top of page

ವಿಚಿತ್ರ ವೀರ್ಯನ ಮರಣ ತಂದ ಸಂಕಟ (ಮಹಾಭಾರತ ಕಥಾಮಾಲೆ 9)



ಕಾಶೀ ರಾಜಕುಮಾರಿಯರನ್ನು ಅವರು ಮುಡಿದಿದ್ದ ಹೂಗಳು ಸಹ ಬಾಡದಂತೆ ಭೀಷ್ಮನು ಹಸ್ತಿನಾಪುರಕ್ಕೆ ಕರೆ ತಂದನು. ತಂದೆಯು ತನ್ನ ಹೆಣ್ಣುಮಕ್ಕಳನ್ನು ಕರೆ ತರುವಂತೆ, ಭೀಷ್ಮನು ರಾಜಕುಮಾರಿಯರನ್ನು ಕರೆ ತಂದನು. ಅವರನ್ನು ಸಗೌರವದಿಂದ ರಾಜ ಮಾತೆಯಾದ ಸತ್ಯವತಿಯ ಬಳಿ ಇರಿಸಿದ ಭೀಷ್ಮನು, ರಾಜಮಾತೆಯ ಅನುಜ್ಞೆಯನ್ನು ಪಡೆದು, ತಮ್ಮನಾದ ವಿಚಿತ್ರವೀರ್ಯನೊಂದಿಗೆ ರಾಜ ಪುತ್ರಿಯರ ವಿವಾಹಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡತೊಡಗಿದನು.

ಹೀಗಿರಲು ಸಹೋದರಿಯರಲ್ಲಿ ಹಿರಿಯವಳಾದ ಅಂಬೆಯು ಭೀಷ್ಮನಲ್ಲಿಗೆ ಬಂದು ನಮಸ್ಕರಿಸಿ ಹೇಳಿದಳು, "ಕರುಣಾಳುವೇ! ನಾನು ನನ್ನ ಮನಸ್ಸಿನಲ್ಲಿ ಸೌಭಪುರದ ಅಧಿಪತಿಯಾದ ಶಾಲ್ವನನ್ನೇ ವರಿಸಿದ್ದೆನು. ಆತನೂ ನನ್ನನ್ನೇ ಪತ್ನಿಯಾಗಿ ಮನದಲ್ಲಿಯೇ ಪರಿಗ್ರಹಿಸಿದ್ದನು. ಅಂದಿನ ಕಾಶೀ ಸ್ವಯಂವರ ಮಂಟಪದಲ್ಲಿ, ನಾನು ಸೌಭಾವನೀಶನಿಗೇ ಪುಷ್ಪ ಮಾಲಿಕೆಯನ್ನು ತೊಡಿಸಲು ನಿಶ್ಚಯಿಸಿದ್ದೆನು. ಧರ್ಮ ಸೂಕ್ಷ್ಮಗಳನ್ನು ತಿಳಿದ ನೀನು ಈ ಅಂಶಗಳನ್ನು ಪರಿಗಣಿಸಿ, ಧರ್ಮದಂತೆ ಮುಂದುವರೆ".


ಭೀಷ್ಮನು ಅಂಬೆಯ ಮಾತುಗಳನ್ನು ಕೇಳಿ, ಬಹಳ ಯೋಚಿಸಿದನು. ವೇದ ವೇದಾಂಗಗಳನ್ನು ತಿಳಿದ ಬ್ರಾಹ್ಮಣರೊಡನೆ ಸಮಾಲೋಚಿಸಿದನು. ಅನ್ಯ ಪುರುಷನಲ್ಲಿ ಅನುರಕ್ತಳಾಗಿರುವ ಅಂಬೆಯನ್ನು ತನ್ನ ತಮ್ಮನಿಗೆ ತಂದುಕೊಳ್ಳುವುದು ಅನುಚಿತವೆಂದು ತೀರ್ಮಾನಿಸಿದನು. ಅಂಬೆಯ ಇಚ್ಛೆಯಂತೆ, ಆಕೆಯನ್ನು ಸಕಲ ರಾಜ ಮರ್ಯಾದೆಗಳೊಡನೆ ಸೌಭ ದೇಶಕ್ಕೆ ಕಳುಹಿಸಿಕೊಟ್ಟನು. ಉಳಿದ ಇಬ್ಬರು ರಾಜಪುತ್ರಿಯರು ಚಕ್ರವರ್ತಿಯಾದ ವಿಚಿತ್ರವೀರ್ಯನನ್ನು ವಿವಾಹವಾಗಲು ಒಪ್ಪಿಗೆಯನ್ನಿತ್ತರು. ಶುಭ ಮುಹೂರ್ತದಲ್ಲಿ ಅಂಬಿಕೆ ಅಂಬಾಲಿಕೆಯರೊಡನೆ ವಿಚಿತ್ರವೀರ್ಯನ ವಿವಾಹವು ವಿಜೃಂಭಣೆಯಿಂದ ನೆರವೇರಿತು.


ರತಿ ಸದೃಶ ರೂಪಿನಿಂದ ಕಂಗೊಳಿಸುತ್ತಿದ್ದ ಈ ಯುವತಿಯರನ್ನು ವಿವಾಹವಾದ ನಂತರ, ವಿಚಿತ್ರವೀರ್ಯನು ಅತಿ ಕಾಮುಕನಾಗಿ ಪರಿವರ್ತನೆ ಹೊಂದಿದನು. ಮನ್ಮಥನಿಗೆ ಎಣೆಯಾದ ಸೌಂದರ್ಯ, ಶಕ್ತಿ ಪರಾಕ್ರಮ, ಅಧಿಕಾರಗಳಿಂದ ಕಂಗೊಳಿಸುತ್ತಿದ್ದ ವಿಚಿತ್ರವೀರ್ಯನನ್ನು ವಿವಾಹವಾದ ಅಂಬಿಕೆ, ಅಂಬಾಲಿಕೆಯರೂ ಹೃಷ್ಟಮಾನಸರಾದರು. ಸುಖಮಯವಾದ ಈ ಸಂಸಾರವು ಅನೇಕ ವರ್ಷಗಳ ಕಾಲ ನಿರಂತರವಾಗಿ ಸಾಗಿತು. ರಾಜ್ಯಾಡಳಿತವು ಸಂಪೂರ್ಣವಾಗಿ ಭೀಷ್ಮನ ಹೆಗಲೇರಿತು. ವಿಚಿತ್ರವೀರ್ಯನು ರಾಣಿವಾಸದಿಂದ ಹೊರಬರುವುದೇ ಅಪರೂಪವಾಯಿತು. ಈ ಅತಿಯಾದ ಕಾಮದ ಪರಿಣಾಮವಾಗಿ ವಿಚಿತ್ರವೀರ್ಯನಿಗೆ ಕ್ಷಯರೋಗ ಆವರಿಸಿತು. ಎಂತಹ ದಿವ್ಯ ಔಷಧಕ್ಕೂ ಜಗ್ಗದ ಈ ರೋಗವು ಚಕ್ರವರ್ತಿಯನ್ನು ಬಲಿ ಪಡೆಯಿತು. ಆನಂದಮಯವಾಗಿದ್ದ ಸಂಸಾರವನ್ನು ಅಪಾರ ದುಃಖಕ್ಕೆ ಈಡು ಮಾಡಿ, ವಿಚಿತ್ರವೀರ್ಯನು ಅಂತಕನ ಆಲಯವನ್ನು ಸೇರಿಕೊಂಡನು.


ರಾಜ ಪರಿವಾರದ ಶೋಕ ಮೇರೆ ಮೀರಿತು. ಇಂತಹ ದುಃಖದ ನಡುವೆಯೇ ಭೀಷ್ಮನು ಋತ್ವಿಜರ ಮಾರ್ಗದರ್ಶನದಲ್ಲಿ ವಿಚಿತ್ರವೀರ್ಯನ ಅಂತ್ಯಕ್ರಿಯೆಗಳನ್ನು ನೆರವೇರಿಸಿದನು. ಪುತ್ರ ವಿಯೋಗದಿಂದ ಅಪಾರ ದುಃಖವನ್ನು ತಾಳಿದ್ದರೂ, ಸತ್ಯವತಿಯು ಅಂಬಿಕೆ ಅಂಬಾಲಿಕೆಯರಿಗೆ ಸಾಂತ್ವನ ಹೇಳಿದಳು. ಆದರೆ, ಸಂತಾನವಿಲ್ಲದೇ ವಿಚಿತ್ರವೀರ್ಯನು ಮರಣ ಹೊಂದಿದ್ದರಿಂದ, ಕುರುವಂಶದ ದೀಪವೇ ಆರಿಹೋಯಿತಲ್ಲಾ ಎಂಬ ಚಿಂತೆಯು ಸತ್ಯವತಿಯನ್ನು ಕಾಡುತ್ತಿತ್ತು.


ಇಂತಹ ಆಪತ್ಕಾಲದಲ್ಲಿ, ಧರ್ಮಾಧರ್ಮಗಳನ್ನು ಸಂಪೂರ್ಣವಾಗಿ ವಿವೇಚಿಸಿದ ರಾಜಮಾತೆ ಭೀಷ್ಮನನ್ನು ಬಳಿಗೆ ಕರೆದು ಹೇಳಿದಳು.

"ಮಗು, ಧರ್ಮನಿಷ್ಠನಾದ ಶಂತನುವಿಗೆ ಪಿಂಡಪ್ರದಾನ, ಕೀರ್ತಿ ಮತ್ತು ಈ ಚಂದ್ರವಂಶದ ಬೆಳವಣಿಗೆ ನಿನ್ನನ್ನೇ ಅವಲಂಬಿಸಿದೆ. ಶುಕ್ರ, ಬೃಹಸ್ಪತಿಗಳಿಗೆ ಸಮನಾದ ಜ್ಞಾನವನ್ನು ಹೊಂದಿರುವ ನಿನ್ನನ್ನು ನಾನು ಕೇಳುವುದೇನೆಂದರೆ, ಪತಿಯನ್ನು ಕಳೆದುಕೊಂಡು ದುಃಖಿತರಾಗಿರುವ ಅಂಬಿಕೆ ಅಂಬಾಲಿಕೆಯರಿಗೆ ಪುತ್ರ ಪ್ರಾಪ್ತಿಯಾಗುವ ಅವಶ್ಯಕತೆ ಇದೆ. ನಮ್ಮ ಚಂದ್ರವಂಶ ಮುಂದುವರೆಯಲು ಇದು ಅವಶ್ಯಕ ತಾನೇ? ಆದ್ದರಿಂದ ನಿನ್ನ ಮೂಲಕ ಈ ಇಬ್ಬರು ನನ್ನ ಸೊಸೆಯಂದಿರಲ್ಲಿ ಮೊಮ್ಮಕ್ಕಳನ್ನು ಕಾಣುವುದಕ್ಕೆ ಇಚ್ಛಿಸುತ್ತೇನೆ. ಅಷ್ಟು ಮಾತ್ರವಲ್ಲದೆ ಸಿಂಹಾಸನದಲ್ಲಿ ಕುಳಿತು ಈ ಸಾಮ್ರಾಜ್ಯವನ್ನು ಮುನ್ನಡೆಸುವ ಹೊಣೆಗಾರಿಕೆಯೂ ನಿನ್ನದೇ. ಮುಂದೆ ಕನ್ಯೆಯೊಬ್ಬಳನ್ನು ವಿವಾಹ ಮಾಡಿಕೊಳ್ಳಬೇಕು ನೀನು ಎಂಬುದೂ ನನ್ನ ಅಭಿಲಾಷೆಯಾಗಿದೆ. ನೀನು ಹೀಗೆ ಮಾಡದಿದ್ದರೆ, ಭರತ ವಂಶದ ಪೂರ್ವಜರು ವಂಶ ವಿನಾಶದಿಂದ ಪಿಂಡೋದಕಾದಿಗಳನ್ನು ನೀಡುವವರಿಲ್ಲದೆ ನರಕದಲ್ಲಿ ಬೀಳುವರು. ಆದ್ದರಿಂದ ನನ್ನ ಮಾತನ್ನು ನಡೆಸಿಕೊಡು ಮಗು".


ಸತ್ಯವತಿಯ ಮಾತನ್ನು ಎಲ್ಲಾ ಸುಹೃದರೂ ಅನುಮೋದಿಸಿದರು. ಈ ಎಲ್ಲಾ ಮಾತುಗಳನ್ನೂ ಆಲಿಸಿದ ಭೀಷ್ಮನು, ಗಂಭೀರವಾದ ಮತ್ತು ಅಸ್ಖಲಿತ ವಾಣಿಯಿಂದ ತಾಯಿಗೆ ಉತ್ತರಿಸಿದನು "ಅಮ್ಮಾ, ನಿನ್ನ ವಿವಾಹದ ಸಮಯದಲ್ಲಿ ನಾನು ಮಾಡಿದ ಪ್ರತಿಜ್ಞೆ ನಿನಗೆ ತಿಳಿದೇ ಇದೆ. ನಿನ್ನ ಸಂಬಂಧವಾದ ಕನ್ಯಾಶುಲ್ಕಕ್ಕಾಗಿ ನನ್ನ ಜೀವನವನ್ನೇ ಬ್ರಹ್ಮಚರ್ಯದಲ್ಲಿ ಕಳೆಯುವೆನೆಂದೆನಲ್ಲದೇ, ಸಿಂಹಾಸನವನ್ನು ಏರುವುದಿಲ್ಲ ಎಂದೂ ಪ್ರತಿಜ್ಞೆ ಗೈದೆನಲ್ಲವೇ? ಆ ಪ್ರತಿಜ್ಞಾ ವಾಕ್ಯಗಳಿಗೆ ನಾನು ಇಂದಿಗೂ ಬದ್ಧನಾಗಿದ್ದೇನೆ. ಯಾವ ಸ್ಥಾನ ಮಾನವನ್ನಾದರೂ ತ್ಯಜಿಸಿಯೇನು, ಸತ್ಯ ಚ್ಯುತನೆಂದಿಗೂ ಆಗಲಾರೆ. ಪಂಚಭೂತಗಳೇ ತಮ್ಮ ಗುಣಗಳನ್ನು ತ್ಯಜಿಸಿದರೂ ಸರಿಯೇ, ಚಂದ್ರನು ಶೀತ ರಶ್ಮಿಯಾಗದಿದ್ದರೂ, ತ್ರೈಲೋಕ್ಯಾಧಿಪತಿಯಾದ ಇಂದ್ರನು ಬಲಹೀನನಾದರೂ, ಯಮಧರ್ಮನು ನ್ಯಾಯ ನಿರ್ಣಯದಲ್ಲಿ ಪಕ್ಷಪಾತಿಯಾದರೂ ಈ ಭೀಷ್ಮನು ಸತ್ಯಚ್ಯುತನಾಗಲಾರನು" ಎಂದು ಸತ್ಯವತಿಯ ಮಾತುಗಳನ್ನು ನಿರಾಕರಿಸಿದನು. ಮುಂದುವರಿದು, "ರಾಜಮಾತೆ, ಆಪತ್ಕಾಲ ಒದಗಿರುವುದರಿಂದ ಭ್ರಾಂತಳಂತೆ ವರ್ತಿಸಬೇಡ. ಧರ್ಮವನ್ನು ಮೀರಿ ನಡೆಯುವಂತೆ ನನ್ನನ್ನು ಒತ್ತಾಯಿಸಬೇಡ. ನಮ್ಮ ಸತ್ಯದ, ನಮ್ಮ ಸತ್ವದ ಪರೀಕ್ಷೆಯಾಗುವುದೇ ಆಪತ್ಕಾಲದಲ್ಲಿ" ಎಂದುತ್ತರಿಸಿದನು.


ಭರತ ಕುಲದ ಉಳಿವಿಗಾಗಿ, ಬೆಳೆಯುವುದಕ್ಕಾಗಿ ಹಿಂದೆ ಅನೇಕ ಕ್ಷತ್ರಿಯ ರಾಜರು ಅನುಸರಿಸಿದ್ದ ಮಾರ್ಗವೊಂದನ್ನು ಭೀಷ್ಮನು ಸೂಚಿಸಿದನು. ಆಪದ್ಧರ್ಮವನ್ನು ಕೂಲಂಕಷವಾಗಿ ತಿಳಿದ ಪುರೋಹಿತರೊಡನೆ ಸಮಾಲೋಚಿಸಿ, ಆ ಮಾರ್ಗವನ್ನೇ ದೃಢೀಕರಿಸಿದನು. ಅದೇನೆಂದರೆ, ಜಿತೇಂದ್ರಿಯರಾದ ಬ್ರಾಹ್ಮಣರ ಅನುಗ್ರಹದಿಂದ ಪರಮಧರ್ಮಜ್ಞರೂ, ವೀರ್ಯವಂತರೂ, ಮಹಾಬಲರೂ ಆದ ಸಂತಾನವನ್ನು ಪಡೆಯುವುದು.


ಪುನರ್ಭರತ ವಂಶಸ್ಯ ಹೀತುಂ ಸಂತಾನವೃದ್ಧಯೇ| ವಾಕ್ಷ್ಯಾಮಿ ನಿಯತಂ ಮಾತಸ್ತನ್ಮೇ ನಿಗದತಃ ಶೃಣು || ಬ್ರಾಹ್ಮಣೋ ಗುಣವಾನ್ಕಶ್ಚಿದ್ದನೇನೋಪನಿಯನ್ತ್ರ್ಯತಾಮ್| ವಿಚಿತ್ರವೀರ್ಯ ಕ್ಷೇತ್ರೇಷು ಯಃ ಸಮುತ್ಸಾದಯೇತ್ ಪ್ರಜಾಃ||

"ಅಮ್ಮಾ, ಭರತವಂಶದ ಸಂತಾನವು ಅಭಿವೃದ್ಧಿ ಹೊಂದಲು, ಶ್ರೋತ್ರೀಯನೂ ಧರ್ಮನಿಷ್ಠನೂ ಆದ ವಿಪ್ರನೋರ್ವನನ್ನು ಕರೆದು ಅವನಿಗೆ ಯಥೇಚ್ಛವಾಗಿ ಧನವನ್ನು ಕೊಟ್ಟು, ಅವನ ಮೂಲಕವಾಗಿ ವಿಚಿತ್ರವೀರ್ಯನ ಭಾರ್ಯೆಯರಲ್ಲಿ ಸಂತಾನವನ್ನು ಪಡೆಯಬಹುದು" ಎಂಬುದಾಗಿ ಭೀಷ್ಮನು ವಿವರಿಸಿದನು.


ಈ ವಿಚಾರಗಳಿಗೆ ಸತ್ಯವತಿಯೂ, ಸುಹೃದರೂ ಸಮ್ಮತಿಸಿದರು.

Comments


bottom of page