ಧೃತರಾಷ್ಟ್ರನ ವಿವಾಹ (ಮಹಾಭಾರತ ಕಥಾಮಾಲೆ 12)
- Arunkumar Bhat

- Aug 26
- 2 min read
ಕುರುವಂಶ ಪ್ರದೀಪಕರಾದ ಮಕ್ಕಳು ಜನಿಸಿದ ನಂತರ ಭೀಷ್ಮನು ರಾಜಪ್ರತಿನಿಧಿಯಾಗಿ ರಾಜ್ಯವನ್ನು ಬಹಳ ವಿಚಕ್ಷಣೆಯಿಂದ ಆಳುತ್ತಿದ್ದನು. ಧರ್ಮವೇ ಭೀಷ್ಮನ ರಾಜ್ಯಭಾರ ಕ್ರಮದ ಆಧಾರವಾಗಿದ್ದಿತು. ಪ್ರಜೆಗಳು ಸಂತುಷ್ಟರಾಗಿದ್ದರು. ಜನಿಸಿದ ರಾಜಕುಮಾರರ ಸಂಪೂರ್ಣ ಹೊಣೆಗಾರಿಕೆಯನ್ನು ಭೀಷ್ಮನೇ ವಹಿಸಿಕೊಂಡನು. ಜಾತಕರ್ಮಾದಿಗಳನ್ನು ನೆರವೇರಿಸಿ, ಸೂಕ್ತ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಿದನು. ಧೃತರಾಷ್ಟ್ರ, ಪಾಂಡು, ವಿದುರರ ಜನನದ ಬಳಿಕ ಕುರುಜಾಂಗುಲ, ಕುರುಕ್ಷೇತ್ರಗಳು ಅಧಿಕವಾಗಿ ಅಭಿವೃದ್ಧಿ ಹೊಂದಿದವು.
ಮಳೆಯು ಋತುಧರ್ಮವನ್ನು ಅನುಸರಿಸಿ ನಿಯತವಾಗಿ ಬರುತ್ತಿತ್ತು. ಆಹಾರ ಧಾನ್ಯಗಳು ಸಮೃದ್ಧವಾಗಿ ಬೆಳೆಯುತ್ತಿದ್ದವು. ಗಿಡ-ಮರ-ಬಳ್ಳಿಗಳು ಫಲಪುಷ್ಪ ಭರಿತವಾಗಿದ್ದವು. ಕಳ್ಳ-ಕಾಕರ, ಅಧರ್ಮಿಗಳ ಸುಳಿವೇ ಇರಲಿಲ್ಲ. ಎಲ್ಲೆಡೆಯೂ ಸಂತುಷ್ಟಿಯೂ ಧರ್ಮವೂ ನೆಲೆಸಿದ್ದರಿಂದ ಕೃತಯುಗವೇ ಪುನಃ ಪ್ರಾರಂಭವಾಯಿತೇನೋ ಎಂಬಂತೆ ಅನಿಸುತ್ತಿತ್ತು.
ಶುಕ್ಲಪಕ್ಷದ ಚಂದ್ರಮನಂತೆ ರಾಜಪುತ್ರರು ಬೆಳೆಯುತ್ತಿದ್ದರು. ಶಸ್ತ್ರ ಮತ್ತು ಶಾಸ್ತ್ರ ಈ ಎರಡರಲ್ಲಿಯೂ ಪರಿಣಿತಿಯನ್ನು ಪಡೆಯುತ್ತಿದ್ದರು. ಧನುರ್ವೇದ, ಕುದುರೆ ಸವಾರಿ, ಕತ್ತಿವರಸೆ, ಮಲ್ಲಯುದ್ಧ, ಗದಾಯುದ್ಧ, ವೇದ ವೇದಾಂಗಗಳು, ಇತಿಹಾಸ, ಪುರಾಣ, ನೀತಿ ಶಾಸ್ತ್ರಗಳಲ್ಲಿ ಪಾರಂಗತರಾದರು. ಎಲ್ಲಾ ವಿದ್ಯೆಗಳಲ್ಲೂ 'ಇದಮಿತ್ಥಂ' ಎಂಬ ನಿಶ್ಚಯ ಜ್ಞಾನವು ಅವರಿಗೆ ಉಂಟಾಯಿತು. ಎಲ್ಲಾ ಮೂವರೂ ಸಂಪೂರ್ಣ ಪಾಂಡಿತ್ಯ ಗಳಿಸಿದರೂ ಸಹ, ಅವರವರ ಅಭಿರುಚಿಗೆ ಅನುಗುಣವಾಗಿ ಒಂದೊಂದು ವಿದ್ಯೆಯಲ್ಲಿ ಅತಿಶಯ ಪ್ರಾವೀಣ್ಯವನ್ನು ಪಡೆದರು. ಪಾಂಡುವು ಧನುರ್ವಿದ್ಯೆಯಲ್ಲಿ ಶ್ರೇಷ್ಠವೆನಿಸಿದನು. ಧೃತರಾಷ್ಟ್ರನು ದೇಹಬಲದಲ್ಲಿ ಅದ್ವಿತೀಯವೆನಿಸಿದನು. ವಿದುರನು ನೀತಿ ಶಾಸ್ತ್ರದಲ್ಲಿ ಅಸಮಾನನೆನಿಸಿದನು. ಇದನ್ನೆಲ್ಲ ಕಂಡ ಪ್ರಜೆಗಳು ಹೀಗೆ ಉದ್ಗರಿಸಿದರು.
ವೀರಸೂನಾಂ ಕಾಶಿಸುತೇ, ದೇಶಾನಾಂ ಕುರುಜಾಂಗಲಮ್| ಸರ್ವಧರ್ಮವಿದಾಂ ಭೀಷ್ಮಃ, ಪ್ರರಾಣಾಂ ಗಜಸಾಹ್ವಯಮ್|| "ವೀರಮಾತೆಯರಲ್ಲಿ ಕಾಶೀ ರಾಜ ಪುತ್ರಿಯರು ಮೊದಲಿಗರು. ಸುಭೀಕ್ಷಯುತವಾದ ದೇಶಗಳಲ್ಲಿ ಕುರುಜಾಂಗಲವೇ ಮೊದಲನೆಯದು. ಸರ್ವಧರ್ಮಗಳನ್ನೂ ತಿಳಿದವರಲ್ಲಿ ಮೊದಲಿಗನೆಂದರೆ ಭೀಷ್ಮನು. ಸುಂದರ ನಗರಗಳಲ್ಲಿ ಹಸ್ತಿನೆಯು ಮೊದಲನೆಯದು."
ಧೃತರಾಷ್ಟ್ರನು ಜ್ಯೇಷ್ಠನಾದರೂ ಅಂಧನಾದ್ದರಿಂದಲೂ, ವಿದುರನು ದಾಸಿ ಪುತ್ರನಾದ್ದರಿಂದಲೂ, ಎರಡನೆಯವನಾದ ಪಾಂಡುವೇ ದೇಶಕ್ಕೆ ರಾಜನಾಗಿ ಪಟ್ಟಾಭಿಷಿಕ್ತನಾದನು. ಹಿರಿಯರ ಸಲಹೆಯನ್ನು ಶಿರಸಾವಹಿಸಿ, ರಾಜ್ಯವನ್ನು, ಪ್ರಜೆಗಳನ್ನು ಪಾಲಿಸತೊಡಗಿದನು. ವಿದುರನು ಕುರು ಸಾಮ್ರಾಜ್ಯದ ಮಂತ್ರಿಯೆನಿಸಿದನು.
ಹೀಗಿರಲು ಭೀಷ್ಮನು ವಿದುರನೊಡನೆ ಜ್ಯೇಷ್ಠನಾದ ಧೃತರಾಷ್ಟ್ರನ ವಿವಾಹದ ವಿಚಾರವನ್ನು ಪ್ರಸ್ತಾಪಿಸುತ್ತಾ, ಭರತವಂಶದ ಮುಂದುವರಿಕೆಯ ಅನಿವಾರ್ಯತೆಯನ್ನೂ, ಮಹತ್ವವನ್ನೂ ಚರ್ಚಿಸಿದನು. ಸದ್ಗುಣ ಸಂಪನ್ನರೂ, ಧರ್ಮ ರಕ್ಷಕರು ಆದ ಚಂದ್ರವಂಶದ ದೊರೆಗಳ ಕುಲವೃದ್ಧಿಗಾಗಿ ಇಬ್ಬರೂ ಗಹನವಾಗಿ ಚರ್ಚಿಸಿದರು. ಭರತ ವಂಶವು ಹುಣ್ಣಿಮೆಯ ದಿನಗಳಲ್ಲಿ ಸಮುದ್ರವು ಉಕ್ಕುವಂತೆ ಅಭಿವೃದ್ಧಿ ಹೊಂದಲು, ಈ ಶ್ರೇಷ್ಠ ಮನೆತನಕ್ಕೆ ಸೇರಬಹುದಾದ ಯೋಗ್ಯತೆಯುಳ್ಳ ಕನ್ಯೆಗಾಗಿ ಶೋಧನೆ ನಡೆಸಿದರು. ಕನ್ಯೆಯ ಅನ್ವೇಷಣೆಗಾಗಿ ನಾಲ್ದೆಸೆಗೂ ಬ್ರಾಹ್ಮಣರನ್ನು ಕಳುಹಿಸಿ, ವಾರ್ತೆಗಳನ್ನು ಸಂಗ್ರಹಿಸಿದರು. ಈ ಬ್ರಾಹ್ಮಣರಿಂದ, ಗಾಂಧಾರ ದೇಶದ ಸುಬಲ ರಾಜನ ಪುತ್ರಿಯಾದ ಗಾಂಧಾರಿಯು ಶಿವನನ್ನು ಆರಾಧಿಸಿ, ನೂರು ಮಕ್ಕಳಾಗುವಂತೆ ವರವನ್ನು ಪಡೆದಿರುವಳೆಂದು ತಿಳಿದರು. ಈ ವಿಚಾರವನ್ನು ಕೇಳಿದ, ವಂಶಾಭಿವೃದ್ಧಿಯಲ್ಲಿ ಆಸಕ್ತನಾಗಿದ್ದ ಭೀಷ್ಮನು, ಗಾಂಧಾರಿಯನ್ನು ಧೃತರಾಷ್ಟ್ರನಿಗೆ ವಿವಾಹ ಮಾಡಬೇಕೆಂದು ನಿಶ್ಚಯಿಸಿದನು. ಕನ್ಯೆಯನ್ನು ಕೇಳುವುದಕ್ಕಾಗಿ ವಿದ್ವಾಂಸರೂ, ವಾಗ್ಮಿಗಳೂ ಆದ ಪ್ರತಿನಿಧಿಗಳನ್ನು ಸುಬಲರಾಜನ ಬಳಿಗೆ ಕಳುಹಿಸಿದನು.
ಸುಬಲನು ಮೊದಲು ಕುರುಡನಿಗೆ ತನ್ನ ಮಗಳನ್ನು ಕೊಡಲು ಹಿಂಜರಿದರೂ ಕುರುವಂಶದ ಖ್ಯಾತಿಯನ್ನು, ಪ್ರಾಬಲ್ಯವನ್ನು, ಸಮೃದ್ಧಿಯನ್ನೂ ಪರ್ಯಾಲೋಚಿಸಿ, ಕನ್ಯೆಯನ್ನು ಧೃತರಾಷ್ಟ್ರನಿಗೆ ಕೊಡಲು ಒಪ್ಪಿದನು. ಗಾಂಧಾರಿಗೂ ಈ ವಿಷಯವು ತಿಳಿಯಿತು. ತನ್ನ ಗಂಡನಾಗುವವನು ಜನ್ಮಾಂಧನಾದರೂ, ತನ್ನ ತಂದೆ ತಾಯಿಗಳು ಈ ವಿವಾಹಕ್ಕೆ ಮುಂದಾಗಿರುವವರೆಂದು ಅರಿತಳು.

ಇದರಿಂದ ಗಾಂಧಾರಿಯು ಯಾವ ವಿಧವಾದ ಕೋಪ ತಾಪ, ನೋವು ದುಃಖಗಳಿಗೆ ಒಳಗಾಗಲಿಲ್ಲ. ತಂದೆಯು ತನ್ನ ಹಿತವನ್ನು ಚಿಂತಿಸಿಯೇ ತನ್ನನ್ನು ಕುರುವಂಶಕ್ಕೆ ಸೇರಿಸಲು ಬಯಸಿರುವರು ಎಂಬುದನ್ನು ತಿಳಿದಳು. ತಾನು ವರಿಸಲಿರುವ ಅಂಧನಾದ ಪತಿಗೆ ಗೌರವ ತೋರಿಸುವ ಕಾರಣದಿಂದ ತನ್ನ ಕಣ್ಣುಗಳನ್ನೂ ಬಟ್ಟೆಯಿಂದ ಮುಚ್ಚಿಕೊಂಡಳು. ತನ್ನ ಪತಿಗೆ ಇರದ ದರ್ಶನ ಸುಖದ ಅನುಭವವು ತನಗೂ ಇರಬಾರದು ಎಂದು ಆ ಪರಮ ಪತಿವ್ರತೆಯು ಹೀಗೆ ಮಾಡಿದಳು.
ಸರ್ವಾಲಂಕಾರಗಳಿಂದ ಶೋಭಿಸಲ್ಪಟ್ಟ ಈ ಕನ್ಯಾರತ್ನವನ್ನು ಗಾಂಧಾರಿಯ ಅಣ್ಣನಾದ ಶಕುನಿಯು ಮಂಗಳ ವಾದ್ಯಗಳೊಡನೆ, ದಿಬ್ಬಣ ಸಮೇತನಾಗಿ ಹಸ್ತಿನಾಪುರಕ್ಕೆ ಕರೆ ತಂದನು. ಭೀಷ್ಮನು ಪುರೋಹಿತರಿಂದ ಒಡಗೂಡಿದ ರಾಜ ಪರಿವಾರದೊಂದಿಗೆ ನೂತನ ವಧುವನ್ನು ಇದಿರ್ಗೊಂಡು ಸ್ವಾಗತಿಸಿದನು. ಅರಮನೆಗೆ ಕರೆದೊಯ್ದು, ಶುಭ ಲಗ್ನದಲ್ಲಿ ಮಂತ್ರ ಘೋಷಗಳ ನಡುವೆ ಧೃತರಾಷ್ಟ್ರ ಗಾಂಧಾರಿಯರ ವಿವಾಹವನ್ನು ನೆರವೇರಿಸಿದನು. ಶಕುನಿಯೂ ಆನಂದದಿಂದ ಈ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿದನು.
ಗಾಂಧಾರಿಯು ತನ್ನ ವಿನಯ ಸೌಜನ್ಯಗಳಿಂದ ಹಿರಿಯರ ಮೆಚ್ಚುಗೆಯನ್ನು ಗಳಿಸಿದಳು. ಸದಾ ಗಂಡನ ಸೇವೆಯಲ್ಲಿ ನಿರತಳಾಗಿರುತ್ತಿದ್ದಳು. ಹಸ್ತಿನಾವತಿಯ ಪರಿಸರದಲ್ಲಿ ಆಕೆಯು ಪರಮ ಪತಿವ್ರತೆಯೆಂದೇ ಪ್ರಜೆಗಳಿಂದ ಆರಾಧಿಸಲ್ಪಟ್ಟಳು.







Nice