top of page

ಭೀಮನನ್ನು ಕಾಣದೇ ಚಿಂತಿತಳಾದ ಕುಂತಿ (ಮಹಾಭಾರತ ಕಥಾಮಾಲೆ 28)

ಭೀಮನನ್ನು ಕಾಣದೇ ಚಿಂತಿತಳಾದ ಕುಂತಿ

ವಾಸುಕಿಯ ಮನವನ್ನರಿತ ಆರ್ಯಕನು ತನ್ನ ಬಂಧುವಾದ ಭೀಮನಿಗೆ ಶಾಶ್ವತವಾಗಿ ಉಳಿಯುವ ಸಂಪತ್ತನ್ನೇ ನೀಡಬೇಕೆಂದು ನಿಶ್ಚಯಿಸಿ ವಾಸುಕಿಗೆ ಹೇಳಿದನು, "ಮಹಾರಾಜ ನನ್ನ ದೌಹಿತ್ರನ ವಿಷಯದಲ್ಲಿ ನೀನು ಸುಪ್ರೀತನಾಗಿರುವೆಯಾದರೆ ಆತನಿಗೆ ಧನ ಕನಕಗಳನ್ನು ಕೊಡಬೇಕಾದ ಕಾರಣವಿಲ್ಲ. ಅವನಿಗೆ ಅದರಿಂದ ಹೆಚ್ಚು ಪ್ರಯೋಜನವೂ ಇಲ್ಲ ಅದರ ಬದಲಾಗಿ

ರಸಂ ಪಿಬೇತ್ ಕುಮಾರೋऽಯಂ ತ್ವಯಿ ಪ್ರೀತೆ ಮಹಾಬಲಃ|

ಬಲಂ ನಾಗಸಹಸ್ರಸ್ಯ ಯಸ್ಮಿನ್ ಕುಂಡೇ ಪ್ರತಿಷ್ಠಿತಮ್||

ಒಂದು ಸಹಸ್ರ ಆನೆಗಳ ಬಲವನ್ನು ಕೊಡುವ ಅಮೃತ ತುಂಬಿದ ರಸ ಕುಂಡಗಳು ನಿನ್ನಲಿವೆಯಷ್ಟೇ ಅದನ್ನು ಭೀಮನಿಗೆ ಕುಡಿಯಲು ಕೊಡು. ಈ ಅಮೃತೋಪಮವಾದ ರಸ ಪ್ರಾಶಾನದಿಂದ ಮಹಾ ಪರಾಕ್ರಮ ಶಾಲಿಯಾಗುವ ಭೀಮನಿಗೆ ಶಾಶ್ವತವಾಗಿರುವ ವರ ನೀಡಿದಂತಾಗುತ್ತದೆ".

ಈ ಮಾತಿಗೆ ನಸುನಗೆಯೊಂದಿಗೆ ಸಮ್ಮತಿಸಿದ ವಾಸುಕಿಯು, ರಸ ಕುಂಡಗಳಲ್ಲಿದ್ದ ಅಮೃತ ಸದೃಶ ರಸವನ್ನು ಭೀಮನಿಗೆ ಯಥಾಶಕ್ತಿಯಾಗಿ ಕುಡಿಯುವ ಅನುಜ್ಞೆಯನ್ನಿತ್ತನು.



ಅಲ್ಲಿದ್ದ ಸರ್ಪಗಳು ಅಮೃತ ಪ್ರಾಶನಕ್ಕೆ ಉಕ್ತವಾದ ಸ್ವಸ್ತಿ ವಾಚನ ಮಾಡುತ್ತಿರಲು, ಪರಿಶುದ್ಧನಾಗಿ ಪೂರ್ವಾಭಿಮುಖನಾಗಿ ಕುಳಿತ ಭೀಮನು ಅಲ್ಲಿಗೆ ತರಲ್ಪಟ್ಟ ರಸ ಕುಂಡಗಳನ್ನು ಪ್ರಾಶನ ಮಾಡತೊಡಗಿದನು. ಒಂದಾದ ಮೇಲೆ ಒಂದರಂತೆ ಎಂಟು ರಸ ಕುಂಡಗಳನ್ನು ಮುಗಿಸಿದನು.

ತೃಪ್ತನಾದ ಭೀಮನ ಶರೀರವು ವಿಶ್ರಾಂತಿಯನ್ನು ಬಯಸಿತು. ಸರ್ಪಗಳು ಸಿದ್ಧ ಪಡಿಸಿದ ಹಂಸ ತೂಲಿಕೆಯ ಮೇಲೆ ವೃಕೋದರನು ವಿಶ್ರಾಂತಿಗಾಗಿ ಪವಡಿಸಿದನು.


ಇತ್ತ, ವೃಕೋದರನ ಹೊರತಾಗಿ ಉಳಿದೆಲ್ಲ ರಾಜಕುಮಾರರೂ ಉದಕ ಕ್ರೀಡನದಿಂದ ತಮ್ಮ ತಮ್ಮ ವಾಹನಗಳಲ್ಲಿ ಕುಳಿತು ಅರಮನೆಗೆ ಮರಳಿದರು. ಭೀಮನು ಎಲ್ಲಿಯೂ ಕಾಣದೆ ಹೋದಾಗ, ತಮಗಿಂತ ಮುಂದಾಗಿಯೇ ಆತ ಮರಳಿರಬಹುದೆಂದು ಶಂಕಿಸಿದರು. ದುರ್ಯೋಧನನು ಮಾತ್ರ ವೃಕೋದರನ ಅಂತ್ಯವಾಯ್ತೆಂದು ಸಂತೋಷಗೊಂಡಿದ್ದನು. ಪಾಪ ಬುದ್ಧಿಯ ಲೇಷವೂ ಇಲ್ಲದ ಯುಧಿಷ್ಠಿರನು ದುರ್ಯೋಧನನ ಯಾವ ಕುಕೃತ್ಯದ ಶಂಕೆಯೂ ಇಲ್ಲದೇ, ಭೀಮನನ್ನು ಕಾಣದೇ ವ್ಯಾಕುಲ ಚಿತ್ತನಾಗಿ ನಗರವನ್ನು ಪ್ರವೇಶಿಸಿದನು.

ನಗರ ಪ್ರವೇಶಿಸಿ ನೇರವಾಗಿ ತಾಯಿಯ ಅಂತಃಪುರಕ್ಕೆ ತೆರಳಿ, ಭೀಮ ತಲುಪಿದ್ದಾನೆಯೇ ಎಂದು ಆತುರದಿಂದ ತಾಯಿಯನ್ನು ವಿಚಾರಿಸಿದನು. ಕುಂತಿಯು ಭೀಮನು ಬಂದಿಲ್ಲವೆಂಬ ವಿಚಾರವನ್ನು ತಿಳಿಸಿದಾಗ, ಎಲ್ಲಾ ಪಾಂಡವರೂ ಸೇರಿ ಎಲ್ಲಾ ಕಡೆಯೂ ಭೀಮನನ್ನು ಹುಡುಕಾಡಿದರು. ಎಲ್ಲಿಯೂ ಭೀಮನ ಸುಳಿವು ಸಿಗದೆ ಹೋದಾಗ, ಕುಂತಿಯ ಎದೆಯೊಡೆದು ಹೋಯಿತು. ಗಾಬರಿಗೊಂಡು ಅಳುತ್ತಾ, ವಿದುರನನ್ನು ಕರೆಸಿಕೊಂಡಳು. ಆತನಲ್ಲಿ ಹೇಳಿದಳು, "ವಿದುರ ಮಹಾಶಯನೇ! ಉದಕ ಕ್ರೀಡನಕ್ಕೆ ಹೋದ ಭೀಮನು ಅರಮನೆಗೆ ಮರಳಿಲ್ಲ. ಉಳಿದೆಲ್ಲರೂ ಹಿಂದಿರುಗಿದರು. ದುರ್ಯೋಧನನಿಗೆ ಭೀಮನ ವಿಷಯದಲ್ಲಿರುವ ಮತ್ಸರವು ಎಲ್ಲರಿಗೂ ತಿಳಿದಿರುವುದೇ ಆಗಿದೆ. ದುರ್ಮತಿಯೂ ರಾಜ್ಯಲೋಭಿಯೂ ಆದ ಆತನೇನಾದರೂ ಮಾತ್ಸರ್ಯದಿಂದ ನನ್ನ ಭೀಮನನ್ನು ಕೊಂದು ಬಿಟ್ಟಿರಬಹುದೇ ಎಂಬ ಆತಂಕ ಕಾಡುತ್ತಿದೆ. ವಿದುರ! ಇದೇನಾದರೂ ನಿಜವಾದರೆ, ನನ್ನ ಹೃದಯವು ಬೆಂದು ಹೋಗುವುದು".


ವಿದುರನು ಕುಂತಿಯನ್ನು ಸಮಾಧಾನ ಪಡಿಸುತ್ತಾ, "ರಾಜಕುಮಾರಿ! ನಿನ್ನ ಪುತ್ರರೆಲ್ಲರೂ ದೀರ್ಘಾಯುಶ್ವಂತರು ಎಂಬುದಾಗಿ ವ್ಯಾಸರು ಹೇಳಿರುವರಲ್ಲವೇ! ಅವರ ಮಾತು ಹುಸಿಯಾಗಲಾರದು. ಭೀಮನು ಖಂಡಿತವಾಗಿ ಸುರಕ್ಷಿತವಾಗಿ ಹಿಂದಿರುಗುವನು. ನೀನು ದುರ್ಯೋಧನನನ್ನು ನಿಂದಿಸುವುದು ಆತನಿಗೆ ತಿಳಿದರೆ, ನಿನ್ನ ಉಳಿದ ಮಕ್ಕಳ ಮೇಲೂ ಆ ದುರುಳನು ದ್ವೇಷ ಸಾಧಿಸುವನು. ಆದ್ದರಿಂದ ನೀನು ಸಮಾಧಾನ ಚಿತ್ತಳಾಗಿರು. ನಾನು ಭೀಮನನ್ನು ಹುಡುಕಿಸುವ ವ್ಯವಸ್ಥೆ ಮಾಡುತ್ತೇನೆ" ಎಂದನು. ಕುಂತಿಯು ಏನು ಮಾಡಬೇಕೆಂಬುದನ್ನು ಅರಿಯದೇ ಅನುಕ್ಷಣವೂ ಭೀಮನನ್ನೇ ಸ್ಮರಿಸುತ್ತಾ, ತನ್ನ ನಾಲ್ವರು ಮಕ್ಕಳೊಡನೆ ಕ್ಷಣವೊಂದು ಯುಗವಾಗಿ ಇರತೊಡಗಿದಳು.


ಇತ್ತ ವೃಕೋದರನು ಏಳು ದಿನಗಳ ಕಾಲ ಅವಿಚ್ಛಿನ್ನವಾಗಿ ಹಂಸ ತೂಲಿಕೆಯ ಮೇಲೆ ನಿದ್ರೆಯ ಸುಖವನ್ನು ಅನುಭವಿಸಿ, ಎಂಟನೆಯ ದಿನ ಮೇಲೆದ್ದನು. ಮೇಲೇಳುತ್ತಿದ್ದಂತೆಯೇ, ಅಮೃತೋಪಮವಾದ ರಸ ಪ್ರಾಶನದಿಂದ ತನ್ನಲ್ಲಿ ಅವಿರ್ವಚನೀಯವಾದ, ಅಪಾರವಾದ ಶಕ್ತಿಯ ಸಂಚಯನವಾದದ್ದನ್ನು ಅರಿತನು. ವೃಕೋದರನು ಎಚ್ಚರವಾದದ್ದನ್ನು ಗಮನಿಸಿದ ಸರ್ಪಗಳೆಲ್ಲ ಆತನ ಸಮೀಪಕ್ಕೆ ಬಂದು, ಆತನಿಗೆ ಪ್ರಿಯೋಕ್ತಿಗಳನ್ನು ಹೇಳಿದವು, "ಮಹಾನುಭಾವನಾದ ಭೀಮನೇ, ರಸ ಕುಂಡಗಳಲ್ಲಿದ್ದ ಅಮೃತ ಪಾನದಿಂದ ಈಗ ನೀನು ಹತ್ತು ಸಾವಿರ ಗಜಗಳ ಬಲಾನ್ವಿತನಾಗಿರುವೆ. ಪ್ರಪಂಚದ ಯಾವ ಯೋಧನು ಸಮರದಲ್ಲಿ ನಿನ್ನನ್ನು ಗೆಲ್ಲಲಾರನು. ಕುರು ಕುಲೋತ್ತಮನೇ! ಈಗ ನೀನು ಈ ಕೂಡಲೇ ಇಲ್ಲಿಗೆ ಸಮೀಪದಲ್ಲಿನ ಪರಮ ಪವಿತ್ರ ಸರೋವರದಲ್ಲಿ ಮಿಂದು, ನಿನ್ನ ಮನೆಗೆ ಹಿಂದಿರುಗು. ಅಲ್ಲಿ ನಿನ್ನನ್ನು ಕಾಣದೇ ಪರಿತಪಿಸುತ್ತಿರುವ ನಿನ್ನ ಸಹೋದರರನ್ನೂ, ತಾಯಿಯನ್ನೂ ಸಂತೈಸು".


ಪವಿತ್ರ ಸರೋವರದಲ್ಲಿ ಮಿಂದು, ಶುಭ್ರ ವಸನಧಾರಿಯಾಗಿ, ಶ್ವೇತ ವರ್ಣದ ಪುಷ್ಪಗಳ ಮಾಲಿಕೆಯನ್ನು ಧರಿಸಿ, ಸರ್ಪಗಳು ಪ್ರೇಮದಿಂದ ಕೊಟ್ಟ ವಿಶನಾಶಕವೂ, ಸುಗಂಧಿತವೂ, ಔಷಧ ಯುಕ್ತವಾದ ಪಾಯಸವನ್ನು ಕುಡಿದು, ವಾಸುಕಿಯೂ, ಆರ್ಯಕನು ಮೊದಲಾದ ಸರ್ಪಶ್ರೇಷ್ಠರ ಆಶೀರ್ವಾದವನ್ನು ಪಡೆದು, ಸರ್ಪಲೋಕದಿಂದ ಭೂಲೋಕಕ್ಕೆ ಬರಲು ಮೇಲೆದ್ದನು. ಸರ್ಪಗಳು ದಿವ್ಯಾಭರಣ ಭೂಷಿತನಾಗಿದ್ದ ಭೀಮನನ್ನು ನೀರಿನಿಂದ ಮೇಲೆತ್ತಿ, ಹಿಂದೆ ಅವನು ಮಲಗಿದ್ದ ನದಿಯ ದಂಡೆಯ ಮೇಲಕ್ಕೆ ಕರೆತಂದು ಬಿಟ್ಟು ಅದೃಶ್ಯವಾದವು.

Comments


bottom of page