top of page

ಶಂತನು - ದೇವವ್ರತರ ಸಮಾಗಮ (ಮಹಾಭಾರತ ಕಥಮಾಲೆ 5)


☸️ ಶಂತನುವಿನ ಗುಣವರ್ಣನೆ

ಭರತವಂಶ ಪ್ರದೀಪನಾದ ಶಂತನುವು ದೇವತೆಗಳಿಂದಲೂ, ರಾಜರ್ಷಿಗಳಿಂದಲೂ ಸತ್ಕೃತನಾದವನು, ಧೀಮಂತನೂ, ಧರ್ಮಾತ್ಮನೂ, ಸತ್ಯಸಂಧನೆಂದೂ ಮೂರು ಲೋಕಗಳಲ್ಲೂ ಪ್ರಸಿದ್ಧಿಯನ್ನು ಹೊಂದಿದ್ದ ರಾಜರ್ಷಿಯಾಗಿದ್ದನು. ದಮ-ಶಮ, ದಾನ, ಬುದ್ಧಿ, ಧೈರ್ಯ, ತೇಜಸ್ಸು-ಓಜಸ್ಸು ಇವುಗಳು ಪುರುಷರ್ಷಭನಾದ ಶಂತನುವಿನಲ್ಲಿ ಮೂರ್ತೀಭವಿಸಿದ್ದವು.

ಹೀಗೆ ಸಕಲ ಗುಣಗಳಿಂದ ಪರಿಪೂರ್ಣನಾಗಿದ್ದ ಶಂತನುವು ಸರ್ವ ಜನ ರಕ್ಷಕನಾಗಿ ಆಡಳಿತ ನಡೆಸಿದ್ದನು. ಶಂಖ ಸದೃಶವಾದ ಕುತ್ತಿಗೆ, ವಿಶಾಲವಾದ ವಕ್ಷಸ್ಥಳ, ಉನ್ನತವಾದ ಭುಜಯುಗ್ಮಗಳು, ಎತ್ತರವಾದ ನಿಲುವು ಹೊಂದಿದ್ದ ಆತ ಸಕಲ ರಾಜಲಕ್ಷಣಗಳಿಂದ ಕೂಡಿದ ಕೀರ್ತಿವಂತನಾಗಿದ್ದನು, ಪರಾಕ್ರಮಿಯಾಗಿದ್ದನು.

"ಧರ್ಮ ಏವ ಪರಃ ಕಾಮಾದರ್ಥಾಚ್ಚೇತಿ ವ್ಯವಸ್ಥಿತಾಃ"

ಕಾಮ ಅರ್ಥಗಳಿಗಿಂತಲೂ ಧರ್ಮವೇ ಶ್ರೇಷ್ಠವೆಂಬ ನಿಶ್ಚಯದಿಂದ, ಕರ್ತವ್ಯದಲ್ಲಿ ನಿರತನಾಗಿರುತ್ತಾ ಪ್ರಜಾ ಪಾಲನೆಯಲ್ಲಿ ತೊಡಗಿದ್ದ ಶಂತನುವನ್ನು, ಪೃಥ್ವಿಯ ಎಲ್ಲ ರಾಜರೂ ಸೇರಿ ಚಕ್ರವರ್ತಿಯ ಸಿಂಹಾಸನದಲ್ಲಿ ಕುಳ್ಳಿರಿಸಿ ಅಭಿಷೇಚಿಸಿದರು. ರಾಜ್ಯಗಳ ಮೇಲೆ ಯುದ್ಧ ಮಾಡಿ, ರಕ್ತ ಪಾತ ಮಾಡಿ, ಗೆದ್ದು ಚಕ್ರವರ್ತಿಯಾಗಬೇಕಾದ ಪ್ರಮೇಯವೇ ಶಂತನುವಿಗೆ ಒದಗಲಿಲ್ಲ. ಕೇವಲ ತನ್ನ ಧರ್ಮದ ಬಲದಿಂದಲೇ ಸಮಸ್ತ ರಾಜರ ಮನಸ್ಸನ್ನು ಗೆದ್ದನು. ಎಲ್ಲಾ ರಾಜರೂ ಬಹು ಸಂತಸದಿಂದ ಶಂತನುವಿಗೆ ಸಾಮಂತರಾಗಲು ಮುಂದಾದರು. ಶಂತನುವನ್ನು ಚಕ್ರವರ್ತಿಯಾಗಿ ಅಥವಾ ರಕ್ಷಕನಾಗಿ ಪಡೆದ ಭೂಮಿಪಾಲರು ಶೋಕ, ಭಯ, ಮಾನಸಿಕ ಸಂತಾಪಗಳಿಂದ ಮುಕ್ತರಾದರು. ಭೀತಿಯನ್ನು ತೊರೆದರು. ಶಾಂತ ಮನಸ್ಕರಾಗಿ ಸುಖವಾಗಿದ್ದರು. ಎಲ್ಲ ರಾಜರೂ ಧಾರ್ಮಿಕ ಪ್ರವೃತ್ತಿ ಇರುವವರೇ ಆದ್ದರಿಂದ, ಯಜ್ಞ ಯಾಗಾದಿಗಳೂ ಸಾಂಗವಾಗಿ ನೆರವೇರುತ್ತಿದ್ದವು. ಎಲ್ಲದರ ಪರಿಣಾಮವಾಗಿ ಪ್ರಜೆಗಳೂ ನೆಮ್ಮದಿಯಿಂದ ಕೂಡಿದ ಜೀವನ ನಡೆಸಿದ್ದರು. ಧರ್ಮಕ್ಕೆ ಅಡಿಯಾಳಾಗಿದ್ದು, ತಮ್ಮ ತಮ್ಮ ಕರ್ತವ್ಯವನ್ನು ಪರಿಪಾಲಿಸುತ್ತಿದ್ದರು. ಎಲ್ಲ ವರ್ಗದವರೂ ಪರಸ್ಪರರಲ್ಲಿ ಅನುರಕ್ತಿಯನ್ನು ಹೊಂದಿದ್ದು, ಪರಸ್ಪರರಿಗೆ ಪೂರಕರಾಗಿದ್ದರು.


ಶಂತನುವು ಹಸ್ತಿನಾವತಿಯನ್ನು ರಾಜಧಾನಿಯಾಗಿ ಹೊಂದಿ, ಚತುಸ್ಸಾಗರ ಪರ್ಯಂತವಾದ ಭೂಮಿಯನ್ನು ಆಳುತ್ತಿದ್ದನು. ಚಂದ್ರನಂತೆ ಪ್ರಿಯದರ್ಶನನೂ, ಸೂರ್ಯನಂತೆ ತೇಜಸ್ವಿಯೂ ಆದ ಈತನು, ಪ್ರಜೆಗಳಂತೆಯೇ ಪ್ರಾಣಿ ಪಕ್ಷಿಗಳನ್ನೂ ಸಂರಕ್ಷಿಸುತ್ತಿದ್ದನು. ಈತನ ಆಳ್ವಿಕೆಯಲ್ಲಿ ದೇವ, ಋಷಿ, ಪಿತೃಯಜ್ಞಗಳು ವಿಧಿಯಂತೆ ನಡೆಯುತ್ತಿದ್ದವು. ದುಃಖಗಳಿಗೂ, ಅನಾಥರಿಗೂ, ಪಶು ಪಕ್ಷಿಗಳಿಗೂ ಶಂತನುವು ಪಿತೃ ಸದೃಶನಾಗಿದ್ದನು. ಇಂತಹ ಗುಣ ವಿಶೇಷಗಳನ್ನು ಹೊಂದಿದ್ದ ಶಂತನುವು, ಗಂಗಾದೇವಿಯು ಆತನನ್ನು ತ್ಯಜಿಸಿ ಹೋದ ನಂತರ ಯಾವ ಸ್ತ್ರೀಯ ಸಂಪರ್ಕವನ್ನೂ ಹೊಂದಿರಲಿಲ್ಲ.


🌊ಶಂತನು ದೇವವ್ರತರ ಸಮಾಗಮ

ree

ಒಮ್ಮೆ ಶಂತನುವು ಗಂಗೆಯ ದಡದ ಮೇಲೆ ಹೋಗುತ್ತಿದ್ದಾಗ ಎಂದಿನಂತೆ ಪ್ರವಾಹದ ಭೋರ್ಗರೆತ ಕೇಳಲಿಲ್ಲ. ಅಷ್ಟು ಮಾತ್ರವಲ್ಲ, ನದಿಯಲ್ಲಿ ನೀರು ಕಡಿಮೆಯಾಗಿ ಹೋಗಿತ್ತು. ಯಾವಾಗಲೂ ತುಂಬಿ ಹರಿಯುತ್ತಿದ್ದ ಗಂಗಾನದಿಯಲ್ಲಿ ನೀರು ಕಡಿಮೆಯಾದ ಕುರಿತಾಗಿ ಚಕಿತನಾಗಿ, ಕಾರಣ ತಿಳಿಯುವ ಕುತೂಹಲದಿಂದ ನದಿಯ ಗುಂಟ ಸೂಕ್ಷ್ಮವಾಗಿ ಪರಿಶೀಲಿಸುತ್ತಾ ನಡೆದನು. ಅನತಿ ದೂರದಲ್ಲಿಯೇ ಸುಂದರವಾದ ಬಾಲಕನೊಬ್ಬನು ಧನುರ್ಬಾಣಗಳನ್ನು ಹಿಡಿದು ನಿಂತಿರುವುದು ಶಂತನುವಿನ ದೃಷ್ಟಿಗೆ ಗೋಚರವಾಯಿತು. ಅಪಾರ ತೇಜದಿಂದ ಶೋಭಿಸುತ್ತಿದ್ದ ಆ ಬಾಲಕನು ತನ್ನ ಬಾಣ ಪ್ರಯೋಗದಿಂದ ನದಿಯ ಹರಿವನ್ನು ತಡೆದಿರುವುದನ್ನು ವೀಕ್ಷಿಸಿ, ರಾಜನು ಸ್ತಬ್ಧನಾಗಿ ನಿಂತನು. ಆ ಬಾಲಕನ ಕುರಿತಾಗಿ ಅವ್ಯಕ್ತವಾದ ಪ್ರೀತಿಯು ಹೃದಯದಲ್ಲಿ ಉಂಟಾಯಿತು.


ಕೆಲ ಕ್ಷಣಗಳಲ್ಲಿಯೇ ಅಲ್ಲಿಂದ ತೆರಳಿದ ಆ ಬಾಲಕನನ್ನು ಪುನಃ ನೋಡಬೇಕು, ಅವನಲ್ಲಿ ಮಾತನಾಡಬೇಕೆಂಬ ತವಕವು ಶಂತನುವಿಗೆ ಉಂಟಾಯಿತು. ಆ ಮಗುವನ್ನು ತೋರಿಸುವಂತೆ ಜಲರೂಪಳಾಗಿ ಹರಿಯುತ್ತಿದ್ದ ಗಂಗಾದೇವಿಯನ್ನು ದೀನನಾಗಿ ವಿನಂತಿಸಿದನು. ಚಕ್ರವರ್ತಿಯ ಪ್ರಾರ್ಥನೆಗೆ ಒಲಿದ ಗಂಗಾದೇವಿಯು ಆಭರಣಗಳಿಂದ ಅಲಂಕೃತನಾದ, ಸುಂದರ ಬಾಲಕನನ್ನು ಬಲಗೈಯಲ್ಲಿ ಹಿಡಿದುಕೊಂಡು, ಮುಗುಳ್ನಗುತ್ತಾ ರಾಜನ ಮುಂದೆ ಪ್ರತ್ಯಕ್ಷಳಾದಳು. ರಾಜನನ್ನು ಕುರಿತು ಹೇಳಿದಳು, "ಮಹಾರಾಜ ಕೆಲ ಕಾಲದ ಹಿಂದೆ, ನಿನ್ನಿಂದ ನನ್ನಲ್ಲಿ ಜನಿಸಿದ ಅಷ್ಟಮ ಪುತ್ರನೇ ಈತ. 'ದೇವವ್ರತ' ಎಂಬ ನಾಮಧೇಯ ಹೊಂದಿದ ಈ ನಿನ್ನ ಪುತ್ರನನ್ನು, ಇದುವರೆಗೂ ನಾನು ಸಾಕಿ ಸಲಹಿ, ಸಕಲ ವಿದ್ಯಾಪಾರಂಗತನಾಗಿ ಮಾಡಿ ನಿನಗೀಗ ಒಪ್ಪಿಸುತ್ತಿದ್ದೇನೆ. ಚಕ್ರವರ್ತಿಯೇ, ಈತನು ವಸಿಷ್ಠ ಮಹರ್ಷಿಗಳಲ್ಲಿ ವೇದ-ವೇದಾಂಗಗಳನ್ನು ಅಧ್ಯಯನ ಮಾಡಿದವನು. ಸಕಲ ಶಾಸ್ತ್ರಗಳನ್ನೂ, ರಾಜ್ಯಾಡಳಿತ ವಿದ್ಯೆಗಳನ್ನೂ ಈತನಿಗೆ ಧಾರೆಯೆರೆದವರು ಶುಕ್ರಾಚಾರ್ಯರು ಹಾಗೂ ಬೃಹಸ್ಪತ್ಯಾಚಾರ್ಯರು. ಅಸ್ತ್ರ ಶಾಸ್ತ್ರಗಳನ್ನೂ, ಮಹಾ ಧನುರ್ಬಾಣಗಳನ್ನೂ ಧರಿಸಿ, ಇಂದ್ರ ಸಮಾನನಾಗಿ ಯುದ್ಧ ಮಾಡಬಲ್ಲ. ಈತನಿಗೆ ಯುದ್ಧ ವಿದ್ಯೆಯನ್ನು ಬೋಧಿಸಿದವರು ಪರಶುರಾಮಾಚಾರ್ಯರು. ಹೀಗೆ ನಾಲ್ವರು ಗುರುಗಳಿಂದ ಶಸ್ತ್ರ ಶಾಸ್ತ್ರಗಳಲ್ಲಿ ಪಾರಂಗತನಾದ, ರಾಜ ಧರ್ಮವನ್ನೂ ಅರಿತ, ಅತುಲ ಪರಾಕ್ರಮಿಯಾದ ಈ ನಿನ್ನ ಪುತ್ರನನ್ನು ನಿನ್ನ ಕೈಯಲ್ಲಿ ಇರಿಸುತ್ತೇನೆ, ಅರಮನೆಗೆ ಕರೆದೊಯ್ಯಿ ರಾಜೇಂದ್ರ". ಹೀಗೆಂದು ಗಂಗಾದೇವಿಯು ರಾಜನಿಗೆ ಮಗನನ್ನು ಒಪ್ಪಿಸಿದಳು. ಮಂದಸ್ಮಿತನಾಗಿ, ಮೆಲ್ಲನೆ ಹೆಜ್ಜೆ ಇಡುತ್ತಾ ತನ್ನತ್ತ ಬರುತ್ತಿದ್ದ ತನ್ನ ಪುತ್ರನನ್ನು ನೋಡಿ ರಾಜನ ಕಂಗಳಲ್ಲಿ ಆನಂದಬಾಷ್ಪಗಳು ಉದುರಿದವು. ಇನ್ನು ತಡೆಯಲಾರೆ ಎಂಬಂತೆ ದೇವವ್ರತನತ್ತ ಧಾವಿಸಿದ ಶಂತನುವು ತನ್ನ ನೀಳವಾದ ಬಾಹುಗಳಿಂದ ಮಗನನ್ನು ಬಾಚಿ ತಬ್ಬಿದನು. ಅಷ್ಟರೊಳಗೆ ಅದೃಶ್ಯಳಾಗಿದ್ದ ಗಂಗಾ ದೇವಿಯು ಪಿತಾ ಪುತ್ರರ ಸಮಾಗಮವನ್ನು ನೋಡುತ್ತಾ, ಕಿಲ-ಕಿಲನೆ ನಗುತ್ತಿರುವಳೋ ಎಂಬಂತೆ ಶಬ್ದ ಮಾಡುತ್ತಾ ಪ್ರವಹಿಸುತ್ತಿದ್ದಳು.


ಬಾಲ ಸೂರ್ಯನಂತೆ ಭ್ರಾಜಮಾನನಾಗಿದ್ದ ದೇವವ್ರತನೊಡನೆ ಶಂತನುವು ಹಸ್ತಿನಾವತಿಗೆ ಆಗಮಿಸಿದನು. ವಸ್ವಂಶ ಸಂಭೂತನಾದ, ರೂಪ-ಆಚಾರ-ನಡೆ-ನುಡಿ-ಶಸ್ತ್ರ-ಶಾಸ್ತ್ರ ವಿದ್ಯೆಗಳಲ್ಲಿ ತನಗಿಂತಲೂ ಮಿಗಿಲಾದ ದೇವವ್ರತನನ್ನು, ಪುತ್ರನನ್ನಾಗಿ ಪಡೆದ ತಾನು ಧನ್ಯನೆಂದು ಶಂತನುವು ಭಾವಿಸಿದನು. ಸದ್ಗುಣ ಶಾಲಿಯಾದ ಈ ಪುತ್ರನನ್ನು ಪ್ರಜಾವರ್ಗವೂ, ಸಾಮಂತ ರಾಜರುಗಳೂ ಅಪಾರ ಪ್ರೀತಿಯಿಂದ ಸ್ವಾಗತಿಸಿದರು. ಅವರೆಲ್ಲರ ಸಮ್ಮುಖದಲ್ಲಿ ಶಂತನುವು ದೇವವ್ರತನನ್ನು ಯುವರಾಜನನ್ನಾಗಿ ಮಾಡಿಕೊಂಡನು. ಯುವರಾಜನಾದ ಗಾಂಗೇಯನ ರಾಜ್ಯಭಾರದಲ್ಲಿ ಪ್ರಜೆಗಳೆಲ್ಲರೂ ಸಂತುಷ್ಟರಾಗಿದ್ದರು.

Comments


bottom of page