ದೃತರಾಷ್ಟ್ರ, ಪಾಂಡು ಮತ್ತು ವಿದುರರ ಜನನ (ಮಹಾಭಾರತ ಕಥಾಮಾಲೆ 11)
- Arunkumar Bhat

- Aug 19
- 2 min read
ಸತ್ಯವತಿಯು ಹರಸಾಹಸ ಪಟ್ಟು ಅಂಬಿಕೆಯನ್ನು ನಿಯೋಗಕ್ಕೆ ಒಪ್ಪಿಸಿ, ಋತುಸ್ನಾತೆಯಾಗಿದ್ದ ಅವಳನ್ನು ಸರ್ವಾಲಂಕಾರಗಳಿಂದ ಶೃಂಗರಿಸಿ ಶಯನ ಮಂದಿರಕ್ಕೆ ಕರೆದೊಯ್ದು, ಅವಳಿಗೆ ಹಿತೋಕ್ತಿಗಳನ್ನು ಹೇಳಿದಳು. ವ್ಯಾಸರು ಪುತ್ರ ರತ್ನವನ್ನು ಕರುಣಿಸುವ ಕುರಿತಾಗಿ ಅಂಬಿಕೆಗೆ ತಿಳಿಸಿದ ಸತ್ಯವತಿಯು ಶಯನ ಮಂದಿರದಿಂದ ಹೊರಟು ಹೋದಳು.
ಹೇಗೋ ಧೈರ್ಯವನ್ನು ತಂದುಕೊಂಡ ಅಂಬಿಕೆಯು, ಅದುವರೆಗೂ ನೋಡಿರದ ವ್ಯಾಸರ ನಿರೀಕ್ಷೆಯಲ್ಲಿ ಕಾಯುತ್ತಾ ಕುಳಿತಳು. ದೀಪವು ಪ್ರಜ್ವಲಿಸುತ್ತಲಿತ್ತು. ತಪೋಧನರಾದ ವ್ಯಾಸ ಮಹರ್ಷಿಗಳು ಶಯನ ಮಂದಿರವನ್ನು ಪ್ರವೇಶ ಮಾಡಿದರು ಅವರ ಜಟೆ, ವಲ್ಕಲ, ಕಪ್ಪಾದ ಶರೀರ, ಗಡ್ಡ-ಮೀಸೆಗಳನ್ನು ನೋಡಿದೊಡನೆ, ಅಂಬಿಕೆಯು ಭಯದಿಂದ ಕಣ್ಣುಗಳನ್ನು ಮುಚ್ಚಿಕೊಂಡುಬಿಟ್ಟಳು. ವ್ಯಾಸರು ತಾಯಿಗಿತ್ತ ಮಾತಿನಂತೆ ಪುತ್ರನನ್ನು ಅನುಗ್ರಹಿಸಿ ಹೊರಬಂದರು.

ಹೊರ ಬರುತ್ತಿದ್ದಂತೆಯೇ ಅಲ್ಲಿಯೇ ಕಾಯುತ್ತಿದ್ದ ಸತ್ಯವತಿಯು "ಮಗನೇ, ರಾಜಲಕ್ಷಣ ಹೊಂದಿದ ಕುಮಾರನ ಜನನವಾಗುವುದೆ?" ಎಂದು ಪ್ರಶ್ನಿಸಿದಳು. "ಅಮ್ಮ! ದಶಹಸ್ರ ಗಜತ್ರಾಣಿಯಾದ ಮೇಧಾ ಶಕ್ತಿಯುಳ್ಳವನಾದ ಪುತ್ರನು ಜನಿಸುವನು. ಅವನಿಂದ ಕುರುವಂಶದ ಅಭಿವೃದ್ಧಿಯು ಆಗುವುದು. ಆದರೆ ಆತನ ತಾಯಿಯು ಮಾಡಿದ ಪ್ರಮಾದದಿಂದಾಗಿ ಮಗುವು ಕುರುಡಾಗಿರುವುದು." ಎಂದು ಉತ್ತರಿಸಿದರು.
ಇದರಿಂದ ಸಂಕಟಕ್ಕೀಡಾದ ಸತ್ಯವತಿಯು " ಕುರುಡನು ಸಿಂಹಾಸನಕ್ಕೆ ಯೋಗ್ಯನಾಗಲಾರ, ಅವನು ಹೇಗೆ ತಾನೇ ಪ್ರಜೆಗಳನ್ನು ಪಾಲಿಸಲು ಸಮರ್ಥನಾದಾನು? ತಪೋಧನನೇ! ನೀನು ಜ್ಞಾತಿಕುಲ ರಕ್ಷಕನಾದ, ಪಿತೃವಂಶವರ್ಧಕನಾದ, ಕುರುಸಿಂಹಾಸನಕ್ಕೆ ಯೋಗ್ಯನಾದ ಮತ್ತೊಬ್ಬ ಪುತ್ರನನ್ನು ದಯಮಾಡಿ ಅನುಗ್ರಹಿಸು." ಎಂಬುದಾಗಿ ವ್ಯಾಸರನ್ನು ಅಂಗಲಾಚಿದಳು. ತಾಯಿಯ ಮಾತಿಗೆ ವ್ಯಾಸರು ಸಮ್ಮತಿಸಿದರು. ಕೆಲ ದಿನಗಳ ನಂತರ ಅಂಬಿಕೆಯು ನಿರೀಕ್ಷೆಯಂತೆಯೇ ಕುರುಡು ಮಗನನ್ನು ಪ್ರಸವಿಸಿಧಳು. ದೃತರಾಷ್ಟ್ರನೆಂಬ ಹೆಸರಿನಿಂದ ಈತನು ಪ್ರಸಿದ್ಧನಾದನು.
ಮಗು ಕುರುಡಾಗಿದ್ದರಿಂದ ಈ ಮೊದಲೇ ನಿಶ್ಚಯಿಸಿದಂತೆ ಎರಡನೇ ಪುತ್ರನನ್ನು ಪಡೆಯಲು ಸತ್ಯವತಿಯು ವಿಚಿತ್ರವೀರ್ಯನ ಕಿರಿಯ ರಾಣಿಯಾದ ಅಂಬಾಲಿಕೆಯನ್ನು ಮನವೊಲಿಸಿದಳು. ಸತ್ಯವತಿಯ ಮಾತುಗಳಿಗೆ ಮಣಿದ ಅಂಬಾಲಿಕೆಯು ಶಯನ ಮಂದಿರದಲ್ಲಿ ಸರ್ವಾಲಂಕ್ರತಳಾಗಿ ವ್ಯಾಸರಿಗಾಗಿ ಕಾಯುತ್ತಾ ಕುಳಿತಳು. ತಾಯಿಗಿತ್ತ ಮಾತಿಗನುಸಾರವಾಗಿ ಆಗಮಿಸಿದ ವ್ಯಾಸರು ಶಯನ ಮಂದಿರ ಪ್ರವೇಶಿಸಿದರು. ಅವರನ್ನು ನೋಡುತ್ತಲೇ ಅಂಬಾಲಿಕೆಯು ಭಯದಿಂದ ಬಿಳುಚಿಕೊಂಡಳು. ಆದರೆ ತನ್ನ ಅಕ್ಕನಂತೆ ಕಣ್ಣುಗಳನ್ನು ಮುಚ್ಚಲಿಲ್ಲ ಹೀಗಿದ್ದ ಅಂಬಾಲಿಕೆಗೆ ಪುತ್ರನನ್ನು ಕರುಣಿಸಿದ ವ್ಯಾಸರು ಅವಳಲ್ಲಿ ಹೇಳಿದರು ಯಾಸ್ಮಾತ್ ಪಾಂಡತ್ವಮಾಪನ್ನ ವಿರೂಪಂ ಪ್ರೇಕ್ಷ ಮಾಮಿಹ, ತಸ್ಮಾದೇವ ಸುತಸ್ರೇವೈ ಪಾಂಡುಕೀನ ಭವಿಷ್ಯತಿ, ನಾಮ ಚಾಸ್ಯೇತದೇವೆಹ ಭವಿಷ್ಯತಿ ಶುಭಾನನೇ. "ಶುಭಾನನೆ, ನನ್ನ ವಿರೂಪವನ್ನು ನೋಡಿ ನೀನು ಭಯದಿಂದ ಬೆಳುಚಿಕೊಂಡೆ ನನ್ನ ಶರೀರವು ಪಾಂಡುರವಾಗಿ ವಿವರ್ಣವಾಯಿತು. ಪರಿಣಾಮವಾಗಿ ನಿನ್ನಲ್ಲಿ ಹುಟ್ಟುವ ಮಗುವೂ ಪಾಂಡುರವಾಗಿರುತ್ತದೆ. ಪಾಂಡುವೆಂಬ ನಾಮಧೇಯದಿಂದಲೇ ಪ್ರಸಿದ್ಧನಾಗುತ್ತಾನೆ." ಎಂದು ಹೇಳಿ ಶಯನ ಮಂದಿರದಿಂದ ಹೊರಬಂದರು ಹೊರಗೆ ಕುಳಿತು ಕಾಯುತ್ತಿದ್ದ ಸತ್ಯವತಿಯಲ್ಲಿಯೂ ಇದೇ ವಿಚಾರ ತಿಳಿಸಿದರು. ಆದರೂ ಈ ಮಗು ಸಿಂಹಾಸನಕ್ಕೆ ಮಧ್ರಮಾಹರ್ತೇ ಹೊಂದಿರುತ್ತದೆ ಎಂಬುದನ್ನು ತಿಳಿಸಿದರು.
ಇದರಿಂದ ಪೂರ್ಣ ಸಮಾಧಾನ ತಾಳದೆ ತೊಳಲಾಡುತ್ತ ಸತ್ಯವತಿಯು, ಇನ್ನೊಂದು ಮಗುವನ್ನು ಅನುಗ್ರಹಿಸುವಂತೆ ವ್ಯಾಸರನ್ನು ಪ್ರಾರ್ಥಿಸಿದಳು. ತಾಯಿಗಾಗಿ ಮನದಲ್ಲೇ ಮರುಗಿದ ವ್ಯಾಸರು 'ಅಸ್ತು' ಎಂದು ಹೇಳಿ ಹೊರಟುಹೋದರು. ನವಮಾಸಗಳ ಕಾಯುವಿಕೆಯ ನಂತರ ಅಂಬಾಲಿಕೆಯು ಸರ್ವಲಕ್ಷಣ ಸಂಪನ್ನತೆಯಿಂದ ಕೂಡಿದ ಪುತ್ರರತ್ನವನ್ನು ಪ್ರಸವಿಸಿದಳು. ಆದರೆ ವ್ಯಾಸರು ಹೇಳಿದಂತೆ ಮಗುವಿನ ಶರೀರವೆಲ್ಲವೂ ಬಿಳುಪಾಗಿತ್ತು. ಆ ಶಿಶುವನ್ನು ಪಾಂಡುವೆಂದು ಎಲ್ಲರೂ ಕರೆದರು. ಮುಂದೆ ಈ ಪಾಂಡುವೆ ತ್ರಿಲೋಕವಂದ್ಯರಾದ ಪಾಂಡವರ ತಂದೆ ಎನಿಸಿದನು.
ಸತ್ಯವತಿಯು ಈ ಮೊದಲೇ ನಿರ್ಣಯಿಸಿದಂತೆ, ಸರ್ವಲಕ್ಷಣಗಳಿಂದ ಕೂಡಿದ ನ್ಯೂನಾತೀರೇಖಗಳಲ್ಲಿದ ಶಿಶುವನ್ನು ಪಡೆಯಲು ಮುಂದಾದಳು. ಋತುಸ್ನಾತೆಯಾಗಿದ್ದ ಅಂಬಿಕೆಯ ಬಳಿ ತೆರಳಿ ವ್ಯಾಸರೊಡನೆ ಇನ್ನೊಮ್ಮೆ ಸಮಾಗಮ ಮಾಡಲು, ಅವಳನ್ನು ಬಹು ಕಷ್ಟದಿಂದ ಒಪ್ಪಿಸಿದಳು. ಅಂಬಿಕೆಯೂ ರಾಜಮಾತೆಯ ಮಾತಿಗೆ ಕಟ್ಟು ಬಿದ್ದು ಒಪ್ಪಿದರು. ಆಕೆಯ ಹೃದಯವು ವ್ಯಾಸರನ್ನು ನೆನೆದೊಡನೆ ಭಯದಿಂದ ಕಂಪಿಸಲು ಪ್ರಾರಂಭಿಸಿತು. ತಾನು ವ್ಯಾಸರೊಡನೆ ಸಮಾಗಮ ಹೊಂದಲು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿದ ಅವಳು, ತನ್ನೊಡನೆ ಇರುತ್ತಿದ್ದ ಚೇಟಿಗೆ ತನ್ನ ಆಭರಣಗಳಿಂದ ಶೃಂಗರಿಸಿ, ಮಹರ್ಷಿಗಳು ಬರುವ ಸೂಚನೆಯನ್ನು ಕೊಟ್ಟು ಶಯನ ಮಂದಿರಕ್ಕೆ ಚೇಟಿಯನ್ನು ಕಳುಹಿಸಿದಳು. ತಾಯಿಯ ಕರೆಗೆ ಓಗೊಟ್ಟು ಆಗಮಿಸಿದ ವ್ಯಾಸರು ಶಯನ ಮಂದಿರವನ್ನು ಪ್ರವೇಶಿಸಿದರು. ಅವರ ಭಯಂಕರ ರೂಪವನ್ನು ನೋಡಿದ ಚೇಟಿಯು ಸ್ವಲ್ಪವೂ ಭಯಗೊಳ್ಳಲಿಲ್ಲ. ಮುಗುಳ್ನಗೆಯಿಂದ ಅವರನ್ನು ಸ್ವಾಗತಿಸಿ, ಸೇವೆ-ಪೂಜಾದಿಯಗಳಿಂದ ಸತ್ಕರಿಸಿ, ಹಂಸತೂಲಿಕೆಯಲ್ಲಿ ಕುಳ್ಳಿರಿಸಿ, ಉಪಚರಿಸಿದಳು. ಅವಳಿಗೆ ಪುತ್ರ ರತ್ನವನ್ನು ಅನುಗ್ರಹಿಸಿ ಪ್ರಸನ್ನವದನರಾಗಿ ವ್ಯಾಸರು ಅವಳಲ್ಲಿ ಹೇಳಿದರು, "ಶುಭಾಂಗಿ, ನೀನು ಇನ್ನು ಮುಂದೆ ಚೇಟಿಯಾಗಿರುವುದಿಲ್ಲ. ನಿನ್ನಲ್ಲಿ ಜನಿಸುವ ಶಿಶುವು ಶ್ರೇಯಃ-ಪ್ರೇಯಗಳಿಂದ ಕೂಡಿರುತ್ತದೆ. ಅವನು ಮುಂದೆ ಧರ್ಮಾತ್ಮನು, ವಿದ್ವಾಂಸನು, ಮಹಾಮೇಧಾವಿಯೂ ಆಗುವನು." ಎಂದು ಹರಸಿದರು. ಆ ಮಗುವೆ ವಿದುರ ಎಂಬ ನಾಮಧೇಯ ಹೊಂದಿ ಪ್ರಸಿದ್ಧಿಯನ್ನು ಪಡೆದನು. ಅವನು ದಾಸಿ ಪುತ್ರನಾದುದರಿಂದ ರಾಜವಂಶಕ್ಕೆ ಸೇರಿರಲಿಲ್ಲ. ಆದರೆ ಕೃಷ್ಣದ್ವೈಪಯನರ ಮಗನಾಗಿ ಜನಿಸಿದ್ದರಿಂದ ಧೃತರಾಷ್ಟ್ರ ಮತ್ತು ಪಾಂಡುವಿಗೆ ಅನುಜನೆನಿಸಿದನು. ಕಾಮಕ್ರೋಧಾದಿಗಳನ್ನು ಜಯಿಸಿದವನೂ, ಧರ್ಮಾತ್ಮನು, ಸತ್ಯಸಂಧನು ಆಗಿದ್ದನು. ಕುರು ಸಾಮ್ರಾಜ್ಯದ ಮಹಾಮಂತ್ರಿಯಾಗಿ ಖ್ಯಾತನಾದನು. ಸಾಕ್ಷಾತ್ ಯಮಧರ್ಮನೇ ಮಾಂಡವ್ಯ ಮಹರ್ಷಿಯ ಶಾಪದಿಂದಾಗಿ ವಿದುರನಾಗಿ ಜನಿಸಿದನು. ಶಯನ ಮಂದಿರದಿಂದ ಹೊರ ಬಂದ ವ್ಯಾಸರು ಅಲ್ಲಿಯೇ ಕಾತರದಿಂದ ಕಾಯುತ್ತಿದ್ದ ಸತ್ಯವತಿಗೆ ರಾಜಕುಮಾರಿ ಅಂಬಿಕೆಯು ತಮ್ಮನ್ನು ಮೋಸಗೊಳಿಸಿದ ರೀತಿಯನ್ನು, ದಾಸಿಯಲ್ಲಿ ವಿದುರನ ಜನ್ಮವನ್ನು, ತಿಳಿಸಿ ಅಲ್ಲಿಂದ ಹೊರಟು ಹೋದರು.
ಈ ರೀತಿಯಲ್ಲಿ ವ್ಯಾಸರು ಮಾತೆಯ ವಾಕ್ಯ ಪರಿಪಾಲನೆ ಮಾಡಿ ಮಾತೃಋಣದಿಂದ ವಿಮುಕ್ತರಾದರು. ಈ ಪ್ರಕಾರವಾಗಿ ಕೃಷ್ಣದ್ವೈಪಾಯನರಿಂದ ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಕುರುವಂಶವರ್ಧನರಾದ ಮಕ್ಕಳು ಜನಿಸಿದರು.







Comments