top of page

ಅರ್ಜುನನ ಜನನ (ಮಹಾಭಾರತ ಕಥಾಮಾಲೆ 21)

ಅರ್ಜುನನ ಜನನ

ದೇವೇಂದ್ರನ ಅಮೃತೋಪಮವಾದ ವಚನಗಳನ್ನು ಕೇಳಿದ ಪಾಂಡುವು ಆನಂದತುಂದಿಲನಾಗಿ ವೃತನಿಷ್ಠಳಾಗಿದ್ದ ಕುಂತಿಯ ಬಳಿ ಹೋಗಿ, "ಕುಂತಿ! ನಮ್ಮ ಬಯಕೆಯು ಫಲಿಸಿತು. ಇಂದ್ರನು ಪ್ರೀತನಾಗಿ, ಪುತ್ರ ರತ್ನವನ್ನು ಅನುಗ್ರಹಿಸಲು ಒಪ್ಪಿದ್ದಾನೆ. ಆದ್ದರಿಂದ ನೀನು ಮಂತ್ರ ಮುಖೇನ ಇಂದ್ರನನ್ನು ಆಹ್ವಾನಿಸಿ, ಪುತ್ರಭಿಕ್ಷೆಯನ್ನು ಬೇಡು" ಎಂದನು. ಕುಂತಿಯು ಶುಚಿರ್ಭೂತಳಾಗಿ, ಪದ್ಮಾಸನದಲ್ಲಿ ಕುಳಿತು, ದೂರ್ವಾಸರಿತ್ತ ಮಹಾಮಂತ್ರ ಪುರಸ್ಸರವಾಗಿ ಇಂದ್ರನನ್ನು ಆಮಂತ್ರಿಸಿದಳು. ಇಂದ್ರನು ಮಂದಸ್ಮಿತನಾಗಿ ಕುಂತಿಯ ಮುಂದೆ ಪ್ರತ್ಯಕ್ಷನಾಗಿ, ಅವಳ ಅಪೇಕ್ಷೆಯಂತೆ ಶ್ರೇಷ್ಠನಾದ ಪುತ್ರನನ್ನು ಅನುಗ್ರಹಿಸಿದನು. 'ಅರ್ಜುನ' ಎಂಬ ಅಭಿದಾನದಿಂದ ಲೋಕವಿಖ್ಯಾತನಾದನು.

ಉತ್ತರಾಭ್ಯಾಂ ತು ಪೂರ್ವಾಭ್ಯಾಂ ಫಲ್ಗುನೀಭ್ಯಾಂ ತತೋ ದಿವಾ|

ಜಾತಸ್ತು ಫಲ್ಗುನೇ ಮಾಸೇ ತೇನಾಸಾ ಫಾಲ್ಗುನಃ ಸ್ಮೃತಃ||

ಫಾಲ್ಗುಣ ಮಾಸದಲ್ಲಿ ಪೂರ್ವ ಫಲ್ಗುಣೀ ನಕ್ಷತ್ರವು ಮುಗಿಯಲಿದ್ದಾಗ ಮತ್ತು ಉತ್ತರ ಫಲ್ಗುಣೀ ನಕ್ಷತ್ರವು ಪ್ರಾರಂಭವಾಗುವುದರಲ್ಲಿದಾಗ (ಸಂಧೀ ಕಾಲದಲ್ಲಿ) ಅರ್ಜುನನು ಹುಟ್ಟಿದನು. ಫಾಲ್ಗುಣ ಮಾಸದಲ್ಲಿ ಮತ್ತು ಫಲ್ಗುಣಿ ನಕ್ಷತ್ರದಲ್ಲಿ ಅರ್ಜುನನು ಜನಿಸಿದ್ದರಿಂದ ಅವನಿಗೆ 'ಫಲುಗುಣ' ಎಂದೂ ಹೆಸರಾಯಿತು.



ಈ ಶಿಶುವು ಜನಿಸಿದಾಗಲೂ ಅಶರೀರ ವಾಣಿಯು ಮೊಳಗಿತು, "ಮೂರು ಲೋಕಗಳಲ್ಲೂ ವಿಖ್ಯಾತನಾಗುವ ಅತುಲ ಪರಾಕ್ರಮಿ ಈತನಾಗುವನು. ಮಹಾ ವಿಷ್ಣುವಿನ ಪರಮಸಖನಾಗುವ ಈತ, ಕುರುವಂಶದ ಕೀರ್ತಿಯನ್ನು ವರ್ಧಿಸುವವನಾಗುತ್ತಾನೆ" ಎಂದು. ಅರ್ಜುನನು ಜನಿಸಿದೊಡನೆ, ಅಗೋಚರವಾದ ಭೇರಿ - ವಾದ್ಯ - ತಾಳ - ಮೃದಂಗಾದಿಗಳು ಮಂಗಳಧ್ವನಿ ಉಂಟು ಮಾಡಿದವು. ದೇವತೆಗಳು ಆಗಸದಿಂದ ಹೂಮಳೆಗೈದರು. ಯಕ್ಷ, ಕಿನ್ನರ, ಕಿಂಪುರುಷ, ದೇವತೆಗಳೂ, ಗಂಧರ್ವಾಪ್ಸರೆಯರೂ, ಪ್ರಜಾಪತಿಗಳೂ, ಸಪ್ತರ್ಷಿಗಳೂ ಪೃಥಾನಂದನನಾದ ಪಾರ್ಥನಿಗೆ ಮಂಗಳಾಶಾಸನ ಮಾಡಿದರು. ಕೆಲವರು ನೃತ್ಯ ಮಾಡುತ್ತಲೂ, ಕೆಲವರು ಗಾಯನ ಮಾಡುತ್ತಲೂ ತಮಗಾದ ಆನಂದವನ್ನು ವ್ಯಕ್ತಪಡಿಸಿದರು. ಏಕಾದಶ ರುದ್ರರೂ, ದ್ವಾದಶಾದಿತ್ಯರೂ ಅಶ್ವಿನಿ ದೇವತೆಗಳೂ, ಅಷ್ಟ ವಸುಗಳೂ, ಸಪ್ತ ಮರುತ್ತುಗಳೂ, ವಿಶ್ವ ದೇವತೆಗಳೂ, ಸಿದ್ಧರೂ, ಸಾಧ್ಯರೂ ಪೃಥಾನಂದನನ್ನು ನೋಡಲು ಅಲ್ಲಿ ನೆರೆದರು. ತಕ್ಷಕನೇ ಮೊದಲಾದ ಸರ್ಪಶ್ರೇಷ್ಠರೂ, ಗರುಡನೂ, ಅರುಣನೂ ಒಳಗೊಂಡ ವೈನತೇಯರೂ ಆಗಮಿಸಿ, ಪೃಥಾನಂದನನ್ನು ಸಂದರ್ಶಿಸಿದರು.


ಆದರೆ, ವನದಲ್ಲಿದ್ದ ಸಾಮಾನ್ಯ ಜನರು ಯಾರೂ ಈ ದೇವತಾಸ್ತೋಮವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಜ್ಞಾನಿಗಳಾದ ಮಹರ್ಷಿಗಳು ಮಾತ್ರ ಈ ದೇವ ಸಮೂಹವನ್ನು ಕಂಡು ಆನಂದಿತರಾದರು. ಹೀಗೆ ಪಾಂಡುವು ಮೂರನೆಯ ಪುತ್ರನನ್ನು ಪಡೆದನು. ಆಸೆಗೆ ಮಿತಿಯೇ ಇಲ್ಲ. ಅದ್ವಿತೀಯರಾದ ಮೂವರೂ ಪುತ್ರರನ್ನು ಹೊಂದಿದ ಮೇಲೆಯೂ ಪಾಂಡುವಿಗೆ ಇನ್ನೂ ಮಕ್ಕಳನ್ನು ಪಡೆಯುವ ಬಯಕೆ ಕಡಿಮೆಯಾಗಲಿಲ್ಲ. ಕುಂತಿಯಲ್ಲಿ ಉಳಿದಿರಬಹುದಾದ ಇನ್ನೆರಡು ಮಂತ್ರಗಳಿಂದ ಮಕ್ಕಳನ್ನು ಪಡೆಯಲು ಬಯಸಿ, ಈ ಕುರಿತು ಕುಂತಿಯನ್ನು ಕೇಳಿದನು. ಈ ಬಯಕೆಯನ್ನು ನಿರಾಕರಿಸುತ್ತಾ ಕುಂತಿಯು, "ಆರ್ಯಪುತ್ರ! ಆಪತ್ಕಾಲದಲ್ಲಿಯೂ ನಿಯೋಗದ ಮೂಲಕ ನಾಲ್ಕನೆಯ ಪ್ರಸವವನ್ನು ಜ್ಞಾನಿಗಳು ಒಪ್ಪುವುದಿಲ್ಲ. ನಾಲ್ಕು ಪುರುಷರ ಸಮಾಗಮ ಮಾಡುವವಳು ಸ್ವೆರಿಣೀ ಎನಿಸುವಳು. ಐದು ಮಂದಿಯೊಡನೆ ಸೇರುವವಳು ಕುಲಟೆಯೇ ಆಗುವಳು. ಆದ್ದರಿಂದ, ಧರ್ಮಕ್ಕೆ ವಿರೋಧವಾದ ಮಾತುಗಳನ್ನು ಹೇಳಬೇಡ" ಎಂದಳು. ಇದಕ್ಕೆ ಪಾಂಡುವು ಸಮ್ಮತಿಸಿದನು.


ಪಾಂಡುವಿನ ಮಕ್ಕಳಾದ ಯುಧಿಷ್ಠಿರ, ಭೀಮ, ಅರ್ಜುನರು ಹುಟ್ಟುವ ವೇಳೆಗೆ, ಹಸ್ತಿನಾಪುರದಲ್ಲಿ ಧೃತರಾಷ್ಟ್ರನಿಗೆ ನೂರೊಂದು ಮಕ್ಕಳೂ ಜನಿಸಿದ್ದರು.


ಹೀಗಿರಲು, ಒಂದು ದಿನ ಪಾಂಡುವಿನ ಇನ್ನೊಬ್ಬ ಪತ್ನಿಯಾದ ಮಾದ್ರಿಯು, ಏಕಾಂತದಲ್ಲಿ ಪಾಂಡುವಿನ ಬಳಿ ಬಂದು ತನ್ನ ಮನದ ದುಗುಡವನ್ನು ಹೇಳತೊಡಗಿದಳು. "ಆರ್ಯ ಪುತ್ರ! ನಾನು ಈ ಅರಣ್ಯವಾಸಕ್ಕಾಗಲಿ ಅಥವಾ ಕುಂತಿಯ ಅಧೀನವಾಗಿರುವುದಕ್ಕಾಗಲೀ ದುಃಖಿಸುವುದಿಲ್ಲ. ಆದರೆ, ನನಗೆ ಸಮಾನ ಸ್ಥಾನದಲ್ಲಿರುವವಳು ಪುತ್ರವತಿಯಾದಳು. ನಾನು ಮಾತ್ರ ಅಪುತ್ರವತಿಯಾಗಿಯೇ ಇರುವೆನು. ಅದೃಷ್ಟವಶಾತ್ ನನ್ನ ಪತಿಗೆ ಕುಂತಿಯ ಸಂತಾನ ಪ್ರಾಪ್ತಿಯಾಯಿತೆಂದು ಹರ್ಷಿಸುವೆನಾದರೂ, ನಾನೂ ಸಹ ಸಂತಾನವತಿಯಾಗಬೇಡವೇ?

ಈ ನೀವು ನನ್ನನ್ನು ಅನುದಿನ ಚುಚ್ಚುತ್ತಿದೆ, ದುಃಖಿಸುವಂತೆ ಮಾಡುತ್ತದೆ. ಕುಂತಿಯು ಯಾವ ಮಹಾಮಂತ್ರದಿಂದ ಸಂತಾನ ಭಾಗ್ಯವನ್ನು ಪಡೆದಳೋ, ಅದೇ ಮಂತ್ರದಿಂದ ನನಗೂ ಸಂತಾನ ಲಭಿಸಬಹುದಲ್ಲವೇ? ಕುಂತಿಯು ನನಗೆ ಆ ಮಂತ್ರವನ್ನು ಅನುಗ್ರಹಿಸಬೇಕಷ್ಟೇ. ಹಾಗೆ ಆಕೆ ನನಗೆ ಆ ಮಂತ್ರವನ್ನು ಉಪದೇಶಿಸಿದ್ದೇ ಆದರೆ, ನಾನೂ 'ಪುತ್ರವತಿ ' ಎನ್ನಿಸಿಕೊಂಡೇನು. ನನ್ನ ಜನ್ಮವೂ ಸಾರ್ಥಕವಾದೀತು. ಬಹುಪುತ್ರಲಾಭದಿಂದ ನಿನಗೂ ಹಿತವುಂಟಾಗುವುದು." ಪಾಂಡುವು ತದೇಕಚಿತ್ತನಾಗಿ ಕೇಳುತ್ತಿರಲು ಮಾದ್ರಿಯು ಮುಂದುವರಿಸಿದಳು. "ಆದರೆ, ಕುಂತಿಯು ನನ್ನ ಸವತಿಯಾಗಿರುವಳು. 'ನನಗೂ ಪುತ್ರ ಪ್ರಾಪ್ತಿಯ ಮಹಾಮಂತ್ರವನ್ನು ಅನುಗ್ರಹಿಸು' ಎಂದು ನಾನೇ ಕುಂತಿಯನ್ನು ಕೇಳಲು ಸ್ವಾಭಿಮಾನವು ಅಡ್ಡ ಬರುವುದು. ನಿನಗೇನಾದರೂ ಈ ವಿಷಯದಲ್ಲಿ ಸಮ್ಮತಿಯಿದ್ದರೆ, ಅವಳನ್ನು ಒಪ್ಪಿಸಿ, ನನ್ನ ಬಯಕೆಯನ್ನು ಈಡೇರಿಸು" ಎಂದು ಪ್ರಾರ್ಥಿಸಿದಳು.


"ಮದ್ರ ಕುಮಾರಿ, ನನ್ನ ಮನದಲ್ಲಿಯೂ ಪದೇ ಪದೇ ತರ್ಕಿತವಾಗುತ್ತಿದ್ದ ವಿಚಾರವನ್ನೇ ನೀನಿಂದು ಪ್ರಕಟಪಡಿಸಿರುವೆ. ನಿನ್ನ ಮಾತುಗಳು ಯುಕ್ತವಾಗಿವೆ. ನಾನು ಈ ವಿಚಾರವಾಗಿ ಕುಂತಿಯಲ್ಲಿ ಮಾತನಾಡುತ್ತೇನೆ. ನನ್ನ ಮಾತನ್ನು ಆಕೆಯು ತಿರಸ್ಕರಿಸಲಾರಳು ಎಂಬ ಭರವಸೆ ನನ್ನಲ್ಲಿದೆ" ಎಂದು ಪಾಂಡುವು ಉತ್ತರಿಸಿದನು.

Comments


bottom of page