top of page

ಯಯಾತಿ ಚರಿತೆ – ಕಾಮದಿಂದ ಮುಕ್ತಿಯವರೆಗೆ

ಚಂದ್ರವಂಶದ ಪ್ರಖ್ಯಾತ ದೊರೆ ನಹುಷನ ನಂತರದಲ್ಲಿ ಆತನ ಮಗ ಯಯಾತಿ ಸಿಂಹಾಸನವನ್ನು ಏರುತ್ತಾನೆ. ತನ್ನ ನಾಲ್ವರು ಸಹೋದರರಿಗೆ ತನ್ನ ಸಾಮ್ರಾಜ್ಯದ ನಾಲ್ಕು ದಿಕ್ಕುಗಳ ಜವಾಬ್ದಾರಿಯನ್ನು ವಹಿಸಿ, ಸಮರ್ಥವಾದ ಆಳ್ವಿಕೆಯನ್ನು ನಡೆಸುತ್ತಿದ್ದ.

ಇದೆ ವೇಳೆ ವೃಷಪರ್ವ ಎನ್ನುವ ದಾನವರಾಜನ ಮಗಳು ಶರ್ಮಿಷ್ಠೆಗೂ ಮತ್ತು ದಾನವ ಗುರುಗಳಾದ ಶುಕ್ರಾಚಾರ್ಯರ ಮಗಳು ದೇವಯಾನಿಗೂ ಅತ್ಯಂತ ಆತ್ಮೀಯವಾದ ಗೆಳೆತನ ಇತ್ತು. ಒಂದು ದಿನ ಈ ಇರ್ವರು ಗೆಳತಿಯರು ಸಾವಿರಾರು ಸಖಿಯರೊಡನೆ ಕಾಡಿನ ಮಧ್ಯದ ಉಪವನದಲ್ಲಿ ವಿಹರಿಸುತ್ತಿರುವಾಗ ಅಂದವಾದ ಸರೋವರ ಒಂದು ಕಣ್ಣಿಗೆ ಬೀಳುತ್ತದೆ. ಅದನ್ನು ನೋಡಿ ಜಲಕ್ರೀಡೆ ಆಡುವ ಆಸೆಯಿಂದ, ದೇವಯಾನಿ ಹಾಗೂ ಶರ್ಮಿಷ್ಠೆಯರು ದಡದಲ್ಲಿ ಬಟ್ಟೆಯನ್ನು ಬಿಚ್ಚಿಟ್ಟು, ಸಖಿಯರ ಒಡಗೂಡಿ ನೀರಿಗೆ ಇಳಿಯುತ್ತಾರೆ. ಪರಸ್ಪರ ಒಬ್ಬರ ಮೇಲೊಬ್ಬರು ನೀರನ್ನು ಎರಚುತ್ತಾ, ವಿವಿಧ ರೀತಿಯ ಜಲಕೇಳಿಯಲ್ಲಿ ಮೈ ಮರೆಯುತ್ತಾರೆ. ಅದೇ ಸಂದರ್ಭ ಪರಮೇಶ್ವರನು ತನ್ನ ಸತಿಯಾದ ಪಾರ್ವತಿ ದೇವಿಯೊಡನೆ ನಂದಿಯ ಮೇಲೇರಿ ಅದೇ ಮಾರ್ಗದಲ್ಲಿ ಬರುತ್ತಾನೆ. ಇದನ್ನು ನೋಡಿದ ತರುಣಿಯರು ಗಲಿಬಿಲಿಗೊಂಡು ಅವಸರವಸರವಾಗಿ ಬಟ್ಟೆಯನ್ನು ತೊಡುತ್ತಾರೆ . ಆದರೆ ಆ ಅವಸರದಲ್ಲಿ ಶರ್ಮಿಷ್ಠೆಯು ಲಕ್ಷಿಸದೆ ದೇವಯಾನಿಯ ಬಟ್ಟೆಗಳನ್ನು ತೊಟ್ಟುಕೊಂಡು ಬಿಡುತ್ತಾಳೆ. ಇದರಿಂದ ಕ್ರೋಧಗೊಂಡ ದೇವಯಾನಿ, "ಸಮಸ್ತ ದಾನವ ಕುಲಕ್ಕೆ ಗುರುವಾದ ಶುಕ್ರಾಚಾರ್ಯರ ಪುತ್ರಿ ನಾನು! ನನ್ನ ಬಟ್ಟೆಯನ್ನು ಒಬ್ಬ ದೈತ್ಯನ ಮಗಳಾದ ನೀನು ಧರಿಸಿರುವುದು ಅಪರಾಧವೆಂದು" ಶರ್ಮಿಷ್ಠೆಯನ್ನು ಹೀನಾಯವಾಗಿ ಮೂದಲಿಸುತ್ತಾಳೆ. ಇದರಿಂದ ಅಪಮಾನಗೊಂಡು ಶರ್ಮಿಷ್ಠೆಯು ಕೂಡ ದೇವಯಾನಿಯನ್ನು ಪಾಳು ಬಾವಿಯೊಂದಕ್ಕೆ ನೂಕಿಬಿಡುತ್ತಾಳೆ.


ಶರ್ಮಿಷ್ಠೆಯು ಹೊರಟು ಹೋದ ನಂತರ ಯಯಾತಿ ಮಹಾರಾಜನು ಬೇಟೆಗಾಗಿ ಅದೇ ಪಾಳು ಬಾವಿಯ ಮಾರ್ಗವಾಗಿ ಸಾಗುತ್ತಿರುವಾಗ, ಭಯದಿಂದ ಕಾಪಾಡುವಂತೆ ಅಂಗಲಾಚಿ ಅರಚಾಡುತ್ತಿರುವ ದೇವಯಾನಿಯ ಧ್ವನಿ ಮಹಾರಾಜನಿಗೆ ಕೇಳಿಸುತ್ತದೆ. ಧ್ವನಿ ಬಂದ ಬಾವಿಯತ್ತ ತೆರಳಿ ಇಣುಕಿ ನೋಡಿದಾಗ, ವಿವಸ್ತ್ರಗಳಾಗಿದ್ದ ದೇವಯಾನಿ ಮಹಾರಾಜನ ಕಣ್ಣಿಗೆ ಬೀಳುತ್ತಾಳೆ. ತನ್ನ ಉತ್ತರೀಯವನ್ನು ನೀಡಿ, ಅವಳನ್ನು ಆ ಬಾವಿಯಿಂದ ಮೇಲೆತ್ತಿ ರಕ್ಷಿಸುತ್ತಾನೆ. ಅದರಿಂದ ದೇವಯಾನಿಯ ಮನಸ್ಸಿನಲ್ಲಿ ಯಯಾತಿಯ ಬಗ್ಗೆ ಪ್ರೇಮ ಉಂಟಾಗುತ್ತದೆ. "ಮಹಾರಾಜ! ಕಷ್ಟಕಾಲದಲ್ಲಿ ನನ್ನ ರಕ್ಷಣೆಗಾಗಿ ಹಿಡಿದ ಈ ಕೈ ಹೀಗೆಯೇ ಶಾಶ್ವತವಾಗಿರಲಿ.. ಇದು ಭಗವಂತನೇ ನಿರ್ಧರಿಸಿದ ಬಂಧವಾಗಿರಬಹುದು. ನಾನು ಬ್ರಾಹ್ಮಣ ಪುತ್ರಿಯಾಗಿದ್ದರೂ ಸಹ ಈ ಹಿಂದೆ ಕಚನು ನನ್ನನ್ನು ಶಪಿಸಿದ ಕಾರಣದಿಂದ ಯಾವ ಬ್ರಾಹ್ಮಣರು ಕೂಡ ನನ್ನನ್ನು ವಿವಾಹವಾಗಲು ಸಾಧ್ಯವಿಲ್ಲ. ಆದ್ದರಿಂದ ದಯಮಾಡಿ ನೀವು ನನ್ನನ್ನು ಮದುವೆಯಾಗಿ" ಎಂದು ಬೇಡಿಕೊಳ್ಳುತ್ತಾಳೆ. ದೇವಯಾನಿಯ ಮಾತಿಗೆ ಒಪ್ಪಿದ ಯಯಾತಿಯು ತನ್ನ ಒಪ್ಪಿಗೆಯನ್ನು ತಿಳಿಸಿ ಅಲ್ಲಿಂದ ಹೊರಡುತ್ತಾನೆ.

ಯಯಾತಿ ಮಹಾರಾಜನು ಅಲ್ಲಿಂದ ಹೊರಟು ಹೋದ ಮೇಲೆ ಅಳುತ್ತಾ ತನ್ನ ತಂದೆ ಇದ್ದಲ್ಲಿಗೆ ಬಂದ ದೇವಯಾನಿಯು, ದಾನವ ರಾಜನ ಪುತ್ರಿ ಶರ್ಮಿಷ್ಠೆಯು ತನಗೆ ಮಾಡಿದ ದ್ರೋಹದ ಕುರಿತು ತನ್ನ ತಂದೆಯಾದ ಶುಕ್ರಾಚಾರ್ಯರಲ್ಲಿ ದೂರುತ್ತಾಳೆ. ವಿಷಯ ತಿಳಿದ ಶುಕ್ರಾಚಾರ್ಯರು ಕೂಡ ನೊಂದು ಮಗಳೊಂದಿಗೆ ನಗರವನ್ನು ಬಿಟ್ಟು ಹೊರಡಲು ನಿರ್ಧರಿಸುತ್ತಾರೆ. ಇದನ್ನು ಅರಿತ ಶರ್ಮಿಷ್ಠೆಯ ತಂದೆ ವೃಷಪರ್ವ, ಗುರುಗಳು ನೊಂದು ಶಪಿಸಿ ಬಿಡುವರು ಅಥವಾ ತನ್ನ ಮೇಲಿನ ಕೋಪ ಬೇಸರಗಳಿಂದ ತನ್ನ ಶತ್ರುಗಳಿಗೆ ಬೆಂಬಲವಾಗಿ ನಿಂತು ಬಿಡುವರು ಎಂಬ ಭಯದಿಂದ ಶುಕ್ರಾಚಾರ್ಯರಿದ್ದಲ್ಲಿಗೆ ಹೋಗಿ ಅವರ ಚರಣಗಳಿಗೆ ಮಣಿದು ತನ್ನ ನಗರವನ್ನು ತೊರೆಯದಿರುವಂತೆ ಬೇಡಿಕೊಳ್ಳುತ್ತಾನೆ. ಆಗ ಶುಕ್ರಾಚಾರ್ಯರು ತಮ್ಮ ಮಗಳ ಮಾತಿನಂತೆ ವೃಷಪರ್ವನಿಗೆ ನಿಬಂಧನೆಯೊಂದನ್ನು ವಿಧಿಸುತ್ತಾರೆ. "ಈ ಕ್ಷಣದಿಂದಲೇ ನಿನ್ನ ಮಗಳು ಶರ್ಮಿಷ್ಠೆಯು ನನ್ನ ಮಗಳಿಗೆ ಮಾಡಿದ ಅಪಚಾರಕ್ಕಾಗಿ, ನನ್ನ ಮಗಳ ದಾಸಿಯಾಗಿ ಸೇವೆ ಮಾಡತಕ್ಕದ್ದು.. ದೇವಯಾನಿಯು ಯಾರನ್ನೇ ವಿವಾಹವಾಗಿ, ಎಲ್ಲಿಗೆ ಹೋದರೂ ಕೂಡ, ನಿನ್ನ ಮಗಳು ಶರ್ಮಿಷ್ಠೆಯೂ ದೇವಯಾನಿಯ ದಾಸಿಯಾಗಿ ಅವಳನ್ನು ಅನುಸರಿಸಿ ಹೋಗತಕ್ಕದ್ದು. ಇದಕ್ಕೆ ನೀನು ಒಪ್ಪಿದರೆ ಮಾತ್ರ ನಾನು ನಿನ್ನ ನಗರದಲ್ಲಿ ಇರುತ್ತೇನೆ" ಎಂದು ಹೇಳುತ್ತಾರೆ.

ಇದಾದ ಬಳಿಕ ಶರ್ಮಿಷ್ಠೆಯು ತನ್ನ ತಂದೆಯ ಮತ್ತು ಪರಿವಾರದವರ ಒಳಿತಿಗಾಗಿ ಶುಕ್ರಾಚಾರ್ಯರ ನಿಬಂಧನೆಗೆ ತನ್ನ ಒಪ್ಪಿಗೆಯನ್ನು ಸೂಚಿಸುತ್ತಾಳೆ. ತನ್ನ ಒಂದು ಸಾವಿರ ಸಖಿಯರ ಜೊತೆಗೂಡಿ ದೇವಯಾನಿಯ ದಾಸಿಯಾಗಿ ಸೇವೆಗೈಯುತ್ತಾಳೆ. ದೇವಯಾನಿಯನ್ನು ಯಯಾತಿಯೊಂದಿಗೆ ವಿವಾಹ ಮಾಡಿಕೊಟ್ಟು, ಶುಕ್ರಾಚಾರ್ಯರು ಶರ್ಮಿಷ್ಠೆಯನ್ನೂ ಸಹ ಯಯಾತಿಗೆ ಒಪ್ಪಿಸಿ, "ಮಹಾರಾಜ ! ಇವಳು ಜೀವ ಇರುವವರೆಗೂ ನನ್ನ ಮಗಳ ದಾಸಿಯಾಗಿ ಸೇವೆ ಗೈಯುವುದನ್ನು ತನ್ನ ಕರ್ತವ್ಯವೆಂದು ತಿಳಿದಿದ್ದಾಳೆ, ಆದ್ದರಿಂದ ಇನ್ನು ಮುಂದೆ ಇವಳ ಹೊಣೆಗಾರಿಕೆಯು ಸಹ ನಿನ್ನದೇ ಆಗಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ನೀನು ಇವಳ ಜೊತೆ ಏಕಾಂತವಾಗಿ ಸಮಯವನ್ನು ಕಳೆಯುವ ಹಾಗಿಲ್ಲ!" ಎಂದು ಎಚ್ಚರಿಸಿ ಕಳುಹಿಸಿಕೊಡುತ್ತಾರೆ.

ಕೆಲವು ಕಾಲ ನಂತರ ದೇವಯಾನಿಯು ಪುತ್ರವತಿಯಾಗುತ್ತಾಳೆ. ಇದನ್ನು ತಿಳಿದ ಶರ್ಮಿಷ್ಠೆಯು ಕೂಡ ಸ್ತ್ರೀ ಸಹಜವಾದ ಪುತ್ರ ಕಾಮನೆಯಿಂದ ಮಹಾರಾಜ ಯಯಾತಿಯಲ್ಲಿ ಸಮಾಗಮವನ್ನು ಯಾಚಿಸುತ್ತಾಳೆ. ಶರ್ಮಿಷ್ಠೆಯ ಪುತ್ರಾಕಾಂಕ್ಷೆಯು ಧರ್ಮವೂ, ಸ್ತ್ರೀ ಸಹಜವೂ ಎಂದು ಭಾವಿಸಿದ ಮಹಾರಾಜ, ಶುಕ್ರಾಚಾರ್ಯರ ಮಾತನ್ನು ಮೀರಿ, ಶರ್ಮಿಷ್ಠೆಯ ಕಾಮನೆಯನ್ನು ಈಡೇರಿಸುತ್ತಾನೆ. ದೇವಯಾನಿಯಲ್ಲಿ ಯದು ಮತ್ತು ತುರ್ವಸು ಎಂಬ ಇಬ್ಬರು ಮಕ್ಕಳಾದರೆ, ಶರ್ಮಿಷ್ಠೆಯಲ್ಲಿ ದೃಹ್ಯು, ಅನು ಮತ್ತು ಪುರು ಎಂಬ ಮೂವರು ಪುತ್ರರು ಜನಿಸುತ್ತಾರೆ. ಕೆಲವು ಸಮಯದ ಬಳಿಕ ಶರ್ಮಿಷ್ಠೆಯ ಬದಲಾದ ದೇಹ ಲಕ್ಷಣಗಳ ಕುರಿತಾಗಿ ಶಂಕೆಗೊಂಡು, ದೇವಯಾನಿಯು ವಿಚಾರಿಸಲಾಗಿ, ತನ್ನ ಪತಿಯಿಂದಲೇ ಶರ್ಮಿಷ್ಠೆ ಮಕ್ಕಳನ್ನು ಹೊಂದಿದ್ದಾಳೆ ಎಂಬ ವಿಚಾರ ಬಹಿರಂಗವಾಗುತ್ತದೆ. ಇದರಿಂದ ಕುಪಿತಳಾದ ದೇವಯಾನಿಯು ಪತಿಯನ್ನು ತೊರೆದು ತನ್ನ ತಂದೆಯ ಮನೆಗೆ ಹೊರಟು ಹೋಗುತ್ತಾಳೆ.


ಸತಿಯ ಮೇಲಿನ ಮೋಹದಿಂದ ಯಯಾತಿಯು ಪರಿಪರಿಯಾಗಿ ಯಾಚಿಸಿದರೂ ಲೆಕ್ಕಿಸದೆ, ಧಿಕ್ಕರಿಸಿ ತನ್ನ ತಂದೆಯಲ್ಲಿಗೆ ಹೋಗಿ ಪತಿಯ ಕುರಿತು ದೂರುತ್ತಾಳೆ. ಕೋಪಗೊಂಡ ಶುಕ್ರಾಚಾರ್ಯರು ತನ್ನ ಮಾತನ್ನು ಮೀರಿದ ಮತ್ತು ಸ್ತ್ರೀಲಂಪಟನಾದ ನಿನಗೆ ಮನುಷ್ಯನನ್ನು ಕುರುಪಗೊಳಿಸುವ ವೃದ್ಧಾಪ್ಯ ಉಂಟಾಗಲಿ ಎಂದು ಶಪಿಸುತ್ತಾರೆ. ಇದರಿಂದ ದುಃಖಿತನಾದ ಯಯಾತಿಯೂ ಶುಕ್ರಾಚಾರ್ಯರಲ್ಲಿ ವಿನಮ್ರನಾಗಿ, "ಶ್ರೇಷ್ಠರೇ! ಈ ನಿಮ್ಮ ಶಾಪದ ಪರಿಣಾಮ ನನಗೆ ಮಾತ್ರವಲ್ಲದೆ, ಇನ್ನೂ ಯೌವ್ವನವತಿಯಾಗಿರುವ ನಿಮ್ಮ ಮಗಳ ಮೇಲೂ ಉಂಟಾಗುತ್ತದೆ. ಆದ್ದರಿಂದ ದಯಮಾಡಿ ನನ್ನನ್ನು ಕ್ಷಮಿಸಿ, ಈ ಶಾಪದಿಂದ ಬಿಡುಗಡೆಗೊಳಿಸಿ" ಎಂದು ಬೇಡಿಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಶಾಂತರಾದ ಶುಕ್ರಾಚಾರ್ಯರಿಗೂ ಇದು ಸರಿ ಎನಿಸಿ, "ಸರಿ! ಯಾರಾದರೂ ಸಂತೋಷದಿಂದ ನಿನಗೆ ತಮ್ಮ ತಾರುಣ್ಯವನ್ನು ಕೊಟ್ಟರೆ ಅವರಿಗೆ ಈ ನಿನ್ನ ವೃದ್ಧಾಪ್ಯವನ್ನು ಕೊಟ್ಟು ನೀನು ಭೋಗ ಜೀವನವನ್ನು ಆನಂದಿಸಬಹುದು" ಎಂದು ಹೇಳುತ್ತಾರೆ. ಶುಕ್ರಾಚಾರ್ಯರ ಈ ಔದಾರ್ಯಕ್ಕೆ ಸಂತೋಷಗೊಂಡು ಶಾಪಗ್ರಸ್ತ ಯಯಾತಿ ಮಹಾರಾಜನು ತನ್ನ ರಾಜಧಾನಿಗೆ ಮರಳಿದ ಮೇಲೆ ತನ್ನ ಮಕ್ಕಳನ್ನೆಲ್ಲ ಕರೆಸಿ, "ಮಕ್ಕಳೇ! ನಾನೀಗ ನಿಮ್ಮ ತಾತನಾದ ಶುಕ್ರಾಚಾರ್ಯರಿಂದ ಶಪಿಸಲ್ಪಟ್ಟು ನನ್ನ ತಾರುಣ್ಯವನ್ನು ಕಳೆದುಕೊಂಡಿದ್ದೇನೆ, ನಿಮ್ಮಲ್ಲಿ ಯಾರಾದರೂ ನನ್ನ ಈ ವೃದ್ಧಾಪ್ಯವನ್ನು ಪಡೆಯಲು ಸಿದ್ದರಾದರೆ ನಿಮ್ಮ ಭಾಗದ ತಾರುಣ್ಯವನ್ನು ನಾನು ಅನುಭವಿಸಲು ಅವರೇ ಅವಕಾಶವೊಂದನ್ನೂ ಕೂಡ ನೀಡಿದ್ದಾರೆ. ಮನುಷ್ಯ ಸಹಜವಾದ ವಿಷಯ ಸುಖಗಳನ್ನು ಹೊಂದದೆ ವೈರಾಗ್ಯವನ್ನು ಹೊಂದಲಾರೆ. ಆ ಕಾರಣಕ್ಕಾಗಿ ನಿಮ್ಮಲ್ಲಿ ಯಾರಾದರೂ ನಿಮ್ಮ ತಾರುಣ್ಯವನ್ನು ನನಗೆ ನೀಡಿರಿ" ಎಂದು ಕೇಳುತ್ತಾನೆ. ನಾಲ್ವರು ಪುತ್ರರು ಯಯಾತಿ ಮಹಾರಾಜನ ಈ ಮಾತಿಗೆ ಯಾವ ಮನ್ನಣೆಯನ್ನೂ ನೀಡದೆ ನಿರಾಕರಿಸುತ್ತಾರೆ. ಕೊನೆಯವನಾದ ಶರ್ಮಿಷ್ಠೆಯ ಮಗ ಪುರು ತಂದೆಯ ಆಶಯವನ್ನು ಪೂರೈಸುವುದು ತನ್ನ ಆದ್ಯ ಕರ್ತವ್ಯ ಮತ್ತು ಪರಮ ಪುಣ್ಯದಾಯಕವಾದ ಕೆಲಸ ಎಂದು ಭಾವಿಸಿ ತನ್ನ ತಾರುಣ್ಯವನ್ನು ತಂದೆಗೆ ನೀಡಲು ಒಪ್ಪುತ್ತಾನೆ.


ಪುರುವಿನ ತಾರುಣ್ಯವನ್ನು ಪಡೆದು ಯಯಾತಿಯೂ ಎಲ್ಲ ರೀತಿಯ ಸುಖ ಭೋಗಗಳನ್ನು ಅನುಭವಿಸುತ್ತಾ ಹೋಗುತ್ತಾನೆ. ಅನೇಕ ರೀತಿಯ ಯಾಗ ಯಜ್ಞಗಳ ಮುಖೇನವಾಗಿ ಶ್ರೀಹರಿಯನ್ನು ಆರಾಧಿಸುತ್ತಾನೆ. ತನ್ನ ಪ್ರಿಯ ಸತಿಯಾದ ದೇವಯಾನಿಯೊಂದಿಗೆ ಸುಖಮಯ ಜೀವನವನ್ನು ನಡೆಸುತ್ತಾ ದೀರ್ಘವಾದ ಒಂದು ಸಾವಿರ ವರ್ಷಗಳನ್ನು ಕಳೆದರೂ ಕೂಡ ಅವನಿಗೆ ಭೋಗ ಜೀವನದಲ್ಲಿ ತೃಪ್ತಿಯೇ ಉಂಟಾಗುವುದಿಲ್ಲ. ಅದನ್ನು ಚಿಂತಿಸಲಾಗಿ, ಭೂಮಂಡಲದಲ್ಲಿ ಇರುವ ಶ್ರೇಷ್ಠವಾದ ಆಹಾರ, ವಿಹಾರ, ಧನ, ಕನಕ, ಪಶು ಸ್ತ್ರೀಯರೇ ಮೊದಲಾದವುಗಳೆಲ್ಲ ಒಟ್ಟೊಟ್ಟಿಗೆ ದೊರೆತರೂ ಸಹ ಕಾಮವಶನಾದ ಮನುಷ್ಯನ ಮನಸ್ಸು ಸಂತುಷ್ಟಿ ಹೊಂದುವುದಿಲ್ಲ, ಬದಲಿಗೆ ಇನ್ನಷ್ಟು ಕಾಮನೆಗಳು ಜಾಗೃತಗೊಳ್ಳುತ್ತಲೇ ಹೋಗುತ್ತವೆ. ಆದ್ದರಿಂದ ಯಾವುದೇ ವಸ್ತುಗಳೊಡನೆ ರಾಗ-ದ್ವೇಷಗಳ ಭಾವ ಹೊಂದದೆ ಸಮದರ್ಶಿಯಾದರೆ ಅದು ಪರಮ ಸುಖವನ್ನು ನೀಡುತ್ತದೆ. ಆತ್ಮದ ಉದ್ಧಾರವನ್ನು ಬಯಸುವವನು ವಿಷಯಾಸಕ್ತಿಯನ್ನು ತ್ಯಜಿಸಲೇಬೇಕು ಎಂದು ತೀರ್ಮಾನಿಸಿ, ತನ್ನ ಪ್ರಿಯ ಸತಿಯಾದ ದೇವಯಾನಿಯಲ್ಲಿ ಈ ವಿಷಯವನ್ನು ತಿಳಿಸಿ, ತಾನು ಅನುಭವಿಸುತ್ತಿರುವ ತಾರುಣ್ಯವನ್ನು ಮಗ ಪುರುವಿಗೆ ಮರಳಿಸಿ, ರಾಜ್ಯವನ್ನು ಮಕ್ಕಳಿಗೆ ಒಪ್ಪಿಸಿ ಕಾಡಿಗೆ ಹೋಗಿ ಆತ್ಮ ಸಾಕ್ಷಾತ್ಕಾರದ ಸಾಧನೆಯಲ್ಲಿ ತೊಡಗುತ್ತಾನೆ. ಪತಿಯ ಮಾತಿನಿಂದ ಪ್ರೇರಿತಳಾಗಿ ದೇವಯಾನಿಯೂ ಸಹ ಇದೇ ಮಾರ್ಗದಲ್ಲಿ ಸಾಗಿ, ಸತಿಪತಿಗಳಿಬ್ಬರೂ ಇಹದ ಬಂಧವನ್ನು ಕಳಚಿ ಪರಮಾತ್ಮನನ್ನು ಹೊಂದುತ್ತಾರೆ.

Comments


bottom of page