top of page

ದುರ್ಯೋಧನನ ಜನನ (ಮಹಾಭಾರತ ಕಥಾಮಾಲೆ 16)

Updated: Oct 21

ದುರ್ಯೋಧನನ ಜನನ

ವ್ಯಾಸರ ನಿರ್ದೇಶನದಂತೆ ಘೃತಭಾಂಢಗಳನ್ನು ಎರಡು ವರ್ಷಗಳ ಕಾಲ ಸಂರಕ್ಷಿಸಲಾಯಿತು. ನಂತರ ಮೊದಲನೆಯ ತುಪ್ಪದ ಮಡಿಕೆಯಿಂದ ದುರ್ಯೋಧನನ ಜನನವಾಯಿತು. ಅದಕ್ಕೂ ಮೊದಲೇ ಕುಂತಿಯ ಉದರದಲ್ಲಿ ಯುಧಿಷ್ಠಿರನು ಜನಿಸಿದ್ದರಿಂದ ದುರ್ಯೋಧನನಿಗಿಂತ ಯುಧಿಷ್ಠಿರನೇ ಜ್ಯೇಷ್ಠನೆನಿಸಿದನು. ರಾಜಕುಮಾರನ ಜನ್ಮ ವಾರ್ತೆಯು ಧೃತರಾಷ್ಟ್ರಾದಿಗಳನ್ನು ತಲುಪಿತು. ಎಲ್ಲರೂ ಸಂತಸದಿಂದ ಅಲ್ಲಿಗೆ ತೆರಳಿ ನೋಡಲಾಗಿ, ನವಜಾತ ಶಿಶುವಾದ ದುರ್ಯೋಧನನು ಸ್ವಾಭಾವಿಕವಾದ ಮಕ್ಕಳ ಅಳುವಿಗೆ ಬದಲಾಗಿ, ಕತ್ತೆಯು ಅರಚುವಂತೆ ಕೆಟ್ಟ ಸ್ವರದಿಂದ ಅರಚಲು ಮೊದಲು ಮಾಡಿದನು. ಆತನ ಈ ಅರಚಾಟದಿಂದ ಪ್ರಭಾವಿತವಾದವೋ ಎಂಬಂತೆ ನರಿಗಳು, ರಣಹದ್ದುಗಳೂ, ಕಾಗೆಗಳೂ, ಕತ್ತೆಗಳು ಪ್ರತಿಧ್ವನಿಗೈಯತೊಡಗಿದವು. ಹಲವು ಕಡೆಗಳಲ್ಲಿ ಸುಂಟರಗಾಳಿಯೂ ಎದ್ದಿತು. ಅನಿರೀಕ್ಷಿತವಾದ ಅನೇಕ ಅಗ್ನಿ ಆಹುತಗಳೂ ಸಂಭವಿಸಿದವು. ಈ ಎಲ್ಲಾ ಅಪಶಕುನಗಳಿಂದ ಭೀತನಾದ ಧೃತರಾಷ್ಟ್ರನು, ಭೀಷ್ಮ-ವಿದುರನನ್ನು ಶಕುನಶಾಸ್ತ್ರ ವಿಶಾರದರನ್ನು ಕರೆದು ಸಮಾಲೋಚನೆ ನಡೆಸಿದನು.

ಈ ಎಲ್ಲಾ ದುರ್ನಿಮಿತ್ತಗಳನ್ನು ಕಂಡ ವಿದುರನೂ ಬ್ರಾಹ್ಮಣರೂ ಹೇಳಿದರು, "ಮಹಾರಾಜ! ನಿನ್ನ ಮಗನು ಹುಟ್ಟಿದಾಗ ಉಂಟಾದ ಈ ಭಯಂಕರ ನಿಮಿತ್ತಗಳನ್ನು ನೋಡಿದಾಗ, ಈತನು ವಂಶವಿನಾಶಕನೆಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಆದುದರಿಂದ ಈತನನ್ನು ಪರಿತ್ಯಜಿಸುವುದರಿಂದಲೇ ಈ ದುರ್ನಿಮಿತ್ತಗಳ ಶಾಂತಿಯಾಗಬೇಕಿದೆ. ಇವನನ್ನು ಪುತ್ರವಾತ್ಸಲ್ಯದಿಂದ ಹಾಗೆಯೇ ಉಳಿಸಿಕೊಂಡರೆ ಕುಲಕಂಟಕನಾಗಿ ಪರಿಣಮಿಸುವನು. ಇವನನ್ನು ಪರಿತ್ಯಜಿಸಿದರೂ ನಿನಗೆ ತೊಂಬತ್ತೊಂಬತ್ತು ಮಂದಿ ಮಕ್ಕಳು ಉಳಿಯುವರು. ವಂಶದ ಹಿತವನ್ನೂ ಪ್ರಪಂಚದ ಹಿತವನ್ನೂ ಪರಿಗಣಿಸಿ ಈತನನ್ನು ಪರಿತ್ಯಜಿಸು. ತಿಳಿದವರು ಹೇಳುವುದೇನೆಂದರೆ, ವಂಶದ ಹಿತಕ್ಕಾಗಿ ಒಬ್ಬನನ್ನು ತ್ಯಜಿಸಬಹುದು. ಒಂದು ಗ್ರಾಮದ ಹಿತರಕ್ಷಣೆಗಾಗಿ ಒಂದು ಕುಲವನ್ನು ತ್ಯಾಗ ಮಾಡಬಹುದು. ಒಂದು ದೇಶದ ಹಿತರಕ್ಷಣೆಗಾಗಿ ಒಂದು ಗ್ರಾಮವನ್ನೇ ಕೈಬಿಡಬಹುದು. ಆತ್ಮೋದ್ಧಾರದ ಕಾರಣಕ್ಕಾಗಿ ಪ್ರಪಂಚವನ್ನೇ ತ್ಯಜಿಸಬಹುದು."

ಆದರೆ ಪುತ್ರ ವ್ಯಾಮೋಹದಿಂದ ಅಂಧನಾಗಿದ್ದ ಧೃತರಾಷ್ಟ್ರನು ದುರ್ಯೋಧನನನ್ನು ತ್ಯಜಿಸಲಿಲ್ಲ. ದುರ್ಯೋಧನನ ಜನನದ ಬಳಿಕ ದುಶ್ಯಾಸನ, ದುಸ್ಸಹ, ದುಶ್ಯಲ, ಜಲಸಂಧ, ಸಮ, ಸಹ, ವಿಂದ, ಅನುವಿಂದ, ದುರ್ಧರ್ಷ, ಸುಬಾಹು, ಕರ್ಣ, ವಿಕರ್ಣರೇ ಮೊದಲಾದ 99 ಮಕ್ಕಳು ಘೃತಭಾಂಡಗಳಿಂದ ಜನಿಸಿದರು. ಹೀಗೆ ಧೃತರಾಷ್ಟ್ರನಿಗೆ 100 ಮಕ್ಕಳು ಹುಟ್ಟಿದರು. ಒಂದು ತಿಂಗಳ ಬಳಿಕ ಅತಿಸುಂದರಿಯಾದ ಒಂದು ಹೆಣ್ಣು ಮಗುವೂ ಜನಿಸಿತು. ಅದರ ಹೆಸರು ದುಃಶಲೆ ಎಂದಾಯಿತು. ಗಾಂಧಾರಿಯು ಗರ್ಭಿಣಿಯಾಗಿದ್ದ ಕಾಲದಲ್ಲಿ ಧೃತರಾಷ್ಟ್ರನನ್ನು ಉಪಚರಿಸುತ್ತಿದ್ದ ವೈಶ್ಯ ಸ್ತ್ರೀಯೊಬ್ಬಳಿಂದ ಧೃತರಾಷ್ಟ್ರನು "ಯುಯುತ್ಸು"ಎಂಬ ಹೆಸರಿನ ತೇಜಸ್ವಿಯಾದ ಪುತ್ರನೊಬ್ಬನು ಜನಿಸಿದನು.


ree

ಪಾಂಡುವಿಗೆ ಕಿಂದಮ ಮಹರ್ಷಿಗಳ ಶಾಪ

ಇತ್ತ ಪಾಂಡುವು ತನ್ನ ಪತ್ನಿಯರಾದ ಕುಂತಿ ಮತ್ತು ಮಾದ್ರಿ ಯರೊಡನೆ ಅರಣ್ಯದಲ್ಲಿ ಸಂತೋಷದಿಂದ ಕಾಲಕಳೆಯುತ್ತಿದ್ದನಷ್ಟೇ! ಆತನು ಧನುರ್ಧಾರಿಯಾಗಿ ಮೃಗ ಬೇಟೆಯಲ್ಲಿ ಬಹು ಆನಂದವನ್ನು ಹೊಂದುತ್ತಿದ್ದನು. ಒಮ್ಮೆ ಪಾಂಡುವು ಧನುರ್ಬಾಣಗಳನ್ನು ಧರಿಸಿ, ಮೃಗಗಳನ್ನು ಅರಸುತ್ತಾ ಅರಣ್ಯದಲ್ಲಿ ಸಂಚರಿಸುತ್ತಿದ್ದಾಗ, ಸ್ವಲ್ಪ ದೂರದಲ್ಲಿ ಎರಡು ಜಿಂಕೆಗಳು ಕಾಣಿಸಿದವು. ಒಂದು ಗಂಡು, ಇನ್ನೊಂದು ಹೆಣ್ಣು. ಈ ಗಂಡು ಜಿಂಕೆಯ ಹೆಣ್ಣು ಜಿಂಕೆಯೊಡನೆ ಸುರತಕ್ರಿಯೆಯಲ್ಲಿ ಆಸಕ್ತವಾಗಿತ್ತು.

ಬೇಟೆಯಲ್ಲಿ ಆತುರನಾಗಿದ್ದ ಪಾಂಡುವು ಈ ಸಮಯದಲ್ಲಿ ಆ ಮೃಗ ಯುಗಳವನ್ನು ಹೊಡೆಯಬಹುದೆ ಅಥವಾ ಹೊಡೆಯಬಾರದೆ ಎಂಬ ವಿವೇಚನೆಯನ್ನು ಮಾಡಲಿಲ್ಲ. ಸ್ವರ್ಣಮಯ ರೆಕ್ಕೆಗಳನ್ನು ಹೊಂದಿದ್ದ ಬಾಣಗಳನ್ನು ಬತ್ತಳಿಕೆಯಿಂದ ಸೆಳೆದು, ಜಿಂಕೆಗಳನ್ನು ಗುರಿಮಾಡಿ ಪ್ರಯೋಗಿಸಿದನು. ಆದರೆ ವಾಸ್ತವದಲ್ಲಿ ಅವುಗಳು ಜಿಂಕೆಗಳಾಗಿರಲಿಲ್ಲ. ಬದಲಾಗಿ ಮಹಾತಪಸ್ವಿಯಾದ ಋಷಿಯೊಬ್ಬನು ಜಿಂಕೆಯ ರೂಪವನ್ನು ತಾಳಿ, ಜಿಂಕೆಯ ರೂಪವನ್ನೇ ತಾಳಿದ್ದ ತನ್ನ ಪತ್ನಿಯೊಡನೆ ರತಿಕ್ರೀಡೆಯಲ್ಲಿ ತೊಡಗಿದ್ದನು. ಪಾಂಡುವಿನ ತೀಕ್ಷ್ಣವಾದ ಶರಗಳು ತಗುಲಿದೊಡನೆಯೇ ಜಿಂಕೆಯು ಮಾನುಷ ಧ್ವನಿಯಲ್ಲಿ ಆರ್ತನಾದ ಮಾಡುತ್ತಾ ಕೆಳಗೆ ಉರುಳಿತು. ಮಾನವ ಧ್ವನಿಯನ್ನು ಕೇಳುತ್ತಲೇ ಪಾಂಡುವು ಜಿಂಕೆಯ ಬಳಿಗೆ ಓಡಿದನು. ಜಿಂಕೆಯ ರೂಪದಲ್ಲಿದ್ದ ಋಷಿಯು ಪಾಂಡುವನ್ನು ನೋಡಿ, ಹೀಗೆಂದನು, "ಮಹಾರಾಜಾ! ಧರ್ಮಾತ್ಮರ ಕುಲದಲ್ಲಿ ಜನಿಸಿಯೂ, ಕಾಮ ಲೋಭಗಳಿಗೆ ತುತ್ತಾಗಿ ವಿವೇಚನಾ ಶೂನ್ಯನಾದೆಯಾ? ಸರ್ವದಾ ಪಾಪ ಕ್ರಿಯೆಯಲ್ಲಿಯೇ ತೊಡಗಿರುವವರೂ ಮಾಡದ ಕ್ರೂರ ಕರ್ಮವನ್ನು ಎಸಗಿದೆಯಲ್ಲವೇ? ನನ್ನನ್ನೇಕೆ ಘಾತಿಸಿದೆ?" ಎಂದು ಪ್ರಶ್ನಿಸಿದನು.

"ಜಿಂಕೆಯೇ!! ಕ್ಷತ್ರಿಯರಾದವರಿಗೆ ಶತ್ರು ಸಂಹಾರವೂ, ಮೃಗ ಬೇಟೆಯೂ ಧರ್ಮವೇ ಆಗಿರುವುದು. ನೇರವಾಗಿ ಅಥವಾ ಮರೆಯಲ್ಲಿ ನಿಂತು ಮೃಗಗಳನ್ನು ಬೇಟೆಯಾಡಬಹುದು. ಇದು ಕ್ಷಾತ್ರ ಧರ್ಮ. ಆದುದರಿಂದ ಮೋಹಕ್ಕೆ ವಶನಾಗಿ ನೀನು ನನ್ನನ್ನು ನಿಂದಿಸದಿರು." ಎಂದು ಪಾಂಡುವು ಉತ್ತರಿಸಿದನು.

"ರಾಜನೇ! ಶತ್ರುಗಳ ಮೇಲೆ ಬಾಣ ಪ್ರಯೋಗ ಮಾಡುವಾಗಲೂ ಶತ್ರು ಅಸಹಾಯಕ ಸ್ಥಿತಿಯಲ್ಲಿದ್ದಾಗ, ಯುದ್ಧ ಸನ್ನದ್ಧನಾಗಿರದಿದ್ದಾಗ, ಶಸ್ತ್ರ ರಹಿತನಾಗಿದ್ದಾಗ, ಶರಣಾಗತನಾದಾಗ ಆತನ ಮೇಲೆ ಬಾಣ ಪ್ರಯೋಗ ಮಾಡಬಾರದು ಎಂಬುದೇ ಧರ್ಮ, ಯುದ್ಧ ಸಮಯದಲ್ಲಿ ಶತ್ರುವಿನ ಸಂಹಾರವು ಪ್ರಶಸ್ತವಾದುದು ಹೌದಾದರೂ, ಶತ್ರುವನ್ನು ಹಿಂದಿನಿಂದ ಹೋಗಿ ಘಾತಿಸುವುದು ಕ್ಷಾತ್ರ ಧರ್ಮ ಎನಿಸಲಾರದು" ಎಂದು ಜಿಂಕೆಯು ಉತ್ತರಿಸಿತು.

Comments


bottom of page