top of page

ಶಂತನು ಚಕ್ರವರ್ತಿಯ ಜನನದ ಹಿನ್ನೆಲೆ (ಶ್ರೀಮನ್ಮಹಾಭಾರತ ಕಥಾಮಾಲೆ - 1)

Updated: Jun 16

"ನಾರಾಯಣಮಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ | ದೇವೀಂ ಸರಸ್ವತೀಂ ಚೈವ ತತೋ ಜಯಮುದೀರಯೇ ||"
ree

ಇಕ್ಷ್ವಾಕು ವಂಶದಲ್ಲಿ ಸತ್ಯವಾದಿಯೂ ಸತ್ಯಪರಾಕ್ರಮಿಯೂ ಆದ ಮಹಾಭಿಷನೆಂಬ ಪ್ರಸಿದ್ಧನಾದ ರಾಜನಿದ್ದನು. ಅವನು ಸಾವಿರ ಅಶ್ವಮೇಧ ಯಾಗಗಳನ್ನೂ, ನೂರು ರಾಜಸೂಯ ಯಾಗಗಳನ್ನು ಮಾಡಿ, ದೇವೇಂದ್ರನನ್ನು ತೃಪ್ತಿ ಪಡಿಸಿದ ಫಲವಾಗಿ, ಸ್ವರ್ಗ ಪ್ರಾಪ್ತಿಯನ್ನು ಹೊಂದಿದನು.

ದೇವತೆಗಳೆಲ್ಲರೂ ಒಮ್ಮೆ ಬ್ರಹ್ಮಲೋಕದಲ್ಲಿ ಬ್ರಹ್ಮನ ಉಪಾಸನೆಯನ್ನು ಮಾಡುತ್ತಿದ್ದರು. ಆ ಪೂಜೆಯಲ್ಲಿ ಅನೇಕ ಋಷಿ, ಮಹರ್ಷಿ, ರಾಜರ್ಷಿಗಳ ಜೊತೆ ಮಹಾಭಿಷನೂ ಭಾಗವಹಿಸಿದ್ದನು.

ಅದೇ ಸಮಯದಲ್ಲಿ ಬೆಳದಿಂಗಳಿಗೆ ಸಮಾನವಾದ ಕಾಂತಿಯುಳ್ಳ ಶ್ವೇತ ವಸನವನ್ನು ಧರಿಸಿದ, ದಿವ್ಯ ರೂಪ ಧಾರಣಿಯಾದ ಗಂಗಾ ದೇವಿಯು ಆ ಸಭೆಗೆ ಆಗಮಿಸಿದಳು. ಅದೇ ಸಮಯದಲ್ಲಿ ಆಕಸ್ಮಿಕವಾಗಿ ಬೀಸಿದ ಬಿರುಗಾಳಿಯಿಂದ ಗಂಗಾದೇವಿಯು ವಿವಸ್ತ್ರಳಾದಳು. ಒಡನೆಯೇ ಅಲ್ಲಿ ನೆರೆದ ಸಮಸ್ತರೂ ಅಧೋಮುಖರಾದರು. ಆದರೆ, ರಾಜರ್ಷಿಯಾದ ಮಹಾಭಿಷ ಶಂಕೆ ಸಂಕೋಚಗಳಿಲ್ಲದೆ ವಿವಸ್ತ್ರಳಾದ ಗಂಗಾದೇವಿಯನ್ನು ನೆಟ್ಟ ದೃಷ್ಟಿಯಿಂದ ನೋಡುತ್ತಲಿದ್ದನು. ಅಂದರೆ, ಅವನು ಪ್ರಕೃತಿಯನ್ನು ಜಯಿಸಲು ಅಸಮರ್ಥನಾದನು. ಅಂತಹ ಸಭೆಯ ಮಧ್ಯದಲ್ಲಿದ್ದರೂ ಕಲ್ಮಷ ಚಿತ್ತನಾಗಿ ಗಂಗೆಯ ಶರೀರವನ್ನೇ ವೀಕ್ಷಿಸುತ್ತಿದ್ದ ಮಹಾಭಿಷನಿಗೆ ಬ್ರಹ್ಮನು ಹೇಳಿದನು,

"ದುರ್ಮತಿಯಾದ ಮಹಾಭಿಷನೇ! ಸಕಲ ಕಾಮನೆಗಳನ್ನೂ ತ್ಯಜಿಸಿದವನಿಗೆ ಮಾತ್ರ ಲಭ್ಯವಾಗುವ ಪುಣ್ಯಲೋಕವಿದು. ನೀನಾದರೋ ಗಂಗೆಯನ್ನು ಕಾಮಾಸಕ್ತನಾಗಿ ನೋಡುತ್ತಿರುವೆ. ಆದುದರಿಂದ ಈ ಸಭೆಯಲ್ಲಿರುವ ಅರ್ಹತೆಯನ್ನು ಪಡೆದಿರುವುದಿಲ್ಲ. ಇನ್ನೂ ಅನೇಕ ಕಾಲ ಮರ್ತ್ಯ ಲೋಕದಲ್ಲಿಯೇ ಇದ್ದು, ನಿನ್ನೆಲ್ಲ ಕಾಮನೆಗಳನ್ನು ಪೂರೈಸಿಕೊಂಡು ಸ್ವರ್ಗ ಲೋಕಕ್ಕೆ ಹಿಂದಿರುಗಬಹುದು. ನೀನೂ, ಗಂಗಾದೇವಿಯೂ ಎಸಗಿದ ಈ ಅಪರಾಧಕ್ಕಾಗಿ ಅವಳು ಭೂಮಿಯಲ್ಲಿ ನಿನಗೆ ಜೊತೆಯಾಗಿ, ನಿನಗೆ ಅಪ್ರಿಯವಾದ ಕಾರ್ಯಗಳನ್ನು ಎಸಗಿದರೂ ಕಾಮಾಂಧನಾಗಿ ನೀನು ಅದನ್ನು ಸಹಿಸುವೆ. ಅವಳೆಸಗುವ ಅಪ್ರಿಯ ಕಾರ್ಯಕ್ಕೆ ನೀನು ಕೋಪವನ್ನು ತಾಳಿ ವಿರೋಧವನ್ನು ವ್ಯಕ್ತ ಪಡಿಸಿದಾಗ ನನ್ನ ಈ ಶಾಪ ವಿಮುಕ್ತಿಯಾಗುತ್ತದೆ."

ಶಾಪದಿಂದ ಅಧೀರನಾಗಿ ತಾನು ಯಾವ ವಂಶದಲ್ಲಿ ಹುಟ್ಟಬೇಕೆಂದು ಮಹಾಭಿಷನು ಪರ್ಯಾಲೋಚಿಸಿ, ಚಂದ್ರ ವಂಶೀಯನಾದ ಪ್ರತಿಶ್ರವನನ ಮಗನಾದ ಪ್ರತೀಪನೇ ತನ್ನ ತಂದೆಯಾಗಲು ಅರ್ಹನೆಂದು ನಿಶ್ಚಯಿಸಿದನು.


ಇತ್ತ ಗಂಗೆಯೂ ಸಹ ಮನದಲ್ಲಿ ಮಹಾಭಿಷನನ್ನೇ ಧ್ಯಾನಿಸುತ್ತಾ ಭೂಲೋಕದತ್ತ ಹೊರಟಳು. ಹಾಗೆ ಹೋಗುವಾಗ ತನ್ನ ಹಿಂದೆಯೇ, ಸ್ವರ್ಗದಿಂದ ಪತಿತರಾಗುತ್ತಿದ್ದ, ದುಗುಡಭಾವ ಹೊಂದಿದ ಸ್ವರ್ಗವಾಸಿ ವಸುಗಳನ್ನು ನೋಡಿ ಪ್ರಶ್ನಿಸಿದಳು, "ವಸುಗಳೇ, ಇದೇಕೆ ನಿಮ್ಮ ದಿವ್ಯರೂಪಗಳು ನಾಶವಾಗಿವೆ? ಮುಖವು ಏಕೆ ಬಾಡಿದೆ?".


"ದೇವೀ, ವಸಿಷ್ಠರು ಸಂಧ್ಯೋಪಾಸನೆಯಲ್ಲಿ ನಿರತರಾಗಿದ್ದಾಗ ಆ ಸ್ಥಳದಲ್ಲಿ ನಾವು ಸ್ವೇಚ್ಛೆಯಿಂದ ವಿಹರಿಸಿದ್ದಲ್ಲದೇ, ಅವರ ಹೋಮಧೇನುವನ್ನು ಅಪಹರಿಸಿದೆವು. ಈ ಅಪಾಚಾರದಿಂದ ಕುಪಿತರಾದ ವಸಿಷ್ಠರು ನಮಗೆ ಯೋನಿಜರಾಗಿ ಭೂಮಿಯಲ್ಲಿ ಜನಿಸಿ ಎಂದು ಶಾಪವನ್ನಿತ್ತರು" ಎರಡು ವಸುಗಳು ಉತ್ತರಿಸಿದರು. ಅಲ್ಲದೆ, ಭೂಮಿಯಲ್ಲಿ ತಮಗೆ ತಾಯಿಯಾಗಿ ಗಂಗಾದೇವಿಯೇ ಒದಗಬೇಕೆಂದು ಪ್ರಾರ್ಥಿಸಿದರು.


ಅಷ್ಟ ವಸುಗಳ ಕೋರಿಕೆಯನ್ನು ಮನ್ನಿಸಿದ ಗಂಗಾದೇವಿ, ಬ್ರಹ್ಮದೇವರಿಂದ ಶಪ್ತನಾಗಿ ಭೂಲೋಕದಲ್ಲಿ ಪ್ರತೀಪ ಮಹಾರಾಜನ ಪುತ್ರನಾಗಿ ಶಂತನು ನಾಮಕನಾಗಿ ಜನಿಸಲಿರುವ ಮಹಾಭಿಷನೇ ಈ ವಸುಗಳ ತಂದೆಯಾಗಲು ಅಂದರೆ ತನ್ನ ಗಂಡನಾಗಲು ಅರ್ಹನೆಂದು ತೀರ್ಮಾನಿಸಿದಳು.


ಆದಷ್ಟು ಬೇಗ ವಸಿಷ್ಠರ ಶಾಪದಿಂದ ಮುಕ್ತಿಯನ್ನು ಹೊಂದಲು ಬಯಸಿದ ಅಷ್ಟವಸುಗಳು ಬಹುಕಾಲ ಭೂಮಿಯಲ್ಲಿ ವಾಸಿಸಲು ಇಚ್ಛಿಸಲಿಲ್ಲ. ತಾವು ಜನಿಸಿದೊಡನೆಯೇ ತಮ್ಮ ಶಾಪವು ವಿಮೋಚನೆಯಾಗುತ್ತದೆ ಹಾಗು ತಕ್ಷಣವೇ ತಮ್ಮನ್ನು ನೀರಿನಲ್ಲಿ ಹಾಕಿಬಿಡಬೇಕೇಂದು ಪ್ರಾರ್ಥಿಸಿದರು.


ಗಂಗಾದೇವಿಯು ಅವರ ಕೋರಿಕೆಯನ್ನು ಮನ್ನಿಸಿದರೂ ಸಹ, ತನ್ನ ಹಾಗೂ ಶಂತನುವಿನ ಸಂಗಮದ ಫಲವಾಗಿ, ಶಂತನುವಿಗೆ ಪುತ್ರನಾಗಿ ಒಬ್ಬನಾದರೂ ಉಳಿಯಬೇಕೆಂದು ಬಯಸಿದಳು. ಇದಕ್ಕೆ ಸಮ್ಮತಿಸಿದ ವಸುಗಳು, ತಮ್ಮ ಶಕ್ತಿಯ ಒಂದಂಶವನ್ನು ಒಗ್ಗೂಡಿಸಿ, ಒಬ್ಬ ಪುತ್ರನಲ್ಲಿ ನಿಕ್ಷಿಪ್ತಗೊಳಿಸಿ, ಅವನು ಚಿರಕಾಲ ಶಂತನುವಿಗೆ ಹಿತವನ್ನುಂಟು ಮಾಡುತ್ತಾನೆ ಎಂದು ತಿಳಿಸಿದರು. ಆದರೆ, ಆ ಪುತ್ರನು ತನ್ನ ಸಂತತಿಯನ್ನು ಮರ್ತ್ಯಲೋಕದಲ್ಲಿ ಮುಂದುವರಿಯಗೊಡದೆ, ಅಪುತ್ರವಂತನಾಗಿಯೇ ಅವಸಾನ ಹೊಂದಲು ಗಂಗೆಯ ಅನುಮತಿಯನ್ನು ಕೋರಿದರು. ವಸುಗಳ ಕೋರಿಕೆಯನ್ನು ಗಂಗಾದೇವಿಯು ಅಂಗೀಕರಿಸಿದಳು. ಹೀಗೆ ಎಲ್ಲರ ಅಂತರಂಗವು ಹೃಷ್ಟವಾಯಿತು.


ಶಂತನುವಿನ ಜನನಕ್ಕೆ ಭೂಮಿಕೆ ಸಿದ್ಧವಾಯಿತು.

Comments


bottom of page