top of page

ತಾಟಕಾ ವಧೆ (ರಾಮಾಯಣ ಕಥಾಮಾಲೆ - 3)

ಸುಪ್ರಭಾತವಾದ ನಂತರ ನಿರ್ಮಲವಾದ ಗಂಗೆಯಲ್ಲಿ ಆಹ್ನಿಕಾದಿಗಳನ್ನು ಮಾಡಿ ಮುಗಿಸಿದ ವಿಶ್ವಾಮಿತ್ರ ಮಹರ್ಷಿಗಳನ್ನು ಮುಂದೆ ಮಾಡಿಕೊಂಡು ಗಂಗಾ ನದಿಯನ್ನು ದಾಟುವ ಸ್ಥಳಕ್ಕೆ ಶ್ರೀರಾಮ ಲಕ್ಷ್ಮಣರಿಬ್ಬರೂ ಬಂದರು. ವಿಶ್ವಾಮಿತ್ರ ಮಹರ್ಷಿಗಳು ಸಾಗರಗಾಮಿನಿಯಾದ ಗಂಗಾ ನದಿಯನ್ನು ರಾಮ ಲಕ್ಷ್ಮಣರೊಡನೆ ದಾಟಲನುವಾದರು.

ನಾವೆಯು ನದಿಯ ನಡುಭಾಗಕ್ಕೆ ಬಂದಾಗ ಅಲೆಗಳ ಹೊಡೆತದಿಂದಾಗಿ ಉಂಟಾದ ಶಬ್ದದಿಂದ ಕುತೂಹಲಿಗಳಾಗಿ ಅದರ ಕಾರಣವನ್ನು ಕೇಳಿದ ರಾಮ ಲಕ್ಷ್ಮಣರಿಗೆ ವಿಶ್ವಾಮಿತ್ರರು "ಕೈಲಾಸ ಪರ್ವತದಲ್ಲಿ ಚತುರ್ಮುಖ ಬ್ರಹ್ಮನ ಮನಃಸಂಕಲ್ಪದಿಂದಲೇ ಒಂದು ಸರೋವರ ಹುಟ್ಟಿತು. ಅದರಿಂದ ಆ ಸರಸ್ಸಿಗೆ ಮಾನಸ ಸರೋವರ ಎಂದೇ ಹೆಸರಾಯಿತು. ಆ ಮಾನಸ ಸರೋವರದಿಂದ ಹರಿದ ಪ್ರವಾಹವು ಅಯೋಧ್ಯೆಯನ್ನು ಸುತ್ತುವರಿದು ಮುಂದೆ ಹೋಗಿರುತ್ತದೆ. ಅದು ಇಲ್ಲಿ ಗಂಗಾ ನದಿಯನ್ನು ಸೇರುತ್ತದೆ, ಸರಯೂ-ಗಂಗಾ ನದಿಗಳು ಸೇರುವ ಸ್ಥಳದಲ್ಲಿ ನೀರಿನ ಪರಸ್ಪರ ಸಂಘರ್ಷದಿಂದ ಈ ಶಬ್ದ ಉಂಟಾಗಿದೆ" ಎಂದರು.


ವಿಶ್ವಾಮಿತ್ರರು ಹೇಳಿದಂತೆ ಇಬ್ಬರೂ ಸರಯೂ-ಗಂಗಾ ನದಿಗಳಿಗೆ ಪ್ರಣಾಮ ಮಾಡಿ ನದಿಯ ದಕ್ಷಿಣ ತೀರದಲ್ಲಿ ನಾವೆಯಿಂದಿಳಿದು ವಿಶ್ವಾಮಿತ್ರರೊಡನೆ ಶೀಘ್ರವಾಗಿ ಅರಣ್ಯದ ಮಧ್ಯದಲ್ಲಿ ನಡೆದು ಹೋಗುತ್ತಿದ್ದರು. ಆ ಅರಣ್ಯವು ಅತಿ ಘೋರವಾಗಿ ಕಾಣುತ್ತಿದ್ದಿತು, ಮಾನವ ಸಂಚಾರದ ಕುರುಹೇ ಅಲ್ಲಿ ಇರಲಿಲ್ಲ. ಅಂತಹ ಮಹಾರಣ್ಯವನ್ನು ಕಂಡು ಶ್ರೀರಾಮನು "ಮಹರ್ಷಿಗಳೇ! ಈ ಅರಣ್ಯವು ಎಷ್ಟೊಂದು ದುರ್ಗಮವಾಗಿರುವುದು! ಜೀರುಂಡೆಗಳ ನಾದದಿಂದ ತುಂಬಿಹೋಗಿದೆ. ಭಯಂಕರವಾದ ಕ್ರೂರ ಮೃಗಗಳಿಂದಲೂ ಕರ್ಣಕಠೋರವಾದ ಶಬ್ದ ಮಾಡುತ್ತಿರುವ ಭಾಸಪಕ್ಷಿಗಳಿಂದಲೂ ಈ ಅರಣ್ಯ ನಿಬಿಡವಾಗಿದೆ. ಧವ, ಅಶ್ವಕರ್ಣ, ಕುಕುಭ ಮುಂತಾದ ವೃಕ್ಷ ವಿಶೇಷಗಳಿಂದಲೂ ಬಿಲ್ವ, ತಿಂದುಕ, ಪಾಟಲ, ಬದರೀ ವೃಕ್ಷಗಳಿಂದಲೂ ನಿಬಿಡವಾಗಿದೆ. ದಾರುಣವಾದ ಈ ಅರಣ್ಯವು ಯಾವುದು?" ಎಂದನು.


ತಾಟಕಾ ವಧೆ

ಹೀಗೆ ಪ್ರಶ್ನೆಸಿದ ರಾಮನಿಗೆ ಮಹಾತೇಜಸ್ವಿಗಳಾದ ವಿಶ್ವಾಮಿತ್ರರು, "ವತ್ಸ!, ದೇವತೆಗಳಿಂದ ನಿರ್ಮಿತವಾದಂತಿದ್ದ, ಧನ-ಧಾನ್ಯ ಸಮೃದ್ಧಿಯಿಂದ ಕೂಡಿದ್ದ, ಜನರಿಂದ ನಿಬಿಡವಾಗಿದ್ದ, ಮಲದ-ಕರೂಷ ಎಂಬ ಎರಡು ದೇಶಗಳು ಹಿಂದೆ ಬಹಳ ಪ್ರಸಿದ್ಧವಾಗಿದ್ದವು. ವೃತ್ರಾಸುರನ ವಧೆಯಿಂದಾಗಿ ಬ್ರಹ್ಮಹತ್ಯಾದೋಷದಿಂದ ಕೂಡಿದ್ದ ದೇವೇಂದ್ರನಿಗೆ ಇದೇ ಸ್ಥಳದಲ್ಲಿ ತಪೋಧನರಾದ ಮಹರ್ಷಿಗಳು ಗಂಗೆ ಮೊದಲಾದ ತೀರ್ಥಗಳಿಂದ ತರಲ್ಪಟ್ಟ ಕಲಶೋಧಕದಿಂದ ಅಭಿಷೇಕ ಮಾಡಿ ಅವನಿಗೆ ಬಂದಿದ್ದ ಪಾಪವನ್ನು ಕಳೆದರು. ಇದರಿಂದ ಸುಪ್ರೀತನಾದ ಇಂದ್ರನು 'ನನ್ನ ಶರೀರದ ಮಲವನ್ನೂ ಮತ್ತು ನನ್ನ ಹಸಿವನ್ನು ಈ ಪ್ರದೇಶವು ಧಾರಣೆಮಾಡಿರುವುದರಿಂದ ಮುಂದೆ ಈ ಪ್ರದೇಶವು ಧನ-ಧಾನ್ಯ ಸಮೃದ್ಧವಾಗಿ 'ಮಲದ' ಮತ್ತು 'ಕರೂಷ' ಎಂಬ ಆಭಿದಾನದಿಂದಲೇ ಪ್ರಸಿದ್ಧವಾಗಲಿ' ಎಂದು ವರದಾನ ಮಾಡಿದನು. ಇಂದ್ರನು ಈ ಪ್ರದೇಶಕ್ಕೆ ಹೀಗೆ ಮಹಾವರದಾನ ಮಾಡಿದ ಕಾರಣ ಈ ಪ್ರದೇಶವು ಸ್ವಲ್ಪಕಾಲದಲ್ಲಿಯೇ ಜನಸ್ತೋಮದಿಂದ ಸಮೃದ್ಧವು ಆಯಿತು. ಅನೇಕ ಕಾಲದವರೆಗೆ ಇಲ್ಲಿಯ ಪ್ರಜೆಗಳು ಧನ-ಧಾನ್ಯ ಸಮೃದ್ಧಿಯಿಂದ ಕೂಡಿ ಆನಂದಭರಿತವಾಗಿದ್ದರು. ಕೆಲವು ಕಾಲ ನಂತರದಲ್ಲಿ - ಇಚ್ಛೆಪಡುವ ರೂಪವನ್ನು ಹೊಂದಲು ಸಮರ್ಥಳಾದ, ಯಕ್ಷಕನ್ಯೆಯಾದ, ಒಂದು ಸಾವಿರ ಆನೆಗಳ ಬಲವನ್ನು ಹೊಂದಿದ್ದ, 'ತಾಟಕಿ' ಎಂಬ ಹೆಸರಿನವಳೊಬ್ಬಳು ಹುಟ್ಟಿದಳು. ಅವಳು ಸುಂದನೆಂಬ ರಾಕ್ಷಸನ ಹೆಂಡತಿ. ಇಂದ್ರನಿಗೆ ಸಮಾನವಾದ ಪರಾಕ್ರಮವುಳ್ಳ ಮಾರೀಚನೆಂಬ ರಾಕ್ಷಸನು ಅವಳ ಮಗ. ದುಂಡು- ದುಂಡಾದ ತೋಳುಗಳಿಂದಲೂ, ಅತಿ ದೊಡ್ಡದಾದ ತಲೆಯಿಂದಲೂ, ವಿಸ್ತಾರವಾದ ಮುಖದಿಂದಲೂ, ಅದ್ಭುತವಾದ ಶರೀರದಿಂದಲೂ, ಕೂಡಿದ ದೈತ್ಯಾಕಾರದ ಮಾರೀಚ ರಾಕ್ಷಸನು ಅನುದಿನವೂ ಈ ದೇಶದ ಪ್ರಜೆಗಳಿಗೆ ಹಿಂಸೆ ಕೊಡುತ್ತಿರುವನು. ಮಲದ ಮತ್ತು ಕರೂಷ ಎಂಬ ಈ ಎರಡು ರಾಜ್ಯಗಳನ್ನು ದುಷ್ಟಚಾರಿಣಿ ಆದ ತಾಟಕಿಯು ಧ್ವಂಸ ಮಾಡುತ್ತಿರುವಳು. ಆ ದುಷ್ಟೆಯು ಒಂದೂವರೆ ಯೋಜನ ದೂರದಲ್ಲಿ ಹಾದಿಯನ್ನು ಅಡ್ಡಗಟ್ಟಿ ನಿಂತಿದ್ದಾಳೆ. ಆದರೂ ನಾವು ನಮ್ಮ ಆಶ್ರಮಕ್ಕೆ ಈ ತಾಟಕವನದ ಮೂಲಕವಾಗಿಯೇ ಹೋಗಬೇಕಾಗಿದೆ. ನಿನ್ನ ಬಾಹುಬಲದ ಅವಲಂಬನೆಯಿಂದ ದುಷ್ಟಚಾರಿಣಿಯಾದ ತಾಟಕಿಯನ್ನು ಸಂಹರಿಸು. ಈ ದೇಶವನ್ನು ಪುನಃ ಕಾಟಕರಹಿತವನ್ನಾಗಿ ಮಾಡು ರಾಘವ!" ಎಂದರು.


ವಿಶ್ವಾಮಿತ್ರರ ಈ ಮಾತುಗಳನ್ನು ಕೇಳಿ ನರಶ್ರೇಷ್ಠನಾದ ಶ್ರೀ ರಾಮನು "ಮುನಿಶ್ರೇಷ್ಠರೇ! ಯಕ್ಷರು ಸಾಮಾನ್ಯವಾಗಿ ಅಲ್ಪವೀರ್ಯರು ಅಥವಾ ದುರ್ಬಲರು ಎಂದು ನಾನು ಪುರಾಣೇತಿಹಾಸಗಳಲ್ಲಿ ಕೇಳಿರುವೆನು. ಮೇಲಾಗಿ ತಾಟಕಿಯಾದರೂ ಅಬಲೆಯು, ಇಂತಹ ಸಾವಿರ ಆನೆಗಳ ಬಲವನ್ನು ಹೇಗೆ ಪಡೆದಳು?" ಎಂದು ಕೇಳಿದನು.


ರಾಘವನ ಮಾತುಗಳನ್ನು ಕೇಳಿ ವಿಶ್ವಾಮಿತ್ರರು "ರಾಮ! ಹಿಂದೆ ಸುಕೇತುವೆಂಬ ಸದ್ಗುಣಸಂಪನ್ನನಾದ, ಆಚಾರಶೀಲನಾದ ಯಕ್ಷನಿದ್ದನು, ಅವನಿಗೆ ಮಕ್ಕಳಿರಲಿಲ್ಲ. ಮಕ್ಕಳನ್ನು ಪಡೆಯಲು ಉಗ್ರವಾದ ತಪಸ್ಸನ್ನು ಮಾಡಿದನು. ಸುಕೇತುವು ಮಾಡಿದ ಮಹಾ ತಪಸ್ಸಿಗೆ ಬ್ರಹ್ಮನು ಮೆಚ್ಚಿ 'ತಾಟಕಾ' ಎಂಬ ಹೆಸರಿನ ಕನ್ಯಾರತ್ನವನ್ನು ಅನುಗ್ರಹಿಸಿದನು. ಪಿತಾಮಹನೇ ತಾಟಕಿಗೆ ಸಾವಿರ ಆನೆಗಳ ಬಲವನ್ನು ದಯಪಾಲಿಸಿದನು. ಸುಕೇತುವು ರೂಪ-ಯವ್ವನ ಸಂಪನ್ನೆಯಾದ ತಾಟಕಿಯನ್ನು ಯಂಭಪುತ್ರನಾದ ಸುಂದನಿಗೆ ಪಾಣಿಗ್ರಹಣ ಮಾಡಿಕೊಟ್ಟನು. ಕಾಲಾನಂತರದಲ್ಲಿ ಮಹಾ ದುರಭಿಮಾನಿಯಾದ ಮಾರೀಚನೆಂಬ ಪುತ್ರನನ್ನು ಪ್ರಸವಿಸಿದಳು. ಅಗಸ್ತ್ಯರ ಶಾಪದಿಂದ ಸುಂದನು ಮೃತನಾಗಲು, ಅವನ ಹೆಂಡತಿಯಾದ ತಾಟಕಿಯು ಪುತ್ರನೊಡನೆ ಗಂಡನ ಮರಣಕ್ಕೆ ಕಾರಣರಾದ ಅಗಸ್ತ್ಯರನ್ನು ಹಿಂಸಿಸಲು ನಿಶ್ಚಯಿಸಿದಳು. ಅಗಸ್ತ್ಯರು ತನ್ನ ಮೇಲೆ ಬೀಳಲು ರಭಸದಿಂದ ತನ್ನೆದುರಿಗೆ ಬರುತ್ತಿದ್ದ ಮಾರೀಚನಿಗೆ 'ರಾಕ್ಷಸತ್ವ ಹೊಂದು' ಎಂತಲೂ ತಾಟಕಿಗೆ "ನರಮಾಂಸ ಭಕ್ಷಳಾಗು ಹಾಗೂ ನಿನಗೆ ಕರಾಳ ರೂಪಾಗಲಿ, ವಿಕಾರವಾದ ಮುಖ ಉಳ್ಳವಳಾಗು" ಎಂತಲೂ ಶಪಿಸಿದರು. ಅಗಸ್ತ್ಯರ ಶಾಪಕ್ಕೆ ಗುರಿಯಾದ ತಾಟಕಿಯು ಒಡನೆಯೇ ವಿಕಾರಸ್ವರೂಪ ಹೊಂದಿದಳು. ಕ್ರೋಧ ಮಾರ್ಚಿತಳಾಗಿ ಅಗಸ್ತ್ಯರು ಆಗ ಸಂಚರಿಸುತ್ತಿದ್ದ ಮತ್ತು ಅಗಸ್ತ್ಯರ ಆಶ್ರಮಕ್ಕೆ ಅನತಿ ದೂರದಲ್ಲಿ ಶುಭಪ್ರದವಾದ ಈ ಮಲದ-ಕರೂಷ ದೇಶಗಳನ್ನು ಮೂಲೋತ್ಪಾಟನ ಮಾಡುತ್ತಿದ್ದಾಳೆ, ರಾಘವ!, ದುರ್ವೃತಳಾದ, ಪರಮ ದಾರುಣಳಾದ, ಘೋರ ರೂಪಳಾದ, ಅತಿದುಷ್ಟವಾದ ಪರಾಕ್ರಮವುಳ್ಳ ಈ ಯಕ್ಷಿಯನ್ನು ಗೋ-ಬ್ರಾಹ್ಮಣರ ಹಿತಾರ್ಥವಾಗಿ ಸಂಹರಿಸು. ರಾಜ್ಯಭಾರದಲ್ಲಿ ನಿಯುಕ್ತರಾದ ರಾಜರಿಗೆ ಅದೇ ನಿತ್ಯ ಧರ್ಮವಾಗಿದೆ. ಮೇಲಾಗಿ ತಾಟಕಿಯಲ್ಲಿ ಯಾವ ವಿಧವಾದ ಧರ್ಮವೂ ಇಲ್ಲ, ಧರ್ಮ ಬಾಹಿರಳಾಗಿದ್ದಾಳೆ. ಈ ಹಿಂದೆ ಶಕ್ರ-ವಿಷ್ಣುಗಳಲ್ಲದೇ ಅನೇಕ ಮಹಾತ್ಮರಿಂದಲೂ ಅಧರ್ಮಯುಕ್ತರಾದ ಸ್ತ್ರೀಯರು ಸಂಹೃತರಾಗಿದ್ದಾರೆ. ಆದುದರಿಂದ ನೀನು ನನ್ನ ಶಾಸನದಂತೆ-ತಾಟಕಿಯು ಸ್ತ್ರೀ ಮಾತ್ರಳೆಂಬ ಭಾವನೆಯಿಂದ ನಿನ್ನಲ್ಲುಂಟಾಗಬಹುದಾದ ಕರುಣೆಯನ್ನು ತೊರೆದು ಈ ದುಷ್ಟೆಯನ್ನು ಈಗಲೇ ಸಂಹರಿಸು" ಎಂದರು.


ಶತ್ರುನಿಷೂದನನಾದ ಶ್ರೀರಾಮನು ಈ ಕಾರ್ಯವು ತನ್ನ ಕರ್ತವ್ಯವೆಂದು ಮನದಲ್ಲಿಯೇ ನಿಶ್ಚಯಿಸಿ ವಿಶ್ವಾಮಿತ್ರರಿಗೆ ಕೈಮುಗಿದು "ಮಹರ್ಷಿಗಳೇ! ಬ್ರಹ್ಮನಿಷ್ಠರಾದ ತಮ್ಮ ಆಜ್ಞೆಯಂತೆ ಪ್ರಜಾಪಾಲನ ರೂಪವಾದ, ಉತ್ತಮವಾದ ಈ ತಾಟಕವಧೆಯನ್ನು ಮಾಡುತ್ತೇನೆ. ಇದರಲ್ಲಾವ ಸಂಶಯವೂ ಇಲ್ಲ. ಗೋ-ಬ್ರಾಹ್ಮಣರ ಹಿತಾರ್ಥವಾಗಿಯೂ ಈ ದೇಶದ ಹಿತಕ್ಕಾಗಿಯೂ ಅಪ್ರಮೇಯರಾದ ನಿಮ್ಮ ಆಜ್ಞೆಯನ್ನು ನಿರ್ವಹಿಸಲು ಸಿದ್ಧನಾಗಿಯೇ ಇದ್ದೇನೆ." ಎಂದು ಹೇಳಿ ಧನಸ್ಸಿನ ಮಧ್ಯವನ್ನು ಎಡಮುಷ್ಟಿಯಿಂದ ಬಿಗಿಯಾಗಿ ಹಿಡಿದು, ನಾಲ್ಕು ದಿಕ್ಕುಗಳನ್ನೂ ಜ್ಯಾಘೋಷದಿಂದ ತುಂಬುತ್ತಾ ಧನುಷ್ಟೇಂಕಾರ ಮಾಡಿದನು. ರಾಮನ ಜ್ಯಾಘೋಷದಿಂದ ತಾಟಕಾವನವಾಸಿಗಳು ಭ್ರಾಂತರಾದರು. ದುಷ್ಟಚಿತ್ರಳಾದ ತಾಟಕಿಯೂ ಆ ಮಹಾಶಬ್ದವನ್ನು ಕೇಳಿ ಕೋಪಗೊಂಡಳು. ಆ ಶಬ್ದವು ಎಲ್ಲಿಂದ ಹೊರಟಿದೆ ಯಾರೆಂಬುದನ್ನು ನಿಶ್ಚಯಿಸಿ, ಶಬ್ದವು ಹೊರಟ ಸ್ಥಳಕ್ಕೆ ಧಾವಿಸಿದಳು.


ವಿಕೃತಾಕಾರಳಾದ ಮತ್ತು ವಿಕಾರವಾದ ಮುಖದಿಂದ ಕೂಡಿದ್ದ, ಬಹಳ ಎತ್ತರವಾದ ದೇಹದಿಂದ ಕೂಡಿದ್ದ, ಕೋಪಗೊಂಡಿದ್ದ ತಾಟಕಿಯನ್ನು ನೋಡಿ ರಾಘವನು ಲಕ್ಷ್ಮಣನಿಗೆ "ಲಕ್ಷ್ಮಣ! ಯಕ್ಷಸ್ತ್ರೀಯ ಅತೀಭಯಂಕರವಾದ ದಾರುಣವಾದ ಶರೀರವನ್ನಾದರೂ ನೋಡು ನಾನೀಗಲೇ ಮಾಯಾ ಬಲಸಮನ್ವಿತಳಾದ ಇವಳ ಕಿವಿ ಮತ್ತು ಮೂಗುಗಳನ್ನು ಕತ್ತರಿಸಿ ಇಲ್ಲಿಂದ ಇವಳು ಹಿಂದಿರುಗುವಂತೆ ಮಾಡಿಬಿಡುವೆನು. ಇವಳು ಎಷ್ಟೇ ದುಷ್ಟೆ, ಸರ್ವಜನಪೀಡಕಳಾಗಿರಲಿ, ಇವಳು ಸ್ತ್ರೀಮಾತ್ರಳು. ಆದರಿಂದಾಗಿ ಇವಳ ಪ್ರಾಣಹರಣ ಮಾಡಲು ನನಗೆ ಉತ್ಸಾಹವಿಲ್ಲ" ಎಂದನು.


ರಾಮನು ಈ ರೀತಿಯಲ್ಲಿ ಲಕ್ಷ್ಮಣನಿಗೆ ಹೇಳುತ್ತಿರುವಾಗಲೇ ಪರಮ ಕ್ರುದ್ಧಳಾದ ತಾಟಕಿಯು ಎರಡು ತೋಳುಗಳನ್ನು ಮೇಲೆತ್ತಿಕೊಂಡು ಘೋರ ನಿನಾದ ಮಾಡುತ್ತಾ ರಾಮನ ಕಡೆಗೆ ರಭಸದಿಂದ ನುಗ್ಗಿದಳು. ಒಡನೆಯೇ ಅಪಾರವಾದ ಧೂಳು ಸರ್ವತ್ರವ್ಯಾಪಿಸುವಂತೆ ಮಾಡಿ ಮೇಘಸದೃಶವಾದ ಧೂಳಿನ ರಾಶಿಯಿಂದ ರಾಮ ಲಕ್ಷ್ಮಣರನ್ನು ಮುಚ್ಚಿ ಅವರನ್ನು ಭ್ರಾಂತರನ್ನಾಗಿ ಮಾಡಿದಳು. ಅನಂತರ ಅವರ ಮೇಲೆ ಅಪಾರವಾದ ಕಲ್ಲಿನ ಮಳೆಗರೆದಳು. ಶ್ರೀರಾಮನು ಶಿಲಾವರ್ಷವನ್ನು ಶರವರ್ಷಗಳಿಂದ ನಿವಾರಣೆ ಮಾಡಿ, ತನ್ನ ಸಮೀಪಕ್ಕೆ ರಭಸದಿಂದ ಬರುತ್ತಿದ್ದ ತಾಟಕಿಯ ತೋಳುಗಳೆರಡನ್ನು ನಿಶಿತಾಸ್ತ್ರಗಳಿಂದ ಕತ್ತರಿಸಿದನು. ಭುಜಗಳಿಲ್ಲದೆ ಸಂಕಟ ಪಡುತ್ತಾ ಸಮೀಪದಲ್ಲಿಯೇ ಘೋರ ಘರ್ಜನೆ ಮಾಡುತ್ತಿದ್ದ ತಾಟಕಿಯನ್ನು ನೋಡಿದ ಲಕ್ಷ್ಮಣನು ಕೋಪಗೊಂಡು ಅವಳ ಮೂಗು ಮತ್ತು ಕಿವಿಗಳನ್ನು ತನ್ನ ನಿಶಿತಾಸ್ತ್ರಗಳಿಂದ ಕತ್ತರಿಸಿದನು.


ರಾಮನು ನಿರೀಕ್ಷಿಸಿದ್ದಂತೆ ಕರ್ಣ- ನಾಸಿಕಾಚ್ಛೇದನಗಳಿಂದ ತಾಟಕಿಯು ಪರಾಜ್ಞಮುಖಳಾಗಲಿಲ್ಲ. ಇಚ್ಛಿಸಿದ ರೂಪಗಳನ್ನು ಪಡೆಯಲು ಸಮರ್ಥಳಾದ ಅವಳು ಒಡನೆಯೇ ಅಂತರ್ಧಾನಳಾಗಿ, ಮರುಕ್ಷಣದಲ್ಲಿಯೇ ಹಲವಾರು ರೂಪಗಳನ್ನು ಧರಿಸಿಕೊಂಡು, ತನ್ನ ಮಾಯಾ ವಿಶೇಷದಿಂದ ರಾಮ-ಲಕ್ಷ್ಮಣರನ್ನು ಭ್ರಾಂತರನ್ನಾಗಿ ಮಾಡುತ್ತಾ ಕ್ಷಣ-ಕ್ಷಣಕ್ಕೂ ಭಯಂಕರವಾದ ಕಲ್ಲಿನ ಮಳೆಗರೆಯುತ್ತಾ ಅಲ್ಲಿಂದಿಲ್ಲಿಗೆ ಸಂಚರಿಸುತ್ತಿದಳು. ಇದನ್ನು ಕಂಡ ವಿಶ್ವಾಮಿತ್ರರು, "ವತ್ಸ! ಇವಳ ವಿಷಯದಲ್ಲಿ ಕರುಣೆಯನ್ನು ಇನ್ನಾದರೂ ಸಾಕು ಮಾಡು. ಇವಳು ಮಹಾಪಾಪಿಷ್ಠಳಾಗಿರುವಳು, ದುಷ್ಟ ಕರ್ಮವುಳ್ಳವಳಾಗಿರುವಳು, ಮೇಲಾಗಿ ಈ ಯಕ್ಷಿಯು ಅನವರತವೂ ಯಜ್ಞಕ್ಕೆ ವಿಘ್ನವನ್ನುಂಟುಮಾಡುತ್ತಲೇ ಇರುವಳು. ಇವಳ ಮಾಯೆಯು ಕ್ಷಣ ಕ್ಷಣಕ್ಕೂ ಅಭಿವೃದ್ದಿಯಾಗುತ್ತಿರುವುದು, ಆದುದರಿಂದ ಸಂಧ್ಯಾಕಾಲವಾಗುವುದರೊಳಗೆ ಇವಳನ್ನು ಸಂಹರಿಸು. ರಾಕ್ಷಸರು ಯಾವಾಗಲೂ ಸಂಧ್ಯಾಕಾಲದಲ್ಲಿ ಹೆಚ್ಚು ಬಲಶಾಲಿಯಾಗಿರುತ್ತಾರೆ" ಎಂದರು.


ವಿಶ್ವಾಮಿತ್ರರಿಂದ ಪುನಃ ಹೀಗೆ ಶಾಸನಮಾಡಲ್ಪಟ್ಟ ಶ್ರೀರಾಮನು ಕಲ್ಲಿನ ಮಳೆಯನ್ನು ಅನವರತವಾಗಿ ಸುರಿಸುತ್ತಿದ್ದ, ಅದೃಶ್ಯಳಾಗಿದ್ದ ತಾಟಕಿಯನ್ನು ತನ್ನ ಶಬ್ದವೇಧಿತ್ವದ ನೈಪುಣ್ಯತೆಯನ್ನು ತೋರ್ಪಡಿಸುತ್ತಾ, ಅಸ್ತ್ರಗಳ ಅನವರತ ಪ್ರಯೋಗದಿಂದ ತಡೆದನು. ಮಾಯಾಬಲಸಮನ್ವಿತಳಾದ ತಾಟಕಿಯು ರಾಮನು ಪ್ರಯೋಗಿಸಿದ ಬಾಣಜಾಲಗಳಿಂದ ನಿರೋಧಿಸಲ್ಪಟ್ಟವಳಾಗಿ ಅತಿಘೋರವಾಗಿ ಘರ್ಜನೆ ಮಾಡುತ್ತಾ ರಾಮ ಲಕ್ಷ್ಮಣರ ಬಳಿಗೆ ದಾವಿಸಿ ಬಂದಳು.


ಸಿಡಿಲಿನೋಪಾದಿಯಲ್ಲಿ ರಾಮ-ಲಕ್ಷ್ಮಣರ ಮೇಲೆ ರಭಸದಿಂದ ಬೀಳುತ್ತಿದ್ದ ತಾಟಕಿಯ ಹೃದಯಕ್ಕೆ ರಾಘವನು ಗುರಿಯಿಟ್ಟು ಬಾಣ ಪ್ರಯೋಗ ಮಾಡಿದನು. ಒಡನೆಯೇ ತಾಟಕಿಯು ಕೆಳಗೆ ಬಿದ್ದು ಮೃತಳಾದಳು. ತಾಟಕಾ ವಧೆಯಿಂದ ಸಂತೋಷಗೊಂಡ ದೇವೇಂದ್ರಾದಿ ದೇವತೆಗಳು ಈ ಕಾರ್ಯವನ್ನು ಶ್ಲಾಘಿಸಿದರು. ವಿಶ್ವಾಮಿತ್ರರ ಆಣತಿಯಂತೆ ದಾಶರಥಿಯು ಲಕ್ಷ್ಮಣ ಸಮೇತನಾಗಿ ತಾಟಕಾವನದಲ್ಲಿ ಆ ರಾತ್ರಿಯನ್ನು ಕಳೆದನು.

Comments

Rated 0 out of 5 stars.
No ratings yet

Add a rating
bottom of page