top of page

ಪಾಂಡುವಿನ ಪುತ್ರಾಪೇಕ್ಷೆ (ಮಹಾಭಾರತ ಕಥಾಮಾಲೆ‌ 18)

ಪಾಂಡುವಿನ ಪುತ್ರಾಪೇಕ್ಷೆ

ಪಾಂಡುವು ಶತಶೃಂಗ ಪರ್ವತದ ತಪ್ಪಲಿನಲ್ಲಿ ತನ್ನ ಪತ್ನಿಯರೊಂದಿಗೆ ಇರುತ್ತಾ, ಸದಾ ತಪಸ್ಸಿನ್ನಲಿಯೇ ತನ್ನನ್ನು ತಾನು ತೊಡಗಿಸಿಕೊಂಡನು. ಗುರು ಶುಶ್ರೂಷೆ ಮಾಡುತ್ತಾ, ಅಹಂಕಾರವನ್ನು ತ್ಯಜಿಸಿ, ಆತ್ಮ ಸಂಯಮವನ್ನು ಹೊಂದಿ ಜಿತೇಂದ್ರಿಯನಾದನು. ಆ ಪರ್ವತ ಪ್ರದೇಶದ ಎಲ್ಲ ತಾಪಸರಿಗೂ, ಸಿದ್ಧ ಚಾರಣರಿಗೂ ಪ್ರೀತಿ ಪಾತ್ರನಾದನು.


ಹೀಗಿರಲು, ಒಂದು ಅಮಾವಾಸ್ಯೆಯ ದಿನ ಆಶ್ರಮವಾಸಿಗಳಾದ ಋಷಿಗಳೆಲ್ಲರೂ ಸೇರಿ, ಬ್ರಹ್ಮನನ್ನು ದರ್ಶಿಸಲು ನಿಶ್ಚಯಿಸಿ, ಉತ್ತರಾಭಿಮುಖವಾಗಿ ಪ್ರಯಾಣ ಹೊರಟರು. ಆ ಋಷಿ ಸ್ತೋಮವನ್ನು ಅಭಿವಂದಿಸಿದ ಪಾಂಡುವು, "ಎಲ್ಲಿಗೆ ಹೊರಟಿರುವಿರಿ" ಎಂದು ವಿನೀತನಾಗಿ ಕೇಳಿದನು.



"ಇಂದು ಬ್ರಹ್ಮನ ಆಸ್ಥಾನದಲ್ಲಿ ದೇವತೆಗಳೂ, ಮಹರ್ಷಿಗಳೂ, ಪಿತೃದೇವತೆಗಳೂ ಸೇರಿರುವರು. ನಾವೆಲ್ಲರೂ ಬ್ರಹ್ಮ ದೇವನ ದರ್ಶನಾರ್ಥವಾಗಿ ಅಲ್ಲಿಗೆ ಹೊರಟಿರುವೆವು" ಎಂಬುದಾಗಿ ತಪಸ್ವಿಯೊಬ್ಬರು ಉತ್ತರಿಸಿದರು. ಪಾಂಡುವೂ ಸಹ ಬ್ರಹ್ಮನ ಸಭೆಯನ್ನು ನೋಡಲು ಅಪೇಕ್ಷಿಸಿ, ಪತ್ನಿಯರೊಡನೆ ಋಷಿ ಸ್ತೋಮವನ್ನು ಹಿಂಬಾಲಿಸಿದನು. ತಮ್ಮನ್ನು ಅನುಸರಿಸಿ ಉತ್ತರಾಭಿಮುಖವಾಗಿ ಬರುತ್ತಿದ್ದ ಪಾಂಡುವನ್ನು ಕುರಿತು ಮಹರ್ಷಿಗಳು ಹೀಗೆಂದರು "ನಮ್ಮೀ ಪ್ರಯಾಣದಲ್ಲಿ ಮಾನವರಿಗೆ ದಾಟಲು ಅಸಾಧ್ಯವಾದ ಅನೇಕ ಗಿರಿ ಪರ್ವತಗಳಿವೆ. ದೇವತೆಗಳು, ಗಂಧರ್ವ ಅಪ್ಸರೆಯರು ವಿಹರಿಸುವ ಪ್ರದೇಶಗಳೂ, ಕುಬೇರನ ಉದ್ಯಾನವನಗಳೂ ಇವೆ. ಮಹಾ ನದಿಗಳು ಇವೆ ಮತ್ತೂ ಮೇಲೆ ಹೋದಂತೆ ಸಂಪೂರ್ಣವಾಗಿ ಮಂಜು ಕವಿದ, ಯಾವುದೇ ವೃಕ್ಷ, ಮೃಗ ಪಕ್ಷಿಗಳಿಲ್ಲದ, ದಾಟಲು ಅಸಾಧ್ಯವಾದ ಪ್ರದೇಶಗಳಿವೆ. ಅಲ್ಲಿ ಪ್ರವೇಶಿಸಲು ವಾಯುವಿಗೆ, ತಪೋನಿಷ್ಠ ಮಹರ್ಷಿಗಳಿಗೆ ಸಿದ್ಧ ಚಾರಣರಿಗೆ ಮಾತ್ರವೇ ಸಾಧ್ಯ ಹೊರತು ಸಾಮಾನ್ಯ ಮಾನವರಿಗಲ್ಲ. ಅಲ್ಲದೇ ಮಕ್ಕಳಿಲ್ಲದವರಿಗೆ ಸ್ವರ್ಗ ಪ್ರವೇಶ ಸಾಧ್ಯವಿಲ್ಲ. ಆದ್ದರಿಂದ, ಯಾತನೆಯನ್ನೇ ಅರಿಯದ ಕೋಮಲಾಂಗಿಯರಾದ ನಿನ್ನ ಪತ್ನಿಯರೊಡನೆ ನಮ್ಮನ್ನು ಹಿಂಬಾಲಿಸಬೇಡ. ಅವರನ್ನು ಪರ್ವತಾರೋಹಣದ ದಾರುಣ ಸಂಕಟಕ್ಕೆ ಈಡು ಮಾಡಬೇಡ. ಹಿಂದಿರುಗಿ ಹೋಗು"

ಅದನ್ನು ಕೇಳಿದ ಪಾಂಡುವು ದುಃಖದಿಂದ ಹೇಳಿದನು "ಮಹಾಭಾಗರೇ! ನೀವು ಹೇಳುವುದು ಸತ್ಯ.

'ಯಜ್ಞೈಸ್ತು ದೇವಾನ್ಪ್ರೀಣಾತಿ ಸ್ವಾಧ್ಯಾಯ ತಪಸಾ ಮುನೀನ್| ಪುತ್ರೈಃ ಶ್ರಾದ್ಧೈಃ ಪಿತೃಂಶ್ಚಾಪಿ ಅನೃಶಂಸ್ಯೇನ ಮಾನವಾನ್| ಋಷಿ ದೇವ ಮನುಷ್ಯಾಣಾಂ ಪರಿಮುಕ್ತೋಸ್ಮಿ ಧರ್ಮತಃ||'

ಮಾನವನಾದವನು ಪಿತೃ ಋಣ, ದೇವ ಋಣ, ಋಷಿ ಋಣ, ಮನುಷ್ಯ ಋಣ ಈ ನಾಲ್ಕು ಋಣಗಳನ್ನು ಹೊತ್ತು ಹುಟ್ಟುತ್ತಾನೆ, ಬೆಳೆಯುತ್ತಾನೆ. ಸಕಾಲದಲ್ಲಿ ಈ ನಾಲ್ಕು ಋಣಗಳನ್ನು ತೀರಿಸುವುದು ಮಾನವನ ಮುಖ್ಯ ಕರ್ತವ್ಯ. ಅಲ್ಲದಿದ್ದರೆ, ಅವನಿಗೆ ಒಳ್ಳೆಯ ಲೋಕಗಳು ಲಭಿಸುವುದಿಲ್ಲ.

ಯಜ್ಞ ಯಾಗಾದಿಗಳನ್ನು ಹೋಮ ಹವನಗಳನ್ನೂ ಮಾಡಿ, ದೇವ ಋಣವನ್ನು ತೀರಿಸಬೇಕು. ಅಧ್ಯಯನ ಅಧ್ಯಾಪನಗಳನ್ನೂ ತಪಸ್ಸನ್ನೂ ಮಾಡಿ ಋಷಿ ಋಣವನ್ನು ತೀರಿಸಬೇಕು. ಮಕ್ಕಳನ್ನು ಪಡೆದು, ಪಿತೃ ದೇವತೆಗಳಿಗೆ ಶ್ರಾದ್ಧಾದಿಗಳನ್ನು ಮಾಡಿ, ತಂದೆ ತಾಯಿಯರ ಸೇವೆ ಮಾಡಿ ಪಿತೃ ಋಣವನ್ನು ತೀರಿಸಬೇಕು. ಮಾನವರೂ ಸೇರಿದಂತೆ ಸಕಲ ಚರಾಚರ ಪ್ರಾಣಿಗಳ ಕುರಿತಾಗಿ ಭೂತ ದಯೆಯನ್ನು ಹೊಂದಿ, ಯಾರಿಗೂ ತೊಂದರೆಯಾಗದಂತೆ ಜೀವಿಸುತ್ತಾ, ದಾನ ಧರ್ಮವನ್ನು ಮಾಡುತ್ತಾ, ಎಲ್ಲರನ್ನೂ ಪ್ರೀತಿಯಿಂದ ಕಾಣುವ ಮೂಲಕ ಮನುಷ್ಯ ಋಣವನ್ನು ತೀರಿಸಬೇಕು. ನಾನು ಋಷಿ ದೇವ ಮನುಷ್ಯ ಋಣ ಗಳಿಂದ ಮುಕ್ತನಾಗಿದ್ದೇನೆ. ನಾನು ಪುತ್ರವಂತನಾಗದೆ ಇರುವುದರಿಂದ ಪಿತೃ ಋಣದಿಂದ ಮುಕ್ತನಾಗಿಲ್ಲ. ಆದ್ದರಿಂದ ನನಗೆ ಉತ್ತಮ ಲೋಕಗಳ ಪ್ರಾಪ್ತಿಯಿಲ್ಲ. ನಾನು ಪುತ್ರವಂತನಾಗಿ, ಪಿತೃ ಋಣದಿಂದ ಮುಕ್ತನಾಗಲು ಯಾವುದಾದರೂ ಮಾರ್ಗವಿದೆಯೇ? ದಯವಿಟ್ಟು ತಿಳಿಸಿ" ಎಂದು ದೈನ್ಯದಿಂದ ಬೇಡಿಕೊಂಡನು.


"ನರ ಶ್ರೇಷ್ಠನೇ! ಸಕಲ ಸುಯೋಗಗಳಿಂದ ಕೂಡಿದ, ದೇವ ಸದೃಶವಾದ ಸಂತಾನವನ್ನು ಪಡೆಯುವ ಯೋಗ ನಿನಗಿದೆ. ಇದನ್ನು ನಾವು ಜ್ಞಾನ ದೃಷ್ಟಿಯಿಂದ ನೋಡಿ ಹೇಳುತ್ತಿದ್ದೇವೆ. ದೈವವು ತೋರಿದ ಮಾರ್ಗದಲ್ಲಿ ಮುನ್ನಡೆ, ಶುಭವಾಗಲಿ" ಎಂದು ಪಾಂಡುವಿಗೆ ಉತ್ತರಿಸಿದ ಮಹರ್ಷಿಗಳು, ಪತ್ನಿ ಸಮೇತನಾದ ಪಾಂಡುವನ್ನು ಅಲ್ಲಿಯೇ ಬಿಟ್ಟು, ಮುಂದೆ ಸಾಗಿದರು.


ಪಾಂಡುವು ತಾನು ಋಷಿ ಶಾಪದ ಕಾರಣದಿಂದ ಪತ್ನಿಯರೊಡನೆ ಸಮಾಗಮ ಹೊಂದಲಾರೆ, ಆದರೆ ಮಹರ್ಷಿಗಳ ಮಾತಿನಂತೆ ತನಗೆ ಸಂತಾನ ಪ್ರಾಪ್ತಿಯ ಯೋಗವಿದೆ.ಇದು ಹೇಗೆ ಸಾಧ್ಯ ಎಂಬುದನ್ನೇ ಚಿಂತಿಸುತ್ತಾ, ಕುಂತಿಯಲ್ಲಿ ಸಮಾಲೋಚಿಸಲು ಮುಂದಾದನು. ಅವಳನ್ನು ತನ್ನ ಬಳಿಗೆ ಕರೆದು ಹೇಳಿದನು "ದೇವಿ! ಯಜ್ಞ ಯಾಗಾದಿಗಳು, ದಾನ ಧರ್ಮಗಳು, ವ್ರತ ನಿಯಮಗಳನ್ನೂ, ಕಠಿಣವಾದ ತಪಸ್ಸನ್ನೂ ಎಷ್ಟು ಮಾಡಿದರೂ, ಅಪುತ್ರವಂತನಾದವನಿಗೆ ಉನ್ನತ ಲೋಕಗಳು ಲಭಿಸಲಾರವೆಂಬುದು ನಿಶ್ಚಿತ. ಕೀರ್ತಿಗೂ, ಧರ್ಮಕ್ಕೂ ಪುತ್ರನೇ ಮೂಲ ಕಾರಣವೆಂದು ಶಾಸ್ತ್ರಗಳು ಸಾರುತ್ತವೆ. ನಾನು ಜಿತೇಂದ್ರಿಯನಲ್ಲದಿದ್ದರೂ, ನಾನೆಸಗಿದ ಕ್ರೂರ ಕರ್ಮದ ಕಾರಣದಿಂದ ಋಷಿ ಶಾಪಕ್ಕೊಳಗಾಗಿ, ನಿಮ್ಮಲ್ಲಿ ಸಮಾಗಮ ಹೊಂದಿ ಪುತ್ರವಂತನಾಗಬಹುದಾದ ಭಾಗ್ಯವನ್ನು ಕಳೆದುಕೊಂಡೆನು. ಈ ಆಪತ್ಕಾಲದಲ್ಲಿ ನಾವು ಸಂತಾನ ಭಾಗ್ಯವನ್ನು ಹೊಂದಲು ಯಾವುದಾದರೂ ಆಪದ್ಧರ್ಮ ಇದೆಯೇ?" ಎಂದು ಪ್ರಶ್ನಿಸಿದನು.

Comments


bottom of page