ಕರ್ಣನ ಜನನ (ಮಹಾಭಾರತ ಕಥಾಮಾಲೆ 13)
- Arunkumar Bhat

- Sep 10
- 2 min read
ಯಾದವರಲ್ಲಿ ಶೂರಸೇನನೆಂಬ ಪ್ರಸಿದ್ಧನಾದ ರಾಜನಿದ್ದನು. ಅವನಿಗೆ ವಸುದೇವನೆಂಬ ಮಗನೂ, ಅಪ್ರತಿಮ ರೂಪವತಿಯಾದ 'ಪೃಥಾ' ಎಂಬ ಮಗಳೂ ಇದ್ದಳು. ಕುಂತಿಭೋಜನು ಶೂರನ ತಂದೆಯ ತಂಗಿಯ (ಸೋದರತ್ತೆಯ) ಮಗ. ಕುಂತಿಭೋಜನಿಗೂ ಶೂರನಿಗೂ ಬಾಂಧವ್ಯ ಮಾತ್ರವಲ್ಲದೇ ವಿಶೇಷವಾದ ಮೈತ್ರಿಯೂ ಬೆಳೆದಿತ್ತು. ಕುಂತಿಭೋಜನಿಗೆ ಮಕ್ಕಳಿರಲಿಲ್ಲ. ಶೂರರಾಜನು ಹಿಂದೊಮ್ಮೆ ತನ್ನ ಮೊದಲನೆಯ ಶಿಶುವನ್ನು ಕುಂತಿಭೋಜನಿಗೆ ದತ್ತಕ ಕೊಡುವುದಾಗಿ ಹೇಳಿದ್ದನು. ಮೊದಲ ಮಗುವು ಪ್ರತಿಯೊಬ್ಬರಿಗೂ ಹೆಚ್ಚಿನ ಮಮತೆಯುಳ್ಳದ್ದಾದರೂ, ಸತ್ಯ ಸಂಧನಾದ ಶೂರನು ಜನಿಸಿದ ಸುಂದರ ಸ್ತ್ರೀ ಶಿಶುವನ್ನು (ಪೃಥೆಯನ್ನು) ಕುಂತೀಭೋಜನಿಗೆ ಕೊಟ್ಟುಬಿಟ್ಟನು. ಕುಂತಿಭೋಜನು ಪೃಥೆಯನ್ನು ಆನಂದದಿಂದ ಸ್ವೀಕರಿಸಿದನು. ಆ ಮಗುವು 'ಕುಂತೀ' ಎಂದೇ ಪ್ರಸಿದ್ಧಿಯನ್ನು ಪಡೆಯಿತು.
ಶುಕ್ಲ ಪಕ್ಷದ ಚಂದ್ರಮನಂತೆ ಬೆಳೆಯುತ್ತಿದ್ದ ಕುಂತಿಯು ಸದ್ಗುಣಗಳ ಗಣಿಯೇ ಆಗಿದ್ದಳು. ಮಗಳ ಭವಿಷ್ಯವು ಉಜ್ವಲವಾಗಿರಲೆಂಬ ಕಾರಣದಿಂದ ಕುಂತೀಭೋಜನು ಅವಳನ್ನು ದೇವತೆಗಳ ಪೂಜೆಯಲ್ಲಿಯೂ ಅತಿಥಿ ಸತ್ಕಾರದಲ್ಲಿಯೂ ತೊಡಗಿಸುತ್ತಿದ್ದನು.
ಒಮ್ಮೆ ದೂರ್ವಾಸರು ಕುಂತಿಭೋಜನ ಅತಿಥಿಗಳಾಗಿ ಆಗಮಿಸಿದರು. ದೂರ್ವಾಸರು ತಮ್ಮ ಕೋಪ ತಾಪಗಳಿಗೂ ಶಾಪಾನುಗ್ರಹಗಳಿಗೂ ಹೆಸರಾದವರು. ಅವಧೂತರೆನಿಸಿದ ಅವರು ಧರ್ಮದಲ್ಲಿ ಸಂಪೂರ್ಣ ನಿಶ್ಚಯ ಜ್ಞಾನವನ್ನು ಹೊಂದಿದ್ದವರು. ಅವರನ್ನು ಸತ್ಕರಿಸಲು ಕುಂತೀಭೋಜನು ತನ್ನ ಮಗಳಾದ ಕುಂತಿಯನ್ನು ನೇಮಿಸಿದನು. ಅವಳು ಪುಟ್ಟ ಬಾಲೆಯಾದ್ದರಿಂದ, ಸತ್ಕಾರದಲ್ಲಿ ಅಲ್ಪ ಸ್ವಲ್ಪ ಲೋಪಗಳಾದರೂ ಅವರು ಸಹಿಸಿಯಾರೆಂಬುದು ಈ ನೇಮಕಕ್ಕೆ ಒಂದು ಕಾರಣವಾಗಿತ್ತು. ಕುಂತಿಯು ಬಹಳ ಶ್ರದ್ಧೆ ಭಕ್ತಿಯಿಂದ ಮಹರ್ಷಿಗಳನ್ನು ಸತ್ಕರಿಸಿ, ಅವರನ್ನು ಪ್ರಸನ್ನೀಕರಿಸಿಕೊಂಡಳು. ದೂರ್ವಾಸರು ಆಗ್ರಹಗೊಳ್ಳದಿದ್ದರೆ ಸಾಕೆಂದು ಎಣಿಸಿದವಳಿಗೆ, ಅವರ ಅನುಗ್ರಹವೇ ದೊರೆತಾಗ ಅಪಾರ ಸಂತೋಷ ಅನುಭವಿಸಿದಳು.

ತಮ್ಮ ಆಶೀರ್ವಾದದಿಂದ ಒಣ ಮರವನ್ನು ಚಿಗುರುವಂತೆ ಮಾಡುವ ಮಹಿಮಾನ್ವಿತರಾದ ಮಹರ್ಷಿಗಳು ಕುಂತಿಯಲ್ಲಿ ಪ್ರಸನ್ನಗೊಂಡು ಅವಳಿಗೆ ವರವೊಂದನ್ನು ಅನುಗ್ರಹಿಸಿದರು. ತ್ರಿಕಾಲ ಜ್ಞಾನಿಗಳಾದ ದೂರ್ವಾಸರು, ಕುಂತಿಯ ಭವಿಷ್ಯವನ್ನು ತಿಳಿದವರಾಗಿ ಅಭಿಚಾರ ಪ್ರಕ್ರಿಯೆಯಿಂದ ಕೂಡಿದ ಪುತ್ರ ಪ್ರಾಪ್ತಿಯ ಮಂತ್ರವನ್ನು ಆಕೆಗೆ ಉಪದೇಶಿಸಿದರು. ನಂತರ ಹೇಳಿದರು,
"ಯಂ ಯಂ ದೇವಂ ತ್ವಮೇತೇನ ಮಂತ್ರೇಣಾವಾಹಯಿಷ್ಯಸಿ|
ತಸ್ಯ ತಸ್ಯ ಪ್ರಸಾದೇನ ಪುತ್ರಸ್ತವ ಭವಿಷ್ಯತಿ|| "
"ಶುಭಾಂಗಿಯೇ, ನೀನು ಯಾವ ಯಾವ ದೇವನನ್ನು ಮಂತ್ರೋಚ್ಛಾರಣೆ ಮಾಡಿ ಕರೆಯುವೆಯೋ ಆಯಾ ದೇವನು ಆಗಮಿಸಿ, ನಿನಗೆ ಪುತ್ರರನ್ನು ಅನುಗ್ರಹಿಸುವನು" ಎಂದು ಹೇಳಿ ಆಶೀರ್ವದಿಸಿ ಹೊರಟು ಹೋದರು.
ಚಿಕ್ಕ ವಯಸ್ಸಿನ ಕುಂತಿಯು ದೂರ್ವಾಸರಿಂದ ವರವನ್ನು ಪಡೆದು ಯೋಚಿಸಿದಳು. 'ಈ ಮಂತ್ರದಿಂದ ನಿಜವಾಗಿಯೂ ನನಗೆ ಮಕ್ಕಳಾಗುವರೇ? ಮಹರ್ಷಿಗಳ ಮಾತು ದಿಟವೇ? ಒಮ್ಮೆ ಪರೀಕ್ಷಿಸಿಬಿಡಲೇ?
ಅವಳು ಈ ಯೋಚನೆಯೊಡನೆಯೇ ನದೀ ತೀರಕ್ಕೆ ತೆರಳಿದಳು. ದೂರ್ವಾಸರು ಉಪದೇಶಿಸಿದ ಮಂತ್ರವನ್ನು ಪುನಶ್ಚರಣೆ ಮಾಡಿದಳು. ಸೂರ್ಯದೇವನನ್ನು ಭಕ್ತಿಯಿಂದ ಆಹ್ವಾನಿಸಿದಳು.
ಅಭಿಚಾರ ಸಂಯುಕ್ತವಾದ ಆ ಮಹಾ ಮಂತ್ರದ ಶಕ್ತಿಯು ಅಪಾರವಾದುದು. ಕುಂತಿಯು ಮಂತ್ರ ಪುರಸ್ಸರವಾಗಿ ಆಹ್ವಾನಿಸಿದ ಕೂಡಲೇ ಮಂತ್ರ ನಿಬದ್ಧನಾದ ಸೂರ್ಯ ದೇವನು ಕುಂತಿಯ ಮುಂದೆ ಪ್ರತ್ಯಕ್ಷನಾದನು. ಈ ನಿರೀಕ್ಷೆಯನ್ನೇ ಹೊಂದಿರದ ಕುಂತಿಯು ಚಕಿತಳಾಗಿ ನಿಂತಳು. ಸೂರ್ಯದೇವನು ತನ್ನ ತಾಪವನ್ನು ಅಡಗಿಸಿಕೊಂಡು ಮಂದಸ್ಮಿತನಾಗಿ ಕುಂತಿಯನ್ನು ಕುರಿತು ಹೇಳಿದನು.
"ಶುಭಾಂಗಿ, ದೂರ್ವಾಸ ಮಹರ್ಷಿಗಳು ನಿನಗೆ ಉಪದೇಶಿಸಿದ ಈ ಮಹಾಮಂತ್ರದ ವಿಷಯ ನನಗೆ ತಿಳಿದಿದೆ. ಪುತ್ರ ಪ್ರಾಪ್ತಿಯ ಉದ್ದೇಶ ದಿಂದ ನಿನಗೆ ಬೋಧಿಸಲ್ಪಟ್ಟ ಈ ಮಂತ್ರಕ್ಕೆ ನಿಬದ್ಧನಾದ ನಾನು, ಈಗ ನಿನಗೆ ಪುತ್ರನೋರ್ವನನ್ನು ಅನುಗ್ರಹ ಮಾಡಬೇಕಿದೆ. ನನ್ನೊಡನೆ ಕ್ಷಣಕಾಲ ಸಮಾಗಮ ಹೊಂದಿ ಪುತ್ರನನ್ನು ಪಡೆ" ಎಂದನು.
ಮೊದಲೇ ಗಾಬರಿಯಾಗಿದ್ದ ಕುಂತಿಯು ಸೂರ್ಯನ ಮಾತುಗಳನ್ನು ಕೇಳಿ ಇನ್ನಷ್ಟು ಭಯಗೊಂಡಳು, "ಸೂರ್ಯದೇವ, ದೂರ್ವಾಸರು ನನಗಿತ್ತ ಈ ಮಂತ್ರದ ಪರೀಕ್ಷೆಗಾಗಿ ಮಾತ್ರ ನಾನು ನಿನ್ನನ್ನು ಕರೆದೆ. ಇನ್ನೂ ಕನ್ಯಾವಸ್ಥೆಯಲ್ಲಿರುವ ನನಗೆ ಈಗ ಪುತ್ರನ ಅಗತ್ಯತೆ ಇಲ್ಲ. ಕೇವಲ ಚಾಪಲ್ಯದಿಂದ ನಿನ್ನನ್ನು ಆಹ್ವಾನಿಸಿದ ನನ್ನ ಅಪರಾಧವನ್ನು ಕ್ಷಮಿಸು. ನೀನು ಇಲ್ಲಿಂದ ಮರಳಿ ಹೋಗು" ಎಂಬುದಾಗಿ ಪ್ರಾರ್ಥಿಸಿದಳು. ಕನ್ಯಾವಸ್ಥೆಯಲ್ಲಿಯೇ ಪುತ್ರನನ್ನು ಪಡೆದರೆ ಲೋಕಾಪವಾದವು ಉಂಟಾದೀತೆಂದು ಅವಳು ತನ್ನ ಅಳಲನ್ನು ಸೂರ್ಯನ ಬಳಿ ತೋಡಿಕೊಂಡಳು. ಆದರೆ ಸೂರ್ಯನು ಈ ಮಾತುಗಳನ್ನು ಒಪ್ಪಲಿಲ್ಲ. ದೂರ್ವಾಸರ ಮಂತ್ರವು ವ್ಯರ್ಥವಾದರೆ, ಅದರಿಂದ ಮಹಾ ದೋಷವು ಸಂಭವಿಸಬಹುದೆಂದು ಹೇಳಿದನು. ಅಲ್ಲದೆ ಈ ಪುತ್ರ ಪ್ರಾಪ್ತಿಯ ನಂತರವೂ ಕುಂತಿಯು ಕನ್ಯೆಯಾಗಿಯೇ ಉಳಿಯುವಂತೆ ವರವನ್ನು ಅನುಗ್ರಹಿಸಿದನು. ಕುಂತಿ ಸೂರ್ಯನ ಸಮಾಗಮದ ಫಲವಾಗಿ ಒಡನೆಯೇ ಕರ್ಣಕುಂಡಲಗಳಿಂದಲೂ, ಕವಚದಿಂದಲೂ ಪರಿಶೋಭಿಸುತ್ತಿದ್ದ ಸರ್ವಾಂಗ ಸುಂದರವಾದ ಶಿಶುವು ಜನಿಸಿತು. ಶಿಶುವಿನ ಜನನದ ನಂತರ ಸೂರ್ಯನು ಕುಂತಿಗೆ ಮೊದಲಿನಂತೆಯೇ ಕನ್ಯಾವಸ್ಥೆಯನ್ನು ಅನುಗ್ರಹಿಸಿ ಅಂತರ್ಧಾನನಾದನು.
ಮುಂದೆ ಕರ್ಣ ಎಂಬ ನಾಮಧೇಯದಿಂದ ಖ್ಯಾತನಾದ ಈ ಮಗುವನ್ನು ಕೈಯಲ್ಲಿ ಹಿಡಿದ ಕುಂತಿಯು ದೈನ್ಯದಿಂದ ಚಿಂತಿಸಿದಳು. ತನ್ನ ಚಾರಿತ್ರ್ಯವು ಹನನವಾದೀತೆಂದು ಚಿಂತಿಸಿದ ಆಕೆಯು ಲೋಕಾಪವಾದಕ್ಕೆ ಅಂಜಿ ಈ ಮಗುವನ್ನು ಪೆಟ್ಟಿಗೆಯೊಂದರಲ್ಲಿ ಇರಿಸಿ, ಅದರ ಜೊತೆಗೆ ತನ್ನ ಆಭರಣಗಳನ್ನು ಇರಿಸಿ, ನದಿಯಲ್ಲಿ ತೇಲಿ ಬಿಟ್ಟಳು.







Nice!!