top of page

ವಪು ಮತ್ತು ದೂರ್ವಾಸ ಮುನಿಯ ಕ್ರೋಧ

Updated: Aug 11

ಒಮ್ಮೆ ದೇವೇಂದ್ರನು ತನ್ನ ಅಪ್ಸರೆಯರ ಪರಿವಾರದೊಂದಿಗೆ ನಂದನವನದಲ್ಲಿ ವಿಹರಿಸುತ್ತಿರುತ್ತಾನೆ. ಆ ಸಮಯಕ್ಕೆ ದೇವಋಷಿ ನಾರದರು ದೇವೇಂದ್ರನನ್ನು ಕಾಣಲು ಸುರಲೋಕಕ್ಕೆ ಆಗಮಿಸುತ್ತಾರೆ. ದೇವೇಶನು ನಂದನ ವನದಲ್ಲಿರುವುದನ್ನು ಅರಿತ ನಾರದರು ಅಲ್ಲಿಗೇ ತೆರಳುತ್ತಾರೆ. ನಾರದರು ಕಂಡೊಡನೆಯೇ, ಸುರರೊಡೆಯನಾದ ಇಂದ್ರನು ತಾನು ಕುಳಿತಿದ್ದ ಆಸನದಿಂದೆದ್ದು ಬಂದು ವಿನೀತನಾಗಿ ನಾರದರನ್ನು ಸತ್ಕರಿಸಿ, ಅವರಿಗೆ ತನ್ನ ಆಸನವನ್ನೇ ಇತ್ತು ಉಪಚರಿಸಿದನು. ಇದನ್ನು ಕಂಡ ಅಪ್ಸರಾ ಸ್ತ್ರೀಯರೂ ಕೂಡ ವಿನಯದಿಂದ‌ ನಾರದರಿಗೆ ನಮಸ್ಕರಿಸಿ ನತಮಸ್ತಕರಾದರು.

ಆ ಬಳಿಕ‌ ನಾರದರು ದೇವೇಂದ್ರನ ಜೊತೆಗೆ ಕಾಲೋಚಿತವಾಗಿ ಮಾತಾಡತೊಡಗಿದರು. ಈ ಮಾತುಕತೆಯು ಕೆಲ ಸಮಯಗಳವರೆಗೆ ಮುಂದುವರೆಯಿತು. ಆ ನಂತರ ಇಂದ್ರನು ನಾರದರನ್ನು ಉದ್ದೇಶಿಸಿ, "ದೇವರ್ಷಿಗಳೇ! ತಮ್ಮ‌ ಮನಸ್ಸಿನ ಉಲ್ಲಸಕ್ಕಾಗಿ ಯಾವ ಅಪ್ಸರೆಯರ ನೃತ್ಯವನ್ನು ನೋಡಲು ಬಯಸುವಿರಿ?! ನಿಮಗೆ ತಿಳಿದಂತೆ ನಮ್ಮಲ್ಲಿ ಅತ್ಯಂತ ಸುಂದರವಾಗಿ ನರ್ತಿಸಬಲ್ಲ ಅಪ್ಸರೆಯರಾದ ರಂಭಾ, ಊರ್ವಶಿ, ಮೇನಕಾ, ಘೃತಾಚಿಯರೇ ಮುಂತಾದವರಿದ್ದಾರೆ. ನೀವು ಯಾರ ನೃತ್ಯದಿಂದ ಸಂತೋಷಗೊಳ್ಳುವಿರೋ ಅವರಿಂದ ನರ್ತನ ಕಾರ್ಯಕ್ರಮ‌ ನಡೆಸೋಣ! ಹೇಳಿರಿ." ಎಂದನು.


ಆಗ ನಾರದರು, "ನೃತ್ಯವು ನಿಜಾರ್ಥಕ್ಕೂ ನೃತ್ಯವೇ ಆಗಬೇಕಾದರೆ ನರ್ತನ ಮಾಡುವವರು ರೂಪ ಸಂಪನ್ನರೂ, ಗುಣಾನ್ವಿತರೂ ಆಗಿರಬೇಕು. ಆಗ ಮಾತ್ರ ಹಾವ,ಭಾವ,ಕಟಾಕ್ಷ,ವಿಕ್ಷೇಪ ಇವುಗಳನ್ನು ಪರಿಣಾಮಕಾರಿಯಾಗಿ ಪ್ರಕಟಪಡಿಸಬಹುದು. ಹಾಗಾಗಿ ಇಲ್ಲಿರುವ ಅಪ್ಸರೆಯರಲ್ಲಿ ಯಾರು ಅತ್ಯಂತ ರೂಪವತಿಯೂ, ಗುಣವತಿಯೂ ಆಗಿರುವರೋ ಅವರಿಂದಲೇ ನೃತ್ಯ ನಡೆಯಲಿ" ಎಂದರು.


ನಾರದರ ಈ ಮಾತನ್ನು‌ ಕೇಳಿದೊಡನೆಯೇ ಪ್ರತೀ ಅಪ್ಸರೆಯರೂ ತಾನೇ ರೂಪವತಿ ಎಂದು ಮುಂದೆ ಬಂದರು. ಇನ್ನೊಬ್ಬ ಅಪ್ಸರೆಯನ್ನು ನೋಡಿ 'ನಿನಗಿಂತಲೂ ನಾನೇ ರೂಪವತಿಯೂ ಗುಣವತಿಯೂ ಇದ್ದೇನೆ' ಎಂದು ಮುಂದುವರಿದರು. ಅವರವರಲ್ಲಿಯೇ ವಾದ ಏರ್ಪಟ್ಟಾಗ, ಇಂದ್ರನು "ನಿಮ್ಮಲ್ಲಿಯೇ ವಾದ ಮಾಡುವುದೇಕೆ! ನಾರದರು ಹೇಳಿದ ಅರ್ಹತೆ ಯಾರಲ್ಲಿದೆ ಎಂಬುದನ್ನು ಅವರಲ್ಲಿಯೇ ಕೇಳಿ, ಅವರೇ ಯಾರೆಂದು ಸೂಚಿಸಲಿ" ಎಂದು ಹೇಳಲಾಗಿ, ನಾರದರು ಅಪ್ಸರೆಯರನ್ನು ಕುರಿತು "ಪರಮ ತಪಸ್ವಿಗಳಾದ, ಕ್ರೋಧಕ್ಕೆ ಮತ್ತೊಂದು ಹೆಸರಾದ ದೂರ್ವಾಸ ಮಹರ್ಷಿಗಳು ಹಿಮಾಲಯ ಪರ್ವತದಲ್ಲಿ ತಪವನ್ನು ಆಚರಿಸುತ್ತಿದ್ದಾರೆ. ಅವರನ್ನು ಇಂದ್ರಿಯಕ್ಷೋಭೆಗೆ ಅರ್ಥಾತ್ ಅವರ ತಪವನ್ನು ಕೆಡಿಸಲು ಯಾರಿಂದ‌ ಸಾಧ್ಯವೋ ಅವರನ್ನು, ನಿಮ್ಮೆಲ್ಲರಲ್ಲಿ ಅತ್ಯಂತ ಗುಣವತಿ ಎಂದು ನಾನು ಭಾವಿಸುತ್ತೇನೆ" ಎಂದರು.


ಈ ಮಾತನ್ನು ಕೇಳಿದ ತಕ್ಷಣ ಅಪ್ಸರಾಂಗನೆಯರು ತಲೆ ತಗ್ಗಿಸಿ, ಈ ಕಾರ್ಯವನ್ನು ನಡೆಸಲು ತಾವು ಸಮರ್ಥರಲ್ಲವೆಂದು ಹೇಳಿದರು. ಆದರೆ ಆ ಅಪ್ಸರಾಂಗನೆಯರಲ್ಲಿ "ವಪು" ಎಂಬುವವಳು ಅಹಂಕಾರದಿಂದ ಕೂಡಿದವಳಾಗಿ "ನನಗೆ ಅನುಮತಿ ನೀಡಿರಿ. ಈ ಕಾರ್ಯವನ್ನು ನಾನು ಸಾಧಿಸುತ್ತೇನೆ, ದೂರ್ವಾಸ ಮುನಿಗಳ ಬಳಿ ನಾನು ಹೋಗುತ್ತೇನೆ" ಎಂದಳು. ಅಹಂಕಾರಯುಕ್ತಳಾದ ಅವಳು ಮುಂದುವರಿದು "ಈಗ ನಾನು ದೂರ್ವಾಸ ಮುನಿಗಳ ಬಳಿ ಸಾಗಿ, ಅವರ ಇಂದ್ರಿಯಗಳೆಂಬ ಕುದುರೆಗಳನ್ನು ನನ್ನ ಹತೋಟಿಯಲ್ಲಿಟ್ಟುಕೊಂಡು ಮುನಿಯ ದೇಹರಥವನ್ನು ಒಯ್ಯುತ್ತಿರುವ ಬುದ್ಧಿಯೆಂಬ ಸಾರಥಿಯ ಮೇಲೆ ಕಾಮಬಾಣಗಳನ್ನು ಪ್ರಯೋಗಿಸಿ, ಕುದುರೆಗಳ‌ ಲಗಾಮು ತಪ್ಪಿ ಹೋಗುವಂತೆ ಮಾಡುವೆನು. ಅಷ್ಟೇಕೆ? ಬ್ರಹ್ಮ~ವಿಷ್ಣು~ಮಹೇಶ್ವರರೇ ಆದರೂ ಅವರನ್ನು ಮದನನ ಬಾಣದ ಹತಿಗೆ ಒಳಮಾಡುತ್ತೇನೆ" ಎಂದು ನುಡಿದಳು. ಅಪ್ಪಣೆ ಪಡೆದು ವಪುವು ತಕ್ಷಣವೇ ಹಿಮಾಲಯದೆಡೆಗೆ ಸಾಗಿ, ಅಲ್ಲಿ ತಪಸ್ಸನ್ನು ಆಚರಿಸುತ್ತಿದ್ದ ದೂರ್ವಾಸ ಮಹರ್ಷಿಗಳನ್ನು ಕಂಡಳು


ದೂರ್ವಾಸರ ತಪಸ್ಸಿನ ಪ್ರಭಾವದಿಂದ, ಆ‌ ಪ್ರದೇಶದಲ್ಲಿ ಕ್ರೂರ ಮೃಗಗಳೂ ತಮ್ಮ ಸ್ವಭಾವವನ್ನು‌ ಬಿಟ್ಟು ಶಾಂತವಾಗಿದ್ದವು. ವಪುವು ದೂರ್ವಾಸ ಮುನಿಗಳಿಂದ ಅನತಿ ದೂರದಲ್ಲಿ ನಿಂತು ಕೋಗಿಲೆಯ ಹಾಗೆ ಶಬ್ದ ಮಾಡುತ್ತಾ ಅವರ ತಪವನ್ನು ಕೆಡಿಸಲು ಮುಂದಾದಳು. ಆ ಶಬ್ದವನ್ನು‌ ಕೇಳಿ ದೂರ್ವಾಸರು ಬಹಿರ್ಮುಖಗೊಂಡು, ತಕ್ಷಣವೇ ಇದು ತಪಸ್ಸನ್ನು ಕೆಡಿಸಲು ಯಾರದ್ದೋ ತಂತ್ರವೆಂದು ಭಾವಿಸಿ, ಆ ಶಬ್ದ ಬರುತ್ತಿರುವ ಸ್ಥಳಕ್ಕೆ‌ ಬಂದು ವಪುವನ್ನು ಕಂಡರು.


ಕ್ರೋಧಗೊಂಡ ದೂರ್ವಾಸರು, 'ನನ್ನ ತಪಸ್ಸನ್ನು ಭಂಗಗೊಳಿಸಲು ಬಂದಿರುವೆಯಾ ನೀನು? ಮಹರ್ಷಿಗಳ ತಪಸ್ಸಿನ ಕುರಿತು ಯಾವ ಅರಿವಿಲ್ಲದವಳಾದೆ. ಈ ತಪ್ಪಿಗಾಗಿ ನೀನು ಭೂಲೋಕದಲ್ಲಿ ಪಕ್ಷಿಯೋನಿಯಲ್ಲಿ ಜನಿಸು. ಅಲ್ಲಿ ನಿನಗೆ ನಾಲ್ವರು ಜನಿಸಿದರೂ ಅವರ ಪ್ರೀತಿ ನಿನಗೆ ದೊರಕದಿರಲಿ. ಹದಿನಾರು ವರ್ಷಗಳ ಕಾಲ ಪಕ್ಷಿಯಾಗಿದ್ದು, ಶಸ್ತ್ರಘಾತಕ್ಕೆ ಬಲಿಯಾಗಿ ಶಾಪವಿಮೋಚನೆಯಾಗಿ ಸ್ವರ್ಗವನ್ನು ಸೇರು" ಎಂದು ಶಪಿಸಿದರು.


ಹೀಗೆ ಶಪಿಸಿ ಅವರು ಭೂಲೋಕವನ್ನು ಬಿಟ್ಟು ಆಕಾಶಗಂಗೆಯತ್ತ ಸಾಗಿದರು. ಶಾಪ ಪಡೆದ ವಪುವು ಪಶ್ಚಾತ್ತಾಪ ಪಟ್ಟರೂ ಶಾಪವನ್ನು ಅನುಭವಿಸುವುದು ಅನಿವಾರ್ಯವಾಯಿತು.




ಹೀಗೆ ಅವಳು ಪಕ್ಷಿಯಾಗಿ ಜನಿಸಿದ ಮೇಲೆ ಏನಾಯಿತು? ಅವಳ ಮಕ್ಕಳು ಯಾರು? ಈ ಎಲ್ಲ ಕಥೆಗಳನ್ನು ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.

Comments


bottom of page