ಕೌಸಲ್ಯೆ
- Ravishankara Hegde Dodnalli

- Jun 14
- 2 min read
ದಶರಥ ಮಹಾರಾಜನ ಮೂವರು ಮಡದಿಯರು, ಬೇರೆ ಬೇರೆ ರಾಜ್ಯದ ರಾಜಕುಮಾರಿಯರಾಗಿದ್ದರು. ಅವರಲ್ಲಿ ಹಿರಿಯಾಕೆ ಕೌಸಲ್ಯೆ. ಕೋಸಲ ದೇಶದ ರಾಜನಾದ ಭಾನುಮಂತನ ಮಗಳು ಈಕೆ. ಶ್ರೀ ರಾಮನ ತಾಯಿ.
ಪ್ರಾಜ್ಞರು ದಶರಥನ ಹೆಂಡತಿಯರನ್ನು ಮೂರು ಗುಣಗಳ ರೂಪವೆಂದು ಪರಾಮರ್ಶಿಸುತ್ತಾರೆ. ಅದರಲ್ಲಿ ಹಿರಿಯಾಕೆಯಾದ ಕೌಸಲ್ಯೆ ರಾಜಸಗುಣಯುತಳು ಎಂಬುದು ಹಿರಿಯರ ಅಭಿಪ್ರಾಯ. ಅವಳ ಮಾತಿನ ರೀತಿ ಮತ್ತು ಅವಳ ಜೀವನ ಶೈಲಿ, ರಾಜಸತನವನ್ನು ತೋರಿಸುತ್ತದೆ ಎಂಬುದನ್ನು ಇಲ್ಲಿ ಗ್ರಹಿಸಬಹುದು. ಪುರಾಣದ ಉಲ್ಲೇಖಗಳ ಪ್ರಕಾರ ಕಶ್ಯಪ-ಅದಿತಿಯರು, ದಶರಥ-ಕೌಸಲ್ಯೇಯರಾಗಿ ಜನಿಸಿದರು ಎಂಬುದು ತಿಳಿದು ಬರುತ್ತದೆ. ಕೌಸಲ್ಯೆ ಅದಿತಿ ದೇವಿಯ ಇನ್ನೊಂದು ಜನ್ಮ ಎಂಬುದು ಪ್ರತೀತಿ.
ಕೌಸಲ್ಯೆಯ ಪಾತ್ರವನ್ನು ಗಮನಿಸುವಾಗ ಹಲವಾರು ವಿಷಯಗಳು ನಮಗೆ ಕಂಡುಬರುತ್ತದೆ. ಶ್ರೀ ರಾಮನಿಗೆ ಪಟ್ಟಕಟ್ಟುವ ವಿಷಯ ನಿರ್ಣಯವಾದಾಗ ಕೌಸಲ್ಯೆಯ ಸಂತೋಷ ಹೇಳತೀರದು. ತಾಯಿಯಾಗಿ ಅದು ಸಹಜವೇ ಆಗಿತ್ತು. ಆದರೆ ಆ ಕಾಲದಲ್ಲಿ ಅವಳಲ್ಲಿ ಇದ್ದ ಅಹಂಕಾರವೂ ಸ್ವಲ್ಪ ಜಾಗ್ರತವಾಗಿತ್ತು. ತನ್ನ ಅಂತಃಪುರದ ಮುಂಭಾಗದಲ್ಲಿ ಆಕೆ ಅಯೋಧ್ಯೆಯ ಜನರಿಗೆಲ್ಲ ಲೆಕ್ಕವಿಲ್ಲದಷ್ಟು ವಸ್ತ್ರಗಳನ್ನು, ಮುತ್ತರತ್ನವೇ ಮೊದಲಾದ ಸುವಸ್ತುಗಳನ್ನು ಮೊಗೆಮೊಗೆದು ದಾನ ಮಾಡಲು ಆರಂಭಿಸಿದಳು. ತನ್ನ ಸಖಿಯರಿಗೆಲ್ಲ ವಿಶೇಷವಾದ ಬಹುಮಾನವನ್ನು ನೀಡಿದಳು. ಅವಳ ಈ ದಾನದ ಪ್ರದರ್ಶನ ಅವಳಲ್ಲಿ ಇದ್ದ ರಾಜಸಗುಣಗಳಲ್ಲಿ ಒಂದಾದ ಪ್ರಚಾರ ಪ್ರಿಯತೆಯನ್ನು ತೋರಿಸುತ್ತದೆ.

ರಾಮ ವನವಾಸಕ್ಕೆ ಹೊರಡುವ ಸಂದರ್ಭದಲ್ಲಿ ತಾಯಿಗೆ ಅದನ್ನು ತಿಳಿಸಿ ಹೋಗಲು, ಆಕೆಯ ಅಂತಃಪುರಕ್ಕೆ ಬರುತ್ತಾನೆ. ನಾನಾ ವಿಧವಾದ ಪೂಜೆಯನ್ನು ಮಾಡಿಸುತ್ತಿರುವ ತಾಯಿಗೆ ತಲೆಬಾಗಿ ವಿಷಯವನ್ನು ವಿವರಿಸುತ್ತಾನೆ. ಅದನ್ನು ಕೇಳಿ ನೊಂದ ಕೌಸಲ್ಯೆ ದಶರಥನಿಗೂ ಕೈಕೇಯಿಗೂ ಶಪಿಸುತ್ತಾಳೆ. ನೆಲಕ್ಕೆ ಬಿದ್ದು ಹೊರಳಾಡಿ ಗೋಳಿಡುತ್ತಾಳೆ. ಆಗ ಲಕ್ಷ್ಮಣನು ಕೈಕೇಯಿಯನ್ನು ಸರೆಮನೆಗೆ ಕಳುಹಿಸುವೆನೆಂದು ಆರ್ಭಟ ಮಾಡುತ್ತಾನೆ. ಕೌಸಲ್ಯೆಯೂ ಪರಿಯರಿಯಾಗಿ ಹೇಳಿದರೂ ಸಹ ರಾಮನು ತನ್ನ ನಿರ್ಧಾರವನ್ನು ಬದಲಿಸಲು ಒಪ್ಪುವುದಿಲ್ಲ. ಕೌಸಲ್ಯೆಯನ್ನು ನಾನಾ ವಿಧವಾಗಿ ಸಂತೈಸಿ ಅವಳಿಂದ ರಾಮನು ಒಪ್ಪಿಗೆಯನ್ನು ಪಡೆಯುತ್ತಾನೆ.
ತನ್ನ ಮಗನಾದ ರಾಮನು ಕಾಡಿಗೆ ಹೊರಟಾಗ, ಅದಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿ ಅವನನ್ನು ಆಶೀರ್ವಾದ ಮಾಡುತ್ತಾಳೆ. ಕೌಸಲ್ಯೆಯು ದಶರಥನಿಗಿಂತ ರಾಮನನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಸಂಸ್ಕಾರಗಳಿಂದ ಬೆಳೆಸಿದ್ದಳು ಎಂಬುದು ಇದರಿಂದ ತಿಳಿಯುತ್ತದೆ. ಇದೇ ಕಾರಣಕ್ಕಾಗಿಯೋ ಏನೋ, ಯಜ್ಞರಕ್ಷಣೆಯ ಸಮಯದಲ್ಲಿ ರಾಮನನ್ನು ವಿಶ್ವಾಮಿತ್ರರು “ಕೌಸಲ್ಯಾ ಸುಪ್ರಜಾ ರಾಮ” ಎಂಬುದಾಗಿ ಸಂಬೋಧಿಸಿದ್ದರು. ಇಲ್ಲಿ ರಾಮನು ಸುಪ್ರಜೆ, ಎಂದರೆ ಉತ್ತಮ ವ್ಯಕ್ತಿತ್ವವನ್ನು ಹೊಂದಿದ ಮನುಷ್ಯನಾಗಲು ಕೌಸಲ್ಯೆಯೇ ಪ್ರಧಾನ ಕಾರಣ ಎಂಬುದು ದೃಢವಾಗುತ್ತದೆ.
ಪ್ರಸಕ್ತ ರಾಮನ ವನಗಮನದ ಸಂದರ್ಭದಲ್ಲಿಯೂ ಅವನು ಕೌಸಲ್ಯೆಯ ಆಶೀರ್ವಾದ ಅಥವಾ ಹಾರೈಕೆಯು ಅವಳಲ್ಲಿ ಇರುವ ರಾಜಸಗುಣಯುತವಾದ ಕ್ಷತ್ರಿಯ ಮಾತೆಯ ಲಕ್ಷಣಗಳನ್ನು ತೋರ್ಪಡಿಸುತ್ತವೆ.
ಜೋರಾಗಿ ಕಣ್ಣೀರಿಡುತ್ತಿದ್ದ ಕೌಸಲ್ಯೆ ಅಳವುದನ್ನು ನಿಲ್ಲಿಸಿ, ಮುಖವನ್ನು ತೊಳೆದು, ಆಚಮನವನ್ನು ಮಾಡಿ, ತನ್ನ ಮಗನಾದ ರಾಮನಿಗೆ ಹೇಳುತ್ತಾಳೆ. “ರಾಮ! ನಿನ್ನ ನಿರ್ಣಯವನ್ನು ಬದಲಿಸುವ ಶಕ್ತಿ ನನಗಿಲ್ಲ. ನಿನ್ನ ಸಮಯ ಮುಗಿದ ತಕ್ಷಣ ಹಿಂದಿರುಗಿ ಬಾ. ಈ ಹಿಂದೆ ನೀನು ಯಾವೆಲ್ಲ ಧರ್ಮವನ್ನು ಪಾಲಿಸಿರುವೆಯೂ ಅದೆಲ್ಲವನ್ನು ನೀನು ಪಾಲಿಸು. ಎಲ್ಲ ದಿಕ್ಪಾಲಕ ದೇವತೆಗಳು, ಅರಣ್ಯದ ದೇವತೆಗಳು, ಪಿತೃದೇವತೆಗಳು, ನಕ್ಷತ್ರ ದೇವತೆಗಳು, ಗ್ರಹದೇವತೆಗಳು, ಋಷಿಗಳು, ಸಿದ್ಧಪುರುಷರು ನಿನ್ನನ್ನು ಕಾಡಿನಲ್ಲಿ ರಕ್ಷಿಸಲಿ. ಕಾಡಿಯ ಯಾವ ಕ್ರೂರ ಮೃಗಗಳೂ ನಿನ್ನನ್ನು ಏನೂ ಮಾಡದಿರಲಿ. ವೃತ್ರಾಸುರನ ಸಂಹಾರಕ್ಕೆ ಹೊರಟ ಇಂದ್ರನಿಗೆ ಹೇಗೆ ಶುಭವಾಯಿತೋ, ಗರುಡನು ಅಮೃತವನ್ನು ತರಲು ಹೊರಟಾಗ ಅವನ ತಾಯಿ ಹೇಗೆ ಮಂಗಳವನ್ನು ಪ್ರಾರ್ಥಿಸಿದಳೋ, ನಿನಗೆ ಯಾವ ತೊಂದರೆಯೂ ಆಗದಿರಲಿ" ಎಂದು ಮಂತ್ರಾಕ್ಷತೆಯನ್ನು ರಾಮನ ತಲೆಯ ಮೇಲೆ ಹಾಕಿ ಆಶೀರ್ವತಿಸಿದಳು. "ವನವಾಸವನ್ನು ಮುಗಿಸಿ ಬಂದಮೇಲೆ ನೀನು ಈ ಅಯೋಧ್ಯೆಯ ಸಿಂಹಾಸನದ ಮೇಲೆ ಕುಳಿತ ದೃಶ್ಯವನ್ನು ನಾನು ನೋಡಬೇಕು. ಆದ್ದರಿಂದ ಅವಧಿ ಮುಗಿದ ತಕ್ಷಣ ಬಾ.” ಎಂದು ಹೇಳುತ್ತಾಳೆ.
ಇಲ್ಲಿಯ ಮಾತೆಯ ಮಮತೆಯೂ ಇದೆ. ದೈವಭಕ್ತಿಯೂ ಇದೆ. ಕರ್ತವ್ಯಪ್ರಜ್ಞೆಯೂ ಇದೆ. ಕೌಸಲ್ಯೆ ನೇರವಾಗಿ ದಶರಥನಲ್ಲಿಯೇ ಹೋಗಿ, 'ತಾನು ಹೇಳುತ್ತೇನೆ ರಾಮನ್ನು ಕಳುಹಿಸಬೇಡಿ' ಎನ್ನಬಹುದಿತ್ತು. ಆದರೆ ಆಕೆ ಆ ಕಾರ್ಯವನ್ನು ಮಾಡಲಿಲ್ಲ. ಇದು ಅವಳ ಕರ್ತವ್ಯ ಪ್ರಜ್ಞೆಯನ್ನು ಮತ್ತು ರಾಜಸಗುಣ ಭೂಯಿಷ್ಠವಾದ ಕ್ಷಾತ್ರಗುಣವನ್ನು ತೋರಿಸುತ್ತದೆ. ಅಯೋಧ್ಯೆಯಲ್ಲಿ ನಿರ್ಮಾಣವಾದ ಸನ್ನಿವೇಶದ ಸಂದಿಗ್ಧತೆಗೆ ರಾಮನ ವನಗಮನವೊಂದೇ ದಾರಿ ಎಂಬುದನ್ನು ಅವಳು ಅರಿತಿದ್ದಳು ಎಂಬುದು ಸ್ಪಷ್ಟ. ಅವಳು ದೇವತೆಗಳಲ್ಲಿ ಪ್ರಾರ್ಥಿಸಿದ್ದಷ್ಟೇ ಅಲ್ಲ, ಆಗ್ರಹಿಸಿದಳು.
ಅದನ್ನು ಕವಿ ಕುವೆಂಪು, ರಾಮಾಯಣ ದರ್ಶನಂ ನಲ್ಲಿ ಅದ್ಭುತವಾಗಿ ಬರೆಯುತ್ತಾರೆ.
“ಹೇ ಕಾಂತಾರದೇವಿಯರೆ, ಕಂದನಡವಿಯೊಳ್ ಪುತ್ತಿನೆಡೆ ಪವಡಿಸಿರೆ, ಮತ್ತೆ ಮರಗಳ ಕೆಳಗೆ ತಂಪು ನೆಳಲೊಳ್ ಮಲಗಿರಲ್ಕೆ! ಓ ಸಿಡಿಲ್ಮಿಂಚು ಬಿರುಗಾಳಿಗಳೆ, ಕೇಳಿಮ್, ಹೆತ್ತು ಹೊರೆದೀ ಹೃದಯದಭಿಶಾಪ ನಿಮಗಕ್ಕು, ಹಸುಳೇ ರಾಮಂಗೆ ನಿಮ್ಮ ಕತದಿಂದೆ ಭವಿಸಿದಡೆ ಕೇಡು!”
'ಓ ಅರಣ್ಯ ದೇವತೆಗಳೇ ರಾಮನಿಗೆ ಏನಾದರೂ ಕಾಡಿನಲ್ಲಿ ತೊಂದರೆಯಾದರೆ, ಈ ತಾಯಿಯ ಶಾಪ ನಿಮಗೆ ತಟ್ಟೀತು ಎಚ್ಚರ', ಎಂಬ ಆಗ್ರಹವನ್ನು ಕೌಸಲ್ಯೆ ಮಾಡುತ್ತಾಳೆ.
ಒಟ್ಟಾರೆಯಾಗಿ ಎಲ್ಲವೂ ಇದ್ದರೂ ಎಲ್ಲದರಿಂದಲೂ ವಂಚಿತೆಯಾಗಿ, ಜೀವನವಿಡೀ ಮರುಗುತ್ತ ಕಳೆದ ಜೀವ ಈ ಕೌಸಲ್ಯೆ. ಕೊನೆಯಲ್ಲಿ ರಾಮನ ಪಟ್ಟಾಭಿಷೇಕದ ಸಮಯದಲ್ಲಿ ಕೌಸಲ್ಯೆ ಇದ್ದರೂ ಸಹ ಪತಿವಿಯೋಗವನ್ನು, ಪುತ್ರವಿಯೋಗವನ್ನು ಒಮ್ಮೆಲೆ ಅನುಭವಿಸಿದ ನತದೃಷ್ಟಳು ಅವಳು. ಪತಿ ವಿಯೋಗದ ಸಮಯದಲ್ಲಿ ಕೈಕೇಯಿಗೆ ಭರತನಿದ್ದ, ಸುಮಿತ್ರೆಗೆ ಶತ್ರುಘ್ನನಿದ್ದ. ಆದರೆ ಕೌಸಲ್ಯೆ ಏಕಾಂಗಿಯಾದಳು. ಎಲ್ಲವನ್ನೂ ಸಹಿಸಿ ಜೀವಿಸಿದ ಅವಳ ಜೀವನವೊಂದು ಆದರ್ಶ ಜೀವನವೇ ಆಯಿತು.
ಇದು ಭಗವಂತನ ಅವತಾರಕ್ಕೆ ತನ್ನ ಗರ್ಭಪಾತ್ರವನ್ನೇ ಸಮರ್ಪಿಸಿದ ಕೌಸಲ್ಯೆಯೆಂಬ ಪಾತ್ರದ ಚಿತ್ರಣ.








Comments