ಮಂಡೋದರಿ
- Ravishankara Hegde Dodnalli

- Nov 8
- 1 min read
ಮಂಡೋದರಿ
ರಾಮಾಯಣ ಮಹಾಕಾವ್ಯದಲ್ಲಿ ಬರುವ ಒಂದೊಂದು ಪಾತ್ರಗಳೂ ಅತ್ಯಂತ ವಿಶಿಷ್ಟವಾದವುಗಳೇ ಆಗಿವೆ. ಈ ಮಂಡೋದರಿ ರಾಕ್ಷಸನ ಮಗಳಾದರೂ ರಾಕ್ಷಸೀಯ ಗುಣಗಳನ್ನು ಹೊಂದಿರದ ಒಂದು ವಿಶಿಷ್ಟ ವ್ಯಕ್ತಿತ್ವ. ಮಯಾಸುರನ ಮಗಳು ಇವಳು. ಮಯಾಸುರನು ಹೇಮೆ ಎಂಬ ಅಪ್ಸರೆಯನ್ನು ಮೋಹಿಸಿ ಅವಳಿಂದ ಮೂವರು ಮಕ್ಕಳನ್ನು ಪಡೆದ. ಆ ಮೂವರಲ್ಲಿ ಇಬ್ಬರು ಪುರುಷರು. ಅವರು ಮಾಯಾವಿ ಮತ್ತು ದುಂದುಭಿ. ಈ ಇಬ್ಬರೂ ರಕ್ಕಸರೂ ವಾಲಿಯಿಂದ ಹತರಾದರು. ಇವರ ತಂಗಿಯೇ ಮಂಡೋದರಿ.
ರಾವಣ ಎಲ್ಲ ಲೋಕಗಳಲ್ಲಿಯೂ ದಿಗ್ವಿಜಯವನ್ನು ಸಾಧಿಸಿ ಲಂಕೆಗೆ ಹಿಂದಿರುಗಿ ಈ ಮಯ ತನುಜೆಯಾದ ಮಂಡೋದರಿಯನ್ನು ಮದುವೆಯಾದ. ಈಕೆ ಗುಣದಲ್ಲಿ ಸೌಮ್ಯಳು. ಈಕೆಯ ಮಾತುಗಳ ಅನಾವರಣವನ್ನು ಯುದ್ಧಕಾಂಡದ ಕೆಲವೆಡೆ ವಾಲ್ಮೀಕಿಗಳು ತೆರೆದಿಟ್ಟಿದ್ದಾರೆ. ಮಂಡೋದರಿ ಈ ಸಂದರ್ಭದಲ್ಲಿ ಹಿಂದೆ ನಡೆದ ಎಲ್ಲ ವಿದ್ಯಮಾನಗಳನ್ನು ನೆನಪಿಸಿಕೊಳ್ಳುತ್ತಾ ಇದು ಮನುಷ್ಯಮಾತ್ರರಿಂದ ಸಾಧ್ಯವಾದುದಲ್ಲ ಇದು ಮಹಾವಿಷ್ಣುವಿನಿಂದ ಮಾತ್ರ ಸಾಧ್ಯ. ಆದ್ದರಿಂದ ರಾವಣನನ್ನು ಕೊಂದ ರಾಮನು ಮಹಾವಿಷ್ಣುವೇ ಆಗಿದ್ದಾನೆ ಎಂದು ತರ್ಕಿಸುತ್ತಾಳೆ. ರಾಮನನ್ನು ಹಲವರು ಪುರುಷೋತ್ತಮ ಎಂದರೆ ಮನುಷ್ಯರಲ್ಲಿ ಶ್ರೇಷ್ಠರೆಂದು ಕಂಡವರಿದ್ದಾರೆ. ಆದರೆ ರಾಮನು ಭಗವಂತನ ಅವತಾರವೆಂದು ಅರಿತವರು ಬಹಳ ವಿರಳ. ಅಂಥಹವರಲ್ಲಿ ಮಂಡೋದರಿಯೂ ಒಬ್ಬಳು.

ಹನೂಮಂತನು ಮಂಡೋದರಿಯನ್ನೇ ನೋಡಿ ಸೀತೆಯೆಂದು ಭ್ರಮಿಸಿದನಂತೆ. ಆ ಮೇಲೆ ಆಕೆಯ ಸೀಮಂತ (ಹೆಡತಲೆ) ಭಾಗದಲ್ಲಿ ಇರುವ ವೈಧವ್ಯದ ರೇಖೆಯನ್ನು ಗಮನಿಸಿ ಅವಳು ಸೀತೆಯಲ್ಲ ಎಂಬುದನ್ನು ನಿಶ್ಚಯಿಸಿದ ಸನ್ನಿವೇಶ ಸುಂದರಕಾಂಡದಲ್ಲಿದೆ. ಅದನ್ನು ಪುಷ್ಟೀಕರಿಸುವಂತೆ ಅವಳ ಪ್ರಲಾಪದಲ್ಲಿ ಸ್ವತಃ ಅವಳೇ ಹೇಳುವ ಮಾತೊಂದಿದೆ.
ನ ಕುಲೇನ ನ ರೊಪೇಣ ನ ದಾಕ್ಷಿಣ್ಯೇನ ಮೈಥಿಲೀ | ಮಯಾಧಿಕಾ ವಾ ತುಲ್ಯಾ ವಾ ತ್ವಂ ತು ಮೋಹಾನ್ನ ಬುಧ್ಯಸೇ || ( ಯು.ಕಾ.114/28)
"ಕುಲದಲ್ಲಿ ರೂಪದಲ್ಲಿ ಮತ್ತು ವಿದ್ಯಾನೈಪುಣ್ಯದಲ್ಲಿ ಸೀತೆ ನನಗಿಂತ ಮಿಗಿಲಲ್ಲ ಸಮಾನಳೂ ಆಗಲಾರಳು. ಅದರೆ ಕಾಮಾಂಧತೆಯ ನಿನ್ನ ದೃಷ್ಟಿಗೆ ಅದು ಗೋಚರವಾಗಲೇ ಇಲ್ಲ" ಎನ್ನುತ್ತಾಳೆ.
ಯಾರ ಮಾತನ್ನೂ ಕೇಳದೇ ಎಲ್ಲರನ್ನೂ ಧಿಕ್ಕರಿಸಿ ಈಗ ಈ ಸ್ಥಿತಿಗೆ ಬಂದಿದ್ದಾನೆ ರಾವಣ ಎಂಬರ್ಥದ ಮಾತುಗಳನ್ನಾಡುತ್ತಾಳೆ.
ದೇವಾನುದೇವತೆಗಳನ್ನು ಗೆದ್ದ ರಾವಣನು ಗಂಡನಾಗಿದ್ದರೂ, ಇಂದ್ರನನ್ನೇ ಗೆದ್ದ ಮಗನಿದ್ದರೂ, ದೈತ್ಯಾಧಿಪತಿಯಾದ ಮಯನೇ ತಂದೆಯಾದರೂ ಮಂಡೋದರಿ ಅನಾಥಳಾದಳು.
ಮಂಡೋದರಿ ಯಾವ ತಪ್ಪನ್ನು ಮಾಡದೆಯೇ ಎಲ್ಲ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯ ಸಂದರ್ಭದಲ್ಲಿ ನಲುಗಿದಳು. ವಿಭೀಷಣನ ಪಟ್ಟದ ಅನಂತರ ಮಂಡೋದರಿಯ ಯಾವ ಉಲ್ಲೇಖಗಳೂ ಸಿಗುವುದಿಲ್ಲ. ಎಲ್ಲವನ್ನೂ ಕಳೆದುಕೊಂಡರೂ ಆಕೆ ಧರ್ಮದ ಚಿಂತನೆಯನ್ನೇ ಮಾಡುತ್ತಿದ್ದಳು ಎಂಬುದಕ್ಕೆ ಆಕೆ ರಾಮನನ್ನು ಸೀತೆಯನ್ನು ಒಂದೇ ಒಂದು ಶಬ್ದಗಳಿಂದ ನಿಂದಿಸದೇ ಇದ್ದುದೇ ಸಾಕ್ಷಿ. ಇಡೀ ಪ್ರಲಾಪದಲ್ಲಿ ಸೀತೆಗೋ ಅಥವಾ ರಾಮನಿಗೋ ವಾನನರರಿಗೋ ಒಂದೂ ನಿಂದನೆಯ ಮಾತುಗಳನ್ನಾಡಲಿಲ್ಲ. ಆಕೆಯ ನಿರ್ಧಾರ ಸ್ಫಷ್ಟವಾಗಿದೆ. "ರಾವಣ ತನ್ನ ದುಷ್ಟತನದಿಂದಲೇ ತನ್ನದೆಲ್ಲವನ್ನೂ ಕರೆದುಕೊಂಡನೇ ವಿನಃ ಅದಕ್ಕೆ ಬೇರೆ ಯಾರೂ ಕಾರಣರಲ್ಲ" ಇದು ಮಹಾಪಂಚ ಪತಿವ್ರತೆಯರ ಸಾಲಿನಲ್ಲಿ ಸೇರುವ ಮಂಡೋದರಿಯ ಮನದ ಮಾತು.







Comments