top of page

ಸುಮಿತ್ರಾ

ರಾಮಾಯಣದ ಅತ್ಯಂತ ವಿಶಿಷ್ಟ ಪಾತ್ರಗಳಲ್ಲಿ ಈ ಸುಮಿತ್ರೆಯೂ ಒಂದು. ದಶರಥನ ಮೂವರು ಮಡದಿಯರಲ್ಲಿ ಅತ್ಯಂತ ಸಮಾಧಾನ ಚಿತ್ತದಿಂದ ಎಲ್ಲ ಸಂದರ್ಭಗಳನ್ನು ನಿಭಾಯಿಸಿದಾಕೆ ಸುಮಿತ್ರೆ. ಮಹಾರಾಜನ ಎರಡನೆಯ ರಾಣಿಯಾದರೂ ಅವಳಿಗೆ ಸಿಗಬೇಕಾದ ಮನ್ನಣೆ ಸಿಗದಿರುವುದೇ ವಿಪರ್ಯಾಸ. ಹಿರಿಯಾಕೆ ರಾಮನ ತಾಯಿಯಾಗಿ ಜಗತ್ತಿಗೆ ಪರಿಚಿತಳಾದಳು. ಕಿರಿಯವಳಾದ ಕೈಕೇಯಿ ದಶರಥನ ಪ್ರಿಯ ಮಡದಿ. ಆದರೆ ಸುಮಿತ್ರೆ ಅವಕಾಶ ವಂಚಿತಳು. ಅವಳ ವಿವಾಹ ಪ್ರಕರಣವೂ ಸದ್ದಿಲ್ಲದೆ ನಡೆದು ಹೋಯಿತು.
ree
  • 💫 ದಶರಥನ 'ಅನುಚಿಂತ್ಯ' ತೀರ್ಮಾನ


ದಶರಥ ಪುತ್ರಾರ್ಥಿಯಾಗಿ ನಡೆಸಿದ ಪುತ್ರಕಾಮೇಷ್ಟಿ ಯಾಗದ ಕೊನೆಯಲ್ಲಿ ಪಾಯಸ ಪ್ರಾಪ್ತಿಯಾಯಿತು. ಈ ಪಾಯಸವನ್ನು ವಿಭಾಗಿಸುವಾಗ ದಶರಥನು ಹೇಗೆ ವಿಭಾಗಿಸಿದನು ಎಂಬುದನ್ನು ತಿಳಿದರೆ ಸುಮಿತ್ರೆ ರಾಮಾಯಣದಲ್ಲಿ ಎಷ್ಟು ವಿಶಿಷ್ಟಳು ಎಂಬುದು ಗೊತ್ತಾಗುತ್ತದೆ. ಆಧ್ಯಾತ್ಮ ರಾಮಾಯಣ, ರಘುವಂಶ, ಚಂಪೂರಾಮಾಯಣ, ಕ್ಷೇಮೇಂದ್ರನ ರಾಮಾಯಣ ಮಂಜರೀ ಇವೆಲ್ಲ ಗ್ರಂಥಗಳೂ ಕೌಸಲ್ಯೆ ಮತ್ತು ಕೈಕೇಯಿಗೆ ನಾಲ್ಕನೇ ಒಂದರಷ್ಟು ಭಾಗ ಹಾಗೂ ಸುಮಿತ್ರೆಗೆ ನಾಲ್ಕನೇ ಎರಡರಷ್ಟು ಭಾಗ ಎಂದರೆ ಅರ್ಧದಷ್ಟು ಪಾಯಸ ಲಭಿಸಿತು ಎಂಬುದನ್ನು ತಿಳಿಸುತ್ತವೆ. ಮೂಲ ರಾಮಾಯಣದಲ್ಲಿ ಇರುವ ಶ್ಲೋಕಗಳನ್ನು ಈ ಗ್ರಂಥಗಳ ವಿವರಣೆಗಳ ಆಧಾರದ ಮೇಲೆಯೇ ವಿವರಿಸಲು ಹೊರಟಾಗ, ಮೊದಲಿಗೆ ತನ್ನ ಕೈಯ್ಯಲ್ಲಿರುವ ಪಾಯಸದ ಪಾತ್ರೆಯಲ್ಲಿ ಅರ್ಧವನ್ನು ದಶರಥನು ಕೌಸಲ್ಯೆಗೆ ಕೊಟ್ಟನು. ಅನಂತರ ಕೌಸಲ್ಯೆಯ ಕೈಗೆ ಕೊಟ್ಟಿರುವ ಪಾಯಸದ ಭಾಗದಲ್ಲಿ ಸರಿಯಾಗಿ ಅರ್ಧ ಮಾಡಿ, ಅದನ್ನು ಸುಮಿತ್ರೆಗೆ ನೀಡಿದನು. ಈಗ ತನ್ನ ಕೈಯ್ಯಲ್ಲಿರುವ ಪಾತ್ರೆಯಲ್ಲಿ ಉಳಿದಿರುವ ಪಾಯಸದಲ್ಲಿ ಸರಿಯಾದ ಅರ್ಧಭಾಗವನ್ನು ಕೈಕೇಯಿಗೆ ಕೊಟ್ಟನು. ಈಗ ಮೂವರಿಗೂ ನಾಲ್ಕರಲ್ಲಿ ಒಂದಶದಂತೆ ಪಾಯಸ ಲಭಿಸಿತು. ಆದರೂ ಇನ್ನೂ ಒಂದು ಭಾಗ ಪಾತ್ರೆಯಲ್ಲಿ ಹಾಗೆಯೇ ಉಳಿದಿತ್ತು ಈ ಭಾಗವನ್ನು ಮುಂದೇನು ಮಾಡಬೇಕು? ಎಂದು ಯೋಚಿಸಿ ಆ ಭಾಗವನ್ನು ಸುಮಿತ್ರೆಗೆ ನೀಡಿದನು, ಎಂದು ವಾಲ್ಮೀಕಿಗಳು ವಿವರಿಸುತ್ತಾರೆ. ಈ ಸಂದರ್ಭದಲ್ಲಿ “ಅನುಚಿಂತ್ಯ” ಎಂಬ ಒಂದು 'ಲ್ಯಪ್' ಪ್ರತ್ಯಯದಿಂದ ಕೂಡಿದ ಕೃದಂತವನ್ನು ವಾಲ್ಮೀಕಿಗಳು ಬಳಸಿದ್ದಾರೆ. ಅನುಚಿಂತನ ಎಂದರೆ ‘ಸರಿಯಾಗಿ ಆಲೋಚಿಸುವುದು’ ಎಂದು ಅರ್ಥ. ಲಬ್ಧವಾದ ಪಾಯಸದಿಂದ ನಾಲ್ವರು ಮಕ್ಕಳು ಜನಿಸುವರು ಎಂಬುದು ದಶರಥನಿಗೆ ಮೊದಲೇ ತಿಳಿದಿತ್ತು. ಆದ್ದರಿಂದಲೇ ಅದನ್ನು ನಾಲ್ಕು ಭಾಗವಾಗಿ ವಿಭಾಗಿಸಿದನು ಎಂಬ ವಿಷಯ ಇಲ್ಲಿ ಗಮನಾರ್ಹವಾದುದು. ಹೀಗೆ ವಿಭಾಗಿಸಿದ ದಶರಥನು ನಾಲ್ಕನೇ ಭಾಗವನ್ನು ಸ್ಥಿರಚಿತ್ತಳಾದ, ಸಾಧ್ವಿಯಾದ, ಸೌಮ್ಯ ಸ್ವಭಾವದವಳಾದ ಸುಮಿತ್ರೆಗೆ ನೀಡುವುದು ಸೂಕ್ತ, ಅವಳೇ ಇಬ್ಬರು ಮಕ್ಕಳನ್ನು ಪಡೆದು ಅವರಿಬ್ಬರನ್ನು ಚೆನ್ನಾಗಿ ಬೆಳೆಸಬಲ್ಲಳು ಎಂಬ ದೂರದೃಷ್ಟಿಯಿಂದಲೇ ಅವಳಿಗೆ ನಾಲ್ಕನೇಯ ಪಾಲನ್ನು ನೀಡಿದನು. ಆದ್ದರಿಂದ ಸುಮಿತ್ರೆ ಅಯೋಧ್ಯೆಯ ಶ್ರೇಷ್ಠಮಾತೆಯೆನಿಕೊಳ್ಳುತ್ತಾಳೆ.


  • 💫 ಭಕ್ತಿ-ಕರ್ತವ್ಯದ ಮೂರ್ತಿಯಾಗಿ ತಾಯಿ

ತನ್ನ ಗುಣ ನಡತೆಯಿಂದಲೇ ಎಲ್ಲರಿಗೂ ಆದರ್ಶಪ್ರಾಯಳಾಗಿದ್ದ ಮಾತೆ ಸುಮಿತ್ರೆ ತನ್ನ ಇಬ್ಬರು ಮಕ್ಕಳನ್ನು ಅತ್ಯಂತ ವಿಶಿಷ್ಟವಾಗಿಯೇ ಬೆಳೆಸಿದ್ದು ಕಂಡುಬರುತ್ತದೆ. ರಾಮನ ಜೊತೆಯಲ್ಲಿ ಲಕ್ಷ್ಮಣನನ್ನು, ಭರತನ ಜೊತೆಯಲ್ಲಿ ಶತ್ರುಘ್ನನನ್ನು ನಿರಂತರವಾಗಿ ಬೆರೆತಿರುವಂತೆ ಮಾಡಿದಳು. ಅವರ ಮನಸ್ಸಿನಲ್ಲಿ ಹಿರಿಯರಿಗೆ ತಲೆಬಾಗಿ ಬದುಕುವ ಗುಣವನ್ನು ಅವಳು ರೂಢಿಸಿದಳು. ಆದ್ದರಿಂದ ಈಕೆ ಮಹಾಮಾತೆ.


  • 💫 ಲಕ್ಷ್ಮಣನ ವನವಾಸ – ಮಾತೆಯ ಆಶೀರ್ವಾದ

ಇವಳಲ್ಲಿರುವ ಉದಾತ್ತತೆ ಮತ್ತು ಧರ್ಮನಿಷ್ಠೆ, ಸತ್ಯ ಮೊದಲಾದ ಸದ್ಧರ್ಮದ ಲಕ್ಷಣಗಳು ಅನೇಕ ಸಂದರ್ಭಗಳಲ್ಲಿ ಪ್ರಕಟವಾಗುತ್ತದೆ. ಶ್ರೀರಾಮ ಕಾಡಿಗೆ ಹೊರಟುನಿಂತ ಸಂದರ್ಭವದು. ಲಕ್ಷ್ಮಣನು ತಾನೂ ಅಣ್ಣನ ಜೊತೆ ವನವಾಸಕ್ಕೆ ತೆರಳುವೆನೆಂದು ಹೇಳಿ ತಾಯಿಯ ಅನುಮಮತಿಯನ್ನು ಪಡೆಯಲು ಬಂದನು. ಒಟ್ಟಿಗೆ ನಿಂತಿರುವ ಕೌಸಲ್ಯೆ ಹಾಗೂ ಸುಮಿತ್ರೆಯರನ್ನು ನೋಡಿ ಲಕ್ಷ್ಮಣನು ಮೊದಲಿಗೆ ಕೌಸಲ್ಯೆಯ ಕಾಲಿಗೆ ನಮಸ್ಕರಿಸಿ, ಅನಂತರ ಸುಮಿತ್ರೆಯ ಪಾದಕ್ಕೆ ಶಿರವನ್ನು ತಾಗಿಸುವಾಗ ಸುಮಿತ್ರೆ ಅವನ ನೆತ್ತಿಯನ್ನು ಆಘ್ರಾಣಿಸುತ್ತಾ ಕಣ್ಣಿನಲ್ಲಿ ಹರಿಯುತ್ತಿರುವ ಧಾರಾಕಾರವಾದ ನೀರನ್ನು ಲೆಕ್ಕಕಿಸದೆ, “ಮಗನೆ! ನಿನ್ನನ್ನು ನಾನು ವನವಾಸಕ್ಕಾಗಿ ಹೆತ್ತಂತೆ ಆಯಿತಲ್ಲ. ರಾಮನು ನಿನಗೆ ಅತ್ಯಂತ ಪ್ರೀತಿಯ ವ್ಯಕ್ತಿ, ಅವನಲ್ಲಿ ಎಂದಿಗೂ ವನವಾಸದ ಕಾಲದಲ್ಲಿ ತಪ್ಪಿ ನಡೆಯಬೇಡ. ದಾನ, ಯಜ್ಞ, ಹಾಗೂ ಯುದ್ಧ ಇವುಗಳು ನಮ್ಮ ಪರಂಪರೆಯಿಂದ ಬಂದ ಧರ್ಮಗಳು. ಇವುಗಳನ್ನು ಎಂದಿಗೂ ಮರೆಯಬೇಡ.

ರಾಮಂ ದಶರಥಂ ವಿದ್ಧಿ ಮಾಂ ವಿದ್ಧಿ ಜನಕಾತ್ಮಜಾಮ್| ಅಯೋಧ್ಯಾಮಟವೀಂ ವಿದ್ಧಿಂ ಗಚ್ಛ ತಾತ ಯಥಾಸುಖಮ್||

“ರಾಮನನ್ನು ದಶರಥನೆಂದು ತಿಳಿ, ಸೀತೆಯನ್ನು ನಾನು ಎಂದು ತಿಳಿ, ಅರಣ್ಯವನ್ನೇ ಅಯೋಧ್ಯೆ ಎಂದು ತಿಳಿ, ಹೊರಡು ಮಗು” ಎಂದು ಸುಮಿತ್ರೆ ಹಾರೈಸುತ್ತಾಳೆ.


  • 💫 ಮರುಗಿದ ಕೌಸಲ್ಯೆಗೆ ಧೈರ್ಯದ ದೀಪ

ಹೀಗೆ ರಾಮ-ಲಕ್ಷ್ಮಣ-ಸೀತೆಯರು ವನವಾಸಕ್ಕೆ ಪ್ರಯಾಣ ಬೆಳೆಸಿದ ಅನಂತರ ಕೌಸಲ್ಯೆಯನ್ನು ಸಮಾಧಾನ ಪಡಿಸುವ ಕಾರ್ಯವನ್ನು ಸುಮಿತ್ರೆ ಮಾಡುತ್ತಾಳೆ. ಇದೇ ಸಂದರ್ಭದಲ್ಲಿ ವಾಲ್ಮೀಕಿ “ಧರ್ಮೇ ಸ್ಥಿತಾ” ಎಂಬ ಪದಪ್ರಯೋಗವನ್ನು ಮಾಡಿದ್ದಾನೆ. ಇದು ಅವಳು ಎಂತಹ ಧರ್ಮ ಬುದ್ಧಿಯುಳ್ಳವಳು ಎಂಬುದನ್ನು ತೋರಿಸುತ್ತದೆ. ಸುಮಿತ್ರೆಯು ಕೌಸಲ್ಯೆಯಲ್ಲಿ ರಾಮನ ಪರಾಕ್ರಮ,ಗುಣ, ಶೀಲಗಳ ಬಗ್ಗೆ ವಿಸ್ತಾರವಾದ ವಿವರಣೆಯನ್ನು ನೀಡಿ. ಅವನು ಮಹಾತ್ಮನಾಗಿದ್ದಾನೆ ಅವನಿಗೆ ಯಾವ ತೊಂದರೆಯೂ ಬಾರದು ಎಂಬ ಮಾತುಗಳನ್ನು ಹೇಳಿ ಅವಳನ್ನು ಸಮಾಧಾನ ಪಡಿಸುತ್ತಾಳೆ.


  • 💫 ಸುಮಿತ್ರೆ – ಅಯೋಧ್ಯೆಯ ಮೌನ ಶಕ್ತಿಸ್ತಂಭ

ಕೈಕೇಯಿಯ ವರದ ಕಾರಣದಿಂದ ಕಾಡಿಗೆ ಹೋಗಬೇಕಾದವನು ರಾಮ. ಅವನ ಜೊತೆ ಯಾವ ಕಾರಣವೂ ಇಲ್ಲದೆ ತನ್ನ ಮಗ ಲಕ್ಷ್ಮಣ ಹೋಗಿದ್ದಾನೆ, ಎಂಬ ದುಃಖ ತನ್ನ ಮನಸ್ಸಿನಲ್ಲಿ ಇದ್ದರೂ ಕೌಸಲ್ಯೆಯನ್ನು ಸಂತೈಸುವ ರೀತಿಯನ್ನು ಗಮನಿಸಿದರೆ, ಅವಳ ಜಿತೇಂದ್ರಿಯ ಮನಸ್ಸು ಅದೆಷ್ಟು ಗಟ್ಟಿಯಿರಬೇಕು! ಅವಳ ಸಂಸ್ಕಾರ, ಜ್ಞಾನ ಅದೆಷ್ಟು ಅಗಾಧವಾಗಿರಬೇಕು?


ಇಷ್ಟೆಲ್ಲ ಗುಣಗಳುಳ್ಳ ಸುಮಿತ್ರೆ ಮಾತ್ರ ಇಬ್ಬರು ಮಕ್ಕಳಿಗೆ ತಾಯಿಯಾಗಬಲ್ಲಳು ಎಂಬುದನ್ನು ನಿರ್ಣಯಿಸಿದ ದಶರಥ ಕೊನೆಯ ಭಾಗವನ್ನು ಅವಳಿಗೆ ಕೊಟ್ಟಿರಬೇಕು.

ಕೊನೆಯ ವರೆಗೂ ರಾಮನ ಸೇವಕನಾಗಿಯೇ ತನ್ನ ಜೀವನವನ್ನು ಕಳೆದವನು ಲಕ್ಷ್ಮಣ. ರಾಮ ಕಾಡಿಗೆ ಹೋದ, ದಶರಥ ಸತ್ತು ಹೋದ, ಭರತ ನಂದಿ ಗ್ರಾಮದಲ್ಲೇ ನೆಲೆಸಿದ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸಿದವನು ಶತ್ರುಘ್ನ.

ಇಂತಹ ಪುತ್ರರತ್ನರನ್ನು ಪಡೆದ ಆ ಸುಮಿತ್ರೆ ಸುಗರ್ಭೆಯೇ ಅಲ್ಲವೇ?!


Comments


bottom of page