ಭೀಷ್ಮನಿಂದ ಕಾಶೀ ರಾಜಪುತ್ರಿಯರ ಹರಣ (ಮಹಾಭಾರತ ಕಥಾಮಾಲೆ 8)
- Jul 29
- 2 min read
ಶಂತನುವು ಸತ್ಯವತಿಯನ್ನು ವಿಧಿಪೂರ್ವಕವಾಗಿ ಪಾಣಿಗ್ರಹಣ ಮಾಡಿಕೊಂಡು, ಅವಳೊಡನೆ ಅನೇಕ ಕಾಲ ಸುಖ ದಾಂಪತ್ಯವನ್ನು ಅನುಭವಿಸಿದನು. ಈ ಆನಂದಮಯವಾದ ದಾಂಪತ್ಯದಲ್ಲಿ ಎರಡು ಪುತ್ರ ರತ್ನಗಳು ಉದಯಿಸಿದವು. ಚಿತ್ರಾಂಗದನೆಂಬುವನೇ ಹಿರಿಯ ಪುತ್ರನು. ವಿಚಿತ್ರವೀರ್ಯನು ಎರಡನೆಯವನು. ಹೀಗಿರಲೊಂದು ದಿನ ಶಂತನುವು ಅಸುನೀಗಿದನು. ಸತ್ಯವತಿಯ ಅಭಿಪ್ರಾಯದಂತೆ ಭೀಷ್ಮನು ತನ್ನ ತಮ್ಮನಾದ ಚಿತ್ರಾಂಗದನನ್ನು ಸಿಂಹಾಸನದ ಮೇಲೆ ಕೂರಿಸಿದನು. ಅತುಲ ಪರಾಕ್ರಮಿಯಾಗಿದ್ದ ಚಿತ್ರಾಂಗದನು ತನ್ನ ಭುಜಬಲದಿಂದ ಸಕಲ ರಾಜರನ್ನೂ ಗೆದ್ದನು. ತನಗೆ ಸಮಾನರಾದ ಪರಾಕ್ರಮಿಗಳು ಭುವಿಯ ಮೇಲೆ ಇಲ್ಲವೆಂಬ ಭಾವ ಅವನಲ್ಲಿ ಒಡಮೂಡಿತು. ಸುರ ನರೋರಗರಲ್ಲಿ ತಾನೇ ಶ್ರೇಷ್ಠನು ಎಂದು ಆತ ಭಾವಿಸಿದನು.
ಚಿತ್ರಾಂಗದನೆಂಬ ಅಂಕಿತವನ್ನೇ ಹೊಂದಿದ್ದ ಒಬ್ಬ ಗಂಧರ್ವ ರಾಜನಿಗೆ, ಕುರು ಭೂಪನಾದ ಈ ಚಿತ್ರಾಂಗದನ ದರ್ಪವನ್ನು ಕಂಡು ಅಸಹನೆ ಉಂಟಾಯಿತು. ತನ್ನ ಹೆಸರನ್ನು ಹೊಂದಿದುದ್ದನ್ನೇ ಕಾರಣವಾಗಿಟ್ಟುಕೊಂಡು ಕುರುಭೂಪನನ್ನು ಯುದ್ಧಕ್ಕೆ ಆಹ್ವಾನಿಸಿದನು. ಯುದ್ಧ ವಿದ್ಯೆಯಲ್ಲಿ ತಾನೆ ಎಲ್ಲರಿಗಿಂತ ಮಿಗಿಲೆಂದು ತಿಳಿದು, ಇತರರನ್ನು ಅಲಕ್ಷ್ಯದಿಂದ ಕಾಣುತಿದ್ದ ಕುರುಭೂಪನು ಗಂಧರ್ವರಾಜನ ಬವರದ ಆಹ್ವಾನವನ್ನು ಸಂತೋಷದಿಂದಲೇ ಸ್ವೀಕರಿಸಿದನು. ಇವರೀರ್ವರ ನಡುವೆ ಸರಸ್ವತಿ ನದಿಯ ತೀರದಲ್ಲಿ ಕುರುಕ್ಷೇತ್ರದಲ್ಲಿ ಮೂರು ವರ್ಷಗಳ ಕಾಲ ಭೀಕರ ಕಾಳಗ ಮಸಗಿತು. ಕುರುರಾಜನು ವಿಕ್ರಮಿ ಎಂಬುದೇನೋ ದಿಟ. ಆದರೆ ಮಾಯಾಯುದ್ಧವನ್ನು ಅರಿತವನಲ್ಲ. ಗಂಧರ್ವನು ಮಾಯಾ ಯುದ್ಧದಿಂದ ಚಿತ್ರಾಂಗದ ನಾಮಕನಾದ ಕುರುಭೂಪನನ್ನು ಮೃತ್ಯುವಿಗೀಡು ಮಾಡಿ, ತನ್ನ ಲೋಕಕ್ಕೆ ಮರಳಿದನು.
ಗಂಧರ್ವನಿಗೂ ಕುರುಭೂಪನಿಗೂ ಈ ಸಮರ ಕೇವಲ ವೈಯಕ್ತಿಕ ಕಾರಣದಿಂದಾಗಿ ಸಂಭವಿಸಿತು. ರಾಜ್ಯ ಕೋಶಾಧಿಗಳಿಗೆ ಯಾವುದೇ ಸಂಬಂಧವಿರಲಿಲ್ಲ. 'ಚಿತ್ರಾಂಗದ' ಎಂಬ ಹೆಸರಿನ ಇಬ್ಬರು ಚತುರ್ದಶ ಭುವನಗಳಲ್ಲಿ ಎಲ್ಲಿಯೂ ಇರಕೂಡದೆಂಬ ಛಲ ಮಾತ್ರವಿತ್ತು. ಅದು ದ್ವಂದ್ವ ಯುದ್ಧ. ಮೂರನೆಯವರ ಪ್ರವೇಶವು ಇಲ್ಲಿ ಧರ್ಮವಲ್ಲ. ಬಹುಶಃ ಭೀಷ್ಮನ ಪ್ರವೇಶವು ಕುರುಭೂಪ ಚಿತ್ರಾಂಗದನಿಗೂ ಸಹ್ಯವಾಗದಿರಬಹುದು. ಆದ್ದರಿಂದಲೇ ಭೀಷ್ಮನು ಈ ಸಮರದಲ್ಲಿ ಪ್ರವೇಶಿಸಲಿಲ್ಲ. ಭೀಷ್ಮನು ಚಿತ್ರಾಂಗದನ ಉತ್ತರ ಕ್ರಿಯೆಗಳನ್ನು ವಿಧಿಯಂತೆ ನೆರವೇರಿಸಿದನು. ಬಾಲಕನಾದ ವಿಚಿತ್ರವೀರ್ಯನನ್ನೇ ಚಕ್ರವರ್ತಿ ಪೀಠದ ಮೇಲೆ ಕುಳ್ಳಿರಿಸಿದನು. ವಿಚಿತ್ರವೀರ್ಯನು ಅಣ್ಣನಾದ ಭೀಷ್ಮನಲ್ಲಿ ಅಪಾರ ಗೌರವ ಭಕ್ತಿಯುಳ್ಳವನಾಗಿ, ಭೀಷ್ಮನ ಸಲಹೆಯಂತೆಯೇ ರಾಜ್ಯವಾಳುತ್ತಿದ್ದನು. ಭೀಷ್ಮನು ಸಹ ವಿಚಿತ್ರವೀರ್ಯನ ಹಿತರಕ್ಷಣೆಯಲ್ಲಿ ಸದಾ ಜಾಗರೂಕನಾಗಿರುತ್ತಿದ್ದನು.

ವಿಚಿತ್ರವೀರ್ಯನು ಪ್ರಾಪ್ತವಯಸ್ಕನಾಗುವವರೆಗೂ, ಭೀಷ್ಮನ ಆಣತಿಯಂತೆಯೇ ರಾಜ್ಯಾಡಳಿತವು ನಡೆಯುತ್ತಿತ್ತು. ಆಡಳಿತದಲ್ಲಿ ಒಳ ಪ್ರವೇಶಿಸಲು ಭೀಷ್ಮನಿಗೆ ಮನವಿಲ್ಲದಿದ್ದರೂ ಸಹ, ತನ್ನ ತಂದೆಯಾದ ಶಂತನುವಿನ ಆಶಯದಂತೆ, ತಾಯಿಯಾದ ಸತ್ಯವತಿಯ ಒತ್ತಾಯದಂತೆ, ಭೀಷ್ಮನು ಹಸ್ತಿನಾಪುರದ ಸಂಧಿ ವಿಗ್ರಹಿಯಾಗಿ ಆಡಳಿತ ಯಂತ್ರವನ್ನು ಮುನ್ನಡೆಸುತ್ತಿದ್ದನು. ವಿಚಿತ್ರವೀರ್ಯನು ಪ್ರಾಪ್ತ ವಯಸ್ಕನಾಗುತ್ತಲೇ ಆತನಿಗೆ ವಿವಾಹ ಮಾಡಲು ಭೀಷ್ಮನು ಮುಂದಾದನು. ಅದೇ ಸಮಯಕ್ಕೆ ಸುಂದರಿಯರೂ, ಸುಶೀಲೆಯರೂ ಆದ ಕಾಶೀ ರಾಜನ ಮೂವರು ಹೆಣ್ಣುಮಕ್ಕಳಿಗೆ ಸ್ವಯಂವರ ಏರ್ಪಡಿಸಿದ ವಾರ್ತೆಯು ಭೀಷ್ಮನಿಗೆ ತಲುಪಿತು. ಭೀಷ್ಮನು ತನ್ನ ತಮ್ಮನಿಗೆ ಈ ಕನ್ಯೆಯರು ಅನುಪಮ ವಧುಗಳಾಗುವರು ಎಂದು ಬಗೆದು, ತಾಯಿ ಸತ್ಯವತಿ ದೇವಿಯ ಅನುಜ್ಞೆಯನ್ನು ಪಡೆದು, ರಥವೇರಿ ಏಕಾಕಿಯಾಗಿ ಕಾಶಿಗೆ ತೆರಳಿದನು.
ಕಾಶೀ ರಾಜ ಪುತ್ರಿಯರ ಲಾವಣ್ಯದ ಕುರಿತಾಗಿ ಕೇಳಿದ್ದ ಅಸಂಖ್ಯಾತ ರಾಜರು, ಪ್ರಪಂಚದ ಮೂಲೆ ಮೂಲೆಗಳಿಂದ ಅವರನ್ನು ವಿವಾಹವಾಗುವ ಬಯಕೆಯಿಂದ ಸ್ವಯಂವರಕ್ಕೆ ಆಗಮಿಸಿದ್ದರು. ತಳಿರು-ತೋರಣಗಳಿಂದ ಅಲಂಕೃತವಾದ ಸ್ವಯಂವರ ಮಂಟಪದಲ್ಲಿ ಹಾಕಲ್ಪಟ್ಟ ರತ್ನ ಖಚಿತವಾದ ಆಸನಗಳಲ್ಲಿ, ವಿವಿಧ ಭೂಷಣಗಳಿಂದ ಅಲಂಕೃತರಾದ ಅವರೆಲ್ಲರೂ ಮಂಡಿತರಾಗಿ, ವಧುಗಳು ತಮ್ಮನ್ನು ವರಿಸಬಹುದೆಂಬ ಕನಸು ಕಾಣುತ್ತಿದ್ದರು. ಸ್ವಯಂವರ ಮಂಟಪವನ್ನು ವರಮಾಲಿಕೆಯನ್ನು ಹಿಡಿದು, ಕಾಶೀ ರಾಜ ಪುತ್ರಿಯರಾದ ಅಂಬೆ, ಅಂಬಿಕೆ, ಅಂಬಾಲಿಕೆಯರು ಪ್ರವೇಶಿಸಿದರು. ಸಾಲಂಕೃತರಾಗಿದ್ದ ಅವರು ಒಬ್ಬೊಬ್ಬ ರಾಜರ ಮುಂದೆ ನಿಂತಾಗಲೂ ರಾಜಭಟರು ಆಯಾ ರಾಜರ ಕುಲ-ಗೋತ್ರ-ಕೀರ್ತಿ ಪ್ರತಿಷ್ಠೆಗಳನ್ನು ಹಾಡುತ್ತಿದ್ದರು. ಅದನ್ನು ಕೇಳುತ್ತಾ ಕನ್ಯೆಯರು ಮುಂದುವರೆಯುತ್ತಿದ್ದಾಗ ಸ್ವಯಂವರ ಮಂಟಪಕ್ಕೆ ಭೀಷ್ಮನು ಬಿರುಗಾಳಿಯಂತೆ ನುಗ್ಗಿದನು. ಭೀಷ್ಮನು ಒಳ ಪ್ರವೇಶಿಸುತ್ತಿದ್ದಂತೆ ಅಲ್ಲಿ ಕೋಲಾಹಲವೇ ಉಂಟಾಯಿತು. "ಧರ್ಮಾತ್ಮನೆಂದು ಪ್ರಖ್ಯಾತನಾದ, ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವ ಈ ಭೀಷ್ಮನು ಲಜ್ಞಾಹೀನನಾಗಿ ಸ್ವಯಂವರ ಮಂಟಪಕ್ಕೆ ಬಂದನೇಕೆ?", "ನಿತ್ಯ ಬ್ರಹ್ಮಚಾರಿ ಎಂದು ಖ್ಯಾತನಾದ ಈ ಭೀಷ್ಮನ ಪ್ರತಿಜ್ಞೆ ನಿರರ್ಥಕವಾಯಿತೆ? ತನ್ನ ಖ್ಯಾತಿಯನ್ನು ಬಲಿಗೊಟ್ಟು ಹೇಗೆ ತಾನೇ ಇಲ್ಲಿಗೆ ಬಂದ?", "ಕನ್ಯೆಯರ ಸೌಂದರ್ಯ ನೋಡುತ್ತಲೇ ತನ್ನ ಪ್ರತಿಜ್ಞೆಯನ್ನೇ ಮರೆತನೆ?" ಇತ್ಯಾದಿಯಾಗಿ ಅಲ್ಲಿ ನೆರೆದಿದ್ದ ರಾಜಪುರುಷರು ಪಿಸುಮಾತಿನಲ್ಲಿ ಆಡಿಕೊಳ್ಳುವುದನ್ನು ಕೇಳಿದ ಭೀಷ್ಮನು ತನ್ನ ತಮ್ಮನಿಗೆ ಈ ಕಾಶೀ ಕನ್ಯೆಯರನ್ನು ವಧುಗಳಾಗಿ ಕರೆದೊಯ್ಯಲು ತಾನು ಬಂದಿರುವೆನೆಂದು ಘೋಷಿಸಿದನು. ಮೂವರು ರಾಜಕುಮಾರಿಯರನ್ನೂ ತನ್ನ ರಥವೇರುವಂತೆ ಆದೇಶಿಸಿದನು. ಭೀಷ್ಮನ ಸಿಡಿಲಿನ ಘರ್ಜನೆಯಂತಹ ಆದೇಶವನ್ನು ಧಿಕ್ಕರಿಸಲಾಗದ ರಾಜಕುಮಾರಿಯರು ಆತನ ರಥವನ್ನು ಏರಿ ನಿಂತರು. ತಾನೂ ರಥವನ್ನೇರಿದ ಭೀಷ್ಮನು ಅಲ್ಲಿ ನೆರೆದ ರಾಜ ಮಹಾರಾಜರನ್ನು ಕುರಿತು, ತಾನು ಈ ಮೂವರು ಕನ್ಯೆಯರನ್ನು ಕರೆದೊಯ್ಯುತ್ತಿರುವುದಾಗಿಯೂ, ಯಾರಾದರೂ ಬಲವಂತರು ತಡೆಯುವುದಾದರೆ ತನ್ನನ್ನು ತಡೆಯಬಹುದೆಂದು ಘೋಷಿಸಿದನು.
ಈ ಘಟನೆಯಿಂದ ಸ್ವಯಂವರಕ್ಕೆ ಕನ್ಯಾರ್ಥಿಗಳಾಗಿ ಬಂದಿದ್ದ ರಾಜರೆಲ್ಲರೂ ಚಕಿತರಾದರು; ಕೋಪವನ್ನು ತಾಳಿದರು. ಆಸನಗಳಿಂದ ಎದ್ದು, ಆಭರಣಗಳನ್ನು ಕಳಚಿಟ್ಟು, ಯುದ್ಧ ಕವಚಗಳನ್ನು ಧರಿಸಿ, ಭೀಷ್ಮನ ಮೇಲೆ ಮುಗಿಬಿದ್ದರು. ಏಕಾಕಿಯಾದ ಭೀಷ್ಮನು ಅವರೆಲ್ಲರ ಶರಗಳನ್ನು ಕತ್ತರಿಸಿ ಹಾಕಿದನು. ಪರಾಜಿತರಾದ ಎಲ್ಲ ರಾಜರೂ ಭೀಷ್ಮನ ಪರಾಕ್ರಮವನ್ನು ಪ್ರಶಂಸಿಸುತ್ತಾ, ಕಾಶೀ ಕನ್ಯೆಯರ ಆಸೆಯನ್ನು ಕೈ ಬಿಟ್ಟರು. ಭೀಷ್ಮನು ಕನ್ಯೆಯರ ಜೊತೆ ಹಸ್ತಿನಾಪುರಕ್ಕೆ ತೆರಳಬೇಕೆನ್ನುವಷ್ಟರಲ್ಲಿ ಸೌಭ ದೇಶದ ಅಧಿಪತಿಯಾದ ಸಾಲ್ವನೆಂಬ ರಾಜನು ಮುಂದೆ ಬಂದು ಭೀಷ್ಮನನ್ನು ಯುದ್ಧಕ್ಕೆ ಕರೆದನು. ತಾನು ಕಾಮಿಸಿದ್ದ, ಬಯಸಿದ್ದ ಅಂಬೆಗಾಗಿ ಭೀಷ್ಮನ ಎದುರು ಬಂದ ಸಾಲ್ವನು ಭೀಷ್ಮನೊಂದಿಗೆ ಹೋರಾಡಿದನು. ಕೋಪಗೊಂಡ ಭೀಷ್ಮನ ಪರಾಕ್ರಮದ ಮುಂದೆ ತತ್ತರಿಸಿ ಹೋದ ಸಾಲ್ವನು ಪರಾಭವಗೊಂಡು ತಲೆ ತಗ್ಗಿಸಿ ನಿಂತನು. ಭೀಷ್ಮನು ಕಂಗೆಟ್ಟು ನಿಂತ ಸಾಲ್ವನನ್ನು ಸಂಹರಿಸದೇ ತನ್ನ ದೇಶಕ್ಕೆ ತೆರಳಲು ಅನುವು ಮಾಡಿಕೊಟ್ಟನು. ಭೀಷ್ಮನು ಅಂಬೆ, ಅಂಬಿಕೆ, ಅಂಬಾಲಿಕೆಯರೊಡನೆ ಹಸ್ತಿನಾಪುರಕ್ಕೆ ಮರಳಿದನು.








Comments