ಭೀಷ್ಮ ಪ್ರತಿಜ್ಞೆ (ಮಹಾಭಾರತ ಕಥಾಮಾಲೆ 7)
- Arunkumar Bhat

- Jul 22
- 2 min read
ತಂದೆಯಾದ ಶಂತನು ಚಕ್ರವರ್ತಿಯ ಮಾತುಗಳೆಲ್ಲವನ್ನೂ ಮಥಿಸುತ್ತಾ, ತನ್ನ ಸಮಾಲೋಚನ ಮಂದಿರಕ್ಕೆ ತೆರಳಿದ ಗಾಂಗೇಯನು ಯೋಚಿಸಿದನು "ಒಬ್ಬನೇ ಮಗನಿರುವುದು ಮಕ್ಕಳಿಲ್ಲದಿರುವಿಕೆಗೆ ಸಮಾನ ನೀನೊಬ್ಬನೇ ನನಗೆ ಮಗನಾದರೂ, ನೂರು ಪುತ್ರರಿಗೆ ಸಮಾನ ಆದರೆ ........ ಸಮರದಲ್ಲಿ ನೀನು ಪ್ರಾಣತ್ಯಾಗ ಮಾಡಿದರೆ??ನಿನಗೆ ಸಹೋದರರು ಬೇಕಲ್ಲವೇ?"
ಈ ಮಾತುಗಳ ಅಂತರಾರ್ಥ ಬೇರೇನೋ ಇರುವಂತೆ ದೇವವ್ರತನಿಗೆ ಅನಿಸಿತು. ತನ್ನ ತಂದೆಯೇ ಅಜೇಯನು. ತಾನೋ, ಸಕಲ ಶಸ್ತ್ರಾಸ್ತ್ರಗಳನ್ನೂ ತಿಳಿದು, ಧನುರ್ವಿದ್ಯೆಯಲ್ಲಿ ನಿಷ್ಣಾತನು. ಹೀಗಿರುತ್ತಾ, ತನಗೆ ಸಾವೇ? ದೇವವ್ರತನು ಈ ಮಾತುಗಳ ಹಿಂದಿರಬಹುದಾದ ಕಾರಣ ತಿಳಿಯಲು ಮುಂದಾದನು.
ಶಂತನುವಿನ ಹಿತಚಿಂತಕನಾದ ವೃದ್ಧ ಮಂತ್ರಿಯನ್ನು ಕರೆಸಿ, ತಂದೆಯ ಮನೋವ್ಯಥೆಗೆ ಕಾರಣವೇನೆಂದು ಪ್ರಶ್ನಿಸಿದನು. ಆ ಮಂತ್ರಿಯು ಯೋಜನಗಂಧಿಯ ವಿಷಯವನ್ನು ದೇವವ್ರತನಿಗೆ ವಿಸ್ತಾರವಾಗಿ ತಿಳಿಸಿದನು. ಯೋಜನಗಂಧಿಯ ತಂದೆಯು ತನ್ನ ಪುತ್ರಿಯ ವಿವಾಹವನ್ನು ಶಂತನುವಿನೊಂದಿಗೆ ಮಾಡಲು ಹಾಕಿದ ನಿಬಂಧನೆಯ ವಿಚಾರವನ್ನು ಅರಿತ ಗಂಗಾತನಯನು, ತನ್ನ ತಂದೆಯ ಮನೋಭಿಲಾಷೆಯನ್ನು ನೆರವೇರಿಸುವುದು ಮಗನಾದ ತನ್ನ ಕರ್ತವ್ಯವೆಂದು ಭಾವಿಸಿ, ಸರ್ವತ್ಯಾಗಕ್ಕೂ ಸಿದ್ಧನಾಗಿ, ಹಿರಿಯ ಕ್ಷತ್ರಿಯರಿಂದ ಒಡಗೂಡಿ ದಾಶರಾಜನ ಬಳಿ ತೆರಳಿ, ತಂದೆಗಾಗಿ ಕನ್ಯೆಯನ್ನು ನೀಡಬೇಕೆಂದು ಪ್ರಾರ್ಥಿಸಿದನು.

ಮನೆಯಂಗಳಕ್ಕೆ ಆಗಮಿಸಿದ ರಾಜ ಪರಿವಾರವನ್ನು ಗೌರವಿಸಿದ ದಾಶರಾಜ ಕಂಧರನು ಗಂಗಾಸುತನ ಪ್ರಾರ್ಥನೆಗೆ ಮಾರ್ನುಡಿದನು, "ಭರತ ಕುಲ ತಿಲಕನೇ, ಶಂತನು ಗಂಗೆಯರ ಪುತ್ರನೇ, ನೀನು ಉತ್ತಮೋತ್ತಮನೆನಿಸಿರುವೆ. ನಿನ್ನೊಡನೆ ಕೆಲವು ಮಾತುಗಳನ್ನು ನಿವೇದಿಸಲು ಬಯಸುತ್ತೇನೆ. ಶಂತನು ಚಕ್ರವರ್ತಿಯ ಬೇಡಿಕೆಯನ್ನು ಅನಾದರಣೆ ಮಾಡಿದಲ್ಲಿ ಯಾರೇ ಆದರೂ ಪಶ್ಚಾತ್ತಾಪ ಪಡುತ್ತಾರೆ. ಈಗ ನೀವು ಕೇಳುತ್ತಿರುವ ಕನ್ಯೆಯಾದ ಸತ್ಯವತಿಯು ಪರಾಕ್ರಮದಲ್ಲಿಯೂ, ಧರ್ಮರಕ್ಷಣೆಯಲ್ಲಿಯೂ ನಿನಗೆ ಸಮನಾದ 'ಉಪರಿಚರ ವಸು' ಎಂಬ ಆರ್ಯಪುರುಷನ ಪುತ್ರಿ. ನಾನು ಸಾಕು ತಂದೆ ಮಾತ್ರ. ಉಪರಿಚರ ವಸುವೇ ಅನೇಕ ಸಲ ತನ್ನ ಪುತ್ರಿಗೆ ಶಂತನುವು ಅನುರೂಪ ವರನೆಂದು ತಿಳಿಸಿದ್ದಾನೆ. ಋಷಿ ವರೇಣ್ಯರಾದ ಅಸಿತರು ಸತ್ಯವತಿಯನ್ನು ಶಂತನುವಿಗೆ ಧಾರೆಯೆರೆಯುವಂತೆ ಒತ್ತಾಯಿಸಿದರು. ಆದುದರಿಂದ, ಶಂತನುವಿಗೆ ನನ್ನ ಮಗಳನ್ನು ಕೊಡುವುದು ನನಗೂ ಸಮ್ಮತವಾದುದೇ ಆಗಿದೆ. ಆದರೆ........
ಕನ್ಯಾ ಪಿತೃತ್ವಾತ್ಕಿಂಚಿತ್ತು ವಕ್ಷ್ಯಾಮಿ ತ್ವಾಂ ನರಾಧಿಪ|
ಬಲವತ್ಸಪತ್ನತಾಮತ್ರ ದೋಷಂ ಪಶ್ಯಾಮಿ ಕೇವಲಮ್|
ಕನ್ಯಾಪಿತ್ರವಾದ ನಾನು ನನ್ನ ಮಗಳು ಸೇರುವ ಕಡೆಯಲ್ಲಿ ಒಂದು ದೋಷವನ್ನು ಕಾಣುತ್ತೇನೆ. ಅದೇನೆಂದರೆ, ಬಲಿಷ್ಠನಾದ ಸವತಿಯ ಮಗನಾದ ನೀನು ಅಲ್ಲಿರುವುದೇ ಆಗಿದೆ. ನೀನಾದರೋ, ಸುರನರೋರಗರನ್ನು ಲೆಕ್ಕಿಸದ ಅಸಾಧಾರಣ ಪರಾಕ್ರಮಿ. ಹೀಗಿರುವಾಗ ನನ್ನ ಮಗಳ ಮಕ್ಕಳ ಪಾಡೇನು? ನಿನ್ನ ಮುಂದೆ ಹತಪ್ರಭರಾಗಬಹುದಾದ ಅವರು, ಒಂದು ವೇಳೆ ರಾಜ್ಯ ಕೋಶಗಳನ್ನು ನಿನ್ನಿಂದಾಗಿ ಕಳೆದುಕೊಳ್ಳುವ ಸ್ಥಿತಿಯೊದಗಿದರೆ? ಅವರು ಅನಾಥರೂ, ಅತಂತ್ರರೂ ಆದಾರಲ್ಲವೇ? ಕನ್ಯೆಯನ್ನು ದಾನ ಮಾಡಲು ಇಷ್ಟವಿದ್ದರೂ ಮಾಡದಿರುವುದಕ್ಕೆ ಇರುವ ದೋಷವು ಇದೊಂದೇ ಆಗಿರುವುದು ಗಾಂಗೆಯ!!"
ದಾಶರಾಜನ ಮಾತುಗಳನ್ನು ಕೇಳಿದ ಗಾಂಗೇಯನು, ತಂದೆಯ ಹಿತಕ್ಕಾಗಿ ಸಿಂಹಾಸನವನ್ನೇ ತ್ಯಜಿಸಲು ನಿರ್ಧರಿಸಿ, ಅಲ್ಲಿದ್ದ ಸಮಸ್ತರೂ ಕೇಳುತ್ತಿರುವಂತೆ ದಾಶರಾಜನನ್ನು ಉದ್ದೇಶಿಸಿ ಹೇಳಿದನು, "
ಇದಂ ಮೇ ವ್ರತಮಾದತ್ಸ್ವ ಸತ್ಯಂ ಸತ್ಯವತಾಂ ವರ|
ನೈವ ಜಾತೋ ನ ವಾ ಜಾತ ಈದೃಶಂ ವಕ್ತುಮುತ್ಸಹೇತ್||
ಏವಮೇತತ್ಕರಿಷ್ಯಾಮಿ ಯಥಾ ತ್ವಮನುಭಾಷಸೇ|
ಯೋ ಸ್ಯಾಂ ಜನಿಷ್ಯತೇ ಪುತ್ರಃ ಸ ನೋ ರಾಜಾ ಭವಿಷ್ಯತಿ||
"ಸತ್ಯವಂತರಲ್ಲಿ ಶ್ರೇಷ್ಠನೇ! ನಾನೀಗ ಮಾಡುವ ಸತ್ಯ ಪ್ರತಿಜ್ಞೆಯನ್ನು ಲಾಲಿಸು. ಇಂತಹ ಪ್ರತಿಜ್ಞೆಯನ್ನು ಮಾಡುವವನು ಹಿಂದೆಯೂ ಹುಟ್ಟಲಿಲ್ಲ, ಮುಂದೆಯೂ ಹುಟ್ಟಲಾರರು. ದಾಶರಾಜ! ನಿನ್ನ ಅಪೇಕ್ಷೆಯನ್ನು ನಾನು ಕಾರ್ಯರೂಪಕ್ಕೆ ತರುವೆನು. ನಿನ್ನ ಮಗಳ ಉದರದಲ್ಲಿ ಜನಿಸುವ ಪುತ್ರನೇ ಚಂದ್ರವಂಶದ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗುವನು. ನಮ್ಮೆಲ್ಲರಿಗೂ ಅರಸನಾಗುವನು. ನಾನು ಸಿಂಹಾಸನವನ್ನು ತ್ಯಾಗ ಮಾಡುತ್ತೇನೆ. ಆಗಬಹುದೇ?"
ಬೆರಗಾದ ದಾಶರಾಜನು ಉತ್ತರಿಸಿದನು "ಕೀರ್ತಿವಂತನೇ! ನಿನಗೆ ಅನುರೂಪವಾದ ಪ್ರತಿಜ್ಞೆಯನ್ನೇ ನೀನು ಮಾಡಿರುವೆ. ನಿನ್ನ ಮಾತಿನಲ್ಲಿ ನನಗೆ ಯಾವ ಸಂಶಯವಿಲ್ಲ. ಆದರೂ, ಕನ್ಯೆಯ ಪಿತೃನಾದ ನಾನು ಭವಿಷ್ಯವನ್ನು ಚಿಂತಿಸಿದಾಗ, ನೀನು ನಿನ್ನ ಪ್ರತಿಜ್ಞೆಯನ್ನು ಉಲ್ಲಂಘಿಸದಿದ್ದರೂ, ಪರಾಕ್ರಮಿಗಳಾಗಿಯೇ ಇರಬಹುದಾದ ನಿನ್ನ ಮಕ್ಕಳೂ ನಿನ್ನ ಪ್ರತಿಜ್ಞೆಯನ್ನೇ ಅನುಸರಿಸಬಹುದೇ? ಅವರು ನನ್ನ ಮಗಳ ಸಂತಾನವನ್ನು ಪದಚ್ಯುತಗೊಳಿಸಲಾರರೆ?"
ತಂದೆಯ ಹಿತಕ್ಕಾಗಿ ಸಂಪೂರ್ಣ ಬದ್ಧನಾಗಿದ್ದ ದೇವವ್ರತನು, ದಾಶರಾಜನ ಅಂತರಂಗವನ್ನು ಅರಿತು, ಅಲ್ಲಿನ ಸಮಸ್ತರೂ ಕೇಳುತ್ತಿರುವಂತೆ ತನ್ನ ಮಕ್ಕಳಿಂದ ಆಗಬಹುದಾದ ತೊಂದರೆಯ ನಿವಾರಣೆಗಾಗಿ ಸಮಸ್ತ ಲೋಕವೇ ಬೆರಗಾಗುವಂಥ ಮತ್ತೊಂದು ಪ್ರತಿಜ್ಞೆಯನ್ನು ಮಾಡಿದನು,
"ಅದ್ಯ ಪ್ರಭೃತಿ ಮೇ ದಾಶ ಬ್ರಹ್ಮ ಚರ್ಯಂ ಭವಿಷ್ಯತಿ|
ಅಪುತ್ರಸ್ಯಾಪಿ ಮೇ ಲೋಕಾ ಭವಿಷ್ಯನ್ತ್ಯಕ್ಷಯಾ ದಿವಿ||"
"ದಾಶರಾಜ! ಇಂದಿನಿಂದ ನಾನು ನನ್ನ ಆಯುಷ್ಯವೆಲ್ಲವನ್ನೂ ಬ್ರಹ್ಮಚರ್ಯದಲ್ಲಿಯೇ ಕಳೆಯುವೆನು. ಇದರಿಂದ ನಾನು ಅಪುತ್ರವಂತನಾಗುವೆನಾದರೂ ನನಗೆ ಅಕ್ಷಯವಾದ ಉತ್ತಮ ಲೋಕಗಳ ಪ್ರಾಪ್ತಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ"
ದೇವವ್ರತನ ಕಂಚಿನ ಕಂಠದಿಂದ ಮೊಳಗಿದ ಈ ಪ್ರತಿಜ್ಞೆಯನ್ನು ಕೇಳಿದ ದಾಶರಾಜನು ರೋಮಾಂಚಿತನಾಗಿ "ದದಾಮಿ" ಎಂದರೆ ಕನ್ಯೆಯನ್ನು ಕೊಡುತ್ತೇನೆ ಎಂಬುದಾಗಿ ಅಪ್ರಯತ್ನನಾಗಿ ಉದ್ಗರಿಸಿದನು.
ದೇವವ್ರತನ ಈ ಭೀಷಣವಾದ ಪ್ರತಿಜ್ಞೆಯನ್ನು ಕೇಳಿದ ದೇವತೆಗಳೂ, ಋಷಿಗಳೂ, ಅಪ್ಸರೆಯರೂ ಆತನ ಮೇಲೆ ಹೂವಿನ ಮಳೆಗೆರೆದರು. ಗಾಂಗೇಯನಿಗೆ 'ಭೀಷ್ಮ' ಎಂಬ ಬಿರುದನ್ನಿತ್ತರು.
ತದನಂತರ, ಭೀಷ್ಮನು ಸತ್ಯವತಿಯಲ್ಲಿಗೆ ಹೋಗಿ ನಮಸ್ಕರಿಸಿ, "ತಾಯೇ, ರಥದಲ್ಲಿ ಕುಳಿತುಕೋ; ನಮ್ಮ ಮನೆಗೆ ಹೋಗೋಣ" ಎಂದು ಅಂಜಲಿ ಬದ್ಧನಾಗಿ ಪ್ರಾರ್ಥಿಸಿ, ಆಕೆಯನ್ನು ರಥವೇರಿಸಿ ಕರೆದೊಯ್ದನು.
ಪುಷ್ಪರಥದಲ್ಲಿ, ಚತುರಂಗ ಬಲ ಸಮೇತನಾಗಿ, ಮಂಗಳವಾದ್ಯಗಳೊಡನೆ ಹಸ್ತಿನಾವತಿಯನ್ನು ಸೇರಿದ ಭೀಷ್ಮನು, ತನ್ನ ತಂದೆಯಲ್ಲಿಗೆ ಸತ್ಯವತಿಯೊಂದಿಗೆ ತೆರಳಿ, ತಂದೆಗೆ ನಮಸ್ಕರಿಸಿ, ನಡೆದುದೆಲ್ಲವನ್ನೂ ತಿಳಿಸಿದನು ಇದರಿಂದ ಅಪಾರವಾಗಿ ಹರ್ಷಿಸಿದ ಶಂತನುವು, ತನ್ನ ಪುತ್ರನ ತ್ಯಾಗಕ್ಕೆ ಪ್ರತಿಯಾಗಿ ಆತನಿಗೆ ವರವೊಂದನ್ನು ಅನುಗ್ರಹಿಸಿದನು.
ನ ತೇ ಮೃತ್ಯುಃ ಪ್ರಭವಿತಾ ಯಾವಜ್ಜೀವಿತುಮಿಚ್ಛಸಿ|
ತ್ವತ್ತೋ ಹ್ಯನುಜ್ಞಾಂ ಸಂಪ್ರಾಪ್ಯ ಮೃತ್ಯುಃ ಪ್ರಭವಿತಾನಘಃ||
"ಮಗನೇ, ನೀನು ಬದುಕಲು ಇಚ್ಛಿಸುವವರೆಗೂ ಮೃತ್ಯುವು ನಿನ್ನನ್ನು ಸಮೀಪಿಸುವುದಿಲ್ಲ. ಅನಘನೇ! ನಿನ್ನ ಅನುಜ್ಞೆಯನ್ನು ಪಡೆದ ನಂತರವೇ ಮೃತ್ಯುವು ನಿನ್ನನ್ನು ಪ್ರಭಾವಿಸುವುದು" ಎಂದು ಹರಸಿದನು. ಶುಭಮುಹೂರ್ತದಲ್ಲಿ, ಶಂತನು ಸತ್ಯವತಿಯರ ವಿವಾಹವು ವಿಜೃಂಭಣೆಯಿಂದ ನೆರವೇರಿತು.








Comments