ಯುಧಿಷ್ಠಿರನ ಜನನ (ಮಹಾಭಾರತ ಕಥಾಮಾಲೆ 19)
- Arunkumar Bhat

- Nov 11
- 2 min read
ನಿರುತ್ತರಳಾಗಿ ಕುಳಿತ ಕುಂತಿಯಲ್ಲಿ ಪಾಂಡುವು ಮುಂದುವರಿದು ಹೇಳಿದನು, "ಕುಂತಿ! ಮನುಷ್ಯನು ಹನ್ನೆರಡು ರೀತಿಗಳಲ್ಲಿ ಮಕ್ಕಳನ್ನು ಪಡೆಯಬಹುದು.
ಧರ್ಮಪತ್ನಿಯಲ್ಲಿ ಜನಿಸಿದವನು (ಸ್ವಯಂ ಜಾತ).
ತನ್ನ ಭಾರ್ಯೆಯಲ್ಲಿ ಮಹಾಪುರುಷನ ಅನುಗ್ರಹದಿಂದ ಪಡೆದ ಮಗು (ಪ್ರಣೀತ).
ತಪೋನಿಷ್ಠನೊಬ್ಬನಿಗೆ ದಕ್ಷಿಣೆ ಕೊಟ್ಟು, ಅವನ ಮೂಲಕ ತನ್ನ ಭಾರ್ಯೆಯಲ್ಲಿ ಪಡೆದ ಮಕ್ಕಳು (ಪರಿಕ್ರೀತ)
ಎರಡನೆಯ ಬಾರಿ ಮದುವೆ ಮಾಡಿಕೊಂಡವಳ ಮಗ (ಪೌನರ್ಭವ).
ವಿವಾಹವಾಗುವ ಮೊದಲೇ ಹುಟ್ಟಿದ ಮಗ (ಕಾನೀನ).
ಪತ್ನಿಯು ವ್ಯಭಿಚಾರಿಣಿಯಾಗಿದ್ದರೂ ನೀಚರಲ್ಲದವರ ಸಮಾಗಮದಿಂದ ಹುಟ್ಟುವವನು (ಕುಂಡ).
ದತ್ತಕ ಪಡೆಯುವುದು.
ಕ್ರಯಕ್ಕೆ ತೆಗೆದುಕೊಳ್ಳುವುದು (ಕ್ರೀತ).
ಕುಲ-ಗೋತ್ರಗಳು ತಿಳಿಯದಿದ್ದರೂ ಯಾವುದೋ ಕಾರಣದಿಂದ ಸ್ವೀಕರಿಸಿದ ಪುತ್ರ (ಕ್ಷತ್ರಿಮ).
ನಾನು ನಿನ್ನ ಮಗ ಎಂದು ಹೇಳಿಕೊಂಡು ಬಂದವನು.
ಅನ್ಯ ಪುರುಷರನ್ನು ಸೇರಿ ಗರ್ಭಧರಿಸಿದ ಸ್ತ್ರೀಯನ್ನು ವಿವಾಹವಾದ ನಂತರ ಹುಟ್ಟಿದ ಮಗ (ಸಹೋಢ).
ನೀಚ ಜಾತಿಯ ಸ್ತ್ರೀಯಲ್ಲಿ ಹುಟ್ಟಿದವನು (ಜ್ಞಾತಿಕೀತಸ).
"ಇವುಗಳಲ್ಲಿ ಮೊದಲನೆಯ ಉತ್ತಮ ರೀತಿಯಲ್ಲಿ ಆಗದಿದ್ದರೆ, ಎರಡನೆಯ, ಮೂರನೆಯ ಹೀಗೆ ಯಾವುದಾದರೊಂದು ರೀತಿಯಿಂದ ವಂಶೋದ್ಧಾರಕ್ಕಾಗಿ ಮಕ್ಕಳನ್ನು ಪಡೆಯಬೇಕು. ನಾನು ಋಷಿಯಿಂದ ಶಪ್ತನಾಗಿ, ನನ್ನಿಂದ ನಿನಗೆ ಮಕ್ಕಳಾಗಲು ಅವಕಾಶ ಇರದ ಕಾರಣ, ನನಗೆ ಸಮಾನನಾದ ಅಥವಾ ನನಗಿಂತ ಉತ್ತಮನಾದ ಪುರುಷನನ್ನು ಸೇರಿ ಮಕ್ಕಳನ್ನು ಪಡೆಯುವುದು ಯೋಗ್ಯವೆನಿಸುವುದು" ಎಂದನು.
ಪಾಂಡುವಿನ ಯಾವ ಮಾತುಗಳಿಗೂ ಕುಂತಿಯು ಒಪ್ಪದಿದ್ದಾಗ, ಪಾಂಡುವು ಕುಂತಿಯನ್ನು ಕುರಿತು ಪುನಃ ಪುನಃ ಬೇಡಿಕೊಂಡನು. "ಕುಂತಿ! ನಿನಗೆ ಕರಜೋಡಿಸಿ ಬೇಡಿಕೊಳ್ಳುತ್ತೇನೆ. ಪುತ್ರವಂತರಿಗೆ ದೊರೆಯುವ ಉತ್ತಮ ಲೋಕಗಳನ್ನು ನಾನೂ ಪಡೆದುಕೊಳ್ಳಲು ಕಾತರನಾಗಿದ್ದೇನೆ. ನನ್ನ ಕೋರಿಕೆಯನ್ನು ನಿರ್ಲಕ್ಷಿಸದೇ, ಮಹಾ ತಪಸ್ವಿಯೋರ್ವನನ್ನು ಆಶ್ರಯಿಸಿ, ಸಕಲ ಸದ್ಗುಣಗಳಿಂದಲೂ ಪರಿಪೂರ್ಣರಾದ ಮಕ್ಕಳನ್ನು ಪಡೆಯುವುದು ಸಾಧುವಾಗಿದೆ" ಎಂದು ಹೇಳಿದನು.
ಪತಿಯ ದೈನ್ಯದಿಂದ ಕೂಡಿದ ಪ್ರಾರ್ಥನೆಗೆ ಕರಗಿದ ಕುಂತಿಯು, ತನ್ನ ಜೀವನದಲ್ಲಿ ಹಿಂದೊಮ್ಮೆ ದೂರ್ವಾಸರಿಂದ ಪ್ರದತ್ತವಾದ ವರವನ್ನು ನೆನಪಿಸಿಕೊಂಡಳು. ತಾನು ಚಿಕ್ಕಂದಿನಲ್ಲಿ ದೂರ್ವಾಸ ಮಹರ್ಷಿಗಳನ್ನು ಯಥೋಚಿತವಾಗಿ ಉಪಚರಿಸಿದ್ದಕ್ಕಾಗಿ, ಮಹರ್ಷಿಗಳು ಸಂಪ್ರೀತಿಯಿಂದ ತನಗೆ ಉಪದೇಶಿಸಿದ್ದ, ಪುತ್ರಪ್ರಾಪ್ತಿಯ ಮಹಾಮಂತ್ರದ ಕುರಿತಾಗಿ ಪಾಂಡುವಿಗೆ ತಿಳಿಸಿದಳು. ತಾನು ಮಂತ್ರ ಪುರಸ್ಸರವಾಗಿ ಯಾವ ದೇವತೆಯನ್ನು ಆಹ್ವಾನಿಸುವೆನೋ, ಆ ದೇವತೆಯು ಆಗಮಿಸಿ, ತನಗೆ ಅನುರೂಪನಾದ ಮಗನನ್ನು ಕರುಣಿಸುವ ಕುರಿತಾಗಿ ಪಾಂಡುವಿನಲ್ಲಿ ಹೇಳಿಕೊಂಡಳು. ಪಾಂಡುವು ಅನುಮತಿಯಿತ್ತರೆ, ತಾವು ಈ ಕ್ರಮದಿಂದ ಪುತ್ರರನ್ನು ಪಡೆಯಬಹುದು ಎಂದು ಹೇಳಿದಳು. ಪುತ್ರ ಪ್ರಾಪ್ತಿಗಾಗಿ ಹಾತೊರೆಯುತ್ತಿದ್ದ ಪಾಂಡುವು ಈ ವಿಷಯವನ್ನು ಕೇಳುತ್ತಲೇ ಹರ್ಷಚಿತ್ತನಾದನು, ಮತ್ತು ಅನುಜ್ಞೆಯನ್ನು ನೀಡಿದನು. ಪತ್ನಿಯಲ್ಲಿ ಹೇಳಿದನು,
"ಅದ್ಯೈವ ತ್ವಂ ವರಾರೋಹೇ ಪ್ರಯತಸ್ವ ಯಥಾವಿಧಿ|
ಧರ್ಮ ಮಾವಾಹಯ ಶುಭೇ ಸಾ ಹಿ ಲೋಕೇಷು ಪುಣ್ಯ ಭಾಕ್||"
"ವರಾರೋಹೆಯೇ! ಪುತ್ರರನ್ನು ಪಡೆಯಲು ಈ ಕೂಡಲೇ ಯಥಾ ವಿಧಿಯಾಗಿ ಪ್ರಯತ್ನಿಸು. ಸಾಕ್ಷಾತ್ ಧರ್ಮ ದೇವತೆಯನ್ನೇ ಮಂತ್ರ ಪುರಸ್ಸರವಾಗಿ ಆಹ್ವಾನಿಸು. ನಮಗೆ ಧರ್ಮದೇವನ ಅನುಗ್ರಹದಿಂದ ಜನಿಸುವ ಮಗನು ಪರಮಧಾರ್ಮಿಕನಾಗುತ್ತಾನೆ. ಕುರುವಂಶವನ್ನು ಬೆಳಗುವವನಾಗುತ್ತಾನೆ."
ಪಾಂಡುವು ಇನ್ನೊಂದು ಕಾರಣಕ್ಕಾಗಿಯೂ ಧರ್ಮ ದೇವನನ್ನೇ ಆಹ್ವಾನಿಸಲು ಮನ ಮಾಡಿರಬಹುದು; ತಾವೀಗ ಮಾಡುತ್ತಿರುವುದರ ಧರ್ಮಾಧರ್ಮದ ಪರೀಕ್ಷೆಯೂ ಆದಂತಾಯಿತು, ಒಂದು ವೇಳೆ ತಾವು ಈ ಕ್ರಮದಿಂದ ಪುತ್ರಪ್ರಾಪ್ತಿಗೆ ಮುಂದಾಗಿರುವುದು ಅಧರ್ಮವಾಗಿದ್ದರೂ ಸಹ ಧರ್ಮದೇವನ ಸಹಚರ್ಯದಿಂದ ಅದು ಧರ್ಮವಾಗಿಯೇ ಪರಿಣಮಿಸುವುದು ಎಂಬ ಕಾರಣವೂ ಇರಬಹುದು.
ಪತಿಯು ಹೀಗೆ ಅನುಮತಿಯಿತ್ತ ಕೂಡಲೇ ಕುಂತಿಯು ಪಾಂಡುವಿಗೆ ಅಭಿವಾದನ ಮಾಡಿ, ಶುಚಿಭೂರ್ತಳಾಗಿ ಕುಳಿತು, ಭಕ್ತಿಯಿಂದ ದೂರ್ವಾಸರಿತ್ತ ಮಂತ್ರವನ್ನು ಉಚ್ಚರಿಸಿ, ಪುತ್ರಪ್ರಾಪ್ತಿಯ ಅಪೇಕ್ಷೆಯಿಂದ ಯಮಧರ್ಮನನ್ನು ಆಹ್ವಾನಿಸಿದಳು.

ಮಂತ್ರದಿಂದಲೂ, ಕುಂತಿಯ ಭಕ್ತಿಯಿಂದಲೂ ಆಕರ್ಷಿತನಾದ ಧರ್ಮದೇವನು, ಕುಂತಿಯು ಜಪ ಮಾಡುತ್ತಾ ಕುಳಿತಿದ್ದ ಸ್ಥಳಕ್ಕೆ ಆಗಮಿಸಿದನು. ತನ್ನನ್ನು ಕಂಡು ಹರ್ಷಚಿತ್ತಳಾಗಿ ನಮಿಸಿ ನಿಂದ ಕುಂತಿಯನ್ನು, "ಕುಂತೀ! ನಾನು ನಿನಗೇನನ್ನು ಕೊಡಲಿ" ಎಂದು ಮಂದಹಾಸ ಬೀರುತ್ತಾ ಪ್ರಶ್ನಿಸಿದನು. ಕುಂತಿಯೂ ಸಹ ಮಂದಸ್ಮಿತಳಾಗಿ, "ಪುತ್ರಂ ದೇಹಿ" - "ಧರ್ಮದೇವನೇ! ನನಗೆ ಪುತ್ರನನ್ನು ದಯಪಾಲಿಸು" ಎಂದು ಕೇಳಿದಳು.
ಯೋಗ ಮೂರ್ತಿಧರನಾದ ಧರ್ಮದೇವನೊಡನೆ ಸಮಾಗಮ ಹೊಂದಿ, ಕುಂತಿಯು ಸರ್ವ ಪ್ರಾಣಿಗಳಿಗೂ ಹಿತಕರವಾದ ಸುಪುತ್ರನನ್ನು ಪಡೆದಳು. ಅಶ್ವಯುಜ ಶುದ್ಧ ಪಂಚಮಿಯ ಶುಭದಿನದಂದು, ಸೂರ್ಯನು ತುಲಾ ರಾಶಿಯಲ್ಲಿದಾಗ, ಮದ್ಯಾಹ್ನ ಕಾಲದ ಅಭಿಜಿನ್ಮಹೂರ್ತದ ಜ್ಯೇಷ್ಠಾ ನಕ್ಷತ್ರದಲ್ಲಿ ಈ ಪುತ್ರರತ್ನನನ್ನು ಕುಂತಿಯು ಪ್ರಸವಿಸಿದಳು.
ಆ ಮಗುವು ಜನಿಸಿದೊಡನೆಯೇ ಆಶರೀರ ವಾಣಿ ಮೊಳಗಿತು, "ಈ ಶಿಶುವು ಧರ್ಮಾತ್ಮರಲ್ಲಿ ಶ್ರೇಷ್ಠನಾಗುತ್ತಾನೆ. ಪರಾಕ್ರಮಿಯೂ ಸತ್ಯಸಂಧನಾದ ರಾಜನಾಗಿಯೂ ಪ್ರಖ್ಯಾತನಾಗುತ್ತಾನೆ. "ಯುಧಿಷ್ಠಿರ" ಎಂಬ ಹೆಸರಿನಿಂದ ಪ್ರಖ್ಯಾತನಾಗುವ ಈತ, ತನ್ನ ತೇಜಸ್ಸು, ಸದಾಚಾರಗಳಿಂದ ಮೂರು ಲೋಕಗಳಲ್ಲಿಯೂ ಪ್ರಸಿದ್ಧನಾಗುತ್ತಾನೆ"
ಅತ್ತ ಗಾಂಧಾರಿಯು ಗರ್ಭಧರಿಸಿ ಒಂದು ವರ್ಷವಾದರೂ ಪ್ರಸವಿಸಿರಲಿಲ್ಲ. ಆದ್ದರಿಂದ, ಯುಧಿಷ್ಠಿರನು ಧಾರ್ತರಾಷ್ಟ್ರರು-ಪಾಂಡವರಲ್ಲಿ ಜ್ಯೇಷ್ಠನೆನಿಸಿದನು.








Comments