top of page

ಶಂತನು ಮತ್ತು ಯೋಜನಗಂಧಿ – ರಾಜಧರ್ಮದ ಸಂಕೀರ್ಣತೆ (ಮಹಾಭಾರತ ಕಥಮಾಲೆ 6)

ಪುತ್ರನಾದ ದೇವವ್ರತನಿಗೆ ಯೌವರಾಜ್ಯಾಭಿಷೇಕ ನೆರವೇರಿಸಿದ ಶಂತನು ಚಕ್ರವರ್ತಿಯು ನಿಶ್ಚಿಂತನಾಗಿರುತ್ತಿದ್ದನು. ದೇವವ್ರತನೇ ಆಡಳಿತ ಯಂತ್ರವನ್ನು ಮುನ್ನಡೆಸುತ್ತಿದ್ದನು. ಮಗನ ಜೊತೆಯಾಗಿ ಶಂತನು ಅನೇಕ ಕಾಲ ಸುಖ ಸಂತೋಷದಿಂದಿದ್ದನು. ಹೀಗಿರಲೊಂದು ದಿನ ಯಮುನೆಯ ತೀರದಲ್ಲಿ ವಿಹರಿಸುತ್ತಿರುವಾಗ, ಘಮಘಮಿಸುವ ಸುವಾಸನೆಯು ಗಾಳಿಯಲ್ಲಿ ತೇಲಿ ಬಂದು ಶಂತನುವಿನ ನಾಸಿಕವನ್ನು ಅಡರಿತು. ಅದುವರೆಗೂ ಅರಿಯದ, ಅನಿರ್ವಚನೀಯವಾದ ಆ ಸುವಾಸನೆಯನ್ನು ಮತ್ತೆ ಮತ್ತೆ ಆಘ್ರಾಣಿಸಿದ ಚಕ್ರವರ್ತಿಯು, ಸಹಜವಾಗಿಯೇ ಆ ಸುಗಂಧದ ಮೂಲವನ್ನು ಅರಿಯಲು ಹೊರಟನು.
ree

ಸುಗಂಧವನ್ನು ಹೊತ್ತು ತರುತ್ತಿದ್ದ ಮಾರುತವನ್ನು ಅನುಸರಿಸಿ ಹೊರಟ ಶಂತನುವು ದೋಣಿಯೊಂದರ ಬಳಿ ತಲುಪಿದನು. ಆ ದೋಣಿಯಲ್ಲಿ ಸುಗಂಧವನ್ನು ಹೊರಸೂಸುತ್ತ, ಬಿದಿರಿನ ಹುಟ್ಟು ಹಿಡಿದು ದೋಣಿ ನಡೆಸಲು ಸಜ್ಜಾಗಿ ನಿಂತಿದ್ದ ಸುಂದರ ಯುವತಿಯೋರ್ವಳನ್ನು ಕಂಡನು. ತನ್ನ ಮನಸ್ಸನ್ನು ಅಹ್ಲಾದಗೊಳಿಸಿ ತನ್ನನ್ನು ಇಲ್ಲಿಯವರೆಗೆ ಕರೆತಂದ ಆ ಸುಗಂಧವು, ಈ ಕನ್ಯೆಯ ತನುಗಂಧ ಎನ್ನುವುದು ರಾಜನಿಗೆ ತಿಳಿಯಿತು‌. ಅರಳಿದ ಸುಮದಂತೆ, ಶುಭ್ರವಾದ ದಂತ ಪಂಕ್ತಿಗಳಿಂದ, ಬೆಳದಿಂಗಳ ಕಾಂತಿಯನ್ನು ಸೂಸುತ್ತಾ ನಿಂತಿದ್ದ ಕನ್ಯೆಯನ್ನು ರಾಜನು ಮಾತನಾಡಿಸಿದನು. "ಸುಂದರಿಯೇ! ಯಾರು ನೀನು? ಯಾರ ಮಗಳು? ಇಲ್ಲೇನು ಮಾಡುವೆ?"


"ಮಹಾರಾಜರಿಗೆ ಜಯವಾಗಲಿ. ನಾನು ಕಂಧರ ನಾಮಕನಾದ ದಾಶರಾಜನ ಪುತ್ರಿ. ನಮ್ಮ ತಂದೆಯ ಆಜ್ಞಾಧಾರಕಳಾಗಿ, ದೋಣಿಯನ್ನು ನಡೆಸುವ ಕಾರ್ಯಮಾಡುತ್ತಿರುವೆನು" ಎಂಬುದಾಗಿ ತರುಣಿಯು ಉತ್ತರಿಸಿದಳು. ಅವಳನ್ನು ನೋಡಿ ಮಾತನಾಡುತ್ತಿದ್ದಂತೆಯೇ ಮನ್ಮಥನ ಶರಾವಳಿಗಳ ಮೀಟುವಿಕೆಗೆ ತುತ್ತಾದ ಶಂತನುವು, ಆ ಗಂಧವತಿಯಲ್ಲಿ ತನ್ನನ್ನು ವಿವಾಹವಾಗುವಂತೆ ವಿನಂತಿಸಿದನು. ಆದರೆ ಆಕೆಯು ವಿವಾಹದ ವಿಷಯವನ್ನು ತನ್ನ ತಂದೆಯಾದ ಕಂಧರನಲ್ಲಿ ಮಾತನಾಡಬೇಕೆಂದೂ, ತಂದೆಯ ಒಪ್ಪಿದರೆ ಮಾತ್ರ ವಿವಾಹಕ್ಕೆ ಸಮ್ಮತಿಸುವೆನೆಂದೂ ತಿಳಿಸಿದಳು. "ರತ್ನಹಾರೀಚ ಪಾರ್ಥಿವ:" ಎಂಬ ಪ್ರವಾದವು ರಾಜರಿಗಿದೆ. ಸ್ತ್ರೀ ರತ್ನವಾದ ಈ ಗಂಧವತಿಯನ್ನು ಶಂತನು ಅಪಹರಿಸಿ ಒಯ್ಯಬಹುದಿತ್ತು, ಆದರೆ ಅರಸನು ಕನ್ಯೆಯನ್ನು ಅಪಹರಿಸುವ ಯೋಚನೆಯನ್ನು ಮಾಡಲಿಲ್ಲ. ಆಕೆಯ ತಂದೆಯಾದ ದಾಶರಾಜನಲ್ಲಿಗೆ ತೆರಳಿ, ಮಗಳನ್ನು ತನಗೆ ವಿವಾಹ ಮಾಡಿಕೊಡಬೇಕೆಂದು ಕೇಳಿದನು. ಅದಕ್ಕೆ ಬೆಸ್ತ ರಾಜನು, "ಚಕ್ರವರ್ತಿಯೇ! ಈ ಕನ್ಯೆಯು ಜನಿಸಿದಾಗಲೇ, ಇವಳನ್ನು ಉತ್ತಮನಾದ ವರನಿಗೆ ಕೊಟ್ಟು ವಿವಾಹ ಮಾಡಬೇಕೆಂದು ನಿಶ್ಚಯಿಸಿದ್ದೇನೆ. ನಿನಗಿಂತಲೂ ಉತ್ತಮನು ಬೇರೊಬ್ಬನಿಗಲಾರ ಎಂಬುದು ನಿಜ, ಆದರೆ ನನ್ನದೊಂದು ಆಸೆ ಇದೆ. ಸತ್ಯವಾದಿಯಾದ ನೀನು ಅದನ್ನು ನೆರವೇರಿಸಿದರೆ ವಿವಾಹಕ್ಕೆ ಸಮ್ಮತಿಸಲಡ್ಡಿ ಇಲ್ಲ" ಎಂದನು. ಆ ಆಸೆ ಏನೆಂಬುದನ್ನು ತಿಳಿಸಿದಲ್ಲಿ ಅದನ್ನು ನೆರವೇರಿಸುವ ಸಾಧ್ಯಾಸಾಧ್ಯತೆಗಳನ್ನು ವಿವೇಚಿಸುವುದಾಗಿ ಚಕ್ರವರ್ತಿಯು ತಿಳಿಸಿದನು. ತನ್ನ ಪುತ್ರಿಯಾದ ಯೋಜನಗಂಧಿ(ಸತ್ಯವತಿ)ಯಲ್ಲಿ ಜನಿಸುವ ಮಗನೇ ರಾಜ್ಯದ ಮುಂದಿನ ಚಕ್ರವರ್ತಿಯಾಗಬೇಕೆಂಬ ನಿಬಂಧನೆಯ ಮೇರೆಗೆ ಪುತ್ರಿಯನ್ನು ಚಕ್ರವರ್ತಿಗೆ ಧಾರೆಯೆರೆಯಲು ಸಿದ್ಧನಿರುವುದಾಗಿ ದಾಶ ರಾಜನು ತಿಳಿಸಿದನು.


ಕಾಮನ ಬಾಣಗಳಿಂದ ಪೀಡಿತನಾಗಿ, ಕಾಮಾಗ್ಮಿಯಿಂದ ದಗ್ಧನಾಗಿ ಹೋಗುತ್ತಿದ್ದರೂ, ದಾಶರಾಜನ ಈ ನಿಬಂಧನೆಗೆ ಶಂತನುವು ಒಪ್ಪಲಿಲ್ಲ. ಅಪಾರ ಯೋಗ್ಯತೆಯನ್ನು ಹೊಂದಿದ ದೇವವ್ರತನಂಥ ಮಗನಿರುವಾಗ ಬೇರೆಯವರಿಗೆ ರಾಜ್ಯವನ್ನು ಕೊಡಲು ಸಾಧ್ಯವೇ? ಅಸಾಧ್ಯವಾದ ಈ ನಿಬಂಧನೆಯಿಂದ ನೊಂದ ರಾಜನು, ಭಗ್ನ ಹೃದಯಿಯಾಗಿ ಭಾರವಾದ ಹೆಜ್ಜೆಗಳನ್ನಿಡುತ್ತಾ, ಅಲ್ಲಿಂದ ಹೊರಟು ಹಸ್ತಿನಾವತಿಯ ಅರಮನೆಯನ್ನು ಸೇರಿದನು. ಆದರೆ ಯೋಜನಗಂಧಿಯನ್ನು ಮರೆಯಲು ಸಾಧ್ಯವಾಗಲಿಲ್ಲ. ಕಾಮೋಸಹತನಾಗಿ, ಚಿಂತೆಯಿಂದ, ಬೇಸರದಿಂದ ಕಾಲ ಕಳೆಯಲು ಪ್ರಾರಂಭಿಸಿದನು. ಯಾರೊಡನೆಯೂ ಹೆಚ್ಚು ಮಾತನಾಡದೇ ಮೌನಿಯಾದನು. ದೈನಂದಿನ ವಿಹಾರವನ್ನೂ ನಿಲ್ಲಿಸಿ, ಅರಮನೆಯಲ್ಲಿಯೇ ಇರತೊಡಗಿದನು. ವಿರಹ ವೇದನೆಯು ಆತನನ್ನು ಆವರಿಸಿತು.


ತಂದೆಯೊಂದಿಗೆ ತಾದಾತ್ಮ್ಯ ಸಂಬಂಧ ಹೊಂದಿದ್ದ, ರಾಜ್ಯಾಂಗದ ಮುಖ್ಯವಾದ ವಿಷಯಗಳಲ್ಲಿ ತಂದೆಯ ಸಲಹೆ ಪಡೆಯುತ್ತಿದ್ದ, ಪುತ್ರನಾದ ದೇವವ್ರತನಿಗೆ ಶಂತನುವಿನಲ್ಲಿ ಆದ ಈ ಬದಲಾವಣೆಯು ಗಮನಕ್ಕೆ ಬಂದಿತು. ತಂದೆಯ ಶರೀರದಲ್ಲಿ ಸ್ವಾಸ್ಥ್ಯವಿಲ್ಲದಿರಬಹುದೆಂದು ಒಂದೆರಡು ದಿನ ಕಾದನು. ಆದರೆ ಕೆಲ ದಿನಗಳ ನಂತರ ತನ್ನ ತಂದೆಯನ್ನು ಯಾವುದೋ ಚಿಂತೆಯು ಆವರಿಸಿರುವುದು ದೇವವ್ರತನಿಗೆ ಸ್ಪಷ್ಟವಾಯಿತು.


ಇದರಿಂದ ನೊಂದ ಗಾಂಗೇಯನು, ತಂದೆಯ ಚಿಂತೆಗೆ ಕಾರಣವೇನೆಂದು ತಿಳಿಯುವ ಕುತೂಹಲದಿಂದ ತಂದೆಯ ಅರಮನೆಗೆ ತೆರಳಿ, ಅಭಿವಾದನ ಮಾಡಿ, ತಂದೆಯ ಅಕ್ಕರೆಯ ಆಶೀರ್ವಾದ ಪಡೆದು ತಂದೆಯನ್ನು ಪ್ರಶ್ನಿಸಿದನು, "ತಂದೆಯವರೇ, ನಮ್ಮ ಸಾಮ್ರಾಜ್ಯದಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ. ಸಾಮಂತ ರಾಜರೆಲ್ಲರೂ ನಮಗೆ ಅನುಕೂಲರಾಗಿದ್ದಾರೆ. ರಾಜ್ಯವು ಸುಭಿಕ್ಷವಾಗಿದೆ. ಹೀಗಿರುವಾಗ ನೀವು ಏಕೆ ಚಿಂತಿಸುತ್ತಿರುವಿರಿ?"


ಯಾವ ಉತ್ತರವನ್ನು ನೀಡದೇ ವಿಷಣ್ಣವದನನಾಗಿ ಕುಳಿತ ತಂದೆಯನ್ನು ದೇವವ್ರತನು ಪುನಃ ಪ್ರಶ್ನಿಸಿದನು, "ತಂದೆಯವರೇ, ನೀವು ಯಾವುದೋ ಯೋಚನೆಯಲ್ಲಿ ಮಗ್ನರಾಗಿ ದಿನ ದಿನಕ್ಕೂ ಕೃಷರಾಗುತ್ತಿದ್ದೀರಿ, ಕಾಂತಿಹೀನರಾಗುತ್ತಿದ್ದೀರಿ. ಉತ್ಸಾಹವೇ ಇಲ್ಲದಂತೆ ಕಾಣುವ ನೀವು ಕುದುರೆ ಸವಾರಿಯನ್ನೂ, ವಾಯು ವಿಹಾರವನ್ನೂ ನಿಲ್ಲಿಸಿದ್ದೀರಿ. ಮಗನಾದ ನನ್ನಲ್ಲಿಯೂ ಸರಿಯಾಗಿ ಮಾತನಾಡುತ್ತಿಲ್ಲ. ದಯಮಾಡಿ ಈ ಚಿಂತೆಯ ಕಾರಣವನ್ನು ತಿಳಿಸಿ" ಎಂದು ಅಂಗಲಾಚಿದನು.


ತನ್ನ ಬಳಿಯೇ ಕುಳಿತು, ತನ್ನ ಸಂಕಟದ ಕಾರಣವನ್ನು ತಿಳಿಸುವಂತೆ, ಪ್ರೀತಿಯಿಂದ ಒತ್ತಾಯಿಸುತ್ತಿರುವ ಪುತ್ರನ ತಲೆಯನ್ನು ನೇವರಿಸುತ್ತಾ ಶಂತನುವು ಕಣ್ಣಲ್ಲಿ ನೀರು ತುಂಬಿದವನಾಗಿ ನುಡಿದನು, "ದೇವವ್ರತ, ನನಗೆ ನೀನೊಬ್ಬನೇ ಪುತ್ರನಾದರೂ, ನೂರುಮಕ್ಕಳಿಗೆ ಸಮವೆಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ನೀನೇ ದೀರ್ಘಾಯುಷ್ಯ ಹೊಂದಿ, ಬಾಳಿ ಬೆಳಗಿ ನಮ್ಮ ವಂಶವು ಶಾಖೋಪಶಾಖೆಗಳಾಗಿ ಬೆಳೆಯಲಿ ಎಂಬುದೇ ನನ್ನ ಹಿರಿಯಾಸೆ", ಶಂತನುವು ನಿಟ್ಟುಸಿರು ಬಿಟ್ಟು ಮುಂದುವರಿದನು. "ಆದರೆ ಧರ್ಮವನ್ನು ತಿಳಿದವರು ಒಬ್ಬನೇ ಪುತ್ರನ ಇರುವಿಕೆಯು ಮಕ್ಕಳಿಲ್ಲದಿರುವಿಕೆಗೆ ಸಮಾನವೆಂದು ಹೇಳುತ್ತಾರೆ. ಏಕೆಂದರೆ ಅಪಮೃತ್ಯವು ಯಾರಿಗಾದರೂ ಹೇಗಾದರೂ ಸಂಭವಿಸಬಹುದು. ಸದಾ ಶಸ್ತ್ರಪಾಣಿಯಾದ, ಶ್ರೇಷ್ಠ ಯೋಧನಾದ, ಯುದ್ಧಗಳಲ್ಲಿ ತೊಡಗಬೇಕಾದ ಅನಿವಾರ್ಯತೆಯುಳ್ಳ ನೀನು ಒಂದು ವೇಳೆ ಪ್ರಾಣತ್ಯಾಗ ಮಾಡಿದರೆ ನಾನು ಅಪುತ್ರವಂತನಾಗುತ್ತೇನೆ. ಚಂದ್ರವಂಶವು ನಿರ್ವಂಶವಾಗುವುದು." ದೇವವ್ರತನು ತಂದೆಯ ಮಾತುಗಳನ್ನು ಆಲಿಸುತ್ತಿದ್ದಂತೆಯೇ, ಶಂತನುವು ಮುಂದುವರೆದು "ಅಗ್ನಿ ಹೊತ್ರ ಮಾಡುವುದರಿಂದಲೂ ವೇದ - ವೇದಾಂತಗಳ ಅಧ್ಯಯನದಿಂದಲೂ ಉತ್ತಮ ಲೋಕಗಳ ಪ್ರಾಪ್ತಿಯು ಸಾಧ್ಯವಾಗುವುದು ಹೌದಾದರೂ, ಅದು ಪುತ್ರಪ್ರಾಪ್ತಿಯ ಫಲದಲ್ಲಿ ಹದಿನಾರನೆಯ ಒಂದು ಭಾಗಕ್ಕೂ ಸಮವಾಗಲಾರದು. ಕೇವಲ ಪುತ್ರಪ್ರಾಪ್ತಿಯ ಕಾರಣದಿಂದಲೇ ಒಬ್ಬಾತನಿಗೆ ಸ್ವರ್ಗ ಪ್ರಾಪ್ತಿಸುತ್ತದೆ. ವೇದ ಪುರಾಣಗಳ ಧರ್ಮವನ್ನು ತಿಳಿದವರು ಅಭಿಪ್ರಾಯವೂ ಇದೇ ಆಗಿದೆ. ಈ ಎಲ್ಲಾ ಕಾರಣಗಳಿಂದ ನಿನಗೆ ಸಹೋದರರು ಬೇಕಲ್ಲ" ಎಂಬುದಾಗಿ ಉತ್ತರಿಸಿ ಮತ್ತೆ ಅಧೋಮುಖಿಯಾಗಿ ಚಿಂತೆಯಲ್ಲಿ ಮಗ್ನನಾದನು. ತಂದೆಯ "ಸಹೋದರರು ಬೇಕಲ್ಲವೇ" ಎಂಬ ಮಾತುಗಳನ್ನೇ ಮನದಲ್ಲಿ ಮಥಿಸುತ್ತಾ ದೇವವ್ರತನು ಅಲ್ಲಿಂದ ತೆರಳಿದನು.

Comments


bottom of page