top of page

ಹಸ್ತಿನಾಪುರಕ್ಕೆ ಪಾಂಡವರ ಆಗಮನ (ಮಹಾಭಾರತ ಕಥಾಮಾಲೆ 24)

ಹಸ್ತಿನಾಪುರಕ್ಕೆ ಪಾಂಡವರ ಆಗಮನ

ಕುಂತಿಯ ಮಾತುಗಳನ್ನು ಆಲಿಸಿದ ಮಾದ್ರಿಯು ದೈನ್ಯದಿಂದ ಬಿಕ್ಕಿ ಬಿಕ್ಕಿ ಅಳುತ್ತಾ, ಕುಂತಿಯ ಪ್ರಾರ್ಥಿಸಿದಳು, "ಅಕ್ಕಾ!, ನಾನೇ ಪತಿಯನ್ನು ಹಿಂಬಾಲಿಸಿ, ಸಹಗಮನ ಮಾಡಲು ಅವಕಾಶ ದಯಪಾಲಿಸು. ಪತಿಯು ನನ್ನಲ್ಲಿ ಕಾಮಾಸಕ್ತಿಯನ್ನು ಹೊಂದಿ, ಅದು ಪೂರ್ಣವಾಗದೇ ಶರೀರ ತ್ಯಾಗ ಮಾಡಿದನು. ಆತನೊಡನೆಯೇ ನಾನೂ ಪರಲೋಕಕ್ಕೆ ತೆರಳಿ, ಅಲ್ಲಿಯಾದರೂ ಆತನ ಇಚ್ಛೆಯನ್ನು ಪೂರ್ಣಗೊಳಿಸುವೆನು. ಇದು ಮಾತ್ರವಲ್ಲದೇ ಇನ್ನೊಂದು ಕಾರಣಕ್ಕೂ ಸಹ ನೀನು ಉಳಿಸಬೇಕಾದದ್ದು ಅತ್ಯವಶ್ಯಕ.

ನ ಚಾಪ್ಯಹಂ ವರ್ತಯನ್ತೀ ನಿರ್ವಿಶೇಷಂ ಸುತೇಷು ತೇ|

ವೃತ್ತಿಮಾರ್ಯೇ ಚರಿಷ್ಯಾಮಿ ಸ್ಪೃಶೇದೇನಸ್ತಥಾ ಚ ಮಾಮ್||

ಒಂದು ವೇಳೆ ನಾನು ಬದುಕಿ, ನೀನು ಸಹಗಮನ ಮಾಡಿದೆಯಾದರೆ, ನಿನ್ನ ಮಕ್ಕಳನ್ನು ನನ್ನ ಮಕ್ಕಳಂತೆಯೇ ಭಾವಿಸಿ ರಕ್ಷಿಸಲು ನನ್ನಿಂದ ಸಾಧ್ಯವಾಗಲಾರದು. ಮಕ್ಕಳಲ್ಲಿ ಪಕ್ಷಪಾತ ಮಾಡಿದ ಪಾಪವೂ ನನಗೆ ಸಂಘಟಿಸಬಹುದು. ಆದರೆ ಕುಂತಿ! ನೀನು ಮಾತ್ರ ನನ್ನ ಮಕ್ಕಳನ್ನು ನಿನ್ನ ಮಕ್ಕಳಂತೆಯೇ ಭಾವಿಸಿ ಕಾಯುವೆಯೆಂಬ ಭರವಸೆಯು ನನಗಿದೆ. ಆದುದರಿಂದ, ನಾನೇ ಪತಿಯ ಚಿತೆಯನ್ನು ಏರಲು ಅವಕಾಶ ನೀಡು".


ತಂಗಿಯ ದಯನೀಯವಾದ ಪ್ರಾರ್ಥನೆಯು ಕುಂತಿಗೂ ಸಮ್ಮತವೆನಿಸಿತು. ಕುಂತಿ ಮತ್ತು ಐವರು ಪುತ್ರರ ಕರುಳು ಹಿಂಡುವ ರೋದನೆಯೊಡನೆ, ಅಲ್ಲಿ ನೆರೆದಿದ್ದ ಋಷಿ ಸಂದೋಹ, ಋಷಿ ಪತ್ನಿಯರ ಕಂಬನಿಯ ನಡುವೆ, ಪಾಂಡುವಿನ ಚಿತೆಯು ಧಗ ಧಗಿಸುತ್ತಲಿರಲು, ಮಾದ್ರಿಯು ತನ್ನ ಪತಿಯ ಚಿತೆಯನ್ನು ಏರಿ, ಶರೀರವನ್ನು ತೊರೆದಳು.


ಪಾಂಡುವಿನ ಅಪರ ಕ್ರಿಯೆಗಳ ನಂತರ ಮಹರ್ಷಿಗಳೆಲ್ಲರೂ ಸೇರಿ, ಕುಂತಿ ಮತ್ತು ಪಾಂಡು ಪುತ್ರರ ಭವಿಷ್ಯತ್ತಿನ ಕುರಿತಾಗಿ ಚರ್ಚಿಸಿದರು. ಧರ್ಮಾತ್ಮನಾದ ಪಾಂಡುವು, ತನ್ನ ರಾಜ್ಯ ಕೋಶಾದಿಗಳನ್ನು ಪರಿತ್ಯಜಿಸಿ, ಈ ಕಾಡಿಗೆ ಬಂದು, ತಪೋ ನಿರತನಾಗಿದ್ದನು. ಪಡೆದ ಮಕ್ಕಳನ್ನೂ, ಪತ್ನಿಯನ್ನೂ ತೊರೆದು ಸ್ವರ್ಗಸ್ಥನಾದನು. ಹೀಗಿರುತ್ತಾ, ಮಹರ್ಷಿಗಳೆಲ್ಲ ಸೇರಿ, ಪಾಂಡುವಿನ ಕುಮಾರರನ್ನೂ, ಪತ್ನಿಯಾದ ಕುಂತಿಯನ್ನೂ ಆತನ ಸ್ವರಾಷ್ಟ್ರವಾದ ಹಸ್ತಿನಾಪುರಕ್ಕೆ ಕರೆದೊಯ್ದು, ಭೀಷ್ಮನ ಆಶ್ರಯದಲ್ಲಿ ಬಿಡಲು ನಿಶ್ಚಯಿಸಿದರು. ಶುಭ ಮುಹೂರ್ತದಲ್ಲಿ ಮಕ್ಕಳಿಂದೊಡಗೂಡಿದ ಕುಂತಿಯೊಡನೆ ಪಾಂಡು ಮಾದ್ರಿಯರ ಅಸ್ಥಿಗಳನ್ನೂ ತೆಗೆದುಕೊಂಡು ಹಸ್ತಿನಾಪುರಕ್ಕೆ ಪ್ರಯಾಣ ಹೊರಟರು. ಕುಂತಿಯು ಕಲ್ಲು ಮುಳ್ಳುಗಳಿಂದ ಕೂಡಿದ ಈ ಗಾವುದಗಳ ದೂರದ ದಾರಿಯನ್ನು ಕಷ್ಟವಾಗುತ್ತಿದ್ದರೂ ಲೆಕ್ಕಿಸದೇ ಕ್ರಮಿಸಿದಳು. ಕುಂತಿಯ ಮನದಲ್ಲಿ ಭವಿಷ್ಯದ ಕುರಿತಾಗಿ ಆತಂಕವಿದ್ದರೂ, ತೋರ್ಪಡಿಸಿಕೊಳ್ಳದೇ, ಮಕ್ಕಳ ಹಿತಕ್ಕಾಗಿ, ಮಹರ್ಷಿಗಳೊಂದಿಗೆ ಬಹು ಬೇಗ ಹಸ್ತಿನಾಪುರದ 'ವರ್ಧಮಾನ' ನಾಮಕನಾದ ಮಹಾದ್ವಾರವನ್ನು ಸಮೀಪಿಸಿದಳು. ತಾವೆಲ್ಲರೂ ಆಗಮಿಸಿದ ವಾರ್ತೆಯನ್ನು ಮಹಾರಾಜನಿಗೆ ದ್ವಾರ ಪಾಲಕರ ಮುಖೇನವಾಗಿ ಮಹರ್ಷಿಗಳು ತಲುಪಿಸಿದರು.



ಸಾವಿರಾರು ಸಂಖ್ಯೆಯಲ್ಲಿ ಸಿದ್ಧ-ಚಾರಣರ ಸಮೇತರಾಗಿ, ಕುಂತಿ ಹಾಗೂ ಪಾಂಡು ಪುತ್ರರೊಂದಿಗೆ ಋಷಿಗಳು ಆಗಮಿಸಿರುವ ಸಂಗತಿ ಧೃತರಾಷ್ಟ್ರನನ್ನೂ, ರಾಜ ಪರಿವಾರವನ್ನೂ ತಲುಪಿತು. ಈ ವಾರ್ತೆಯನ್ನು ಕೇಳಿ ಚಕಿತರಾದ ಹಸ್ತಿನಾಪುರದ ಪೌರರು ನೂತನ ವಸ್ತ್ರಗಳನ್ನು ಧರಿಸಿ, ಪರಿವಾರದ ಜೊತೆಗೂಡಿ, ತಂಡೋಪತಂಡವಾಗಿ ಮಹಾದ್ವಾರದ ಬಳಿ ಆಗಮಿಸಿ, ಮಹರ್ಷಿಗಳನ್ನೂ, ಪಾಂಡು ಪುತ್ರರನ್ನೂ ಕಣ್ತುಂಬಿಕೊಂಡರು. ಅಲ್ಲಿನ ಋಷಿಗಳ ಸಾನ್ನಿಧ್ಯದಿಂದಾಗಿ ಯಾರ ಮನಸ್ಸೂ ಅಸೂಯಾಪರವಾಗಿರದೇ ಧರ್ಮದಲ್ಲಿ ಲೀನವಾಗಿದ್ದಿತು.

ಇತ್ತ, ಧೃತರಾಷ್ಟ್ರ, ಭೀಷ್ಮ, ವಿದುರ, ಸೋಮದತ್ತ, ಬಾಹ್ಲೀಕನ್ನೇ ಮೊದಲಾದ ಕೌರವ ಪ್ರಮುಖರೂ, ಸತ್ಯವತೀ, ಅಂಬಿಕೆ, ಅಂಬಾಲಿಕೆ, ಗಾಂಧಾರಿಯೇ ಮೊದಲಾದ ರಾಣೀವಾಸದವರೂ, ದುರ್ಯೋಧನಾದಿ ಧೃತರಾಷ್ಟ್ರರೂ ಮಹರ್ಷಿಗಳ ದರ್ಶನಾಕಾಂಕ್ಷೆಯಿಂದ ಪುರೋಹಿತರೊಡಗೊಂಡು ರತ್ನ ಖಚಿತವಾದ ರಥಾರೂಢವಾಗಿ ಮಹಾದ್ವಾರದ ಬಳಿ ಆಗಮಿಸಿದರು. ಸಮಸ್ತ ರಾಜ ಪರಿವಾರವೂ ರಥದಿಂದ ಇಳಿದು, ಮಹರ್ಷಿಗಳಿಗೆ ನಮಸ್ಕರಿಸಿ ನಿಂದರು. ಭೀಷ್ಮನು ಎಲ್ಲರ ಪರವಾಗಿ ಆಗಮಿಸಿದ ಋಷಿ ಸಂದೋಹಕ್ಕೆ ಅರ್ಘ್ಯ-ಪಾದ್ಯಾದಿಗಳನ್ನು ಸಲ್ಲಿಸಿ, ಉಪಚರಿಸಿ, ಎಲ್ಲರ ಪಾದಾಭಿವಂದನೆ ಮಾಡಿ, ಆಶೀರ್ವಾದವನ್ನು ಪಡೆದನು. ಎಲ್ಲರೂ ಕಾತರತೆಯಿಂದ ಮಹರ್ಷಿಗಳು ಏನನ್ನಾಡುವರೋ ಎಂದು ಕಾಯತೊಡಗಿರಲು, ವಯೋವೃದ್ಧರೂ, ಜ್ಞಾನವೃದ್ಧರೂ ಆದ ಮಹರ್ಷಿಗಳೊಬ್ಬರು ಹೇಳತೊಡಗಿದರು.

"ಪಾಂಡು ಚಕ್ರವರ್ತಿಯು ಪ್ರಾಪಂಚಿಕ ಸುಖವನ್ನು ತೊರೆದು ಶತಶೃಂಗ ಪರ್ವತಕ್ಕೆ ಒಂದು ನೆಲೆಸಿದ್ದು ತಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅಲ್ಲಿ ಪಾಂಡುವು ಬ್ರಹ್ಮಚರ್ಯದ ಜೀವನವನ್ನೇ ನಡೆಸುತ್ತಿದ್ದರೂ ದೈವಾನುಗ್ರಹದಿಂದ ಅವನಿಗೆ ಐವರು ಮಕ್ಕಳು ಜನಿಸಿದರು. ಧರ್ಮದೇವನ ಅನುಗ್ರಹದಿಂದ ಯುಧಿಷ್ಠಿರನೂ, ವಾಯುದೇವನ ಅನುಗ್ರಹದಿಂದ ಭೀಮನೂ, ಇಂದ್ರದೇವನ ಆಶೀರ್ವಾದದಿಂದ ಅರ್ಜುನನೂ ಕುಂತಿಯ ಉದರದಲ್ಲಿ ಜನಿಸಿದರು. ಅಶ್ವಿನೀ ದೇವತೆಗಳ ಕೃಪೆಯಿಂದ ಈ ನಕುಲ-ಸಹದೇವರೆಂಬ ಯಮಳರು ಮಾದ್ರಿಯ ಗರ್ಭ ಸಂಜಾತರಾದರು. ಹೀಗೆ, ಪಾಂಡುವಿನಿಂದಾಗಿ ಈ ಕುರು ವಂಶವು ಉದ್ಧಾರವಾಯಿತು. ಶಸ್ತ್ರ- ಶಾಸ್ತ್ರಗಳಲ್ಲಿ ಪಾರಂಗತರಾದ ಇವರು ನಿಮಗೆ ಸಂತೋಷವನ್ನುಂಟು ಮಾಡುವಲ್ಲಿ ಸಂಶಯವಿಲ್ಲ. ಪಾಂಡುವು ಈ ಬಾಲಕರನ್ನು ತೊರೆದು, ವಿಧಿ ನಿಯಮದಂತೆ ಇಂದಿಗೆ ಹದಿನೇಳು ದಿನಗಳ ಹಿಂದೆ ಇಹಲೋಕವನ್ನು ತೊರೆದು ಸ್ವರ್ಗಾರೋಹಣ ಮಾಡಿದನು. ಪಾಂಡುವಿನ ಚಿತೆಯ ವೈಶ್ವಾನರಾಗ್ನಿಯಲ್ಲಿ ಪ್ರವೇಶಿಸಿ, ಸಹಗಮನ ಮಾಡಿದ ಸತಿ ಮಾದ್ರಿ ದೇವಿಯು ಪರಮ ಪತಿವ್ರತೆಯರ ಸಾಲಿನಲ್ಲಿ ಸೇರಿದಳು. ಇದೋ! ಪಾಂಡು ಮಾದ್ರಿಯರ ಅಸ್ಥಿಗಳಿವು. ಮುಂದೆ ಮಾಡಬೇಕಾದ ಕಾರ್ಯಗಳನ್ನು ನೀವು ನೆರವೇರಿಸಿರಿ.


ತಾಯಿಯಾದ ಕುಂತಿಯೊಡನೆ ಆಗಮಿಸಿದ ಪಾಂಡುವಿನ ಈ ಐವರು ವರಪುತ್ರರನ್ನು ಉಚಿತವಾದ ಮರ್ಯಾದೆಗಳೊಡನೆ ನಿಮ್ಮ ಜೊತೆ ಸೇರಿಸಿಕೊಳ್ಳಿ. ಕುರು ವಂಶಕ್ಕೆ ಸೇರಿದವರಾದ ಇವರನ್ನು ಕರೆದುಕೊಳ್ಳುವುದು ನಿಮ್ಮ ಕರ್ತವ್ಯವೂ ಹೌದು", ಕುರು ಶ್ರೇಷ್ಠರಿಗೆ ಹೀಗೆ ಹೇಳಿದ ಮಹರ್ಷಿಗಳೆಲ್ಲರೂ ಕುಂತಿ ಹಾಗೂ ಪಾಂಡವರನ್ನು ಭೀಷ್ಮನಿಗೆ ಒಪ್ಪಿಸಿ, ಅಲ್ಲಿಂದ ಅರಣ್ಯಕ್ಕೆ ಮರಳಿದರು.

Related Posts

See All
ನಕುಲ ಸಹದೇವರ ಜನನ (ಮಹಾಭಾರತ ಕಥಾಮಾಲೆ 22)

ಮಾದ್ರಿಯು ಕ್ಷಣಕಾಲ ಯೋಚಿಸಿ, ದಿವ್ಯ ಸುಂದರ ಮೂರ್ತಿಗಳಾದ ಅಶ್ವಿನಿ ದೇವತೆಗಳನ್ನು ಸ್ಮರಿಸಿದಳು. ಅಶ್ವಿನಿ ದೇವತೆಗಳಿಗೆ ಯಮಳರೆಂದೂ ಹೆಸರು. ಅವಳಿ ಜವಳಿಗಳು ಎಂದರ್ಥ. ಸಾಮಾನ್ಯವಾಗಿ ಅವಳಿ ಮಕ್ಕಳ ರೂಪದಲ್ಲಿ ಸಾಮ್ಯತೆ ಇರುತ್ತದೆಯಾದರೂ ಮನಸ್ಸಿನಲ

 
 
 

Comments


bottom of page