top of page

ಗಾಂಗೇಯ (ಭೀಷ್ಮ)ನ ಜನನ (ಮಹಾಭಾರತ ಕಥಾಮಾಲೆ 3)


👑 ಶಂತನು ಮತ್ತು ಗಂಗಾದೇವಿ – ದಿವ್ಯ ಸಂಗಮ

ಮಹಾ ಪರಾಕ್ರಮಿಯೂ, ದೇವೇಂದ್ರ ಸಮಾನನೂ ಎನಿಸಿದ ಶಂತನು ಚಕ್ರವರ್ತಿಯು ಬೇಟೆಯಲ್ಲಿ ಆಸಕ್ತನಾಗಿದ್ದನು. ಕೆಲವೊಮ್ಮೆ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಾ ಅರಣ್ಯದಲ್ಲಿಯೇ ಇದ್ದುಬಿಡುತ್ತಿದ್ದನು. ಒಮ್ಮೆ ಅವನು ಪರಮ ಪಾವನೆಯೆನಿಸಿದ ಗಂಗಾ ನದಿಯ ತೀರದಲ್ಲಿ ಏಕಾಕಿಯಾಗಿ ಸಂಚರಿಸುತ್ತಿರುವಾಗ, ಜಾಜ್ವಲ್ಯಮಾನವಾದ ಶರೀರ ಕಾಂತಿಯನ್ನು ಹೊಂದಿ, ಸಾಕ್ಷಾತ್ ಲಕ್ಷ್ಮೀ ದೇವಿಯಂತೆಯೇ ಕಾಣುತ್ತಿದ್ದ ಸುಂದರಳಾದ ಒಬ್ಬ ಸ್ತ್ರೀಯನ್ನು ಕಂಡನು.

ಬೆಳದಿಂಗಳ ಕಾಂತಿಯನ್ನು ಹೊರನೂಸುವ, ಸುಂದರವಾದ ದಂತಪಂಕ್ತಿಗಳಿಂದ ಸುಶೋಭಿತವಾದ ಮುಖ ಕಮಲವನ್ನು ಹೊಂದಿದ್ದಳು. ದಿವ್ಯಾಭರಣ ಭೂಷಿತಳಾಗಿ, ನವಿರಾದ ವಸನಗಳನ್ನು ಧರಿಸಿದ ಅವಳು ಏಕಾಕಿನಿಯಾಗಿದ್ದಳು. ಅವಳನ್ನು ನೋಡುತ್ತಲೇ ಶಂತನುವು ಅನಿರ್ವಚನೀಯವಾದ ಆನಂದ-ಆಶ್ಚರ್ಯಗಳನ್ನು ಅನುಭವಿಸಿದನು. ರೋಮಾಂಚಿತನಾದನು.ತನ್ನ ಭ್ರಮರ ಸದೃಶ ನಯನದ್ವಯಗಳಿಂದ ಆ ವರಕನ್ಯೆಯ ಸೌಂದರ್ಯವನ್ನು ಹೀರತೊಡಗಿದನು. ಆ ಶುಭಾಂಗಿಯೂ ಸಹ ರಾಜನ ದಿವ್ಯ ತೇಜವನ್ನು ಎವೆಯಿಕ್ಕದೆ ನೋಡುತ್ತಿದ್ದಳು. ಪರಸ್ಪರರ ಕಣ್ಣುಗಳು ಒಂದಾದವು.ಒಡನೆಯೇ ಮನ್ಮಥಾಕಾರದ ರಾಜನಲ್ಲಿಯೇ ಲೀನ ಮನಸ್ಕಳಾದ ವರಾಂಗನೆಯ ಹೃದಯದಲ್ಲಿ ಸ್ನೇಹ-ಪ್ರೇಮಗಳ ಅಂಕುರವಾಯಿತು. ತಾವೀರ್ವರೂ ಪರಸ್ಪರರ ಮೋಹ ಪಾಶದಲ್ಲಿ ಬಂಧಿತರಾದುದ್ದನ್ನು ಅರಿತ ರಾಜನು ಅವಳನ್ನು ಕೇಳಿದನು, "ಸುಂದರಾಂಗಿಯೇ ನೀನು ದೇವತೆಯೇ? ಗಂಧರ್ವ ಸ್ತ್ರೀಯೇ? ಅಪ್ಸರೆಯೆ? ಮನುಷ್ಯಳೆ? ನೀನು ಯಾರಾದರೇನಂತೆ? ಮಾತಿಗೆ ನಿಲುಕದ ಸೌಂದರ್ಯದಿಂದ ಬೆಳಗುತ್ತಿರುವ ನೀನು ನನ್ನನ್ನು ವರಿಸು, ನನ್ನ ಭಾರ್ಯೆಯಾಗು.".

ಶಂತನುವಿನ ಸುಮಧುರವಾದ ನುಡಿಗಳನ್ನು ಕೇಳಿ ಗಂಗಾದೇವಿಯು ತಾನು ವಸುಗಳಿಗಿತ್ತ ಮಾತನ್ನು ಸ್ಮರಿಸಿಕೊಳ್ಳುತ್ತಾ ರಾಜನ ಸಮೀಪಕ್ಕೆ ಸಾಗಿ, ಮಂದಹಾಸದೊಡನೆ ಮೃದು ಭಾಷೆಯಲ್ಲಿ ಹೇಳಿದಳು, "ಭೂಪಾಲನೇ ನಾನು ನಿನ್ನನ್ನು ವರಿಸಿ ನಿನ್ನ ಅಧೀನಳಾಗುತ್ತೇನೆ. ಆದರೆ ಒಂದು ನಿಬಂಧನೆಯ ಮೇರೆಗೆ ಮಾತ್ರ."


💍 ಗಂಗಾದೇವಿಯ ನಿಬಂಧನೆ

ಅದೇನೆಂದು ಶಂತನುವು ಕೇಳಲು ಆಕೆ, "ತಾನು ಶುಭವಾದ ಅಥವಾ ಅಶುಭವಾದ ನಿನಗೆ ಇಷ್ಟವಾದ ಅಥವಾ ಇಷ್ಟವಾಗದ ಯಾವ ಕಾರ್ಯವನ್ನೇ ಮಾಡಿದರೂ ಸರಿಯೇ!, ನೀನು ನನ್ನನ್ನು ತಡೆಯಬಾರದು. ಒಂದು ವೇಳೆ ನಾನು ನಿನಗೆ ಅಪ್ರಿಯವಾದ ಕಾರ್ಯಗಳನ್ನು ಎಸಗಿದರೂ ನೀನು ನನ್ನನ್ನು ನಿಂದಿಸಕೂಡದು. ಒಮ್ಮೆ ನೀನೇನಾದರೂ, ನಿನಗಿಷ್ಟವಾಗದ ಕಾರ್ಯ ಮಾಡುವಾಗ ತಡೆದರೆ ಅಥವಾ ಅಪ್ರಿಯವಾದ ಮಾತುಗಳಿಂದ ನನ್ನನ್ನು ನಿಂದಿಸಿದರೆ, ನಾನು ನಿನ್ನನ್ನು ಬಿಟ್ಟು ಹೊರಟು ಹೋಗುವೆನು. ಅಲ್ಲಿಂದ ಮುಂದೆ ಕ್ಷಣಮಾತ್ರವೂ ನಾನು ನಿನ್ನೊಡನಿರಲಾರೆ. ಈ ನಿಯಮಗಳು ನಿನಗೆ ಒಪ್ಪಿಗೆಯಾದರೆ ನಾನು ನಿನ್ನ ಪತ್ನಿಯಾಗುವೇನು. ಆದೀತೇ?


ಶಂತನುವು ಮುಂದೆ ಏನೊಂದನ್ನೂ ಪ್ರಶ್ನಿಸದೆ ಹಾಗೆಯೇ ಆಗಲೆಂದು ಆ ನಿಯಮಕ್ಕೆ ಸಮ್ಮತಿಯನ್ನು ಸೂಚಿಸಿದನು. ಇದರಿಂದ ಆನಂದ ತುಂದಿಲಳಾದ ಆ ವರವರ್ಣನಿಯು, ಪಾರ್ಥಿವ ಶ್ರೇಷ್ಠನಾದ ಶಂತನುವನ್ನು ವರಿಸಿದಳು. ವಿವಾಹಾನಂತರ ಶಂತನುವು ಗಂಗಾದೇವಿಯ ಸೌಶೀಲ್ಯ, ಸದಾಚಾರ, ರೂಪ, ಔದಾರ್ಯ ಹಾಗೂ ಏಕಾಂತದಲ್ಲಿ ಹೊಂದಿದನು. ತ್ರಿಪಥಗಾಮಿನಿಯಾದ ಗಂಗಾದೇವಿಯೂ ಸಹ ದೇವರಾಜ ಸಮಪ್ರಭನಾದ ಶಂತನುವನ್ನು ಪತಿಯಾಗಿ ಹೊಂದಿ ಪರಮ ಸಂತುಷ್ಟಿಯನ್ನು ಅನುಭವಿಸಿದಳು.


👶 ಗಂಗಾದೇವಿಯ ಮಕ್ಕಳು

ತನ್ನ ಅದೃಷ್ಟ ವಿಶೇಷದಿಂದ ಲಭಿಸಿದ ಪತ್ನಿಯನ್ನು, ತನ್ನ ಚತುರೋಕ್ತಿಗಳಿಂದಲೂ, ಅಪೂರ್ವವಾದ ವಸ್ತ್ರಾಭರಣಗಳನ್ನು ಉಡುಗೊರೆಯಾಗಿ ನೀಡುವುದರಿಂದಲೂ, ತನ್ನ ಪ್ರೀತಿಯಿಂದಲೂ ಆನಂದ ಭರಿತಾಳನ್ನಾಗಿ ಮಾಡುತ್ತಿದ್ದನು. ಹೀಗೆ ಪರಸ್ಪರರು ಆನಂದಿಸುತ್ತಾ ಸುಖಿಸುತ್ತಾ ಕಾಲದ ಪರಿವೇ ಇಲ್ಲದೆ ಇರುತ್ತಿದ್ದರು. ವರ್ಷಗಳು ಕ್ಷಣಗಳಂತೆ ಭಾಸವಾಗುತ್ತಾ ಉರುಳುತ್ತಿರುವ ಸಂದರ್ಭದಲ್ಲಿ ಈ ದಂಪತಿಯು ಅನುಪಮರಾದ ಎಂಟು ಮಕ್ಕಳನ್ನು ಪಡೆದರು. ಆದರೆ, ಒಂದೊಂದು ಮಗು ಜನಿಸಿದಾಗಲೂ, ಗಂಗಾದೇವಿಯು ಅದನ್ನು "ತ್ವಾಂ ಪ್ರಿಣಾಮ್ಯಹಂ" - ನಾನು ನಿನ್ನನ್ನು ಸುಪ್ರೀತನನ್ನಾಗಿ ಮಾಡುತ್ತೇನೆ . ಅರ್ಥಾತ -ನಿನಗೆ ಒಳ್ಳೆಯದನ್ನು ಮಾಡುತ್ತೇನೆ - ಎಂದು ಹೇಳಿ ಗಂಗಾ ಪ್ರವಾಹದಲ್ಲಿ ಹಾಕಿಬಿಡುತ್ತಿದ್ದಳು. ಅವಳು ನದಿಯಲ್ಲಿ ಹಾಕಿದ ಮಗುವು ಪುನಃ ಮೇಲಕ್ಕೆ ಬರುತ್ತಿರಲಿಲ್ಲ. ತನ್ನ ಪ್ರೇಯಸಿಯ ಈ ಕಾರ್ಯದಿಂದ ಶಂತನುವು ಅಪಾರವಾಗಿ ನೊಂದರೂ, ಅವನಿಗದು ಪರಮ ಅಪ್ರಿಯಯವಾದರೂ, ಅವಳು ಮಾಡುತ್ತಿದ್ದ ಕೃತ್ಯಕ್ಕೆ ಅಡ್ಡಿಯನ್ನುಂಟು ಮಾಡಲಿಲ್ಲ. ತನ್ನ ಅಸಮಾಧಾನವನ್ನು ಸೂಚಿಸಿದರೆ ಅವಳು ತನ್ನನ್ನು ಬಿಟ್ಟು ಹೋಗುವ ಭಯವೇ ಇದಕ್ಕೆ ಕಾರಣವಾಗಿತ್ತು. ಹೀಗೆ ಮೊದಲ ಏಳು ಮಕ್ಕಳು ಉಳಿಯಲಿಲ್ಲ. ಶಂತನುವಿಗೆ ಗಂಗಾದೇವಿಯಲ್ಲಿ ಎಂಟನೆಯ ಮಗುವು ಜನಿಸಿತು. ಹಿಂದಿನಂತೆಯೇ ಗಂಗಾದೇವಿಯು ನವಜಾತ ಶಿಶುವನ್ನು ನದಿಯಲ್ಲಿ ಹಾಕಲು ಹೊರಟಳು. ಅದನ್ನು ನೋಡಿದ ಶಂತನುವಿಗೆ ಸಹಿಸಲು ಸಾಧ್ಯವಾಗಲಿಲ್ಲ. ಪ್ರೇಯಸಿಯ ಕುರಿತಾದ ವ್ಯಾಮೋಹವನ್ನೂ, ಅವಳು ತನ್ನನ್ನು ತೊರೆದು ಹೋಗಬಹುದೆಂಬ ಭಯವನ್ನೂ ಆತನು ಮೀರಿದನು. ಈ ಮಗುವನ್ನಾದರೂ ಉಳಿಸಿಕೊಳ್ಳಬೇಕೆಂಬ ತವಕದಿಂದ ದುಃಖತಪ್ತನಾಗಿ, ಅಸಮಾಧಾನಿತನಾಗಿ ಮುಖವನ್ನು ಗಂಟಿಕ್ಕಿಕೊಂಡು, ಆತ ಪತ್ನಿಯನ್ನು ತಡೆಯುತ್ತಾ ಹೇಳಿದನು, "ಈ ಮಗುವನ್ನು ಕೊಲೆ ಮಾಡದಿರು. ಅಷ್ಟಕ್ಕೂ ನೀನಾರು? ನಿನ್ನ ಕುಲಗೋತ್ರಗಳೇನು? ಸ್ವಂತ ಮಕ್ಕಳನ್ನೇ ಕೊಲೆಗೈಯಲು ಕಾರಣಗಳೇನು? ಪುತ್ರ ಘಾತಿನಿಯೇ! ಸುಂದರ ವದನವನ್ನು ಹೊಂದಿರುವ ನೀನೇಕೆ ರಕ್ಕಸಿ ವರ್ತನೆ ತೋರುವೆ? ಇದು ಮಹಾ ಪಾತಕವಲ್ಲವೇ? ಪ್ರಪಂಚದ ದೃಷ್ಟಿಯಿಂದ ನೀನಿಂದು ಬಹುನಿಂದ್ಯಳಾಗಿರುವೆ."


🌺 ಗಂಗಾದೇವಿಯ ಸತ್ಯವಚನ

ರಾಜನ ಕಠೋರವಾದ ನುಡಿಗಳನ್ನು ಕೇಳಿಯೂ ಗಂಗಾದೇವಿಯು ಯಾವ ವಿಕಾರವನ್ನು ಹೊಂದದೆ, ರಾಜನನ್ನು ಕುರಿತು ಸಾವಧಾನದಿಂದ ಹೇಳಿದಳು, "ರಾಜಾ! ನಮ್ಮ ನಿಭಂದನೆಯನ್ನು ನೀನು ಮೀರಿದ ಕಾರಣದಿಂದ ನಾನು ನಿನ್ನನ್ನು ಬಿಟ್ಟು ತೆರಳುತ್ತೇನೆ. ಈ ಮಗುವನ್ನು ನೀರಿಗೆ ಹಾಕುವುದಿಲ್ಲ. ಈತನನ್ನು ನನ್ನೊಡನೆ ಕರೆದೊಯ್ದು ಸಕಲ ವಿದ್ಯಾಪಾರಂಗತನನ್ನಾಗಿ, ಶ್ರೇಷ್ಠನಾಗಿ ಮಾಡಿ ನಿನಗೆ ಹಿಂದಿರುಗಿಸುತ್ತೇನೆ. ಹೊರಡುವ ಮೊದಲು ನಿನ್ನೆಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ. ಮಹರ್ಷಿಗಳ ಸಮೂಹದಿಂದ ಅನವರತವೂ ಸೇವಿತಳಾದ ಗಂಗಾ ದೇವಿಯು ನಾನು. ಜಹ್ನು ಮಹರ್ಷಿಯನ್ನು ತಂದೆಯಾಗಿ ಪಡೆದ ನಾನು ಜಾಹ್ನವಿ ಎಂಬುದಾಗಿಯೂ ಗುರುತಿಸಲ್ಪಡುತ್ತೇನೆ. ದೇವ ಕಾರ್ಯಾರ್ಥವಾಗಿ ನಾನು ಇಷ್ಟು ಕಾಲ ನಿನ್ನ ಪತ್ನಿಯಾಗಿದ್ದೆ. ನಮಗೆ ಜನಿಸಿದ ಮಕ್ಕಳೂ ಸಾಮಾನ್ಯರಲ್ಲ. ಮಹಾ ಓಜಸ್ವಿಗಳಾದ, ಅಷ್ಟ ವಸುಗಳು ಅವರು. ಅಪವರಿತ್ತ ಶಾಪದ ಕಾರಣ ಮಾನವ ಜನ್ಮ ಹೊಂದಬೇಕಾದ ಅನಿವಾರ್ಯತೆ ಅವರಿಗಿತ್ತು. ಅವರ ತಂದೆ ತಾಯಿಯಾಗುವ ಅರ್ಹತೆ ಇದ್ದದ್ದು ನಮಗೆ ಮಾತ್ರ ಈ ಪ್ರಪಂಚದಲ್ಲಿ. ಅದರಿಂದಲೇ ಮಾನವಳಾಗಿ ಅವತರಿಸಿ ನಿನ್ನನ್ನೇ ವರಿಸಬೇಕಾಯಿತು. ಈ ಮಕ್ಕಳು ಈಗ ಬದುಕಿರದಿದ್ದರೂ ಅವರ ತಂದೆ ಎನಿಸಿಕೊಂಡ ಮಾತ್ರದಿಂದಲೇ ನಿನಗೆ ಅಕ್ಷಯ ಪುಣ್ಯ ಲೋಕಗಳು ಲಭಿಸಲಿವೆ. ಭೂಲೋಕದಲ್ಲಿ ಬಹುಕಾಲ ಇರಲು ಇಚ್ಛಿಸದ ವಸುಗಳ ಪ್ರಾರ್ಥನೆಯಂತೆಯೇ, ಮಾನವ ಜನ್ಮ ತಳೆದು ಶಾಪ ವಿಮುಕ್ತಿ ಹೊಂದಿದ ಅವರನ್ನು ತಕ್ಷಣ ಗಂಗೆಯಲ್ಲಿ ಮುಳುಗಿಸಿದೆ. ಮಹಾರಾಜ ನಮ್ಮಿಬ್ಬರ ಸಮಾಗಮ ವ್ಯರ್ಥವಾಗಕೂಡದೆಂಬ ಕಾರಣ, ದೀರ್ಘಾಯುಷ್ಯವಂತನಾದ ಈ ಮಗುವನ್ನು ಸಂರಕ್ಷಿಸಿದ್ದೇನೆ. ಮತ್ಪ್ರಸೂತಿಂ ವಿಜಾನೀಹಿ ಗಂಗಾದತ್ತಮಿಮಂ ಸುತಮ್. ನನ್ನಿಂದ ಜನಿಸಿದ ಈ ಪುತ್ರನನ್ನು ಗಂಗಾದತ್ತನೆಂದು ತಿಳಿ." ಎಂದು ಉತ್ತರಿಸಿದಳು.


📿 ಪವಿತ್ರ ಸಂಧಿ – ಭವಿಷ್ಯದ ಭೀಷ್ಮ

ಈ ಮಗುವೇ ಮುಂದೆ ದೇವವ್ರತ, ಭೀಷ್ಮ, ಗಾಂಗೇಯ ಎಂಬ ಮಹಾನ್ ಧರ್ಮಾತ್ಮನಾಗಿ ಬೆಳೆದು, ಮಹಾಭಾರತದ ಅತ್ಯಂತ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬನಾಗಿ ಚಿರಸ್ಮರಣೀಯನಾಗುವನು.

Comments


bottom of page