ಭೀಮನಿಗೆ ವಾಸುಕಿಯ ಅನುಗ್ರಹ (ಮಹಾಭಾರತ ಕಥಾಮಾಲೆ 27)
- Arunkumar Bhat

- Jan 13
- 2 min read
ಭೀಮನಿಗೆ ವಾಸುಕಿಯ ಅನುಗ್ರಹ
ದುರ್ಯೋಧನನ ದುಷ್ಟ ಯೋಜನೆಯಂತೆ ಈ ಮೊದಲೇ ಸಿದ್ಧ ಮಾಡಿ ಇಡಲ್ಪಟ್ಟ ವಿಷ ಮಿಶ್ರಿತ ಲಡ್ಡುಗೆಗಳ ಹರಿವಾಣವಿರುವ ತಾಣದತ್ತ ಭೀಮ ದುರ್ಯೋಧನರಿಬ್ಬರೂ ಸಾಗಿದರು. ಭೀಮನು ತಟ್ಟೆಯೊಂದರಲ್ಲಿದ್ದ ಸುಮಧುರವಾದ ಭಕ್ಷ್ಯಗಳನ್ನು ದುರ್ಯೋಧನನ ಬಾಯಿಗೆ ಇಡುತ್ತಿದ್ದನು. ಆದರೆ ದುರ್ಯೋಧನನು ವಿಷ ಮಿಶ್ರಿತವಾದ ಸಿಹಿ ತಿಂಡಿಗಳನ್ನು ಭೀಮನ ಬಾಯಿಗೆ ಇಡತೊಡಗಿದನು. ಕಪಟವನ್ನರಿಯದ ಭೀಮನು ಸಂತೋಷದಿಂದ ಈ ಪಾಶಾಣ ಮಿಶ್ರಿತ ಲಡ್ಡುಗಳನ್ನು ತಿಂದನು. ತನ್ನ ಯೋಜನೆಯು ಫಲಿಸಿತೆಂದು ಹಿರಿ ಹಿರಿ ಹಿಗ್ಗಿದ ದುರ್ಯೋಧನನು ಭೀಮನನ್ನು ಬಿಟ್ಟು ಹೊರಟು ಹೋದನು.
ಭಕ್ಷ್ಯಗಳನ್ನು ಸ್ವೀಕರಿಸಿದ ರಾಜ ಪುತ್ರರೆಲ್ಲರೂ ಜಲಕ್ರೀಡೆಗೆ ಮುಂದಾದರು. ನದಿಯ ದಂಡೆಯ ಮೇಲಿನಿಂದ ನೀರಿನ ಮಧ್ಯಕ್ಕೆ ಧುಮ್ಮಿಕ್ಕಿದರು. ಮೀನಿನಂತೆ ನೀರಲ್ಲಿ ತೇಲಹತ್ತಿದರು. ಕೈ ಕಾಲುಗಳ ಚಲನೆಯೇ ಇಲ್ಲದೆ ತೇಲುವ ಪ್ರಯತ್ನವನ್ನು ಕೆಲವರು ಮಾಡಿದರು. ಕೆಲವರು ನದಿಯ ನಡುಭಾಗಕ್ಕೆ ಹೋಗಲು ಹೆದರಿ ದಡದ ಸಮೀಪದಲ್ಲಿಯೇ ಮುಳುಗು ಹಾಕತೊಡಗಿದರು. ಕೆಲವರು ಅಂಥವರ ಕೈ ಕಾಲುಗಳನ್ನು ಹಿಡಿದು ನದಿಯ ಮಧ್ಯಭಾಗಕ್ಕೆ ಒಯ್ದು ಬಿಟ್ಟು, ಅವರ ಪರದಾಟವನ್ನು ಹೆದರುವ ಪರಿಯನ್ನೂ ನೋಡಿ, ಮೋಜು ಅನುಭವಿಸಿದರು. ಭೀಮನು ನದಿಯೊಳಗೆ ಧುಮ್ಮಿಕ್ಕಿದನೆಂದರೆ, ನದಿಯ ನೀರು ದಂಡೆಯ ಮೇಲಿನವರೆಗೆ ಉಕ್ಕಿ ಹರಿಯುತ್ತಿತ್ತು. ಹೆದ್ದೆರೆಯು ಸುತ್ತಲಿದ್ದ ಎಲ್ಲರನ್ನೂ ಅಪ್ಪಳಿಸಿದಂತೆ ಭಾಸವಾಗುತ್ತಿತ್ತು. ಅನೇಕ ರಾಜಕುಮಾರರು ಭೀಮನು ಜಲಕ್ರೀಡೆ ಆಡುವ ಸುತ್ತ ಮುತ್ತ ಹೋಗುತ್ತಲೇ ಇರಲಿಲ್ಲ. ದುರ್ಯೋಧನನು ಮಾತ್ರ ಭೀಮನ ಸಮೀಪವೇ ಇದ್ದು, ಆತನ ಚಲನವಲನಗಳನ್ನು ತೀವ್ರವಾದ ಆಸಕ್ತಿಯಿಂದ ಗಮನಿಸುತ್ತಿದ್ದನು. ಅನೇಕ ರೀತಿಯ ಜಲಕ್ರೀಡೆಗಳನ್ನಾಡಿದ ರಾಜಕುಮಾರರು ದಣಿದರು. ವಿಶ್ರಾಂತಿಗಾಗಿ ಉದಕ ಕ್ರೀಡನ ಹೆಸರಿನ ಡೇರೆಯನ್ನು ಸೇರಿದರು. ಭೀಮನಿಗೆ ತಿಂದ ವಿಷದ ಪರಿಣಾಮವು ಗೋಚರಿಸತೊಡಗಿತು. ನೀರಿನಿಂದ ಮೇಲೆದ್ದ ಭೀಮನು ಡೇರೆಯನ್ನು ಸೇರಲೂ ಸಾಧ್ಯವಾಗದೆ ನದಿಯ ದಂಡೆಯ ಮೇಲೆಯೇ ಉರುಳಿದನು. ತಂಗಾಳಿ ಬೀಸಿದಂತೆ ಭೀಮನ ಶರೀರದ ಮೇಲೆ ವಿಷದ ಪ್ರಭಾವವೂ ಅಧಿಕವಾಯಿತು. ಭೀಮನು ಪ್ರಜ್ಞಾ ಹೀನನಾದನು.
ತಾನೆಸಗಿದ ಕೃತ್ಯದ ಪರಿಣಾಮವನ್ನು ಅರಿಯುವ ಕುತೂಹಲದಿಂದ ಭೀಮನನ್ನೇ ಗಮನಿಸುತ್ತಿದ್ದ ದುರ್ಯೋಧನನು ಪ್ರಜ್ಞಾ ಶೂನ್ಯವಾದ ಭೀಮನನ್ನು ನೋಡಿ, ತನ್ನ ಯೋಜನೆಯು ಸಂಪೂರ್ಣವಾಯಿತೆಂದೇ ಭಾವಿಸಿದನು. ಆತನು ಮನದಲ್ಲಿಯೇ ಯೋಚಿಸಿದನು. "ಇವನನ್ನು ಇಲ್ಲಿಯೇ ಬಿಟ್ಟರೆ, ತನ್ನ ತಂದೆ ಧೃತರಾಷ್ಟ್ರನೂ, ಭೀಷ್ಮ ವಿದುರರೂ ಈತನ ಮರಣಕ್ಕೆ ನಾನೇ ಕಾರಣನೆಂದು ಸಂದೇಹಿಸಿಯಾರು. ಈತನ ಸುಳಿವೇ ಇಲ್ಲದಂತೆ ಮಾಡಿಬಿಡುವುದೇ ಸೂಕ್ತವಾದುದು". ಈ ಯೋಚನೆ ಬಂದೊಡನೆ ದುರ್ಯೋಧನನು ಹತ್ತಿರದಲ್ಲಿದ್ದ ಕಾಡು ಬಳ್ಳಿಗಳಿಂದ ಭೀಮನನ್ನು ಬಿಗಿದು, ಅತಿ ಪ್ರಯಾಸದಿಂದ ಹೊತ್ತು ತಂದು, ನದಿಯಲ್ಲಿ ಹಾಕಿಬಿಟ್ಟನು. ನಂತರ ನಿಶ್ಚಿಂತೆಯಿಂದ ಅರಮನೆಗೆ ತೆರಳಿದನು.

ಇತ್ತ ನೀರಿನಲ್ಲಿ ಮುಳುಗಿದ ಸ್ಥೂಲವಾದ ಭೀಮನ ಶರೀರವು ಕೆಳಕ್ಕೆ ಇಳಿಯುತ್ತಾ, ಇಳಿಯುತ್ತಾ ನಾಗಲೋಕಕ್ಕೆ ಹೋಯಿತು. ಅಲ್ಲಿದ್ದ ಮಹಾ ಸರ್ಪಗಳು ಸ್ಥೂಲ ಶರೀರವೊಂದು ತಮ್ಮ ನಡುವೆ ಬಿದ್ದೊಡನೆಯೇ ಕೋಪಗೊಂಡು ಶರೀರದ ನಾನಾ ಭಾಗಗಳನ್ನು ಕಚ್ಚಿದವು. ಅದರ ಪರಿಣಾಮ: "ತತೋಸ್ಯ ದಶ್ಯಮಾನಸ್ಯ ತದ್ವಿಷಂ ಕಾಲಕೂಟಕಂ| ಹತಂ ಸರ್ಪವಿಷೇಣೈವ ಸ್ಥಾವರಂ ಜಙ್ಗಮೇನ ತು||"
ಸರ್ಪಗಳ ದಂಶನದಿಂದ ಭೀಮನ ಶರೀರದಲ್ಲಿ ವ್ಯಾಪ್ತವಾದ ವಿಷವು ಈ ಹಿಂದೆಯೇ ಭೀಮನ ಶರೀರದಲ್ಲಿದ್ದ ಕಾಲಕೂಟ ವಿಷವನ್ನು ವಿನಾಶಗೊಳಿಸಿತು. ಸ್ಥಾವರ ವಿಷ (ರಾಸಾಯನಿಕ ಪದಾರ್ಥಗಳಿಂದ ಸಿದ್ಧಪಡಿಸಿದ ವಿಷ)ವನ್ನು ಜಂಗಮ ವಿಷ (ಪ್ರಾಣಿಗಳಲ್ಲಿನ ವಿಷ)ವು ವಿನಾಶಗೊಳಿಸಿತು.
ಸರ್ಪ ವಿಷ ವ್ಯಾಪನೆಯಿಂದ ಕಾಲಕೂಟ ವಿಷದ ನಿವಾರಣೆಯಾದೊಡನೆಯೇ ವೃಕೋದರನು ಸಚೇತನನಾಗಿ, ತನ್ನ ಬಂಧನವನ್ನು ಬಿಡಿಸಿಕೊಳ್ಳಲು ಒಮ್ಮೆ ಬಲವಾಗಿ ಮೈ ಒದರಿ ಹೊರಳಿದನು. ಕ್ಷಣ ಮಾತ್ರದಲ್ಲಿ ಆತನ ಬಂಧನವು ಬಿಟ್ಟು ಹೋಯಿತು. ಅಲ್ಲಿದ್ದ ಸರ್ಪಗಳನ್ನೆಲ್ಲಾ ನೆಲಕ್ಕೆ ಅಪ್ಪಳಿಸಿದನು. ಅನೇಕ ಸರ್ಪಗಳು ಸತ್ತುಹೋದವು. ಅಳಿದುಳಿದ ಸರ್ಪಗಳು ತಮ್ಮ ರಾಜನಾದ ವಾಸುಕಿಯ ಬಳಿಗೆ ಓಡಿಹೋಗಿ, ಈ ವೃತ್ತಾಂತವನ್ನು ತಿಳಿಸಿದವು.
ಸರ್ಪಗಳಿಂದ ಈ ವಿಷಯವನ್ನು ಅರಿಯ ವಾಸುಕಿಯು ಸಪರಿವಾರನಾಗಿ ಭೀಮನಿದ್ದ ಕಡೆಗೆ ಬಂದನು. ವಾಸುಕಿಯ ಪರಿವಾರದಲ್ಲಿದ್ದ ಆರ್ಯಕನೆಂಬ ಸರ್ಪರಾಜನು ಭೀಮನನ್ನು ಕಂಡಕೂಡಲೇ ಪ್ರೀತಿಯಿಂದ ಆಲಂಗಿಸಿದನು. ಕುಂತಿಯ ತಂದೆಯ ಮುತ್ತಾತನಾದ ಈ ಆರ್ಯಕನು ಭೀಮನನ್ನು ಕಂಡು ಅಪಾರ ಸಂತೋಷಗೊಂಡನು. ಈ ವಿಷಯವನ್ನು ತಿಳಿದ ವಾಸುಕಿಯೂ ಭೀಮನನ್ನು ಪ್ರೀತಿಯಿಂದ ಆದರಿಸಿದನು. ಭೀಮನಿಂದ ನಡೆದ ವೃತ್ತಾಂತವನ್ನೆಲ್ಲ ತಿಳಿದು, ಆತನ ಪ್ರೀತ್ಯರ್ಥವಾಗಿ ಯಥೇಚ್ಛವಾಗಿ ಧನ ಕನಕಗಳನ್ನು ಕೊಡಲು ಮುಂದಾದನು.








Comments