top of page

ಶಂತನು ಜನನ (ಮಹಾಭಾರತ ಕಥಾಮಾಲೆ - 2)



🌺 ಗಂಗಾದೇವಿಯ ಆಗಮನ

ಎಲ್ಲ ಪ್ರಾಣಿಗಳಿಗೂ ಹಿತವನ್ನು ಬಯಸುವುದರಲ್ಲಿಯೇ ಸದಾ ಆಸಕ್ತನಾಗಿದ್ದ ಕುರುವಂಶ ಪ್ರದೀಪನಾದ 'ಪ್ರತೀಪ' ಎಂಬ ರಾಜನಿದ್ದನು. ಅವನು ಅನೇಕ ವರ್ಷಗಳ ಕಾಲ ಗಂಗಾದ್ವಾರದಲ್ಲಿ ಅಶ್ರಮವೊಂದನ್ನು ನಿರ್ಮಿಸಿಕೊಂಡು ತಪಶ್ಚರ್ಯದಲ್ಲಿ ನಿರತನಾಗಿದ್ದನು. ಒಮ್ಮೆ ಪ್ರತೀಪನು ಜಪ ಮಾಡುತ್ತಾ ಕುಳಿತಿದ್ದಾಗ ರಮಣೀಯವಾದ ಸ್ತ್ರೀರೂಪವನ್ನು ಧರಿಸಿದ ಗಂಗಾದೇವಿಯು ನೀರಿನಿಂದ ಮೇಲೆ ಬಂದು ಪ್ರತೀಪ ಮಹಾರಾಜನ ಬಲ ತೊಡೆಯ ಮೇಲೆ ಕುಳಿತುಕೊಂಡಳು. ಇದರಿಂದ ಯಾವ ಉದ್ವೆೇಗಕ್ಕೂ ಒಳಗಾಗದ ಪ್ರತೀಪನು ಗಂಗಾದೇವಿಯನ್ನು ಪ್ರಶ್ನಿಸಿದನು "ದೇವಿ, ನಾನು ನಿನಗಾಗಿ ಏನು ಮಾಡಲಿ ? ನಿನ್ನ ಮನದ ಆಕಾಂಕ್ಷೆಯೇನು?"

ree
"ಮಹಾರಾಜ, ನಾನು ನಿನ್ನನ್ನು ಬಯಸಿ ಬಂದಿದ್ದೇನೆ. ನೀನು ನನ್ನನು ಪರಿಗ್ರಹಿಸಬೇಕೆಂಬುದೇ ನನ್ನ ಅಪೇಕ್ಷೆ. ಕಾಮಾಭಿಲಾಷೆಯಿಂದ ಬರುವ ಸ್ತ್ರೀಯರನ್ನು ಸತ್ಪುರುಷನಾದವನು ದೂರೀಕರಿಸುವುದು ನಿಂದ್ಯವಾಗಿರುತ್ತದೆ." ಎಂದು ಗಂಗಾದೇವಿ ಉತ್ತರಿಸಿದಳು.

 🌺 ಪ್ರತೀಪನ ಧರ್ಮನಿಷ್ಠೆ

ಆದರೆ ಪ್ರತೀಪನು ತಾನು ಕಾಮದ ಇಚ್ಛೆಯಿಂದ ಪರಸ್ತ್ರೀ ಗಮನವನ್ನು ಮಾಡತಕ್ಕವನಲ್ಲವೆಂದೂ, ಅಲ್ಲದೆ ತನ್ನದೇ ವರ್ಣದ ( ಕ್ಷತ್ರಿಯ) ಸ್ತ್ರೀಯರನ್ನುಳಿದು ಅನ್ಯರನ್ನು ವಿವಾಹವಾಗುವುದು ಇಲ್ಲವೆಂದು ಉತ್ತರಿಸಿದನು. ಗಂಗೆಯು ತಾನು ಪ್ರತೀಪನ ಸಜಾತಿಯವಳಲ್ಲದಿದ್ದರೂ, ಅಶುಭಂಗಿಯಲ್ಲವೆಂದೂ, ಸಂಗಮಕ್ಕೆ ಅಯೋಗ್ಯಳಾದವಳಲ್ಲವೆಂದೂ, ಹಾಗೂ ಲೋಕಗಳಲ್ಲಿಯೂ ತನ್ನ ಪಾವಿತ್ರ್ಯದ ವಿಷಯದಲ್ಲಿ ಯಾರೂ ಲಘುವಾಗಿ ಮಾತನಾಡಲಾರರೆಂದು ವಾದಿಸಿದಳು. ಪ್ರತೀಪನ ವರ್ಣಕ್ಕಿಂತ ಶ್ರೇಷ್ಠ ಕುಲದ ದೇವಕನ್ಯೆಯಾದ ತನ್ನನ್ನು ಪರಿಗ್ರಹಿಸುವಂತೆ ಪರಿಪರಿಯಾಗಿ ವಿನಂತಿಸಿದಳು.


"ದೇವಿ, ನಾನು ನಿನ್ನನ್ನು ವರಿಸಬೇಕೆಂದು ಪ್ರಚೋದಿಸುತ್ತಿರುವೆ. ಆದರೆ ನಿನ್ನ ಕ್ರಿಯೆಯು ಮಾತ್ರ ನಿನ್ನನ್ನು ನನ್ನ ಪತ್ನಿಯಾಗಿ ಪರಿಗೃಹಿಸಕೂಡದೆಂದು ಬಹು ಸ್ಪಷ್ಟವಾಗಿ ನಿರ್ದೇಶಿಸುತ್ತದೆ. ನಾನೇನಾದರೂ, ಪ್ರತಿಜ್ಞಾತವಾದ ಧರ್ಮವನ್ನು, ನೀ ತೋರಿದ ಸೂಚನೆಯನ್ನು ಮೀರಿ ನಿನ್ನ ಪ್ರೇರಣೆಯಂತೆ ನಿನ್ನನ್ನು ವಿವಾಹವಾದರೆ ಈ ಧರ್ಮ ವಿಪರ್ಯಯದ ಕಾರಣ ನಾನು ನಾಶ ಹೊಂದುತ್ತೇನೆ." ಎಂದು ಪ್ರತೀಪನು ಉತ್ತರಿಸಿದನು. ಅಲ್ಲದೆ, ಅವಳ ಕ್ರಿಯೆಯ ಕುರಿತಾಗಿ ವಿವರಣೆಯನ್ನು ನೀಡುತ್ತಾ, ಅವಳು ತನ್ನ ಬಲತೊಡೆಯ ಮೇಲೆ ಕುಳಿತಿದ್ದನ್ನು ಅರ್ಥೈಸುವುದಾದರೆ, ಬಲತೊಡೆಯು ಹೆಣ್ಣುಮಕ್ಕಳು ಮತ್ತು ಸೊಸೆಯಂದಿರು ಮಾತ್ರವೇ ಕೂರಲು ಯೋಗ್ಯವಾದುದು ಆದುದರಿಂದ ಬಲತೊಡೆಯು ಪುತ್ರಿಯರಿಗೆ ಹಾಗೂ ಪುತ್ರಿಸಮಾನರಾದ ಸೊಸೆಯಿಂದಿರಿಗೆ ಮೀಸಲಾದುದು. ಗಂಗೆಯ ಮಾತಿನಂತೆ ಕೃತಿಯು ಇದ್ದಿದ್ದರೆ, ಅವಳು ಪತ್ನಿಗೆ ಮೀಸಲಾದ ಎಡತೊಡೆಯ ಮೇಲೆ ಕೂರಬೇಕಾಗಿತ್ತು. ಆದುದರಿಂದ ತಾನು ಅವಳನ್ನು ವಿವಾಹವಾಗಲು ಅಸಾಧ್ಯವೆಂಬುದನ್ನು ಸ್ಪಷ್ಟ ಪಡಿಸಿದನು. ಅಲ್ಲದೇ, ಅವಳು ತನ್ನ ಬಲತೊಡೆಯ ಮೇಲೆ ಕುಳಿತಿದ್ದರಿಂದ 'ಅವಳನ್ನು ತನ್ನ ಸೊಸೆಯಾಗಿ, ಅಂದರೆ ತನ್ನ ಮಗನ ಪತ್ನಿಯಾಗಿ ಅಂಗೀಕರಿಸುತ್ತೇನೆ' ಎಂಬುದಾಗಿ ತಿಳಿಸಿದನು.


 🌺 ಗಂಗಾದೇವಿಯ ಒಪ್ಪಿಗೆ

ಅದಕ್ಕೆ ಸಮ್ಮತಿಸಿದ ಗಂಗಾದೇವಿಯು, "ಧರ್ಮಜನೇ! ನಿನ್ನ ಮಾತಿನಂತೆ ನಾನು ನಿನ್ನ ಮಗನ ಪತ್ನಿಯಾಗುತ್ತೇನೆ. ನಿನ್ನ ಕುರಿತಾದ ಗೌರವದಿಂದಾಗಿ ನಿನ್ನ ವಂಶದ ಕುಲವಧುವಾಗುತ್ತೇನೆ. ಪೃಥ್ವಿಯಲ್ಲಿನ ಸಕಲರಿಗೂ ಅಶ್ರಯದಾತರಾದ ನಿಮ್ಮ ಕುಲದ ಗುಣ ಕಥನವು ಅನೇಕ ಕಾಲ ಮಾಡಿದರೂ ಮುಗಿಯುವುದಿಲ್ಲ. ಸಾಧುತ್ವಕ್ಕೂ, ಸಚ್ಚಾರಿತ್ವಕ್ಕೂ ಹೆಸರಾದ ನಿಮ್ಮ ಕುಲದ ಸೊಸೆ ನಾನಾಗುತ್ತೇನೆ" ಎಂದು ಉತ್ತರಿಸಿದಳು.

ಜೊತೆಗೇ, ನಾನೆಸಗುವ ಕ್ರಿಯೆಯು ನಿನ್ನ ಮಗನಿಗೆ ಇಷ್ಟವಾಗಲಿ ಅಥವಾ ಆಗದಿರಲಿ ಅದನ್ನು ಆತ ವಿಮರ್ಷಿಸಕೂಡದು ಹಾಗೂ ತನ್ನನ್ನು ತಡೆಯಕೂಡದು. ಈ ನಿಯಮವನ್ನು ನಿನ್ನ ಪುತ್ರ ಅನುಸರಿಸಿದರೆ, ನಿನ್ನ ಪುತ್ರನು ನನ್ನಿಂದ ಅಪಾರ ಸಂತೋಷವನ್ನು ಹೊಂದುತ್ತಾನೆ, ಪುಣ್ಯಾತ್ಮರಾದ ಮಕ್ಕಳನ್ನು ಪಡೆಯುತ್ತಾನೆ ಹಾಗೂ ಅವಸಾನದ ನಂತರ ಸಕಲ ಸುಖದಾಯಕವಾದ ಸ್ವರ್ಗವನ್ನು ಸೇರುತ್ತಾನೆ" ಎಂಬ ನಿಯಮವನ್ನು ಗಂಗಾದೇವಿಯು ವಿಧಿಸಿದಳು. ಇದಕ್ಕೆ ಪ್ರತೀಪ ಮಹಾರಾಜನ ಸಮ್ಮತಿಯನ್ನು ಪಡೆದು ಗಂಗಾದೇವಿಯು ಅಂತರ್ಧಾನಳಾದಳು.


 🌺 ಶಂತನು ಜನನ

ree

ಆ ವೇಳೆಗೆ ವೃದ್ಧನಾದ ಪ್ರತೀಪನಿಗಿನ್ನು ಮಕ್ಕಳೇ ಆಗಿರಲಿಲ್ಲ. ಸೊಸೆಯನ್ನಾಗಿ ಮಾಡಿಕೊಳ್ಳುವೆನೆಂದು ಗಂಗೆಗೆ ವಚನವನ್ನಿತ್ತ ಕಾರಣದಿಂದ ಪ್ರತೀಪನಿಗೆ ಪುತ್ರನನ್ನು ಪಡೆಯುವುದು ಅನಿವಾರ್ಯವಾಯಿತು. ಮಗನನ್ನು ಪಡೆಯಲು ಪ್ರತೀಪನು ತನ್ನ ಪತ್ನಿಯಾದ ಸುನಂದಾ ದೇವಿಯೊಡನೆ ತಪವನ್ನು ಗೈದನು. ತಪಸ್ಸಿನ ಫಲವಾಗಿ ವೃದ್ಧ ದಂಪತಿಗಳು ನಾಲ್ವರು (ಕೆಲವು ಕಡೆ ಮೂವರು ಎಂದೂ ಉಲ್ಲೇಖವಿದೆ) ಪುತ್ರರನ್ನು ಪಡೆದರು. ಅವರಲ್ಲಿ ಅತ್ಯಂತ ಕಿರಿಯನಾಗಿ ಮಹಾಭಿಷನು ಜನಿಸಿದನು. ಶಂತನು (ಶಾಂತನು) ಎಂಬ ನಾಮಧೇಯದಿಂದ ಗುರುತಿಸಲ್ಪಟ್ಟನು.

ಚಂದ್ರವಂಶವು ಶಾಂತವಾಗುವುದರಲ್ಲಿದ್ದಾಗ (ಕ್ಷಯಿಸುವುದರಲ್ಲಿರುವಾಗ) ಹುಟ್ಟಿದ್ದರಿಂದಲೋ ಅಥವಾ ತಪಶ್ಚರ್ಯದಲ್ಲಿ ನಿರತನಾಗಿ ಶಾಂತನಾಗಿದ್ದಾಗ ಹುಟ್ಟಿದವನಾದ್ದರಿಂದ ಶಂತನು ( ಅಥವಾ ಶಾಂತನು ) ಎಂಬ ನಾಮವನ್ನು ಹೊಂದಿದನು. ಶಂತನುವು ಯಾವಾಗಲೂ ಪುಣ್ಯಕರ್ಮಗಳಲ್ಲಿಯೇ ನಿರತನಾಗಿರುತ್ತಾ, ಸದಾ ಉತ್ತಮ ಆಚಾರ ವಿಚಾರಗಳಲ್ಲಿ ಇರುತ್ತಾ ಯುವಕನಾದನು. ತನ್ನ ಕರ ಸ್ಪರ್ಶ ಮಾತ್ರದಿಂದ, ರೋಗ ಪೀಡಿತರ ರೋಗಗಳನ್ನು ವಾಸಿ ಮಾಡಬಲ್ಲವನಾಗಿದ್ದನು. ನಿರೋಗಿಗಳನ್ನು ಶಂತನುವು ಸ್ಪರ್ಶಿಸಿದನಾದರೆ ಅವರಿಗೆ ರೋಗಗಳೇ ಬರುತ್ತಿರಲಿಲ್ಲ. ಇಂತಹ ಮಹಾತ್ಮನಾಗಿ ಶಂತನು ಬೆಳೆಯುತ್ತಿದ್ದನು.


ತನ್ನ ಅಣ್ಣಂದಿರಾದ ದೇವಾಪಿಯೇ ಮೊದಲಾದವರು ಹಸ್ತಿನಾಪುರದ ಸಿಂಹಾಸನವನ್ನು ತಮ್ಮದೇ ಆದ ಕಾರಣಗಳಿಗಾಗಿ ತ್ಯಜಿಸಿ ಹೋಗಿದ್ದರಿಂದಾಗಿ ಕಿರಿಯನಾದ ಶಂತನುವು ತನ್ನ ತಂದೆಯಾದ ಪ್ರತೀಪ ಮಹಾರಾಜನ ವಾನಪ್ರಸ್ಥದ ನಂತರ ಅವನ ಉತ್ತರಾಧಿಕಾರಿಯಾಗಿ ಹಸ್ತಿನಾವತಿಯ ಸಿಂಹಾಸನವನ್ನೇರಿ ಧರ್ಮದಂತೆ ರಾಜ್ಯಭಾರ ಮಾಡತೊಡಗಿದನು.

Comments


bottom of page