ಪಾಂಡು ಮಾದ್ರಿಯರ ಅಂತ್ಯ ಸಂಸ್ಕಾರ (ಮಹಾಭಾರತ ಕಥಾಮಾಲೆ 25)
- Arunkumar Bhat

- Dec 23, 2025
- 2 min read
ಪಾಂಡು ಮಾದ್ರಿಯರ ಅಂತ್ಯ ಸಂಸ್ಕಾರ
ಪಾಂಡುವಿನ ಮರಣ ವಾರ್ತೆಯನ್ನು ಋಷಿಗಳ ಮುಖೇನ ತಿಳಿದ ಧೃತರಾಷ್ಟ್ರನು ದುಃಖತಪ್ತನಾಗಿ, ವಿದುರನಿಗೆ ಪಾಂಡು-ಮಾದ್ರಿಯರ ಉತ್ತರ ಕ್ರಿಯೆಗಳನ್ನು ರಾಜೋಚಿತವಾಗಿ ನೆರವೇರಿಸುವ ವ್ಯವಸ್ಥೆ ಮಾಡಲು ತಿಳಿಸಿದನು.
ವಿದುರನು ಹಾಗೆಯೇ ಆಗಲೆಂದು ಹೇಳಿ ಕಣ್ಣೊರೆಸಿಕೊಳ್ಳುತ್ತಾ ಅಲ್ಲಿಂದ ತೆರಳಿದನು. ಪಾಂಡು-ಮಾದ್ರಿಯರ ಉತ್ತರ ಕ್ರಿಯೆಗಾಗಿ ಸಿದ್ಧತೆ ನಡೆಸಿದನು. ರಾಜ ಪುರೋಹಿತರು ಅಜ್ಯ-ಗಂಧ ಪುರಸ್ಕೃತನಾದ ಯಜ್ಞೇಶ್ವರನನ್ನು ತೆಗೆದುಕೊಂಡು ಪಾಂಡುವಿನ ದಹನ ಸಂಸ್ಕಾರಕ್ಕಾಗಿ ಪಟ್ಟಣದಿಂದ ಹೊರಕ್ಕೆ ಹೊರಟರು.

ಜ್ಞಾತಿಗಳೂ ಬಾಂಧವರೂ ಸೇರಿ ಪಾಂಡು ಮಾದ್ರಿಯರ ಅಸ್ಥಿಗಳಿಗೆ ಉತ್ತಮವಾದ ಸುಗಂಧ ದ್ರವ್ಯಗಳನ್ನು ಲೇಪಿಸಿ, ನೂತನ ವಸ್ತ್ರಗಳಿಂದಲೂ, ಪುಷ್ಪ ಮಾಲಿಕೆಗಳಿಂದಲೂ ಸಿಂಗರಿಸಿದರು. ಹೂಗುಚ್ಛ ತೋರಣಗಳಿಂದ ಅಲಂಕೃತವಾದ ಶಿಬಿಕೆಯಲ್ಲಿ ಆ ಆಸ್ತಿಗಳನ್ನಿರಿಸಿ, ಛತ್ರ-ಚಾಮರ-ವಾದ್ಯ-ಘೋಷಗಳೊಡನೆ ಗಂಗಾ ತೀರಕ್ಕೆ ಕೊಂಡೊಯ್ದರು. ಪುರೋಹಿತರ ಮಂತ್ರ ಪಠಣಗಳ ನಡುವೆ, ಪ್ರಜಾ ಸ್ತೋಮದ ಕಂಬನಿಯ ನಡುವೆ ಪಾಂಡು-ಮಾದ್ರಿಯರ ಅಸ್ಥಿಯು ಗಂಗಾ ತೀರಕ್ಕೆ ಸಾಗಿತು. ಪಾಂಡುವಿನ ಅಂತ್ಯ ಸಂಸ್ಕಾರದ ವೇಳೆ ರಾಜ ಪರಿವಾರದವರು ಅಲ್ಲಿದ್ದವರಿಗೆ ಯಥೇಚ್ಛವಾಗಿ ಗೋದಾನ-ಭೂದಾನ-ವಸ್ತ್ರದಾನ-ಹಿರಣ್ಯದಾನಗಳನ್ನು ಯಥೇಚ್ಛವಾಗಿ ಮಾಡಿದರು.
ಪ್ರಜೆಗಳ ದುಃಖತಪ್ತ ನಿಟ್ಟುಸಿರಿನ ನಡುವೆ, ಯುಧಿಷ್ಠಿರಾದಿ ಐವರು ಪಾಂಡವರೂ, ಭೀಷ್ಮ-ವಿದುರರೂ ಬಹು ದುಃಖದಿಂದ ಶಿಬಿಕೆಯನ್ನು ಅನುಸರಿಸಿದರು. ಗಂಗಾ ತೀರದ ವನ ಪ್ರದೇಶದಲ್ಲಿನ ಸಮತಟ್ಟಾದ ಜಾಗದಲ್ಲಿ ಪಾಂಡು-ಮಾದ್ರಿಯರ ಅಸ್ಥಿಗಳಿದ್ದ ಶಿಬಿಕೆಯನ್ನು ಇರಿಸಲಾಯಿತು.
ಪುರೋಹಿತರು ಸ್ವರ್ಣಕುಂಭಗಳಲ್ಲಿ ಗಂಗಾ ಜಲವನ್ನು ತಂದು ಪಾಂಡು-ಮಾದ್ರಿಯರ ಅಸ್ಥಿಗಳನ್ನು ಮಂತ್ರ ಪೂರ್ವಕವಾಗಿ ಅಭಿಷೇಕ ಮಾಡಿದರು. ಪುನಃ ಸುಗಂಧ ದ್ರವ್ಯ ಲೇಪನ ಉತ್ತಮ ವಸ್ತ್ರಗಳಿಂದ ಅಲಂಕರಿಸಿದರು. ಮಂತ್ರ ಕ್ರಿಯೆಗಳೊಂದಿಗೆ ಅಸ್ಥಿಗಳನ್ನು ಚಿತೆಯ ಮೇಲಿರಿಸಿ, ತುಪ್ಪದ ಅಭಿಷೇಕ ಮಾಡಿದರು. ಚಂದನ ಅಗುರು ಮುಂತಾದ ಸುಗಂಧ ದ್ರವ್ಯಗಳಿಂದ ಅಸ್ಥಿಗಳು ಮುಚ್ಚಲ್ಪಟ್ಟವು. ಪಾಂಡು ಸುತರು ಯಥಾವಿಧಿಯಾಗಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ತನ್ನ ಪುತ್ರನಾದ ಪಾಂಡುವಿನ ಚಿತೆಯು ಉರಿಯುತ್ತಿರುವುದನ್ನು ನೋಡುತ್ತಿದ್ದ ಅಂಬಾಲಿಕೆಯು ಮಗನನ್ನು ನೆನೆದು ಪ್ರಜ್ಞಾಶೂನ್ಯಳಾಗಿ ಬಿದ್ದು ಬಿಟ್ಟಳು. ಅಲ್ಲಿಯ ಇಡೀ ಪರಿಸರವೇ ದುಃಖತಪ್ತವಾಗಿ, ತಮ್ಮ ನೆಚ್ಚಿನ ಪಾಂಡು ಚಕ್ರವರ್ತಿಗೆ ಕಂಬನಿಯ ವಿದಾಯ ಹೇಳಿತು. ಎಲ್ಲರೂ ಪಾಂಡು ಕುಮಾರರನ್ನು ಸಮಾಧಾನ ಪಡಿಸಿದರು.
ದುಃಖಿತರಾದ ಪಾಂಡುಕುಮಾರರೂ, ದಾಯಾದಿಗಳೂ ಹನ್ನೆರಡು ದಿನಗಳವರೆಗೆ ನೆಲದ ಮೇಲೆಯೇ ಮಲಗಿದರು. ಅನೇಕ ಪೌರರೂ ಅವರನ್ನೇ ಅನುಸರಿಸಿ, ಹನ್ನೆರಡು ದಿನಗಳ ಕಾಲ ತಮ್ಮೆಲ್ಲ ಸುಖೋಪಭೋಗಳನ್ನು ತ್ಯಜಿಸಿ, ಪಾಂಡು ರಾಜನಿಗೆ ಅಂತಿಮ ಗೌರವಗಳನ್ನು ಸಲ್ಲಿಸಿದರು. ಇಡೀ ರಾಜ್ಯವು ಹನ್ನೆರಡು ದಿನಗಳ ಕಾಲ ಸೂತಕದ ಛಾಯೆಯನ್ನು ಹೊಂದಿತ್ತು. ನಂತರ, ಭೀಷ್ಮ- ವಿದುರರೂ ಕುಂತಿಯೂ ಬಂಧು ಮಿತ್ರರಿಂದ ಒಡಗೂಡಿ ಪಾಂಡು ಸುತರ ಮುಖೇನ ಪಾಂಡುವಿಗೆ ಶ್ರಾದ್ಧ ಮಾಡಿ, ಪಿಂಡ ಪ್ರದಾನ ಮಾಡಿದರು. ಅಂದಿನ ದಿನ ಪೌರರಿಗೂ ಬ್ರಾಹ್ಮಣರಿಗೂ ಮೃಷ್ಟಾನ್ನ ಭೋಜನ ಮಾಡಿಸಿ, ದಾನಗಳನ್ನು ಯಥೇಚ್ಛವಾಗಿ ಮಾಡಿದರು. ಈ ಎಲ್ಲ ಉತ್ತರ ಕ್ರಿಯೆಗಳನ್ನು ಮುಗಿಸಿದ ನಂತರ ಪಾಂಡವರು ಪರಿಶುದ್ಧರಾಗಿ ಪೌರರೊಡನೆ ನಗರ ಪ್ರವೇಶ ಮಾಡಿದರು.
ಈ ಎಲ್ಲ ದುಃಖ ಪರಂಪರೆಗಳಿಂದ ಕಂಗೆಟ್ಟು, ಏನು ಮಾಡಬೇಕೆಂಬುದನ್ನು ಅರಿಯದೇ ಕುಳಿತಿದ್ದ ಸತ್ಯವತಿಯನ್ನು ಕುರಿತು ವ್ಯಾಸರು, "ಅತಿಕ್ರಾಂತ ಸುಖಾಃ ಕಾಲಾಃ ಪರ್ಯುಪಸ್ಥಿತ ದಾರುಣಾಃ|
ಶ್ವಃ ಶ್ವಃ ಪಾಪಿಷ್ಠ ದಿವಸಾಃ ಪೃಥಿವೀ ಗತಯೌವನಾ||
"ಅಮ್ಮ, ಸುಖಮಯ ದಿನಗಳೆಲ್ಲವೂ ಕಳೆದು ಹೋದವು ಭಯಂಕರ ಸಮಯವು ಸನ್ನಿಹಿತವಾಗುತ್ತಲಿದೆ. ಮುಂಬರುವ ದಿನಗಳು ಪಾಪಿಷ್ಠ ದಿನಗಳಾಗಿರುತ್ತವೆ. ಭೂಮಾತೆಯ ಯೌವನವು ಕಳೆದುಹೋಯಿತು" ಎಂದರು.
ಮುಂದುವರಿದು, "ವಂಚನೆಯೆಂಬುದು ಪ್ರಪಂಚದ ಎಲ್ಲೆಡೆಯೂ ವ್ಯಾಪಿಸುತ್ತದೆ. ಸದಾಚಾರವು ಲುಪ್ತವಾಗುತ್ತದೆ. ಮುಂಬರುವ ಕಾಲವು ಅತಿ ಘೋರವಾಗಿರುತ್ತದೆ. ದುರ್ಯೋಧನಾದಿಗಳು ಮಾಡುವ ಅನ್ಯಾಯದಿಂದ ಪೃಥ್ವಿಯ ರಾಜರೆಲ್ಲರೂ ವಿನಾಶ ಹೊಂದುತ್ತಾರೆ. ಆದುದರಿಂದ, ನೀನೀಗಲೇ ನನ್ನೊಡನೆ ಅರಣ್ಯಕ್ಕೆ ಬಂದು, ಮನಸ್ಸನ್ನು ಧ್ಯಾನದಲ್ಲಿ ತೊಡಗಿಸಿ, ಕಾಲ ಕಳೆಯುವುದು ಯುಕ್ತವಾಗಿದೆ. ನಿನ್ನ ಕಣ್ಣುಗಳಿಂದಲೇ ಈ ನಿನ್ನ ವಂಶದ ಘೋರ ವಿನಾಶವನ್ನು ನೋಡಬೇಕಮ್ಮಾ" ಎಂದರು.
ಮಗನ ಮಾತುಗಳಿಗೆ ಸಮ್ಮತಿಸಿದ ಸತ್ಯವತಿಯು ವಾನಪ್ರಸ್ಥಕ್ಕೆ ತೆರಳಲು ಸಿದ್ಧಳಾದಳು. ಸೊಸೆಯಾದ ಅಂಬಿಕೆಗೆ ಹೇಳಿದಳು "ಅಂಬಿಕೆ! ನಿನ್ನ ಮೊಮ್ಮಕ್ಕಳ ದುಷ್ಕಾರ್ಯದ ಫಲವಾಗಿ ನಮ್ಮ ವಂಶವೇ ವಿನಾಶ ಹೊಂದುವುದೆಂಬ ವಾರ್ತೆಯನ್ನು ಕೇಳಿದೆನು. ಈ ಘೋರವನ್ನು ನೋಡಲು ಇಚ್ಛಿಸದೆ, ಅಂಬಾಲಿಕೆಯೊಡನೆ ಅರಣ್ಯಕ್ಕೆ ತೆರಳಿ, ನನ್ನ ಕಾಲವನ್ನು ವೃತ ನಿಯಮಗಳಲ್ಲಿ ಕಳೆಯಬೇಕೆಂದು ನಿಶ್ಚಯಿಸಿದ್ದೇನೆ ಅನುಮತಿಸು".
ಅಂಬಿಕೆಯು ತಾನೂ ಸಹ ಅರಮನೆಯನ್ನು ತೊರೆದು, ಸತ್ಯವತಿ ಅಂಬಾಲಿಕೆಯರೊಡನೆ ವಾನಪ್ರಸ್ಥಕ್ಕೆ ತೆರಳುವ ಇಚ್ಛೆಯನ್ನು ವ್ಯಕ್ತಪಡಿಸಿದಳು.
ಹೀಗೆ ಸತ್ಯವತಿಯು ಭೀಷ್ಮನ ಅಪ್ಪಣೆಯನ್ನು ಪಡೆದು ತನ್ನಿಬ್ಬರು ಸೊಸೆಯರೊಡನೆ ವಾನಪ್ರಸ್ಥಕ್ಕೆ ತೆರಳಿದಳು. ಅಲ್ಲಿ ವ್ಯಾಸರ ನಿರ್ದೇಶನದಂತೆ ಅನೇಕ ಕಾಲ ವೃತ-ನಿಯಮಗಳನ್ನು ಆಚರಿಸುತ್ತಾ, ಧ್ಯಾನಾಸಕ್ತರಾಗಿದ್ದು ಪರಲೋಕವನ್ನೈದಿದರು.







Comments