ದ್ರೌಪದಿ (ಭಾಗ ೧)
- Shripad Patil Mattighatta
- 4 days ago
- 3 min read
ಕೆಲವು ಪಾತ್ರಗಳು ವ್ಯಕ್ತಿಯಾಗಿ ನಮ್ಮನ್ನು ಪ್ರಭಾವಿಸಿದರೆ, ಇನ್ನೂ ಕೆಲವು ಪಾತ್ರಗಳು ಶಕ್ತಿಯಾಗಿ ತನ್ನ ಕಾರ್ಯನಿರ್ವಹಿಸುತ್ತದೆ. ಪ್ರಕಟವಾಗಿ ಪ್ರತಿ ಘಟನೆಗಳಲ್ಲೂ ಭಾಗಿಯಾಗುವ ಪಾತ್ರಗಳು ಕೆಲವಾದರೆ, ಅಗೋಚರ ಶಕ್ತಿಯಾಗಿ ಇಡೀ ಕಥಾನಕವನ್ನು ಕೊಂಡೊಯ್ಯುವ ಪಾತ್ರಗಳು ಕೆಲವು. ಇಂತಹ ಕೆಲವು ಪಾತ್ರಗಳು ನಮಗೆ ಕೇವಲ ಒಂದು ಪೋಷಕ ಪಾತ್ರವೆಂದು ಅನಿಸಿದರೂ, ಕಥೆಯ ಮುಖ್ಯಭೂಮಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳದೇ ಹೋದರೂ, ಪ್ರಮುಖ ಸನ್ನಿವೇಶಗಳಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವುದನ್ನು ಕಾಣುತ್ತೇವೆ. ಮಹಾಭಾರತ ಕಥಾನಕದಲ್ಲಿ ಬರುವ ದ್ರೌಪದಿಯ ಪಾತ್ರವೂ ಕೂಡ ಹೀಗೆ. ಅವಳ ಬಿಚ್ಚಿದ ಮುಡಿ-ಸೇಡಿನ ಕಿಡಿಯೇ ಮಹಾಭಾರತ ಯುದ್ಧದ ಮೂಲ ಕಾರಣವಲ್ಲವೇ? ದ್ರುಪದ ಮಹಾರಾಜನ ಮಗಳಾಗಿ ಜನಿಸಿ ಪಂಚಪಾಂಡವರ ಪತ್ನಿಯಾಗಿ ಮಹಾಭಾರತದುದ್ದಕ್ಕೂ ಕಂಡುಬರುವ ದ್ರೌಪದಿಯ ಪಾತ್ರಕ್ಕೆ ನಮ್ಮ ಪ್ರವೇಶ. ಅಹಲ್ಯಾ, ದ್ರೌಪದಿ, ಸೀತಾ, ತಾರಾ ಮತ್ತು ಮಂಡೋದರಿ ಈ ಪಂಚ ಮಹಾ ಪತಿವ್ರತೆಯರ ಪೈಕಿ ದ್ರೌಪದಿಯ ವಿಶೇಷತೆ ಏನೆಂದು ನೋಡೋಣ ಬನ್ನಿ!!
ಪಾಂಚಾಲ ದೇಶದ ಮಹಾರಾಜ ದ್ರುಪದನಿಗೂ, ಕೌರವ ಪಾಂಡವಾದಿ ಕುರುವಂಶದ ರಾಜಕುಮಾರರ ಧನುರ್ವಿದ್ಯಾ ಗುರುಗಳಾದ ದ್ರೋಣರಿಗೂ ಬದ್ಧ ವೈರತ್ವ. ಅದಕ್ಕೂ ಮೊದಲು ಅವರಿಬ್ಬರೂ ಗುರುಕುಲದಲ್ಲಿ ಒಟ್ಟಿಗೇ ವಿದ್ಯಾಭ್ಯಾಸ ಮಾಡುವಾಗ ಆತ್ಮೀಯ ಸ್ನೇಹಿತರಾಗಿದ್ದರು. ಆ ಸಂದರ್ಭದಲ್ಲಿ ದ್ರುಪದನು ದ್ರೋಣರಿಗೆ ಅರ್ಧ ರಾಜ್ಯವನ್ನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದನು. ವಿದ್ಯಾಭ್ಯಾಸ ಮುಗಿದು ಸಂಸಾರಸ್ಥರಾದ ಮೇಲೆ ದ್ರೋಣರಿಗೆ ವಿಪರೀತ ಬಡತನ. ಆಗ ಅವರಿಗೆ ಸ್ನೇಹಿತನಾದ ದ್ರುಪದನ ನೆನಪಾಗಿ ಪಾಂಚಾಲಕ್ಕೆ ಬಂದು ದ್ರುಪದನ ಸಹಾಯ ಕೇಳುತ್ತಾರೆ. ಆಗಲೇ ಮಹಾರಾಜನಾಗಿ ಅಭಿಷಿಕ್ತನಾಗಿದ್ದ ದ್ರುಪದನು, ಹಿಂದಿನ ದ್ರೋಣರ ಸ್ನೇಹವನ್ನು ಕಡೆಗಣಿಸುತ್ತಾನೆ. ಕೋಪಗೊಂಡ ದ್ರೋಣರು 'ದ್ರುಪದನ ಅಹಂಕಾರ ಮುರಿಯುತ್ತೇನೆ, ಅವನ ಶಿರವನ್ನು ತನ್ನ ಕಾಲಬುಡದಲ್ಲಿ ಕೆಡವುತ್ತೇನೆ' ಎಂದು ಶಪಥ ಮಾಡಿದರು. ತನ್ನಲ್ಲಿನ ಬಿಲ್ವಿದ್ಯೆಯ ಪಟ್ಟುಗಳೆಲ್ಲವನ್ನೂ ಪಾಂಡವ ಕೌರವರಿಗೆ ಕಲಿಸಿಕೊಡುತ್ತಾರೆ. ಕೊನೆಯಲ್ಲಿ ಅವರಿಂದ ಗುರುಕಾಣಿಕೆಯಾಗಿ ದ್ರುಪದನನ್ನು ಬಂಧಿಸಿ ತರುವಂತೆ ಹೇಳುತ್ತಾರೆ. ಕೌರವರು ದ್ರುಪದನ ಮೇಲೆ ದಂಡೆತ್ತಿ ಹೋದಾಗ, ದ್ರುಪದನು ಅವರನ್ನು ಸೋಲಿಸಿ ಬಿಡುತ್ತಾನೆ. ಆಮೇಲೆ ದ್ರೋಣರ ಪಟ್ಟಶಿಷ್ಯನಾದ ಅರ್ಜುನನು, ದ್ರುಪದನನ್ನು ಸೋಲಿಸಿ ಬಂಧಿಸಿ ದ್ರೋಣರ ಪದಲತದಲ್ಲಿ ಕೆಡವುತ್ತಾನೆ. ಹೀಗೆ ದ್ರೋಣರಿಂದ ಅವಮಾನಿತನಾದ ದ್ರುಪದನು ದ್ರೋಣರ ಮೇಲೆ ಸೇಡಿನಿಂದ ಕುದಿಯುತ್ತಾನೆ. ಮುಂದೆ ದ್ರೋಣರನ್ನು ಕೊಲ್ಲುವಂತ ಮಗನನ್ನು ಪಡೆಯುವ ಕಾರಣದಿಂದ ಯಜ್ಞವನ್ನು ಮಾಡುತ್ತಾನೆ. ಆ ಯಜ್ಞದಲ್ಲಿ ಹುಟ್ಟಿದವರೇ ದೃಷ್ಟದ್ಯುಮ್ನ ಹಾಗೂ ದ್ರೌಪದಿ. ಜನಿಸುವಾಗಲೇ ಯೌವನಿಗರಾಗಿದ್ದ ಇಬ್ಬರೂ ಸ್ಫುರದ್ರೂಪಿಗಳಾಗಿ ಸುಂದರರಾಗಿದ್ದರು. ಕೃಷ್ಣವರ್ಣದವಳಾಗಿದ್ದರಿಂದ ಕೃಷ್ಣೆ ಎಂದೂ, ಯಜ್ಞದಿಂದ ಜನಿಸಿದ್ದರಿಂದ ಯಾಜ್ಞಸೇನೆ ಎಂದೂ, ದ್ರುಪದ ಪುತ್ರಿ ದ್ರೌಪದಿಯೆಂದೂ, ಪಾಂಚಾಲ ದೇಶದವಳಾದ್ದರಿಂದ ಪಾಂಚಾಲೆಯೆಂದೂ ವಿವಿಧ ನಾಮಗಳು ದ್ರೌಪದಿಗೆ. ದ್ರುಪದನ ರಾಜ್ಯದಲ್ಲಿಯೇ ವಿದ್ಯಾಭ್ಯಾಸ ಮಾಡಿದ ದ್ರೌಪದಿ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರದಲ್ಲಿ ನುರಿತವಳಾಗಿದ್ದಳು. ಪ್ರಾಯಪ್ರಬುದ್ಧಳಾದ ಅವಳನ್ನೂ ಜಗದೇಕವೀರನಾದ ಅರ್ಜುನನಿಗೆ ಕೊಟ್ಟು ವಿವಾಹ ಮಾಡಬೇಕೆಂದು ದ್ರುಪದನ ಬಯಕೆ.

ಪಾಂಡವರು ವಾರಣಾವತದ ಅರಗಿನ ಮನೆಯ ಅಗ್ನಿದಾಳಿಯಿಂದ ತಪ್ಪಿಸಿಕೊಂಡು ಏಕಚಕ್ರನಗರದಲ್ಲಿ ತಾಯಿ ಕುಂತಿ ಸಹಿತರಾಗಿ ಬ್ರಾಹ್ಮಣ ರೂಪದಲ್ಲಿ ವಾಸಿಸುತ್ತಿರುತ್ತಾರೆ. ಲೋಕದ ದೃಷ್ಟಿಯಲ್ಲಿ ಪಾಂಡವರು ಈಗಾಗಲೇ ಅಳಿದು ಹೋಗಿದ್ದಾರೆ ಎಂದೇ ಬಿಂಬಿತವಾಗಿರುತ್ತದೆ. ಅದೇ ಸಂದರ್ಭದಲ್ಲಿ ದ್ರುಪದ ಮಹಾರಾಜನು, ಪಾಂಚಾಲಿಯ ವಿವಾಹವನ್ನು ನಡೆಸಲು ನಿಶ್ಚಯಿಸಿ ಸ್ವಯಂವರವನ್ನು ಏರ್ಪಡಿಸುತ್ತಾನೆ. ತಿರುಗುತ್ತಿರುವ ಯಂತ್ರದ ಮಧ್ಯೆ ಇರುವ ಮತ್ಸ್ಯದ ಕಣ್ಣಿಗೆ, ಕೆಳಗಿರುವ ಪ್ರತಿಬಿಂಬದಲ್ಲಿ ನೋಡಿ ಬಾಣವನ್ನು ಹೂಡುವ ಅತ್ಯಂತ ಕಠಿಣವಾದ ಸವಾಲನ್ನು ಸ್ವಯಂವರಕ್ಕೆ ನಿಗದಿ ಮಾಡಲಾಗುತ್ತದೆ. ಇಂತಹ ಮತ್ಸ್ಯಯಂತ್ರ ಬೇಧಿಸುವ ಸಾಮರ್ಥ್ಯ ಹೊಂದಿರುವಂತಹವನು ಅರ್ಜುನ ಮತ್ತು ಕರ್ಣರು ಮಾತ್ರ ಎಂಬುದನ್ನು ದ್ರುಪದ ಮನಗಂಡಿದ್ದ. ಕರ್ಣನನ್ನು ಅವನ ಕುಲದ ಕಾರಣದಿಂದ ತಾನು ವಿವಾಹವಾಗುವುದಿಲ್ಲವೆಂದು ದ್ರೌಪದಿ ಘೋಷಿಸುತ್ತಾಳೆ. ಸ್ವಯಂವರದಲ್ಲಿ ಸೇರಿದ್ದ ಅರಸುಪುತ್ರರೆಲ್ಲ ಪ್ರಯತ್ನಿಸಿ ಸಾಧ್ಯವಾಗದೆ ಕೈಚೆಲ್ಲುತ್ತಾರೆ. ಬ್ರಾಹ್ಮಣರ ಸಾಲಿನಲ್ಲಿ ಕುಳಿತಿದ್ದ ಪಾಂಡವರ ಪೈಕಿ ಅರ್ಜುನನು ಎದ್ದು ನಿಲ್ಲುತ್ತಾನೆ. ಇಡೀ ಭೂಮಂಡಲದ ಕ್ಷತ್ರಿಯ ರಾಜ ಮಹಾರಾಜರೆಲ್ಲರಿಂದ ಸಾಧ್ಯವಾಗದ ಈ ಮಹಾತ್ಕಾರ್ಯಕ್ಕೆ ಬ್ರಾಹ್ಮಣನೊಬ್ಬ ಮುಂದಾದಾಗ ಸೇರಿದ್ದ ಸಭೆಯಲ್ಲಿ ಗುಜುಗುಜು ಪ್ರಾರಂಭವಾಗುತ್ತದೆ. ಸಭೆಯಲ್ಲಿದ್ದ ಶ್ರೀಕೃಷ್ಣನಿಗೆ ಅವನೇ ಅರ್ಜುನನೆಂಬುದು ಅರಿವಾಗಿ ಕಣ್ಣಿನಲ್ಲೇ ಒಪ್ಪಿಗೆಯ ಸೂಚನೆ ನೀಡುತ್ತಾನೆ. ಹಾಗೆ ಅರ್ಜುನನು ಬಿಲ್ಲನ್ನು ಹೆದೆಯೇರಿಸಿ, ಕೆಳಗೆ ನೀರಿನಲ್ಲಿ ಕಾಣುತ್ತಿರುವ ಪ್ರತಿಬಿಂಬವನ್ನು ನೋಡುತ್ತಾ, ಮೇಲಿನ ತಿರುಗುತ್ತಿರುವ ಯಂತ್ರದ ಮಧ್ಯೆಯ ಮತ್ಸ್ಯದ ಕಣ್ಣಿಗೆ ಬಾಣದ ಗುರಿಯನ್ನು ಹೊಡೆಯುತ್ತಾನೆ. ಹೀಗೆ ದ್ರೌಪದಿಯನ್ನು ಅರ್ಜುನ ಗೆಲ್ಲುತ್ತಾನೆ. ಪಣದಲ್ಲಿ ಗೆದ್ದ ಅರ್ಜುನನೊಬ್ಬನನ್ನು ಮದುವೆಯಾಗದೇ ಪಂಚ ಪಾಂಡವರನ್ನು ದ್ರೌಪದಿ ವಿವಾಹವಾಗಿದ್ದಾದರೂ ಯಾಕೆ?
ಬ್ರಾಹ್ಮಣರ ವೇಷದಲ್ಲಿದ್ದ ಪಾಂಡವರು ದ್ರೌಪದಿಯನ್ನು ಕರೆದುಕೊಂಡು ತಾಯಿ ಕುಂತಿದೇವಿಯಲ್ಲಿ ಬರುವರು. 'ಪ್ರತಿದಿನದಂತೆ ಇಂದೂ ಕೂಡ ಭಿಕ್ಷೆಯನ್ನು ತಂದಿದ್ದೇವೆ ನೋಡಮ್ಮಾ' ಎಂದು ಭೀಮ ಕೂಗುತ್ತಾನೆ. ಕುಂತಿದೇವಿ ಒಳಗಿನಿಂದಲೇ ಐವರೂ ಹಂಚಿಕೊಂಡು ಬಿಡಿ ಎನ್ನುತ್ತಾಳೆ. ಆಮೇಲೆ ಹೊರಗೆ ಬಂದು ನೋಡಿದರೆ ಅವರು ತಂದಿರುವುದು ಸುಂದರ ಕನ್ಯೆಯಾಗಿರುತ್ತಾಳೆ. ಆದರೂ ತನ್ನ ಮಾತು ಹುಸಿಯಾಗಬಾರದೆಂಬ ಕಾರಣದಿಂದ ಪಂಚ ಪಾಂಡವರಿಗೂ ಪಾಂಚಾಲಿ ಪತ್ನಿಯಾಗಬೇಕೆಂದು ನಿರ್ದೇಶಿಸುತ್ತಾಳೆ. ಆ ಮೂಲಕ ನಿರಂತರವಾಗಿ ಪಾಂಡವರಲ್ಲಿ ಒಗ್ಗಟ್ಟು ಕಾಯ್ದುಕೊಂಡು ಹೋಗುವಲ್ಲಿ ದ್ರೌಪದಿ ಮುಖ್ಯ ಪಾತ್ರ ವಹಿಸಬೇಕೆಂದು ತಂತ್ರ ಹೆಣೆದಿದ್ದು ಕುಂತಿದೇವಿ.
ಹೀಗೆ ಪಾಂಡವರು ಐವರೂ ದ್ರೌಪದಿಯನ್ನು ಮದುವೆಯಾಗುವ ವಿಷಯ ತಿಳಿದ ದ್ರುಪದನು ಚಿಂತಿತನಾದನು ಬಹುಪತ್ನಿತ್ವವನ್ನು ಕಂಡಂತಹ ಲೋಕದಲ್ಲಿ ಬಹುಪತಿತ್ವ ವಿಚಿತ್ರವಾಗಿಯೇ ಕಾಣುತ್ತದೆಯಲ್ಲವೇ!! ಅದರಲ್ಲೂ ಕ್ಷತ್ರಿಯರು "ರಾಜಾ ಬಹುಪತ್ನಿ ವಲ್ಲಭ" ಎಂಬ ಕಾಲಘಟ್ಟ! ಆಗ ವ್ಯಾಸರು ಅಲ್ಲಿಗೆ ಆಗಮಿಸಿ ದ್ರೌಪದಿಯ ಹಿಂದಿನ ಜನ್ಮದ ವೃತ್ತಾಂತವನ್ನು ದ್ರುಪದನಿಗೆ ತಿಳಿಸುತ್ತಾನೆ. "ಅವಳು ಮೌದ್ಗಲ್ಯ ಮಹರ್ಷಿಗಳು ನಳಯಾನಿಗೊಂದು ವರವನ್ನು ಕೊಡಲು ಮುಂದಾಗುತ್ತಾರೆ. ಐದು ವಿಭಿನ್ನ ರೂಪದಲ್ಲಿ ತನ್ನನ್ನು ಪ್ರೀತಿಸಲು ಅವಳು ಕೇಳಿಕೊಳ್ಳುತ್ತಾಳೆ. ಹಾಗೆಯೇ ಅವರು ಸೇರುತ್ತಿರುತ್ತಾರೆ. ಕಾಲಾನಂತರ ಮಹರ್ಷಿಗಳು ಇಹಲೋಕ ತ್ಯಜಿಸಿದಾಗ ನಳಯಾನಿಯು ಪತಿ, ಪತಿ ಎಂದು ಐದು ಬಾರಿ ಕೂಗಿಕೊಳ್ಳುತ್ತಾಳೆ. ದೇವತೆಗಳು ಅವಳ ಬೇಡಿಕೆಯನ್ನು ಅಸ್ತು ಎಂದು ಈಡೇರಿಸುತ್ತಾರೆ. ಪರಿಣಾಮ ಅವಳು ಈ ಜನ್ಮದಲ್ಲಿ ಐವರಿಗೆ ಪತ್ನಿಯಾಗಬೇಕಾಗುತ್ತದೆ."
ಮತ್ತೊಂದು ಕಥೆಯ ಪ್ರಕಾರ ಹಿಂದಿನ ಜನ್ಮದಲ್ಲಿ ಮಹಿಳೆಯಾಗಿದ್ದ ಅವಳು ಶಿವನ ಕುರಿತು ತಪಸ್ಸನ್ನಾಚರಿಸುತ್ತಾಳೆ. ಶಿವನು ಪ್ರತ್ಯಕ್ಷನಾಗಿ ವರ ಕೇಳೆಂದಾಗ ಅವಳು ಸತ್ಯವಂತನೂ, ಬಲಶಾಲಿಯೂ, ಕೌಶಲ್ಯಪೂರ್ಣ ಮತ್ತು ನಿರ್ಭೀತನೂ, ಸುಂದರನೂ ಹಾಗೂ ಬುದ್ಧಿವಂತನೂ ಆದ ಪತಿಯನ್ನು ದಯಪಾಲಿಸಬೇಕೆಂದು ಬೇಡಿಕೊಳ್ಳುತ್ತಾಳೆ. ತಥಾಸ್ತು ಎಂದ ಪರಶಿವನು, 'ಈ ಐದು ಗುಣಗಳು ಒಂದೇ ಪುರುಷನಲ್ಲಿ ಸಿಗದ ಕಾರಣ ಮುಂದಿನ ಜನ್ಮದಲ್ಲಿ ಐವರು ಗಂಡಂದಿರನ್ನೇ ಪಡೆ' ಎಂದು ಹರಸುತ್ತಾನೆ. ಅದೇ ಪ್ರಕಾರ ಈಗ ದ್ರೌಪದಿಯು ಪಂಚ ಪಾಂಡವರ ಪತ್ನಿಯಾಗಬೇಕಾದ್ದು ವಿಧಿ ನಿಯಮ ಎಂದು ವ್ಯಾಸರು ತಿಳಿಸಿದಾಗ ದ್ರುಪದನು ಸಮಾಧಾನ ಹೊಂದಿ, ಪಂಚ ಪಾಂಡವರ ಪತ್ನಿಯಾಗಿ ಪಾಂಚಾಲಿಯನ್ನು ಧಾರೆಯೆರೆದು ಕೊಡುತ್ತಾನೆ. ಹೀಗೆ ಪಂಚ ಪಾಂಡವರನ್ನು ಮದುವೆಯಾದ ದ್ರೌಪದಿಯ ಜತೆ ಸುಗಮವಾಗಿ ಸಂಸಾರ ಸಾಗಿಸುವ ಬಗ್ಗೆ ದೇವರ್ಷಿ ನಾರದರು ಪಾಂಡವರಿಗೆ ಒಂದಷ್ಟು ಕಟ್ಟಳೆಯನ್ನು ಹಾಕಿಕೊಟ್ಟರು. "ಪಾಂಡವರು ಪ್ರತಿಯೊಬ್ಬರೂ ತಲಾ ಒಂದೊಂದು ವರ್ಷ ದ್ರೌಪದಿಯೊಂದಿಗೆ ಸಂಸಾರ ನಡೆಸಬೇಕು. ಒಬ್ಬರ ಜತೆ ಪಾಂಚಾಲಿಯು ಏಕಾಂತವಾಸದಲ್ಲಿರುವಾಗ ಮತ್ತೊಬ್ಬರು ಅದಕ್ಕೆ ಭಂಗ ತರುವಂತಿಲ್ಲ. ಯಾವುದೇ ಕಾರಣಕ್ಕೂ ಈ ನಿಯಮವನ್ನು ಪಾಂಡವರ ಪೈಕಿ ಯಾರೇ ಮುರಿದರೂ, ಅವರು ಒಂದು ವರ್ಷದ ಕಾಲ ತೀರ್ಥಾಟನೆಯನ್ನು ಮಾಡಬೇಕೆಂದು" ನಾರದರು ನಿರ್ದೇಶಿಸಿದ ನಿಯಮಕ್ಕೆ ಪಾಂಡವರೈವರೂ ಬದ್ಧರಾಗಿರಲು ತೀರ್ಮಾನಿಸಿದರು. ಅಲ್ಲದೇ ದ್ರೌಪದಿಗಿದ್ದ ವಿಶೇಷ ಶಕ್ತಿಯೆಂದರೆ ಅವಳ ಕನ್ಯತ್ವ. ಒಂದು ವರ್ಷಗಳ ಕಾಲ ಒಬ್ಬ ಪಾಂಡವನ ಜತೆ ಸಂಸಾರ ಸಾಗಿಸಿದ ಮೇಲೆ ಮುಂದೆ ಮತ್ತೊಬ್ಬನ ಜತೆ ಸಂಸಾರಕ್ಕೆ ಪ್ರಾರಂಭಿಸುವಾಗ ಅವಳು ತಿರುಗಿ ಕನ್ಯೆಯೇ ಆಗಿರುತ್ತಿದ್ದಳು. ಅಂತೆಯೇ ಪಾಂಚಾಲಿಯ ಸರ್ವದಾ ಕನ್ಯೆಯೇ ಆಗಿ ನಳನಳಿಸುತ್ತಿದ್ದಳು!! ಇಂತಹ ಅದ್ಭುತವಾದ ವರಬಲ ಅಲ್ಲದೇ ಪಾಂಡವರೈವರನ್ನೂ ಸಮಾನ ಭಾವದಿಂದ ಪತಿಗಳಾಗಿ ಆರಾಧಿಸಿ, ನಿರಂತರ ಸೇವೆಗೈಯುತ್ತಾ ತನ್ನ ಜೀವನ ಸವೆಸಿದ ದ್ರೌಪದಿಯು ಪಂಚಮಹಾಪತಿವ್ರತೆಯರ ಸಾಲಿನಲ್ಲಿ ಒಬ್ಬಳಾಗಿರುವುದು ಅಚ್ಚರಿಯೇನಲ್ಲ ಅಲ್ಲವೇ!








Comments