ನಿಯೋಗ ಪದ್ಧತಿಗೆ ಒಪ್ಪಿಗೆ (ಮಹಾಭಾರತ ಕಥಾಮಾಲೆ - 10)
- Arunkumar Bhat

- Aug 12
- 3 min read
ಭೀಷ್ಮನು 'ನಿಯೋಗ' ವಿಧಾನದಿಂದ ಭರತವಂಶದ ಮುಂದುವರಿಕೆಗೆ ಮಾಡಿದ ಪ್ರಸಾಪವನ್ನು ಸತ್ಯವತಿಯೂ ಇತರ ಹಿರಿಯರೂ ಒಪ್ಪಿದರು. ಈ ನಿಯೋಗದ ವಿಷಯವಾಗಿ ಮನುಸ್ಮೃತಿಯಲ್ಲಿ ಹೀಗೆ ಹೇಳಿದೆ,
ವಿಧವಾಯಾಂ ನಿಯುಕ್ತಸ್ತು ಘೃತಾಕ್ತೋ ವಾಗ್ಯತೋ ನಿಶಿ| ಏಕಮುತ್ಸಾದಯೇತ್ಪುತ್ರಂ ನ ದ್ವಿತೀಯಂ ಕಥಂಚನ||
"ಪತಿವಂಶದ, ಗುರುಜನರ ಅಪೇಕ್ಷೆಯಂತೆ ವಿಧವೆಯೊಡನೆ ನಿಯೋಗ ಪದ್ಧತಿಯಲ್ಲಿ ಸಮಾಗಮವನ್ನು ಮಾಡುವವನು ರಾತ್ರಿಯಲ್ಲಿ ಮೈಗೆಲ್ಲ ತುಪ್ಪವನ್ನು ಹಚ್ಚಿಕೊಂಡು, ಏನೊಂದನ್ನೂ ಮಾತನಾಡದೆ ಸ್ತ್ರೀ ಸಂಗವನ್ನು ಮಾಡಬೇಕು. ಈ ವಿಧದಿಂದ ಕೇವಲ ಒಬ್ಬ ಪುತ್ರವನ್ನು ಪಡೆಯಬೇಕು. ಎರಡನೆಯವನನ್ನು ಪಡೆಯಕೂಡದು."
ವಿಧವಾಯಾಂ ನಿಯೋಗಾರ್ಥೇ ನಿರ್ವತ್ತೇತು ಯಥಾವಿಧಿ| ಗುರುವಚ್ಚ ಸ್ನುಷಾವಚ್ಚ ವರ್ತೇಯಾತಾಂ ಪರಸ್ಪರಮ್||
"ವಿಧವೆಯಲ್ಲಿ ಕೇವಲ ಸಂತಾನಾಪೇಕ್ಷೆಯಿಂದ ಸಮಾಗಮ ಮಾಡಿ, ಸಂತಾನವು ಪ್ರಾಪ್ತಿಸಿದ ನಂತರ ಆ ಸ್ತ್ರೀ ಪುರುಷರ ಸಂಬಂಧವು ಮಾವ ಮತ್ತು ಸೊಸೆಯ ರೀತಿಯಲ್ಲಿರಬೇಕು. ಪುನಃ ಆ ಸ್ತ್ರೀಯನ್ನು ಕಾಮೋಪಭೋಗ್ಯಳೆಂದು ಪುರುಷನು ಭಾವಿಸಬಾರದು."
ಹೀಗೆ ಭೀಷ್ಮನು ನಿಯೋಗ ವಿಧಾನಕ್ಕೆ ಎಲ್ಲರನ್ನೂ ಒಪ್ಪಿಸಿದ ಮೇಲೆ, ಸೂಕ್ತ ನಿಯೋಗಿಗಾಗಿ ಶೋಧನೆ ಪ್ರಾರಂಭವಾಯಿತು. ಸತ್ಯವತಿಯ ತನ್ನ ಮಗನೊಬ್ಬ ಬ್ರಹ್ಮರ್ಷಿ ಎಂಬುದನ್ನು ಸ್ಮರಿಸಿಕೊಂಡು, ಅದುವರೆಗೂ ಪ್ರಪಂಚಕ್ಕೆ ಗೋಪ್ಯವಾಗಿದ್ದ ಈ ವಿಚಾರವನ್ನು ಭೀಷ್ಮನ ಮುಂದೆ ಪ್ರಸ್ತಾಪಿಸಿದಳು. "ಮಗು, ಹಿಂದೆ ನಾನು ನನ್ನ ತಂದೆಯ ಸಹಾಯಕಳಾಗಿ, ತಂದೆಯ ಆಜ್ಞಾನುವರ್ತಿಯಾಗಿ ನನ್ನ ತಂದೆಯ ಕುಲ ಕಸುಬಾದ ದೋಣಿ ದಾಟಿಸುವ ಕಾರ್ಯದಲ್ಲಿ ನಿರತಳಾಗಿರುತ್ತಿದ್ದೆ. ಪ್ರತಿಫಲಾಪೇಕ್ಷೆಯಿಲ್ಲದೆ ಧರ್ಮಕ್ಕಾಗಿಯೇ ಈ ಕಾರ್ಯವನ್ನು ನನ್ನ ತಂದೆ ಮಾಡುತ್ತಿದ್ದರು. ಹೀಗಿರಲು ಒಂದು ದಿನ ಈ ಯಮುನಾ ನದಿಯನ್ನು ದಾಟಲು ಮಹರ್ಷಿಗಳಾದ ಪರಾಶರರು ನನ್ನ ದೋಣಿಯನ್ನು ಏರಿದರು. ದೋಣಿಯು ನದಿಯ ಮಧ್ಯಭಾಗವನ್ನು ತಲುಪುತ್ತಿದ್ದಂತೆಯೇ ಮಹರ್ಷಿಗಳ ಮನಸ್ಸು ನನ್ನೆಡೆಗೆ ಪ್ರವಹಿಸಿತು. ತಮ್ಮ ಪರಿಚಯ ಮಾಡಿಕೊಟ್ಟರಲ್ಲದೆ, ಪ್ರಿಯ ವಾಕ್ಯಗಳನ್ನು ಬಳಸಿ ನನ್ನ ಪರಿಚಯವನ್ನೂ ಮಾಡಿಕೊಂಡರು. ನಂತರ ನನ್ನೊಡನೆ ಸಮಾಗಮದ ಇಚ್ಛೆಯನ್ನು ವ್ಯಕ್ತಪಡಿಸಿದರು. ಮಹರ್ಷಿಗಳು ಅದಾಗಲೇ ತಮ್ಮ ದಿವ್ಯ ತೇಜಸ್ಸಿನಿಂದಲೇ ನನ್ನನ್ನು ವಶಪಡಿಸಿಕೊಂಡಿದ್ದರು. ಅವರ ಇಚ್ಛೆಗೆ ವಿರುದ್ಧವಾಗಿ ನಡೆಯುವುದು ನನ್ನಿಂದ ಸಾಧ್ಯವಾಗಲಿಲ್ಲ. ನಾವಿದ್ದ ಪ್ರದೇಶದಲ್ಲಿ ಮಂಜು ಕವಿದು ಮಬ್ಬಾಗುವಂತೆ ಮಾಡಿ, ನನ್ನನ್ನು ಸಮಾಗಮಿಸಿದರು. ಆ ಮುಹೂರ್ತವು ಅತ್ಯಂತ ಶ್ರೇಷ್ಠವಾಗಿತ್ತು. ಒಬ್ಬ ಮಹಾ ವಿಭೂತಿಪುರುಷನಾದ ಮಗನನ್ನು ತಕ್ಷಣದಲ್ಲಿಯೇ ಮಹರ್ಷಿಗಳಿಂದ ಪಡೆದೆನು. ನವ ಮಾಸಗಳ ಗರ್ಭಧಾರಣೆಯ ಅವಶ್ಯಕತೆಯೇ ಉಂಟಾಗಲಿಲ್ಲ. ನಾನು ಪುತ್ರನನ್ನು ಪಡೆದ ಮೇಲೆಯೂ ನನ್ನ ಕನ್ಯಾವಸ್ಥೆಗೆ ಕಳಂಕವಾಗದಂತೆ ಮಹರ್ಷಿಗಳು ಅನುಗ್ರಹಿಸಿದರು. ನನ್ನ ಮೈಯಿಂದ ಹೊಮ್ಮುತ್ತಿದ್ದ ಮೀನಿನ ವಾಸನೆ ಹೊರಟುಹೋಗಿ, ಸುಗಂಧ ಹೊರ ಹೊಮ್ಮುವಂತೆ ಮಹರ್ಷಿಗಳು ಅನುಗ್ರಹಿಸಿದರು. ನದಿಯ ಮಧ್ಯದ ದ್ವೀಪದಲ್ಲಿ ನನ್ನ ಮಗನು ಜನಿಸಿದ ಕಾರಣ ದ್ವೈಪಾಯನನೆಂದೇ ಕರೆಯಲ್ಪಟ್ಟನು".

ಸತ್ಯವತಿಯು ಮುಂದುವರಿದು ಹೇಳಿದಳು, "ಮಹರ್ಷಿಗಳು ಈ ಪುತ್ರನನ್ನು ವ್ಯಾಸನೆಂದು ಕರೆದರು. ಮುಂದೆ ಆತನು ವೇದಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳೆಂದು ವಿಂಗಡಿಸಿ, ಎಲ್ಲರಿಗೂ ಅಧ್ಯಯನ ಯೋಗ್ಯವಾಗಿ ಮಾಡಿದ್ದರಿಂದ ವೇದವ್ಯಾಸ ಎಂದೂ ಆತನು ಖ್ಯಾತನಾದನು. ಆತನ ಮೈಬಣ್ಣವು ಕಪ್ಪಾದುದರಿಂದ 'ಕೃಷ್ಣ' ಎಂಬುದಾಗಿಯೂ ಕರೆಯಲ್ಪಟ್ಟನು. ಈ ನನ್ನ ಪುತ್ರನು ಜನಿಸಿದ ತಕ್ಷಣವೇ ನನ್ನಲ್ಲಿ, "ಸ್ಮರೇ ಕೃಚ್ಛ್ರೇಷು ಮಾಂ", 'ತಾಯೇ ಆಪತ್ಕಾಲದಲ್ಲಿ ನನ್ನನ್ನು ಸ್ಮರಿಸು, ತಕ್ಷಣ ಬರುವೆನು' ಎಂದು ಹೇಳಿ, ತಂದೆಯಾದ ಪರಾಶರರೊಡನೆ ತಪಶ್ಚರ್ಯಕ್ಕಾಗಿ ಹೊರಟುಹೋದನು" ಎಂದು ವಿವರಿಸಿದಳು. "ಗಾಂಗೇಯನೇ, ನೀನು ಒಪ್ಪುವುದಾದರೆ, ನಾನು ಈ ನನ್ನ ಮಗನನ್ನು ಸ್ಮರಿಸಿ ಕರೆಯುತ್ತೇನೆ. ಮಹಾತಪಸ್ವಿಯಾದ ಆತನ ಅನುಗ್ರಹದಿಂದ ವಿಚಿತ್ರವೀರ್ಯನ ಮಡದಿಯರಲ್ಲಿ ಸತ್ಸಂತಾನ ಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲ" ಎಂಬುದಾಗಿ ಸತ್ಯವತಿಯು ಭೀಷ್ಮನಲ್ಲಿ ನುಡಿದಳು.
ಶ್ರೇಷ್ಠರಾದ ವ್ಯಾಸ ಮಹರ್ಷಿಗಳ ಹೆಸರು ಕೇಳುತ್ತಿದ್ದಂತೆಯೇ ಭೀಷ್ಮನಿಗೆ ವಂಶವೃಕ್ಷ ಬೆಳೆದಷ್ಟೇ ಸಂತೋಷವಾಯಿತು. ಅವನು ಈ ಪ್ರಸ್ತಾವಕ್ಕೆ ತಕ್ಷಣ ಒಪ್ಪಿದನು. ಭೀಷ್ಮನ ಒಪ್ಪಿಗೆ ದೊರೆತ ತಕ್ಷಣ ಸತ್ಯವತಿಯು ತನ್ನ ಪುತ್ರ ಕೃಷ್ಣ ದ್ವೈಪಾಯನರನ್ನು ಸ್ಮರಿಸಿ, ಆಮಂತ್ರಿಸಿದಳು. ಸತ್ಯನಿಷ್ಠರೂ, ಧೀಮಂತರೂ, ವೇದ ವೇದಾಂಗ ತತ್ವ ವಿಚಾರಗಳಲ್ಲಿ ಮಗ್ನರೂ ಆಗಿದ್ದ ವ್ಯಾಸರು ತಾಯಿಯು ತಮ್ಮನ್ನು ಸ್ಮರಿಸಿ, ಕರೆಯುತ್ತಿರುವುದನ್ನು ಅರಿತರು. ತಕ್ಷಣ ತಾಯಿಯ ಸಮೀಪಕ್ಕೆ ಆಗಮಿಸಿದರು. ಮಗನ ಆಗಮನದಿಂದ ಹರ್ಷಚಿತ್ತಳಾದ ಸತ್ಯವತಿಯು, ಅರ್ಘ್ಯ ಪಾದ್ಯಾದಿಗಳಿಂದ ಅವರನ್ನು ಉಪಚರಿಸಿ, ಪುತ್ರನನ್ನು ಬಾಚಿ ತಬ್ಬಿಕೊಂಡು, ಆನಂದಬಾಷ್ಪಗಳಿಂದ ವ್ಯಾಸರನ್ನು ಅಭಿಷೇಚಿಸಿದಳು. ವ್ಯಾಸರು ತಾಯಿಯ ಕಣ್ಣೀರನ್ನು ಒರೆಸುತ್ತಾ, ತಾಯಿಗೆ ಅಭಿವಾದನ ಮಾಡಿ, ವಿನೀತರಾಗಿ ಹೇಳಿದರು, "ಅಮ್ಮಾ, ನಾನು ನಿನ್ನ ಆಶಯವನ್ನು ನಡೆಸಿಕೊಡಲು ಬಂದಿರುವೆನು. ಧರ್ಮ ತತ್ವಜ್ಞಳಾದ ನೀನು ಅಪೇಕ್ಷಿಸುವ, ಆಜ್ಞಾಪಿಸುವ ಯಾವ ಕಾರ್ಯವನ್ನಾದರೂ ನಡೆಸಿಕೊಡುವೆನು".
ಮಗನ ಈ ಭರವಸೆಯಿಂದ ಸಂತುಷ್ಟಳಾದ ಸತ್ಯವತಿಯು, ಭರತವಂಶಕ್ಕೆ ಸದ್ಯ ಒದಗಿರುವ ದುಃಸ್ಥಿತಿಯನ್ನು ವಿವರಿಸಿದಳು. ಭೀಷ್ಮನ ಪ್ರತಿಜ್ಞೆ, ತನ್ನ ಪುತ್ರ ವಿಚಿತ್ರವೀರ್ಯನ ವಿವಾಹ, ವಿಚಿತ್ರವೀರ್ಯನು ಮಕ್ಕಳಿಲ್ಲದೆ ಆಸು ನೀಗಿದುದು, ಇತ್ಯಾದಿ ಎಲ್ಲವನ್ನೂ ವಿವರಿಸಿ, ಭರತ ವಂಶದ ಮುಂದುವರಿಯುವಿಕೆಗಾಗಿ ವಿಚಿತ್ರವೀರ್ಯನ ಮಡದಿಯರಲ್ಲಿ ನಿಯೋಗ ಪದ್ಧತಿಯಂತೆ ಸತ್ಸಂತಾನವನ್ನು ಅನುಗ್ರಹಿಸಬೇಕೆಂದು ವ್ಯಾಸರಲ್ಲಿ ಕೇಳಿಕೊಂಡಳು. ಅದಕ್ಕೆ ವ್ಯಾಸರು, "ಅಮ್ಮಾ! ನಿನ್ನ ಮಾತುಗಳನ್ನು ಒಪ್ಪಿದ್ದೇನೆ. ನನ್ನ ತಮ್ಮನ ಮಡದಿಯರಲ್ಲಿ ಮಿತ್ರ ವರುಣರಿಗೆ ಸಮನಾದ ಮಕ್ಕಳು ಜನಿಸುವಂತೆ ಅನುಗ್ರಹಿಸುತ್ತೇನೆ. ಆದರೆ, ಅವರು ಒಂದು ವರ್ಷ ಪರ್ಯಂತ ವ್ರತಾನುಷ್ಠಾನಗಳಲ್ಲಿರಬೇಕು. ಏಕೆಂದರೆ, ವ್ರತನಿಷ್ಠಳಾಗಿರದ ಸ್ತ್ರೀಯು ನನ್ನ ಸಮೀಪಕ್ಕೆ ಬರಲಾರಳು" ಎಂದರು. ಸತ್ಯವತಿಯು " ಮಗು, ವರ್ಷ ಪರ್ಯಂತವೇ? ವಿಳಂಬವಾಯಿತು. ಸಿಂಹಾಸನದಲ್ಲಿ ರಾಜನಿಲ್ಲದೇ ಜನರು ವಿನಾಶ ಹೊಂದುತ್ತಾರೆ. ಯಜ್ಞ ಯಾಗಾದಿಗಳು ನಡೆಯಲಾರವು. ಸಕಾಲದಲ್ಲಿ ಮಳೆ ಬೆಳೆಯಾಗದೆ ಹೋಗುತ್ತದೆ. ರಾಜನಿಲ್ಲದ ರಾಜ್ಯದಲ್ಲಿ ಕ್ಷಾಮ ಡಾಮರಗಳು ತಾಂಡವವಾಡುವವು. ಅಂತಹ ರಾಜ್ಯದಲ್ಲಿ ದೇವತಾ ಸಾನ್ನಿಧ್ಯ ಇರಲಾರದು. ಆದುದರಿಂದ ವಿಚಿತ್ರ ವೀರ್ಯನ ಪತ್ನಿಯರು ಒಡನೆಯೇ ಗರ್ಭ ಧರಿಸುವಂತಾಗಲಿ. ಜನಿಸಿದ ರಾಜ ಕುಮಾರರು ಪ್ರೌಢರಾಗುವವರೆಗೂ ಭೀಷ್ಮನು ರಾಜ್ಯದ ಸಂರಕ್ಷಕನಾಗಿರುವನು" ಎಂದು ಪ್ರಾರ್ಥಿಸಿದಳು. "ಅಮ್ಮಾ, ಅಲ್ಪಕಾಲದಲ್ಲಿಯೇ ಅವರು ಗರ್ಭ ಧರಿಸಬೇಕೆನ್ನುವುದಾರೆ, ನನ್ನಯ ಈ ವಿರೂಪವು ಅವರಿಗೆ ಸಹ್ಯವಾಗಬೇಕು. ನನ್ನ ಶರೀರದ ಕಟು ವಾಸನೆ, ಅರಣ್ಯವಾಸಿಯ ವೇಷಭೂಷಣ, ಕಪ್ಪಾದ ಮತ್ತು ಒರಟಾದ ಶರೀರ ಇವುಗಳ ಸಹನೆಯೇ ಅವರಿಗೆ ವ್ರತವೆನಿಸುವುದು. ಇಂತಹ ವಿರೂಪವನ್ನು ಅವರು ಸಹಿಸಿಕೊಳ್ಳುವುದಾದರೆ, ಇಂದೇ ಗರ್ಭಧಾರಣೆಗೆ ಸಿದ್ಧರಾಗಲಿ. ಅಂಬಿಕೆಯು ಶುಭ್ರ ವಸ್ತ್ರಧಾರಿಣಿಯಾಗಿ ಶಯನ ಮಂದಿರದಲ್ಲಿ ನನ್ನ ಆಗಮನವನ್ನು ನಿರೀಕ್ಷಿಸುತ್ತಿರಲಿ. ನಾನಿನ್ನು ಹೋಗಿ ಬರುವೆನು" ಎಂದು ಹೇಳಿ, ಅದೃಶ್ಯರಾದರು.
ಸತ್ಯವತಿಯು ಹಿರಿಯ ಸೊಸೆಯಾದ ಅಂಬಿಕೆಯನ್ನು ಕರೆದು, ಚಂದ್ರವಂಶವು ಸಂತಾನವಿಲ್ಲದೇ ವಿನಾಶದ ಅಂಚಿನಲ್ಲಿರುವ ಕುರಿತಾಗಿ ವಿವರಿಸಿ, ಅದನ್ನು ತಪ್ಪಿಸಲು ನಿಯೋಗ ವಿಧಾನವನ್ನು ಅನುಸರಿಸಲು ನಿರ್ಧರಿಸಿರುವುದನ್ನೂ, ನಿಯೋಗಿಯಾಗಿ ತನ್ನ ಪುತ್ರರಾದ ವೇದವ್ಯಾಸರನ್ನು ಪ್ರಾರ್ಥಿಸಿದ್ದನ್ನೂ ವಿವರಿಸಿದಳು. ಈ ನಿಯೋಗಕ್ಕೆ ಸಮ್ಮತಿಸಬೇಕೆಂದು ಸೊಸೆಯನ್ನು ವಿನಂತಿಸಿದಳು. ಸತ್ಯವತಿಯ ಒಂದೆರಡು ಮಾತುಗಳಿಗೆ ಅಂಬಿಕೆಯು ಸಮ್ಮತಿಸಲಿಲ್ಲ. ಸತ್ಯವತಿಯು ಅನೇಕ ಧರ್ಮ ವಚನಗಳನ್ನೂ, ಇತಿಹಾಸಗಳನ್ನೂ ಹೇಳಿ, ಬಹಳ ಕಷ್ಟದಿಂದ ಸೊಸೆಯನ್ನು ವ್ಯಾಸರೊಡನೆ ಸಮಾಗಮಕ್ಕೆ ಒಪ್ಪಿಸಿದಳು. ಅಂಬಿಕೆಯು ಈ ನಿಯೋಗಕ್ಕೆ ಕೊನೆಗೂ ಸಮ್ಮತಿಸಿದಳು.








Comments