top of page

ವಿಶ್ವಾಮಿತ್ರರ ಜನ್ಮ ಕಥನ

ಮಹಾ ತಪಸ್ವಿಯೂ, ಧರ್ಮ ನಿರತನೂ, ಶ್ರೇಷ್ಠ ರಾಜನೂ ಆದಂತಹ "ಕುಶ" ಎಂಬ ಬ್ರಹ್ಮ ದೇವರ ಪುತ್ರನೊಬ್ಬ ಇದ್ದ.  ಅವನಿಗೆ ಸತ್ಕುಲ ಪ್ರಸೂತೆಯಾದಂತಹ ವಿದರ್ಭ ದೇಶದ ರಾಜಕುಮಾರಿ ವೈದರ್ಭೀ ಎನ್ನುವವಳು ಸತಿ.  ವೈದರ್ಭಿ ಹಾಗೂ ಕುಶ ಮಹಾರಾಜರಿಗೆ ಕುಶಾಂಬ, ಕುಶನಾಭ, ಅಮೂರ್ತ ರಜಸ, ಹಾಗೂ ವಸು ಎಂಬ ನಾಲ್ವರು ತೇಜೋಭರಿತರಾದಂತಹ ಗಂಡು ಮಕ್ಕಳಿದ್ದರು.

ತಂದೆಯ ಆದೇಶದಂತೆ, ಕುಶಾಂಬನು "ಕೌಶಂಬಿ" ಎಂಬ ಪುರವನ್ನು, ಕುಶನಾಭನು "ಮಹೋದಯ "  ಎಂಬ ನಗರವನ್ನು, ಅಮೂರ್ತ ರಜಸನು  "ಧರ್ಮಾರಣ್ಯ"ಎಂಬ  ನಗರವನ್ನು ಹಾಗೂ ವಸುವು "ಗಿರಿವ್ರಜ" ಎಂಬ ನಗರವನ್ನು ಸ್ಥಾಪಿಸಿ ಧರ್ಮದಿಂದಲೂ ಸತ್ಯದಿಂದಲೂ ಆಳ್ವಿಕೆಯನ್ನು ನಡೆಸುತ್ತಿದ್ದರು. ಧರ್ಮಾತ್ಮನೂ ರಾಜರ್ಷಿಯೂ ಆದಂತಹ ಕುಶನಾಭನಿಗೆ ಘೃತಾಚೀ ಎಂಬ ಅಪ್ಸರಾ ಸ್ತ್ರೀಯಲ್ಲಿ ಅತ್ಯಂತ ರೂಪವತಿಯರಾದ ನೂರು ಮಂದಿ ಕನ್ಯೆಯರು ಜನಿಸುತ್ತಾರೆ. ಆ ಕನ್ಯೆಯರು ಯೌವ್ವನಕ್ಕೆ ಬಂದಾಗ ಒಂದು ದಿನ ತಮ್ಮ ನಗರದ ಉಪವನದೊಳಗೆ ಸಂಚರಿಸುತ್ತ ವಿನೋದದಲ್ಲಿ ತೊಡಗಿರುತ್ತಾರೆ. ಅದೇ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವಾಯುದೇವರು ಈ ಸರ್ವಾಂಗ ಸುಂದರಿಯರನ್ನು ನೋಡಿ ಆಕರ್ಷಿತರಾಗುತ್ತಾರೆ. "ಸುಂದರಿಯರೇ.. ನಿಮ್ಮ ಸೌಂದರ್ಯಕ್ಕೆ ಸೋತಿದ್ದೇನೆ, ಮನುಷ್ಯ ಭಾವವನ್ನು ತ್ಯಜಿಸಿ ನನ್ನನ್ನು ವಿವಾಹವಾಗಿ ದೇವಾಂಗನೆಯರಂತೆ  ದೀರ್ಘಾಯುಷ್ಯವನ್ನೂ,ಚಿರ ಯೌವ್ವನವನ್ನೂ ಪಡೆಯಿರಿ" ಎಂದು ಆ ಕನ್ಯೆಯರನ್ನು ಆಗ್ರಹಿಸುತ್ತಾರೆ.

ಆದರೆ ಅದನ್ನು ಒಪ್ಪದ ಆ ಸುಂದರ ಕನ್ಯೆಯರು "ನಿಮ್ಮ ಈ ಬೇಡಿಕೆಯನ್ನು ನಾವು ಒಪ್ಪುವುದಿಲ್ಲ,  ನಮ್ಮ ವಿವಾಹ ಮಾಡುವ ಜವಾಬ್ದಾರಿ ನಮ್ಮ ತಂದೆ ತಾಯಿಯರದ್ದು. ಅವರು ನಿಶ್ಚಯಿಸುವವರನ್ನೇ ನಾವು ಮದುವೆಯಾಗುತ್ತೇವೆ" ಅಂತ ಹೇಳುತ್ತಾರೆ. ಸುಂದರಿಯರ ಈ ಮಾತಿನಿಂದ ಕುಪಿತರಾದಂತಹ ವಾಯುದೇವರು ಆ ಕನ್ಯೆಯರ ದೇಹವನ್ನು ಪ್ರವೇಶಿಸಿ ಅವರ ಎಲ್ಲಾ ಅವಯವಗಳನ್ನು ಅಂಕುಡೊಂಕಾಗಿಸಿ ಕುರೂಪಿಯರನ್ನಾಗಿಯೂ, ಕುಬ್ಜೆಯರನ್ನಾಗಿಯೂ ಮಾಡಿ ಬಿಡುತ್ತಾರೆ. ಇದರಿಂದ ಅಪಮಾನಿತರಾಗಿ ಅಳುತ್ತಾ ರಾಜಕುಮಾರಿಯರು ಅರಮನೆಯನ್ನು ಸೇರುತ್ತಾರೆ. ಆಗ ಅವರ ತಂದೆಯಾದ ಕುಶನಾಭನು ನಡೆದ ಸಂಗತಿಯನ್ನೆಲ್ಲ ತಿಳಿದು ತನ್ನ ಮಕ್ಕಳ ಧೈರ್ಯ ಮತ್ತು ಸಹನೆಯನ್ನು ಮೆಚ್ಚಿಕೊಳ್ಳುತ್ತಾನೆ. ಶಾಪಗ್ರಸ್ತರಾದ ಮಕ್ಕಳ ವಿವಾಹದ ಕುರಿತು ಚಿಂತಿತನಾದ ಕುಶನಾಭ ಮಂತ್ರಿ ಮಹೋದಯರೊಡನೆ ಚರ್ಚಿಸುತ್ತಾನೆ.


         

ಅದೇ ಸಮಯದಲ್ಲಿ "ಚೂಲಿ" ಎಂಬ ಮುನಿ ತಪಸ್ಸನ್ನು ಆಚರಿಸುತ್ತಾ ಇರುತ್ತಾರೆ. "ಸೋಮದ" ಎಂಬಂತಹ ಗಂಧರ್ವಕನ್ಯೆ ಆ ತಪೋಧನರ ಸೇವೆಯಲ್ಲಿ ನಿರತಳಾಗಿರುತ್ತಾಳೆ. ಅವಳ ಸೇವೆಗೆ ತೃಪ್ತರಾದ  ಚೂಲಿ ಮುನಿಗಳು "ಶುಭಾಂಗಳೇ ನಿನಗೆ ಮಂಗಳವಾಗಲಿ ನಿನಗೆ ಯಾವ ವರ ಬೇಕು ಕೇಳು" ಅಂತ ಹೇಳುತ್ತಾರೆ. ಇದನ್ನು ಕೇಳಿ ಸಂತೋಷಗೊಂಡ ಸೋಮದೆಯು "ಮಹರ್ಷಿಗಳೇ! ಮಹಾ ತಪಸ್ವಿಗಳಾದ ತಮ್ಮಿಂದ ಬ್ರಹ್ಮನಿಷ್ಠನಾದ ಪರಮ ಧಾರ್ಮಿಕನಾದ ಓರ್ವ ಪುತ್ರನನ್ನ ಬಯಸುತ್ತೇನೆ, ತಮ್ಮ ತಪಃಶಕ್ತಿಯಿಂದ ಅಂತಹ ಶ್ರೇಷ್ಠ ಪುತ್ರನನ್ನು ಅನುಗ್ರಹಿಸಿರಿ" ಅಂತ ಕೇಳಿಕೊಳ್ಳುತ್ತಾಳೆ. ಅದಕ್ಕೆ ಒಪ್ಪಿದ ಮುನಿಗಳು ತಮ್ಮ ಮಾನಸಿಕ ಸಂಕಲ್ಪದಿಂದ "ಬ್ರಹ್ಮದತ್ತ" ಎಂಬ ಪುತ್ರನನ್ನು ಅನುಗ್ರಹಿಸುತ್ತಾರೆ. ಕಾಲಕ್ರಮೇಣ ಕಾಂಪಿಲ್ಯ ಎಂಬ ನಗರವನ್ನು ಆಳುತ್ತಿದ್ದ ಈ ಬ್ರಹ್ಮದತ್ತನಿಗೆ ಕುಶನಾಭನು ತನ್ನ 100 ಮಂದಿ ಶಾಪಗ್ರಸ್ತ ಕನ್ಯೆಯರನ್ನು ವಿವಾಹ ಮಾಡಿಕೊಡಲು ನಿಶ್ಚಯಿಸುತ್ತಾನೆ. ತೇಜೋಮಯನಾದ ಬ್ರಹ್ಮದತ್ತನನ್ನು ವರಿಸಿದ ಕೂಡಲೇ ಆ ಯುವತಿಯರು ಶಾಪ ಮುಕ್ತಗೊಂಡು ಪುನಃ ಸುಂದರಿಯರಾಗಿ ಕಂಗೊಳಿಸುತ್ತಾರೆ.


ಈ ರೀತಿಯಾಗಿ ಕುಶನಾಭನು ತನ್ನ ಕನ್ಯೆಯರನ್ನು ವಿವಾಹ ಮಾಡಿಕೊಟ್ಟ ಮೇಲೆ ಒಬ್ಬ ಶ್ರೇಷ್ಠ ಪುತ್ರನನ್ನು ಪಡೆಯಬೇಕು ಎನ್ನುವ ಇಚ್ಛೆಯಿಂದ ಪುತ್ರಕಾಮೇಷ್ಠಿ ಯಜ್ಞವನ್ನು ಮಾಡಿ ಅನುಗ್ರಹ ರೂಪವಾಗಿ ಗಾಧಿ ಎಂಬಂತಹ ಒಬ್ಬ ಪುತ್ರನನ್ನ ಪಡೆಯುತ್ತಾನೆ.  ಮುಂದೆ ಆ ಗಾಧಿ ಮಹಾರಾಜನಿಗೆ ಇಬ್ಬರು ಮಕ್ಕಳು ಜನಿಸುತ್ತಾರೆ. ಸತ್ಯವತಿ ಎಂಬ ಮಗಳು ತನ್ನ ಪತಿಯನ್ನು ಅನುಸರಿಸಿ  ಸಶರೀರೆಯಾಗಿ ಸ್ವರ್ಗವನ್ನು ಸೇರಿ, ಕೌಶಿಕಿ ನದಿಯ ರೂಪದಿಂದ ಭೂಲೋಕದಲ್ಲಿ ಹರಿಯುತ್ತಾಳೆ.  ಸತ್ಯವತಿಯ ನಂತರ ಗಾಧಿ ಮಹಾರಾಜನಿಗೆ ಜನಿಸಿದ ಗಂಡು ಸಂತಾನವೇ "ಕೌಶಿಕ". ಸಾವಿರಾರು ವರ್ಷಗಳ ಕಾಲ  ಪೃಥ್ವಿಪಾಲಕರಾಗಿ ಉತ್ತಮವಾದ ಆಡಳಿತವನ್ನು ನಿರ್ವಹಿಸುತ್ತಾರೆ.


ಕಾಲಾನಂತರ ಕಠಿಣವಾದ ತಪಸ್ಸನ್ನು ಆಚರಿಸಿ, ತಮ್ಮೊಳಗಿನ ಕ್ಷಾತ್ರವನ್ನು ತ್ಯಜಿಸಿ  ಬ್ರಹ್ಮ ಜ್ಞಾನವನ್ನು ಪಡೆದು ಶ್ರೇಷ್ಠರಾದಂತಹ ಬ್ರಹ್ಮರ್ಷಿ "ವಿಶ್ವಾಮಿತ್ರ" ಎಂದು ಲೋಕದಲ್ಲಿ ಖ್ಯಾತಿಯನ್ನು ಹೊಂದುತ್ತಾರೆ.

Comments


bottom of page