ಪುತ್ರಕಾಮೇಷ್ಟಿ (ರಾಮಾಯಣ ಸಂಚಿಕೆ - ೧)
- Ganapati Hegde Moodkani
- May 27
- 2 min read
ಉಪಕಾರ ಸ್ಮರಣೆಯುಳ್ಳವರೂ, ದಾನಶೀಲರೂ, ಸ್ವಕರ್ಮ ಶೂರರೂ, ಕಷ್ಟ ಸಹಿಷ್ಣುಗಳೂ, ಸತ್ಯ ಧರ್ಮ ಪಾಲಕರೂ ಆಗಿರುವ ಪ್ರಜೆಗಳು, ದೀರ್ಘದರ್ಶಿಯೂ, ಜೀತೇಂದ್ರಿಯನೂ, ಧರ್ಮಾತ್ಮನೂ, ಮಹಾಪ್ರತಾಪಿಯೂ ಪ್ರಜೆಗಳಿಗೆ ಅತಿ ಪ್ರಿಯನೂ ಆದ ರಾಜನನ್ನು ಹೊಂದಿರುವ ಸಾಮ್ರಾಜ್ಯವೇ ಅಯೋಧ್ಯಾ ಸಾಮ್ರಾಜ್ಯ.
ಈ ಅಯೋಧ್ಯಾನಗರಿಯನ್ನು ದೇವೇಂದ್ರನಿಗೆ ಸಮಾನವಾದ ದಶರಥನು ಆಳುತ್ತಿದ್ದನು. ಇಕ್ಷ್ವಾಕು ವಂಶೋತ್ಪನ್ನನಾದ ಇವನು ಹತ್ತು ಸಾವಿರ ಮಹಾರಥರೊಡನೆ ಇತರರ ಸಹಾಯವಿಲ್ಲದೇ ಯುದ್ಧ ಮಾಡುತ್ತಿದ್ದುದರಿಂದ ಅತಿರಥನೆನಿಸಿಕೊಂಡಿದ್ದನು. ಇವನಿಗೆ ಮಂತ್ರಾಲೋಚನೆಯಲ್ಲಿ ಸಮರ್ಥರಾದ ಕಾರ್ಯವಿಚಾರ ಪರರಾದ ಮತ್ತು ಪರರ ಮನಸಿನಲ್ಲಿರುವುದನ್ನು ಮುಖಭಾವದಿಂದಲೇ ತಿಳಿಯುವ ಸಾಮರ್ಥ್ಯವುಳ್ಳವರಾದ ದೃಷ್ಟಿ, ಜಯಂತ, ವಿಜಯ, ಸಿದ್ದಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರರೆಂಬ ಎಂಟು ಮಂದಿ ಮಂತ್ರಿಗಳಿದ್ದರು, ಋಷಿ ಸತ್ತಮರಾದ ವಸಿಷ್ಠ - ವಾಮದೇವರು ಮುಖ್ಯ ಪುರೋಹಿತರಾದರೆ ಮಂತ್ರಜ್ಞರಾದ ಸುಯಜ್ಞ, ಜಾಬಾಲಿ, ಕಾಶ್ಯಪ, ಗೌತಮ, ಚಿರಾಯುವಾದ ಮಾರ್ಕಂಡೇಯ, ಕಾತ್ಯಾಯನ ಮೊದಲಾದ ಬ್ರಹ್ಮನಿಷ್ಠರು ಯಜ್ಞಕರ್ಮಗಳ ಯತ್ವಿಜರಾಗಿದ್ದರು.
ಇಂತಹ ಸಕಲಗುಣ ಸಂಪನ್ನರಾದ ಅಮಾತ್ಯಶ್ರೇಷ್ಠರೂ, ಜೇಷ್ಠರೂ, ಶ್ರೆಷ್ಠರೂ ಆದ ಋಷಿ ವರ್ಗಗಳಿಂದ ಕೂಡಿದವನಾದ ದಶರಥ ರಾಜನು ವ್ಯಸನರಹಿತನಾಗಿ ರಾಜ್ಯವಾಳುತ್ತಿದ್ದನು, ಸರ್ವಲೋಕದಲ್ಲಿಯೂ ದಾನಶೀಲನೆಂದೂ, ಸತ್ಯ ಪ್ರತಿಜ್ಞನೆಂದೂ ಪ್ರಸಿದ್ಧನಾಗಿದ್ದನು. ದಶರಥನಿಗೆ ಸಮಾನಬಲವಿರುವ ಅಥವಾ ಅವನನ್ನು ಅತಿಶಯಿಸಿರುವ ಶತ್ರುವು ಯಾರೂ ಇರಲಿಲ್ಲ. ಆದರೂ ಅವನಿಗೊಂದು ದೊಡ್ಡ ಚಿಂತೆಯಿತ್ತು. ಪ್ರಭಾವಶಾಲಿಯೂ, ಧರ್ಮಜ್ಞನೂ, ಮಹಾತ್ಮನೂ ಆದ ಪುತ್ರ ಸಂತಾನಕ್ಕಾಗಿ ಹಂಬಲಿಸುತ್ತಾ ಅದು ಆಗದೇ ಇದ್ದುದರಿಂದ ಪರಿತಪಿಸುತ್ತಿದ್ದ ದಶರಥನಿಗೆ ವಂಶದ ಅಭಿವೃದ್ಧಿಗೆ ಕಾರಣಭೂತನಾದ ಒಬ್ಬ ಮಗನೂ ಹುಟ್ಟಿರಲಿಲ್ಲ. ದೈವಾನುಗ್ರಹದಿಂದಲಾದರೂ ಮಕ್ಕಳನ್ನು ಪಡೆಯಬೇಕೆಂದು ನಿಶ್ಚಯಿಸಿ ಮಂತ್ರಿ ಸುಮಂತ್ರ ಹಾಗೂ ಗುರುಗಳಾದ ವಶಿಷ್ಠರೊಡನೆ ಚರ್ಚಿಸಿ ಮಕ್ಕಳನ್ನು ಪಡೆಯಲು ಸಂಕಲ್ಪಿಸಿ ಅಶ್ವಮೇಧ ಯಾಗವನ್ನು ಮಾಡಲು ತೀರ್ಮಾನಿಸಿದನು.
ದಶರಥನು ತನ್ನ ಹೆಂಡಂದಿರ ಬಳಿ ಬಂದು ಪುತ್ರ ಪ್ರಾಪ್ತಿಗಾಗಿ ಅಶ್ವಮೇಧ ಯಜ್ಞ ಮಾಡಲು ನಿಶ್ಚಯಿಸಿರುವುದಾಗಿಯೂ ಮೂವರೂ ಪತ್ನಿಯರು ಯಜ್ಞದೀಕ್ಷೆ ಕೈಗೊಳ್ಳಬೇಕಾಗಿಯೂ ತಿಳಿಸಿದಾಗ ಸುಮುಖಿಯರಾದ ಅವರ ಮುಖಕಮಲಗಳು ಹಿಮಕಾಲವು ಕಳೆದ ಮೇಲೆ ಅರಳುವ ಕಮಲಗಳಂತೆ ಅರಳಿ ಕಂಗೊಳಿಸಿದವು.
ಈ ಸಂದರ್ಭದಲ್ಲಿ ಮಂತ್ರಿ ಸುಮಂತ್ರನು ದಶರಥನಿಗೆ ರೋಮಪಾದನನ್ನು, ಋಷ್ಯಶೃಂಗನನ್ನು ಹೇಗೆ ಕಾಡಿನಿಂದ ತನ್ನ ನಗರಕ್ಕೆ ಕರೆತರುವ ಮೂಲಕ ಅಂಗದೇಶದಲ್ಲಿ ಮಳೆಯನ್ನು ಸುರಿಸಿ ಜಗತ್ತಿಗೇ ಹೇಗೆ ಆಹ್ಲಾದವನ್ನುಂಟು ಮಾಡಿದನು ಎಂಬುದನ್ನು ಹಾಗೂ ಋಷ್ಯಶೃಂಗನನ್ನು ಈ ಯಾಗಕ್ಕೆ ಕರೆತಂದಿದ್ದೇ ಆದರೆ ಪುತ್ರಪ್ರಾಪ್ತಿ ಆಗುವುದು ಶತಸಿದ್ಧ ಎಂಬುದಾಗಿ ತಿಳಿಸಿದನು. ಸುಮಂತ್ರನಿಂದ ಋಷ್ಯ ಶೃಂಗನ ಮಹಿಮೆಯನ್ನು ಕೇಳಿ ದಶರಥನು ಸಪರಿವಾರನಾಗಿ ಅಂಗದೇಶಕ್ಕೆ ಹೋಗಿ ಅವರನ್ನು ಕರೆತಂದನು.
ಒಡನೆಯೇ, ಋಷ್ಯಶೃಂಗರು ದಶರಥನಿಗೆ ಮಕ್ಕಳಾಗಬೇಕೆನ್ನುವ ಕಾರಣದಿಂದ ಪುತ್ರಪ್ರಾಪ್ತಿಗೆ ಕಾರಣಭೂತವಾದ ಪುತ್ರಕಾಮೇಷ್ಟಿಯನ್ನು ಪ್ರಾರಂಭಿಸಿದರು.
ಇದೇ ಸಂದರ್ಭದಲ್ಲಿ ಬ್ರಹ್ಮದೇವನಿಂದ ದೇವತೆಗಳಿಂದ ಅವಧ್ಯನೆಂಬ ವರವನ್ನು ಪಡೆದು ಕೊಬ್ಬಿರುವ ರಾವಣನೆಂಬ ರಾಕ್ಷಸನು ದೇವತೆಗಳನ್ನು ಪೀಡಿಸಲು ಪ್ರಾರಂಭಿಸಿದ್ದು ದೇವತೆಗಳೆಲ್ಲ ಬ್ರಹ್ಮದೇವನಲ್ಲಿಗೆ ಬಂದು ತಮ್ಮ ಅಳಲನ್ನು ತೋಡಿಕೊಂಡರು. ಆಗ ಬ್ರಹ್ಮದೇವನು ಮಾನವರ ವಿಷಯದಲ್ಲಿ ರಾವಣನಿಗಿದ್ದ ಅನಾದರಣೆಯ ಕಾರಣದಿಂದಾಗಿ ಅವನು ಮಾನವರಿಂದ ಮೃತ್ಯುವುಂಟಾಗದಿರಲೆಂಬ ವರವನ್ನು ಕೇಳಲಿಲ್ಲ. ಆದುದರಿಂದ ಅವನು ಮಾನವನಿಂದಲೇ ವಧ್ಯವಾಗಬೇಕಾಗಿದೆ. ಬೇರಾರೂ ಅವನನ್ನು ಸಂಹರಿಸಲು ಸಾಧ್ಯವಿಲ್ಲ ಎಂಬ ಪ್ರಿಯ ವಾಣಿಯನ್ನು ಕೇಳಿ ದೇವ, ಗಂಧರ್ವ, ಯಕ್ಷರೂ, ಮಹರ್ಷಿಗಳೂ ಸಂತುಷ್ಟರಾದರು.
ಅಲ್ಲಿಂದ ನೇರವಾಗಿ ಮಹಾವಿಷ್ಣುವನ್ನು ಸಂದರ್ಶಿಸಿ "ವಿಭುವೇ, ಅಯೋಧ್ಯಾ ಪತಿಯಾದ ದಶರಥನ ಮಡದಿಯರಾದ ದಕ್ಷಕನ್ಯೆಯರಾದ ಶ್ರೀ, ಶ್ರೀ ಕೀರ್ತಿ ಇವರನ್ನು ಹೋಲುವ ಕೌಸಲ್ಯ, ಕೈಕೇಯಿ, ಸುಮಿತ್ರೆಯರಲ್ಲಿ ಜನಿಸು. ಬ್ರಹ್ಮನ ವರಪ್ರಸಾದದಿಂದ ಬಲಿಷ್ಠನಾಗಿರುವ ಮತ್ತು ಆ ಕಾರಣದಿಂದಲೇ ದೇವತೆಗಳಿಂದಲೂ ಅವಧ್ಯನಾಗಿರುವ ಲೋಕಕಂಟಕನಾಗಿರುವ ರಾವಣನನ್ನು ಸಂಹರಿಸು" ಎಂದು ಬೇಡಿಕೊಂಡರು. ಆತ್ಮಸ್ವರೂಪನಾದ ಮಹಾವಿಷ್ಣುವು ದೇವತೆಗಳಿಗೆ ನಿಶ್ಚಿಂತರಾಗಿರುವಂತೆ ವರದಾನ ನೀಡಿ ಮನುಷ್ಯ ಲೋಕದಲ್ಲಿ ತನ್ನ ಜನ್ಮಸ್ಥಾನದ ಕುರಿತು ಚಿಂತಿಸಿ ತನ್ನ ಆತ್ಮವನ್ನು ನಾಲ್ಕು ವಿಧಗಳಾಗಿ ಪರಿವರ್ತಿಸಿ ದಶರಥ ಮಹಾರಾಜನನ್ನು ತನ್ನ ತಂದೆಯನ್ನಾಗಿ ಮಾಡಿಕೊಳ್ಳಲು ಬಯಸಿದನು.

ಹಿಂದೆಯೇ ತಿಳಿಸಿದಂತೆ ಅಪುತ್ರವಂತನಾದ ದಶರಥನು ಪುತ್ರಕಾಮೇಷ್ಟಿ ಯಾಗವನ್ನು ಮಾಡುತ್ತಿದ್ದನು. ಪೂರ್ಣಾಹುತಿಯೂ ಆಯಿತು. ಆಗ ಯಜ್ಞಕುಂಡದ ಮಧ್ಯಭಾಗದಿಂದ ಮಹಾಪುರುಷನೊಬ್ಬನು ಪ್ರಾದುರ್ಭವಿಸಿದನು. ಆ ದಿವ್ಯ ಪುರುಷನು ದಿವ್ಯ ಪಾಯಸವನ್ನು ಹೊಂದಿರುವ ಪಾತ್ರೆಯೊಂದನ್ನು ದಶರಥನಿಗೆ ನೀಡಿ "ಮಹಾರಾಜ ಅಶ್ವಮೇಧ, ಪುತ್ರಕಾಮೇಷ್ಟಿ ಮೊದಲಾದ ಯಜ್ಞಗಳಿಂದ ದೇವತೆಗಳನ್ನು ಆರಾಧಿಸಿರುವುದಕ್ಕೆ ಫಲರೂಪವಾಗಿ ಇಂದು ನಿನಗೆ ಈ ದಿವ್ಯ ಪಾಯಸವು ದೊರಕಿದೆ. ಇದನ್ನು ಸ್ವೀಕರಿಸು. ನಿನ್ನ ಪತ್ನಿಯರಿಗೆ ಈ ಪಾಯಸವನ್ನು ಕೊಡು. ಯಾವ ಫಲಕ್ಕಾಗಿ ನೀನು ಈ ಯಜ್ಞವನ್ನು ಮಾಡಿರುವೆಯೋ ಆ ಪುತ್ರರೂಪ ಫಲಪ್ರಾಪ್ತಿಯು ಈ ಪಾಯಸದಿಂದ ನಿನಗುಂಟಾಗುತ್ತದೆ. ಈ ದಿವ್ಯ ಪಾಯಸವನ್ನು ಭುಂಜಿಸಿದ ಪತ್ನಿಯರಲ್ಲಿ ನೀನು ಪುತ್ರರನ್ನು ಪಡೆಯುವೆ" ಎಂದು ಹರಸಿದನು.
ಪಾಯಸ ಪ್ರಾಪ್ತಿಯಿಂದ ಪರಮಸಂತುಷ್ಟನಾದ ದಶರಥನು ದಿವ್ಯ ಪಾಯಸವನ್ನು ತನ್ನ ಮೂವರೂ ಪತ್ನಿಯರಿಗೂ ವಿಭಾಗಿಸಿಕೊಟ್ಟನು. ಪಾಯಸವನ್ನು ಸ್ವೀಕರಿಸಿದ ಕೌಸಲ್ಯ, ಸುಮಿತ್ರಾ, ಕೈಕೆಯಿಯರು ಹರ್ಷಭರಿತರಾಗಿ ತಾವು ಸನ್ಮಾನಿತರಾದೆವೆಂದು ಭಾವಿಸಿದರು ಹಾಗೂ ಸ್ವಲ್ಪ ಕಾಲದಲ್ಲಿಯೇ ಮೂವರೂ ಗರ್ಭಿಣಿಯರಾದರು.
ಅಶ್ವಮೇಧಯಾಗವಾದ ಹನ್ನೆರಡು ಮಾಸಗಳು ಕಳೆದ ನಂತರ ಚೈತ್ರಶುದ್ಧ ನವಮಿಯ ದಿನ ಪುನರ್ವಸು ನಕ್ಷತ್ರದಲ್ಲಿ ಐದು ಗ್ರಹಗಳು ಉಚ್ಛಸ್ಥಾನದಲ್ಲಿರುವಾಗ ಚಂದ್ರ ಸಮೇತನಾಗಿ ಬೃಹಸ್ಪತಿಯು ವಿಜೃಂಭಿಸುತ್ತಿರಲಾಗಿ ಸರ್ವಲೋಕ ನಮಸ್ಕೃತನೂ ಜಗನ್ನಾಯಕನೂ ಸರ್ವಲಕ್ಷಣ ಸಂಪನ್ನನೂ ಆಗಿದ್ದ, ಇಕ್ಷ್ವಾಕು ಕುಲ ವರ್ಧನನಾದ ವಿಷ್ಣುವಿನ ಅರ್ಧಾಂಶದಿಂದ ಕೂಡಿದ್ದ ಮಹಾಭಾಗನಾದ ಮಹಾಪುರುಷನನ್ನು ಕೌಸಲ್ಯಾದೇವಿಯು ಪ್ರಸವಿಸಿದಳು. ಸಾಕ್ಷಾದ್ವಿಷ್ಣುವಿನ ನಾಲ್ಕನೇ ಒಂದು ಅಂಶದಿಂದ ಕೂಡಿ ಸಕಲ ಕಲ್ಯಾಣಗುಣ ಸಂಪನ್ನನಾದ, ಸತ್ಯ ಪರಾಕ್ರಮನಾದ ರಾಜಪುತ್ರನು ಕೈಕೇಯಿಯಲ್ಲಿ ಹುಟ್ಟಿದನು. ಸರ್ವಾಸ್ತ್ರ ಕುಶಲರಾದ, ವೀರರಾದ ವಿಷ್ಣುವಿನ ಅರ್ಧಾಂಶ ಸಮನ್ವಿತರಾದ ಯಮಳರನ್ನು ಸುಮಿತ್ರಾದೇವಿಯು ಪ್ರಸವಿಸಿದಳು.
ಮಹಾಮಹಿಮರಾದ ಮಕ್ಕಳು ಹುಟ್ಟಿದ ಕಾಲದಲ್ಲಿ ಗಂಧರ್ವರು ಮಧುರವಾಗಿ ಗಾಯನ ಮಾಡಿದರು. ಅಪ್ಸರೆಯರು ನರ್ತನ ಮಾಡಿದರು. ದೇವದುಂದುಭಿಗಳು ಮೊಳಗಿದವು. ಆಕಾಶದಿಂದ ಪುಷ್ಪವೃಷ್ಟಿಯಾಯಿತು. ಅಯೋಧ್ಯಾ ಪಟ್ಟಣದಲ್ಲಿಯೂ ಜನರು ಆನಂದಭರಿತರಾಗಿ ಮನೆಗಳಲ್ಲಿ ಉತ್ಸವವನ್ನು ನಡೆಸಿದರು.
ಪರಮಪ್ರೀತರಾದ ವಸಿಷ್ಠರು ಮಹಾತ್ಮನಾದ ಹಿರಿಯಮಗನಿಗೆ ರಾಮನೆಂದೂ, ಕೈಕೇಯಿಯ ಮಗನಿಗೆ ಭರತನೆಂದೂ, ಸುಮಿತ್ರೆಯ ಮಕ್ಕಳಿಗೆ ಲಕ್ಷ್ಮಣ, ಶತ್ರುಘ್ನರೆಂದೂ ಹೆಸರುಗಳನ್ನಿಟ್ಟರು.
ಉತ್ತಮ ಬರಹ
IT IS VERY HELPFUL