ವಿಶ್ವಾಮಿತ್ರರ ಪ್ರವೇಶ - ರಾಮನ ಧರ್ಮಮಾರ್ಗದ ಪ್ರಾರಂಭ (ರಾಮಾಯಣ ಕಥಾಮಾಲೆ - 2)
- Ganapati Hegde Moodkani
- Jun 1
- 2 min read
Updated: Jun 8
ರಾಮ-ಲಕ್ಷ್ಮಣ-ಭರತ-ಶತ್ರುಘ್ನರೆಲ್ಲರೂ ವೇದಾಧ್ಯಯನ ಸಂಪನ್ನರಾಗಿದ್ದರು. ತತ್ವ ಜ್ಞಾನವನ್ನು ಪಡೆದವರಾಗಿದ್ದರು, ಕ್ಷತ್ರಿಯರಿಗಿರಬೇಕಾದ ಸಕಲ ಗುಣಗಳಿಂದ ಅವರು ಪರಿಪೂರ್ಣರಾಗಿದ್ದರು.
ನಾಲ್ವರ ಮಧ್ಯದಲ್ಲೂ ಶ್ರೀರಾಮನು ಮಹಾತೇಜಸ್ವಿಯೂ, ಸತ್ಯವಾದ ಪರಾಕ್ರಮವುಳ್ಳವನೂ, ಶರಶ್ಚಂದ್ರನಂತೆ ಸಕಲರಿಗೂ ಆನಂದದಾಯಕನೂ ಆಗಿದ್ದನು. ಶ್ರೀರಾಮಚಂದ್ರನು ಆನೆಗಳ ಮೇಲೆ ಸವಾರಿ ಮಾಡುವುದರಲ್ಲಿಯೂ ಮತ್ತು ರಥಾರೋಹಣದಲ್ಲಿಯೂ ನಿಪುಣನಾಗಿದ್ದನು. ಶ್ರೀರಾಮಚಂದ್ರನಿಗೆ ಗಜಶಾಸ್ತ್ರ-ಅಶ್ವಶಾಸ್ತ್ರ- ರಥಶಾಸ್ತ್ರಗಳೆಲ್ಲವೂ ತಿಳಿದಿದ್ದವು. ಅವನು ಧನುರ್ವೇದದಲ್ಲಿ ನಿಸ್ಸೀಮನಾಗಿದ್ದನು. ಪಿತೃ ಶುಶ್ರೂಷೆಯಲ್ಲಿ ಸರ್ವದ ನಿರತನಾಗಿದ್ದನು. ಸಂಪದ್ವರ್ಧಕನಾದ ಲಕ್ಷ್ಮಣನು ಚಿಕ್ಕಂದಿನಿಂದಲೂ ಹಿರಿಯಣ್ಣನಾದ, ಲೋಕಭಿರಾಮನಾದ ಶ್ರೀರಾಮಚಂದ್ರನಿಗೆ ಹೆಚ್ಚು ಪ್ರಿಯನಾಗಿದ್ದನು. ತನ್ನ ಮತ್ತೊಂದು ಪ್ರಾಣವು ಹೊರಗೆ ಲಕ್ಷ್ಮಣನ ರೂಪದಲ್ಲಿದೆ ಎಂದೇ ಶ್ರೀರಾಮಚಂದ್ರನು ಭಾವಿಸಿದ್ದನು. ಲಕ್ಷ್ಮಣನು ಹೇಗೆ ರಾಮನಿಗೆ ಪ್ರಿಯತಮನಾಗಿದ್ದನೋ ಲಕ್ಷ್ಮಣನ ಒಡಹುಟ್ಟಿದ ಶತ್ರುಘ್ನನೂ ರಾಮನನ್ನು ಅನುಸರಿಸಿ ಹುಟ್ಟಿದ ಭರತನಿಗೆ ಪ್ರಾಣಪ್ರಿಯನಾಗಿದ್ದನು. ಅತುಲಪ್ರಭಾವಯುಕ್ತರೂ, ಮಹಾತೇಜಸ್ವಿಗಳೂ ಆದ ಅವರನ್ನು ಕಂಡು ತಂದೆಯಾದ ದಶರಥನು ಲೋಕಗಳಿಗೆ ಒಡೆಯನಾದ ಬ್ರಹ್ಮನಂತೆ ಸಂತುಷ್ಟನಾದನು. ಹೀಗೆ ಮಕ್ಕಳು ಪ್ರಾಪ್ತ ವಯಸ್ಕರಾಗಲು ಧರ್ಮಾತ್ಮನಾದ ದಶರಥರಾಜನು ಆಚಾರ್ಯರೋಡನೆ ಮತ್ತು ಬಂಧುಗಳೊಡನೆ ಮಕ್ಕಳ ವಿವಾಹದ ವಿಷಯವಾಗಿ ಸಮಾಲೋಚಿಸುತ್ತಿದ್ದನು. ಆಗ ಇದ್ದಕ್ಕಿದ್ದಂತೆ ಅವನ ಅರಮನೆಯ ಬಾಗಿಲಿಗೆ ಮಹಾ ತೇಜಸ್ವಿಗಳಾದ ಮುನಿಶ್ರೇಷ್ಠರಾದ ವಿಶ್ವಾಮಿತ್ರರು ಆಗಮಿಸಿದರು.
ವಿಶ್ವಾಮಿತ್ರರ ಆಗಮನದಿಂದ ಸಂತೋಷಗೊಂಡ ದಶರಥ, "ಮಹರ್ಷಿಗಳೇ ನಿಮ್ಮ ಆಗಮನದ ಕಾರಣವೇನೆಂಬುದನ್ನು ದಯವಿಟ್ಟು ಹೇಳಿ ಅನುಗ್ರಹಿಸಿರಿ, ನೀವು ನನಗೆ ನಿಯೋಜಿಸುತ್ತಿರುವ ಕಾರ್ಯವು ಎಂತಹ ಕಷ್ಟವಾದ ಕಾರ್ಯವಾದರೂ ಆ ಕಾರ್ಯವನ್ನು ಸಂಪೂರ್ಣವಾಗಿ ಸಾಧಿಸಿ ಕೊಡುತ್ತೇನೆ" ಎಂದನು.
ದಶರಥನ ಮಾತುಗಳನ್ನು ಕೇಳಿ ರೋಮಾಂಚನ ಹೊಂದಿದ ಮಹಾ ತೇಜಸ್ವಿಗಳಾದ ವಿಶ್ವಾಮಿತ್ರರು, "ಮಹಾರಾಜ! ನಾನು ಸಿಧ್ಧಿಯನ್ನು ಪಡೆಯುವ ಸಲುವಾಗಿ ವ್ರತ ನಿಯಮದಿಂದಿರುತ್ತೇನೆ. ಈ ನನ್ನ ವ್ರತಾನುಷ್ಠಾನಕ್ಕೆ ಕಾಮರೂಪಿಗಳಾದ ಇಬ್ಬರು ರಾಕ್ಷಸರು ವಿಘ್ನವನ್ನುಂಟು ಮಾಡುತ್ತಾರೆ. ನನ್ನ ವ್ರತಾನುಷ್ಠಾನವು ಪ್ರಾರಂಭವಾಗಿ ಅದು ಮುಗಿಯುವುದರೋಳಗಾಗಿ ಮಹಾ ಪರಾಕ್ರಮಿಗಳಾದ ಸುಬಾಹು, ಮಾರೀಚರೆಂಬ ಇಬ್ಬರು ರಾಕ್ಷಸರು, ರಕ್ತ ಮಾಂಸಗಳನ್ನು ಸುರಿದು ಯಜ್ಞ ವೇದಿಕೆಯನ್ನು ಅಪವಿತ್ರಗೊಳಿಸುತ್ತಾರೆ. ನಾನು ಕೈಗೊಂಡಿರುವ ವ್ರತಾನುಷ್ಠಾನದ ಸಮಯದಲ್ಲಿ ಕೋಪ ಮಾಡಿಕೊಳ್ಳುವುದಾಗಲೀ, ಶಾಪ ಕೊಡುವುದಾಗಲೀ ಯೋಗ್ಯವಲ್ಲ, ಹಾಗೆ ಮಾಡಿದರೆ ವ್ರತಭಂಗವಾಗುತ್ತದೆ. ಹಾಗಾಗಿ ಅವರಿಗೆ ಶಪಿಸುವಂತೆಯೂ ಇಲ್ಲ. ಆದ ಕಾರಣ ಮಹಾ ಶೂರನಾದ ನಿನ್ನ ಜ್ಯೇಷ್ಠಪುತ್ರ ರಾಮನನ್ನು ನನ್ನ ಸಹಾಯಕ್ಕೆ ಕಳುಹಿಸಿಕೊಡುವುದು ಸಾಧ್ಯವಾಗಿದೆ. ನಾನು ಪ್ರಾರಂಭಿಸಬೇಕಾಗಿರುವ ಯಜ್ಞದ ಮುಹೂರ್ತವು ಮೀರದ ರೀತಿಯಲ್ಲಿ ರಾಮನನ್ನು ನನ್ನೊಡನೆ ಕಳುಹಿಸಿ ಕೊಡು. ಮಹಾರಾಜ ಇದರಿಂದ ನಿನಗೆ ಮಂಗಳವಾಗುತ್ತದೆ" ಎಂದರು. ವಿಶ್ವಾಮಿತ್ರರ ಮಾತುಗಳನ್ನು ಕೇಳಿ ಕಡು ದುಃಖಗೊಂಡ ರಾಜನು, "ಮಹರ್ಷಿಗಳೇ! ರಾಜೀವಲೋಚನನಾದ ನನ್ನ ಈ ರಾಮನು ಹದಿನಾರು ವರ್ಷಗಳು ತುಂಬಿದ ಬಾಲಕ. ಇಂತಹವನಿಗೆ ರಾಕ್ಷಸರೊಡನೆ ಯುದ್ಧ ಮಾಡುವ ಯೋಗ್ಯತೆ ಇದೆ ಎಂಬುದನ್ನು ನಾನು ಹೇಗೆ ನಂಬಲಿ? ಆದರೆ ಇವನನ್ನು ಕಳುಹಿಸಲಾಗದ ಮಾತ್ರಕ್ಕೆ ತಮ್ಮ ಯಜ್ಞದ ರಕ್ಷಣೆಯಾಗಲಾರದೆಂದು ಭಾವಿಸಬೇಡಿ. ಯಜ್ಞದ ರಕ್ಷಣೆಗಾಗಿ ನಾನು ನನ್ನ ಅಕ್ಷೋಹಿಣಿ ಸೈನ್ಯದ ಸಮೇತವಾಗಿ ಬರುವೆ. ನನ್ನ ಪ್ರಾಣ ಎಲ್ಲಿಯವರೆಗೆ ಉಳಿದಿರುವುದೋ ಅಲ್ಲಿಯವರೆಗೂ ನಿಮ್ಮ ಯಜ್ಞಕ್ಕೆ ವಿಘ್ನವನ್ನುಂಟು ಮಾಡುವ ರಾಕ್ಷಸರೊಡನೆ ಎಡೆಬಿಡದೆ ಹೋರಾಡುತ್ತೇನೆ. ಆದರೆ ರಾಮನನ್ನು ಮಾತ್ರ ಕಳುಹಿಸುವುದಿಲ್ಲ" ಎಂದನು.
ಹೀಗೆ ದಶರಥನು ಅಸಂಗತವಾಗಿ ಮಾತುಗಳನ್ನಾಡಿದ ಕಾರಣ ಕೌಶಿಕರಿಗೆ ಪರಮಕ್ರೋಧ ಉಂಟಾಯಿತು. "ಮಹಾರಾಜ, ಹಿಂದೆ ನಾನು ಕೇಳಿದಾಗ ಯಾವ ಕಾರ್ಯವನ್ನು ಆದರೂ ಮಾಡಿಕೊಡುನೆಂದು ವಾಗ್ದಾನ ಮಾಡಿ ಈಗ ಪ್ರತಿಜ್ಞೆಯನ್ನು ಪರಿತ್ಯಜಿಸಲು ಯತ್ನಿಸುತ್ತಿರುವೆ. ಈ ವಿಧವಾದ ಪ್ರತಿಜ್ಞಾಭಂಗವು ರಘುವಂಶೀಯರಿಗೆ ಉಚಿತವಲ್ಲ. ಈ ಪ್ರತಿಜ್ಞಾತ್ಯಾಗವು ನಿನಗೆ ಯುಕ್ತವೆನಿಸಿದರೆ ಬಂದ ಹಾದಿಯನ್ನೇ ಹಿಡಿದು ನಾನಿನ್ನು ಹೊರಡುತ್ತೇನೆ. ಬಂಧು ಬಾಂಧರೊಂದಿಗೆ ಸುಖವಾಗಿರು" ಎಂದರು.

ಧೀಮಂತರಾದ ವಿಶ್ವಾಮಿತ್ರರು ಕ್ರೋಧಾವಿಷ್ಟರಾದುದನ್ನು ಕಂಡು ಭೂಮಿಯೇ ನಡುಗಿತು, ದೇವತೆಗಳೂ ಭೀತರಾದರು. ವಿಶ್ವಾಮಿತ್ರರ ಕೋಪದ ಕಾರಣದಿಂದಾಗಿ ಜಗತ್ತೇ ಭಯಗೊಂಡುದನ್ನು ಕಂಡ ಮಹರ್ಷಿಗಳಾದ ವಸಿಷ್ಠರು ದಶರಥನಿಗೆ "ಮಹಾರಾಜ! ಮಹಾವಂಶವಾದ ಇಕ್ಷ್ವಾಕುವಂಶದಲ್ಲಿ ಹುಟ್ಟಿ, ಸದ್ದರ್ಮಾಚರಣಿಯೂ, ಧೈರ್ಯಶಾಲಿಯೂ ಆಗಿರುವ ನೀನು ಇಂದು ಪ್ರತಿಜ್ಞಾವಚನ ಭಂಗವೆಂಬ ಅಧರ್ಮ ಕಾರ್ಯವನ್ನು ಮಾಡಿ ನಿನ್ನ ಸ್ಪಭಾವ ಜನ್ಯವಾದ ಧರ್ಮನಿಷ್ಠೆಯನ್ನು ಪರಿತ್ಯಜಿಸಬೇಡ . ಆ ರಾಕ್ಷಸರನ್ನು ನಿಗ್ರಹ ಮಾಡಲು ಸ್ವಯಂ ವಿಶ್ವಾಮಿತ್ರರೆ ಸಮರ್ಥನೆಂಬುದರಲ್ಲಿ ಸ್ವಲ್ಪವಾದರೂ ಸಂಶಯವಿಲ್ಲ. ಕ್ಷಣಮಾತ್ರದಲ್ಲಿ ಅವರನ್ನು ಪರಿವಾರದೊಡನೆ ಭಸ್ಮೀಭೂತರನ್ನಾಗಿ ಮಾಡಬಲ್ಲರು. ಆದರೆ ನಿನ್ನ ಮಗನಿಗೆ ಹಿತವನ್ನು ಉಂಟು ಮಾಡುವ ಸಲುವಾಗಿ ನಿನ್ನ ಬಳಿಗೆ ಬಂದು ಮಗನನ್ನು ಕಳಿಸುವಂತೆ ಯಾಚಿಸುತ್ತಿರುವರು. ಹಾಗಾಗಿ ರಾಮನನ್ನು ವಿಶ್ವಾಮಿತ್ರರೊಡನೆ ಕಳುಹಿಸಿಕೊಡು" ಎಂದರು. ಪುರೋಹಿತರಾದ ವಸಿಷ್ಠರ ಮಾತುಗಳನ್ನು ಕೇಳಿ ರಘುಕುಲವಂಶಸ್ಥನಾದ ದಶರಥನ ಮನಸ್ಸು ಪ್ರಸನ್ನವಾಯಿತು. ಶ್ರೀರಾಮನನ್ನು ವಿಶ್ವಾಮಿತ್ರರಿಗೆ ಒಪ್ಪಿಸಲು ಮನಸ್ಸು ಮಾಡಿದನು. ಶ್ರೀರಾಮನು ಲಕ್ಷ್ಮಣ ಸಮೇತನಾಗಿ ತಾಯಿಯಾದ ಕೌಸಲ್ಯೆಯಿಂದಲೂ ಹಾಗೂ ತಂದೆಯಾದ ದಶರಥನಿಂದಲೂ ಆಶೀವಾರ್ದವನ್ನು ಪಡೆದು ವಿಶ್ವಾಮಿತ್ರರೊಡನೆ ಹೊರಡಲು ಅಣಿಯಾದನು.
ರಾಮ-ಲಕ್ಷ್ಮಣ-ವಿಶ್ವಾಮಿತ್ರರು ಒಟ್ಟಾಗಿ ಪ್ರಯಾಣ ಮಾಡುತ್ತಿರುವಾಗ ದೇವ-ದುಂದುಭಿಗಳೊಡನೆ ಪುಷ್ಪವೃಷ್ಟಿಯಾಯಿತು. ಸರಯೂ ನದಿಯ ದಕ್ಷಿಣ ತೀರದಲ್ಲಿ ಒಂದೂವರೆ ಯೋಜನದಷ್ಟು ಪ್ರಯಾಣ ಮಾಡಿದ ವಿಶ್ವಾಮಿತ್ರರು "ರಾಮ! ಈಗ ನಿನಗೆ ಬಲ-ಅತಿಬಲಾ ಎಂಬ ಮಹಾವಿದ್ಯೆಗಳ ಸಾಧನೆಗೆ ಮೂಲ ಮಂತ್ರಗಳನ್ನು ಉಪದೇಶಿಸುವೆನು. ಈ ಮಂತ್ರಗಳ ಪುನಶ್ಚರಣೆಯಿಂದಾಗಿ ನಿನಗೆ ಬಲಾ ಮತ್ತು ಅತಿಬಲಾ ವಿದ್ಯೆಗಳು ಸಿದ್ದಿಸುವವು. ಆದರಿಂದ ಎಷ್ಟೇ ನಡೆದರೂ, ಎಷ್ಟೇ ಯುದ್ಧ ಮಾಡಿದರೂ ಶ್ರಮವಾಗುವುದಿಲ್ಲ. ಜ್ವರವೇ ಮೊದಲಾದ ಉಪದ್ರವಗಳೆಂದೂ ಹತ್ತಿರ ಕೂಡ ಸುಳಿಯಲಾರವು. ಈ ವಿದ್ಯೆಗಳುಳ್ಳ ಮನುಷ್ಯನು ಯಾವಾಗಲೂ ಕಾಂತಿ ಹೀನನಾಗವುದಿಲ್ಲ. ನೀನೀ ವಿದ್ಯೆಯನ್ನು ಸಾಧನೆ ಮಾಡಿಕೊಳ್ಳುವುದರಿಂದ ಮೂರುಲೋಕಗಳಲ್ಲಿಯೂ ನಿನಗೆ ಸಮಾನರು ಯಾರೂ ಇರಲಾರರು" ಎಂದರು. ಶ್ರೀರಾಮನು ವಿಶ್ವಾಮಿತ್ರರ ಸಮ್ಮುಖದಲ್ಲಿ ಕುಳಿತು ಪ್ರಣವಪೂರ್ವಕವಾಗಿ ಬಲಾ - ಅತಿಬಲಾ ವಿದ್ಯೆಗಳ ಮೂಲಮಂತ್ರಗಳ ಉಪದೇಶವನ್ನು ಪಡೆದನು. ಉಪದೇಶನಂತರ ಶ್ರೀರಾಮನು ವಿದ್ಯಾಗುರುಗಳಿಗೆ ಮಾಡಬೇಕಾದ ಶುಶ್ರೂಷೆಗಳೆಲ್ಲವನ್ನು ಅವರಿಗೆ ಮಾಡಿದನು. ಸರಯೂ ನದಿಯ ತೀರದಲ್ಲಿಯೇ ರಾಮ-ಲಕ್ಷ್ಮಣ-ವಿಶ್ವಾಮಿತ್ರರು ಆ ರಾತ್ರಿಯನ್ನು ಸುಖವಾಗಿ ಕಳೆದರು.
Comentarios