top of page

ಭೀಮನ ಜನನ (ಮಹಾಭಾರತ ಕಥಾಮಾಲೆ 20)

ಭೀಮನ ಜನನ

ಧರ್ಮದೇವನ ಅನುಗ್ರಹದಿಂದ ಜನಿಸಿದ್ದರಿಂದ ಹಾಗೂ ತಾನು ಆಚರಿಸುವ ಅಚಲವಾದ ಧರ್ಮದ ಕಾರಣದಿಂದ 'ಧರ್ಮರಾಯ' ಎಂದೇ ವಿಖ್ಯಾತಿಯನ್ನು ಹೊಂದಿದ ಯುಧಿಷ್ಠಿರನನ್ನು ಪುತ್ರನನ್ನಾಗಿ ಪಡೆದ ಪಾಂಡುವು ಸಂತುಷ್ಟನಾದನು. ಆದರೆ ಧರ್ಮಕ್ಕೆ ಬಲದ ಬೆಂಬಲ ಬೇಕೇ ಬೇಕು ಬಲದ ಬೆಂಬಲವಿಲ್ಲದೆ ಧರ್ಮವು ಗಟ್ಟಿಯಾಗಿ ನಿಲ್ಲಲಾರದು. ಆದ್ದರಿಂದ ಯುಧಿಷ್ಠಿರನಿಗೆ ಬೆಂಬಲವಾಗಿ ಮಹಾ ಬಲಿಷ್ಠನಾದ ಪುತ್ರನನ್ನು ಪಡೆಯಬೇಕೆಂದು ಪಾಂಡುವು ತರ್ಕಿಸಿದನು.

ಆತನು ಕುಂತಿಯನ್ನು ಕುರಿತು ಹೇಳಿದನು, "ಪ್ರಿಯಳೇ! ಕ್ಷತ್ರಿಯನು ಮಹಾ ಬಲಿಷ್ಠನಾಗಿರಬೇಕು. ಕ್ಷತ್ರಿಯರಿಗೆ ಬಲದಿಂದಲೇ ಜ್ಯೇಷ್ಠತೆ ಹಿರಿಮೆ. ನಮಗೀಗ ಧರ್ಮ ಶ್ರೇಷ್ಠನಾದ ಮಗನು ಜನಿಸಿರುವನು. ನೀನೀಗ ಬಲಜ್ಯೇಷ್ಠನಾದ ಒಬ್ಬ ಮಗನನ್ನು ಮಂತ್ರ ಸಿದ್ಧಿಯಿಂದ ಪಡೆಯುವುದು ವಿಹಿತವಾದುದು. ಆತನ ಬೆಂಬಲದಿಂದ ಧರ್ಮವು ಸ್ಥಿರವಾಗುವುದು" ಎಂದನು.


ಅಲ್ಲದೇ, ಪಾಂಡುವು ಈ ಬಲಿಷ್ಠನಾದ ಪುತ್ರನನ್ನು ಪಡೆಯಲು ಯಾವ ದೇವತೆಯನ್ನು ಆಹ್ವಾನಿಸಬೇಕೆಂಬುದನ್ನು ತಿಳಿಸಿದನು. ಬಲಿಷ್ಠರಲ್ಲಿ ಶ್ರೇಷ್ಠನೆಂದು ಪ್ರಪಂಚದ ಸಕಲರಿಂದಲೂ ಸಂಸ್ತುತನಾದ, ಸಪ್ತ ಮರುತ್ತುಗಳಲ್ಲಿ ಶ್ರೇಷ್ಠನಾದ ವಾಯುದೇವನನ್ನು ನಿಯಮಪೂರ್ವಕವಾಗಿ ಆಹ್ವಾನಿಸುವಂತೆ ತಿಳಿಸಿದನು. ಪಾಂಡುವಿನ ಈ ವಿಚಾರಕ್ಕೆ ಸಮ್ಮತಿಸಿದ ಕುಂತಿಯು, ಶುಚಿರ್ಭೂತಳಾಗಿ, ಸುಖಾಸನದಲ್ಲಿ ಕುಳಿತು ದೂರ್ವಾಸರಿತ್ತ ಮಹಾಮಂತ್ರವನ್ನು ಜಪಿಸಿ, ಮಾರುತನನ್ನು ಆಹ್ವಾನಿಸಿದಳು. ಒಡನೆಯೇ ಕುಂತಿಯ ಇದಿರಿನಲ್ಲಿ ಪ್ರತ್ಯಕ್ಷನಾದ ವಾಯುದೇವನು ಪ್ರಶ್ನಿಸಿದನು, "ಕುಂತೀ! ನಾನು ನಿನಗೇನನ್ನು ಕೊಡಲಿ".



ವಾಯುದೇವನನ್ನು ಅಭಿವಂದಿಸಿದ ಕುಂತಿಯು, "ಮಹಾಬಲಿಷ್ಠನೂ, ಮಹಾಕಾಯನೂ, ಪ್ರಪಂಚದಲ್ಲಿನ ಬಲಿಷ್ಠರೆಲ್ಲರ ದರ್ಪವನ್ನು ಅಡಗಿಸಬಲ್ಲ, ಸಮರ್ಥನಾದ ಮಗನನ್ನು ದಯಪಾಲಿಸು" ಎಂದು ಪ್ರಾರ್ಥಿಸಿದಳು. ಹಾಗೆಯೇ ಆಗಲೆಂದು ಅನುಗ್ರಹಿಸಿದ ವಾಯುದೇವನು, ಮಹಾ ಪರಾಕ್ರಮಿಯೂ, ಮಹಾ ಬಾಹುವೂ ಆದ 'ಭೀಮ' ಎಂದು ಖ್ಯಾತಿವೆತ್ತ ಮಗನನ್ನು ಕುಂತಿಗೆ ದಯಪಾಲಿಸಿದನು. ಭೀಮನು ಶ್ರಾವಣ ಕೃಷ್ಣ ತ್ರಯೋದಶಿ, ಮಘಾ ನಕ್ಷತ್ರದಲ್ಲಿ ಹುಟ್ಟಿದನು. ಅವನು ಹುಟ್ಟಿದಾಗಲೂ ಅಶರೀರವಾಣಿ ಮೊಳಗಿತು, "ಪ್ರಪಂಚದಲ್ಲಿನ ಬಲಿಷ್ಠರೆಲ್ಲರಿಗೂ ಶ್ರೇಷ್ಠನಾದವನು ಹುಟ್ಟಿರುವನು" ಎಂದು.


ಒಡನೆಯೇ ಒಂದು ವೈಚಿತ್ರ್ಯವೂ ನಡೆಯಿತು. ಕುಂತಿಯು ಹುಟ್ಟಿದ ಶಿಶುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಳಿತಿದ್ದಳು. ಆ ವೇಳೆಗೆ ಸರಿಯಾಗಿ ಹುಲಿಯೊಂದು ಘರ್ಜಿಸುತ್ತಾ ಓಡಿ ಬಂತು. ಹುಲಿಯ ಭಯದಿಂದ ಮಗುವು ತೊಡೆಯ ಮೇಲೆ ಮಲಗಿರುವುದನ್ನು ಗಮನಿಸದ ಕುಂತಿಯು ಮೇಲೆದ್ದಳು. ತೊಡೆಯ ಮೇಲಿದ್ದ ಶಿಶುವು ಕೆಳಕ್ಕೆ ಬಿದ್ದಿತು. ಒಡನೆಯೇ ಘೋರವಾದ ಶಬ್ದವು ಉಂಟಾಯಿತು. ಹುಲಿಯು ಭಯಪಟ್ಟು ಬೇರೆಡೆ ಓಡಿ ಹೋಯಿತು. ಮಗುವಿಗೆ ಏನಾಯಿತೋ ಎಂಬ ಗಾಬರಿಯಿಂದ ಪಾಂಡು ಕುಂತಿಯರು ಋಷಿಗಳೊಡನೆ ಕೆಳಗೆ ಬಿದ್ದ ಮಗುವನ್ನೆತ್ತಿಕೊಳ್ಳಲು ಧಾವಿಸಿದರು. ಶರೀರವೆಲ್ಲವೂ ಜಜ್ಜಿ ಹೋಗಿ, ಜ್ಞಾನ ತಪ್ಪಿದ ಶಿಶುವನ್ನು ನಿರೀಕ್ಷಿಸಿದ್ದ ಅವರಿಗೆ ಕಂಡಿದ್ದೇನು? ಏನೂ ಆಗಿಯೇ ಇಲ್ಲವೆಂಬಂತೆ ಕಿಲಕಿಲ ನಗುತ್ತಿದ್ದ ಮಗುವನ್ನು ಕಂಡರು. ಮಗು ಬಿದ್ದ ಬಂಡೆಕಲ್ಲು ಒಡೆದು ನುಚ್ಚು ನೂರಾಗಿತ್ತು. ಇದನ್ನು ನೋಡಿದವರೆಲ್ಲರೂ ಮೂಕ ವಿಸ್ಮಿತರಾದರು, ಕಣ್ಣುಜ್ಜಿಕೊಂಡು ಪುನಃ ನೋಡಿ, ತಾವು ನೋಡುತ್ತಿರುವುದು ಸತ್ಯವೆಂದು ಖಚಿತ ಪಡಿಸಿಕೊಂಡರು. ಆನಂದ ಬಾಷ್ಪಗಳನ್ನು ಸುರಿಸುತ್ತಾ, ವೀರ ಮಾತೆಯಾದ ಕುಂತಿಯು ಮಗನನ್ನು ಎತ್ತಿ ಮುದ್ದಾಡಿದಳು. ಕೆಳಗೆ ಬಿದ್ದುದರ ಕುರುಹಾಗಿ ಒಂದು ಗೆರೆಯೂ ಮಗುವಿನ ಮೈಮೇಲೆ ಕಾಣಲಿಲ್ಲ. ಎಲ್ಲರಿಗೂ ಮಗುವಿನ ಶಕ್ತಿಯ ಅರಿವಾಯಿತು.


ಭೀಮನು ಜನಿಸಿದ ದಿನವೇ ಹಸ್ತಿನಾಪುರದಲ್ಲಿ ದುರ್ಯೋಧನನ ಜನನವೂ ಆಯಿತು.


ತಾನು ಪಡೆದ ಪುತ್ರರಲ್ಲಿ ಒಬ್ಬನು ಪರಮ ಧಾರ್ಮಿಕನೂ, ಇನ್ನೊಬ್ಬನು ಅಪ್ರತಿಮ ಬಲಶಾಲಿಯೂ ಈ ಎರಡು ಗುಣಗಳೂ ಮೇಳೈಸಿದ, ವಿವೇಕಶಾಲಿಯೂ ಪರಾಕ್ರಮಿಯೂ ಆದ ಪುತ್ರನೊಬ್ಬನನ್ನು ಪಡೆದರೆ ತಾನು ಧನ್ಯ ಎಂದು ಪಾಂಡುವಿಗೆ ಅನಿಸತೊಡಗಿತು. ದೇವಾಧಿಪತಿಯಾದ, ಅಪ್ರಮೇಯನಾದ, ಬಲವಂತನೂ, ತೇಜೋವಂತನೂ, ವೀರ್ಯವಂತನೂ ಆದ ಇಂದ್ರನು ಈ ಗುಣಗಳನ್ನು ಹೊಂದಿದ ಮಗುವನ್ನು ಅನುಗ್ರಹಿಸಲು ಯೋಗ್ಯನೆಂದು ಪಾಂಡುವು ತೀರ್ಮಾನಿಸಿದನು. ಕುಂತಿಗಿದ್ದ ವರಬಲದಿಂದ ಇಂದ್ರನನ್ನು ಆಹ್ವಾನಿಸಬಹುದಾಗಿತ್ತು.

ಆದರೂ ಮಂತ್ರ ಪ್ರಭಾವಕ್ಕೆ ಒಳಗಾಗಿ ಬರಬಹುದಾದ ಇಂದ್ರನು ಸುಪ್ರೀತಿಯಿಂದ ಅನುಗ್ರಹಿಸಬಹುದಾದ ಪುತ್ರನು ಸರ್ವಗುಣ ಸಂಪನ್ನನೂ ಪರಿಪೂರ್ಣನು ಆಗಿರುವನು ಎಂದು ಪಾಂಡುವು ನಿರ್ಧರಿಸಿ, ಇಂದ್ರನ ಕುರಿತಾಗಿ ತಪಸ್ಸನ್ನು ಆಚರಿಸಲು ನಿರ್ಧರಿಸಿದನು. ಈ ವಿಚಾರವನ್ನು ಕುಂತಿಗೆ ತಿಳಿಸಿದನು.


ತಾನು ಮಾತ್ರವಲ್ಲದೇ ಕುಂತಿಗೂ ಒಂದು ವರ್ಷಕಾಲ ವ್ರತ ನಿಷ್ಠಳಾಗಿರುವಂತೆ ತಿಳಿಸಿದ ಪಾಂಡುವು ಶಚಿಪತಿಯ ಕುರಿತು ಘೋರವಾದ ತಪಸ್ಸಿನಲ್ಲಿ ನಿರತನಾದನು. ಕುಂತಿಯು ತನ್ನ ಪತಿಯೊಂದಿಗೆ ವೃತನಿಷ್ಠಳಾದಳು. ಪಾಂಡುವಿನ ತಪಸ್ಸಿಗೆ ಒಲಿದ ಇಂದ್ರನು ಪಾಂಡುವಿಗೆ ಪ್ರತ್ಯಕ್ಷನಾಗಿ, "ಪಾಂಡುರಾಜ! ನಿನ್ನ ಅಪೇಕ್ಷೆಯಂತೆ ಮೂರು ಲೋಕಗಳಲ್ಲಿಯೂ ವಿಖ್ಯಾತನಾಗುವ ಪುತ್ರನನ್ನೇ ಅನುಗ್ರಹಿಸುವೆನು. ಸದಾ ಸುಹೃದರ ಹಿತಚಿಂತಕನೂ, ದುಷ್ಟರ ನಿಗ್ರಹವನ್ನು ಮಾಡುವ ಸುಪುತ್ರನನ್ನು ಅನುಗ್ರಹಿಸುತ್ತೇನೆ" ಎಂಬುದಾಗಿ ಹೇಳಿ, ಪಾಂಡುವಿನ ಅಭಿವಂದನೆಗಳನ್ನು ಸ್ವೀಕರಿಸಿ, ಪಾಂಡುವಿನ ಕಂಗಳಿಂದ ಆನಂದಾಶ್ರುಗಳು ಸುರಿಯುತ್ತಿರುವಂತೆಯೇ ಅದೃಶ್ಯನಾದನು.

Comments


bottom of page