ಪಾಂಡುವಿಗೆ ಕಿಂದಮ ಮಹರ್ಷಿಗಳ ಶಾಪ (ಮಹಾಭಾರತ ಕಥಾಮಾಲೆ 17)
- Arunkumar Bhat

- Oct 28
- 2 min read
ಜಿಂಕೆಯ ರೂಪದಲ್ಲಿದ್ದ ಮಹರ್ಷಿ ಮತ್ತು ಪಾಂಡು ಚಕ್ರವರ್ತಿಯ ನಡುವಿನ ಚರ್ಚೆಯು ಮುಂದುವರಿಯಿತು. ಜಿಂಕೆಯ ಮಾತಿಗೆ ಪಾಂಡುವು ಮಾರ್ನುಡಿದನು, "ಮೃಗವೇ, ಶತ್ರುಗಳ ವಿಷಯದಲ್ಲಿ ನೀನು ಹೇಳಿದ ನೀತಿಯು ಅನುಸರಣೀಯವಾದರೂ, ಜಿಂಕೆಗಳ ವಿಷಯದಲ್ಲಿ ಅದು ಸರಿಯಲ್ಲ. ಏಕೆಂದರೆ, ಜಿಂಕೆಗಳು ಭಯದಿಂದ ಓಡುವಾಗಲೂ, ಕುಳಿತಿರುವಾಗಲೂ, ಹುಲ್ಲು ಮೇಯುತ್ತಿರುವಾಗಲೂ ಬೇಟೆಯಾಡಬಹುದು. ಒಂದು ವೇಳೆ ಅವುಗಳನ್ನು ಎಚ್ಚರಿಸಿದರೂ ಅವು ಭಯಗೊಂಡು ಓಡಿಯೇ ಓಡುತ್ತವೆ. ಆಗಲೇ ಅವುಗಳನ್ನು ಬೇಟೆಯಾಡಬೇಕಲ್ಲವೇ? ಶತ್ರುಗಳಂತೆ ಜಿಂಕೆಗಳು ಯುದ್ಧ ಸನ್ನದ್ಧವಾಗಿ ನಿಲ್ಲಬಹುದೇ? ಆದುದರಿಂದ ದಯಮಾಡಿ ನನ್ನನ್ನು ದೂಷಿಸದಿರು".
ಅದಕ್ಕೆ ಜಿಂಕೆಯು ಹೇಳಿತು, "ಮಹಾರಾಜ! ನೀನು ಮೃಗಗಳನ್ನು ಬೇಟೆಯಾಡುವುದಕ್ಕಾಗಿ ನಾನು ನಿನ್ನನ್ನು ದೂಷಿಸುತ್ತಿಲ್ಲ. ನನ್ನನ್ನು ಯಾತನೆಗೆ ಒಳಪಡಿಸಿದ್ದಕ್ಕಾಗಿಯೂ ನಿನ್ನನ್ನು ದೂಷಿಸುವುದಿಲ್ಲ. ಆದರೆ ನಾವಿಬ್ಬರೂ ಸುರತ ಕ್ರಿಯೆಯಿಂದ ವಿರತವಾಗುವವರೆಗಾದರೂ ತಡೆಯಬೇಕಾಗಿತ್ತಲ್ಲವೆ? ಸುರತವೆಂಬುದು ಸಕಲ ಜೀವಿಗಳಿಗೂ ಅದೆಷ್ಟು ತೃಪ್ತಿ ನೀಡುತ್ತದೆಂಬುದನ್ನು ಪ್ರಾಜ್ಞನಾದ ನೀನು ಅರಿತವನೇ ಇದ್ದೀಯೆ. ಕಾಮತೃಪ್ತಿಗಾಗಿ ನನ್ನ ಪತ್ನಿಯೊಡನೆ ನಾನು ಸೇರಿದ್ದೆನು. ನಾನು ತೃಪ್ತಿ ಹೊಂದುವ ಮೊದಲೇ ನನ್ನನ್ನು ನೀನು ಘಾತಿಸಿದೆ. ಸುರತ ಕ್ರಿಯೆಯ ಆನಂದ ಎಷ್ಟೆಂಬುದನ್ನು ಅರಿತ ನೀನು ಈ ಕ್ರೂರ ಕೃತ್ಯ ಎಸಗಿದ್ದು ಪರಮ ಘಾತಕ ಕೃತ್ಯವೇ ಸರಿ."
ಜಿಂಕೆಯು ಮುಂದುವರಿದು ಹೇಳಿತು "ನಾನು ನಿನಗಾವ ಅಪರಾಧವನ್ನು ಎಸಗಿದೆನು? ಪಾಪರಹಿತನೂ ನಿಷ್ಕಳಂಕನೂ ಆದ ನನ್ನನ್ನು ಸುರತ ಸುಖದಿಂದ ವಂಚಿತನನ್ನಾಗಿ ಮಾಡಿದೆಯಲ್ಲ! ನನ್ನ ಪಾಡಿಗೆ ನಾನು ಅರಣ್ಯದಲ್ಲಿ ಸಂತೋಷವಾಗಿ ವಾಸವಾಗಿದ್ದ ನನ್ನನ್ನು ಹಿಂಸೆಗೆ ಗುರಿ ಪಡಿಸಿದೆಯಲ್ಲ! ಆದ್ದರಿಂದ ನೀನು ಶಾಪಾರ್ಹನು".
ಪಾಂಡುವು ದುಃಖಿತನಾಗಿ, ನಿರುತ್ತರನಾಗಿ ನಿಂತಿರಲು ಜಿಂಕೆಯು ಮುಂದುವರಿಯಿತು, "ನಾನು ಕಿಂದಮನೆಂಬ ಹೆಸರನ್ನು ಹೊಂದಿದ ತಪಸ್ವಿಯು. ಮಾನವರ ಮಧ್ಯೆ ಸುರತ ಕ್ರಿಯೆಯನ್ನು ಮಾಡಲು ನಾಚಿಕೆಪಟ್ಟು, ಮೃಗ ರೂಪ ಧರಿಸಿ, ನನ್ನ ಪತ್ನಿಯೊಡನೆ ಸೇರಿದ್ದೆನು. ನಾನು ಬ್ರಾಹ್ಮಣನೆಂದು ತಿಳಿಯದೇ ನೀನು ನನ್ನನ್ನು ಘಾತಿಸಿದ್ದರಿಂದ, ನಿನಗೆ ಬ್ರಹ್ಮಹತ್ಯಾ ದೋಷ ಬರುವುದಿಲ್ಲ. ಆದರೆ, ಮೈಥುನ ಕ್ರಿಯೆಯಲ್ಲಿ ನಾನು ತೊಡಗಿದ್ದಾಗ ನನಗೆ ಸಾವು ಬರುವಂತೆ ಮಾಡಿದ್ದೀಯಾದ್ದರಿಂದ, ನಿನಗೂ ಸಹ ಇಂತಹದೇ ಸಮಯದಲ್ಲಿ ಮೃತ್ಯು ಪ್ರಾಪ್ತವಾಗಲಿ. ನೀನು ನಿನ್ನ ಪತ್ನಿಯೊಡನೆ ಸುರತ ಸುಖವನ್ನು ಅನುಭವಿಸಲು ಮುಂದಾದೆಯಾದರೆ, ಆ ಕ್ಷಣದಲ್ಲಿ ನಿನಗೆ ಮೃತ್ಯು ಪ್ರಾಪ್ತವಾಗಲಿ. ಇದು ನೀನೆಸಗಿದ ಪಾಪಕೃತ್ಯಕ್ಕೆ ನನ್ನ ಶಾಪ!!". ಇಷ್ಟು ಹೇಳಿ ತನ್ನ ನಿಜರೂಪವನ್ನು ತಾಳಿ, ಕಿಂದಮ ಮಹರ್ಷಿಯು ಮರಣ ಹೊಂದಿದನು. ಪಾಂಡುವು ಶೋಕಭರಿತನಾಗಿ ತನ್ನ ಆಶ್ರಮಕ್ಕೆ ಹಿಂದಿರುಗಿದನು.

ತನ್ನಿಂದ ಆಗಿಹೋದ ಅಕಾರ್ಯಕ್ಕಾಗಿ ಶೋಕ ತಪ್ತನಾದ ಪಾಂಡುವು, ಕಿಂದಮ ಮಹರ್ಷಿಗಳನ್ನು ಕಳೆದುಕೊಂಡದ್ದನ್ನು ತನ್ನ ಆಪ್ತ ಬಂಧುವೊಬ್ಬನನ್ನು ಕಳೆದುಕೊಂಡಂತೆ ಶೋಕಿಸಿದನು. ಮಹತ್ತರವಾದ ಕುರುವಂಶದಲ್ಲಿ ವ್ಯಾಸಾನುಗ್ರಹದಿಂದ ಜನಿಸಿಯೂ ಸಹ, ತನ್ನಿಂದಾದ ಈ ಪಾಪ ಕಾರ್ಯವನ್ನು ನೆನೆನೆನೆದು ಶೋಕಿಸಿದನು. ತನ್ನ ಪತ್ನಿಯರಾದ ಕುಂತಿ ಮಾದ್ರಿಯರಿಗೆ ತನ್ನಿಂದ ಘಟಿಸಿಹೋದ ಈ ಕೃತ್ಯದ ಕುರಿತೂ, ಅದರ ಪರಿಣಾಮವಾಗಿ ತನಗೆ ಒದಗಿದ ಶಾಪದ ಕುರಿತೂ ತಿಳಿಸಿ, ಪ್ರಲಾಪಿಸಿದನು. ಈ ಪಾಪದ ಪರಿಮಾರ್ಜನೆಗಾಗಿ, ಸಕಲ ಸುಖ ಭೋಗಗಳನ್ನೂ, ಪರಿವಾರವನ್ನೂ ತ್ಯಜಿಸಿ, ಏಕಾಕಿಯಾಗಿ ಸನ್ಯಾಸಿಯಾಗಿ ಶೇಷಾಯುಷ್ಯವನ್ನು ಕಳೆಯುವ ಇಚ್ಛೆ ವ್ಯಕ್ತಪಡಿಸಿದನು. ಭಿಕ್ಷಾನ್ನದಿಂದಲೇ ಜೀವಿಸುವ ತನ್ನ ನಿರ್ಧಾರವನ್ನು ಪತ್ನಿಯರ ಮುಂದೆ ತಿಳಿಸಿದನು.
ತಮ್ಮ ಪತಿಯ ಸಂಕಟವನ್ನು ನೋಡಿ, ಕುಂತಿ-ಮಾದ್ರಿಯರು ತಾವೂ ಸಹ ಆಗಿ ಹೋದ ಅಕಾರ್ಯಕ್ಕಾಗಿ ಮರುಗಿದರು. ಕೆಲ ಕ್ಷಣಗಳ ನಂತರ ಗದ್ಗದವಾದ ಸ್ವರದಿಂದ ಹೇಳಿದರು. "ಮಹಾರಾಜ! ಘಟಿಸಿಹೋದ ಪಾಪ ಕೃತ್ಯದ ಪರಿಮಾರ್ಜನೆಗಾಗಿ ತಪವನ್ನು ಆಚರಿಸಬೇಕೆಂಬ ತೀರ್ಮಾನ ಸರಿಯಾಗಿದೆ. ಆದರೆ, ಅದಕ್ಕಾಗಿ ಸರ್ವಸಂಗ ಪರಿತ್ಯಜಿಸಿ, ಸನ್ಯಾಸಿಯಾಗಬೇಕಾದುದಿಲ್ಲ. ಸಪತ್ನೀಕನಾಗಿದ್ದುಕೊಂಡೇ ತಪಸ್ಸನ್ನು ಆಚರಿಸಿ, ಉತ್ತಮ ಗತಿಯನ್ನು ಪಡೆಯಬಹುದು. ನಾವೂ ನಮ್ಮ ಪತಿದೇವನ ಜೊತೆ ಇದ್ದುಕೊಂಡು, ಆತನ ಕಷ್ಟದಲ್ಲೂ ಭಾಗಿಯಾಗಿದ್ದುಕೊಂಡು, ಜಿತೇಂದ್ರಿಯರಾಗಿ, ಲೋಲುಪತೆಗೆ ಒಳಗಾಗದೇ ತಪಸ್ಸನ್ನು ಆಚರಿಸಲು ಅವಕಾಶ ಮಾಡಿಕೊಡಿ" ಎಂದು ಪರಿ ಪರಿಯಾಗಿ ಪ್ರಾರ್ಥಿಸಿದರು. ಈ ಪ್ರಾರ್ಥನೆಯನ್ನು ಒಪ್ಪಿದ ಪಾಂಡುವು, ತನ್ನ ಪತ್ನಿಯರ ಜೊತೆ ಇದ್ದುಕೊಂಡೆ ತಪಸ್ಸನ್ನು ಆಚರಿಸುವ ನಿರ್ಧಾರಕ್ಕೆ ಬಂದನು. ಅಂತೆಯೇ, ತನ್ನೆಲ್ಲ ಆಭೂಷಣಗಳನ್ನೂ, ತನ್ನ ಜೊತೆ ಧನ ಕನಕಾದಿಗಳನ್ನೂ ಪರಜನರಿಗೆ ದಾನ ಮಾಡಿ, ಇಲ್ಲಿ ನಡೆದ ಘಟನಾವಳಿಗಳನ್ನು ಹಸ್ತಿನಾಪುರಕ್ಕೆ ತಿಳಿಸುವಂತೆ ಪ್ರಾರ್ಥಿಸಿ, ತನ್ನ ಜೊತೆ ಇದ್ದ ಪರಿವಾರವನ್ನು ಬೀಳ್ಗೊಟ್ಟನು. ಪತಿಗೆ ಪೂರಕವಾಗಿ ವರ್ತಿಸಿದ ಪತ್ನಿಯರೂ ಸಹ ತಮ್ಮೆಲ್ಲ ರತ್ನಾಭರಣಗಳನ್ನೂ, ರಾಜ ಪೋಷಾಕುಗಳನ್ನೂ ದಾನ ಮಾಡಿ, ತಪವನ್ನು ಗೈಯಲು ಸಿದ್ಧರಾದರು.
ಬಿಸಿಯಾದ ಕಂಬನಿಗಳನ್ನು ಸುರಿಸುತ್ತಾ, ಪಾಂಡುವಿನ ಪರಿವಾರ ಆತನನ್ನು ಅರಣ್ಯದಲ್ಲಿ ಬಿಟ್ಟು, ಹಸ್ತಿನಾಪುರಕ್ಕೆ ಮರಳಿತು. ಧೃತರಾಷ್ಟ್ರ-ಭೀಷ್ಮ- ವಿದುರರಿಗೆ ನಡೆದ ಸಂಗತಿಯನ್ನು ತಿಳಿಸಿದರು. ಪಾಂಡುವಿಗೆ ಒದಗಿದ ಸ್ಥಿತಿಗಾಗಿ ಹಸ್ತಿನಾವತಿಯ ಸಮಸ್ತರೂ ಮರುಗಿದರು.
ಇತ್ತ ಪಾಂಡುವು ತನ್ನ ಪತ್ನಿಯರ ಜೊತೆ, ಕಂದ ಮೂಲಗಳನ್ನು ಸೇವಿಸುತ್ತಾ, ನಾಗಶತ ಪರ್ವತವನ್ನು ಸೇರಿದನು. ಅನಂತರ, ಚೈತ್ರರಥ ಎಂಬ ವನವನ್ನು ದಾಟಿ ಮುನ್ನಡೆದನು. ಹಿವತ್ಪರ್ವತವನ್ನು ದಾಟಿ, ಗಂಧ ಮಾದನ ಪರ್ವತವನ್ನು ಸೇರಿ, ತಪಸ್ಸನ್ನಾಚರಿಸಿದನು. ನಂತರ ಇಂದ್ರದ್ಯುಮ್ನ ಸರೋವರವನ್ನು ದಾಟಿ, ಹಂಸಕೂಟವೆಂಬ ಪರ್ವತ ಶ್ರೇಣಿಯನ್ನು ದಾಟಿ, ಅಂತಿಮವಾಗಿ ಶತಶೃಂಗ ಎಂಬ ಪರ್ವತದ ತಪ್ಪಲಿಗೆ ಹೋಗಿ, ಅಲ್ಲಿ ಕಠಿಣ ತಪಸ್ಸನ್ನು ಆಚರಿಸಲು ಆರಂಭಿಸಿದನು.








Comments