top of page

ಭರತ: ಭ್ರಾತೃ ಪ್ರೇಮದ ಆದರ್ಶ ರೂಪಕ

ನಾವು ರಾಮಾಯಣದಲ್ಲಿ ರಾಮನ ಜೊತೆ ಲಕ್ಷ್ಮಣ-ಭರತ ಶತ್ರುಹ ಹೀಗೆ ಸೇರಿಸಿ ಹೇಳುವ ಅಭ್ಯಾಸವಿದೆ. ವಾಸ್ತವದಲ್ಲಿ ರಾಮನ ನಂತರದಲ್ಲಿ ಹುಟ್ಟಿದವ ಭರತ. ಆಮೇಲೆ ಲಕ್ಷ್ಮಣ ಶತ್ರುಹರು.
Bharata
ಭರತ

ಮಕ್ಕಳಿಲ್ಲದ ದಶರಥ ಪುತ್ರಕಾಮೇಷ್ಠಿಯನ್ನು ಮಾಡಿ, ಯಜ್ಞದೇವತೆಯಿಂದ ಪಾಯಸವನ್ನು ಅನುಗ್ರಹವಾಗಿ ಪಡೆದ. ಅದನ್ನು ಪತ್ನಿಯರಿಗೆ ಹಂಚಿದ. ಕೌಸಲ್ಯಗೆ-ಸುಮಿತ್ರೆಗೆ-ಕೈಕೇಯಿಗೆ, ಹೀಗೆ ಒಂದೊಂದು ಭಾಗ ಹಂಚಿದವ ಪುನಃ ಸುಮಿತ್ರೆಗೆ ಇನ್ನೊಂದು ತುತ್ತು ಪಾಯಸವನ್ನು ನೀಡಿದ. ಕೌಸಲ್ಯೆ-ಕೈಕೇಯಿಯರು ಒಂದೊಂದು ತುತ್ತು ಸೇರಿಸಿ ಕೊಟ್ಟರೆಂದೂ ಕೆಲವು ಕಡೆ ಹೇಳಲ್ಪಟ್ಟಿದೆ. ಹೀಗೆ ಯಜ್ಞದ ಫಲವಾಗಿ ಹುಟ್ಟಿದ ರಾಜಕುಮಾರರು ರಾಮ-ಭರತ-ಲಕ್ಷ್ಮಣ-ಶತ್ರುಘ್ನ. ಅವಳಿಗಳಾದ ಸೌಮಿತ್ರೇಯರು, ಒಬ್ಬ ರಾಮನ ನೆರಳಾದ ಲಕ್ಷ್ಮಣನಾದರೆ, ಇನ್ನೊಬ್ಬ ಭರತನ ನೆರಳಾದ ಶತ್ರುಘ್ನ. ನಮ್ಮ ಭರತ ದೇಶ-ಭರತ ಖಂಡ ಇದೇ ಭರತನ ಕಾರಣಕ್ಕೆ ಈ ಹೆಸರು ಸಂಪಾದಿಸಿದೆ ಎಂಬುದು ಕೆಲವರ ಅಂಬೋಣ (ಚಂದ್ರವಂಶೀಯನಾದ ಸರ್ವದಮನ-ಭರತನ ಕಾರಣಕ್ಕೆ ಈ ಹೆಸರು ಎಂಬ ವಾದವೂ ಇದೆ). ರಾಮಾನುಜನಾದ ಭರತ ಬೆಳದದ್ದು-ಆಡಿದ್ದು-ಕಲಿತದ್ದು ಅಜ್ಜನಮನೆಯಾದ ಕೇಕಯದಲ್ಲಿ. ಮಾವನಾದ ಯುಧಾಜಿತ, ಅಜ್ಜನಾದ ಅಶ್ವಪತಿ ಇವನನ್ನು ಮನೆಯಲ್ಲಿ ಇಟ್ಟುಕೊಂಡು ಆದರಿಸಿದವರು. ಇವನ ಜೊತೆಯಾಗಿ ಸಾಗಿದವ ಶತ್ರುಘ್ನ.


ಪಟ್ಟಾಭಿಷೇಕ ಭಂಗವಾಗಿ, ದಶರಥ ತೀರಿಹೋದ ಮೇಲೆ ಭರತನಿಗೆ ವಸಿಷ್ಠರಿಂದ ತುರ್ತು ಸಂದೇಶ ಬರುತ್ತದೆ. ಟೆಲಿಗ್ರಾಂನಲ್ಲಿ 'Start immediately' ಎಂದು ಇದ್ದ ಹಾಗೇ ಇತ್ತು ವಿಷಯ. "ಆಗಬೇಕಾದದ್ದೆಲ್ಲ ನಿನಗೆ ಹಿತವಾಗೇ ನಡೆದಿದೇ. ರಾಜ್ಯ ನಿನಗಾಗಿ ಕಾಯುತ್ತಿದೆ ತಕ್ಷಣ ಹೊರಡು". ಪತ್ರ ದೂತರನ್ನು ವಿಚಾರಿಸಿದರೂ ಅವರಿಗೂ ಏನೂ ಗೊತ್ತಿಲ್ಲ. ತತ್ ಕ್ಷಣ ಅಲ್ಲಿಂದ ಶತ್ರುಘ್ನನನ್ನು ಜೊತೆಯಾಗಿಸಿಕೊಂಡು ಹೊರಟ ಭರತ, ಏಳು ದಿನ ನಿರಂತರವಾಗಿ ಪ್ರಯಾಣ ಮಾಡಿದನಂತೆ. ಊಟ-ನೀರು-ನಿದ್ದೆ ಎಲ್ಲಾ ಹೇಗೆ ನಿಭಾಯಿಸಿದನೋ ಏನೋ.


ಅಯೋಧ್ಯೆಗೆ ಬಂದು ನಿಂತರೆ ಸ್ವಾಗತಿಸುವವರಿಲ್ಲ, ಕಟ್ಟಿದ ತೋರಣ ಬಾಡಿದೆ. ಮಾಡಿದ ಅಲಂಕಾರ ಕಮರಿದೆ. ಬೀದಿಯಲ್ಲಿ ಕಂಡ ಜನರು ಆಚೆ ಮುಖ ಹಾಕುತ್ತಿದ್ದಾರೆ. ನೇರವಾಗಿ ತಾಯಿಯ ಅರಮನೆಗೇ ಹೋಗುತ್ತಾನೆ. ಅಲ್ಲಿ ಕೈಕೇಯಿ ಸರ್ವಾಲಂಕಾರ ಸಹಿತರಾಗಿ ಮಗನನ್ನು ಸ್ವಾಗತಿಸುವುದಕ್ಕೆ ಸಿದ್ಧವಾಗಿದ್ದಾಳೆ. "ಅಮ್ಮ! ನಗರದಲ್ಲಿ ಇಷ್ಟೊಂದು ಅಪಸವ್ಯಗಳೇಕೆ ಕಾಣಿಸುತ್ತಿವೆ? ತಂದೆ ಎಲ್ಲಿ ? ರಾಮ ಎಲ್ಲಿ?" ಎಂದು ಒಂದೇ ಉಸಿರಿಗೆ ಪ್ರಶ್ನೆಗಳ ಸುರಿಮಳೆ ಕೈಕೆಗೆ. ಅವಳು ಮಾತ್ರ ಭಾವನಾರಹಿತಳಾಗಿ "ನಿನ್ನ ತಂದೆ ಸತ್ತು ಹೋದ, ರಾಮ ಕಾಡು ಪಾಲಾದ. ಈಗ ಈ ರಾಜ್ಯ ನಿನ್ನ ವಶ. ನಿನಗೆ ನಾನು ಸಂಪಾದಿಸಿದ್ದು. ಆಳು, ಅನುಭವಿಸು ಮಗನೇ" ಎಂದು ಸಂತೋಷ ಪಡುತ್ತಾಳೆ. ಆಗ ಭರತ ಜ್ವಾಲಾಮುಖಿಯಾಗುತ್ತಾನೆ. ಆಗ ಅವನಲ್ಲಿ ಹುಟ್ಟಿದ ಸಿಟ್ಟು ಕೈಕೇಯಿಯ ತಲೆಯನ್ನು ಉರುಳಿಸದೇ ಬಿಟ್ಟಿದ್ದೇ ಹೆಚ್ಚು. "ನಿನ್ನನ್ನು ಈಗಲೇ ಗಡಿಪಾರು ಮಾಡಬೇಕೆಂದು ನನ್ನ ಮನಸ್ಸು ಹೇಳುತ್ತಿದೆ. ಆದರೆ ರಾಮ ನೊಂದಾನೆಂದು ಹಿಂದೇಟು ಹಾಕುತ್ತಿದ್ದೇನೆ" ಎನ್ನುತ್ತಾನೆ. ಇದೇ ರಾಮಾಯಣದಲ್ಲಿ ಮಂಥರೆಯ ಮಾತೊಂದಿದೆ. ಹತ್ತಿರವಿದ್ದರೆ ಜೀವವಿಲ್ಲದ ಮೋಟು ಗೋಡೆಯ ಮೇಲೂ ಪ್ರೀತಿ ಹುಟ್ಟುತ್ತದೆ, ದೂರವಿದ್ದರೆ ರಕ್ತ ಸಂಭಂಧಿಗರೂ ಪರಕೀಯರಾಗಿ ಕಾಣುತ್ತಾರೆ ಎಂದು. ಭರತನ ವಿಷಯದಲ್ಲಿ ಈ ಮಾತು ಸುಳ್ಳೆನಿಸುತ್ತದೆ. ತನಗೆ ಅರಿವೇ ಇಲ್ಲದ ವಿಷಯಕ್ಕೆ ತಪ್ಪಿತಸ್ಥನಾಗಿ ಅಪರಾಧಿ ಪ್ರಜ್ಞೆ ಹೊತ್ತು, ಪ್ರಜೆಗಳು, ಗುರುಗಳು, ದೊಡ್ಡಮ್ಮಂದಿರು ಎಲ್ಲರಿಂದಲೂ ಸಂಶಯಕ್ಕೆ ತುತ್ತಾಗಿ ಪರೀಕ್ಷಿಸಲ್ಪಟ್ಟ ಮಹಾ ಸಜ್ಜನ ಭರತ.

ತೈಲದ ಕೊಪ್ಪರಿಗೆಯಲ್ಲಿದ್ದ ತಂದೆಯ ದೇಹಕ್ಕೆ ಸಂಸ್ಕಾರ ಮಾಡಿದ ಭರತ, ಆ ಕ್ಷಣವೇ ರಾಮನನ್ನು ಕಾಣಲು ಸಿದ್ಧನಾಗುತ್ತಾನೆ. ಈತ ಹೊರಡುವ ವಿಷಯ ತಿಳಿದಾಗ ವಸಿಷ್ಠರೂ ಸಿದ್ಧರಾಗುತ್ತಾರೆ. ಕೊನೆಗೆ ಕೈಕೇಯಿಯೂ ಅನುಸರಿಸಿ ಹೊರಡುವುದು ಆಶ್ಚರ್ಯ. ಪುರದ ಜನರೆಲ್ಲ ಭರತನಿಂದ ಒಂದಡಿ ಮುಂದೆಯೇ ಹೊರಡಲನುವಾಗುತ್ತಾರೆ. ರಾಮನನ್ನು ಹಿಂದೆ ಕರೆ ತರುವುದಕ್ಕೆ ಬೇಕಾದ ಸಿದ್ಧತೆ ಮಾಡಿಸಿ ಅವನನ್ನು ಹುಡುಕಲು ಹೊರಟವನಿಗೆ ಗಂಗಾ ನದಿಯ ಬಳಿ ವಾಸಿಸುವ ಅಂಬಿಗನಾದ ಗುಹನೂ ಅನುಮಾನದಿಂದಲೇ ನೋಡುತ್ತಾನೆ. 'ರಾಮನನ್ನು ಕಾಡಿನಲ್ಲೇ ಮುಗಿಸಬಂದೆಯೊ' ಎಂಬ ಚುಚ್ಚುಮಾತು ಕೇಳಬೇಕಾದ ಅನಿವಾರ್ಯತೆ ಭರತನಿಗೆ. ಚಿತ್ರಕೂಟದಲ್ಲಿರುವ ರಾಮ-ಸೀತೆ-ಲಕ್ಷ್ಮಣರ ಇರ ಭರತನಿಗೆ ತಿಳಿಯುತ್ತದೆ. ಲಕ್ಷ್ಮಣನಿಗೂ ಸಂಶಯ - 'ಸೇನೆಯೊಂದಿಗೆ ಭರತ ಯುದ್ಧಕ್ಕೆ ಬಂದಿದ್ದಾನೆ. ನಾವು ಕಾಡಿನಲ್ಲಿ ಇರುವುದು ಆತನಿಗೆ ಇಷ್ಟವಿಲ್ಲ' ಎಂದವನ ಮಾತು. ಆದರೆ ವಿವೇಕಿಯಾದ ರಾಮ ಸಮಾಧಾನ ಮಾಡುತ್ತಾನೆ. ಎಷ್ಟೇ ಒತ್ತಾಯಿಸಿದರೂ ರಾಮ ಮರಳಿ ರಾಜ್ಯಕ್ಕೆ ಬರಲು ಒಪ್ಪುವುದಿಲ್ಲ. ಹಾಗಿದ್ದರೆ ತಾನೂ ನಿನ್ನ ಜೊತೆ ವನವಾಸಕ್ಕೆ ಬರುತ್ತೇನೆ ಎಂದರೂ ರಾಮ ಸಮ್ಮತಿಸುವುದಿಲ್ಲ. "ಭರತ!, ಈಗ ರಾಜ್ಯವನ್ನು ನಿನ್ನ ಭರವಸೆಯ ಮೇಲೆ ನಾನು ಬಿಟ್ಟು ಬಂದಾಗಿದೆ. ಈಗ ಅದರ ರಕ್ಷಣೆ ನಿನ್ನದು. ರಾಷ್ಟ್ರಪಾಲನೆ ನಿನಗೀಗ ಕರ್ತವ್ಯ. ಕರ್ತವ್ಯ ಭ್ರಷ್ಟತೆ ಕ್ಷತ್ರಿಯನಿಗೆ ಯೋಗ್ಯವಲ್ಲ. ನಮ್ಮ ಅಮ್ಮಂದಿರನ್ನು ಪಾಲಿಸುವ ಹೊಣೆ ನಿನ್ನದ್ದೇ ಇದೆ. ಹದಿನಾಲ್ಕು ವರ್ಷ ಪೂರೈಸಿ ನಾನು ಬಂದೇ ಬರುತ್ತೇನೆ" ಎಂದು ಭಾಷೆ ಕೊಟ್ಟು ಭರತನನ್ನು ಹಿಂದೆ ಕಳುಹುತ್ತಾನೆ ರಾಮ.


ಅನಾಯಾಸವಾಗಿ ಬಂದ ಅಖಂಡ ಭಾರತ ದೇಶ, ರಾಮನಿಂದ ಕಸಿದು ಅಳಬೇಕಾದ ಸ್ಥಿತಿಗೆ ಭರತನಾಡುವ ಮಾತು, "ಇದೂ ನನ್ನ ಪೂರ್ವ ಜನ್ಮದ ಪಾಪವೇ ಇರಬೇಕು?". ಇಲ್ಲಿ ಪಾದುಕಾ ಪ್ರದಾನದ ಒಂದು ಕಥೆಯಿದೆ. ಇದು ಮೂಲದಲ್ಲಿಲ್ಲಾ ಎಂಬುದೂ, ಕೆಲ ಕಥೆಯಲ್ಲಿ ಪ್ರಕ್ಷಿಪ್ತವಾಗಿ ಸೇರಿದೆ ಎಂಬುದೂ ಹಲವರ ವಾದ. ಹದಿನಾಲ್ಕು ವರ್ಷಕ್ಕೆ ಹಿಂದಿರುಗಲು ಒಪ್ಪಿದ ರಾಮನಲ್ಲಿ ಭರತನಾಡುವ ಮಾತು - "ನೀನು ಬರುವವರೆಗೆ ನಾನು ನಗರ ಪ್ರವೇಶ ಮಾಡಲಾರೆ. ನಂದಿ ಗ್ರಾಮದಲ್ಲಿ ತಾಪಸ ಜೀವನ ನಡೆಸುತ್ತೇನೆ. ಹದಿನಾಲ್ಕು ವರುಷ ಕಳೆದು ಅರ್ಧ ಘಳಿಗೆ ನೀನು ಬರಲು ತಡವಾದರೂ ಈ ಭರತನ ದೇಹ ಅಗ್ನಿಯನ್ನು ಸೇರಿರುತ್ತದೆ".


ನೋಡಿದಿರಾ! ಭರತನ ಭ್ರಾತೃಪ್ರೇಮವನ್ನು ಈಗಿನವರೆಲ್ಲ ಅಧಿಕಾರಕ್ಕೆ, ಸಂಪತ್ತಿಗೆ ಹಪಹಪಿಸುವುದನ್ನು ಕಂಡಾಗ ಭರತ ನಮ್ಮ ಮುಂದೆ ಬೇರೆಯಾಗಿಯೇ ನಿಲ್ಲುತ್ತಾನೆ. ರಾವಣವಧೆಯಾಗಿ ಲಂಕೆಯಿಂದ ಹೊರಡಲು ಸಿದ್ಧನಾದ ರಾಮ ಹನುಮಂತನನ್ನು ಮುಂದಾಗಿ ಕಳುಹುತ್ತಾನೆ. 'ಹೋಗಿ ಭರತನನ್ನು ಸಂತೈಸು ಆತ ಮಾತಿನಂತೆ ಅಗ್ನಿಪ್ರವೇಶ ಮಾಡಿಬಿಟ್ಟಾನು' ಎಂದು. ಹನುಮನು ಭರತನನ್ನು ನೋಡಿದ್ದು ಅದೇ ಮೊದಲು. ವಿಷಯ ತಿಳಿಸಲು ಬಂದ ಹನುಮಂತನಲ್ಲಿ ರಾಮನ ಕಥೆ ಕೇಳುತ್ತಾ ಕೇಳುತ್ತಾ ಅವನಿಗೆ ಹಿಂತಿರುಗಿ ರಾಮನಲ್ಲಿ ವಿಷಯ ಹೇಳಲು ಹೋಗುವುದಕ್ಕೆ ಬಿಡಲಿಲ್ಲ ಭರತ. ಹಾಗೆ ಹೋಗಿ ಭರತ ಕ್ಷೇಮವಾಗಿದ್ದಾನೆಂದು ತಿಳಿದು ರಾಮ ಬರದೇ ಹೋದರೆ?

ಇಂತಹ ಸರಳ-ಸಜ್ಜನಿ-ಪ್ರಾಮಾಣಿಕ ಆದರ್ಶ ಸಹೋದರ ಭರತ ನಿಜವಾಗಿ ರಾಮದೂತ - ಭಾರತಪ್ರೀತ.

Comments

Rated 0 out of 5 stars.
No ratings yet

Add a rating
bottom of page