ಕರ್ಣನ ಕಥನ - ಪಾಂಡುವಿನ ವಿವಾಹ (ಮಹಾಭಾರತ ಕಥಾಮಾಲೆ 14)
- Arunkumar Bhat

- Sep 16
- 2 min read
ಪುಟ್ಟ ಮಗು ಕರ್ಣನನ್ನು ಹೊತ್ತ ಪೆಟ್ಟಿಗೆಯು ನದಿಯಲ್ಲಿ ತೇಲುತ್ತಾ, ಯಮುನಾ ನದಿಯನ್ನು ತಲುಪಿತು. ಅಲ್ಲಿಂದಲೂ ಮುಂದುವರಿದು ಗಂಗಾ ನದಿಯನ್ನು ತಲುಪಿತು. ಗಂಗಾ ನದಿಯಲ್ಲಿ ತೇಲುತ್ತಾ ಸಾಗುತ್ತಿದ್ದ ಈ ಪೆಟ್ಟಿಗೆಯನ್ನು, ಸೂತನಾಯಕನಾದ 'ಅಧಿರಥ' ನೆಂಬುವನು ಅದನ್ನು ತೆರೆದು ನೋಡಲಾಗಿ, ಅಪಾರ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಶಿಶುವನ್ನು ಕಂಡು ಹೃಷ್ಟಮಾನಸನಾದನು. ಆ ಮಗುವನ್ನು ತನ್ನ ಮನೆಗೆ ತಂದು, ತನ್ನ ಪತ್ನಿಯಾದ 'ರಾಧೆ'ಯ ಕೈಗಿತ್ತನು. ಬಹುಕಾಲದಿಂದ ಮಕ್ಕಳಿಲ್ಲದೆ ಪರಿತಪಿಸುತ್ತಿದ್ದ ರಾಧೆಯು ಗಂಗೆಯಲ್ಲಿ ಸಿಕ್ಕಿದ, ಈ ಸೂರ್ಯ ತೇಜದಿಂದ ಹೊಳೆಯುತ್ತಿದ್ದ ಮಗುವನ್ನು ನೋಡಿ ಅಪಾರವಾಗಿ ಹರ್ಷಿಸಿದಳು. ಹೀಗೆ ಅಧಿರಥ ರಾಧೆಯರಿಬ್ಬರೂ ಈ ಮಗುವನ್ನು ದೇವತೆಗಳೇ ತಮಗೆ ಅನುಗ್ರಹಿಸಿದ್ದಾರೆಂದು ಭಾವಿಸಿ, ತಮ್ಮದೇ ಮಗುವೆಂಬಂತೆ ಪ್ರೀತಿಯಿಂದ ಸಾಕತೊಡಗಿದರು.
"ವಸುನಾ ಸಹ ಜಾತೋ ಯಂ ವಸುಷೇಣೋ ಭವಿಷ್ಯತಿ", ವಸು(ಎಂದರೆ ಸಂಪತ್ತು, ಐಶ್ವರ್ಯ)ವಿನೊಡನೆ ದೊರೆತ ಈ ಮಗುವನ್ನು "ವಸುಷೇಣ" ಎಂಬುದಾಗಿಯೇ ಕರೆದರು.
ವಸುಷೇಣನು ತನ್ನ ಸಾಕು ತಂದೆ ತಾಯಿಯ ಪ್ರೀತಿಯಲ್ಲಿ ಬೆಳೆಯುತ್ತಾ ಧನುರ್ವಿದ್ಯೆಯಲ್ಲಿ ಉನ್ನತಿಯನ್ನು ಸಾಧಿಸಿದನು. ಈ ರಾಧೇಯನು ಸೂರ್ಯನ ಪುತ್ರ ತಾನೆಂಬುದನ್ನು ತಿಳಿಯದಿದ್ದರೂ ಸ್ವಾಭಾವಿಕವಾಗಿಯೇ ನಿರಂತರವಾಗಿ ಸೂರ್ಯದೇವನ ಆರಾಧನೆಯಲ್ಲಿ ತೊಡಗುತ್ತಿದ್ದನು. ಸಂಧ್ಯಾಕಾಲದಲ್ಲಿ ಸೂರ್ಯನನ್ನು ಈತನು ಆರಾಧಿಸುತ್ತಿರುವ ವೇಳೆಯಲ್ಲಿ ಯಾರಾದರೂ ಯಾಚಕರು ಬಂದು ಕೇಳಿದರೆ, ತನ್ನಲ್ಲಿರುವ ಏನನ್ನಾದರೂ ದಾನವಾಗಿ ಕೊಟ್ಟು ಬಿಡುತ್ತಿದ್ದನು.
ಮುಂದೊಂದು ದಿನ ಯಾಚಕನಾಗಿ ಬ್ರಾಹ್ಮಣ ರೂಪಿನಿಂದ ಬಂದ ಇಂದ್ರದೇವನಿಗೆ ಕರ್ಣನು ಆತನ ಕೋರಿಕೆಯಂತೆ ತನಗೆ ಸಹಜವಾಗಿ ಬಂದ ಕವಚವನ್ನೇ ತನ್ನ ಮೈಯಿಂದ ಕತ್ತರಿಸಿ ದಾನವಾಗಿ ನೀಡಿದನು. ತನ್ನ ಶರೀರದೊಡನೆ ಸೇರಿಹೋಗಿದ್ದ, ತನಗೆ ಸಹಜವಾಗಿ ಬಂದಿದ್ದ ಈ ಕವಚವನ್ನೇ ಕತ್ತರಿಸಿ ಕೊಟ್ಟಿದ್ದರಿಂದ "ವೈಕರ್ತನ" ಎಂಬುದಾಗಿಯೂ ಪ್ರಸಿದ್ಧಿಯನ್ನು ಪಡೆದನು.
ಇತ್ತ ಕುಂತಿಯು ಪುತ್ರನಾದ ಕರ್ಣನನ್ನು ಲೋಕಾಪವಾದಕ್ಕೆ ಹೆದರಿ ನದಿಯಲ್ಲಿ ತೇಲಿ ಬಿಟ್ಟು ಅಪಾರ ವ್ಯಥೆಯಿಂದ ತನ್ನ ತಂದೆಯ ಅರಮನೆಗೆ ಮರಳಿದಳು. ಆದರೆ ತನ್ನ ಮಗುವಾದ ಕರ್ಣನನ್ನು ಆಕೆಯು ಮರೆಯಲಿಲ್ಲ. ತನ್ನ ಮಗುವಿನ ಭವಿಷ್ಯ ಏನಾಯಿತೋ ಎಂಬ ಚಿಂತೆಯು ಆಕೆಯನ್ನು ಕಾಡುತ್ತಲೇ ಇತ್ತು. ಬಾಲೆಯಾದ ಕುಂತಿಯು ಬೆಳೆದು ಯೌವನವತಿಯಾದಳು. ರೂಪ, ಯೌವನ ಗುಣಗಳಿಂದ ಸಂಪನ್ನಳಾದ ಈ ಪೃಥೆಯನ್ನು ವಿವಾಹವಾಗಲು ಅನೇಕ ರಾಜರುಗಳು ಹಾತೊರೆಯತೊಡಗಿದರು.
ಕುಂತೀಭೋಜನು ಸ್ವಯಂವರದ ಮೂಲಕ ತನ್ನ ಪುತ್ರಿಯ ವಿವಾಹ ಮಾಡಲು ನಿಶ್ಚಯಿಸಿದನು. ಸಕಲ ದೇಶದ ರಾಜಪುತ್ರರನ್ನು ಪೃಥೆಯ ಸ್ವಯಂವರಕ್ಕೆ ಆಹ್ವಾನಿಸಿದನು. ಹಸ್ತಿನಾಪುರಕ್ಕೂ ಸಹ ಆಮಂತ್ರಣ ತಲುಪಿತು. ಕುಂತಿಯ ರೂಪ ಗುಣಾತಿಶಯಗಳ ಕುರಿತಾಗಿ ಕೇಳಿ ತಿಳಿದಿದ್ದ ಭೀಷ್ಮನು, ಹಸ್ತಿನೆಯ ಚಂದ್ರವಂಶವನ್ನು ಬೆಳಗಲು ಈಕೆಯು ಸೂಕ್ತಳೆಂದು ತೀರ್ಮಾನಿಸಿದನು.

ಪಾಂಡು ರಾಜನಿಗೆ ಸೂಕ್ತಳಾದ ಕನ್ಯೆಯು ಈ ಕುಂತಿ ಎಂಬುದಾಗಿ ನಿಶ್ಚಯಿಸಿದ ಭೀಷ್ಮನು ಪಾಂಡುವನ್ನು ಆಶೀರ್ವದಿಸಿ ಸ್ವಯಂವರಕ್ಕೆ ಕಳುಹಿಸಿಕೊಟ್ಟನು. ನಿರ್ದಿಷ್ಟವಾದ ದಿನದಂದು ಈ ಮಹಾ ಸ್ವಯಂವರವು ನೆರವೇರಿತು. ಅಸಂಖ್ಯ ರಾಜಪುತ್ರರ ಮಂಡಿತವಾಗಿದ್ದ ಈ ಸ್ವಯಂವರ ಮಂಟಪವನ್ನು ಪೃಥೆಯು ಸ್ವಯಂವರ ಮಾಲಿಕೆಯನ್ನು ಹಿಡಿದು ಪ್ರವೇಶಿಸಿದಳು. ವಿಶಾಲ ವಕ್ಷನೂ, ವಿಶಾಲನೇತ್ರನೂ, ಮಹಾಬಲನು ಆದ, ಪ್ರತಿ ಪುರಂದರನಂತೆ ಈ ಸಭೆಯಲ್ಲಿ ರಾರಾಜಿಸುತ್ತಿದ್ದ ಹಸ್ತಿನೆಯ ರಾಜಪುತ್ರನಾದ ಪಾಂಡು ಚಕ್ರವರ್ತಿಯನ್ನು ಕಂಡಳು. ಪಾಂಡುವಿನ ಈ ಮನೋಹರ ರೂಪವನ್ನು ದರ್ಶಿಸಿದ ಕುಂತಿಯು ಪುಳಕಿತಗಾತ್ರಳಾದಳು. ತನ್ನ ಪತಿಯಾಗಿ ಈತನನ್ನೇ ಪಡೆಯಬೇಕೆಂದು ನಿಶ್ಚಯಿಸಿಬಿಟ್ಟಳು. ತಕ್ಷಣವೇ ಓಡಿಹೋಗಿ ಮಾಲೆಯನ್ನು ಪಾಂಡುವಿಗೆ ತೊಡಿಸಿ ಬಿಡಬೇಕೆಂಬ ಮನಸ್ಸುಂಟಾದರೂ ಹಾಗೆ ಮಾಡುವಂತಿರಲಿಲ್ಲ. ಹೊಗಳುಭಟರು ಉಳಿದ ಎಲ್ಲ ರಾಜರ ಕುರಿತಾಗಿ ಹೇಳಿದ ಮಾತುಗಳನ್ನು ನೆಪ ಮಾತ್ರಕ್ಕೆ ಕೇಳಿಸಿಕೊಂಡ ಕುಂತಿಯು, ನಂತರ ಗಾಂಭೀರ್ಯದಿಂದ ನಿಧಾನವಾಗಿ ಹೆಜ್ಜೆ ಇಡುತ್ತಾ ಪಾಂಡುವಿನ ಬಳಿಗೆ ಬಂದು, ಆತನ ಕಂಬು ಕಂಠಕ್ಕೆ ವರಮಾಲಿಕೆಯನ್ನು ತೊಡಿಸಿದಳು.
ಕುಂತಿ ಭೋಜನು ಪಾಂಡುವಿಗೆ ತನ್ನ ಪುತ್ರಿಯನ್ನು ಕೊಟ್ಟು ಯಥಾವಿಧಿಯಾಗಿ ವಿವಾಹ ಮಾಡಿದನು. ಮಗಳು ಅಳಿಯನಿಗೆ ಅಮೂಲ್ಯವಾದ ರತ್ನಾಭರಣಗಳ ಉಡುಗೊರೆ ಕೊಟ್ಟನು. ಪರಿವಾರದೊಡನೆ ಹಸ್ತಿನಾಪುರಕ್ಕೆ ಕಳುಹಿಸಿ ಕೊಟ್ಟನು.
ಬ್ರಾಹ್ಮಣರು ಸುಶ್ರಾವ್ಯ ವಾಗಿ ಆಶೀರ್ವಚನ ಮಂತ್ರಗಳನ್ನು ಪಠಿಸುತ್ತಿರಲು, ಚತುರಂಗ ಬಲದಿಂದಲೂ, ಬ್ರಾಹ್ಮಣ ಸುವಾಸಿನಿಯರಿಂದಲೂ, ಋಷಿ ಪರಿಷತ್ತಿನಿಂದಲೂ ಪುರಜನ ಪರಿಜನರಿಂದಲೂ ಒಡಗೂಡಿದವನಾದ ಪಾಂಡು ಚಕ್ರವರ್ತಿಯು, ಭಾರ್ಯೆಯಾದ ಕುಂತಿಯೊಡನೆ ಹಸ್ತಿನಾಪುರವನ್ನು ಪ್ರವೇಶಿಸಿದನು. ಹಸ್ತಿನೆಯ ರಾಜ ಪರಿವಾರದವರು ನೂತನ ವಧೂ-ವರರನ್ನು ಆದರದಿಂದ ಬರಮಾಡಿಕೊಂಡು, ಅರಮನೆಗೆ ಕರೆದೊಯ್ದರು. ಪಾಂಡುವು ಕುಂತಿಯೊಡನೆ ಸುಖದಿಂದ ಕಾಲಕಳೆಯುತ್ತಿದ್ದನು.
ಇಂತಿರಲು, ಪಾಂಡುವಿಗೆ ಇನ್ನೊಂದು ವಿವಾಹ ಮಾಡಲು ಭೀಷ್ಮನು ನಿಶ್ಚಯಿಸಿದನು. ಮದ್ರದೇಶದ ರಾಜಕುಮಾರಿ ಮಾದ್ರಿಯನ್ನು ಕುರುವಂಶಕ್ಕೆ ತರಲು ಭೀಷ್ಮನು ಬಯಸಿದನು. ರಾಜರುಗಳಿಗೆ ಬಹುಪತ್ನಿತ್ವವು ಭೂಷಣಪ್ರಾಯವೇ ಆಗಿತ್ತು. ಅಂತೆಯೇ ಭೀಷ್ಮನು ಚತುರಂಗ ಬಲ, ಪುರೋಹಿತರು, ಮಂತ್ರಿಗಳ ಒಳಗೂಡಿ ಮದ್ರಾದೇಶಕ್ಕೆ ತೆರಳಿದನು.
ಅಲ್ಲಿ ಮದ್ರ ರಾಜನು ಭೀಷ್ಮನನ್ನು ಯಥಾ ಯೋಗ್ಯವಾಗಿ ಉಪಚರಿಸಿ, ಭೀಷ್ಮನು ಕನ್ಯಾರ್ಥಿಯಾಗಿ ಬಂದ ವಿಚಾರವನ್ನು ತಿಳಿದನು. ಮದ್ರರಾಜ ಶಲ್ಯನು ಪಾಂಡುವಿಗೆ ತನ್ನ ತಂಗಿಯಾದ ಮಾದ್ರಿಯನ್ನು ವಿವಾಹ ಮಾಡಿಕೊಡಲು ತನ್ನ ಕುಲಾಚಾರದಂತೆ ಕನ್ಯಾಶುಲ್ಕವನ್ನು ಕೇಳಿದನು. ಇದಕ್ಕೆ ಸಮ್ಮತಿಸಿದ ಭೀಷ್ಮನು, ಹೇರಳವಾದ ಸುವರ್ಣ ನಾಣ್ಯಗಳನ್ನು ಸಹಸ್ರ ಸಂಖ್ಯೆಯಲ್ಲಿ ಗಜ, ರಥ, ತುರಗಗಳನ್ನು, ನವರತ್ನಗಳನ್ನೂ ಮದ್ರರಾಜನಿಗೆ ಕನ್ಯಾಶುಲ್ಕವಾಗಿ ಒಪ್ಪಿಸಿದನು.
ಇದರಿಂದ ಸಂತುಷ್ಟನಾದ ಶಲ್ಯನು ಸರ್ವಾಭರಣ ಭೂಷಿತಳಾದ ಮಾದ್ರಿಯನ್ನು ಪಾಂಡುವಿಗೆ ಕೊಟ್ಟು ವಿವಾಹವನ್ನು ನೆರವೇರಿಸಿದನು.








Comments