top of page

ದ್ರೌಪದಿ (ಭಾಗ 2)

ಪಾತ್ರ ಪ್ರವೇಶ: ದ್ರೌಪದಿ

ಪಂಚ ಪಾಂಡವರ ವಧುವಾದ ಪಾಂಚಾಲಿಯ ಮುಂದಿನ ಜೀವನದ ಏಳು-ಬೀಳು ಸಂಪೂರ್ಣವಾಗಿ ಪಾಂಡವರನ್ನೇ ಅವಲಂಬಿಸಿರುತ್ತದೆ. ದ್ರೌಪದಿಯನ್ನು ವಿವಾಹವಾದ ಪಾಂಡವರು ತಮ್ಮ ಬ್ರಾಹ್ಮಣ ರೂಪವನ್ನು ತೊರೆದು ಲೋಕಮುಖಕ್ಕೆ ಪ್ರಕಟವಾಗುತ್ತಾರೆ. ಭೀಷ್ಮರೇ ಮುಂತಾದ ಕುರುಕುಲದ ಹಿರಿಯರು ಅವರನ್ನು ಹಸ್ತಿನಾವತಿಗೆ ಸ್ವಾಗತಿಸುತ್ತಾರೆ. ಹಾಗೆಯೇ ಈ ಮೊದಲೇ ಬಾಲ್ಯದಿಂದಲೂ ಧೃತರಾಷ್ಟ್ರಪುತ್ರರಾದ ಶತಸಂಖ್ಯೆಯ ಕೌರವರಿಗೂ, ಪಾಂಡುಪುತ್ರರಾದ ಪಾಂಡವರಿಗೂ ಇರುವ ವೈರತ್ವವನ್ನು ಗಮನಿಸಿದ ಭೀಷ್ಮರು ಅವರನ್ನು ಪ್ರತ್ಯೇಕವಾಗಿಯೇ ನೆಲೆಗೊಳಿಸಲು ತೀರ್ಮಾನಿಸಿದರು. ಅಂತೆಯೇ ಸಾಮ್ರಾಜ್ಯದ ಒಂದು ಭಾಗವಾದ, ದಟ್ಟ ಅರಣ್ಯದಿಂದ ಆವೃತವಾದ ಶಕ್ರಪ್ರಸ್ಥವನ್ನು ಪಾಂಡವರಿಗಾಗಿ ನೀಡಿದರು. ಅಂತಹ ಖಾಂಡವ ವನವನ್ನು ಅಗ್ನಿಗಾಹುತಿ ಮಾಡಿ ಅದೇ ಸ್ಥಳದಲ್ಲಿ ಭವ್ಯವಾದ ಇಂದ್ರಪ್ರಸ್ಥ ನಗರವನ್ನು ದೇವಶಿಲ್ಪಿ ಮಯನಿಂದ ನಿರ್ಮಿಸಿಕೊಂಡು ರಾಜ್ಯವಾಳತೊಡಗಿದರು. ಭೂಮಂಡಲದ ಅರಸರೆಲ್ಲರನ್ನೂ ಆಮಂತ್ರಿಸಿ ರಾಜಸೂಯ ಯಾಗವನ್ನು ನೆರವೇರಿಸಿದನು. ಈ ಇಂದ್ರಪ್ರಸ್ಥದ ಬದುಕು ದ್ರೌಪದಿಯ ಜೀವನದ ಅತ್ಯಂತ ಸಂತೋಷದ ಕ್ಷಣಗಳು ಎಂದರೂ ತಪ್ಪಿಲ್ಲ!! ಅಲ್ಲಿಂದ ಮುಂದೆ ಕೊನೆಯವರೆಗೂ ದುಃಖ ದುಮ್ಮಾನಗಳಲ್ಲೇ ಬಾಳನ್ನು ಸವೆಸಿದಳು!



ರಾಜಸೂಯ ಯಾಗದ ಸಂದರ್ಭದಲ್ಲಿ ದುರ್ಯೋಧನ ಕೂಡ ಇಂದ್ರಪ್ರಸ್ಥಕ್ಕೆ ಆಗಮಿಸಿದ್ದನು. ತನ್ನ ಪರಿವಾರದೊಂದಿಗೆ ಮಯನಿರ್ಮಿತ ಭವ್ಯ ಅರಮನೆಯನ್ನು ವೀಕ್ಷಿಸಲು ತೆರಳಿದನು. ಅದ್ಭುತವಾದ ಮಂಟಪಗಳನ್ನು ನೋಡುತ್ತಾ ಎದುರಿನಲ್ಲಿ ಗೋಡೆ ಇರುವುದೇ ತಿಳಿಯದೇ ಡಿಕ್ಕಿ ಹೊಡೆದುಕೊಂಡು ಮತ್ತೊಂದು ಕಡೆ ಗೋಡೆ ಇಲ್ಲದಿದ್ದರೂ ಇರುವಂತೆಯೇ ಭ್ರಮೆಗೊಂಡನು. ಇದನ್ನು ಉಪ್ಪರಿಗೆಯಿಂದ ನೋಡಿದ ದ್ರೌಪದಿಗೆ ತಡೆಯಲಾರದೇ ನಗು ಬಂದುಬಿಟ್ಟಿತು. ನಕ್ಕ ಅವಳನ್ನು ಅವಳ ಪರಿವಾರದವರನ್ನೂ ಗಮನಿಸಿದ ಕೌರವನು ಅವಮಾನಿತನಾದನು. ಮೊದಲೇ ಪಾಂಡವರನ್ನು ತನ್ನ ಹಗೆಗಳೆಂದು ಹುಟ್ಟಿದಾರಭ್ಯ ದ್ವೇಷಿಸುತ್ತಿದ್ದ ದುರ್ಯೋಧನನ ಕೋಪ ಭುಗಿಲೆದ್ದಿತು. ಮುಂದಿನ ಬೃಹತ್ ಮಹಾಭಾರತ ಯುದ್ಧಕ್ಕೂ ದ್ರೌಪದಿಯ ಈ ನಗುವೇ ಕಾರಣ ಎನ್ನುವವರೂ ಇದ್ದಾರೆ!!


ಇಂದ್ರಪ್ರಸ್ಥದಿಂದ ಹಿಂದಿರುಗಿದ ಕೌರವನು ಪಾಂಡವರನ್ನು ಹಣೆಯಲು ಯೋಚನೆ ರೂಪಿಸಿದನು. ಯುಧಿಷ್ಠಿರನನ್ನು ದ್ಯೂತವನ್ನಾಡಲು ಹಸ್ತಿನಾವತಿಗೆ ಆಹ್ವಾನಿಸಿದನು. ಈ ದ್ಯೂತದ ಪ್ರಸಂಗವೇ ದ್ರೌಪದಿಯ ಜೀವನದ ಕಷ್ಟ ಸಂಕೋಲೆಗಳಿಗೆ ಮುನ್ನುಡಿಯಾಯಿತು. ಪಾಂಡವರು ಪಗಡೆಯಾಟದಲ್ಲಿ ರಾಜ್ಯ, ಕೋಶ, ಬೊಕ್ಕಸ, ಭಂಡಾರ ಅಷ್ಟೇ ಏಕೆ ಕೊನೆಯಲ್ಲಿ ತಮ್ಮನ್ನೇ ತಾವು ಸೋತರು. ಅಲ್ಲದೇ ಪತ್ನಿಯಾದ ದ್ರೌಪದಿಯನ್ನೂ ಧರ್ಮರಾಯನು ಪಣಕ್ಕಿಟ್ಟು ಅವಳನ್ನೂ ಸೋತನು. ಆಗ ನಡೆದದ್ದೇ ಇಡೀ ಮಹಾಭಾರತ ಕಥಾನಕದಲ್ಲೇ ಹೇಯ ಕೃತ್ಯ! ದ್ರೌಪದಿಯ ಜೀವಮಾನದುದ್ದಕ್ಕೂ ದುಃಸ್ವಪ್ನವಾಗಿ ಕಾಡಿದ ಘಟನೆ!! ಪಣದಲ್ಲಿ ದ್ರೌಪದಿಯನ್ನು ಗೆದ್ದ ಕೌರವನು ತನ್ನ ತಮ್ಮನಾದ ದುಶ್ಯಾಸನದಲ್ಲಿ ಅವಳನ್ನು ಸಭೆಗೆ ಎಳೆದು ತರುವಂತೆ ಆದೇಶಿಸುತ್ತಾನೆ. ರಜಸ್ವಲೆಯಾಗಿದ್ದ ದ್ರೌಪದಿಯನ್ನು ಅವಳಿದ್ದ ಸ್ಥಿತಿಯಲ್ಲೇ ತುಂಬಿದ ಹಸ್ತಿನಾವತಿಯ ಸಭೆಗೆ, ಮುಡಿಗೆ ಕೈ ಹಾಕಿ ಎಳೆದು ತರುತ್ತಾನೆ. ದ್ಯೂತದ ಅಮಲಿನಲ್ಲಿ ತೇಲುತ್ತಿದ್ದ ಕೌರವರು ಅವಳನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸುತ್ತಾರೆ. ಭೀಷ್ಮ, ದ್ರೋಣಾದಿ ಗುರು ಹಿರಿಯರಿಂದ ತುಂಬಿದ ಆ ಘನಸಭಾಮಧ್ಯದಲ್ಲಿ ದುಶ್ಯಾಸನನು ಪಾಂಚಾಲಿಯ ಸೀರೆಯನ್ನು ಸೆಳೆಯತೊಡಗುತ್ತಾನೆ ಸೇರಿದ ಸಭಾಸದರೆಲ್ಲರನ್ನು ಕಾಪಾಡಬೇಕೆಂದು ಅಂಗಲಾಚಿದರೂ ಯಾರೂ ಕೂಡ ಅವಳ ಸಹಾಯಕ್ಕೆ ಮುಂದಾಗಲಿಲ್ಲ. ಐವರು ಪತಿಗಳೂ ಈಗಾಗಲೇ ದ್ಯೂತದಲ್ಲಿ ತಮ್ಮನ್ನೇ ತಾವು ಸೋತಿದ್ದರಿಂದ ಅಸಹಾಯಕರಾಗಿ ಕೈಚೆಲ್ಲಿ ಕುಳಿತಿರುತ್ತಾರೆ. ಕೊನೆಯಲ್ಲಿ ದ್ರೌಪದಿಯು ಶ್ರೀಕೃಷ್ಣನನ್ನು ಮೊರೆ ಹೋಗುತ್ತಾಳೆ. ಭಗವಾನ್ ಕೃಷ್ಣನು ಅಕ್ಷಯಾಂಬರವನ್ನು ದಯಪಾಲಿಸಿ ಅವಳ ಮಾನವನ್ನು ಕಾಪಾಡುತ್ತಾನೆ. ಅಂದು ದುಃಶಾಸನನು ಕರವಿಕ್ಕಿದ ಮುಡಿಯನ್ನು ಅವನ ರಕ್ತದಿಂದ ಪ್ರೋಕ್ಷಿಸಿದಾಗಲೇ ಕಟ್ಟುತ್ತೇನೆ ಎಂದು ದ್ರೌಪದಿಯು ಪ್ರತಿಜ್ಞೆ ಮಾಡುತ್ತಾಳೆ. ಅಲ್ಲಿಂದ ಮುಂದೆ ಕೌರವರ ನಿರ್ನಾಮವನ್ನೇ ತನ್ನ ಜೀವನದ ಗುರಿಯಾಗಿಸಿಕೊಳ್ಳುತ್ತಾಳೆ! ಅದೇ ಉದ್ದೇಶಕ್ಕೆ ಪಾಂಡವರನ್ನು ಸಿದ್ಧಗೊಳಿಸುವಲ್ಲಿ ದ್ರೌಪದಿಯು ತನ್ನ ಪಾತ್ರವನ್ನು ನಿಭಾಯಿಸುತ್ತಾಳೆ.


ರಾಜ್ಯವನ್ನು ಕಳೆದುಕೊಂಡ ಪಾಂಡವರು ವನವಾಸಕ್ಕೆ ತೆರಳಿದಾಗ ಪಾಂಚಾಲಿಯೂ ಅವರನ್ನು ಅನುಸರಿಸುತ್ತಾಳೆ. ಹನ್ನೆರಡು ವರ್ಷಗಳ ವನವಾಸದಲ್ಲಿ ಪತಿಗಳ ಜತೆ ನೆರಳಿನಂತೆ ನಿಂತು ಅವರ ಎಲ್ಲ ಕಷ್ಟ ಕೋಟಲೆಗಳಿಗೆ ತಾನೂ ಜತೆಯಾಗುತ್ತಾಳೆ. ನಂತರ ಒಂದು ವರ್ಷದ ಅಜ್ಞಾತವಾಸದಲ್ಲಿ ರೂಪವನ್ನು ಮರೆಸಿ ವಿರಾಟ ರಾಜನ ಅರಮನೆಯಲ್ಲಿ ವಾಸಿಸುತ್ತಾರೆ. ಧರ್ಮರಾಯನು ಕಂಕಭಟ್ಟನಾಗಿಯೂ, ಭೀಮನು ಅಡಿಗೆಯನಾದ ವಲಲನಾಗಿಯೂ, ಅರ್ಜುನನು ನೃತ್ಯ ಗುರು ಬೃಹನ್ನಳೆಯಾಗಿಯೂ , ನಕುಲನು ಕುದುರೆ ಪಾಲಕನಾಗಿಯೂ, ಸಹದೇವನು ಧಾನ್ಯಗಳ ಪಾಲಕನಾಗಿಯೂ ಮತ್ಸ್ಯ ರಾಜ ವಿರಾಟನ ಆಸ್ಥಾನ ಸೇರಿಕೊಳ್ಳುತ್ತಾರೆ. ಸ್ವತಃ ಮಹಾರಾಣಿಯಾಗಿ ಮೆರೆಯಬೇಕಿದ್ದ ದ್ರೌಪದಿಯು ವಿರಾಟನ ರಾಣಿಯ ಸೇವಕಿ ಸೈರಂಧ್ರಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿ ತಲೆ ಬಾಚುವದು, ಕಸ ಗುಡಿಸುವಂತಹ ಸೇವಕರ ಕೆಲಸವನ್ನೂ ಮಾಡಿಕೊಂಡಿರುತ್ತಾಳೆ. ಹಾಗಿರುವಾಗಲೇ ಕೀಚಕನಿಂದ ಬಲಾತ್ಕಾರದ ಪ್ರಯತ್ನ ನಡೆದಾಗ ಭೀಮನಿಂದ ಕೀಚಕನ ವಧೆಯನ್ನು ಮಾಡಿಸುತ್ತಾಳೆ.


ಅಂತೂ ವನವಾಸ ಅಜ್ಞಾತವಾಸವನ್ನು ಮುಗಿಸಿದ ಪಾಂಡವರು ಕೌರವರಲ್ಲಿ ತಮ್ಮ ರಾಜ್ಯವನ್ನು ಮರಳಿಸಲು ಕೇಳಿದಾಗ ಕೊಡಲು ನಿರಾಕರಿಸುತ್ತಾನೆ. ಪಡೆಯುವುದಿದ್ದಲ್ಲಿ ಯುದ್ಧ ಮುಖೇನ ಗೆದ್ದೇ ತಮ್ಮ ರಾಜ್ಯವನ್ನು ಪಡೆಯಬೇಕೆಂಬ ಸಂದೇಶ ಕಳಿಸುತ್ತಾನೆ. ಆಗ ಪಾಂಡವರು ಕೃಷ್ಣನನ್ನು ರಾಯಭಾರಿಯಾಗಿ ತಮ್ಮ ದಾಯಭಾಗವನ್ನು ಕೇಳಲು ಕಳಿಸುತ್ತಾರೆ. ಮುಖ್ಯವಾಗಿ ಧರ್ಮರಾಯನು ಕೃಷ್ಣನಲ್ಲಿ ಸಂಧಾನದ ಮೂಲಕವೇ ರಾಜ್ಯವನ್ನು ಕೇಳಬೇಕೆಂದು ಕೇಳಿಕೊಳ್ಳುತ್ತಾನೆ. ಇದರಿಂದ ಕೌರವರನ್ನು ಈ ಯುದ್ಧದಲ್ಲಿ ಸದೆಬಡಿದು ತನ್ನ ಕನಸನ್ನು ಪಾಂಡವರು ನನಸಾಗಿಸುತ್ತಾರೆ ಎಂದು ಆಲೋಚಿಸಿದ್ದ ದ್ರೌಪದಿಗೆ ನಿರಾಸೆಯಾಗುತ್ತದೆ. ಆಗ ಅವಳು ಭೀಮನನ್ನು ಹುರಿದುಂಬಿಸಿ ಯುದ್ಧವನ್ನೇ ನಿಶ್ಚಯಿಸಲು ಕೃಷ್ಣನಿಗೆ ಸೂಚನೆ ನೀಡಲು ಪ್ರೇರೇಪಿಸುತ್ತಾಳೆ ಅಲ್ಲದೇ ತಾನೂ ಸ್ವತಃ ಅಣ್ಣನಾದ ಕೃಷ್ಣನನ್ನು ಭೇಟಿಯಾಗಿ ಸಮರದ ಮೂಲಕ ಕೌರವರನ್ನು ನಾಶಮಾಡಿ ಭೂಮಿಯನ್ನು ಪಾಂಡವರಿಗೆ ಕೊಡಿಸಬೇಕೆಂದು ಪರಿಪರಿಯಾಗಿ ಕೋರಿಕೊಳ್ಳುತ್ತಾಳೆ. ಅಂತೆಯೇ ಸಂಧಾನಕ್ಕಾಗಿ ಪಾಂಡವರ ಕಡೆಯಿಂದ ಹಸ್ತಿನಾವತಿಗೆ ತೆರಳಿದ ಶ್ರೀಕೃಷ್ಣನು ಯುದ್ಧವನ್ನು ಗಂಟಿಕ್ಕಿಕೊಂಡು ಬಂದಾಗ ಅತಿ ಹೆಚ್ಚು ಸಂತಸಪಟ್ಟವಳು ದ್ರೌಪದಿಯೇ!


ಪಾಂಡವರಿಗೆ ದ್ರೌಪದಿಯಲ್ಲದೇ ಪ್ರತಿಯೊಬ್ಬರಿಗೂ ಪ್ರತ್ಯೇಕ ಸತಿಯರಿದ್ದರು ಅಲ್ಲದೇ ತಾಯಿ ಕುಂತಿ ಅನೇಕ ಪುತ್ರರೊಡಗೂಡಿ ತುಂಬಿದ ಕುಟುಂಬ. ಎಲ್ಲರೊಡನೆಯೂ ಸಾಮರಸ್ಯದೊಂದಿಗೆ ಬಾಳುತ್ತಾ ಸಂಸಾರ ತೂಗಿಸಿಕೊಂಡು ಹೋಗುವಲ್ಲಿ ದ್ರೌಪದಿಯ ಪಾತ್ರ ಮಹತ್ವದ್ದೆನಿಸುತ್ತದೆ. ಅವಳಿಗೆ ಕೂಡ ಪ್ರತಿಯೊಬ್ಬ ಪಾಂಡವರಲ್ಲಿ ಒಬ್ಬೊಬ್ಬ ಪುತ್ರರು. ಯುಧಿಷ್ಠಿರನಿಂದ ಪ್ರತಿವಿಂಧ್ಯ, ಭೀಮನಿಂದ ಸುತಸೋಮ, ಅರ್ಜುನನಿಂದ ಶ್ರುತಕರ್ಮ, ನಕುಲನಿಂದ ಶತಾನಿಕಾ ಹಾಗೂ ಸಹದೇವನಿಂದ ಶ್ರುತಸೇನ ಹೀಗೆ ಐವರು ಪುತ್ರರು. ಅಲ್ಲದೇ ಅರ್ಜುನನ ಪುತ್ರನಾದ ಅಭಿಮನ್ಯುವನ್ನು ಅವಳು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದಳು. ಹೀಗೆ ಪಾಂಡವರಲ್ಲಿ ಒಗ್ಗಟ್ಟನ್ನೇ ಮೂಡಿಸುತ್ತಾ ಎಲ್ಲರನ್ನೂ ಸೇರಿಸಿಕೊಂಡು ಹೋಗುವಲ್ಲಿ ಪಾಂಚಾಲಿ ಮುಂಚೂಣಿಯಲ್ಲಿ ಕಾಣುತ್ತಾಳೆ. ಮಹಾಭಾರತದ ಮಹಾಸಂಗ್ರಾಮ ನಡೆದು ಕೌರವರೆಲ್ಲರೂ ಮರಣ ಹೊಂದುತ್ತಾರೆ. ಭೀಮನು ದುಃಶಾಸನನ ಕರುಳನ್ನು ಬಗೆದು ಆ ರಕ್ತದಿಂದ ದ್ರೌಪದಿಯ ಮುಡಿಗೆ ಅಭಿಷೇಕ ಮಾಡುವ ಮೂಲಕ ಅವಳ ತುರುಬನ್ನು ಕಟ್ಟಿಸುತ್ತಾನೆ. ದುರ್ಯೋಧನನನ್ನೂ ಸಂಹರಿಸಿ ವೈರಿಗಳ ನಾಮಾವಶೇಷ ಇಲ್ಲದಂತೆ ಮಾಡುತ್ತಾನೆ. ಪಾಂಡವರು ಯುದ್ಧದ ಗೆಲುವಿನ ಮೂಲಕ ಸಂಪೂರ್ಣ ಸಾಮ್ರಾಜ್ಯಕ್ಕೆ ಅಧಿಪತಿಗಳಾಗುತ್ತಾರೆ. ದ್ರೌಪದಿಯು ಪಟ್ಟದರಸಿಯಾಗಿ ವಿರಾಜಿಸುತ್ತಾಳೆ. ಇಂತಹ ಒಂದು ಕ್ಷಣವನ್ನು ಬಯಸುತ್ತಿದ್ದಳೋ ಅದನ್ನು ಕೊನೆಗೂ ಪಡೆದುಕೊಂಡರೂ ಅದಕ್ಕಾಗಿ ಕಳೆದುಕೊಂಡದ್ದೂ ಕಡಿಮೆಯಲ್ಲವಲ್ಲ. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ್ದ ಅವಳ ಮಕ್ಕಳನ್ನು, ಕೊನೆಯ ದಿವಸ ರಾತ್ರಿ ಮಲಗಿರುವಾಗ ಅಶ್ವತ್ಥಾಮನು ಸಂಹರಿಸುತ್ತಾನೆ. ಅರ್ಜುನ, ಸುಭದ್ರೆಯರ ಮಗನಾದ ಅಭಿಮನ್ಯು, ಭೀಮನ ಮಗ ಘಟೋತ್ಕಚ, ಹೀಗೆ ಪಾಂಡವರ ಪುತ್ರರೆಲ್ಲರೂ ಯುದ್ಧದಲ್ಲಿ ಹೋರಾಡಿ ಅಸುನೀಗುತ್ತಾರೆ ಅಲ್ಲದೆ ಅಪಾರವಾದ ಬಂಧು ಬಾಂಧವರನ್ನೆಲ್ಲ ಕಳೆದುಕೊಳ್ಳುತ್ತಾರೆ. ಇದರಿಂಡ್ಸ್ ಗೆಲುವನ್ನೂ ಕೂಡ ಸಂಭ್ರಮಿಸುವ ಮನಸ್ಥಿತಿ ಪಾಂಡವರಿಗಾಗಲೀ, ದ್ರೌಪದಿಗಾಗಲೀ ಇರುವುದಿಲ್ಲ. ಮುಂದೆಯೂ ಕೂಡ ಪುತ್ರಶೋಕವೆಂಬ ದುಃಖದಲ್ಲಿಯೇ ಬದುಕನ್ನು ಸವೆಸಿ ಕೊನೆಯಲ್ಲಿ ಪಾಂಡವರೊಟ್ಟಿಗೆ ಇಹಲೋಕ ಯಾತ್ರೆಯನ್ನು ಪೂರೈಸುತ್ತಾಳೆ. ಒಂದು ಉದ್ದೇಶಕ್ಕಾಗಿಯೇ ಜನಿಸಿದ ದ್ರೌಪದಿಯು ಅದನ್ನು ಈಡೇರಿಸಲು ಜೀವನ ಪೂರ್ತಿ ತನ್ನ ಪ್ರಯತ್ನವನ್ನು ಮಾಡುತ್ತಾಳೆ. ಮಹಾವಿಷ್ಣುವಿನ ಅವತಾರವಾದ ಶ್ರೀಕೃಷ್ಣನನ್ನು ತನ್ನ ಅಣ್ಣನೆಂದೂ, ದೇವನೆಂದೂ ಆರಾಧಿಸುತ್ತಾಳೆ. ಅವನ ನಿರ್ದೇಶನದಂತೆಯೇ ಮುಂದುವರೆಯುತ್ತಾಳೆ. ಅಂತೆಯೇ ಶ್ರೀಕೃಷ್ಣನೂ ಕೂಡ ಅವಳ ಎಲ್ಲ ಸಂಕಷ್ಟ ಸಂದರ್ಭಗಳಲ್ಲಿ ಪತಿಗಳ ಮೇಲಿನ ನಿಷ್ಠೆ, ಭಕ್ತಿಯಿಂದಾಗಿ ಪತಿವೃತಾಶಿರೋಮಣಿಯಾಗಿ ಕಾಣಿಸಿಕೊಂಡವಳು ಇಂತಹ ಯಾಜ್ಞಸೇನೆ, ಪಾಂಚಾಲೀ ದ್ರೌಪದಿಯನ್ನು ವರ್ಣಿಸುವಲ್ಲಿ ಇದೊಂದು ಪ್ರಯತ್ನ ಅಷ್ಟೇ!

Comments


bottom of page