top of page

ನಕುಲ ಸಹದೇವರ ಜನನ (ಮಹಾಭಾರತ ಕಥಾಮಾಲೆ 22)

ಪಾಂಡುವು ಮಾದ್ರಿಯ ಮನದ ಇಂಗಿತವನ್ನು ಅರಿತು, ಮಕ್ಕಳನ್ನು ಪಡೆಯಬೇಕೆನ್ನುವ ಆಕೆಯ ಆಸೆಯನ್ನು ಪೂರೈಸಲು ಮುಂದಾದನು. ದೂರ್ವಾಸ ದತ್ತವಾದ ಮಹಾಮಂತ್ರವನ್ನು ಕುಂತಿಯಿಂದ ಮಾದ್ರಿಗೆ ಉಪದೇಶಿತವಾಗುವಂತೆ ಮಾಡುವ ಉದ್ದೇಶದಿಂದ, ಕುಂತಿಯ ಬಳಿಗೆ ತೆರಳಿದನು. ಕುಂತಿಯನ್ನು ಕುರಿತು, "ರಾಜಕುಮಾರಿ! ನಮ್ಮ ವಂಶದ ಅಭಿವೃದ್ಧಿಗಾಗಿಯೂ, ಪ್ರಪಂಚದ ಹಿತಕ್ಕಾಗಿಯೂ ನಮ್ಮ ಪೂರ್ವಜರ ಪ್ರೀತ್ಯರ್ಥವಾಗಿಯೂ ಇನ್ನೂ ಹೆಚ್ಚಿನ ಸಂತಾನವನ್ನು ಹೊಂದುವುದು ಸೂಕ್ತವಾದುದು ಎಂದು ನನಗನ್ನಿಸುತ್ತದೆ" ಎಂದನು. ಪಾಂಡುವು ಮುಂದುವರಿದನು, "ದೇವೀ! ನನ್ನ ಸಂತೋಷಕ್ಕಾಗಿ ಮತ್ತು ಯಶಸ್ಸಿಗಾಗಿ ನಿನಗೆ ದುಃಸ್ಸಾಧ್ಯವೆನಿಸಿದರೂ ನಾನು ಹೇಳಿದಂತೆ ಮಾಡುವುದು ಯುಕ್ತವಾಗಿದೆ. ಯಶಸ್ಸನ್ನು ಹೊಂದುವುದಕ್ಕಾಗಿಯೇ ಪ್ರಪಂಚದ ಸಕಲರೂ ಕಾರ್ಯತತ್ಪರರಾಗಿರುವರು"


ಪ್ರಾಪ್ಯಾಧಿಪ ತ್ಯಮಿಂದ್ರೇಣ ಯಜ್ಞೈರಿಷ್ವಂ ಯಶೋऽರ್ಧನಾ|

ತಥಾ ಮಂತ್ರವಿದೋ ವಿಪಾಸ್ತಪಸ್ತಪ್ತ್ವಾ ಸುದುಷ್ಕರಮ್|

ಗುರೂನಭ್ಯುಪಗಚ್ಛಂತಿ ಯಶಸೋऽರ್ಥಾಯ ಭಾಮಿನಿ

ತಥಾ ರಾಜರ್ಷಹಃ ಸರ್ವೇ ಬ್ರಾಹ್ಮಣಾಶ್ಚ ತಪೋಧನಾಃ|

ಚಕ್ರುರುಚ್ಚಾವಚಂ ಕರ್ಮ ಯಶಸೋऽರ್ಥಾಯ ದುಷ್ಕರಮ್||


"ಭಾಮಿನಿ ಇಂದ್ರನು ತ್ರಿಲೋಕಾಧಿಪತಿಯಾಗಿದ್ದರೂ ಯಶಸ್ಸಿಗಾಗಿಯೇ ಯಜ್ಞ ಯಾಗಾದಿಗಳನ್ನು ಮಾಡುತ್ತಲೇ ಇರುತ್ತಾನೆ. ಬ್ರಾಹ್ಮಣರು ವೇದ ಪಾರಂಗತರಾಗಿದ್ದರೂ, ತಪಸ್ವಿಗಳಾಗಿದ್ದರೂ ಹೆಚ್ಚಿನ ಯಶಸ್ಸನ್ನು ಗಳಿಸಲು ತಮ್ಮ ಆಚಾರ್ಯರನ್ನು ಸಂಪರ್ಕಿಸಿ, ವಿಷಯ ಗ್ರಹಣ ಮಾಡುತ್ತಲೇ ಇರುತ್ತಾರೆ. ಅಂತೆಯೇ ರಾಜರ್ಷಿಗಳೂ ತಪಸ್ಸನ್ನು ಮಾಡಿ ಅನೇಕ ವಿಧವಾದ ಶಕ್ತಿಗಳನ್ನು ಸಂಪಾದಿಸುವಲ್ಲಿ ಯಶಸ್ಕಾಮರಾಗಿ ಬಗೆ ಬಗೆಯ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಆದುದರಿಂದ, ನಾನು ಯಶಸ್ಸಿಗಾಗಿ ಹೆಚ್ಚಿನ ಸಂತಾನವನ್ನು ಪಡೆಯುವುದು ಅಯುಕ್ತವೆನಿಸಲಾರದು. ಮೇಲಾಗಿ ಇಂದು ಮಾದ್ರಿಯು 'ಅಪುತ್ರವತಿ' ಎನಿಸಿರುವಳು. ನೀನು ನಿನಗೆ ಸಿದ್ಧಿಸಿರುವ ಮಂತ್ರವನ್ನು ಅವಳಿಗೆ ಉಪದೇಶಿಸುವುದರಿಂದ, ಅವಳನ್ನು ಸಂತಾನವತಿಯಾಗಿ ಮಾಡಿದೆಯಾದರೆ, ಅವಳಿಗೂ ನನಗೂ ಸಂತೋಷವಾಗುತ್ತದೆ. ನಿನಗೆ ಶಾಶ್ವತವಾದ ಕೀರ್ತಿಯು ಲಭಿಸುತ್ತದೆ" ಎಂದನು.


ಪಾಂಡುವಿನ ಮಾತಿಗೆ ಒಡನೆಯೇ ಸಮ್ಮತಿಸಿದ ಕುಂತಿಯು ಶುಚಿರ್ಭೂತಳಾಗಿದ್ದ ಮಾದ್ರಿಯನ್ನು ಕರೆದು, ಪದ್ಮಾಸನದಲ್ಲಿ ಕುಳ್ಳಿರಿಸಿ, ಮಹಾಮಂತ್ರವನ್ನು ತಾನು ಪುನಶ್ಚರಣೆ ಮಾಡಿ, ಅದರ ಶಕ್ತಿಯನ್ನು ಮಾದ್ರಿಗೆ ಧಾರೆಯೆರೆದು ಹೇಳಿದಳು, "ತಂಗೀ, ಈ ಕೂಡಲೇ ದೇವನೊಬ್ಬನನ್ನು ಸ್ಮರಿಸು. ಅವನು ಒಡನೆಯೇ ನಿನ್ನ ಬಳಿಗೆ ಬಂದು ತನಗೆ ಅನುರೂಪವಾದ ಒಬ್ಬ ಪುತ್ರನನ್ನು ಅನುಗ್ರಹಿಸುವನು" ಎಂದು ಹೇಳಿ ಹೊರಟುಹೋದಳು. ಮಾದ್ರಿಯು ಕ್ಷಣಕಾಲ ಯೋಚಿಸಿ, ದಿವ್ಯ ಸುಂದರ ಮೂರ್ತಿಗಳಾದ ಅಶ್ವಿನಿ ದೇವತೆಗಳನ್ನು ಸ್ಮರಿಸಿದಳು.

ಅಶ್ವಿನಿ ದೇವತೆಗಳಿಗೆ ಯಮಳರೆಂದೂ ಹೆಸರು. ಅವಳಿ ಜವಳಿಗಳು ಎಂದರ್ಥ. ಸಾಮಾನ್ಯವಾಗಿ ಅವಳಿ ಮಕ್ಕಳ ರೂಪದಲ್ಲಿ ಸಾಮ್ಯತೆ ಇರುತ್ತದೆಯಾದರೂ ಮನಸ್ಸಿನಲ್ಲಿಯೂ ಸಾಮ್ಯತೆ ಇರಬೇಕೆಂದಿಲ್ಲ. ಆದರೆ, ಅಶ್ವಿನಿ ದೇವತೆಗಳು ಮಾತ್ರ ಎಲ್ಲಾ ವಿಧದಲ್ಲೂ ಸಾಮ್ಯತೆ ಹೊಂದಿರುವವರು. ಒಬ್ಬರನ್ನು ಬಿಟ್ಟು ಮತ್ತೊಬ್ಬರ ಸಂಚಾರವೇ ಇಲ್ಲ. ಒಬ್ಬರನ್ನೇ ಕರೆಯುವಂತೆಯೂ ಇಲ್ಲ. ಅಶ್ವಿನಿ ದೇವತಾತ್ಮಕ ಮಂತ್ರಗಳೂ ದ್ವಿವಚನದಲ್ಲಿಯೇ ಇವೆ. ಎರಡೂ ದೇವತೆಗಳನ್ನು ಸೇರಿಸಿ ಆಮಂತ್ರಿಸುವ ಮಂತ್ರಗಳೇ ಆಗಿವೆ. ಇಂತಹ ಅಶ್ವಿನಿ ದೇವತೆಗಳನ್ನು ಮಾದ್ರಿಯು ಆಹ್ವಾನಿಸಿದಳು. ಮಾದ್ರಿಯ ಆಮಂತ್ರಣವನ್ನು ಅಂಗೀಕರಿಸಿದ ಇಬ್ಬರು ದೇವತೆಗಳೂ ಅವಳ ಬಳಿ ಆಗಮಿಸಿದರು. ಮಾದ್ರಿಯ ಅಪೇಕ್ಷೆಯಂತೆ ಪುತ್ರರನ್ನು ಅನುಗ್ರಹಿಸಿದರು. ಇಬ್ಬರು ದೇವತೆಗಳ ಅನುಗ್ರಹದಿಂದ ಅವಳಿ ಮಕ್ಕಳನ್ನು ಮಾದ್ರಿಯು ಒಡನೆಯೇ ಹೊಂದಿದಳು. ಅವರಿಬ್ಬರೂ ನಕುಲ ಸಹದೇವ ಎಂಬುದಾಗಿ ಹೆಸರಾಯಿತು. ಅಶ್ವಿನಿ ದೇವತೆಗಳಂತೆಯೇ ಈ ಇಬ್ಬರು ಮಕ್ಕಳು ಅಸಾಧಾರಣ ರೂಪ ಸಂಪನ್ನರಾಗಿದ್ದರು. ಅವರ ಜನನದೊಡನೆಯೇ ಅಶರೀರ ವಾಣಿಯು ಮೊಳಗಿತು, "ಇವರಿಬ್ಬರೂ ರೂಪದಲ್ಲಿಯೂ, ಪರಾಕ್ರಮದಲ್ಲಿಯೂ, ಗುಣದಲ್ಲಿಯೂ ಅಶ್ವಿನಿ ದೇವತೆಗಳನ್ನೂ ಮೀರಿಸುತ್ತಾರೆ". ಅವರ ಅಸಾಧಾರಣ ರೂಪರಾಶಿಯಿಂದ ಆ ವನವೇ ವಿರಾಜಿಸಿತು. ಪಾಂಡುಪುತ್ರರೆಲ್ಲರಿಗೂ ಜಾತ ಕರ್ಮ ನಾಮಕರಣಾದಿಗಳು ಯಥಾ ವಿಧಿಯಾಗಿ ಮಾಡಲ್ಪಟ್ಟವು. ಋಷಿಗಳು ಆಗಮಿಸಿ ಸ್ವಸ್ತಿವಾಚನ ಮಾಡಿದರು. ಮಕ್ಕಳ ನಡುವಿನ ಅಂತರ ಒಂದೊಂದು ವರ್ಷವಾಗಿದ್ದಿತು. ಎಲ್ಲಾ ಮಕ್ಕಳೂ ಸಾತ್ವಿಕರೂ, ವೀರ್ಯವಂತರೂ, ಬಲವಂತರೂ, ಪರಾಕ್ರಮಿಗಳೂ ಆಗಿದ್ದರು. ದೇವರೂಪಿಗಳೂ ಅಮಿತೌಜಸ್ಕರೂ ಆದ ಮಕ್ಕಳನ್ನು ಪಡೆದ ಪಾಂಡುವು ಅಮಿತಾನಂದವನ್ನು ಹೊಂದಿದನು. ಶತಶೃಂಗದಲ್ಲಿ ಮಹರ್ಷಿಗಳಿಗೂ, ಋಷಿ ಪತ್ನಿಯರಿಗೂ ಈ ಮಕ್ಕಳು ಅತ್ಯಂತ ಪ್ರಿಯರಾಗಿದ್ದರು.

Comments


bottom of page