top of page

ದೇವರ್ಷಿ ನಾರದರು (ಭಾಗ ೧)

ಮಹರ್ಷಿ ನಾರದರು ಎಂದಾಕ್ಷಣ ನಮ್ಮ ಕಲ್ಪನೆಯಲ್ಲಿ ಬರುವ ರೂಪ - ತಲೆಯ ಮೇಲೆ ಜುಟ್ಟು, ಹಣೆಯ ಮೇಲೆ ವಿಷ್ಣು ತಿಲಕ, ಕುತ್ತಿಗೆಯಲ್ಲಿ ಹಾರ, ಒಂದು ಕೈಯಲ್ಲಿ ವೀಣೆ, ಮತ್ತೊಂದು ಕೈಯಲ್ಲಿ ಕರತಾಳ, ಬಾಯಲ್ಲಿ ನಾರಾಯಣ ಜಪ. ಇನ್ನು ಅವರ ವ್ಯಕ್ತಿತ್ವದ ಕುರಿತಾಗಿ ಸದಾ ಸಂಚಾರಿ, ಮಾತುಗಾರ, ಹೋದಲ್ಲೆಲ್ಲ ತನ್ನ ಜಾಣತನದ ಮೂಲಕ ಜಗಳ ಗಂಟಿಕ್ಕಿ ಬರುವ ಜಾಯಮಾನ ಹಾಗೂ ಭಗವಾನ್ ವಿಷ್ಣುವಿನ ಪರಮ ಭಕ್ತ. ಇವಿಷ್ಟರ ಹೊರತಾಗಿಯೂ ನಾರದರು ಪರಮ ಜ್ಞಾನಿಗಳು, ಮಹಾ ತಪಸ್ವಿಗಳು ಹಾಗೂ ಲೋಕಕಲ್ಯಾಣಕ್ಕಾಗಿ ಅವಿರತ ಶ್ರಮಿಸುವ ಒಬ್ಬ ದೈವ ನಿಯಾಮಕರು ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ.


ನಾರದರ ಹಿನ್ನೆಲೆ

ಮತ್ಸ್ಯಪುರಾಣದಲ್ಲಿ, ನಾರದರನ್ನು ಬ್ರಹ್ಮ ಮಾನಸಪುತ್ರ ಎಂದು ಹೇಳಲಾಗಿದೆ. ವಾಯುಪುರಾಣವು, ನಾರದರು ಕಶ್ಯಪ ಪ್ರಜಾಪತಿಯ ಮಗ ಹಾಗೂ ಅವರ ಸಂಕಲ್ಪ ಮಾತ್ರದಿಂದಲೇ ಜನಿಸಿದವರು ಎಂದು ವರ್ಣಿಸಿದೆ. ಬ್ರಹ್ಮಪುರಾಣದಲ್ಲಿ, ನಾರದರು ದಕ್ಷನ ಪುತ್ರಿಯರ ಮಗನಾಗಿದ್ದಾರೆ. ಭಾಗವತದ ಪ್ರಕಾರ ನಾರದರು ಸಾಕ್ಷಾತ್ ಬ್ರಹ್ಮನ ಮೂರನೆಯ ಅವತಾರ ಅಲ್ಲದೇ ಬ್ರಹ್ಮನ ಜಂಘೆಯಿಂದ ಹುಟ್ಟಿದವರು. ಹೀಗೆ ನಾರದರ ಹುಟ್ಟಿನ ಬಗ್ಗೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ ವರ್ಣಿಸಲಾಗಿದೆ.


ನಾರ ಎಂಬ ಶಬ್ದದ ಅರ್ಥ ನೀರು ಅಥವಾ ಜ್ಞಾನ ದದಾತಿ ಎಂದರೆ ಕೊಡುವವನು. ನಾರದ ಶಬ್ದದ ವ್ಯುತ್ಪತ್ತಿ 'ನಾರಂ ದದಾತಿ ಜಲಂ' ಅಥವಾ 'ನಾರಂ ದದಾತಿ ಜ್ಞಾನಂ' ಎರಡೂ ರೀತಿಯಿಂದ ಮಾಡಬಹುದು. ನಾರದ ಎಂದರೆ ನೀರನ್ನು ಕೊಡುವವನು ಎಂತಲೂ, ಜ್ಞಾನವನ್ನು ಕೊಡುವವನು ಎಂತಲೂ ಅರ್ಥೈಸಬಹುದು. ಆದರೆ ನಾರದರು ಲೋಕದಲ್ಲಿ ಗೈದ ವಿಶೇಷ ಕಾರ್ಯಗಳಿಂದ ಜ್ಞಾನವನ್ನು ಹಂಚುವವರು ಎಂಬರ್ಥವೇ ಸೂಕ್ತವಾಗುತ್ತದೆ. ಪ್ರಹ್ಲಾದ, ಧ್ರುವ, ಯುಧಿಷ್ಠಿರ, ಸನತ್ಕುಮಾರ ಮುಂತಾದ ಭಕ್ತಿ ಶ್ರೇಷ್ಠರ ಜೊತೆಯಲ್ಲಿ ಜ್ಞಾನ ಮಾರ್ಗದ ಕುರಿತು ಸಂವಾದ ನಡೆಸಿ ಅವರನ್ನು ಭಕ್ತಿಯ ದಾರಿಯಲ್ಲಿ ಮುಂದುವರೆಯಲು ಪ್ರೇರೇಪಿಸಿದ ಕುರಿತು ಉಲ್ಲೇಖಗಳು ವಿವಿಧ ಪುರಾಣಗಳಲ್ಲಿ ದೊರೆಯುತ್ತವೆ.


ಒಂದು ಕಥೆಯ ಪ್ರಕಾರ ನಾರದರು ತಮ್ಮ ಪೂರ್ವ ಜನ್ಮದಲ್ಲಿ "ಉಪಬರ್ಹಣ" ಎಂಬ ಗಂಧರ್ವರಾಗಿದ್ದರು. ಅವರು ವಿಷ್ಣು ಭಕ್ತಿಯನ್ನು ಬಿಟ್ಟು ಅನ್ಯ ದೇವತೆಗಳ ಸ್ತುತಿ ಮಾಡಿದ ಕಾರಣ ಭೂಮಿಯ ಮೇಲೆ ಮಾನವನಾಗಿ ಜನಿಸಲು ಶಪಿಸಲ್ಪಟ್ಟರು. ಅವರೊಬ್ಬ ಬ್ರಾಹ್ಮಣನ ಸೇವಕಿಯ ಮಗನಾಗಿ ಜನಿಸಿದರು. ಅವನ ಹೆಸರು 'ನಂದ'. ನಂದನನ್ನು ಬ್ರಾಹ್ಮಣರ ಸೇವೆಗೆ ನಿಯುಕ್ತಿಗೊಳಿಸಲಾಯಿತು. ಬ್ರಾಹ್ಮಣರು ಪ್ರತಿದಿನ ನಡೆಸುತ್ತಿದ್ದ ಪೂಜೆ ಪುನಸ್ಕಾರಗಳನ್ನು ಹತ್ತಿರದಿಂದ ಗಮನಿಸುತ್ತಿದ್ದ ನಂದನ ಮನಸ್ಸು ನಿಷ್ಕಲ್ಮಶವಾಗಿತ್ತು. ಭಕ್ತಿಯ ಭಾವದಿಂದ ಶುದ್ಧವಾಗಿತ್ತು. ಮುಂದೆ ಆ ಬ್ರಾಹ್ಮಣರು ಬೇರೆ ಪ್ರದೇಶಕ್ಕೆ ತೆರಳುವಾಗ ನಂದನನ್ನು ಅಲ್ಲಿಯೇ ನೆಲೆ ನಿಲ್ಲುವಂತೆ ಸೂಚಿಸಿದರು. ನಂತರ ಅವನ ತಾಯಿ ಹಾವು ಕಡಿತದಿಂದ ಸತ್ತಾಗ ನಂದನು ಕಾಡನ್ನು ಸೇರಿದನು. ವನಾಂತರದಲ್ಲಿ ಶುದ್ಧ ಮನಸ್ಸಿನಿಂದ ಭಗವಂತನ ಪಾದಕಮಲಗಳನ್ನು ಧ್ಯಾನಿಸತೊಡಗಿದನು. ನಂದನ ಭಕ್ತಿಗೆ ಮೆಚ್ಚಿದ ಹರಿಯು ತನ್ನ ದಿವ್ಯರೂಪ ದರ್ಶನವನ್ನು ನೀಡಿ ವರವನ್ನೂ ನೀಡಿದನು. ಮುಂದಿನ ಜನ್ಮದಲ್ಲಿ ನೀನು ನನ್ನ ಪ್ರಿಯಭಕ್ತನಾಗಿ ಸದಾಕಾಲ ಚಿರಸ್ಥಾಯಿಯಾಗಿರು ಎಂದು ಹರಸಿದನು. ಅದೇ ನಂದನು ಮುಂದಿನ ಕಲ್ಪದಲ್ಲಿ ಬ್ರಹ್ಮನ ಜಂಘೆಯಿಂದ ನಾರದರಾಗಿ ಜನಿಸಿದರೆಂಬ ಪ್ರತೀತಿ.


ನಾರದರು ಪಡೆದ ಶಾಪಗಳು

ನಾರದರ ಪಾತ್ರದಲ್ಲಿ ಪ್ರವೇಶಿಸಿ ನೋಡಿದಾಗ ಇಂತಹ ಅನೇಕ ವೈಚಿತ್ರ್ಯ ಪೂರ್ಣವಾದ ಮಾಹಿತಿಗಳು ನಮಗೆ ಗೋಚರಿಸುತ್ತವೆ. ನಾರದರು ಬ್ರಹ್ಮನ ಮಡಿಲಿನಿಂದ ಹುಟ್ಟಿದವರು. ಹತ್ತು ಮಂದಿ ಬ್ರಹ್ಮ ಮಾನಸ ಪುತ್ರರಲ್ಲಿ ನಾರದರು ಕಡೆಯವರು. ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕ್ರತು, ಭೃಗು, ದಕ್ಷ, ವಸಿಷ್ಠರೆಂಬ ಒಂಬತ್ತು ಮಂದಿ ನಾರದರಿಗೆ ಅಣ್ಣಂದಿರು. ಬ್ರಹ್ಮನು ಎಲ್ಲಾ ಪುತ್ರರನ್ನು ಸೃಷ್ಟಿ ಕಾರ್ಯದಲ್ಲಿ ತೊಡಗಲು ನಿಯೋಜಿಸಿದನು. ಆದರೆ ನಾರದರು ಮಾತ್ರ ವಿಷ್ಣು ಭಕ್ತಿಯಲ್ಲೇ ತಲ್ಲೀನರಾದ ಕಾರಣ ಕೋಪಗೊಂಡ ಬ್ರಹ್ಮನು "ಜೀವನ ಪರ್ಯಂತ ಬ್ರಹ್ಮಚಾರಿಯಾಗು" ಎಂಬ ಶಾಪ ನೀಡಿದನು. ಅಲ್ಲಿಂದ ಮುಂದೆ ನಾರದರು ತ್ರಿಲೋಕ ಸಂಚಾರಿಯಾಗಿ ಹರಿನಾಮ ಜಪವನ್ನು ಸಕಲ ಲೋಕಗಳಲ್ಲಿಯೂ ಹಾಡುತ್ತಾ ಲೋಕಕಲ್ಯಾಣಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಒಂದು ಲೋಕದ ಸುದ್ದಿಯನ್ನು ಮತ್ತೊಂದು ಲೋಕಕ್ಕೆ ತಲುಪಿಸುತ್ತಾ ಜಗತ್ತಿನ ಮೊದಲ ಪತ್ರಕರ್ತ ಎಂಬ ಬಿರುದನ್ನು ಪಡೆದರು.


ಸೃಷ್ಟಿಯ ಆದಿಯಲ್ಲಿ ಬ್ರಹ್ಮನು ದಕ್ಷನೇ ಮುಂತಾದ ಒಂಬತ್ತು ಮಂದಿಯನ್ನು ಸೃಷ್ಟಿಸಿ ಪೃಥ್ವಿಯಲ್ಲಿ ಸೃಷ್ಟಿ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲು ಅವರನ್ನು ನಿಯೋಜಿಸಿದನು. ಅವರ ಪೈಕಿ ಕೊನೆಯವನಾದ ನಾರದರು ಹರಿ ಭಕ್ತಿಯಲ್ಲಿ ತಲ್ಲೀನರಾಗಿ ಆ ಕಾರ್ಯದಿಂದ ವಿಮುಖರಾದರು. ದಕ್ಷನು ತಂದೆ ಹೇಳಿದ ಕಾರ್ಯದಲ್ಲಿ ಉದ್ಯುಕ್ತನಾಗಿ, ಪತ್ನಿಯಾದ ಅಸಿಕ್ನೆಯಲ್ಲಿ ಐದು ಸಾವಿರ ಮಂದಿ ಮಕ್ಕಳನ್ನು ಪಡೆದನು. ಅವರನ್ನು ಹರ್ಯಶ್ವರು ಎಂದು ಕರೆಯಲಾಗುತಿತ್ತು. ಅವರನ್ನು ಭೇಟಿಯಾದ ನಾರದರು ಅವರಿಗೂ ಹರಿ ಭಕ್ತಿಯನ್ನು ಬೋಧಿಸಿ ಅವರೆಲ್ಲರನ್ನು ಪ್ರಾಪಂಚಿಕ ಸುಖೋಪಭೋಗಗಳಿಂದ ದೂರವಾಗಿಸಿದರು. ಆಮೇಲೆ ದಕ್ಷನು ಪತ್ನಿ ಅಸಿಕ್ನೆಯಿಂದಲೇ ಸಾವಿರ ಮಕ್ಕಳನ್ನು ಪಡೆದನು. ಅವರು ಶಬಲಾಶ್ವರೆಂದು ನಾಮಾಂಕಿತರಾಗಿದ್ದರು. ಅವರನ್ನು ಕೂಡ ನಾರದರು ತಮ್ಮ ಬೋಧನೆಯಿಂದ ಸೃಷ್ಟಿ ಕಾರ್ಯದಿಂದ ವಿಮುಖರಾಗುವಂತೆ ಮಾಡಿದರು. ಇದರಿಂದ ಕೋಪಗೊಂಡ ದಕ್ಷನು ನಿನಗೆ "ಎಲ್ಲಿಯೂ ನೆಲೆಯಿಲ್ಲದಿರಲಿ ಶಾಶ್ವತ ಅಲೆಮಾರಿಯಾಗು" ಎಂದು ಶಪಿಸಿದನು. ಅಲ್ಲಿಂದ ಮುಂದೆ ನಾರದರು ನಿರಂತರ ಸಂಚಾರಿಯಾಗಿ ಕೈಯಲ್ಲಿ ಮಹತಿ ಎಂಬ ವೀಣಾಧಾರಿಯಾಗಿ ಬಾಯಿಯಲ್ಲಿ ನಾರಾಯಣ ಸ್ತುತಿ ಗೈಯುತ್ತಾ ಲೋಕಾಂತರಗಳನ್ನು ಸಂಚರಿಸಿ ಲೋಕಕಲ್ಯಾಣಗೈಯುತ್ತಲೇ ಉಳಿದರು. ದಕ್ಷನು ನೀಡಿದ ಶಾಪವೂ ಲೋಕಕ್ಕೆ ಉಪಯೋಗಕರವಾದ ವರವಾಯಿತು.


ಭಾಗವತದಲ್ಲಿ ನಾರದರೇ ಸ್ವತಃ ಹೇಳಿಕೊಂಡಂತೆ ಕಾಲಯವನನಿಗೆ ಜರಾ ಎಂಬ ಪುತ್ರಿ ಒಬ್ಬಳಿದ್ದಳು. ಅವಳು ಯಾವುದೇ ಗೊತ್ತು ಗುರಿ ಇಲ್ಲದೆ ಅಲೆಯುತ್ತಿರುವಾಗ ಲೋಕ ಸಂಚಾರ ಮಾಡುತ್ತಿದ್ದ ನಾರದರು ಎದುರಾದರು. ಕಾಮ ಲಾಲಸೆಯನ್ನು ಹೊಂದಿದ್ದ ಜರಾ ನಾರದನನ್ನು ಪ್ರಣಯಕೇಳಿಗೆ ಆಹ್ವಾನಿಸಿದಳು. ನೈತಿಕವಾಗಿ ಆಜನ್ಮ ಬ್ರಹ್ಮಚಾರಿಯಾಗಿದ್ದ ನಾರದರು ಅವಳ ಕೋರಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಇದರಿಂದ ಕುಪಿತಗೊಂಡ ಆ ಸ್ತ್ರೀಯು ನಾರದರಿಗೆ "ನಿಲ್ಲಲು ನೆಲೆ ಇಲ್ಲದಂತಾಗಲಿ" ಎಂದು ಶಪಿಸಿ ಹೊರಟು ಹೋದಳು. ಅಲ್ಲಿಂದ ಮುಂದೆ ನಾರದರು ಸದಾ ಸಂಚಾರಿ ಆದರು ಎಂಬುದು ಶ್ರೀಮದ್ ಭಾಗವತದ ಕಥೆ.


ನಾರದರಿಂದ ಲೋಕಕಲ್ಯಾಣ

ನಾರದರು ಅಪಾರವಾದ ವಿಷ್ಣು ಭಕ್ತಿಯಿಂದ ತಪಸ್ಸನ್ನು ಗೈದು ಮಹರ್ಷಿ ಪಟ್ಟವನ್ನು ಪಡೆದವರು. ದೇವಲೋಕದಲ್ಲಿ ಇತರ ಲೋಕಗಳಿಗೂ ವಾರ್ತೆಗಳನ್ನು ಹರಡುವ ಕೆಲಸ ಮಾಡುತ್ತಾ "ದೇವರ್ಷಿ" ಎಂತಲೂ ಕರೆಸಿಕೊಂಡರು. ಅಲ್ಲದೇ ಅವರು ತ್ರಿಕಾಲ ಜ್ಞಾನಿಯೂ ಹೌದು. ಅವರೇ ಸ್ವತಃ "ನಾರದ ಸಂಹಿತೆ" ಎಂಬ ಜ್ಯೋತಿಷ್ಯ ಗ್ರಂಥ ಹಾಗೂ ಭಕ್ತಿ ಸೂತ್ರ ಎಂಬ ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮಲ್ಲಿದ್ದ ಅಮಿತವಾದ ಜ್ಞಾನವನ್ನು ಕಾಲಕಾಲಕ್ಕೆ ಅಂದಿನ ಶ್ರೇಷ್ಠ ಜ್ಞಾನಿಗಳ ಜತೆಯಲ್ಲಿ ಹಂಚಿಕೊಳ್ಳುತ್ತಾ, ಜಗತ್ತಿಗೂ ತಿಳಿಯಪಡಿಸಿದವರು. ವ್ಯಾಸ ಮಹರ್ಷಿಗಳಿಗೆ ಗುರುವಾಗಿ ಅವರಿಂದ ಭಾಗವತ ರಚನೆಯಾಗಲು ಪ್ರೋತ್ಸಾಹ ನೀಡಿದರು. ಪ್ರಹ್ಲಾದನು ಗರ್ಭದಲ್ಲಿದ್ದಾಗಲೇ ಅವನೊಂದಿಗೆ ಸಂಹವನ ನಡೆಸಿ ಅವನನ್ನು ಹರಿಭಕ್ತಿ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದರು. ಆ ಮೂಲಕ ಹರಿದ್ವೇಶಿಯಾದ ತಂದೆ ಹಿರಣ್ಯ ಕಶಿಪುವಿನ ವಿರುದ್ಧವೇ ನಡೆದು ಭಕ್ತಾಗ್ರೇಸರನಾಗಲು ಪ್ರಹ್ಲಾದನಿಗೆ ಮಾರ್ಗದರ್ಶಿಯಾದರು.


ಇನ್ನೂ ನಾವೆಲ್ಲಾ ಕೇಳಿರುವಂತಹ ಧ್ರುವ ಕುಮಾರನ ಕಥೆಯಲ್ಲಿ ಕೂಡ ನಾರದರು ಪಾತ್ರ ಮಹತ್ವದ್ದೆ! ತಂದೆಯಾದ ಉತ್ತಾನಪಾದನ ತೊಡೆಯ ಮೇಲೆ ಕುಳಿತುಕೊಳ್ಳುವ ಬಯಕೆಯಿಂದ ಧ್ರುವ ಹತ್ತಿರ ಹೋದಾಗ, ಮಲತಾಯಿ ದೂರ ತಳ್ಳುತ್ತಾಳೆ. ಮನಸ್ಸಿನಲ್ಲಿ ಅಸಮಾಧಾನಗೊಂಡು ಹುಡುಗನು ಮನೆಯನ್ನು ತೊರೆದು ಕಾಡಿನತ್ತ ತೆರಳುತ್ತಾನೆ. ಆಗ ಅವನನ್ನು ಸಂಧಿಸಿದ ನಾರದರು ಧ್ರುವನಿಗೆ ಜ್ಞಾನಮಾರ್ಗವನ್ನು ಬೋಧಿಸಿದರು. "ಓಂ ನಮೋ ಭಗವತೇ ವಾಸುದೇವಾಯ" ಎಂಬ ಬೀಜಮಂತ್ರವನ್ನು ಅವನಿಗೆ ಬೋಧಿಸಿ, ತಪವನ್ನಾಚರಿಸಲು ಪ್ರೇರೇಪಿಸಿದರು. ಧ್ರುವನ ನಿಷ್ಕಲ್ಮಶ ಭಕ್ತಿಗೆ ಮೆಚ್ಚಿ ಹರಿಯು ಅವನಿಗೆ ಪ್ರತ್ಯಕ್ಷನಾಗಿ, ಅವನನ್ನು ಅತ್ಯುನ್ನತ ತಾರಾಸ್ಥಾನದಲ್ಲಿ ನೆಲೆಗೊಳಿಸಿದನು.


ಹಾಗೆಯೇ ರಾಮಾಯಣದಂತಹ ಮಹಾಕಾವ್ಯ ಸೃಷ್ಟಿಗೂ ನಾರದರೇ ಸ್ಪೂರ್ತಿಯಾದವರು. "ರತ್ನಾಕರ" ಎಂಬ ಹೆಸರಿನ ಬೇಡನೊಬ್ಬ ಅರಣ್ಯದಲ್ಲಿ ವಾಸಿಸುತ್ತಿದ್ದ. ಆ ಮಾರ್ಗವಾಗಿ ಸಂಚರಿಸುತ್ತಿದ್ದವರನ್ನು ದೋಚಿ ಅವರಲ್ಲಿರುವ ಸಂಪತ್ತನ್ನು ಸೆಳೆದುಕೊಳ್ಳುವುದೇ ಅವನ ಕಾಯಕ . ಒಂದು ಬಾರಿ ಆ ಮಾರ್ಗವಾಗಿ ನಾರದರು ಪ್ರಯಾಣಿಸುತ್ತಿದ್ದರು. ಅವರನ್ನು ಆ ರತ್ನಾಕರ ನಿಲ್ಲಿಸಿ ಬೆದರಿಸುವ ಪ್ರಯತ್ನ ಮಾಡಿದ. ಆಗ ನಾರದರು, "ನೀನು ಮಾಡುತ್ತಿರುವ ಈ ಪಾಪ ಕಾರ್ಯದ ಫಲದಲ್ಲಿ ನಿನ್ನ ಹೆಂಡತಿ ಮಕ್ಕಳೂ ಭಾಗವನ್ನು ಪಡೆದುಕೊಳ್ಳಲು ಸಿದ್ಧರಿದ್ದಾರೆಯೇ ಕೇಳಿಕೊಂಡು ಬಾ" ಎಂದರು. ಅವರ್ಯಾರು ಆ ಪಾಪದ ಭಾಗ ಪಡೆದುಕೊಳ್ಳಲು ಸಿದ್ದರಿರಲಿಲ್ಲ. ಇದರಿಂದ ರತ್ನಾಕರನಿಗೆ ಜ್ಞಾನೋದಯವಾಗಿ ತನ್ನ ತಪ್ಪಿನ ಅರಿವಾಯಿತು. ಆಗ ನಾರದರು ಅವನಿಗೆ ರಾಮಧ್ಯಾನವನ್ನು ಮಾಡಲು ತಿಳಿಸಿದರು. ಆದರೆ ಅವನ ಬಾಯಿಂದ ರಾಮ ಎಂಬ ಶಬ್ದವನ್ನು ಉಚ್ಛರಿಸಲು ಸಾಧ್ಯವಾಗದಿದ್ದಾಗ ಎದುರಿನ ಮರವನ್ನು ತೋರಿಸಿ ಅದನ್ನೇ ನಿರಂತರವಾಗಿ ಜಪಿಸಲು ನಿರ್ದೇಶಿಸಿದರು. ಹಾಗೆ "ಮರಾ" ಎಂಬ ಶಬ್ದ ರತ್ನಾಕರನ ಬಾಯಲ್ಲಿ "ರಾಮ ರಾಮ" ಎಂಬ ಜಪವಾಯಿತು. ಅಲ್ಲಿಯೇ ಕುಳಿತ ಆ ಬೇಡ, ಅನೇಕ ವರ್ಷಗಳ ಕಾಲ ರಾಮಜಪದ ಮೂಲಕ ತಪಸ್ಸನ್ನು ಗೈದು ಸಿದ್ಧಿಯನ್ನು ಪಡೆದ. ಅವನ ಸುತ್ತ ಹುತ್ತ ಬೆಳದಿತ್ತು. ಕೊನೆಗೆ ನಾರದರೇ ಬಂದು ಆ ಹುತ್ತವನ್ನು ಬಿಡಿಸಿ ಅವನನ್ನು ಎಚ್ಚರಿಸಿದರು. ಸಂಸ್ಕೃತದಲ್ಲಿ "ವಲ್ಮಿಕ" ಎಂದು ಕರೆಯಲ್ಪಡುವ ಹುತ್ತದಿಂದ ಎದ್ದವರಾದ್ದರಿಂದ ಅವರಿಗೆ "ವಾಲ್ಮೀಕಿ" ಎಂದು ನಾರದರು ಸಂಬೋಧಿಸಿದರು. ಅದೇ ವಾಲ್ಮೀಕಿ ಮಹರ್ಷಿಗಳನ್ನು ರಾಮಾಯಣ ಮಹಾಕಾವ್ಯವನ್ನು ರಚಿಸಲು ಪ್ರೇರೇಪಿಸಿದವರು ಕೂಡ ನಾರದರೇ!


ನಾರದರ ಪಾತ್ರದ ಕುರಿತ ಇನ್ನಷ್ಟು ಕುತೂಹಲಕಾರಿ ವಿಷಯಗಳು ಮುಂದಿನ ಸಂಚಿಕೆಯಲ್ಲಿ!!

2 Comments


Guest
Sep 20

Great effort. Much needed

Like
Replying to

Thank you 🙌📚 Keep supporting us!

Like
bottom of page