top of page

ಭೀಮನ ಕೊಲೆಯ ಸಂಚು (ಮಹಾಭಾರತ ಕಥಾಮಾಲೆ 26)

ಭೀಮನ ಕೊಲೆಯ ಸಂಚು

ಇತ್ತ ಪಾಂಡುಪುತ್ರರಿಗೆ ಉಪನಯನಾದಿ ವೇದೋಕ್ತ ಸಂಸ್ಕಾರಗಳಾದವು. ಪಾಂಡವರು ತಮ್ಮ ತಂದೆಯಾದ ಪಾಂಡುವಿನ ಅರಮನೆಯಲ್ಲಿಯೇ ಇರುತ್ತಾ, ರಾಜ ಯೋಗ್ಯವಾದ ಸುಖ ಭೋಗಗಳನ್ನು ಅನುಭವಿಸುತ್ತಾ ದಿನ ದಿನವೂ ಅಭಿವೃದ್ಧಿ ಹೊಂದುತ್ತಿದ್ದರು.

ಧೃತರಾಷ್ಟ್ರನ ನೂರು ಮಕ್ಕಳೂ ಪಾಂಡುವಿನ ಐವರು ಮಕ್ಕಳೂ ಒಟ್ಟಾಗಿ ಸೇರಿ ಕ್ರೀಡಾ ವಿನೋದಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಎಲ್ಲ ಆಟಗಳಲ್ಲೂ ಪಾಂಡವರದ್ದೇ ಮೇಲುಗೈಯಾಗುತ್ತಿತ್ತು. ಓಟದಲ್ಲಿ ಲಕ್ಷ್ಯ ಬೇಧನಗಳಲ್ಲಿ ಪಾಂಡವರದ್ದೇ ಮೇಲುಗೈ. ಭೀಮನು ಎಲ್ಲ ಆಟಗಳಲ್ಲೂ ಮುಂದು. ಅವನನ್ನು ತಡೆಯಲು ದುರ್ಯೋಧನಾದಿ ಹತ್ತಾರು ಬಾಲಕರು ಬಂದರೂ ಆತ ಬಗ್ಗುತ್ತಿರಲಿಲ್ಲ. ಇದರಿಂದ ಅಸೂಯೆಗೊಳ್ಳುವ ಬಾಲಕರು ಜಗಳಕ್ಕೆ ಮುಂದಾದರೆ, ಅವರ ಜುಟ್ಟು ಹಿಡಿದು ನೆಲದಲ್ಲಿ ಎಳೆದೊಯ್ಯುತ್ತಿದ್ದನು. ಈಜಾಡುವಾಗ ಭೀಮನು ಹತ್ತಾರು ಕೌರವರನ್ನು ಹಿಡಿದು ಮುಳುಗಿಸಿ, ಅವರು ಸಾಯುವಂತಾದಾಗ ಬಿಟ್ಟು ಬಿಡುತ್ತಿದ್ದನು. ಮಾನಧನನಾದ ದುರ್ಯೋಧನನು ಭೀಮನ ಈ ಕೃತ್ಯಗಳಿಂದ ರೋಷಾನ್ವಿತನಾಗಿ ಪುನಃ ಪುನಃ ಭೀಮನೊಂದಿಗೆ ಸ್ಪರ್ಧೆಗೆ ಬೀಳುತ್ತಿದ್ದನು. ತನ್ನ ಹತ್ತಾರು ಸಹೋದರರೊಡನೆ ಭೀಮನ ಮೇಲೆ ಮುಗಿಬಿದ್ದರೂ, ಅವರೆಲ್ಲರನ್ನೂ ತನ್ನ ಬಾಹುಪಾಶದಿಂದ ಬಂಧಿಸಿ, ನೆಲಕ್ಕೆ ಅಪ್ಪಳಿಸುತ್ತಿದ್ದನು. ಇದನ್ನೆಲ್ಲಾ ಕಂಡ ಅನೇಕ ಕೌರವರು ಭೀಮನು ಬಂದೊಡನೆ ಓಡಿಬಿಡುತ್ತಿದ್ದರು.



ಎಲ್ಲಾ ಹುಡುಗರೂ ಮರವನ್ನು ಹತ್ತಿ ಹಣ್ಣುಗಳನ್ನು ಕಿತ್ತು ತಿನ್ನುತ್ತಿರುವಾಗ ಅಲ್ಲಿಗೆ ಬರುವ ಭೀಮನು, ಆ ವೃಕ್ಷದ ಬುಡವನ್ನು ಹಿಡಿದು ಗಲ ಗಲನೆ ಅಲುಗಾಡಿಸಿ ಬಿಡುತ್ತಿದ್ದನು. ಆ ಅಲುಗಾಟಕ್ಕೆ ತುತ್ತಾದ ಬಾಲಕರು ಹಣ್ಣಿನ ಜೊತೆಯೇ ತೊಪ ತೊಪನೆ ಕೆಳಕ್ಕೆ ಬೀಳುತ್ತಿದ್ದರು. ಬಿದ್ದ ಬಾಲಕರು ಭೀಮನ ಭಯದಿಂದ ತಮಗೆ ಏಟು ಬಿದ್ದಿರುವುದನ್ನೂ ಗಮನಿಸದೆ ಅಲ್ಲಿಂದ ಓಡಿ ಬಿಡುತ್ತಿದ್ದರು. ಅದನ್ನು ನೋಡಿ ಭೀಮನು ಗಹ ಗಹಿಸುತ್ತಿದ್ದನು.

ಕುಸ್ತಿಯಲ್ಲಂತೂ ಭೀಮನನ್ನು ಮೀರಿಸುವುದು ಯಾರಿಗೂ ಸಾಧ್ಯವಿರಲಿಲ್ಲ. ಭೀಮನೊಡನೆ ಸ್ಪರ್ಧೆಗೆ ನಿಲ್ಲುವ ದುರ್ಯೋಧನಾದಿಗಳಿಗೆ ಕುಸ್ತಿ ವಿದ್ಯೆಯಲ್ಲಿ ಆತನ ಶ್ರೇಷ್ಠತೆಯ ಅರಿವು ಪದೇ ಪದೇ ಆಗುತ್ತಿತ್ತು.


ನಿಶ್ಚಯವಾಗಿಯೂ, ಈ ನೂರೈದು ಬಾಲಕರ ಪೈಕಿ ಭೀಮನೇ ಅಪಾರ ಬಲವಂತನೆನಿಸಿದ್ದನು. ಉಳಿದೆಲ್ಲ ಬಾಲಕರೂ ಆತನ ಮುಂದೆ ತೃಣ ಸಮಾನರಾಗಿದ್ದರು. ಆದರೂ, ಭೀಮನಿಗೆ ಅಹಂಕಾರವಾಗಲಿ, ಮಾತ್ಸರ್ಯವಾಗಲಿ ಯಾರ ಮೇಲೆಯೂ ದ್ವೇಷವಾಗಲಿ ಇರಲಿಲ್ಲ. ಆತನಿಗೆ ತನ್ನ ಶಕ್ತಿಯನ್ನು ಇತರ ಬಾಲಕರ ಮುಂದೆ ಪ್ರದರ್ಶಿಸಬೇಕೆಂಬ ಹುಡುಗು ಸಹಜವಾದ ಬಾಲ ಬುದ್ಧಿ ಮಾತ್ರವಿತ್ತು. ಆದರೆ, ಆತನ ಸಾಹಸ ಕಾರ್ಯಗಳು ಇತರರ ಮನದಲ್ಲಿ ಮಾತ್ಸರ್ಯವನ್ನು ಹುಟ್ಟಿಸಿತು.


ಈ ನೂರೈದು ಬಾಲಕರ ಪೈಕಿ ದುರ್ಯೋಧನನಿಗೆ ಭೀಮನ ಕುರಿತಾಗಿ ಅಸೂಯೆಯು ಅಧಿಕವಾಯಿತು. ಮೊದಲೇ ಅಧರ್ಮಿಯೂ, ಸ್ವಾರ್ಥಪರನೂ, ಅಸೂಯಾಪರನೂ, ದುರಭಿಮಾನಿಯೂ ಆಗಿದ್ದ ದುರ್ಯೋಧನನು ಭೀಮನ ಸಾಹಸಗಳನ್ನು ನೋಡಿ ಕುರುಬಿದನು. ಏನೇ ಮಾಡಿದರೂ ಭೀಮನ ಸರಿ ಸಮನಾಗಲಂತೂ ಸಾಧ್ಯವಿರಲಿಲ್ಲ. ಭೀಮನ ಈ ಸಾಹಸ ಗುಣವನ್ನು ಶ್ಲಾಘಿಸೋಣವೆಂದರೆ ದುರಭಿಮಾನವು ಅಡ್ಡ ಬರುತ್ತಿತ್ತು. ಅಲ್ಲದೇ, ತಾನೇ ಹಸ್ತಿನಾವತಿಯ ಸಿಂಹಾಸನದ ಉತ್ತರಾಧಿಕಾರಿಯಾಗಬೇಕೆಂಬ ಮಹತ್ವಾಕಾಂಕ್ಷೆಯೂ ದುರ್ಯೋಧನನಿಗೆ ಅಧಿಕವಾಗಿತ್ತು. ತನ್ನ ರಾಜ್ಯಾಕಾಂಕ್ಷೆಗೆ ಈ ಭೀಮನು ಒಬ್ಬನೇ ಅಡ್ಡಿ ಎಂಬುದಾಗಿ ದುರ್ಯೋಧನನು ಯೋಚಿಸಿದನು. ಭೀಮನೊಬ್ಬನನ್ನು ಹೇಗಾದರೂ ನಿವಾರಿಸಿಕೊಂಡರೆ, ಅರ್ಜುನ-ಯುಧಿಷ್ಠಿರಾದಿಗಳನ್ನು ಬಂಧನದಲ್ಲಿಟ್ಟಾದರೂ ತಾನು ರಾಜ್ಯವಾಳಬಹುದೆಂದು ಯೋಚಿಸಿದನು. ಉಪಾಯದಿಂದ ಭೀಮನನ್ನು ಕೊಲ್ಲಬೇಕೆಂದು ದುರ್ಯೋಧನನು ನಿಶ್ಚಯಿಸಿದನು.


ಈ ಉಪಾಯದ ಭಾಗವಾಗಿ, ಈ ದುಷ್ಟನು ಗಂಗಾ ನದಿಯ ತೀರದಲ್ಲಿ ಗುಡಾರಗಳನ್ನು ನಿರ್ಮಿಸಿದನು. ಪ್ರಯಾಣ ಕೋಟಿ ತೀರ್ಥಕ್ಕೆ ಸಮೀಪದಲ್ಲಿ ದುರ್ಯೋಧನನು ಈ ತಾತ್ಕಾಲಿಕ ಕ್ರೀಡಾಗೃಹಗಳನ್ನು ನಿರ್ಮಿಸಿ, ಆ ಪ್ರದೇಶವನ್ನು ಉದಕ ಕ್ರೀಡನವೆಂದೇ ಹೆಸರಿಸಿದನು. ಅಲ್ಲಿ ಅನೇಕ ವಿಧವಾದ ಭಕ್ಷ್ಯ-ಭೋಜ್ಯಗಳ ಸಿದ್ಧತೆಗೆ ವ್ಯವಸ್ಥೆ ಮಾಡಿದನು.


ಇಷ್ಟೆಲ್ಲಾ ಸಿದ್ಧತೆಯಾದ ನಂತರ ದುರ್ಯೋಧನನು ಯುಧಿಷ್ಠಿರನ ಬಳಿ ತೆರಳಿ, ತಾವೆಲ್ಲರೂ ಸೇರಿ ಈ ಪ್ರದೇಶಕ್ಕೆ ಹೋಗಿ ಜಲಕ್ರೀಡೆ ಆಡೋಣವೆಂದೂ, ಯುಧಿಷ್ಠಿರನೂ ಆತನ ತಮ್ಮಂದಿರೊಡನೆ ಅಲ್ಲಿಗೆ ಬರಬೇಕೆಂದೂ ಆಹ್ವಾನಿಸಿದನು.

ಇದಕ್ಕೆ ಒಪ್ಪಿದ ಯುಧಿಷ್ಠಿರನು ತನ್ನ ಅನುಜರೊಡಗೂಡಿ, ಕೌರವರ ಜೊತೆ ಸೇರಿ ಉದಕ ಕ್ರೀಡನಕ್ಕೆ ಹೊರಟರು. ಅಲ್ಲಿ ತಾತ್ಕಾಲಿಕ ವಸತಿ ಗೃಹವನ್ನು ಪ್ರವೇಶಿಸಿದರು.


ವಸತಿ ಗೃಹಗಳು ಚೆಲುವಾದ ಚಿತ್ತಾರಗಳು, ಕೃತಕ ಜಲಯಂತ್ರಗಳು, ಕೃತಕ ಸರೋವರಗಳು, ಕಾಲುವೆಗಳಿಂದ ಕೂಡಿದ್ದು, ಚಿತ್ರಾಕರ್ಷಕವಾಗಿತ್ತು. ಇದನ್ನೆಲ್ಲಾ ಅಲ್ಪಕಾಲ ವೀಕ್ಷಿಸಿದ ರಾಜಕುಮಾರರು ಉಪಹಾರಕ್ಕಾಗಿ ಪಾಕಶಾಲೆಗೆ ತೆರಳಿದರು. ಅಲ್ಲಿ ಸಿದ್ಧವಾಗಿದ್ದ ಭೋಜ್ಯಗಳನ್ನು ತಾವೂ ತಿನ್ನುತ್ತಾ, ಇತರರಿಗೂ ತಿನ್ನಿಸುತ್ತಾ ನಲಿದರು.


ಸುಯೋಧನನು ಭೀಮನನ್ನು ಕೊಲ್ಲುವುದಕ್ಕೆ ಅನುಕೂಲವಾಗುವಂತೆ ಅದಾಗಲೇ ವಿಷದ ಲಡ್ಡುಗೆಗಳನ್ನು ಗುಪ್ತವಾಗಿ ಸಿದ್ಧ ಮಾಡಿಟ್ಟುಕೊಂಡಿದ್ದನು. ಭೋಜನ ಪ್ರಿಯನಾದ ಭೀಮನು ಈ ಲಡ್ಡುಗೆಗಳನ್ನು ಕೊಟ್ಟರೆ ನಿರಾಕರಿಸಲಾರನೆಂಬುದು ಆತನಿಗೆ ತಿಳಿದಿತ್ತು.

ದುರ್ಯೋಧನನು ಅಂದು ಭೀಮನ ಮೇಲೆ ಎಂದೂ ಇಲ್ಲದ ಪ್ರೇಮವನ್ನು ತೋರುತ್ತಾ, ಭೀಮನಳ್ಳಿ ಸರಸ-ಸಲ್ಲಾಪದಲ್ಲಿ ತೊಡಗಿದನು. ಭೀಮನನ್ನು ಬಿಗಿದಪ್ಪಿ, ಆತನ ಭುಜಗಳನ್ನು ತಟ್ಟಿದನು. ಸರಳ ಮನಸ್ಸಿನ, ಕಪಟವನ್ನು ಎಂದೂ ಅರಿಯದ ಭೀಮನು ಸಂತೋಷದಿಂದ ದುರ್ಯೋಧನನ ಸ್ನೇಹವನ್ನು ಒಪ್ಪಿಕೊಂಡನು. ಅವರಿಬ್ಬರೂ ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕಿಕೊಂಡೇ ಭಕ್ಷ್ಯಗಳನ್ನು ತಿನ್ನಲು ತಿನ್ನಿಸಲು ಮೊದಲು ಮಾಡಿದನು.

Comments


bottom of page