ನಿರ್ವಾಣ ಹೊಂದುವಾಗ ತನ್ನ ಜೊತೆ ನದಿಗಿಳಿದ ಮನುಷ್ಯರು, ಪಶು, ಪಕ್ಷಿ, ಕ್ರಿಮಿ ಕೀಟಗಳಿಗೂ ಮುಕ್ತಿಯನ್ನಿತ್ತ ಭಗವಂತ ಶ್ರೀರಾಮ. ರಾಮನೆಂದರೆ ಆದರ್ಶ, ಶಿಸ್ತು, ಸಂಯಮ, ವಿಧೇಯತೆ, ಕಾರ್ಯ, ಪ್ರೀತಿ, ಧರ್ಮಜ್ಯತೆ. ಇವೆಲ್ಲದರ ಸಾಂಗತ್ಯವೇ "ರಾಮ".
👌👍
Nice
nice