ದಿವ್ಯಾಸ್ತ್ರದಾನ ಮತ್ತು ಸಿದ್ಧಾಶ್ರಮದ ಯಾನ (ರಾಮಾಯಣ ಕಥಾಮಾಲೆ - 4)
- Ganapati Hegde Moodkani
- Jun 15
- 2 min read
ರಾಮನ ಪ್ರಯಾಣ – ತಪಸ್ಸು, ಯಜ್ಞ, ಹಾಗೂ ಧರ್ಮರಕ್ಷಣೆಯ ಕಡೆಗೆ
🔸ತಾಟಕಾ ವಧೆಯ ನಂತರದ ವಿಶ್ವಾಮಿತ್ರರ ಆಶೀರ್ವಾದ

ತಾಟಕವನದಲ್ಲಿ ಆ ರಾತ್ರಿಯನ್ನು ಸುಖವಾಗಿ ಕಳೆದ ನಂತರ ಮಹಾತಪಸ್ವಿಗಳಾದ ವಿಶ್ವಾಮಿತ್ರರು ಮಂದಸ್ಮಿತರಾಗಿ, ರಾಮನಿಗೆ "ಯಶೋವಂತನಾದ ರಾಜಪುತ್ರನೇ! ನೀನು ಮಾಡಿದ ತಾಟಕಾ ಸಂಹಾರದಿಂದ, ನಾನು ಸುಪ್ರೀತನಾಗಿದ್ದೇನೆ. ನಿನಗೆ ಮಂಗಳವುಂಟಾಗಲಿ. ನನ್ನಲ್ಲಿರುವ ಸಕಲ ಅಸ್ತ್ರಗಳನ್ನು ನಿನಗೆ ಉಪದೇಶಿಸುತ್ತೇನೆ. ದೇವ-ದಾನವ-ಗಂಧರ್ವರಾಗಲೀ, ಯಕ್ಷ-ಕಿನ್ನರ-ಕಿಂಪುರುಷ-ಪನ್ನಗರೇ ಆಗಲಿ, ನಿನ್ನೆದುರಾಗಿ ಯುದ್ಧಕ್ಕೆ ನಿಲ್ಲುವ ಶತ್ರುಗಳು ಯಾರೇ ಆಗಿದ್ದರೂ, ಅವರ ಮೇಲೆ ಈ ದಿವ್ಯಾಸ್ತ್ರಗಳ ಪ್ರಯೋಗದಿಂದ, ಯುದ್ಧದಲ್ಲಿ ಅವರನ್ನು ವಶಪಡಿಸಿಕೊಂಡು ಜಯಿಸುವ ಸಾಮರ್ಥ್ಯವು ನಿನಗುಂಟಾಗುತ್ತದೆ. ಅಂತಹ ಸಕಲವಾದ ದಿವ್ಯಾಸ್ತ್ರಗಳೆಲ್ಲವನ್ನು ನಿನಗೆ ಕೊಡುತ್ತೇನೆ. ದಿವ್ಯವಾದ ಮಹಾದಂಡಚಕ್ರ, ಧರ್ಮಚಕ್ರ, ಕಾಲಚಕ್ರ, ವಿಷ್ಣುಚಕ್ರ, ಅತ್ಯುಗ್ರವಾದ ಇಂದ್ರಚಕ್ರ ವಜ್ರಾಯುಧ, ಶಿವನ ಶೂಲಯುಧ, ಬ್ರಹ್ಮಶಿರ, ಧರ್ಮಪಾಶ, ಕಾಲಪಾಶ, ವರುಣನ ಪಾಶಾಯುಧ, ಶಿವನ ಪೈನಕಾಸ್ತ್ರವನ್ನೂ, ನಾರಾಯಣಾಸ್ತ್ರವನ್ನೂ ಉಪದೇಶಿಸುತ್ತೇನೆ. ಮಹಾಬಲಯುಕ್ತವಾದ, ಕಾಮರೂಪವನ್ನು ಧರಿಸಿರುವ ಈ ಮಹಾಸ್ತ್ರಗಳನ್ನು ಪರಮೋದಾರನಾದ, ರಾಜಪುತ್ರನಾದ ನೀನು ಕೂಡಲೇ ಪರಿಗ್ರಹಿಸು " ಎಂದರು.
🔸ಅಸ್ತ್ರಗಳ ಮಂತ್ರೋಪದೇಶ ಮತ್ತು ರಾಮನಲ್ಲಿ ಅಸ್ತ್ರಾಧಿದೇವತೆಗಳ ಲೀನತೆ
ಮುನಿಶ್ರೇಷ್ಠರಾದ ವಿಶ್ವಾಮಿತ್ರರು ಶುಚಿಯಾಗಿ ಪೂರ್ವಾಭಿಮುಖವಾಗಿ ಕುಳಿತುಕೊಂಡು, ಪ್ರೇಮಪೂರ್ವಕವಾಗಿ ಶ್ರೀರಾಮನಿಗೆ ಸಕಲ ಅಸ್ತ್ರಗಳ ಮಹಾಮಂತ್ರಗಳನ್ನು ಉಪದೇಶಿಸಿದರು. ವಿಶ್ವಾಮಿತ್ರರು ಮಹಾಮಂತ್ರಗಳನ್ನು ಒಂದೊಂದನ್ನಾಗಿ ಶ್ರೀರಾಮನಿಗೆ ಉಪದೇಶಿಸುತ್ತಿದ್ದಂತೆಲ್ಲ ಆಯಾ ಅಸ್ತ್ರದ ಅಧಿದೇವತೆಗಳು ಮೂರ್ತವಾಗಿ ಬಂದು ರಾಮನಲ್ಲಿ ಸೇರಿಕೊಂಡವು. ಶ್ರೀರಾಮನಿಗೆ ಅಮಿತಾನಂದವುಂಟಾಯಿತು. ಪ್ರೀತಾತ್ಮನಾದ ಶ್ರೀರಾಮನು ಮಹಾತೇಜಸ್ವಿಗಳಾದ, ಪರಮಗುರುಗಳಾದ ವಿಶ್ವಾಮಿತ್ರರನ್ನು ಅಭಿವಾದನಪೂರ್ವಕವಾಗಿ ನಮಸ್ಕರಿಸಿ ಮುಂದಿನ ಪ್ರಯಾಣಕ್ಕೆ ಸಿದ್ಧನಾಗಿ ನಿಂತನು.
ಆ ಸಂದರ್ಭದಲ್ಲಿ ಅಸ್ತ್ರದ ಅಧಿದೇವತೆಗಳೆಲ್ಲವೂ ಕೈ ಮುಗಿದು ನಿಂತು ರಾಮನೊಡನೆ, "ನರವ್ಯಾಘ್ರನೆ! ನಾವು ನಿನ್ನ ಕಿಂಕರರಾಗಿದ್ದೇವೆ. ನಾವೇನು ಮಾಡಬೇಕೆಂಬುದನ್ನು ಆಜ್ಞಾಪಿಸು" ಎಂದು ಕೇಳಿದರು.
ಅದಕ್ಕೆ ಶ್ರೀರಾಮನು "ಅಸ್ತ್ರಾಧಿದೇವತೆಗಳೇ! ನಿಮ್ಮ ಇಚ್ಛೆಯಿದ್ದಲ್ಲಿಗೆ ನೀವು ತೆರಳಬಹುದು. ಕಾರ್ಯಕಾಲದಲ್ಲಿ ನನ್ನ ಮನಸಿನಲ್ಲಿ ಸುಸ್ಥಿರರಾಗಿದ್ದು ಶತ್ರು ಸಂಹಾರಕ್ಕೆ ಸಹಾಯ ಮಾಡಿರಿ" ಎಂದನು.
ಅನಂತರ ಸಂಹಾರಾಸ್ತ್ರಾಧಿದೇವತೆಗಳು ಹಾಗೆಯೇ ಆಗಲಿ ಎಂದು ರಾಮನಿಗೆ ಪ್ರತಿವಚನವಿತ್ತು, ಮಹಾನುಭಾವನಾದ ಶ್ರೀರಾಮನನ್ನು ಪ್ರದಕ್ಷಿಣೆ ಮಾಡಿ, ತಲೆಬಾಗಿ ನಮಸ್ಕರಿಸಿ, ಅನುಜ್ಞೆಯನ್ನು ಪಡೆದು, ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು. ಬಳಿಕ ರಾಮನು ವಿಶ್ವಾಮಿತ್ರರ ಅನುಜ್ಞೆಯಂತೆ ಸಮಸ್ತವಾದ ಅಸ್ತ್ರಗಳನ್ನು, ಸಂಹಾರಾಸ್ತ್ರಗಳನ್ನು ಪರಮಸಂತೋಷದಿಂದ ಲಕ್ಷ್ಮಣನಿಗೆ ಉಪದೇಶಿಸಿದನು.
🔸 ಸಿದ್ಧಾಶ್ರಮದ ಸುಂದರ ದರ್ಶನ ಮತ್ತು ಪ್ರಶ್ನೆಗಳು
ಸಂಹಾರಾಸ್ತ್ರಗಳನ್ನು ಪ್ರತಿಗೃಹ ಮಾಡಿದ ನಂತರ ವಿಶ್ವಾಮಿತ್ರರರೊಡನೆ ಮುಂದೆ ನಡೆದು ಹೋಗುತ್ತಿರುವಾಗ ರಾಘವನು, "ಮುನಿಪುಂಗವರೇ! ನಮ್ಮ ಎದುರಾಗಿ ಕಾಣುವ ಪರ್ವತಕ್ಕೆ ಹತ್ತಿರದಲ್ಲಿಯೇ ಮೇಘಸದೃಶವಾದ ವೃಕ್ಷಗಳ ಸಮೂಹವು ಪ್ರಕಾಶಿಸುತ್ತಿದೆ. ಅಲ್ಲಿರುವ ನಾನಾಮೃಗಗಳ ಸಮೂಹವು ದರ್ಶನೀಯವಾಗಿದೆ. ನಾನಾ ಪ್ರಕಾರದ ಪಕ್ಷಿಸಮೂಹದಿಂದಲೂ, ಅವುಗಳ ಮಧುರನಿನಾದಗಳಿಂದಲೂ ಆ ಪ್ರದೇಶವು ಅಲಂಕೃತವಾಗಿದ್ದು, ಅತಿ ಮನೋಹರವಾಗಿ ಕಾಣುತ್ತಿದೆ. ಆ ಪ್ರದೇಶವು ಯಾವುದೆಂಬುದನ್ನು ತಿಳಿಯಲು ಅತ್ಯಂತ ಕುತೂಹಲವುಂಟಾಗಿದೆ, ದಯೆಯಿಟ್ಟು ಹೇಳಿರಿ. ಮಹರ್ಷಿಗಳೇ! ರೋಮಾಂಚನವನ್ನುಂಟು ಮಾಡುವ ತಾಟಕವನದಿಂದ ಹೊರಬಂದಿರುತ್ತೇವೆ. ಇಲ್ಲಿ ಕಾಣುತ್ತಿರುವ ವಾತಾವರಣದಿಂದ ಈ ದೇಶದ ಸೌಖ್ಯವೆಷ್ಟೆಂಬುದನ್ನು ಮನಗಾಣುತಿದ್ದೇನೆ. ಈ ಮುಂದೆ ಕಾಣುತ್ತಿರುವ ಆಶ್ರಮವು ಯಾರದೆಂಬುದನ್ನು ಹೇಳಿರಿ. ಪಾಪಿಷ್ಟರಾದ, ಬ್ರಹ್ಮಘ್ನರಾದ, ದುಷ್ಟಾಚಾರಿಗಳಾದ, ದುರಾತ್ಮರಾದ ರಾಕ್ಷಸರು ನಿಮ್ಮ ಯಜ್ಞಕ್ಕೆ ವಿಘ್ನವನ್ನುಂಟುಮಾಡುವ ಸಲುವಾಗಿ ಯಾವಾಗ ಬರುತ್ತಾರೆ? ಎಲ್ಲಿಗೆ ಬರುತ್ತಾರೆ? ನೀವು ಯಜ್ಞ ಮಾಡಲಿರುವ ದೇಶವಾವುದು? ನಾನು ರಕ್ಷಿಸಬೇಕಾದ ಯಜ್ಞವು ಯಾವುದು? ನಾನು ಸಂಹರಿಸಬೇಕಾದ ರಾಕ್ಷಸರು ಯಾರು? ಎಲ್ಲಿರುತ್ತಾರೆ? ಈ ಎಲ್ಲ ವಿಷಯವನ್ನು ವಿಸ್ತಾರವಾಗಿ ನಿಮ್ಮಿಂದ ತಿಳಿದುಕೊಳ್ಳಲು ಬಯಸುತ್ತೇನೆ." ಎಂದು ಕೇಳಿದನು.
🔸ವಿಶ್ವಾಮಿತ್ರರಿಂದ ಸಿದ್ಧಾಶ್ರಮದ ಪವಿತ್ರ ಇತಿಹಾಸ
ಅನಂತರ ಮಹಾತೇಜಸ್ವಿಗಳಾದ ವಿಶ್ವಾಮಿತ್ರರು, "ಮಹಾಬಾಹುವಾದ ಶ್ರೀರಾಮನೇ! ಸಕಲದೇವವಂದ್ಯನಾದ ಶ್ರೀ ಮಹಾವಿಷ್ಣುವು ತಪಶ್ಚರಣೆಯ ಫಲಸಿದ್ಧಿಗಾಗಿ ನೂರಾರು ಯಾಗಗಳನ್ನು ಇಲ್ಲಿಯೇ ಕಳೆದನು. ಇದೇ ವಾಮನನ ದಿವ್ಯಾಶ್ರಮ. ಈ ಆಶ್ರಮಕ್ಕೆ 'ಸಿದ್ಧಾಶ್ರಮ'ವೆಂದೂ ಹೆಸರಾಯಿತು. ವಿಷ್ಣುವು ತಪಸ್ಸು ಮಾಡುತ್ತಿದ್ದ ಕಾಲದಲ್ಲಿಯೇ ವಿರೋಚನನ ಮಗನಾದ ಬಲಿಚಕ್ರವರ್ತಿಯು ಪ್ರರಾಕ್ರಮದಿಂದ ಇಂದ್ರಸಮೇತರಾದ ದೇವತೆಗಳನ್ನು , ಮರುದ್ಗಣಗಳನ್ನೂ ಪರಾಜಯಗೊಳಿಸಿ, ಇಂದ್ರನ ರಾಜ್ಯವನ್ನು ತನ್ನ ರಾಜ್ಯವನ್ನಾಗಿ ಮಾಡಿಕೊಂಡನು. ಮಹಾಬಲಿಷ್ಠನಾದ ಬಲಿಚಕ್ರವರ್ತಿಯು ತ್ರಿಭುವನಗಳನ್ನೂ ಜಯಿಸಿ, ಯಜ್ಞವನ್ನು ಮಾಡಲು ಉಪಕ್ರಮಿಸಿದನು.

ಯಜ್ಞದ ಯಜಮಾನನಾದ ಬಲಿಚಕ್ರವರ್ತಿಯ ವ್ಯವಹಾರವನ್ನು ಕಂಡು ಭೀತರಾದ ದೇವತೆಗಳು, ಅಗ್ನಿಯನ್ನು ಮುಂದು ಮಾಡಿಕೊಂಡು ಈ ಸಿದ್ಧಾಶ್ರಮದಲ್ಲಿ ತಪಸ್ಸು ಮಾಡುತ್ತಿದ್ದ ವಿಷ್ಣುವಿನ ಬಳಿಗೆ ಬಂದು "ವಿಷ್ಣುದೇವನೇ! ವಿರೋಚನನ ಮಗನಾದ ಬಲಿಯು ಉತ್ತಮೋತ್ತಮವಾದ ಯಜ್ಞವನ್ನು ಆರಂಭಿಸಿದ್ದಾನೆ. ಆ ಯಜ್ಞವು ಮುಗಿಯುವುದೊರಳಗಾಗಿ ನಮ್ಮ ಕಾರ್ಯವನ್ನು ನೀನು ಪೂರೈಸಿಕೊಡಬೇಕು. ಈ ದೇಶದಲ್ಲಿಯೂ, ದೇಶಾಂತರಗಳಲ್ಲಿಯೂ ಇರುವ ಯಾಚಕರು ಬಂದು, ಆ ಸಮಯದಲ್ಲಿ ಬಲಿಚಕ್ರವರ್ತಿಯನ್ನು ಏನೇ ಕೇಳಿದರೂ, ಅವನು ಅದನ್ನು ಅವರಿಗೆ ಕೊಟ್ಟುಬಿಡುವನು. ಪರಮ ಪುರುಷನಾದ ನೀನು ದೇವತೆಗಳ ಹಿತಾರ್ಥವಾಗಿ ಮಹಾಯೋಗದಿಂದ ವಾಮನಾವತರವನ್ನು ತಾಳಿ ನಮಗೆ ಕಲ್ಯಾಣವನ್ನುಂಟು ಮಾಡು" ಎಂದು ಕೇಳಿಕೊಂಡರು.
ಪರಮಕಾರುಣಿಕನಾದ ಮಹಾತೇಜಸ್ವಿಯಾದ ಮಹಾವಿಷ್ಣುವು ಅದಿತಿ-ಕಶ್ಯಪರ ಮತ್ತು ದೇವತೆಗಳ ಪ್ರಾರ್ಥನೆಯಂತೆ ಅದಿತಿಯಲ್ಲಿ ಕಶ್ಯಪನ ಮಗನಾಗಿ ಅವತರಿಸಿ, ವಾಮನ ರೂಪವನ್ನು ಧರಿಸಿ, ದೇವತೆಗಳ ಕಾರ್ಯವನ್ನು ಸಾಧಿಸಲು ಬಲಿಚಕ್ರವರ್ತಿಯ ಬಳಿಗೆ ಹೋದನು. ಹೀಗೆ ಅವನ ಬಳಿ ಹೋಗಿ, ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಯಾಚಿಸಿ, ಬಲಿಯಿಂದ ದಾನ ಪಡೆದು, ಒಡನೆಯೇ ತ್ರಿವಿಕ್ರಮಾವತಾರವನ್ನು ತಾಳಿ ತನ್ನ ಎರಡು ಹೆಜ್ಜೆಗಳ ಅಳತೆಯಿಂದ ಸಕಲ ಲೋಕಗಳನ್ನು ಅಳೆದು, ಮೂರನೆಯ ಹೆಜ್ಜೆಯನ್ನು ಬಲಿಚಕ್ರವರ್ತಿಯ ತಲೆ ಮೇಲಿಟ್ಟು, ಅವನನ್ನು ಪಾತಾಳಕ್ಕೆ ತುಳಿದನು.
ವಾಮನನು ಶ್ರಮವಿನಾಶಕವಾದ ಈ ದಿವ್ಯಾಶ್ರಮದಲ್ಲಿಯೇ ವಾಸ ಮಾಡುತಿದ್ದನು. ನಾನೂ ಕೂಡ ಭಕ್ತಿಭಾವದಿಂದ ವಾಮನನ ಆಶ್ರಮದಲ್ಲಿಯೇ ಇರುವೆನು. ವಿಘ್ನಕಾರಿಗಳಾದ ರಾಕ್ಷಸರು, ಈ ಆಶ್ರಮ ಭೂಮಿಯನ್ನು ಪದೇ ಪದೇ ಪ್ರವೇಶಿಸಿ ಉಪದ್ರವ ಕೊಡುತ್ತಿರುವರು. ಇಂತಹ ದುಷ್ಟಕಾರ್ಯ ಮಾಡುವ ಪ್ರಭಾವವುಳ್ಳವರು ನಿನ್ನಿಂದ ಹತರಾಗಬೇಕಿದೆ. ಈಗ ನಾವು ಸಿದ್ಧಾಶ್ರಮಕ್ಕೆ ಹೋಗೋಣ" ಎಂದರು.
🔸ರಾಮ-ಲಕ್ಷ್ಮಣರ ಧರ್ಮದ ಪ್ರತಿಜ್ಞೆ
ಒಂದು ಮುಹೂರ್ತಕಾಲ ವಿಶ್ರಾಂತಿಯನ್ನು ಪಡೆದು, ಅನಂತರ ಶತ್ರುಧ್ವಂಸಕರಾದ, ರಘುಕುಲ ರಾಜಕುಮಾರರು ಕೈ ಮುಗಿದು ನಿಂತು, ವಿಶ್ವಾಮಿತ್ರರಿಗೆ, "ಮುನಿಪುಂಗವರೇ! ಈಗಲೇ ಯಜ್ಞದೀಕ್ಷೆಯನ್ನು ಕೈಗೊಳ್ಳಿರಿ. ನಿಮ್ಮ ಯಜ್ಞದ ಸಿದ್ಧಿಯಿಂದಾಗಿ, ಈ ಸಿದ್ಧಾಶ್ರಮವು ಅನ್ವರ್ಥಕನಾಮವನ್ನು ಪುನಃ ಪಡೆಯಲಿ. "ಹಂತವ್ಯ ದುಷ್ಟಾಚಾರಿಣಃ" - 'ದುಷ್ಟಕರ್ಮಿಗಳು ನಿನ್ನಿಂದ ಹತರಾಗಬೇಕು' ಎಂದು ನೀವು ಹೇಳಿರುವ ಮಾತುಗಳು ಸತ್ಯವಚನವಾಗಲಿ. ನಾವು ಈ ಕೂಡಲೇ ಆ ರಾಕ್ಷಸರನ್ನು ಸಂಹರಿಸುತ್ತೇವೆ." ಎಂದರು.
ರಾಮ - ಲಕ್ಷ್ಮಣರು ಹೀಗೆ ಹೇಳಿದೊಡನೆಯೇ ವಿಶ್ವಾಮಿತ್ರರು ಯಜ್ಞದೀಕ್ಷಾಬದ್ಧರಾದರು.
Comments