top of page

ದಶರಥ


ರಾಮಾಯಣಕ್ಕೆ ಕಾರಣವೆನಿಸಿದ ಅಂಶಗಳು ಹಲವು...ಅದೆಲ್ಲದರಲ್ಲಿಯೂ ಅತ್ಯಂತ ಮುಖ್ಯವೆನಿಸಿದ ಅಂಶವೆಂದರೆ ಅದು ಅಧರ್ಮದ ನಾಶ ಹಾಗೂ ಧರ್ಮದ ಸ್ಥಾಪನೆ. ಒಬ್ಬ ಧರ್ಮ ಪುರುಷನ ಜೀವನದ ಕಥೆಯೇ ಲೋಕಕ್ಕೆ ಅತ್ಯಂತ ಶ್ರೇಷ್ಠವಾದ ಧರ್ಮದ ಪಾಠವಾಗುತ್ತದೆ. ಶ್ರೇಷ್ಠರಾದವರು ಹೇಗೆ ನಡೆಯುತ್ತಾರೋ ಅದು ಉಳಿದವರಿಗೆ ಮಾದರಿಯಾಗುತ್ತದೆ. ಆನೆಯೊಂದು ನಡೆದು ಸಾಗಿದರೆ ಅಲ್ಲಿ ಮಾರ್ಗ ತಾನಾಗಿಯೇ ನಿರ್ಮಾಣವಾಗುತ್ತದೆ.
ದಶರಥ
ದಶರಥ

ರಾಜನ ಆದೇಶವನ್ನು ಹಾಗೂ ರಾಜನ ಜೀವನದ ಒಂದೊಂದು ಹೆಜ್ಜೆಯನ್ನು ಅಕ್ಷರಶಃ ಪರಿಪಾಲಿಸುವ ಗುಣವನ್ನು ಮೈಗೂಡಿಸಿಕೊಂಡಿದ್ದ ಸಮಾಜದಲ್ಲಿ ಆ ಜನರು ಧರ್ಮಚ್ಯುತರಾಗಬಾರದು ಎಂದಾದರೆ ರಾಜ ಅತ್ಯಂತ ಧರ್ಮಿಷ್ಠನಾಗಿರಬೇಕು. ತ್ರೇತಾಯುಗದ ಯುಗಧರ್ಮಕ್ಕೆ ಭಗವತ್ಸಂಕಲ್ಪವೇ ಆದಾಗಿತ್ತು. ಜನರು ಧರ್ಮವನ್ನು ಪರಿಪಾಲನೆ ಮಾಡಲು ತನ್ನ ಜೀವನದ ದಾರಿಯನ್ನೇ ಮಾದರಿಯಾಗಿ ತೋರಿಸಲು ಭಗವಂತ ಆಯ್ಕೆ ಮಾಡಿದರ ಅವತಾರವೇ ರಾಮಾವತಾರ. ಈ ರಾಮನ ಜೀವನದ ಧರ್ಮಮಯ ದಾರಿಯೇ ರಾಮಾಯಣ.


ರಾವಣನೆಂಬ ದುಷ್ಟನ ಉಪಟಳವನ್ನು ತಾಳಲಾರದೇ ಇಂದ್ರಾದಿ ದೇವತೆಗಳು ವಿಷ್ಣುವಿನ ಬಳಿಪ್ರ ಪರಿಹಾರಕ್ಕಾಗಿ ಪ್ರಾರ್ಥಿಸಿದಾಗ ಭಗವಂತ ಅದಕ್ಕೆ ಒಪ್ಪಿಗೆಯನ್ನು ಸೂಚಿಸುತ್ತಾನೆ. ಆದರೆ ಅವತಾರದ ಸ್ವರೂಪವೇನು? ಯಾರ ಗರ್ಭದಲ್ಲಿ ಅವತಾರ? ಇದೆಲ್ಲವೂ ನಿರ್ಣಯವಾಗಬೇಕಾದ ಸನ್ನಿವೇಶ..ಸಂಗ್ರಹಿಸಿ ಇಡುವುದು ಅಮೃತವಾದರೆ ಪಾತ್ರೆಯೂ ಯೋಗ್ಯವಾದುದಾಗಿರಬೇಕು. ಭಗವಂತನೇ ಅವತರಿಸುವಾಗ ಆ ಅವತರಣವನ್ನು ಧರಿಸುವ ಪಾತ್ರೆಯೂ ಸತ್ಪಾತ್ರವಾಗಿರಬೇಕು. ಅವತರಣವೆಂದರೆ ಕೆಳಗೆ ಇಳಿಯುವುದು. ಇಲ್ಲಿ ದೇವಲೋಕದಿಂದ ಮನುಷ್ಯಲೋಕಕ್ಕೆ ಕೆಳಗಿಳಿಯುವುದು ಸಾಮಾನ್ಯ ಅರ್ಥವಾದರೂ ದೇವತ್ವದಿಂದ ಮನುಷ್ಯತ್ವಕ್ಕೆ ಇಳಿಯುವುದು ಪ್ರಧಾನ ಅರ್ಥ. ಅವತರಣದಲ್ಲಿ ಎರಡು ವಿಧ. ಪೂರ್ಣಾವತರಣ ಹಾಗೂ ಅಂಶಾವತರಣ. ರಾಮಾವಾತಾರ ಭಗವಂತನ ಪೂರ್ಣಾವತರಣ. ಆ ಭಗವಂತನ ಶಕ್ತಿಯನ್ನು ಧಾರಣೆ ಮಾಡುವ ಮಾತಾಪಿತೃಗಳನ್ನು ಭಗವಂತನೇ ನಿರ್ಣಯಿಸುತ್ತಾನೆ. ಆ ರೀತಿಯಲ್ಲಿ ಭಗವಂತನೇ ಆಯ್ಕೆ ಮಾಡಿದ ತಂದೆ ದಶರಥ.

ಸೂರ್ಯವಂಶದ ಪ್ರಸಿದ್ಧ ದೊರೆ ಅಜ ಮಹಾರಾಜನ ಪುತ್ರ ಈ ದಶರಥ. ಯುದ್ಧಕ್ಕೆ ಸಿದ್ಧನಾಗಿ ರಥವನ್ನು ಏರಿ ಹೊರಟರೆ ದಶ ದಿಕ್ಕುಗಳಲ್ಲಿಯೂ ವೈರಿಗಳನ್ನು ನಿಗ್ರಹಿಸಬಲ್ಲ ಸಾಮರ್ಥ್ಯ ಇರುವುದರಿಂದ ದಶರಥ ಎಂಬ ಹೆಸರು ಅನ್ವರ್ಥವಾಗಿ ಪ್ರಸಿದ್ಧವಾಯಿತು.

ಅವನಿಗೆ ಮೂವರು ಮಡದಿಯರು. ಕೋಸಲ ದೇಶದ ಭಾನುಮಂತನ ಮಗಳು ಕೌಸಲ್ಯಾ, ಸುಮಾತ್ರಾ ದೇಶದ ಶೂರಸೇನನ ಮಗಳು ಸುಮಿತ್ರೆ, ಮತ್ತು ಕೇಕಯ ದೇಶದ ಅಶ್ವಪತಿ ಮಹಾರಾಜನ ಮಗಳು ಕೈಕೆಯೀ ಇವರು ದಶರಥನ ಮಡದಿಯರು.


ಅದೊಂದು ದಿನ ಮೃಗಬೇಟೆಗಾಗಿ ಹೋದ ದಶರಥನು ಸರೋವರದಿಂದ ಬಂದ ಶಬ್ದವನ್ನು ಗ್ರಹಿಸಿ ಮೃಗವೇ ನೀರು ಕುಡಿಯುತ್ತಿದೆ ಎಂದು ಭ್ರಮಿಸಿ ಶಬ್ದವೇದೀ ವಿದ್ಯೆಯಿಂದ ಆ ಕಡೆ ಬಾಣ ಪ್ರಯೋಗ ಮಾಡುತ್ತಾನೆ. ಆದರೆ ಅಲ್ಲಿ ಒಬ್ಬ ಋಷಿಕುಮಾರನು ನೀರನ್ನು ಸರೋವರದಿಂದ ಸ್ವೀಕರಿಸುತ್ತಿದ್ದನು. ಆ ಮುನಿಬಾಲಕನ ಎದೆಗೆ ಬಾಣ ತಾಗಿ ಜೋರಾಗಿ ಕಿರುಚುತ್ತಾನೆ. ಈ ಧ್ವನಿಯನ್ನು ಕೇಳಿ ಅಲ್ಲಿಗೆ ಧಾವಿಸಿ ಬರುತ್ತಾನೆ. ಅಲ್ಲಿ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿರುವ ಆ ಮುನಿಬಾಲಕನು ತಾನು ತಾಂಡವ ಮುನಿಯ ಮಗನೆಂದೂ, ತನ್ನ ತಂದೆ ಹಾಗೂ ತಾಯಿಯರಿಗೆ ಕಣ್ಣು ಕಾಣುವುದಿಲ್ಲವೆಂದೂ, ಅವರನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೊರಟಿರುವೆನೆಂದೂ, ಅವರಿಗೆ ಬಾಯಾರಿಕೆ ಆಗಿದೆ ಅವರಿಗೆ ಈ ನೀರನ್ನು ನೀಡು ಎಂದು ಹೇಳಿ ಅಲ್ಲಿಯೇ ಪ್ರಾಣ ಬಿಟ್ಟನು. ಅವನ ಅಂತ್ಯಸಂಸ್ಕಾರವನ್ನು ಮುಗಿಸಿ ಅಲ್ಲಿಂದ ಅವನ ತಂದೆ- ತಾಯಿಯರಿದ್ದ ಪ್ರದೇಶಕ್ಕೆ ಬಂದು ವಿಷಯ ತಿಳಿಸಿದ ದಶರಥನಿಗೆ ಆ ತಾಂಡವ ಮುನಿಯಿಂದ ಶಾಪ ಪ್ರಾಪ್ತವಾಯಿತು. ಆ ದಂಪತಿಗಳು ಮಗನ ಮರಣದ ವಾರ್ತೆಯನ್ನು ಕೇಳಿ ಪ್ರಾಣ ಬಿಟ್ಟರು. “ನೀನು ಸಹ ಪುತ್ರ ಶೋಕದಿಂದಲೇ ಪ್ರಾಣ ಬಿಡು” ಎಂಬ ತಾಂಡವ ಮುನಿಯ ಶಾಪ ದಶರಥನಿಗೆ ದುಃಖವನ್ನೂ, ಸಂತೋಷವನ್ನು ಉಂಟುಮಾಡಿತು. ತನ್ನ ಮರಣಕಾಲದಲ್ಲಿ ಮಕ್ಕಳು ಹತ್ತಿರದಲ್ಲಿ ಇರಲಾರರು ಎಂಬ ದುಃಖ ಒಂದೆಡೆಯಾದರೆ, ಅನೇಕ ವರ್ಷಗಳವರೆಗೆ ಸಂತಾನ ಪ್ರಾಪ್ತಿ ಆಗದೇ ಇದ್ದ ತನಗೆ ಮಕ್ಕಳು ಜನಿಸುತ್ತಾರೆ, ಎಂಬ ಸಂತಸ ಇನ್ನೊಂದೆಡೆ. ಹೀಗೆ ಶಾಪವನ್ನು ಪಡೆದ ರಾಜಾ ದಶರಥನು ಅಯೋಧ್ಯೆಗೆ ಹಿಂದಿರುಗಿದನು.


ಈ ರೀತಿಯಾಗಿ ರಾಜನು ರಾಜ್ಯಭಾರ ಮಾಡುತ್ತಿದ್ದಾಗ ಅಶ್ವಮೇಧ ಯಾಗವನ್ನು ಕೈಗೊಳ್ಳುತ್ತಾನೆ. ಅಶ್ವಮೇಧ ಪೂರ್ತಿಯಾದ ಮೇಲೆ ಪುತ್ರಕಾಮ್ಯೇಷ್ಠೀ ಎಂಬ ಯಾಗವನ್ನು ಮಾಡುತ್ತಾನೆ. ಋಷ್ಯಶೃಂಗ ಮುನಿಗಳ ನೇತೃತ್ವದಲ್ಲಿ ನಡೆದ ಈ ಯಾಗದ ಕೊನೆಯಲ್ಲಿ ಅಗ್ನಿಯು ದೇವನಿರ್ಮಿತ ಪಾಯಸವನ್ನು ನೀಡುತ್ತಾನೆ. ಆ ಪಾಯಸವನ್ನು ತನ್ನ ಮೂವರು ಮಡದಿಯರಿಗೆ ನೀಡುತ್ತಾನೆ. ನೀಡಿದ ಪೂರ್ಣ ಪಾಯಸದಲ್ಲಿ ಎರಡು ಭಾಗವನ್ನು ಮಾಡಿ ಮೂದಲ ಭಾಗವನ್ನು ಕೌಸಲ್ಯೆಗೂ, ಎರಡನೇ ಭಾಗವನ್ನು ಕೈಕೇಯಿಗೂ, ಕೂಡುತ್ತಾನೆ. ಆ ಇಬ್ಬರೂ ಮಡದಿಯರು ತಮ್ಮ ಪಾಲಿನಲ್ಲಿ ಅರ್ಧರ್ಧವನ್ನು ಸುಮಿತ್ರೆಗೆ ನೀಡುತ್ತಾರೆ. ಕೌಸಲ್ಯೆಗೆ ಒಬ್ಬ ಮಗ ರಾಮ, ಕೈಕೇಯಿಗೆ ಒಬ್ಬ ಮಗ ಭರತ, ಸುಮಿತ್ರೆಗೆ ಇಬ್ಬರು ಬಾಲಕರು ಲಕ್ಷ್ಮಣ ಹಾಗೂ ಶತ್ರುಘ್ನರು ಜನಿಸುತ್ತಾರೆ.


ದಶರಥನ ಸ್ವಭಾವವು ಧೀರೋದಾತ್ತವಾದುದು. ಶಂಬರಾಸುರನ ವಿರುದ್ಧ ಯುದ್ಧ ಮಾಡಲು ದೇವಲೋಕಕ್ಕೆ ದೇವೇಂದ್ರನು ದಶರಥನನ್ನು ಆಹ್ವಾನಿಸಿದ್ದನು. ದಶರಥನು ಅವನನ್ನು ಸೋಲಿಸಿದನು. ಅಸುರರನ್ನು ಮಣಿಸುವ ಶಕ್ತಿ ಅವನಿಗಿರುವುದು ಇದರಿಂದ ತಿಳಿಯುತ್ತದೆ. ತನ್ನ ಮಗನಾದ ರಾಮನನ್ನು ಕಳುಹಿಸಲು ಒಪ್ಪದೇ ತಾನೇ ಯಜ್ಞರಕ್ಷಣೆಗೆ ಬರುತ್ತೇನೆ ಎಂದು ವಿಶ್ವಾಮಿತ್ರರಿಗೆ ಹೇಳುವ ದಶರಥನ ಮಾತುಗಳು ಅವನ ಪುತ್ರ ವಾತ್ಸಲ್ಯವನ್ನು ತೋರಿಸುತ್ತದೆ. ಸುಮಂತ್ರನೇ ಮೊದಲಾದ ಮಂತ್ರಿಗಳು ದಶರಥನ ಆಸ್ಥಾನದಲ್ಲಿ ಇದ್ದರು ಎಂಬುದು ವಾಲ್ಮೀಕಿಗಳ ರಾಮಾಯಣದಿಂದಲೇ ತಿಳಿಯುತ್ತದೆ. ದಶರಥ ಚಕ್ರವರ್ತಿ ಸ್ಥಾನದಲ್ಲಿದ್ದವನಾಗಿದ್ದ. ದಶರಥನ ಆಡಳಿತದ ವೈಖರೀ ಇಡೀ ಪ್ರಪಂಚಕ್ಕೆ ತಿಳಿದಿತ್ತು. ಕೇವಲ ಮಾನವರಷ್ಟೇ ಅಲ್ಲದೆ ಜಟಾಯುವಿನಂತಹ ಪಕ್ಷಿಗಳೂ ದಶರಥನ ಸ್ನೇಹ ಬೆಳೆಸಿದ್ದವು.

ರಾಮಾಯಣದಲ್ಲಿ ದಶರಥ ಒಂದು ಆಧಾರ ಭೂತವಾದ ಮತ್ತು ಅತ್ಯಂತ ಗಂಭೀರವಾದ ಸ್ಥಿರವಾದ ನಿಲುವುಳ್ಳಂತಹ ಪಾತ್ರವಾಗಿದೆ.

Comments

Rated 0 out of 5 stars.
No ratings yet

Add a rating
bottom of page