ಪಾಂಡು ಚಕ್ರವರ್ತಿಯ ದಿಗ್ವಿಜಯ (ಮಹಾಭಾರತ ಕಥಾಮಾಲೆ 15)
- Arunkumar Bhat

- Sep 23
- 3 min read
ಪಾಂಡು ಚಕ್ರವರ್ತಿಯ ದಿಗ್ವಿಜಯ
ಮಾದ್ರಿಯನ್ನು ವಿವಾಹವಾದ ಬಳಿಕ ಪಾಂಡುವು ಕುಂತಿ - ಮಾದ್ರಿಯರೊಡನೆ ಸುಖ ಸಂತೋಷದಿಂದ ಕಾಲ ಕಳೆಯತೊಡಗಿದನು. ಕುಂತಿ ಮಾದ್ರಿಯರ ನಡುವೆ, ಸವತಿಯರಲ್ಲಿ ಸಹಜವಾದ ಈರ್ಷ್ಯೆಯಾಗಲಿ, ದ್ವೇಷ ಅಸೂಯೆಗಳಾಗಲಿ ಇರಲಿಲ್ಲ. ಬದಲಾಗಿ ಅವರಿಬ್ಬರಲ್ಲಿ ಪ್ರೀತಿ ವಿಶ್ವಾಸ ಆಪ್ತತೆಗಳಿದ್ದವು.
ಪಾಂಡುವು ಮಾದ್ರಿಯನ್ನು ವಿವಾಹವಾಗಿ ಕೆಲವೇ ಕಾಲಾನಂತರದಲ್ಲಿ ವಿಜಯ ಯಾತ್ರೆಗೆ ಹೊರಟನು. ಭೀಷ್ಮನೇ ಮೊದಲಾದ ಹಿರಿಯರಿಗೂ, ತಾಯಿಗೂ ನಮಿಸಿ ಅಣ್ಣನ ಅನುಜ್ಞೆಯನ್ನು ಪಡೆದು, ವಿರಹವನ್ನು ನೆನೆದು ಚಿಂತಿಸುತ್ತಿದ್ದ ಪತ್ನಿಯರಿಗೆ ಸಮಾಧಾನವನ್ನು ಹೇಳಿದನು. ಶುಭ ಮುಹೂರ್ತದಲ್ಲಿ ಮಂಗಳವಾದ್ಯಗಳು ಮೊಳಗುತ್ತಿರಲು ಚತುರಂಗ ಬಲ ಸಮೇತನಾಗಿ ಈ ದಿಗ್ವಿಜಯಕ್ಕೆ ಪಾಂಡುವು ತೆರಳಿದನು. ಮೊದಲಿಗೆ ದಶಾರ್ಣರೆಂಬ ದುಷ್ಟರ ರಾಜಧಾನಿಯ ಕಡೆ ನುಗ್ಗಿದನು. ಈ ದುಶಾರ್ಣರನ್ನು ಯುದ್ಧದಲ್ಲಿ ಸೆದೆಬಡಿದ ಪಾಂಡುವು ಅವರಿಂದ ಕಪ್ಪ ಕಾಣಿಕೆಗಳನ್ನು ಸೂರೆಗೊಂಡನು. ಮುಂದುವರಿದ ಪಾಂಡುವು ಮಗಧದ ಕಡೆಗೆ ಧಾವಿಸಿದನು. ಅಲ್ಲಿನ ಅಧಿಪತಿಯಾದ ದೀರ್ಘರಾಜನು ಅನೇಕ ರಾಜರನ್ನು ತನ್ನ ಸಾಮಂತರನ್ನಾಗಿ ಮಾಡಿಕೊಂಡು ಬಲಿಷ್ಠನಾಗಿದ್ದನು. ನಡೆದ ಘೋರ ಯುದ್ಧದಲ್ಲಿ ಪಾಂಡುವು ದೀರ್ಘರಾಜನನ್ನು ಸಂಹರಿಸಿದನು. ಪಾಂಡುವು ಅಲ್ಲಿಯೂ ಸಹ ಅಪಾರವಾದ ಧನ ಕನಕಗಳನ್ನು ಕಾಣಿಕೆಯಾಗಿ ಪಡೆದು ಜೈತ್ರಯಾತ್ರೆಯನ್ನು ಮುಂದುವರೆಸಿದನು. ವಿದೇಹ, ಕಾಶೀ, ಕುಂಭ, ಪುಂಡ್ರ ಮೊದಲಾದ ದೇಶಗಳನ್ನು ಗೆದ್ದು ಚಂದ್ರವಂಶದ ಕೀರ್ತಿಯನ್ನು ಹೆಚ್ಚಿಸಿದನು. ಶತ್ರುಗಳನ್ನು ಸದೆಬಡಿದು ದಿಗ್ವಿಜಯವನ್ನು ಸಾಧಿಸಿದ ಪಾಂಡುವು ಹಸ್ತಿನಾವತಿಯ ಚಕ್ರವರ್ತಿತ್ವವನ್ನು ಮತ್ತೊಮ್ಮೆ ದೃಢ ಪಡಿಸಿದನು. ಪಚ್ಚೆ, ಮುತ್ತು, ಹವಳ, ಪುಷ್ಯರಾಗ, ನೀಲಮಣಿ, ಸುವರ್ಣ ಮತ್ತು ರಜತ ನಾಣ್ಯಗಳು, ಉತ್ತಮ ತಳಿಯ ಹಸುಗಳು, ಅಶ್ವ, ಗಜ, ರಥ, ರತ್ನಗಂಬಳಿಗಳು ಶ್ರೇಷ್ಠ ವಸ್ತ್ರಗಳನ್ನು ಕಪ್ಪವಾಗಿ ಪಡೆದ ಪಾಂಡುವು ಹಸ್ತಿನಾಪುರಕ್ಕೆ ಮರಳಿದನು.

ಅಳಿದು ಹೋಗುವುದರಲ್ಲಿದ್ದ ಶಂತನು ಮತ್ತು ಭರತನ ಕೀರ್ತಿಗಾಥೆಯನ್ನು ಪಾಂಡುವು ಪುನರುಜ್ಜೀವನಗೊಳಿಸಿದನೆಂದು ಜನಸ್ತೋಮವು ಹಿರಿಹಿರಿ ಹಿಗ್ಗಿತು. ಕಪ್ಪ ಕಾಣಿಕೆಗಳನ್ನೂ, ಐಶ್ವರ್ಯವನ್ನೂ ಹೊತ್ತು ತರುತ್ತಿದ್ದ ಹೆಸರಗತ್ತೆಗಳೂ, ಒಂಟೆಗಳು, ಆನೆಗಳ ಸಾಲು ತುಂಬಾ ಉದ್ದವಾಗಿತ್ತು. ಇವುಗಳ ಜೊತೆ ಮರಳಿದ ಪಾಂಡುವಿಗೆ ಭೀಷ್ಮಾದಿಗಳಿಂದ ಅಕ್ಕರೆಯ ಸ್ವಾಗತ ದೊರಕಿತು. ಹೀಗೆ ಪಾಂಡುವು ತನ್ನ ಪರಾಕ್ರಮವನ್ನು ಪ್ರದರ್ಶಿಸಿದನು. ನಂತರ ಪಂಚ ಮಹಾಯಜ್ಞಗಳನ್ನು ಮಾಡಿ ವಿಪ್ರೋತ್ತಮರಿಗೆ ಅಪಾರವಾದ ದಾನ ದಕ್ಷಣೆಗಳನ್ನು ನೀಡಿದನು.
ನಂತರ ಪಾಂಡುವು ತನಗೆ ಅತ್ಯಂತ ಪ್ರಿಯವಾದ ವನವಿಹಾರಕ್ಕೆ ಕುಂತಿ ಮಾದ್ರಿಯರೊಡನೆ ತೆರಳಿದನು. ಉತ್ತಮವಾದ ಅರಮನೆಯನ್ನೂ, ಹಂಸತೂಲಿಕಾ ತಲ್ಪವನ್ನೂ ಪರಿತ್ಯಜಿಸಿ ಸುದೀರ್ಘ ಅವಧಿಯ ಅರಣ್ಯವಾಸಕ್ಕೆ ತೆರಳಿದ ಪಾಂಡುವು ಹಿಮವತ್ಪರ್ವತದ ದಕ್ಷಿಣ ಭಾಗದ ತಪ್ಪಲಿನಲ್ಲಿನ ಶಾಲವೃಕ್ಷಗಳ ಆಶ್ರಯದಲ್ಲಿ ಮನೋಹರವಾದ ಪರ್ಣಶಾಲೆಯೊಂದನ್ನು ನಿರ್ಮಿಸಿಕೊಂಡನು. ತನ್ನ ಪತ್ನಿಯರೊಡನೆ ವಿಹರಿಸುತ್ತಾ, ಅರಣ್ಯ ಮೃಗಗಳ ಬೇಟೆಯಾಡುತ್ತಾ ಕಾಲ ಕಳೆಯತೊಡಗಿದನು. ಹಸ್ತಿನಾವತಿಯಿಂದ ಆಹಾರ ಸಾಮಾಗ್ರಿಗಳೂ, ಸುಖೋಪಭೋಗ ವಸ್ತುಗಳೂ ಅಲ್ಲಿಗೆ ಸಾಗಿ ಬರುತ್ತಿದ್ದವು. ಅರಣ್ಯವಾಸಿಗಳು ಈ ಪಾಂಡು ಚಕ್ರವರ್ತಿಯನ್ನು ಅಪಾರವಾಗಿ ಗೌರವಿಸುತ್ತಿದ್ದರು.
ವಿದುರನ ವಿವಾಹ
ಈ ಮಧ್ಯದಲ್ಲಿ ಭೀಷ್ಮನು ದೇವಕ ರಾಜನ ಅರಮನೆಯಲ್ಲಿ ಶೂದ್ರ ಸ್ತ್ರೀಯಲ್ಲಿ ಜನಿಸಿದ್ದ ಕಡು ಚೆಲುವೆಯಾದ 'ಪಾರಸವಿ' (ಪರಾಶವಿ) ಎಂಬ ಹೆಸರಿನವಳಾದ ಸುಸಂಸ್ಕೃತ ಕನ್ಯೆಯೊಬ್ಬಳು ಇರುವ ಸಂಗತಿ ತಿಳಿದನು. ವಿದುರನಿಗೆ ಅವಳೇ ತಕ್ಕ ವಧು ಎಂಬುದಾಗಿ ನಿರ್ಧರಿಸಿದ ಭೀಷ್ಮನು ಅವಳನ್ನು ಕರೆತಂದು ವಿದುರನಿಗೆ ಕೊಟ್ಟು ಯಥಾವಿಧಿಯಾಗಿ ವಿವಾಹವನ್ನು ನೆರವೇರಿಸಿದನು. ಅವಳಲ್ಲಿ ವಿದುರನಿಗೆ ಅವನಂತೆಯೇ ಧಾರ್ಮಿಕ ಪ್ರವೃತ್ತಿಯುಳ್ಳ ಅನೇಕ ಮಕ್ಕಳು ಜನಿಸಿದರು.
ಗಾಂಧಾರಿಯ ಆತುರ
ಒಮ್ಮೆ ಹಸ್ತಿನಾವತಿಗೆ ಆಗಮಿಸಿದ ವ್ಯಾಸರು ಗಾಂಧಾರಿಯ ಉಪಚಾರಗಳಿಂದ ಪ್ರೀತರಾಗಿ, ಬೇಕಾದ ವರವನ್ನು ಕೇಳುವಂತೆ ಗಾಂಧಾರಿಗೆ ಹೇಳಿದರು. ಅದಾಗಲೇ ನೂರು ಮಕ್ಕಳಾಗುವಂತೆ ಈಶ್ವರನಿಂದ ವರ ಪಡೆದಿದ್ದ ಗಾಂಧಾರಿಯು ಆ ವರವು ಫಲಿಸುವಂತೆ ಅನುಗ್ರಹಿಸಬೇಕೆಂದು ವ್ಯಾಸರನ್ನು ಪ್ರಾರ್ಥಿಸಿದಳು. ಅಂತೆಯೇ ವ್ಯಾಸರು ಗಾಂಧಾರಿಯನ್ನು ಅನುಗ್ರಹಿಸಿದರು. ಗಾಂಧಾರಿಯು ನೂರು ಮಕ್ಕಳ ತಾಯಿಯಾಗುವಂತೆಯೂ, ಮಕ್ಕಳೆಲ್ಲರೂ ಆಕೆಯ ಪತಿಯಾದ ಧೃತರಾಷ್ಟ್ರನಿಗೆ ಸರಿಸಮನಾದ ಬಲವಂತರೂ ಆಗುವಂತೆ ಆಶೀರ್ವದಿಸಿದರು. ಹಲವಾರು ದಿನಗಳು ಕಳೆದನಂತರ ಗಾಂಧಾರಿಯು ಧೃತರಾಷ್ಟ್ರನೊಡನೆ ಸಮಾಗಮ ಹೊಂದಿ ಗರ್ಭವತಿಯಾದಳು. ಆದರೆ, ನವ ಮಾಸಗಳು ತುಂಬಿದರೂ ಆಕೆಯು ಪ್ರಸವಿಸಲಿಲ್ಲ. ಕಾಲವು ಕಳೆಯುತ್ತಾ ಹೋಗಿ ಎರಡು ವರ್ಷಗಳಾದರೂ ಗಾಂಧಾರಿಯು ಪ್ರಸವಿಸುವ ಚಿಹ್ನೆಗಳೇ ಕಂಡುಬರಲಿಲ್ಲ. ಈ ಮಧ್ಯದಲ್ಲಿ ಅರಣ್ಯದಲ್ಲಿದ್ದ ತನ್ನ ಸವತಿಯಾದ ಕುಂತಿಯು ತೇಜಸ್ವಿಯಾದ ಗಂಡು ಮಗುವನ್ನು ಹೆತ್ತಳೆಂಬ ವಾರ್ತೆಯು ಗಾಂಧಾರಿಯನ್ನು ತಲುಪಿತು. ಇದನ್ನು ಕೇಳಿದ ನಂತರ ಗಾಂಧಾರಿಯು ಮತ್ಸರದಿಂದ ಕುದ್ದು ಹೋದಳು. ತನ್ನ ಗರ್ಭದಲ್ಲಿದ್ದ ಮಗುವನ್ನು ಇನ್ನೂ ಹೆಚ್ಚುಕಾಲ ಇಟ್ಟುಕೊಳ್ಳುವುದು ಆಕೆಗೆ ಸಾಧ್ಯವಾಗಲಿಲ್ಲ.
ಮಹಾ ಪತಿವ್ರತೆಯೂ, ಪ್ರಜ್ಞೆಯೂ ಆದ ಗಾಂಧಾರಿಯೂ ಸಹ ಮಾತ್ಸರ್ಯ ಪೀಡಿತಳಾಗಿ, ತನ್ನ ಬಸಿರನ್ನು ಕಿವಿಚಿಕೊಂಡು, ಗರ್ಭಪಾತ ಮಾಡಿಕೊಂಡಳು. ಎರಡು ವರ್ಷಗಳೇ ಕಳೆದಿದ್ದರೂ, ಗರ್ಭವು ಕೇವಲ ಮಾಂಸದ ಮುದ್ದೆಯಾಗಿದ್ದೀತೆ ಹೊರತು ಮಾನವಾಕೃತಿಯನ್ನು ಹೊಂದಿರಲಿಲ್ಲ. ಅತಿಯಾದ ದುಃಖ ಅಸೂಯೆಗಳಿಂದ ಆಹತಳಾಗಿದ್ದ ಗಾಂಧಾರಿಯು ಆ ಗರ್ಭ ಪಿಂಡವನ್ನು ತೆಗೆದೆಸೆಯಬೇಕೆಂದು ಮುಂದಾದಳು. ತನ್ನ ಯೋಗ ಶಕ್ತಿಯಿಂದ ಈ ಎಲ್ಲಾ ವಿಚಾರಗಳನ್ನು ತಿಳಿದ ವ್ಯಾಸರು ಆ ವೇಳೆಗೆ ಸರಿಯಾಗಿ ಅಲ್ಲಿಗೆ ಆಗಮಿಸಿ ಗಾಂಧಾರಿಯನ್ನು ತಡೆದರು. "ಸೌಬಲೇ! ಎಂತಹ ಅಪಚಾರ ಮಾಡಿಬಿಟ್ಟೆ" ಎಂಬುದಾಗಿ ನುಡಿದರು.
ತನ್ನ ಮಾನಸಿಕ ತುಮುಲ ಗಳನ್ನು ವ್ಯಾಸರ ಮುಂದೆ ಗಾಂಧಾರಿಯು ತೋಡಿಕೊಂಡಳು. ಕುಂತಿಯು ತನಗಿಂತ ಮುಂದಾಗಿ ಪುತ್ರರತ್ನವನ್ನು ಪಡೆದಿದ್ದರಿಂದ, ಅಸೂಯಾಪರಳಾಗಿ ಈ ಕೃತ್ಯ ಎಸಗಿದ್ದನ್ನು ಹೇಳಿಕೊಂಡಳು. ತನಗೆ ನೂರು ಮಕ್ಕಳ ಬದಲಾಗಿ ಈ ಮಾಂಸದ ಮುಂದೆಯೂ ಜನಿಸಿತು ಎಂಬುದಾಗಿ ವ್ಯಾಸರ ಮುಂದೆ ದುಃಖಿಸಿದಳು.
ತನ್ನ ಮಾತೂ, ಈಶ್ವರಾನುಗ್ರಹವೂ ಎಂದಿಗೂ ಸುಳ್ಳಾಗದೆಂದು ಗಾಂಧಾರಿಗೆ ಸಮಾಧಾನ ಹೇಳಿದ ವ್ಯಾಸರು, ತುಪ್ಪದಿಂದ ತುಂಬಲ್ಪಟ್ಟ ನೂರು ಮಡಿಕೆಗಳನ್ನು ತರಿಸಿದರು. ಅಲ್ಲದೇ, ಶೀತೋದಕವನ್ನು ತರಿಸಿ, ಅದನ್ನು ಗರ್ಭಪಿಂಡದ ಮೇಲೆ ಪರಿಷಿಂಚನೆ ಮಾಡುವಂತೆ ಗಾಂಧಾರಿಯಲ್ಲಿ ಹೇಳಿದರು. ಅಂತೆಯೇ ಗಾಂಧಾರಿಯು ಗರ್ಭಪಿಂಡದ ಮೇಲೆ ಶೀತೋದಕ ಪ್ರೋಕ್ಷಣೆ ಮಾಡಲಾಗಿ, ಆ ಗರ್ಭಪಿಂಡವು ನೂರು ಚೂರುಗಳಾಗಿ ವಿಭಜಿತವಾಯಿತು. ಈ ಪ್ರತಿಯೊಂದು ಚೂರುಗಳನ್ನೂ ಘೃತಭಾಂಡಗಳಲ್ಲಿ ವ್ಯಾಸರು ತುಂಬಿಸತೊಡಗಿದರು. ಆಗ ಗಾಂಧಾರಿಯು ವ್ಯಾಸರಲ್ಲಿ ತನಗೆ ನೂರು ಪುತ್ರರ ಜೊತೆಗೆ ಒಬ್ಬ ಪುತ್ರಿಯು ಬೇಕೆಂದೂ, ತನಗೆ ದೌಹಿತ್ರ ಸಂತತಿಯಿಂದ ಉಂಟಾಗುವ ಆನಂದವನ್ನು ಅನುಭವಿಸಬೇಕೆಂದೂ ಪ್ರಾರ್ಥಿಸಿದಳು. ಈ ಬೇಡಿಕೆಗೆ ಅಸ್ತು ಎಂದ ವ್ಯಾಸರು, ಆ ನೂರು ಚೂರುಗಳನ್ನು ನೂರೊಂದನ್ನಾಗಿ ಪರಿವರ್ತಿಸಿ, ಆ ನೂರೊಂದು ಪಿಂಡಗಳನ್ನು ಸುರಕ್ಷಿತವಾಗಿ ತುಪ್ಪದ ಮಡಿಕೆಗಳಲ್ಲಿರಿಸಿ, ಆ ಮಡಿಕೆಗಳೆಲ್ಲವನ್ನೂ ಭದ್ರವಾಗಿ ಮುಚ್ಚಿ, ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸುವ ವ್ಯವಸ್ಥೆ ಮಾಡಿ, ಎರಡು ವರ್ಷಗಳ ಕಾಲ ಇವುಗಳನ್ನು ಕಾಯುವ ವ್ಯವಸ್ಥೆ ಮಾಡುವಂತೆ ಗಾಂಧಾರಿಗೆ ತಿಳಿಸಿದರು.








Comments