top of page

ಗಂಗಾವತರಣ

ಹಿಮವಂತ ಎಂಬ ಪರ್ವತಗಳ ರಾಜನೊಬ್ಬನಿದ್ದ. ಹಿಮವಂತ ಹಾಗೂ ಮೇನಾ ದೇವಿಯ ಗರ್ಭದಿಂದ ಜನಿಸಿದ ಈರ್ವರು ಹೆಣ್ಣು ಮಕ್ಕಳಲ್ಲಿ ಗಂಗೆ ಹಿರಿಯವಳು ಹಾಗೂ ಉಮೆ ಎರಡನೆಯ ಮಗಳು. ಕೆಲವು ವರ್ಷಗಳ ನಂತರ ದೇವತೆಗಳೆಲ್ಲ ಸೇರಿ ಲೋಕಕಲ್ಯಾಣರ್ಥವಾದ ದೇವತಾ ಕಾರ್ಯದ ಸಿದ್ಧಿಗಾಗಿ ಗಂಗೆಯನ್ನು ತಮಗೊಪ್ಪಿಸುವ ಹಾಗೆ ಹಿಮವಂತನಲ್ಲಿ ಪ್ರಾರ್ಥಿಸುತ್ತಾರೆ. ದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿದ ಪರ್ವತಗಳೊಡೆಯ ಗಂಗೆಯನ್ನು ದೇವತೆಗಳೊಡನೆ ಕಳುಹಿಸಿಕೊಡುತ್ತಾನೆ. ಕಠೋರವಾದ ತಪಸ್ಸನ್ನು ಆಚರಿಸಿದ ಉಮೆಯನ್ನು ರುದ್ರನಿಗೆ ಮದುವೆ ಮಾಡಿಕೊಡುತ್ತಾನೆ.
ಗಂಗಾವತರಣ

ಬಹಳ ಹಿಂದೆ ಅಯೋಧ್ಯೆಯನ್ನು ಸೂರ್ಯವಂಶದ ಸಗರ ಎಂಬ ರಾಜ ಆಳುತ್ತಿದ್ದ. ಅವನಿಗೆ ಕೇಶಿನಿ ಹಾಗೂ ಸುಮತಿ ಎನ್ನುವ ಹೆಂಡತಿಯರು ಇದ್ದರು. ನೂರಾರು ವರ್ಷಗಳ ತಪಸ್ಸಿನ ಫಲವಾಗಿ ಭೃಗು ಮಹರ್ಷಿ ಗಳಿಂದ ಸಗರ ಮಹಾರಾಜ ವರವೊಂದನ್ನು ಪಡೆಯುತ್ತಾನೆ. ಆ ವರದಂತೆ ಸಗರನ ರಾಣಿ ಕೇಶಿನಿಯು ವಂಶವನ್ನು ಮುಂದುವರಿಸುವ ಅಸಮಂಜ ಎನ್ನುವ ಪುತ್ರನನ್ನ ಪಡೆಯುತ್ತಾಳೆ, ಹಾಗೂ ಸುಮತಿ ಸಾಹಸಿಗಳಾದ ಅರವತ್ತುಸಾವಿರ ಪುತ್ರರನ್ನ ಪಡೆಯುತ್ತಾಳೆ. ಬೆಳೆಯುತ್ತಾ ಬೆಳೆಯುತ್ತಾ ಕೇಶಿನಿಯ ಪುತ್ರ ಅಸಮಂಜ ಕ್ರೂರಿಯು, ವಿವೇಕ ಭ್ರಷ್ಟನೂ ಆಗಿ ಬೆಳೆಯುತ್ತಾನೆ. ಅವನಿಗೆ ಅಂಶುಮಂತ ಎನ್ನುವ ವಿವೇಕಶೀಲನಾದ ಒಬ್ಬ ಮಗ ಕೂಡ ಇರುತ್ತಾನೆ. ಅಸಮಂಜನ ದುರಾಚಾರಗಳಿಂದ ಬೇಸತ್ತ ಸಗರ ಮಹಾರಾಜ ಅಸಮಂಜನನ್ನು ರಾಜ್ಯದಿಂದ ಹೊರಗೆ ಕಳಿಸುತ್ತಾನೆ. ಇದಾದ ಸುಮಾರು ವರ್ಷಗಳ ನಂತರ ಸಗರ ಮಹಾರಾಜ ಯಜ್ಞ ಒಂದನ್ನು ಮಾಡಲು ನಿಶ್ಚಯಿಸುತ್ತಾನೆ. ಆ ಸಮಯದಲ್ಲಿ ದೇವರಾಜ ಇಂದ್ರ ರಾಕ್ಷಸ ವೇಷದಿಂದ ಬಂದು ಯಜ್ಞಾಶ್ವವನ್ನು ಅಪರಿಸಿಬಿಡುತ್ತಾನೆ. ಇದನ್ನು ತಿಳಿದ ಸಗರ ಮಹಾರಾಜ 'ಇದು ಖಂಡಿತ ರಾಕ್ಷಸರ ಕೃತ್ಯವಲ್ಲ, ಸಾವಿರಾರು ಜನ ವೈದಿಕರು, ಋಷಿಮುನಿಗಳು, ಶ್ರೇಷ್ಠ ಧರ್ಮವಂತರೆಲ್ಲ ಸೇರಿ ವೇದ ಘೋಷ ನಡೆಸುವ ಈ ಜಾಗಕ್ಕೆ ರಾಕ್ಷಸರು ಪ್ರವೇಶಿಸುವ ಅವಕಾಶವಿಲ್ಲ. ಖಂಡಿತ ಇದು ದೇವತೆಗಳ ಕೆಲಸವೇ ಆಗಿರುತ್ತದೆ ಈ ಕ್ಷಣವೇ ಹೋಗಿ ಯಜ್ಞಾಶ್ವ ವನ್ನು ಹುಡುಕಿ ತನ್ನಿ' ಎಂದು ತನ್ನ ಮಕ್ಕಳಿಗೆ ಆಜ್ಞಾಪಿಸುತ್ತಾನೆ. ತಂದೆಯ ಆಜ್ಞೆಯಂತೆ ಅರವತ್ತು ಸಾವಿರ ಸಗರ ಪುತ್ರರು ಕುದುರೆಯನ್ನು ಹುಡುಕಲು ತೆರಳುತ್ತಾರೆ.

ಮಹಾಬಲಶಾಲಿಗಳಾಗಿದ್ದ ಅವರು ನೆಲವನ್ನು ಅಗೆಯತೊಡಗುತ್ತಾರೆ. ಹರಿತವಾದ ಆಯುಧಗಳಿಂದ ಅಗೆಯುವಾಗ ಅನೇಕ ವಿಧದ ಜೀವಿಗಳು ಅಪಾರವಾದ ಹಾನಿಯನ್ನು ಅನುಭವಿಸುತ್ತವೆ. ಸಂಪೂರ್ಣ ಪೃಥ್ವಿಯನ್ನೇ ನಾಶ ಮಾಡಲು ತೊಡಗುತ್ತಾರೆ. ಆಗ ದೇವತೆಗಳು ಬ್ರಹ್ಮದೇವರ ಬಳಿ ದೂರುತ್ತಾರೆ. ಆಗ ಬ್ರಹ್ಮ ದೇವರು "ಈ ಪೃಥ್ವಿಯ ರಕ್ಷಣೆಯ ಹೊಣೆ ಭಗವಂತ ಶ್ರೀಹರಿಯದ್ದು, ಕಪಿಲಮುನಿಯ ರೂಪವನ್ನು ಧರಿಸಿ ಈ ಪೃಥ್ವಿಯನ್ನು ಅವನೇ ಧರಿಸಿದ್ದಾನೆ ಅವನ ಕೋಪಾಗ್ನಿಯಿಂದ ಈ ರಾಜಕುಮಾರರು ಸುಟ್ಟು ಬೂದಿಯಾಗಿ ಹೋಗ್ತಾರೆ" ಎಂದು ಅಭಯವನ್ನು ನೀಡಿ ದೇವತೆಗಳನ್ನು ಕಳುಹಿಸಿಕೊಡುತ್ತಾರೆ. ಇತ್ತ ಭೂಮಿಯನ್ನು ಅಗೆಯುತಿದ್ದ ಸಗರ ಪುತ್ರರು ಪಾತಾಳದವರೆಗೂ ಅಗೆಯುತ್ತಾ ಸಾಗುತ್ತಾರೆ. ಅಲ್ಲಿ ಭೂ ಮಂಡಲವನ್ನು ನಾಲ್ಕು ದಿಕ್ಕುಗಳಲ್ಲೂ ಹೊತ್ತಿರುವ ವಿರೂಪಾಕ್ಷ, ಮಹಾಪದ್ಮ, ಸೋಮನಸ, ಭದ್ರ ಎಂಬ ನಾಲ್ಕು ದಿಗ್ಗಜಗಳನ್ನು ನೋಡುತ್ತಾರೆ. ಅಲ್ಲಿಂದ ಇನ್ನೂ ಮುಂದಕ್ಕೆ ಹೋದಾಗ ಭಗವಾನ್ ಕಪಿಲರು ಹಾಗೂ ಅವರ ಸುತ್ತ ಅಲೆದಾಡುತ್ತಿರುವ ಯಜ್ಞಾಶ್ವ ಕಣ್ಣಿಗೆ ಬೀಳುತ್ತದೆ. ಅದನ್ನು ಕಂಡು ಹರ್ಷಿತರಾಗಿ ಯಜ್ಞಾಶ್ವವನ್ನು ಕರೆದೊಯ್ಯಲು ಧಾವಿಸುತ್ತಾರೆ. ರೋಷಭರಿತರಾಗಿ ಕಪಿಲನನ್ನು ನಿಂದಿಸುತ್ತ ಆಕ್ರಮಣ ಮಾಡಲು ಪ್ರಯತ್ನಿಸುತ್ತಾರೆ. ಇದನ್ನು ನೋಡಿದ ಕಪಿಲನಿಗೆ ತುಂಬಾ ಸಿಟ್ಟು ಬರುತ್ತದೆ. ರಾಜಕುಮಾರರನ್ನು ಸುಟ್ಟು ಬೂದಿ ಮಾಡಿಬಿಡುತ್ತಾನೆ.


ಇತ್ತ ಬಹಳ ಕಾಲದವರೆಗೆ ತನ್ನ ಮಕ್ಕಳು ಹಿಂದಿರುಗಿ ಬರದ ಕಾರಣ ಅವರನ್ನು ಹುಡುಕಿ ಕರೆತರುವುದಕ್ಕೆ ಸಗರ ಮಹಾರಾಜ ಮೊಮ್ಮಗನಾದ ಅಂಶುಮಂತನನ್ನು ಕಳುಹಿಸಿಕೊಡುತ್ತಾನೆ. ಚಿಕ್ಕಪ್ಪಂದಿರ ಜಾಡು ಹಿಡಿದು ಹೋದ ಅವನಿಗೆ ದಾರಿಯಲ್ಲಿ ಅದೇ ದಿಗ್ಗಜಗಳು ಎದುರಾಗುತ್ತವೆ. ಅಂಶುಮಂತನ ವಿನಯಶೀಲತೆಗೆ ಮೆಚ್ಚಿ ಮುಂದಕ್ಕೆ ದಾರಿ ತೋರಿಸುತ್ತವೆ. ತನ್ನ ಚಿಕ್ಕಪ್ಪಂದಿರು ಭಸ್ಮವಾದ ಜಾಗಕ್ಕೆ ಬಂದಾಗ ಅಲ್ಲಿ ಯಾಗಾಶ್ವ ಇರುವುದನ್ನು ನೋಡುತ್ತಾನೆ. ಚಿಕ್ಕಪ್ಪಂದಿರು ಸುಟ್ಟು ಭಸ್ಮವಾದ ವಿಷಯ ತಿಳಿದು ದುಃಖಿಸುತ್ತಾನೆ. ಆಗ ಅರವತ್ತುಸಾವಿರ ಸಗರ ಪುತ್ರರ ಸೋದರ ಮಾವನಾಗಿದ್ದ ಪಕ್ಷಿರಾಜ ಗರುಡ ಬಂದು, "ಮಗು! ನಿನ್ನ ಚಿಕ್ಕಪ್ಪಂದಿರ ಮರಣಕ್ಕಾಗಿ ಶೋಕಿಸಬೇಡ ಜಗತ್ತಿನ ಕಲ್ಯಾಣಕ್ಕಾಗಿ ಅವರ ವಧೆಯಾಗಿದೆ, ಹಿಮವಂತನ ಜೇಷ್ಠ ಪುತ್ರಿಯಾದ ಗಂಗಾದೇವಿಯ ಜಲದಿಂದ ಅವರಿಗೆ ಜಲಾಂಜಲಿ ನೀಡು. ಸಗರ ಪುತ್ರರ ಬೂದಿಗೆ ಪುಣ್ಯವಾಹಿನಿಯ ಸ್ಪರ್ಶವಾದರೆ ಅವರಿಗೆ ನೇರ ಸ್ವರ್ಗ ಪ್ರಾಪ್ತಿಯಾಗುತ್ತದೆ" ಅಂತ ಹೇಳುತ್ತಾನೆ. ಪಕ್ಷಿರಾಜನ ಮಾತನ್ನು ಮನ್ನಿಸಿ ಅಂಶುಮಂತ ಯಾಗಾಶ್ವದೊಂದಿಗೆ ಹಿಂತಿರುಗಿ ಬಂದು ನಡೆದ ವಿಚಾರವನ್ನೆಲ್ಲ ಸಗರನಿಗೆ ತಿಳಿಸುತ್ತಾನೆ. ಕಲ್ಪೋಗ್ತ ನಿಯಮದಂತೆ ಯಾಗ ಪೂರ್ತಿಗೊಂಡು ರಾಜ ರಾಜಕೀಯ ಚಟುವಟಿಕೆಗಳಲ್ಲಿ ನಿರತನಾಗುತ್ತಾನೆ. ಆದರೆ ತನ್ನ ಮಕ್ಕಳಿಗೆ ಸದ್ಗತಿ ಪ್ರಾಪ್ತವಾಗಲು ಗಂಗೆಯನ್ನು ಕರೆತರುವ ಬಗೆ ಹೇಗೆ ಎಂಬ ವಿಚಾರದ ಬಗ್ಗೆ ಬಹಳ ಚಿಂತಿತನಾಗುತ್ತಾನೆ. ಈ ವಿಚಾರದಲ್ಲಿ ಯಾವೊಂದು ಮಾರ್ಗವೂ ತೋರದೆ ಮತ್ತೆ ಮೂವತ್ತುಸಾವಿರ ವರ್ಷಗಳವರೆಗೆ ರಾಜ್ಯವಾಳಿ ಮೃತ್ಯುವನ್ನು ಹೊಂದುತ್ತಾನೆ.

ಸಗರನು ಕಾಲವಾದ ಮೇಲೆ ಅಯೋಧ್ಯೆಯ ಪ್ರಜಾ ಜನರು ಹಾಗೂ ಮಂತ್ರಿ ವರ್ಗದವರು ನಿಶ್ಚಯಿಸಿ ಪರಮ ಧಾರ್ಮಿಕನು ಸದ್ಗುಣಿಯು ಆದಂತಹ ಅಂಶುಮಂತನಿಗೆ ರಾಜ್ಯಾಭಿಷೇಕವನ್ನು ನಡೆಸುತ್ತಾರೆ. ಚಿಕ್ಕಪ್ಪಂದಿರ ಸದ್ಗತಿಗೆ ಗಂಗೆಯನ್ನು ಕರೆತರುವ ಮಾರ್ಗ ಕಾಣದೆ ಭಗವಂತನನ್ನು ಮೆಚ್ಚಿಸುವ ಮೂಲಕ ಮಾತ್ರ ಈ ಕೆಲಸ ಸಾಧ್ಯ ಎಂದು ನಿರ್ಧರಿಸಿ ತನ್ನ ಸಮರ್ಥ ಪುತ್ರ ದಿಲೀಪನಿಗೆ ರಾಜ್ಯವನ್ನು ಒಪ್ಪಿಸಿ, ಹಿಮಾಲಯಕ್ಕೆ ತೆರಳಿ ಕಠಿಣ ತಪಸ್ಸಿಗೆ ತೊಡಗುತ್ತಾನೆ. ಮೂವತ್ತೆರಡುಸಾವಿರ ವರ್ಷಗಳ ಕಾಲ ನಿರಂತರ ತಪಸ್ಸನ್ನು ಆಚರಿಸಿ, ತನ್ನ ಶರೀರವನ್ನು ತ್ಯಜಿಸಿ ಸ್ವರ್ಗ ಲೋಕವನ್ನು ಹೊಂದುತ್ತಾನೆ.


ತನ್ನ ಪಿತಾಮಹರ ಮರಣದ ವಿಚಾರವನ್ನು ತಿಳಿದ ದಿಲೀಪನೂ ಕೂಡ ಆ ಕುರಿತು ಬಹಳ ಚಿಂತನೆಗೆ ತೊಡಗುತ್ತಾನೆ.ಅನೇಕ ಯಾಗ ಯಜ್ಞಗಳನ್ನು ಕೈಗೊಳ್ಳುತ್ತಾನೆ, ಗಂಗೆಯನ್ನು ಹೇಗೆ ತರುವುದು ಪಿತೃಗಳಿಗೆ ಹೇಗೆ ತರ್ಪಣ ನೀಡುವುದು ಎಂಬ ಚಿಂತೆಯಲ್ಲೇ ಮೂವತ್ತುಸಾವಿರ ವರ್ಷಗಳ ಆಡಳಿತ ನಿರ್ವಹಿಸಿ ಮರಣವನ್ನು ಹೊಂದುತ್ತಾನೆ.


ಮಹಾರಾಜ ದಿಲೀಪನ ನಂತರ ಅವನ ಮಗ ಭಗೀರಥ ಆಡಳಿತದ ಚುಕ್ಕಾಣಿಯನ್ನು ಹಿಡಿಯುತ್ತಾನೆ. ಭಗೀರಥನು ಸಹ ತನ್ನ ಪಿತೃಗಳ ಉದ್ಧಾರದ ಚಿಂತನೆಯಲ್ಲಿ ತೊಡಗಿ ರಾಜ್ಯ ಮತ್ತು ಪ್ರಜೆಗಳ ರಕ್ಷಣೆಯ ಭಾರವನ್ನು ಮಂತ್ರಿಗಳಿಗೆ ಒಪ್ಪಿಸಿ ಗೋಕರ್ಣತೀರ್ಥ ಎಂಬ ಕ್ಷೇತ್ರದಲ್ಲಿ ಘನಘೋರವಾದ ತಪಸ್ಸಿಗೆ ತೊಡಗುತ್ತಾನೆ. ಒಂದು ಸಾವಿರ ವರ್ಷಗಳ ಕಾಲ,ತಿಂಗಳಲ್ಲಿ ಒಂದೇ ಸಲ ಆಹಾರವನ್ನು ಸ್ವೀಕರಿಸಿ,ಎರಡು ಭುಜಗಳನ್ನು ಮೇಲಕ್ಕೆತ್ತಿ, ಇಂದ್ರಿಯಗಳನ್ನು ನಿಗ್ರಹಿಸಿ, ಕಠಿಣಾತಿಕಠಿಣ ತಪಸ್ಸನ್ನು ಪೂರೈಸಿದ ಮೇಲೆ ಬ್ರಹ್ಮದೇವರು ಪ್ರತ್ಯಕ್ಷರಾಗುತ್ತಾರೆ. ಬ್ರಹ್ಮದೇವರ ಎದುರು ಕೈಮುಗಿದು ನಿಂತ ಭಗೀರಥ, ನನ್ನ ತಪಸ್ಸಿನಿಂದ ನೀವು ಸಂತುಷ್ಟರಾಗಿದ್ದರೆ ಸಗರ ಪುತ್ರರಿಗೆ ನನ್ನ ಕೈಯಿಂದ ಗಂಗಾಜಲ ಪ್ರಾಪ್ತವಾಗುವಂತೆ ಅನುಗ್ರಹಿಸಿರಿ ಎಂದು ಪ್ರಾರ್ಥಿಸುತ್ತಾನೆ. ಆಗ ಬ್ರಹ್ಮ ದೇವರು "ಮಹಾರಾಜ ಗಂಗೆಯು ಬೀಳುವ ವೇಗವನ್ನು ಭೂಮಿಯು ತಡೆದುಕೊಳ್ಳಲಾರಳು ಪ್ರಭು ಪರಮೇಶ್ವರನಲ್ಲದೇ ಮತ್ತಾರೂ ಗಂಗೆಯನ್ನು ಧರಿಸಲು ಸಾಧ್ಯವಿಲ್ಲ, ಆದ್ದರಿಂದ ನೀನು ಪರಮೇಶ್ವರನನ್ನು ಪ್ರಾರ್ಥಿಸಿ, ಗಂಗೆಯನ್ನು ಧರಿಸುವಂತೆ ಒಲಿಸಿಕೋ" ಎಂದು ಹೇಳಿ, ಗಂಗಾಮಾತೆಗೂ ಭಗೀರಥನನ್ನು ಅನುಗ್ರಹಿಸುವಂತೆ ತಿಳಿಸಿ ತಮ್ಮ ಲೋಕಕ್ಕೆ ತೆರಳುತ್ತಾರೆ. ಅವರ ಮಾತಿನಂತೆ ರಾಜಾ ಭಗೀರಥನು ಕೇವಲ ಕಾಲಿನ ಹೆಬ್ಬೆರಳ ಮೇಲೆ ನಿಂತು ಒಂದು ವರ್ಷ ಭಗವಾನ್ ಶಂಕರನ ಉಪಾಸನೆಯಲ್ಲಿ ತೊಡಗುತ್ತಾನೆ. ಸರ್ವ ಲೋಕವಂದಿತ ಶಂಕರ ಪ್ರತ್ಯಕ್ಷನಾಗಿ 'ಗಂಗಾದೇವಿಯನ್ನು ಮಸ್ತಕದಲ್ಲಿ ಧರಿಸುತ್ತೇನೆ' ಎಂದು ಅಭಯವನ್ನು ನೀಡುತ್ತಾನೆ. ಬ್ರಹ್ಮದೇವರ ಆದೇಶದಂತೆ ಧುಮ್ಮಿಕ್ಕಲು ನಿರ್ಧರಿಸಿದ ಗಂಗಾ ದೇವಿಯು ಅತ್ಯಂತ ಪ್ರಖರವಾದ ಪ್ರವಾಹದಿಂದ ಶಂಕರನ ಸಮೇತವಾಗಿ ಪಾತಾಳಕ್ಕೆ ಹೋಗುತ್ತೇನೆ ಎಂದು ಅಹಂಕಾರದಿಂದ ಧುಮ್ಮಿಕ್ಕುತ್ತಾಳೆ. ಇದನ್ನು ಅರಿತ ಶಂಕರನು ಕುಪಿತನಾಗಿ ಗಂಗೆಯನ್ನು ಅದೃಶ್ಯಳಾಗಿಸಲು ನಿರ್ಧರಿಸುತ್ತಾನೆ. ಶಂಕರನ ಜಟೆಯ ಮೇಲೆ ರಭಸವಾಗಿ ಧುಮ್ಮಿಕ್ಕಿದ ಗಂಗೆಯು ಅಲ್ಲೇ ಸಿಕ್ಕಿಹಾಕಿಕೊಂಡು ಬಿಡುತ್ತಾಳೆ. ಎಷ್ಟೇ ಪ್ರಯತ್ನಿಸಿದರು ಅಲ್ಲಿಂದ ಹೊರ ಬಂದು ಪ್ರಥ್ವಿಯನ್ನು ಸೇರಲು ಸಾಧ್ಯವೇ ಆಗುವುದಿಲ್ಲ. ಅನೇಕ ವರ್ಷಗಳವರೆಗೆ ಹರನ ಜೊತೆಯಲ್ಲೇ ಗಂಗೆ ಅದೃಶ್ಯಳಾಗಿರುವುದನ್ನು ತಿಳಿದು ಭಗೀರಥನು ಮತ್ತೆ ಕಠಿಣವಾದ ತಪಸ್ಸಿನಲ್ಲಿ ನಿರತನಾಗುತ್ತಾನೆ. ಪುನಃ ಭಗೀರಥನ ತಪಸ್ಸಿಗೆ ಸಂತುಷ್ಟನಾದ ಮಹಾದೇವ ಗಂಗೆಯನ್ನು ಬಿಂದು ಸರೋವರಕ್ಕೆ ಕೊಂಡು ಹೋಗಿಬಿಡುತ್ತಾನೆ. ಅಲ್ಲಿಂದ ಗಂಗೆಯು ಏಳು ಸೀಳುಗಳಾಗಿ ಹರಿಯಲು ತೊಡಗುತ್ತಾಳೆ. ಮೂರು ಸೀಳುಗಳು ಪೂರ್ವಕ್ಕೂ ಮೂರು ಸೀಳುಗಳು ಪಶ್ಚಿಮಕ್ಕೂ ಮತ್ತು ಏಳನೆಯ ಸೀಳು ಭಗೀರಥನ ಕೋರಿಕೆಯಂತೆ ಅವನನ್ನು ಹಿಂಬಾಲಿಸಿ ಹರಿಯುವುದಕ್ಕೆ ತೊಡಗುತ್ತಾಳೆ. ರಾಜರ್ಷಿಯಾಗಿದ್ದ ಭಗೀರಥ ದಿವ್ಯ ರಥದಲ್ಲಿ ಕುಳಿತು ಮುಂದಕ್ಕೆ ಸಾಗುತ್ತಿದ್ದರೆ ಗಂಗೆ ಕೂಡ ಅವನ ಹಿಂದಕ್ಕೆ ಪುಣ್ಯಗಾಮಿನಿಯಾಗಿ ಹರಿದು ಬರುತ್ತಾಳೆ.


ಹಾಗೆ ಬರುವಾಗ ಅನೇಕ ರೀತಿಯ ಜಲಚರಗಳು ಅವಳ ಒಡಲಲ್ಲಿ ತುಂಬಿದ್ದವು. ಅಪರೂಪದ ದಿವ್ಯ ದೃಶ್ಯವನ್ನು, ವೈಭವವನ್ನು ಜನ ಆಶ್ಚರ್ಯ ಚಕಿತರಾಗಿ ನೋಡುತ್ತಿದ್ದರು. ದೇವತೆಗಳು,ಯಕ್ಷರು, ಕಿನ್ನರರು ಕೂಡ ಗುಂಪು ಗುಂಪಾಗಿ ಅದ್ಭುತ ದೃಶ್ಯವನ್ನು ನೋಡುವುದಕ್ಕೆ ತೊಡಗುತ್ತಾರೆ. ಆ ಕ್ಷಣ ಆಕಾಶದಲ್ಲಿ ನೆರೆದಿದ್ದ ದೇವತೆಗಳ ಆಭೂಷಣಗಳ ಪ್ರಕಾಶದಿಂದ ನಿರ್ಮಲವಾದ ಆಕಾಶದಲ್ಲಿ ನೂರಾರು ಸೂರ್ಯರು ಉದಯಿಸಿದಂತಹ ಪ್ರಕಾಶ ವ್ಯಾಪ್ತವಾಗಿತ್ತು. ಅನೇಕ ಶಾಪಗ್ರಸ್ಥರು ಗಂಗೆಯಲ್ಲಿ ಸ್ನಾನ ಮಾಡಿ ಶಾಪವಿಮುಕ್ತರಾಗುತ್ತಾರೆ. ಧಾರ್ಮಿಕರು ಗಂಗೆಯನ್ನು ಪೂಜಿಸಿ, ಸ್ಪರ್ಶಿಸಿ ಪುಣ್ಯ ಸಂಚಯನ ಮಾಡಿಕೊಳ್ಳುತ್ತಾರೆ. ಋಷಿಗಳು, ಗಂಧರ್ವರು ಗಂಗೆಯ ಪುಣ್ಯಜಲದಲ್ಲಿ ಆಚಮನ ಮಾಡುತ್ತಾರೆ.


ಹೀಗೆ ಭಗೀರಥನನ್ನು ಹಿಂಬಾಲಿಸಿ ಗಂಗೆ ಸಾಗುತ್ತಿರುವ ಮಾರ್ಗದಲ್ಲಿ ಜಹ್ನು ಎಂಬ ಮಹಾತ್ಮ ಶ್ರೇಷ್ಠವಾದ ಯಾಗ ಕಾರ್ಯದಲ್ಲಿ ನಿರತನಾಗಿದ್ದ. ಗಂಗೆಯ ಪ್ರವಾಹದಿಂದ ಅವನ ಯಾಗಶಾಲೆ ನಾಶವಾಗಿ ಹೋಗುತ್ತದೆ. ಇದರಿಂದ ಕುಪಿತನಾದ ಜಹ್ನು ಗಂಗೆಯನ್ನು ಆಪೋಷನ ತೆಗೆದುಕೊಂಡು ಬಿಡುತ್ತಾನೆ. ನಂತರ ದೇವತೆಗಳು ಋಷಿಗಳೆಲ್ಲ ಸೇರಿ ಜಹ್ನುವನ್ನು ಸಮಾಧಾನಿಸುತ್ತಾರೆ. ಗಂಗೆಯನ್ನು ತಮ್ಮ ಮಗಳೆಂದು ತಿಳಿದು ಅವಳು ಪುನಃ ಪ್ರಕಟಗೊಳ್ಳುವ ಹಾಗೆ ಮಾಡಿ ಎಂದು ಪ್ರಾರ್ಥಿಸುತ್ತಾರೆ. ಅವರ ಕೋರಿಕೆಯನ್ನು ಮನ್ನಿಸಿ, ಜಹ್ನು ತಮ್ಮ ಕಿವಿಯಿಂದ ಗಂಗೆಯನ್ನು ಪ್ರಕಟಗೊಳಿಸುತ್ತಾರೆ. ಆದ್ದರಿಂದಲೇ ಗಂಗೆಗೆ ಜಾಹ್ನವಿ ಎಂಬ ಹೆಸರು ಕೂಡ ಇದೆ. ಅಲ್ಲಿಂದ ಮುಂದೆ ಸಾಗಿ ಸಮುದ್ರವನ್ನು ಸೇರಿ ಭಗೀರಥನ ಪಿತೃಗಳನ್ನು ಉದ್ಧರಿಸುವುದಕ್ಕೆ ಅವನನ್ನು ಅನುಸರಿಸಿ ರಸಾತಳವನ್ನು ತಲುಪುತ್ತಾಳೆ. ಸಗರಪುತ್ರರ ಭಸ್ಮವನ್ನು ತನ್ನೊಡಲಿಗೆ ಸೇರಿಸಿಕೊಂಡು ಅವರಿಗೆ ಸ್ವರ್ಗ ಪ್ರಾಪ್ತವಾಗುವ ಹಾಗೆ ಮಾಡುತ್ತಾಳೆ.


ಆಗ ಬ್ರಹ್ಮ ದೇವರು ಪ್ರತ್ಯಕ್ಷರಾಗಿ ಭಗೀರಥ ಈ ನಿನ್ನ ಸಾಹಸದಿಂದ ನಿನ್ನ ಪಿತೃಗಳಿಗೆ ಸ್ವರ್ಗ ಪ್ರಾಪ್ತವಾಗಿದೆ. ಎಲ್ಲಿಯವರೆಗೆ ಈ ಜಗದಲ್ಲಿ ಸಾಗರದ ನೀರು ಇರುವುದೋ, ಅಲ್ಲಿಯವರೆಗೂ ಸಗರಪುತ್ರರು ಸ್ವರ್ಗಲೋಕದಲ್ಲೇ ಇರುತ್ತಾರೆ. ಅಷ್ಟೇ ಅಲ್ಲ ನಿನ್ನ ಹಿರಿಯರು ಮಾಡಿದ ಪ್ರತಿಜ್ಞೆಯನ್ನು ಪೂರ್ಣಗೊಳಿಸಲು ಅತ್ಯಂತ ಪ್ರಯಾಸದಿಂದ ಗಂಗೆಯನ್ನು ನೀನು ಇಲ್ಲಿಯವರೆಗೂ ಕರೆತಂದಿರುವೆ. ಮಕ್ಕಳಿಲ್ಲದ ನೀನು ಇವಳನ್ನೇ ನಿನ್ನ ಜ್ಯೇಷ್ಠ ಪುತ್ರಿ ಅಂತ ಭಾವಿಸು. ಅವಳು ನಿನ್ನ ನಾಮದಿಂದಲೇ ಗುರುತಿಸಿ, "ಭಾಗೀರಥಿ" ಎಂದು ಭೂಲೋಕದಲ್ಲಿ ಪ್ರಖ್ಯಾತಿ ಹೊಂದಲಿ ಅಂತ ಅನುಗ್ರಹಿಸುತ್ತಾರೆ.


ಈ ರೀತಿಯಾಗಿ ಭಗೀರಥನ ಪ್ರಯತ್ನದ ಫಲವಾಗಿ ಗಂಗೆ ಭಾಗಿರಥಿ ಯಾಗಿ ಇಂದಿಗೂ ಭೂಲೋಕದಲ್ಲಿ ಪುಣ್ಯಗಾಮಿನಿಯಾಗಿ ಹರಿಯುತ್ತಿದ್ದಾಳೆ.

Comments


bottom of page