ಬ್ರಹ್ಮರ್ಷಿ ವಿಶ್ವಾಮಿತ್ರರ ಕಥೆ - 1
- Asha Satish

- Jun 23
- 3 min read
ಚಂದ್ರ ವಂಶದ ದೊರೆ ಗಾಧಿ ಎಂಬುವವನ ಪುತ್ರ ಕೌಶಿಕ. ಸಾವಿರಾರು ವರ್ಷಗಳ ಕಾಲ ಧರ್ಮಾತ್ಮನಾಗಿ ರಾಜ್ಯವಾಳುತ್ತ ಬದುಕಿದವ. ಕೌಶಿಕ ಮಹಾರಾಜ ಒಂದು ದಿನ ತನ್ನ ಅಕ್ಷೋಹಿಣಿ ಸೈನ್ಯದೊಂದಿಗೆ ಲೋಕ ಸಂಚಾರವನ್ನು ಮಾಡುತ್ತಾ ಇರುವ ಸಂದರ್ಭದಲ್ಲಿ, ಕಾಡಿನ ಮಧ್ಯೆ ಇರುವಂತಹ ಒಂದು ಆಶ್ರಮ ಪ್ರದೇಶದ ಬಳಿ ಬರುತ್ತಾನೆ. ನಾನಾ ವಿಧದ ಫಲ-ಪುಷ್ಪ ಗಿಡ-ಲತೆಗಳಿಂದ ಸುಂದರವಾಗಿ ಶೋಭಿಸುತ್ತಿದ್ದ ಆ ಆಶ್ರಮ, ಧರ್ಮಕಾರ್ಯನಿರತ ಬ್ರಾಹ್ಮಣರು ಹಾಗೂ ತಪೋನಿರತ ಋಷಿಮುನಿಗಳಿಂದ ಕೌಶಿಕ ಮಹಾರಾಜನನ್ನು ಆಕರ್ಷಿಸುತ್ತದೆ.

ವಿಚಾರಿಸಿದಾಗ ಅದು ವಸಿಷ್ಠ ಮುನಿಗಳ ಆಶ್ರಮ ಎಂದು ತಿಳಿಯುತ್ತದೆ. ಅಂತಹ ಮಹಾತ್ಮರನ್ನು ಸಂದರ್ಶಿಸಿ ಅವರ ಆಶೀರ್ವಾದವನ್ನು ಪಡೆದು ಮುನ್ನಡೆಯಬೇಕಾದದ್ದು ಧರ್ಮ ಅಂತ ಭಾವಿಸಿ, ಕೌಶಿಕ ಮಹಾರಾಜ ಆಶ್ರಮದ ಬಳಿ ಬಂದು, ಭಕ್ತಿಯಿಂದ ವಸಿಷ್ಠರಿಗೆ ನಮಸ್ಕರಿಸುತ್ತಾನೆ. ಸಂತೋಷಗೊಂಡ ವಸಿಷ್ಠರು ಕೌಶಿಕ ಮಹಾರಾಜನನ್ನು ಮತ್ತು ಅವನ ಪರಿವಾರವನ್ನು ಅತ್ಯಂತ ಆದರದಿಂದ ಸ್ವಾಗತಿಸಿ ಕುಶಲೊಪರಿಯನ್ನು ವಿಚಾರಿಸುತ್ತಾರೆ. ಇಬ್ಬರೂ ದೀರ್ಘ ಸಮಯದವರೆಗೆ ಪರಸ್ಪರ ವಿಶ್ವಾಸದಿಂದ ಮಾತುಕತೆಯಲ್ಲಿ ತೊಡಗುತ್ತಾರೆ. ಇದಾದ ನಂತರ ವಸಿಷ್ಠ ಮಹರ್ಷಿಗಳು ಕೌಶಿಕ ಮಹಾರಾಜನನ್ನು ಕುರಿತು, "ಮಹಾರಾಜ, ನೀವೆಲ್ಲ ಬಹಳ ದೂರದಿಂದ ಇಲ್ಲಿಯವರೆಗೆ ಬಂದು ದಣಿದಿದ್ದೀರಿ, ನಿನ್ನಂತಹ ಶ್ರೇಷ್ಠ ರಾಜ ನನ್ನ ಅತಿಥಿಯಾಗಿ ಬಂದಿರುವುದು ತುಂಬಾ ಸಂತೋಷದ ವಿಚಾರ. ಈ ದಿನ ತಮಗೆ ಮತ್ತು ತಮ್ಮ ಪರಿವಾರಕ್ಕೆ, ಸಂಪೂರ್ಣ ಅಕ್ಷೌಹಿಣಿ ಸೈನ್ಯಕ್ಕೆ ಯಥೋಚಿತವಾದ ಭೋಜನದ ವ್ಯವಸ್ಥೆಯನ್ನು ಮಾಡುತ್ತೇನೆ, ದಯಮಾಡಿ ನಮ್ಮ ಸತ್ಕಾರವನ್ನು ಸ್ವೀಕರಿಸಬೇಕು" ಅಂತ ವಿನಂತಿಸುತ್ತಾರೆ. ವಸಿಷ್ಠರ ವಿನಂತಿಗೆ ಕೌಶಿಕ ಮಹಾರಾಜ ತನ್ನ ಒಪ್ಪಿಗೆಯನ್ನು ನೀಡುತ್ತಾನೆ. ಆದರೂ ಜಪ-ತಪ-ಯಾಗ-ಯಜ್ಞಗಳಲ್ಲಿ ತೊಡಗಿಸಿಕೊಂಡಿರುವ ಈ ಋಷಿ ಆಶ್ರಮದಲ್ಲಿ ಇಷ್ಟೊಂದು ಜನರಿಗೆ ಭೋಜನ ಸತ್ಕಾರವೆಂದರೆ ಸುಲಭದ ಮಾತಲ್ಲ. ಇದನ್ನು ಹೇಗೆ ವ್ಯವಸ್ಥೆ ಮಾಡಬಲ್ಲರು ಎಂಬ ಪ್ರಶ್ನೆ ಮಹಾರಾಜನ ಮನಸ್ಸಿನಲ್ಲಿ ಸಹಜವಾಗಿ ಮೂಡಿರುತ್ತದೆ.
ಅತಿಥಿಗಳ ಸತ್ಕಾರ ವ್ಯವಸ್ಥೆಗಾಗಿ ವಸಿಷ್ಠರು ತಮ್ಮ ಆಶ್ರಮದಲ್ಲಿದ್ದ ದೈವೀ ಗುಣ ಸಂಪನ್ನೆಯಾಗಿದ್ದ, ಯಾಗ ಕಾರ್ಯಕ್ಕಾಗಿ ದೇವಲೋಕದಿಂದ ವಸಿಷ್ಠರಿಗಾಗಿ ಕಳುಹಿಸಲ್ಪಟ್ಟ ಶಬಲೆ ಎನ್ನುವ ಗೋವಿನ ಬಳಿ ಹೋಗಿ, ಅತಿಥಿ ಸತ್ಕಾರಕ್ಕೆ ಅಗತ್ಯವಾದ ವಸ್ತುಗಳನ್ನು ಒದಗಿಸಿಕೊಡುವಂತೆ ಪ್ರಾರ್ಥಿಸುತ್ತಾರೆ. ವಸಿಷ್ಠರ ಪ್ರಾರ್ಥನೆಗೆ ಶಬಲೆಯು ತಕ್ಷಣವೇ ವಿಧವಿಧವಾದ ಖಾದ್ಯಗಳನ್ನು, ಅನ್ನ ತೊವ್ವೆ, ಪಾಯಸ, ಕಬ್ಬಿನರಸ, ಜೇನು, ಹಾಲು, ಮೊಸರು, ತುಪ್ಪಗಳಿಂದ ಕೂಡಿದ ಮೃಷ್ಟಾನ್ನ ಭೋಜನವನ್ನು ಸೃಷ್ಟಿಗೊಳಿಸುತ್ತದೆ. ಅವುಗಳಿಂದ ವಸಿಷ್ಠರು ಅತಿಥಿಗಳಿಗೆ ತೃಪ್ತಿಯಾಗುವಂತೆ ಹೊಟ್ಟೆ ತುಂಬಾ ಊಟ ಬಡಿಸುತ್ತಾರೆ.
ಸೈನಿಕರು, ರಾಜ ಪರಿವಾರದವರು ವಸಿಷ್ಠರ ಅತಿಥಿಸತ್ಕಾರದಿಂದ ಅತ್ಯಂತ ಸಂತೋಷಗೊಳ್ಳುತ್ತಾರೆ. ಕೌಶಿಕ ಮಹಾರಾಜ, ವಶಿಷ್ಠ ಮುನಿಗಳಿಗೆ ನಮಸ್ಕರಿಸುತ್ತಾ, "ಮಹರ್ಷಿಗಳೇ, ನಿಮ್ಮ ಸತ್ಕಾರದಿಂದ ನಾವೆಲ್ಲ ಸಂತುಷ್ಟರಾಗಿದ್ದೇವೆ. ಕೇಳಿದ್ದನ್ನೆಲ್ಲ ಕೊಡುವ ಈ ಗೋವು ಕಾಡಿನ ಮಧ್ಯೆ ಇರುವ ತಮ್ಮ ಬಳಿ ಇರುವುದಕ್ಕಿಂತ, ಮಹಾರಾಜನಾದ ನನ್ನ ಬಳಿ ಇದ್ದರೆ ಇನ್ನಷ್ಟು ಅನುಕೂಲವಾಗುತ್ತದೆ. ಆದ್ದರಿಂದ ದಯಮಾಡಿ ಈ ಶಬಲೆ ಎಂಬ ಗೋವನ್ನು ನೀವು ನನಗೆ ಕೊಡಿ. ಅದಕ್ಕೆ ಬದಲಾಗಿ ಸಾವಿರಾರು ಗೋವುಗಳನ್ನು, ಆನೆಗಳನ್ನು, ಸುವರ್ಣಮಯ ರಥಗಳನ್ನೂ ನಿಮಗೆ ಕೊಡುತ್ತೇನೆ" ಅಂತ ಹೇಳುತ್ತಾನೆ. ಅದಕ್ಕೆ ವಸಿಷ್ಠರು "ಅದು ಸಾಧ್ಯವೇ ಇಲ್ಲ!! ಯಾವ ಗೋವು, ಆನೆ, ರಥ, ರಾಜ್ಯ ಅಥವಾ ಇನ್ಯಾವುದೇ ವಸ್ತುಗಳ ಬಗ್ಗೆಯೂ ಕೂಡ ತಮಗೆ ಆಸೆ ಇಲ್ಲ. ಅದರ ಅಗತ್ಯವೂ ಇಲ್ಲ. ಶಬಲೆಯನ್ನು ಕೊಡುವುದು ಸಾಧ್ಯವಿಲ್ಲ!" ಅಂತ ಹೇಳುತ್ತಾರೆ.
ಇದರಿಂದ ಕೌಶಿಕ ಮಹಾರಾಜ ಕ್ರೋಧಗೊಂಡು "ನೀವು ಕೊಡದೆ ಹೋದರೆ ನಾನು ಬಲವಂತದಿಂದಲಾದರೂ ಕೊಂಡೊಯ್ಯುತ್ತೇನೆ" ಎಂದು ಅಬ್ಬರಿಸುತ್ತ, ತನ್ನ ಸೈನಿಕರನ್ನು ಕರೆದು, ಶಬಲೆಯನ್ನು ಎಳೆದು ತರುವಂತೆ ಆಜ್ಞಾಪಿಸುತ್ತಾನೆ. ಸೈನಿಕರು ಶಬಲೆಯನ್ನು ಎಳೆದು ತರುತ್ತಾರೆ. ದೈವಿಗುಣ ಸಂಪನ್ನೆಯಾದ ಆ ಗೋವು ವಸಿಷ್ಠರ ಬಳಿ ಬಂದು ಕಣ್ಣೀರು ಸುರಿಸುತ್ತಾ, "ನಾನು ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗಲು ಸಾಧ್ಯವಿಲ್ಲ. ಇವರೆಲ್ಲ ನನ್ನನ್ನು ಬಲವಂತದಿಂದ ಕರೆದೊಯ್ಯುತ್ತಿದ್ದರೂ ತಾವೇಕೆ ಸುಮ್ಮನೆ ನಿಂತಿದ್ದೀರಿ, ಈ ರೀತಿ ನನ್ನನ್ನು ಅವರಿಗೆ ಒಪ್ಪಿಸಲು ಕಾರಣವೇನು?! ನಾನು ಮಾಡಿದ ತಪ್ಪಾದರೂ ಏನು?! ನಿಮಗೆ ನನ್ನಿಂದ ಆಗಬೇಕಾದ ಕೆಲಸದಲ್ಲಿ ಏನಾದರೂ ದ್ರೋಹವಾಯಿತೆ?!" ಎಂದು ಪ್ರಶ್ನಿಸುತ್ತದೆ. ಇದನ್ನು ಕೇಳಿ ವಸಿಷ್ಠರೂ ಕೂಡ ಬಹಳ ದುಃಖದಿಂದ "ಮಗಳೇ, ನಿನ್ನಿಂದ ಯಾವ ತಪ್ಪು ನಡೆದಿಲ್ಲ.. ಆದರೆ ನಾನೀಗ ನಿಸ್ಸಹಾಯಕನಾಗಿದ್ದೇನೆ! ಶ್ರೇಷ್ಠವಾದ ತಪಶಕ್ತಿಯನ್ನು ಹೊಂದಿದ್ದರು ಕೂಡ ಮಹಾರಾಜನ ವಿರುದ್ಧ ಗೆಲ್ಲಲಾರೆ. ನಿನ್ನ ರಕ್ಷಣೆಯನ್ನು ಈಗ ನೀನೆ ಮಾಡಿಕೊಳ್ಳಬೇಕಾಗಿದೆ" ಅಂತ ಹೇಳುತ್ತಾರೆ. ಇದನ್ನು ಕೇಳಿದ ಶಬಲೆ ಒಮ್ಮೆ ಹೊಂಕರಿಸಿ ಮೈ ಕೊಡುವುತ್ತದೆ. ಆಗ ಅವಳ ದೇಹದಿಂದ ಸಾವಿರಾರು ಸೈನಿಕರು ಹುಟ್ಟಿಕೊಳ್ಳುತ್ತಾರೆ. ಅವರೆಲ್ಲರೂ ಒಮ್ಮೆಲೇ ಕೌಶಿಕ ಮಹಾರಾಜನ ಸೈನಿಕರ ಮೇಲೆ ಬಂದು, ಒಂದು ಘೋರ ಕದನವೇ ನಡೆಯುತ್ತದೆ. ಅನೇಕ ಸೈನಿಕರು ಈ ಯುದ್ಧದಲ್ಲಿ ಸತ್ತು ಹೋಗುತ್ತಾರೆ. ಕೌಶಿಕ ಮಹಾರಾಜನ ಅನೇಕ ಮಕ್ಕಳು ಈ ಯುದ್ಧದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಶಬಲೆ ಸೃಷ್ಟಿಸಿದ ವಸಿಷ್ಠರ ಸೈನ್ಯದೆದುರು ಕೌಶಿಕ ಮಹಾರಾಜನ ಅಕ್ಷೋಹಿಣಿ ಸೈನ್ಯ ಸಂಪೂರ್ಣವಾಗಿ ಸೋತು ಹೋಗುತ್ತದೆ.
ಸೋಲಿನಿಂದ ಮಹಾರಾಜನ ಕೋಪ ಇನ್ನಷ್ಟು ಜಾಸ್ತಿಯಾಗುತ್ತದೆ. ಯುದ್ಧದಲ್ಲಿ ಅಳಿದು ಕೊನೆಯಲ್ಲಿ ಉಳಿದಂತಹ ತನ್ನ ಒಬ್ಬನೇ ಮಗನಿಗೆ ರಾಜ್ಯದ ಪಟ್ಟವನ್ನು ಕಟ್ಟಿ, ಘೋರವಾದಂತಹ ತಪಸ್ಸಿಗೆ ಹೊರಟುಬಿಡುತ್ತಾನೆ. ಹೇಗಾದರೂ ಸರಿ ವಸಿಷ್ಠರನ್ನು ಸೋಲಿಸಿ ಶಬಲೆಯನ್ನು ಪಡೆಯಬೇಕೆಂಬ ದುರಾಸೆಯಿಂದ ಒಂದು ನಿರ್ಧಾರವನ್ನು ಮಾಡುತ್ತಾನೆ. ಹಿಮಾಲಯದ ತಪ್ಪಲಲ್ಲಿ ಕುಳಿತು ಕಠಿಣವಾದ ತಪಸ್ಸನ್ನು ಮಾಡುತ್ತಾನೆ. ಅನೇಕ ವರ್ಷಗಳ ತಪಸ್ಸಿನ ಪರಿಣಾಮ ಮಹಾದೇವ ಒಲಿದು ಯಾವ ವರ ಬೇಕು ಅಂತ ಕೇಳುತ್ತಾನೆ.
ವಸಿಷ್ಠರ ಮೇಲೆ ಹಗೆ ತೀರಿಸಿಕೊಳ್ಳುವುದೇ ಕೌಶಿಕನ ತಪಸ್ಸಿನ ಉದ್ದೇಶವಾದ್ದರಿಂದ, ಕೌಶಿಕ ತಡ ಮಾಡದೇ ವರ ಕೇಳುತ್ತಾನೆ. "ಮಹಾದೇವ! ಅಂಗ-ಉಪಾಂಗ-ಉಪನಿಷತ್ತು ಮತ್ತು ರಹಸ್ಯಗಳೊಂದಿಗೆ ಧನುರ್ವೇದವನ್ನು ನನಗೆ ಕರುಣಿಸು" ಎಂದು ಮಹಾದೇವನಲ್ಲಿ ಪ್ರಾರ್ಥಿಸುತ್ತಾನೆ. ಕೌಶಿಕ ಇಚ್ಛೆಯಂತೆ ತಥಾಸ್ತು ಎಂದು ಮಹಾದೇವನು ಅನುಗ್ರಹಿಸುತ್ತಾನೆ.
ಮಹಾದೇವನಿಂದ ವರ ಪಡೆದ ಕೌಶಿಕ ತನ್ನನ್ನು ತಾನೇ ಸರ್ವಶ್ರೇಷ್ಠನೆಂಬ ಭ್ರಮೆಯಿಂದ ಗರ್ವಗೊಂಡು ವಸಿಷ್ಠರ ಆಶ್ರಮಕ್ಕೆ ಹೋಗಿ, ಬಗೆ ಬಗೆಯ ಅಸ್ತ್ರಗಳನ್ನು ಪ್ರಯೋಗಿಸಿ ಆ ತಪೋವನವನ್ನು ಸುಡುವುದಕ್ಕೆ ತೊಡಗುತ್ತಾನೆ. ಅದನ್ನು ನೋಡಿ ಅಲ್ಲಿ ನೆಲೆಸಿದ ನೂರಾರು ಮುನಿಗಳು ಭಯಗೊಂಡು ದಿಕ್ಕು ದಿಕ್ಕುಗಳಿಗೆ ಓಡತೊಡಗುತ್ತಾರೆ. ಆಶ್ರಮ ಪ್ರದೇಶದಲ್ಲಿದ್ದ ಸಾವಿರಾರು ಸಂಖ್ಯೆಯ ಪ್ರಾಣಿ-ಪಕ್ಷಿಗಳು ಭಯಗೊಂಡು ಓಡತೊಡಗುತ್ತವೆ. ಧರ್ಮಕಾರ್ಯದಲ್ಲಿ ನಿರತರಾಗಿದ್ದ ವಸಿಷ್ಠರ ಮೇಲೆ ಆಗ್ನೇಯ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗುತ್ತಾನೆ. ಇದನ್ನು ನೋಡಿದ ವಸಿಷ್ಠರು ಕಾಲಾಗ್ನಿಯಂತೆ ಉರಿದೆದ್ದು, "ಎಲೈ ಕ್ಷತ್ರಿಯ ಕುಲ ಕಳಂಕಿತನೆ! ಎಲ್ಲಿಯ ಬ್ರಹ್ಮಬಲ? ಎಲ್ಲಿಯ ಶಸ್ತ್ರಬಲ? ಅಸ್ತ್ರ-ಶಸ್ತ್ರಗಳ ನಿನ್ನ ಗರ್ವವನ್ನು ನನ್ನ ಬ್ರಹ್ಮ ಬಲದಿಂದ ಸುಟ್ಟುಬಿಡುತ್ತೇನೆ" ಎಂದು ಆರ್ಭಟಿಸಿ ತಮ್ಮಲ್ಲಿನ ಬ್ರಹ್ಮ ದಂಡವನ್ನು ಕೈಯಲ್ಲಿ ಎತ್ತಿಕೊಂಡು ಕೌಶಿಕನನ್ನು ಎದುರಿಸಲು ಮುಂದಾಗುತ್ತಾರೆ. ಇದರಿಂದ ಉರಿಯುವ ಬೆಂಕಿಯು ನೀರಿನಿಂದ ಶಾಂತವಾದಂತೆ, ಕೌಶಿಕನ ಆಗ್ನೇಯಾಸ್ತ್ರವು ವಸಿಷ್ಠರ ಬ್ರಹ್ಮದಂಡದಿಂದ ಶಾಂತವಾಗುತ್ತದೆ. ಇದರಿಂದ ಕೋಪಗೊಂಡ ಕೌಶಿಕನು ಅನೇಕ ರೀತಿಯ ಶಸ್ತ್ರಾಸ್ತ್ರಗಳನ್ನು ವಶಿಷ್ಠರ ಮೇಲೆ ಪ್ರಯೋಗಿಸಿದರೂ ಸಹ ಎಲ್ಲವನ್ನೂ ಬ್ರಹ್ಮ ದಂಡದಿಂದ ನಾಶಗೊಳಿಸುತ್ತಾರೆ. ಕೊನೆಯಲ್ಲಿ ಕೌಶಿಕನು ಬ್ರಹ್ಮಾಸ್ತ್ರವನ್ನು ಉಪಯೋಗಿಸಿದರೂ, ವಸಿಷ್ಠರು ತಮ್ಮ ಬ್ರಹ್ಮತೇಜದ ಪ್ರಭಾವದಿಂದಲೇ ಆ ಭಯಂಕರವಾದ ಬ್ರಹ್ಮಾಸ್ತ್ರವನ್ನು ಕೂಡ ನಾಶಗೊಳಿಸುತ್ತಾರೆ. ಪರಾಜಿತನಾದ ಕೌಶಿಕನು ನಿಟ್ಟುಸಿರು ಗರೆಯುತ್ತಾ... "ಕ್ಷತ್ರಿಯ ಬಲಕ್ಕೆ ಧಿಕ್ಕಾರವಿರಲಿ!! ಎಷ್ಟೇ ಕಠಿಣ ತಪಸ್ಸು ಆಚರಿಸಿ, ಶ್ರೇಷ್ಠ ಅಸ್ತ್ರ ಶಸ್ತ್ರಗಳ ಶಕ್ತಿಯನ್ನು ಪಡೆದರೂ ಕೂಡ ಬ್ರಹ್ಮದಂಡದ ಎದುರು ಎಲ್ಲವೂ ವ್ಯರ್ಥವಾಯಿತು. ಬ್ರಹ್ಮತೇಜದಿಂದ ಪ್ರಾಪ್ತವಾಗುವ ಬಲವೇ ಅತ್ಯಂತ ಶ್ರೇಷ್ಠ. ಆದ್ದರಿಂದ ಕ್ಷಾತ್ರವನ್ನು ತ್ಯಜಿಸಿ ದಿವ್ಯವಾದ ಬ್ರಹ್ಮತ್ವವನ್ನು ಪಡೆಯಬೇಕು" ಎಂದು ನಿಶ್ಚಯಿಸಿ, ತನ್ನ ರಾಣಿಯರನ್ನೂ ಒಡಗೂಡಿಕೊಂಡು ದಕ್ಷಿಣ ದಿಕ್ಕಿಗೆ ತೆರಳಿ ಮತ್ತೆ ಕಠಿಣವಾದ ತಪಸ್ಸಿಗೆ ತೊಡಗುತ್ತಾನೆ.
(ಕೌಶಿಕ ಮಹಾರಾಜ ಕ್ಷಾತ್ರವನ್ನು ತ್ಯಜಿಸಿ ಬ್ರಹ್ಮಬಲವನ್ನು ಪಡೆದ ಕಥೆಯನ್ನು ಮುಂದಿನ ಭಾಗದಲ್ಲಿ ತಿಳಿದುಕೊಳ್ಳೋಣ.)








Good