top of page

ಪಾಂಡುವಿನ ಮರಣ (ಮಹಾಭಾರತ ಕಥಾಮಾಲೆ 23)

ಪಾಂಡುವಿನ ಮರಣ

ಮಾದ್ರಿಯು ಕುಂತಿಯ ಕೃಪೆಯಿಂದಾಗಿ ಎರಡು ಮಕ್ಕಳನ್ನು ಪಡೆದ ನಂತರ ಕೆಲ ದಿನಗಳು ಕಳೆಯಲು ಪಾಂಡುವು ಪುನಃ ಕುಂತಿಯ ಬಳಿಗೆ ಹೋಗಿ "ಮಾದ್ರಿಗೆ ಮತ್ತೊಂದು ಸಂತಾನವಾಗಲು.."

"ಅವಕಾಶವಿಲ್ಲ" ಕುಂತಿಯು ಪಾಂಡುವಿನ ಮಾತನ್ನು ಅರ್ಧದಲ್ಲೇ ತಡೆಯುತ್ತಾ ಉತ್ತರಿಸಿದಳು. ಪಾಂಡುವು ಅಧೀರನಾಗಿ ಕುಳಿತಿರಲು ಕುಂತಿಯು ಮುಂದುವರಿದಳು, "ಒಮ್ಮೆ ಕೊಟ್ಟ ಮಂತ್ರದಿಂದಲೇ ಮಾದ್ರಿಯು ನಾವ್ಯಾರೂ ನಿರೀಕ್ಷಿಸದ ರೀತಿಯಲ್ಲಿ ಇಬ್ಬರು ಮಕ್ಕಳನ್ನು ಚಾತುರ್ಯದಿಂದ ಪಡೆದಳು. ನಾನು ಪುನಃ ದೇವತೆಗಳನ್ನು ಆಮಂತ್ರಿಸುವ ಶಕ್ತಿಯನ್ನು ಮಾದ್ರಿಗೆ ನೀಡಿದೆನಾದರೆ, ಅವಳು ಚತುರತೆಯಿಂದ ಮತ್ತಿಬ್ಬರು ಮಕ್ಕಳನ್ನು ಪಡೆದು ನನ್ನನ್ನು ಮೀರಿಸಿಯಾಳು. ಕುಸ್ತ್ರೀಯರ ರೀತಿಗಳೇ ಹೀಗೆ ಆದ್ದರಿಂದ ದಯಮಾಡಿ ಈ ವಿಷಯದಲ್ಲಿ ನನ್ನನ್ನು ಒತ್ತಾಯಿಸದಿರುವ ಕೃಪೆ ಮಾಡಿ" ಎಂದಳು.



ಪಾಂಡುವು ನಿರುತ್ತರನಾದನು. ಪಾಂಡುವಿನ ಐವರು ಮಕ್ಕಳೂ ದಿನದಿನಕ್ಕೂ ಶುಕ್ಲಪಕ್ಷದ ಚಂದ್ರಮನಂತೆ ಅಭಿವೃದ್ಧಿ ಹೊಂದುತ್ತಿದ್ದರು. ಚಂದ್ರನಂತೆ ಪ್ರಿಯದರ್ಶನರೂ, ಸಿಂಹದಂತೆ ದರ್ಪವುಳ್ಳವರೂ, ದೇವತೆಗಳಂತೆ ಪರಾಕ್ರಮವುಳ್ಳವರೂ ಆಗಿದ್ದರು. ತಮ್ಮ ಕ್ರೀಡಾ ವಿನೋದಗಳಿಂದಲೂ ಧನುರ್ವಿದ್ಯೆಯಿಂದಲೂ, ಸದ್ಗುಣಗಳಿಂದಲೂ ಅಲ್ಲಿದ್ದ ತಪಸ್ವಿಗಳಿಗೆ ಮೆಚ್ಚಿನವರಾಗಿದ್ದರು. ಇತ್ತ ಹಸ್ತಿನಾಪುರದಲ್ಲಿ ಧೃತರಾಷ್ಟ್ರನ ನೂರೊಂದು ಮಕ್ಕಳೂ ಸರೋವರದಲ್ಲಿನ ಕಮಲಗಳಂತೆ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದ್ದರು. ಹೀಗಿರಲು, ದಿನಗಳು ಕಳೆಯುತ್ತಾ ತಿಂಗಳುಗಳಾದವು. ಕಳೆದು ಹೋದ ಋತುಗಳು ಪುನಃ ಪುನಃ ಆಗಮಿಸಿದವು. ವಸಂತ ಋತುವು ಪುನಃ ಆಗಮಿಸಿತು. ವನದಲ್ಲಿನ ಮರ-ಗಿಡ-ಬಳ್ಳಿಗಳೆಲ್ಲವೂ ಫಲ ಪುಷ್ಪಗಳಿಂದ ತುಂಬಿ ಮನ ಮೋಹಕವಾಗಿ ಕಾಣತೊಡಗಿದವು. ಹಿತವಾದ ವಾತಾವರಣ ಎಲ್ಲೆಡೆ ತುಂಬಿಕೊಂಡಿತು. ಹಿಮವತ್ಪರ್ವತದ ಈ ತಪ್ಪಲಿನ ಪ್ರದೇಶವು ಮನ್ಮಥನು ಸ್ವೇಚ್ಛೆಯಿಂದ ವಿಹರಿಸುವ ತಾಣವಾಗಿ ಪರಿವರ್ತಿತವಾಯಿತು. ಈ ಕಾಲದಲ್ಲಿ ಪಾಂಡುವು ಮಾದ್ರಿಯೊಡನೆ ಸ್ವಚ್ಛಂದವಾಗಿ ವನವಿಹಾರ ಮಾಡುತ್ತಿದ್ದನು. ಪಲಾಶ, ತಿಲಕ, ಚೂತ, ಚಂಪಕ, ಪಾರಿಭದ್ರಕವೇ ಮೊದಲಾದ ವೃಕ್ಷಗಳಿಂದ ವನವು ನಿಬಿಡವಾಗಿದ್ದಿತು. ತಾಮರಸ ಪುಷ್ಪಗಳಿಂದ ದಟ್ಟವಾದ ಸರೋವರಗಳು ಆಕರ್ಷಣೀಯವಾಗಿದ್ದವು. ಅಂತಹ ಅನೇಕ ಮಧು ಮಾಸಗಳನ್ನು ಪಾಂಡುವು ಆ ವನದಲ್ಲಿ ಕಳೆದಿದ್ದರೂ ಆ ವರ್ಷದ ಮಧು ಮಾಸವು ಪಾಂಡುವಿಗೆ ಹೆಚ್ಚು ರಮಣೀಯವೆನಿಸುತ್ತಿತ್ತು. ಆತನ ಮನವು ಉಲ್ಲಾಸಗೊಂಡಿತ್ತು. ಒಂದಲ್ಲಾ ಒಂದು ಯೋಚನೆಯ ಕಾರಣದಿಂದ ಕುಂದಿದ್ದ ಮುಖಾರವಿಂದವು ಅಂದು ವಿಕಸಿತವಾಯಿತು. ವನಕುಸುಮಗಳ ಸುಗಂಧವನ್ನು ಹೊತ್ತ ಮಂದಮಾರುತ, ಕೋಗಿಲೆಗಳ ಇಂಪಾದ ಧ್ವನಿ ಮುಂತಾದ ರಮ್ಯತೆಗಳು ಪಾಂಡುವಿನ ಮನಸ್ಸನ್ನು ಪ್ರಫುಲಿತಗೊಳಿಸಿದ್ದವು. ಮಾದ್ರಿಯು ಶುಭ್ರವಸನ ಧಾರಿಣಿಯಾಗಿ ಪಾಂಡುವನ್ನು ಅನುಸರಿಸುತ್ತಿದ್ದಳು. ಅದು ಏಕಾಂತವಾದ ವಿಹಾರವಾಗಿದ್ದಿತು. ಆ ಸಮಯದಲ್ಲಿ ಮನ್ಮಥನು ತನ್ನ ಕುಸುಮ ಶರ ಪಂಚಕಗಳನ್ನೂ ಪಾಂಡುವಿನ ಮೇಲೆ ಪ್ರಯೋಗಿಸಿದನು. ಬಾಣಗಳ ತೀಕ್ಷ್ಣತೆಗೆ ಪಾಂಡುವಿಗೆ ಹಿಂದಿನ ಶಾಪ ವೃತ್ತಾಂತದ ವಿಸ್ಮರಣೆಯಾಯಿತು. ಅನುಸರಿಸಿ ಬರುತ್ತಿದ್ದ ಮಾದ್ರಿಯ ಕೈಯನ್ನು ಸುರತ ಕ್ರೀಡೆಯ ಅಪೇಕ್ಷೆಯಿಂದ ಹಿಡಿದನು. ಇದರಿಂದ ಕಂಪಿತಳಾದ ಮಾದ್ರಿಯು ಕೈಯನ್ನು ಬಿಡಿಸಿಕೊಳ್ಳಲು ಯತ್ನಿಸಿದಳು. ವಿಫಲಳಾದಳು. ಮಾದ್ರಿಯು ಋಷಿ ಶಾಪವನ್ನು ಪಾಂಡುವಿಗೆ ನೆನಪಿಸಿದರೂ ಪ್ರಯೋಜನವಾಗಲಿಲ್ಲ. ಆತ್ಮಾಹುತಿಗೆ ಮುಂದಾದನೋ ಎಂಬಂತೆ ಮಾದ್ರಿಯನ್ನು ಬಲಾತ್ಕಾರವಾಗಿ ಆಲಂಗಿಸಿದನು.


ಸುರತ ಸುಖದ ಅಪೇಕ್ಷೆಯಿಂದ ಪತ್ನಿಯನ್ನು ಹೀಗೆ ಆಲಂಗಿಸಿದ ಪಾಂಡುವು ಮರುಗಳಿಗೆಯೇ ಚೇತನಾಹಿತನಾಗಿ, ಪ್ರಾಣವನ್ನು ಕಳೆದುಕೊಂಡು ಕೆಳಕ್ಕೆ ಬಿದ್ದನು. ಋಷಿ ಶಾಪವು ಫಲಿಸಿತ್ತು. ಇದನ್ನು ಕಂಡ ಮಾದ್ರಿಯು ಭೀತಿ ದುಃಖಗಳಿಂದ ಆಹತಳಾಗಿ, ಗಟ್ಟಿಯಾಗಿ ರೋದಿಸಲು ಮೊದಲು ಮಾಡಿದಳು. ಈ ಅಳುವು ಕುಂತಿಯ ಕಿವಿಗಳಿಗೆ ಬಿದ್ದವು. ಭೀತಳಾದ ಕುಂತಿಯು ತಕ್ಷಣ ಮಕ್ಕಳ ಜತೆಗೂಡಿ ಆ ಕಡೆಗೆ ಧಾವಿಸಿ ಬಂದಳು. ಅಲ್ಲಿ, ಗತಪ್ರಾಣನಾಗಿ ಕೆಳಬಿದ್ದ ಪಾಂಡುವನ್ನೂ ದುಃಖದಿಂದ ನೆಲದ ಮೇಲೆ ಹೊರಳಾಡುತ್ತಿದ್ದ ಮಾದ್ರಿಯನ್ನೂ ನೋಡಿ ಕುಂತಿಯು ವಿಷಯವನ್ನು ಅರ್ಥ ಮಾಡಿಕೊಂಡಳು. ಆಕೆಯೂ ದುಃಖಾತಿಶಯದಿಂದ ಪಾಂಡುವಿನ ಶರೀರದ ಮೇಲೆ ಬಿದ್ದು ಗೋಳಾಡಿದಳು.

"ತಂಗೀ! ಜಿತೇಂದ್ರಿಯನಾಗಿದ್ದ ರಾಜನನ್ನು ನಾನು ಸದಾಕಾಲವೂ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದೆ. ಋಷಿ ಶಾಪವನ್ನೂ ಮರೆತು ಈತ ನಿನ್ನ ಬಳಿಗೆ ಹೇಗೆ ಬಂದನು? ತಡೆಯಬಹುದಾಗಿತ್ತಲ್ಲ? ಕಾಮೇಚ್ಛೆಯಿಂದ ಪ್ರಫುಲ್ಲನಾದ ಪತಿಯ ಮುಖಾರವಿಂದವನ್ನು ನೋಡಲು ಬಯಸಿದೆಯಾ?" ಎಂದು ಪ್ರಶ್ನಿಸಿದಳು.


ಮಾದ್ರಿಯು ಉತ್ತರಿಸಿದಳು, "ಅಕ್ಕಾ! ಇಂತಹ ಬಿರುನುಡಿಗಳಿಂದ ನನ್ನನ್ನು ನೋಯಿಸದಿರು. ನನ್ನಲ್ಲಿ ಸುರತಕ್ಕೆ ಮುಂದಾದ ರಾಜನನ್ನು ಬಹಳವಾಗಿ ನಾನು ತಡೆದೆ. ಅತ್ತು ಅಂಗಲಾಚಿದೆ, ಋಷಿ ಶಾಪವನ್ನು ನೆನಪಿಸಿದೆ. ಆದರೆ ರಾಜನಿಗೆ ತನ್ನ ಕಾಮೇಚ್ಛೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಆತನು ಋಷಿ ಶಾಪವನ್ನು ನಿಜ ಮಾಡಲು ಮುಂದಾದನೋ ಎಂಬಂತೆ ವರ್ತಿಸಿದನು".


ಕುಂತಿಯು ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ, "ತಂಗಿ! ಪಾಂಡುರಾಜನ ಹಿರಿಯ ಪತ್ನಿಯಾದ ನಾನು, ಪತಿಯೊಡನೆ ಸಹಗಮನ ಮಾಡಿ, ಪರಲೋಕದಲ್ಲಿ ಪತಿಯೊಡನೆ ಒಂದಾಗುತ್ತೇನೆ. ಹೇಗೂ, ಸುಗುಣ ಶೀಲರಾದ ಮಕ್ಕಳನ್ನು ಪಡೆದು, ಲೌಕಿಕವಾದ ಮನೋರಥ ಪೂರ್ಣವಾಗಿದೆ. ನೀನು ಈ ಐವರು ಮಕ್ಕಳನ್ನು ಕಾಪಾಡಿಕೊಂಡಿರು" ಎಂದು ಮಾದ್ರಿಯಲ್ಲಿ ಹೇಳಿದಳು.

Related Posts

See All
ನಕುಲ ಸಹದೇವರ ಜನನ (ಮಹಾಭಾರತ ಕಥಾಮಾಲೆ 22)

ಮಾದ್ರಿಯು ಕ್ಷಣಕಾಲ ಯೋಚಿಸಿ, ದಿವ್ಯ ಸುಂದರ ಮೂರ್ತಿಗಳಾದ ಅಶ್ವಿನಿ ದೇವತೆಗಳನ್ನು ಸ್ಮರಿಸಿದಳು. ಅಶ್ವಿನಿ ದೇವತೆಗಳಿಗೆ ಯಮಳರೆಂದೂ ಹೆಸರು. ಅವಳಿ ಜವಳಿಗಳು ಎಂದರ್ಥ. ಸಾಮಾನ್ಯವಾಗಿ ಅವಳಿ ಮಕ್ಕಳ ರೂಪದಲ್ಲಿ ಸಾಮ್ಯತೆ ಇರುತ್ತದೆಯಾದರೂ ಮನಸ್ಸಿನಲ

 
 
 

Comments


bottom of page