top of page

ದೇವವ್ರತನ ವೃತ್ತಾಂತ (ಮಹಾಭಾರತ ಕಥಾಮಾಲೆ - 4)

ree

ಗಂಗಾದೇವಿಯು ಶಂತನುವನ್ನು ತ್ಯಜಿಸಿ ಹೊರಟಳು. ಆಗ ದೇವರಹಸ್ಯಗಳನ್ನು ವಿವರವಾಗಿ ತಿಳಿಯುವ ಆಶಯದಿಂದ ಶಂತನುವೂ ಗಂಗಾದೇವಿಯನ್ನು ಪ್ರಶ್ನಿಸಿದನು, "ಜಾಹ್ನವಿ! ನೀನು ಮಾತನಾಡುತ್ತಾ ಆಪವವಿತ್ತ ಶಾಪ ಕಾರಣವಾಗಿ, ವಸುಗಳು ಮನುಷ್ಯ ಜನ್ಮವನ್ನು ಹೊಂದಿದರು ಎಂದೆಯಲ್ಲಾ.. ಈ ಆಪವ ಮಹರ್ಷಿಗಳ ಹಿನ್ನೆಲೆ, ವಸುಗಳು ಅವರಿಗೆ ಎಸಗಿದ ಅಪಚಾರದ ಕುರಿತು ವಿವರವಾಗಿ ತಿಳಿಸುವೆಯಾ? ಮೊದಲ ಏಳು ವಸುಗಳು ಮಾನವ ಜನ್ಮ ಹೊಂದಿದ ತಕ್ಷಣ ಶಾಪ ವಿಮೋಚನೆ ಹೊಂದಿದರು. ಆದರೆ ಈ ಎಂಟನೆಯವನು ಉಳಿದನು. ಕೇವಲ ನಮ್ಮ ಸಮಾಗಮ ವ್ಯರ್ಥವಾಗದಿರಲಿ ಎಂಬುದೇ ಈತ ಉಳಿಯಲು ಕಾರಣವೋ ಅಥವಾ ಇವನ ಶಾಪ ವಿಮೋಚನೆ ಆಗಲಿಲ್ಲವೋ? ದಯಮಾಡಿ ಹೇಳು."


ಗಂಗಾದೇವಿಯು ಈ ಎಲ್ಲ ಪ್ರಶ್ನೆಗಳಿಗೂ ವಿವರವಾಗಿ ಉತ್ತರಿಸಿದಳು.


ಯಂ ಲೇಭೇ ವರುಣಃ ಪುತ್ರಂ ಪುರಾ ಭರತಸತ್ತಮ| ವಸಿಷ್ಠ ನಾಮ ಸ ಮುನಿಃ ಖ್ಯಾತ ಆಪವ ಇತ್ತುತ್||

ಭರತಸತ್ತಮ ಲೋಕ ವಿಖ್ಯಾತರಾದ ವಸಿಷ್ಠ ಮಹರ್ಷಿಗಳನ್ನು, ಅವರು ವರುಣ ಪುತ್ರರು ಆದ್ದರಿಂದ ಆಪವರೆನ್ನುತ್ತಾರೆ. ಈ ಖ್ಯಾತನಾಮರು ಸರ್ವ ಋತುವಿನಲ್ಲಿಯೂ ಕುಸುಮಿತವಾಗಿರುವ ಗಿಡ ಬಳ್ಳಿಗಳಿಂದಲೂ, ಸುತ್ತಲೂ ವಿಹರಿಸಿರುವ ಮೃಗಪಕ್ಷಿಗಳಿಂದಲೂ, ರಮಣೀಯವಾಗಿರುವ ತಾಣವಾದ ಮೇರು ಪರ್ವತದ ಪಾರ್ಶ್ವದಲ್ಲಿ ತಮ್ಮ ಪುಣ್ಯಾಶ್ರಮವನ್ನು ಹೊಂದಿದ್ದರು. ಯಜ್ಞ ಯಾಗಾದಿಗಳಲ್ಲಿ ಸದಾ ತೊಡಗಿರುತ್ತಿದ್ದರು. ಪ್ರಪಂಚಕ್ಕೆ ಹಿತವಾಗಿರುವ ಹೋಮ ಹವನಾದಿಗಳಿಗೆ ಪೂರಕವಾಗುವಂತೆ, ತಮ್ಮ ಹೋಮಧೇನುವಾಗಿ ವಸಿಷ್ಠರು ಸುರಧೇನು ಆದ ನಂದಿನಿ ನಾಮಕಳಾದ ಗೋವನ್ನು ಇಂದ್ರನಿಂದ ಕೊಡುಗೆಯಾಗಿ ಪರಿಗ್ರಹಿಸಿದರು. ಶಾಂತ ಮನಸ್ಕರಾದ ಮಹರ್ಷಿಗಳಿಂದ ಸಂಸೇವಿತರಾಗಿದ್ದ ವಸಿಷ್ಠರ ಆಶ್ರಮದಲ್ಲಿ ನಂದಿನಿ ಸುಖವಾಗಿ ಇರುತ್ತಿದ್ದಳು. ಆಶ್ರಮದ ಸುತ್ತಲೂ ಇದ್ದ ರಮ್ಯವಾದ ಅರಣ್ಯದಲ್ಲಿ ಯಾರ ಭಯವೂ ಇಲ್ಲದೆ ಸ್ವೇಚ್ಛೆಯಿಂದ ಸಂಚರಿಸುತ್ತಿದ್ದಳು.


ಹೀಗಿರಲು ಒಂದು ದಿನ ಆ ಆರಣ್ಯ ಪ್ರದೇಶಕ್ಕೆ ಪ್ರಥುವೇ ಮೊದಲಾದ ವಸುಗಳು ಅವರುಗಳ ಪತ್ನಿಯರು ವಿಹಾರಾರ್ಥಕವಾಗಿ ಆಗಮಿಸಿದರು. ಅವರಲ್ಲಿ 'ದ್ಯೂ' ಎಂಬ ಹೆಸರಿನ ವಸುವಿನ ಪತ್ನಿಯು ಅಲ್ಲಿಯೇ ಸಂಚರಿಸುತ್ತಿದ್ದ ನಂದಿನಿಯನ್ನು ನೋಡಿದಳು. ನಂದಿನಿಯ ಶೀಲ, ಸೌಂದರ್ಯ, ಹೃಷ್ಟ ಪುಷ್ಟತೆ, ಚೆಲುವಾದ ಬಾಲ, ಶುಭ ಲಕ್ಷಣಗಳುಳ್ಳ ಗೊರಸು ಇತ್ಯಾದಿಗಳಿಂದ ಅತಿಯಾಗಿ ಆಕರ್ಷಿತಳಾಗಿ, ತನ್ನ ಪತಿಯಾದ ದ್ಯೂ ವಿನಲ್ಲಿ ಈ ಹಸುವಿನ ವೃತ್ತಾಂತವನ್ನು ತಿಳಿಸುವಂತೆ ಕೇಳಿದಳು. ದ್ಯೂ ವು ಈ ಹಸುವು ನಂದಿನಿ ಎಂಬ ಸುರಧೇನುವೆಂದೂ, ವಶಿಷ್ಠರ ಹೋಮಧೇನುವೆಂದೂ ತನ್ನ ಪತ್ನಿಗೆ ತಿಳಿಸಿದನು. ಅಲ್ಲದೆ ಬಹಳ ರುಚಿಕರವಾದ ಇವಳ ಹಾಲನ್ನು ಕುಡಿದ ಮನುಷ್ಯನು ಹತ್ತು ಸಾವಿರ ವರ್ಷಗಳ ಕಾಲ ಯುವಕನಾಗಿಯೇ ಜೀವಿಸಿರುವನು ಎಂದೂ ತಿಳಿಸಿದನು. ಈ ಮಾತುಗಳನ್ನು ಕೇಳುತ್ತಿದ್ದಂತೆ ವಸು ಪತ್ನಿಯು, ಮನುಷ್ಯಳಾದ ತನ್ನ ಗೆಳತಿಯಾದ "ಜಿತವತೀ" ಎಂಬುವಳನ್ನು ನೆನಪಿಸಿಕೊಂಡಳು. "ಉಶೀನರ" ನಾಮಕನಾದ, ಸತ್ಯಾಸಂಧನಾದ ರಾಜನ ಪುತ್ರಿಯಾದ ಜಿತವತಿಯು, ಈಗೇನೋ ರೂಪ ಯೌವನಗಳಿಂದ ಕಂಗೊಳಿಸುತ್ತಿದ್ದರೂ ಶೀಘ್ರದಲ್ಲಿಯೇ ವೃದ್ಧಳಾಗುವಳು. ತನ್ನ ಗೆಳತಿಯಾದ ಜಿತವತಿಯು ವೃದ್ಧೆಯಾಗದೇ, ಯೌವನವಂತಳಾಗಿಯೇ ಇರಬೇಕೆಂದು ವಸು ಪತ್ನಿಯು ಅಪೇಕ್ಷಿಸಿದಳು. ಜಿತವತಿಗೆ ನಂದಿನಿಯು ಹಾಲನ್ನು ಪಾನ ಮಾಡಿಸಿ, ಅವಳ ಯೌವನವನ್ನು ಶಾಶ್ವತಗೊಳಿಸಬೇಕೆಂದೂ, ಅದಕ್ಕಾಗಿ ನಂದಿನಿಯನ್ನು ಕರೆದೊಯ್ಯಬೇಕೆಂದೂ ಪತಿಯನ್ನು ಅಂಗಲಾಚಿದಳು."


ಗಂಗಾದೇವಿಯು ಮುಂದುವರೆದು ಹೇಳಿದಳು, "ದೈನ್ಯದಿಂದ ಕೂಡಿದ ಪ್ರಿಯ ಪತ್ನಿಯ ಮಾತನ್ನು ಕೇಳಿದೊಡನೆಯೇ ದ್ಯೂ ವಿಗೆ ಕಾರ್ಯಾಕಾರ್ಯ ವಿವೇಚನೆಯು ತಪ್ಪಿತು. ನಂದಿನಿಯು ಯಾರ ಅಧೀನೆಯೆಂದೂ, ತೀಕ್ಷ್ಣ ತಪಸ್ವಿಗಳಾದ ಅವರ ತಾಪವು ತನ್ನನ್ನು ತಟ್ಟಬಹುದೆಂದೂ ಯೋಚಿಸಹೋಗಲಿಲ್ಲ. ಈ ಹಸುವನ್ನು ತಾನು ಕದ್ದರೆ, ವಸಿಷ್ಠ ಶಾಪವು ತನ್ನನ್ನು ಸ್ವರ್ಗದಿಂದ ಚ್ಯುತನನ್ನಾಗಿಸಿತೆಂದೂ ತರ್ಕಿಸಲು ಹೋಗಲಿಲ್ಲ. ಪತ್ನಿಯ ಇಚ್ಚೆಯನ್ನು ಪೂರೈಸುವುದಕ್ಕಾಗಿ ಪೃಥುವೇ ಮೊದಲಾದ ತನ್ನ ಸಹೋದರರ ಜೊತೆಗೂಡಿ ನಂದಿನಿಯನ್ನು ಅಪಹರಿಸಿಯೇ ಬಿಟ್ಟನು. ಅಂದು ಸಾಯಂಕಾಲವಾಗುತ್ತಿದ್ದಂತೆ ವಸಿಷ್ಠರು ಹಣ್ಣು ಹಂಪಲುಗಳೊಂದಿಗೆ ಆಶ್ರಮವನ್ನು ಪ್ರವೇಶಿಸಿದರು. ಆದರೆ ಎಂದಿನಂತೆ ಶಿಶುವಿನೊಡನೆ ಬಾಲವೆತ್ತಿ ತನ್ನತ್ತ ಓಡಿ ಬರುತ್ತಿದ್ದ ನಂದಿನಿ ಕಾಣಲಿಲ್ಲ. ತನ್ನ ಪುತ್ರಿಯಂತೆ ಇದ್ದ ನಂದಿನಿಯನ್ನು ಕಾಣದೆ ವ್ಯಾಕುಲರಾದ ವಸಿಷ್ಠರು, ಆಶ್ರಮದ ಸುತ್ತ ಮುತ್ತಲಿನ ಅರಣ್ಯ ಪ್ರದೇಶದಲ್ಲಿ ತಮ್ಮ ಶಿಷ್ಯರಿಂದ ಒಡಗೂಡಿ ಹುಡುಕಿ ನೋಡಿದರು. ನಂದಿನಿಯ ಸುಳಿವಿಲ್ಲ. ಹತಾಶರಾಗಿ ಆಶ್ರಮಕ್ಕೆ ಬಂದು, ದಿವ್ಯದೃಷ್ಟಿಯಿಂದ, ನಂದಿನಿಯ ಇರವನ್ನೂ, ವಸುಗಳು ನಂದಿನಿಯನ್ನು ಅಪಹರಿಸಿರುವ ಕುರಿತಾಗಿಯೂ ತಿಳಿದರು. ಇದರಿಂದ ನೊಂದ ಅವರು ಈ ತಪ್ಪಿಗಾಗಿ ವಸುಗಳಿಗೆ ಭೂಮಿಯಲ್ಲಿ ಜನ್ಮ ತಾಳುವಂತೆ ಶಪಿಸಿದರು. ಆ ವೇಳೆಗೆ ತಮ್ಮ ತಪ್ಪಿನ ಅರಿವಾಗಿದ್ದ ವಸುಗಳು, ತಾವು ಸ್ವರ್ಗದಿಂದ ಚ್ಯುತರಾಗಬೇಕಾದ ಸಂದರ್ಭ ಒದಗಿದ್ದರಿಂದ ಭೀತರಾಗಿದ್ದರು. ವಸಿಷ್ಠಾಶ್ರಮಕ್ಕೆ ಧಾವಿಸಿ ತಮ್ಮನ್ನು ಶಾಪವಿಮುಕ್ತರನ್ನಾಗಿ ಮಾಡುವಂತೆ ಅಂಗಲಾಚಿದರು.


ಶಾಂತಚಿತ್ತರಾಗಿದ್ದ ವಸಿಷ್ಠರು, ತಾವಿತ್ತ ಶಾಪವನ್ನು ವಸುಗಳು ಅನುಭವಿಸಲೇಬೇಕೆಂದೂ, ಆದರೆ ಮಾನುಷಗರ್ಭವನ್ನು ಸೇರಿ ಒಂದು ವರ್ಷದೊಳಗಾಗಿ ಶಾಪ ವಿಮೋಚನೆ ಹೊಂದುವಿರೆಂದೂ ತಿಳಿಸಿದರು. ಆದರೆ ಈ ಅಪರಾಧಕ್ಕೆ ಮೂಲ ಕಾರಣನಾದ "ದ್ಯೂ" ಎಂಬ ವಸುವು ಮಾತ್ರ ಭೂಮಿಯಲ್ಲಿ ಬಹುಕಾಲ ಜೀವಿಸಬೇಕಾಗುತ್ತದೆ ಎಂದು ತಿಳಿಸಿದರು. ದ್ಯೂ ವು ಭೂಮಿಯಲ್ಲಿ ಪಿತೃವಾಕ್ಯ ಪರಿಪಾಲಕನೂ, ಶಾಸ್ತ್ರವಿದನೂ, ಧಾರ್ಮಿಕನೂ ಆದರೂ ಸ್ತ್ರೀ ಸುಖ ತ್ಯಜಿಸಿದವನೂ, ಅಪುತ್ರವಂತನೂ ಆಗಿ ಬಹುಕಾಲ ಜೀವಿಸಬೇಕಾಗುತ್ತದೆ ಎಂದು ತಿಳಿಸಿದರು."


ಈ ಎಲ್ಲಾ ದೇವ ರಹಸ್ಯಗಳನ್ನೂ ಶಂತನುವಿಗೆ ತಿಳಿಸಿದ ಗಂಗಾದೇವಿಯು, ವಸುಗಳೆಲ್ಲರ ಪ್ರಾರ್ಥನೆಯಂತೆ ತಾನು ಅವರ ತಾಯಿಯಾದೆನೆಂದೂ, ಅವರ ಪ್ರಾರ್ಥನೆಯಂತೆಯೇ ವಸುಗಳನ್ನು, ಅವರು ಜನಿಸುತ್ತಿದ್ದಂತೆಯೇ ನೀರಿನಲ್ಲಿ ಮುಳುಗಿಸಿ ವಿಮುಕ್ತರನ್ನಾಗಿ ಮಾಡಿದ್ದಾಗಿಯೂ ತಿಳಿಸಿದಳು. ದ್ಯೂ ವಿನ ಅಂಶಜನಾದ ಈ ಶಿಶುವು ಬಹುಕಾಲ ಪೃಥ್ವಿಯಲ್ಲಿಯೇ ಜೀವಿಸಿರುವನು ಎಂಬುದಾಗಿ ತಿಳಿಸಿದಳು. 'ದೇವವ್ರತ' ಎಂಬ ನಾಮಧೇಯದಿಂದ ಪ್ರಸಿದ್ಧನಾಗಲಿರುವ ಈ ಮಗುವಿನ ವಿದ್ಯಾಭ್ಯಾಸ ತಾನು ಮಾಡಿಸಿ, ಪುನಃ ಕರೆತಂದು ಶಂತನುವಿಗೆ ಒಪ್ಪಿಸುವುದಾಗಿ ತಿಳಿಸಿದ ಗಂಗಾದೇವಿಯು, ಶಂತನುವಿನಿಂದ ಬೀಳ್ಕೊಂಡು, ಮಗು ದೇವವ್ರತನೊಡನೆ ದೇವಲೋಕಕ್ಕೆ ತೆರಳಿದಳು.


ತನ್ನನ್ನು ಬಿಟ್ಟು ಗಂಗಾದೇವಿಯೂ ದೇವವ್ರತನೂ ತೆರಳಿದ್ದರಿಂದ, ಭಾರವಾದ ಹೃದಯವನ್ನು ಹೊತ್ತು ಶಂತನು ಚಕ್ರವರ್ತಿಯು ಮೆಲ್ಲನೆ ಅರಮನೆಯತ್ತ ತೆರಳಿದನು.

Comments


bottom of page